ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೂತ್ರ ಸಾಕಾರ

Last Updated 30 ಸೆಪ್ಟೆಂಬರ್ 2016, 12:42 IST
ಅಕ್ಷರ ಗಾತ್ರ

ಚಿತ್ರ: ದೊಡ್ಮನೆ ಹುಡ್ಗ
ನಿರ್ಮಾಣ: ಎಂ. ಗೋವಿಂದ
ನಿರ್ದೇಶನ: ಸೂರಿ
ತಾರಾಗಣ: ಪುನೀತ್‌ ರಾಜ್‌ಕುಮಾರ್‌, ಅಂಬರೀಷ್‌, ರಾಧಿಕಾ ಪಂಡಿತ್‌, ರವಿಶಂಕರ್‌, ಅವಿನಾಶ್‌, ಶ್ರೀನಿವಾಸಮೂರ್ತಿ, ಸುಮಲತಾ, ಭಾರತಿ

ಲಭ್ಯ ಸೂತ್ರಗಳನ್ನು ಉಜ್ಜುತ್ತಾ ಜನಪ್ರಿಯ ಚಿತ್ರ ಕಟ್ಟಿಕೊಡಲು ಒಂದಿನಿತು ಜಾಣ್ಮೆ ಸಾಕು. ಸ್ಟಾರ್‌ಗಿರಿಯ ನಾಯಕ ಇದ್ದರಂತೂ ಈ ಕೆಲಸ ಇನ್ನಷ್ಟು ಸಲೀಸು. ‘ಭಾರತದ ಬಹುತೇಕ ಸಿನಿಮಾಗಳು ಸುಂದರವಾಗಿ ರೂಪಿತವಾದ ಬಾಲಿಶ ಕೃತಿಗಳು’ ಎಂದು ಎಂಟು ವರ್ಷಗಳ ಹಿಂದೆ ಚೀನಾ ನಿರ್ದೇಶಕ ಪೀಟರ್‌ ಚಾಂಗ್‌ ವ್ಯಂಗ್ಯವಾಡಿದ್ದರು. ಅವರ ಆ ಮಾತು ‘ದೊಡ್ಮನೆ ಹುಡ್ಗ’ ನೋಡಿದ ಮೇಲೆ ನೆನಪಾಗುತ್ತದೆ.

ಜನಪ್ರಿಯತೆಯ ಅಲೆಮೇಲೆ ಇರುವ ಪುನೀತ್‌ ಅದರಿಂದ ಇಳಿಯಲು ಸಿದ್ಧರಿಲ್ಲ. ಆ ಕಾರಣಕ್ಕೇ ಈ ಸಿನಿಮಾದಲ್ಲಿ ‘ಅಭಿಮಾನಿ ದೇವರು’ಗಳಿಗೆ ಕಣ್ಣುಬಿಟ್ಟುಕೊಂಡು ನೋಡುವಂಥ ಹೊಡೆದಾಟಗಳಿವೆ. ಕ್ಲೀಷೆ ಎನ್ನಬಹುದಾದರೂ ನೋಡಿಸಿಕೊಳ್ಳುವ ನೃತ್ಯವೂ ಅಲ್ಲಲ್ಲಿ ಕಾಣುತ್ತದೆ. ಬೆಂಗಳೂರಿನ ಕನ್ನಡ ರೋಸಿಹೋಗಿದ್ದರೆ ಸವಿಯಲು ಹುಬ್ಬಳ್ಳಿ ಕನ್ನಡದ ಒಗ್ಗರಣೆ. ಖಳನ ತಂತ್ರ, ನಾಯಕನ ಕೆಚ್ಚೆದೆಯ ಮಂತ್ರ, ಕಪ್ಪು–ಬಿಳುಪು ದೃಶ್ಯಾವತರಣಿಕೆಗಳ ದರ್ಶನ, ಅಪರೂಪಕ್ಕೆ ಮಾತಿನ ಕಚಗುಳಿ, ಸೂತ್ರಬದ್ಧವಾಗಿ ಒತ್ತಿರುವ ‘ಪರಾಕು ಪಂಪು’, ಊಹಿಸಬಹುದಾದರೂ ಅಲ್ಲಲ್ಲಿ ತಿರುವುಗಳು... ಇವಿಷ್ಟೂ ‘ದೊಡ್ಮನೆ ಹುಡ್ಗ’ದ ಸಾರ.

ಶಿಳ್ಳೆ ಬರಲಿ ಎಂದೇ ಒಂದು ಕಡೆ ಪುನೀತ್‌ ರಾಜ್‌ಕುಮಾರ್‌ ಇದ್ದಾರೆ. ಇನ್ನೊಂದು ಕಡೆ ಗತ್ತಿನ ಪರಂಪರೆ ಕಾಪಾಡಿಕೊಂಡಿರುವ ಅಂಬರೀಷ್‌. ಮಂಡ್ಯ, ಹುಬ್ಬಳ್ಳಿ, ಬೆಂಗಳೂರು, ಚಿತ್ರದುರ್ಗ ಹೀಗೆ ನೋಡಲು ರಾಜ್ಯದ ಕೆಲವು ಪ್ರದೇಶಗಳು. ಹಾಗೆಂದಮಾತ್ರಕ್ಕೆ ಇದನ್ನು ಕರ್ನಾಟಕ ದರ್ಶನ ಎನ್ನಲಾಗದು. ಆಂಧ್ರದಲ್ಲಿ ಇಂಥ ದೊಡ್ಮನೆಗಳ ಹಲವು ಕಪ್ಪು–ಬಿಳುಪು ಕಥನಗಳನ್ನು ಈಗಾಗಲೇ ನಾವು ನೋಡಿದ್ದೇವೆ.

ಇದಕ್ಕೂ ಹಿಂದಿನ ‘ಕೆಂಡಸಂಪಿಗೆ’ ಚಿತ್ರದಲ್ಲಿ ಸೂರಿ ಹೆಚ್ಚು ಬುದ್ಧಿ ಖರ್ಚು ಮಾಡಿದ್ದರು. ಇಲ್ಲಿ ಅದಕ್ಕಿಂತ ಹಣವನ್ನೇ ಹೆಚ್ಚು ಖರ್ಚು ಮಾಡಿಸಿದ್ದಾರೆ. ಅವರ ಜೊತೆ ಮಸಾಲೆ ಕಥೆ ಅರೆಯುವಲ್ಲಿ ವಿಕಾಸ್‌ ಕಾಣ್ಕೆಯೂ ಇದೆ. ಮಧ್ಯಂತರದ ಹೊತ್ತಿಗೆ ಪುನೀತ್‌ ಹಾಗೂ ಅಂಬರೀಷ್‌ ಇಬ್ಬರೂ ಜೈಲಿನಲ್ಲಿ ಸಂಧಿಸುತ್ತಾರೆ. ಆ ಬಿಂದುವಿನಿಂದಲಾದರೂ ಕುತೂಹಲ ಹೆಚ್ಚು ಕೆರಳೀತು ಎಂದುಕೊಳ್ಳುವಾಗ, ಸೂರಿ ಅದನ್ನೂ ಹುಸಿಗೊಳಿಸಿದ್ದಾರೆ. ಇಬ್ಬರನ್ನೂ ಲಗುಬಗನೆ ಜೈಲಿನಿಂದ ಹೊರಗೆ ತಂದುಬಿಡುತ್ತಾರೆ. ಹಾಸ್ಯಕ್ಕೆಂದು ಪ್ರತ್ಯೇಕ ಪ್ರಸಂಗಗಳನ್ನು ಸೃಷ್ಟಿಸಿಲ್ಲವಾದರೂ ಮಾತಿನಲ್ಲೇ ಅಷ್ಟಿಷ್ಟು ಕಚಗುಳಿ ಇಡುವ ಅವರ ಸಹಜ ಜಾಣ್ಮೆಗೆ ಇಲ್ಲಿಯೂ ವಿರಳ ಉದಾಹರಣೆಗಳಿವೆ. 

ಪುನೀತ್‌ ಉತ್ಸಾಹ, ವೇಗದ ಸ್ಥಿರತೆ ಉಳಿಸಿಕೊಂಡಿದ್ದಾರೆ. ತಾನೆಷ್ಟು ಲೀಲಾಜಾಲ ಎನ್ನುವುದನ್ನು ರಾಧಿಕಾ ಪಂಡಿತ್‌ ತೆರೆಮೇಲೆ ಮಾತು–ಅಭಿನಯದ ಮೂಲಕ ತೋರಿದರೆ, ರವಿಶಂಕರ್‌ ಅವರದ್ದು ಅದೇ ಹಳೆಯ ಖಳನ ಗತ್ತು. ಅಂಬರೀಷ್‌ ಅವರ ದೇಹ ದಣಿದಿರುವುದಕ್ಕೂ ಈ ಸಿನಿಮಾದಲ್ಲಿ ಸಾಕ್ಷ್ಯಗಳು ಸಿಗುತ್ತವೆ. ಭಾರತಿ, ಸುಮಲತಾ ಇಬ್ಬರಿಗೂ ಅಭಿನಯಕ್ಕೆ ಹೆಚ್ಚೇನೂ ಅವಕಾಶವಿಲ್ಲ. ಶ್ರೀನಿವಾಸಮೂರ್ತಿ ಭಾವುಕ ಸನ್ನಿವೇಶಗಳಲ್ಲಿ ಮನಕಲಕುತ್ತಾರೆ. ಸಾಹಸ ನಿರ್ದೇಶಕರ ತಂತ್ರಗಳು ಮೆಚ್ಚುಗೆಗೆ ಅರ್ಹ. ಹರಿಕೃಷ್ಣ ಸಂಗೀತದಲ್ಲಿ ಲಯವಿದ್ದರೂ ಹೊಸತನವಿಲ್ಲ. ಕ್ಯಾಮೆರಾ ಶ್ರಮಿಕ ಸತ್ಯ ಹೆಗಡೆ ಅವರಿಗೂ ಅಂಕಗಳು ಸಲ್ಲಬೇಕು.

ಮನರಂಜನೆಯನ್ನು ವೇಗ ಕಥಾನಕಗಳ ಮೂಲಕ ಕಟ್ಟಿಕೊಡಬೇಕು, ನೋಡುಗರನ್ನು ಕೂರಿಸಿಕೊಳ್ಳಬೇಕು, ಮಸಾಲೆ ಹೆಚ್ಚೇ ಇದ್ದರೂ ತರ್ಕದ ಹಂಗಿಗೆ ಬೀಳಬಾರದು–ಇಂಥ ಹಳೆಯ ಸತ್ಯಗಳನ್ನು ಒಪ್ಪಿಕೊಂಡಿರುವ ಸೂರಿ, ತಮ್ಮತನದ್ದಲ್ಲದ ಈ ಸಿನಿಮಾ ನಿರ್ದೇಶಿಸಿದ್ದಾದರೂ ಹೇಗೆ ಎಂಬ ಪ್ರಶ್ನೆಯನ್ನೂ ‘ದೊಡ್ಮನೆ ಹುಡ್ಗ’ ಉಳಿಸುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT