ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಡತದ ಯೋಜನೆ ಕಾರ್ಯರೂಪಕ್ಕಿಳಿಯಲಿ

Last Updated 30 ಸೆಪ್ಟೆಂಬರ್ 2016, 19:30 IST
ಅಕ್ಷರ ಗಾತ್ರ

ಮಕ್ಕಳ ಆರೋಗ್ಯ ರಕ್ಷಣೆ, ಅವರ ಶಿಕ್ಷಣ ಮತ್ತಿತರ ವಿಚಾರಗಳಲ್ಲಿ ಸರ್ಕಾರ ರೂಪಿಸಿರುವ ಯೋಜನೆಗಳನ್ನು ನೋಡಿದರೆ ನಮ್ಮ ದೇಶದಲ್ಲಿ ಮಕ್ಕಳು ಅತ್ಯಂತ ಅರೋಗ್ಯದಿಂದ ಇರಬೇಕಾಗಿತ್ತು. ಆದರೆ ಹಾಗೆ ಆಗಿಲ್ಲ. ಸರ್ಕಾರದ ಯೋಜನೆಗಳು ಕಡತಗಳನ್ನು ದಾಟಿ ಬಂದಿಲ್ಲ, ಮಕ್ಕಳು ಯಾತನೆಪಡುವುದು ತಪ್ಪಿಲ್ಲ. ಯೋಜನೆ ಮತ್ತು ವಾಸ್ತವಗಳನ್ನು ಬೆಸೆಯುವ ವ್ಯವಸ್ಥೆ ಇಲ್ಲದೆ ಮಕ್ಕಳ ಆರೋಗ್ಯ ಹದಗೆಡುತ್ತಿದೆ.

ದೇಶದ ಒಟ್ಟಾರೆ ಜನಸಂಖ್ಯೆಯಲ್ಲಿ ಶೇ 40 ರಿಂದ 45ರಷ್ಟು ಭಾಗ ಮಕ್ಕಳಿದ್ದಾರೆ . ಇಷ್ಟೊಂದು ದೊಡ್ಡ ಸಂಖ್ಯೆಯ ಜನರ ಆರೋಗ್ಯ ರಕ್ಷಣೆಯ ಹೊಣೆಯನ್ನು ಬರೀ ಸರ್ಕಾರದ ಮೇಲೆ ಹೊರಿಸುವುದು ಸರಿಯಲ್ಲ. ಸ್ವಯಂ ಸೇವಾ ಸಂಸ್ಥೆಗಳು, ಸಹಕಾರ ಸಂಸ್ಥೆಗಳು, ಸಾರ್ವಜನಿಕರು ಸಹ ತಮ್ಮ ಕೈಲಾದ ಕೆಲಸ ಮಾಡಬೇಕು. ಯಾಕೆಂದರೆ ಕಾಯಿಲೆ ಗುಣಪಡಿಸುವುದೊಂದೇ ಆರೋಗ್ಯದ ವ್ಯಾಖ್ಯಾನವಲ್ಲ. ಮಕ್ಕಳಲ್ಲಿ ಪೋಷಕಾಂಶಗಳ ಕೊರತೆಯಾಗದಂತೆ ನೋಡಿಕೊಳ್ಳುವುದು, ಸಂತೋಷದಾಯಕ ಬಾಲ್ಯ, ಒಳ್ಳೆಯ ಶಿಕ್ಷಣ ಖಾತರಿಪಡಿಸುವುದು ಸಹ ಮಕ್ಕಳ ಆರೋಗ್ಯದ ವಿಚಾರಗಳೇ ಆಗಿವೆ.

ಕಳೆದ ಒಂದೆರಡು ದಶಕಗಳಲ್ಲಿ ಈ ನಿಟ್ಟಿನಲ್ಲಿ ಕೆಲವು ಕೆಲಸಗಳಾಗಿವೆ. ಮಕ್ಕಳಿಗೆ ರೋಗ ನಿರೋಧಕ ಲಸಿಕೆ ಕೊಡಿಸುವುದು, ಗರ್ಭಿಣಿ ಹಂತದಿಂದಲೇ ಹುಟ್ಟಲಿರುವ ಮಗುವಿನ ಬಗ್ಗೆ ಕಾಳಜಿ ವಹಿಸುವುದು, ಮಕ್ಕಳ ಸಾವಿನ ಪ್ರಮಾಣವನ್ನು ಇಳಿಸುವುದೇ ಮುಂತಾದ ವಿಚಾರಗಳಲ್ಲಿ ಗಮನಾರ್ಹ ಸಾಧನೆ ಆಗಿದೆ. ಆದರೆ ಆಗಬೇಕಾಗಿರುವುದು ಬೆಟ್ಟದಷ್ಟಿದೆ. ಅದಕ್ಕೆ ನಮ್ಮ ವ್ಯವಸ್ಥೆಯಲ್ಲಿ ಕೆಲವು ಬದಲಾವಣೆಗಳು ಆಗಬೇಕು.

ಗ್ರಾಮೀಣ ಪ್ರದೇಶದ ಆರೋಗ್ಯ ವ್ಯವಸ್ಥೆಯಲ್ಲಿ ಭಾರಿ ಸುಧಾರಣೆ ಆಗಬೇಕು ಎಂಬುದನ್ನು ಮೈಸೂರಿನ ಸರ್ಕಾರಿ ಚೆಲುವಾಂಬ ಆಸ್ಪತ್ರೆಯಲ್ಲಿ ಈಚೆಗೆ ನಡೆದ ಘಟನೆ ಒತ್ತಿ ಹೇಳಿದೆ. ಈ ನಿಟ್ಟಿನಲ್ಲಿ ಇದು ಮೊದಲ ಘಟನೆ ಅಲ್ಲ, ಕೊನೆಯದೂ ಆಗಲಾರದೇನೊ.

ಹವಾಮಾನದಲ್ಲಿ ಒಂದಿಷ್ಟು ಏರುಪೇರಾದರೂ ಮಕ್ಕಳ ಆರೋಗ್ಯವೂ ಏರುಪೇರಾಗುತ್ತದೆ. ಪರಿಸರವನ್ನು ಸ್ವಚ್ಛವಾಗಿಡದಿದ್ದರೆ ಹಲವು ಸೋಂಕುಗಳು ಅವರನ್ನು ಬಾಧಿಸುತ್ತವೆ. ಡೆಂಗಿ, ಚಿಕುನ್‌ಗುನ್ಯಾ ಇದಕ್ಕೆ ಒಳ್ಳೆಯ ಉದಾಹರಣೆ. ಕಾಲಕ್ಕೆ ಅನುಗುಣವಾಗಿ ಇಂಥ ಸಾಂಕ್ರಾಮಿಕ ರೋಗಗಳು ಬಂದಾಗ ಸರ್ಕಾರಿ ಆಸ್ಪತ್ರೆಗಳ ಮೇಲೆ ಒತ್ತಡ ಹೆಚ್ಚಾಗುತ್ತದೆ. ಸರ್ಕಾರಿ ಆಸ್ಪತ್ರೆಗೆ ಬಂದ ಯಾರನ್ನೂ ಬೇರೆ ಕಡೆಗೆ ಕಳುಹಿಸುವಂತಿಲ್ಲ.

ಇರುವ ಹಾಸಿಗೆಗಳಿಗಿಂತ ದುಪ್ಪಟ್ಟು, ಮೂರು ಪಟ್ಟು ರೋಗಿಗಳು ಬಂದಾಗಲೂ ಇರುವ ವ್ಯವಸ್ಥೆಯನ್ನೇ ಹಂಚಿಕೊಳ್ಳುವುದು ಅನಿವಾರ್ಯ. ಗ್ರಾಮೀಣ ಪ್ರದೇಶದ ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ಬಲಪಡಿಸಿದರೆ ರೋಗಿಗಳು ಜಿಲ್ಲಾ ಕೇಂದ್ರಕ್ಕೆ ಬರುವುದು ತಪ್ಪುತ್ತದೆ. ಪರಿಸರವನ್ನು ಸ್ವಚ್ಛವಾಗಿಟ್ಟರೆ ಹಲವು ರೋಗಗಳಿಂದ ಮಕ್ಕಳನ್ನು ಪಾರು ಮಾಡಬಹುದು. ಸ್ವಚ್ಛ ಭಾರತ ಅಭಿಯಾನ ಈ ನಿಟ್ಟಿನಲ್ಲಿ ಯಾವ ಪರಿಣಾಮ ಉಂಟುಮಾಡುತ್ತದೆ ಎಂಬುದನ್ನು ಕಾಯ್ದು ನೋಡಬೇಕು.

ಮಕ್ಕಳಿಗೆ ಚಿಕಿತ್ಸೆ ನೀಡುವ ವಿಚಾರದಲ್ಲಿ ಹಲವು ಕೊರತೆಗಳನ್ನು ಪಟ್ಟಿ ಮಾಡಬಹುದು. ಮುಖ್ಯವಾದುದು ತಜ್ಞ ವೈದ್ಯರ ಕೊರತೆ. ಸರ್ಕಾರ ರಾಷ್ಟ್ರೀಯ ಗ್ರಾಮೀಣ ಆರೋಗ್ಯ ಅಭಿಯಾನದ ಮೂಲಕ ಕೋಟ್ಯಂತರ ರೂಪಾಯಿ ವೆಚ್ಚ ಮಾಡುತ್ತಿದೆ. ಆದರೆ ಪ್ರಾಥಮಿಕ ಚಿಕಿತ್ಸಾ ಕೇಂದ್ರಗಳಲ್ಲಿ ಸೌಲಭ್ಯಗಳಿಲ್ಲ, ವೈದ್ಯರಿಲ್ಲ ಎಂಬುದು ವಾಸ್ತವ. ಅಲ್ಲಿನ ಆಸ್ಪತ್ರೆಗೆ ಬಂದ ಮಕ್ಕಳನ್ನು ನೇರವಾಗಿ ಜಿಲ್ಲಾ ಕೇಂದ್ರಕ್ಕೆ ಕಳುಹಿಸಲಾಗುತ್ತದೆ.

ಜಿಲ್ಲಾ ಕೇಂದ್ರದಲ್ಲೂ ರೋಗಿಗಳಿಗೆ ಅನುಗುಣವಾಗಿ ವೈದ್ಯರು ಇಲ್ಲ. ಇತರ ವಿಭಾಗಗಳಂತೆ ಒಂದು ಮಕ್ಕಳ ವಿಭಾಗ ಇರುತ್ತದೆ ಅಷ್ಟೆ. ಸರ್ಕಾರದ ಯೋಜನೆಗಳು ವಾಸ್ತವವಾಗಿ ಜಾರಿಯಾಗಬೇಕಾದರೆ ಪ್ರತಿ ಜಿಲ್ಲಾ ಕೇಂದ್ರದಲ್ಲಿ ಮಕ್ಕಳಿಗಾಗಿಯೇ ವಿಶೇಷ ಆಸ್ಪತ್ರೆ ಆರಂಭಿಸಬೇಕು. ಬೆಂಗಳೂರಿನ ಇಂದಿರಾ ಗಾಂಧಿ ಆಸ್ಪತ್ರೆ ಬಿಟ್ಟರೆ ಬೇರೆಲ್ಲೂ ಮಕ್ಕಳಿಗಾಗಿ ವಿಶೇಷ ಆಸ್ಪತ್ರೆ ಇಲ್ಲ. ಜಿಲ್ಲಾ ಕೇಂದ್ರಗಳಲ್ಲಿ ಮಹಿಳೆ ಮತ್ತು ಮಕ್ಕಳಿಗಾಗಿ ವಿಶೇಷ ಆಸ್ಪತ್ರೆಗಳ ನಿರ್ಮಾಣ ಆಗಬೇಕು.

ಇನ್ನೊಂದು ಬಹುಮುಖ್ಯ ಅಂಶವನ್ನು ಸರ್ಕಾರ ಹಾಗೂ ಜನಪ್ರತಿನಿಧಿಗಳು ಮನಗಾಣಬೇಕು. ವೈದ್ಯರು ಹಣ ಸಂಪಾದನೆಯ ಹಿಂದೆ ಬಿದ್ದು ಸರ್ಕಾರಿ ಸೇವೆಗೆ ಬರುತ್ತಿಲ್ಲ ಎಂಬ ಆರೋಪವನ್ನು  ತಳ್ಳಿಹಾಕಲಾಗದು. ಆದರೆ ಹಣವೇ ಸರ್ವಸ್ವ ಅಲ್ಲ ಎನ್ನುವ ವೈದ್ಯರ ಸಂಖ್ಯೆಯೂ ದೊಡ್ಡದಿದೆ. ವ್ಯವಸ್ಥೆ ಅವರನ್ನು ಸರ್ಕಾರಿ ಸೇವೆಗೆ ಬಾರದಂತೆ ತಡೆಯುತ್ತಿದೆ.

ವೃತ್ತಿ ಗೌರವ ಉಳಿಸಿಕೊಂಡು ಸರ್ಕಾರಿ ಆಸ್ಪತ್ರೆಗಳಲ್ಲಿ ಸೇವೆ ಸಲ್ಲಿಸುವುದು ಕಷ್ಟ ಎಂಬ ಅಭಿಪ್ರಾಯ ವೈದ್ಯರಲ್ಲಿದೆ. ಜಿಲ್ಲಾ ಪಂಚಾಯಿತಿಗಳ ವ್ಯಾಪ್ತಿಗೆ ಸರ್ಕಾರಿ ಆಸ್ಪತ್ರೆಗಳು ಒಳಪಟ್ಟ ನಂತರ ಜನಪ್ರತಿನಿಧಿಗಳು ವೈದ್ಯರ ಬಗ್ಗೆ ಹಗುರವಾಗಿ ಮಾತನಾಡುವಂತಾಗಿದೆ. ವೈದ್ಯರ ಮೇಲೆ ಹಲ್ಲೆ ಪ್ರಕರಣಗಳು ಹೆಚ್ಚುತ್ತಿವೆ.

ಸೌಲಭ್ಯಗಳನ್ನೇ ಕೊಡದೆ ಮಕ್ಕಳ ಆರೋಗ್ಯ ಕಾಪಾಡಿ ಎಂದರೆ ಸಾಧ್ಯವೇ? ಈ ಎಲ್ಲ ವಿಚಾರಗಳು ಪರೋಕ್ಷವಾಗಿ ಮಕ್ಕಳ ಆರೋಗ್ಯ ಕ್ಷೇತ್ರದ ಮೇಲೆ ಪರಿಣಾಮ ಬೀರುತ್ತಿವೆ. ನಮ್ಮ ಮಕ್ಕಳ ಮೊಗದಲ್ಲಿ ಕಲ್ಮಷರಹಿತ ಮಂದಹಾಸ ಶಾಶ್ವತವಾಗಿ ಇರಬೇಕಾದರೆ ಹೊಸ ಹೊಸ ಯೋಜನೆಗಳನ್ನು ರೂಪಿಸಿದರೆ ಸಾಲದು, ಕಡತಗಳಲ್ಲಿರುವ ಯೋಜನೆಗಳು ಮತ್ತು ವಾಸ್ತವ ಸ್ಥಿತಿಯನ್ನು ತಾಳೆಮಾಡುವ ಕೆಲಸ ಆಗಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT