ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗೋ ರಕ್ಷಣೆ ರಾಜಕೀಯ ನಿಲ್ಲಿಸಿ

‘ದ್ವೇಷ ರಾಜಕಾರಣ ನಿಲ್ಲಿಸಿ’ ಅಭಿಯಾನ: ಶಾಫಿ ಬೆಳ್ಳಾರೆ ಹೇಳಿಕೆ
Last Updated 29 ಸೆಪ್ಟೆಂಬರ್ 2016, 7:24 IST
ಅಕ್ಷರ ಗಾತ್ರ

ಉಡುಪಿ: ದೇಶಕ್ಕೆ ಏನೂ ಕೊಡುಗೆ ನೀಡದ ಬಿಜೆಪಿ ಹಾಗೂ ಸಂಘ ಪರಿವಾರ ಗೋವನ್ನು ರಾಜಕೀಯಕ್ಕೆ ಬಳಸಿಕೊ ಳ್ಳುತ್ತಿವೆ. ಈ ಗೋ ರಕ್ಷಣೆಯ ರಾಜಕೀ ಯಕ್ಕೆ ದಲಿತರು, ಹಿಂದುಳಿದವರು ಹಾಗೂ ಮುಸ್ಲಿಮರು ಬಲಿಯಾಗು ತ್ತಿದ್ದಾರೆ ಎಂದು ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ ರಾಜ್ಯ ಕಾರ್ಯದರ್ಶಿ ಶಾಫಿ ಬೆಳ್ಳಾರೆ ಹೇಳಿದರು.

ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಆರಂಭಿಸಿರುವ ‘ದ್ವೇಷ ರಾಜ ಕಾರಣ ನಿಲ್ಲಿಸಿ’ ಅಭಿಯಾನದ ಅಂಗ ವಾಗಿ ನಗರದಲ್ಲಿ ಬುಧವಾರ ಏರ್ಪ ಡಿಸಿದ್ದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಗೋವಿನಲ್ಲಿ ಮಾತೆಯನ್ನು ಕಾಣ ಬೇಕು ಎಂದು ಹೇಳುವ ಬಿಜೆಪಿಯವರಿಗೆ ಅದರ ಬಗ್ಗೆ ನಿಜವಾದ ಪ್ರೀತಿ ಇಲ್ಲ. ಅವರಿಗೆ ಗೋವಿನ ಮೇಲೆ ಪೂಜ್ಯ ಭಾವನೆ ಇದ್ದಿದ್ದರೆ ಅಧಿಕಾರಕ್ಕೆ ಬಂದ ನಂತರ ಗೋಮಾಂಸ ರಫ್ತನ್ನು ನಿಷೇಧಿಸಬೇಕಿತ್ತು. ಆದರೆ, ಯಾವುದರಲ್ಲೂ ಪ್ರಥಮ ಸ್ಥಾನಕ್ಕೇರದ ನರೇಂದ್ರ ಮೋದಿ ನೇತೃತ್ವದ ಕೇಂದ್ರದ ಸರ್ಕಾರ ಗೋ ಮಾಂಸ ರಫ್ತಿನಲ್ಲಿ ಮಾತ್ರ ಮೊದಲ ಸ್ಥಾನಕ್ಕೇರಿದೆ ಎಂದು ವ್ಯಂಗ್ಯವಾಡಿದರು.

ಧರ್ಮ, ಜಾತಿ, ಮಂದಿರ ಹಾಗೂ ಗೋ ರಕ್ಷಣೆಯ ಹೆಸರಿನಲ್ಲಿ ಜನರಲ್ಲಿ ದ್ವೇಷ ಭಾವನೆ ಬಿತ್ತಿ ದೊಡ್ಡ ಕಂದಕ ನಿರ್ಮಿಸುವ ಕೆಲಸವಾಗುತ್ತಿದೆ. ಇಂತಹ ಕೃತ್ಯಗಳನ್ನು ತಡೆಯಬೇಕಾಗಿದ್ದ ಸರ್ಕಾರ ಮಾತ್ರ ತನ್ನ ಕರ್ತವ್ಯವನ್ನು ಮರೆತು ರಾಜಕೀಯ ಲಾಭ ಪಡೆಯಲು ದ್ವೇಷ ಬಿತ್ತುವ ಕೆಲಸವನ್ನು ಬೆಂಬಲಿಸುತ್ತಿದೆ ಎಂದರು.

ಕಳೆದ ಲೋಕಸಭಾ ಚುನಾವಣೆ ಯಲ್ಲಿ ಶೇ 31ರಷ್ಟು ಮತದಾರರು ಬಿಜೆಪಿ ಬೆಂಬಲಿಸಿದರೆ, ಉಳಿದವರು ಬಿಜೆಪಿ ವಿರುದ್ಧ ಮತ ಹಾಕಿದರು. ಬಿಜೆಪಿಗೆ ಮತ ಹಾಕಿದವರು ಮಂದಿರ ನಿರ್ಮಾಣ, ಗೋರಕ್ಷಣೆ ವಿಷಯವನ್ನು ಮೆಚ್ಚಿ ಮತ ಹಾಕಿಲ್ಲ. ಹಿಂದಿನ ಸರ್ಕಾರದ ದುರಾಡಳಿತದಿಂದ ಬೇಸತ್ತಿದ್ದ ಅವರು ಹಸಿವು, ಬಡತನದಿಂದ ಮುಕ್ತಿ ಸಿಗಬಹುದು. ಒಳ್ಳೆಯ ದಿನಗಳು ಬರಬಹುದು ಎಂಬ ಕಾರಣಕ್ಕೆ ಬೆಂಬಲ ನೀಡಿದರು. ಆದರೆ ಈಗಿನ ಸರ್ಕಾರ ಮಾಡುತ್ತಿರುವುದೇನು ಎಂದು ಪ್ರಶ್ನಿಸಿದರು.

ದೇಶದಲ್ಲಿ ದಲಿತರು, ಅಲ್ಪಸಂಖ್ಯಾತರು ಮತ್ತು ಹಿಂದುಳಿದ ವರ್ಗದವರ ಮೇಲೆ ದಾಳಿಗಳು ನಡೆಯುತ್ತಿವೆ. ಇದನ್ನು ತಡೆಯುವಲ್ಲಿ ವಿಫಲರಾಗಿರುವ ಪ್ರಧಾನಿ, ದಲಿತರಿಗೆ ಹೊಡೆಯುವ ಮೊದಲು ನನಗೆ ಹೊಡೆಯಿರಿ ಎಂದು ಅಸಹಾಯಕತೆ ವ್ಯಕ್ತಪಡಿಸುತ್ತಾರೆ. ಅವರಿಗೆ ದುಷ್ಟ ಶಕ್ತಿಗಳ ವಿರುದ್ಧ ಹೋರಾಡುವ ಶಕ್ತಿ ಇಲ್ಲದಾಗಿದೆ. ದೇಶ ಮೋಹನ್ ಭಾಗವತ್ ನಿಯಂತ್ರದಲ್ಲಿದೆ ಎಂದರು.

ಎಸ್‌ಡಿಪಿಐ ಪ್ರಧಾನ ಕಾರ್ಯದರ್ಶಿ ಅಬ್ದುಲ್‌ ರೆಹಮಾನ್ ಮಲ್ಪೆ ಪ್ರಾಸ್ತಾವಿ ಕವಾಗಿ ಮಾತನಾಡಿದರು.  ಪಾಪ್ಯುಲರ್ ಫ್ರಂಟ್‌ ಆಫ್ ಇಂಡಿಯಾದ ಜಿಲ್ಲಾಧ್ಯಕ್ಷ ಫಜೀಲ್ ಅಹಮ್ಮದ್‌, ದಂಡತೀರ್ಥ ಸಮೂಹ ಶಿಕ್ಷಣ ಸಂಸ್ಥೆಗಳ ಆಡಳಿತಾಧಿಕಾರಿ ಆಲ್ಬನ್ ರೋಡ್ರಿಗಸ್‌ ಇದ್ದರು. ಹನೀಫ್ ಮೂಳೂರು ಕಾರ್ಯಕ್ರಮ ನಿರೂಪಿಸಿದರು.

***
ದೇಶದಲ್ಲಿ ನಕಲಿ ಗೋ ರಕ್ಷಕರಿದ್ದಾರೆ ಎಂದು ಪ್ರಧಾನಿ ಹೇಳುತ್ತಾರೆ, ಅಂದರೆ ಅದರ ಅರ್ಥ ಅಸಲಿ ಗೋ ರಕ್ಷಕರು ಇದ್ದಾರೆ ಎಂಬುದಾಗಿದೆ. ಸಂವಿಧಾನ ದಲ್ಲಿ ಇದಕ್ಕೆ ಅವಕಾಶ ಇದೆಯೇ?
-ಶಾಫಿ ಬೆಳ್ಳಾರೆ,  ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ ರಾಜ್ಯ ಕಾರ್ಯದರ್ಶಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT