ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಸಹಾಯಕತೆಯ ದುರುಪಯೋಗ

ಮಕ್ಕಳ ಆರೋಗ್ಯ ಪಾಲನೆ ಸವಾಲು
Last Updated 30 ಸೆಪ್ಟೆಂಬರ್ 2016, 19:30 IST
ಅಕ್ಷರ ಗಾತ್ರ

ಮಕ್ಕಳು ಮತ್ತು ಮಹಿಳೆಯರ ಆರೋಗ್ಯ ಎಷ್ಟು ಚೆನ್ನಾಗಿದೆ ಎಂಬುದರ ಮೇಲೆ ಇಡೀ ಸಮಾಜದ ಆರೋಗ್ಯ ನಿರ್ಧರಿತವಾಗುತ್ತದೆ. ಅದರಲ್ಲೂ ಮಕ್ಕಳ ಆರೋಗ್ಯ ರಕ್ಷಣೆ ಆಧುನಿಕ ಸಮಾಜದ ಬಹುದೊಡ್ಡ ಸವಾಲು.

ಮೈಸೂರಿನ ಚೆಲುವಾಂಬ ಆಸ್ಪತ್ರೆಯಲ್ಲಿ ಇತ್ತೀಚೆಗೆ ಒಂದೇ ಹಾಸಿಗೆಯಲ್ಲಿ ಬೇರೆ ಬೇರೆ ಕಾಯಿಲೆಗಳಿಂದ ಬಳಲುವ ಮಕ್ಕಳನ್ನು ಮಲಗಿಸಿದ್ದರಿಂದ ಹೊಸ ರೋಗಗಳ ಸೋಂಕು ತಗುಲಿದ್ದು,  ಡೆಂಗಿ, ಚಿಕುನ್‌ ಗುನ್ಯಾದಂತಹ ಕಾಯಿಲೆಗಳಿಂದ ಉದ್ಭವಿಸಿದ ಸನ್ನಿವೇಶಗಳನ್ನು ನಿರ್ವಹಿಸಲು ವಿಫಲವಾದ, ಕಾಯಿಲೆಗಳಿಗೆ ಆರೈಕೆ ಸಿಗದೆ ರೋಗಿ ಬೆಂಡಾದ ಪ್ರಕರಣಗಳು ಆರೋಗ್ಯ ವ್ಯವಸ್ಥೆಯಲ್ಲಿನ ಲೋಪಗಳತ್ತ ಬೊಟ್ಟು ಮಾಡುತ್ತವೆ.

ಸರ್ಕಾರ ಈ ನಿಟ್ಟಿನಲ್ಲಿ ವಹಿಸಿರುವ ಕಾಳಜಿ, ಮೂಲಸೌಕರ್ಯ ಒದಗಿಸಲು ತೋರುವ ಆಸಕ್ತಿ, ವ್ಯವಸ್ಥೆಯ ಸುಧಾರಣೆಗೆ ತೆಗೆದುಕೊಂಡ ಕ್ರಮಗಳನ್ನು ನೋಡಿದರೆ, ಆರೋಗ್ಯ ವ್ಯವಸ್ಥೆ ತಾಳ ತಪ್ಪಿದ್ದು ಎಲ್ಲಿ?, ಯೋಜನೆಗಳು ಅರ್ಹ ಫಲಾನುಭವಿಯನ್ನು ತಲುಪುವ ದಾರಿಯಲ್ಲಿ ಎಲ್ಲಿ ತಪ್ಪುಗಳಾಗುತ್ತವೆ ಎಂಬ ಪ್ರಶ್ನೆಗಳು ನಾಗರಿಕರಲ್ಲಿ ಮೂಡದೇ ಇರವು.

ಆರೋಗ್ಯ ಇಲಾಖೆಯ ಅಂಕಿಅಂಶಗಳ ಪ್ರಕಾರ, ರಾಜ್ಯದಲ್ಲಿ ವರ್ಷಕ್ಕೆ ಅಂದಾಜು 12 ಲಕ್ಷ ಹೆರಿಗೆಗಳಾಗುತ್ತವೆ. ಈ ಪೈಕಿ ಶೇ 50ರಷ್ಟು ಹೆರಿಗೆಗಳು ನಮ್ಮ ಸರ್ಕಾರಿ ಆಸ್ಪತ್ರೆಗಳಲ್ಲೇ ಆಗುತ್ತಿವೆ ಎಂದಾದರೆ ಅಲ್ಲಿನ ಸುಧಾರಿತ ಆರೈಕೆ ವ್ಯವಸ್ಥೆ ಕಾರಣ ಎನ್ನುವುದು ಅಧಿಕಾರಸ್ಥರ ಮಾತು. ಆದರೆ ಖಾಸಗಿ ಆಸ್ಪತ್ರೆಗಳ ದುಬಾರಿ ವೆಚ್ಚ ಸರ್ಕಾರಿ ಆಸ್ಪತ್ರೆ ಕಡೆಗಿನ ದಾರಿ ತೋರಿಸುತ್ತದೆ ಎನ್ನುವುದು ಬಡ, ಮಧ್ಯಮ ವರ್ಗದವರ ಅಸಹಾಯಕತೆಗೆ ಹಿಡಿದ ಕನ್ನಡಿ. ಈಗ ಡೆಂಗಿ, ಚಿಕುನ್‌ಗುನ್ಯಾಗೆ ಮಕ್ಕಳು ತುತ್ತಾಗುವುದು ಸಾಮಾನ್ಯವಾಗಿದೆ.

‘ಆರೋಗ್ಯ ಇಲಾಖೆಯು ಶಾಲೆ ಮತ್ತು ಆಸ್ಪತ್ರೆಗಳ ಆವರಣದಲ್ಲಿ ಸ್ವಚ್ಛತೆಗೆ ಹೆಚ್ಚಿನ ಒತ್ತು ನೀಡುತ್ತದೆ. ಪ್ರಾರ್ಥನಾ ಸಮಯದಲ್ಲಿ ಮಕ್ಕಳಿಗೆ ಡೆಂಗಿ ನಿಯಂತ್ರಣ ಕುರಿತು ಆರೋಗ್ಯ ಶಿಕ್ಷಣ ನೀಡಲಾಗುತ್ತಿದೆ. ಆರೋಗ್ಯ ಸಹಾಯಕರು, ಆಶಾ ಕಾರ್ಯಕರ್ತರು ರೋಗ ನಿಯಂತ್ರಣಕ್ಕೆ ಪೂರಕವಾದ ಅರಿವು ಮೂಡಿಸುತ್ತಿದ್ದಾರೆ.

ಸಾಂಕ್ರಾಮಿಕ ರೋಗಗಳಿಂದ ಉಂಟಾಗುವ ಸಮಸ್ಯೆಗಳನ್ನು ನಿರ್ವಹಿಸಲು ಜಿಲ್ಲಾ ಮಟ್ಟದಲ್ಲಿ ಸನ್ನದ್ಧವಾಗಿರುವ ತಜ್ಞ ವೈದ್ಯರ ‘ತ್ವರಿತ ಪ್ರತಿಕ್ರಿಯಾ ತಂಡ’ದಲ್ಲಿ ಮಕ್ಕಳ ತಜ್ಞರೂ ಇದ್ದಾರೆ. ಆಸ್ಪತ್ರೆ ವಾರ್ಡ್‌ಗಳ ಬಾಗಿಲು ಮತ್ತು ಕಿಟಕಿಗಳಿಗೆ ಸೊಳ್ಳೆ ನಿರೋಧಕ ಜಾಲರಿಗಳ ಅಳವಡಿಕೆ ಮತ್ತು ರೋಗಿಗಳಿಗೆ ಸೊಳ್ಳೆ ಪರದೆ ಬಳಸುವ ವ್ಯವಸ್ಥೆ ಇದೆ’ ಎನ್ನುತ್ತಾರೆ ಆರೋಗ್ಯ ಇಲಾಖೆಯ ಅಧಿಕಾರಿಗಳು. ಆದರೆ, ವಸ್ತುಸ್ಥಿತಿ ಏನಿದೆ ಎನ್ನುವುದಕ್ಕೆ ಮೈಸೂರಿನ ಚೆಲುವಾಂಬ ಆಸ್ಪತ್ರೆಯ ಚಿತ್ರಣ ಸಾಕು!

ಹಾಗೆ ನೋಡಿದರೆ, ಆರೋಗ್ಯ ಇಲಾಖೆಯ ಬಳಿ ಲೆಕ್ಕವಿಲ್ಲದಷ್ಟು ಯೋಜನೆಗಳಿವೆ. ಅದರಲ್ಲೂ ತಾಯಿ, ಮಕ್ಕಳ ಆರೋಗ್ಯವನ್ನು ಗಮನದಲ್ಲಿಟ್ಟುಕೊಂಡು ಕೇಂದ್ರ– ರಾಜ್ಯ ಸರ್ಕಾರಗಳು ನೂರಾರು ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸುತ್ತಿವೆ.  ಆದರೆ, ಆ ಯೋಜನೆಗಳು ತಳಮಟ್ಟದವರೆಗೆ ತಲುಪಿ ಫಲಾನುಭವಿಯ ಪ್ರಯೋಜನಕ್ಕೆ ಒದಗುವುದು ಅಷ್ಟೇ ಮುಖ್ಯ. ಮೂಲಸೌಲಭ್ಯ, ವೈದ್ಯರು, ಸಿಬ್ಬಂದಿ... ಹೀಗೆ ಕೊರತೆಗಳೇ ಹೆಚ್ಚಿರುವಾಗ ಯೋಜನೆಗಳು ಹಳ್ಳ ಹಿಡಿಯದೇ ಇರಲು ಹೇಗೆ ಸಾಧ್ಯ?

ನವಜಾತ ಶಿಶು ಮತ್ತು 5 ವರ್ಷದ ಒಳಗಿನ ಮಕ್ಕಳಲ್ಲಿ ಸಾಮಾನ್ಯವಾಗಿ ಕಾಣಿಸಿಕೊಳ್ಳುವ ನ್ಯುಮೋನಿಯಾ, ವಾಂತಿಭೇದಿ, ಸೋಂಕು, ಅಪೌಷ್ಟಿಕತೆ ಮುಂತಾದವುಗಳ  ನಿರ್ವಹಣೆಗೆ ಸಂಬಂಧಿಸಿದಂತೆ ಅಂಗನವಾಡಿ ಕಾರ್ಯಕರ್ತೆಯರು, ಕಿರಿಯ ಮಹಿಳಾ ಆರೋಗ್ಯ ಸಹಾಯಕರು ಮತ್ತು ಪ್ರಾಥಮಿಕ ಆರೋಗ್ಯ ಕೇಂದ್ರಗಳ ವೈದ್ಯರಿಗೆ ತರಬೇತಿ ನೀಡಲಾಗಿದೆ. ಜಿಲ್ಲಾ ಆಸ್ಪತ್ರೆ ಮತ್ತು ವೈದ್ಯಕೀಯ ಕಾಲೇಜುಗಳು ಸೇರಿದಂತೆ  ರಾಜ್ಯದ 37 ಕಡೆ ವಿಶೇಷ ನವಜಾತ ಶಿಶು ಆರೈಕೆ ಘಟಕಗಳು ಕಾರ್ಯ ನಿರ್ವಹಿಸುತ್ತಿವೆ’ ಎಂದು ಹೇಳುತ್ತಾರೆ ಆರೋಗ್ಯ ಇಲಾಖೆಯ ಉಪ ನಿರ್ದೇಶಕಿ (ಮಕ್ಕಳ ಆರೋಗ್ಯ) ಡಾ. ರಜಿನಿ ಎಂ.

ಸಣ್ಣಪುಟ್ಟ ಆರೋಗ್ಯ ತೊಂದರೆಗಳಿಗೆ ಶಾಲೆಗಳಲ್ಲಿ, ಪ್ರಾಥಮಿಕ ಆರೋಗ್ಯ ಕೇಂದ್ರ, ಸಮುದಾಯ ಆರೋಗ್ಯ ಕೇಂದ್ರ ಹಾಗೂ ತಾಲ್ಲೂಕು ಆಸ್ಪತ್ರೆಗಳಲ್ಲಿ ಉಚಿತ ಚಿಕಿತ್ಸೆ ನೀಡಲಾಗುತ್ತಿದೆ. ದೊಡ್ಡ ಪ್ರಮಾಣದ ಆರೋಗ್ಯ ಸಮಸ್ಯೆಗಳಿಗೂ ಉಚಿತ ಚಿಕಿತ್ಸೆ ನೀಡಲಾಗುತ್ತಿದೆ. ಪ್ರತಿ ವರ್ಷ ಆಗಸ್ಟ್ ತಿಂಗಳಿನಲ್ಲಿ ಎಲ್ಲಾ ಶಾಲಾ ಮಕ್ಕಳ ಆರೋಗ್ಯ ತಪಾಸಣೆಯನ್ನು ಶಾಲಾ ತಪಾಸಣಾ ತಂಡಗಳಿಂದ ನಡೆಸಲಾಗುತ್ತದೆ. ಆರೋಗ್ಯ ಸಮಸ್ಯೆಗಳಿರುವ ಎಲ್ಲಾ ಮಕ್ಕಳಿಗೆ ಸಮಸ್ಯೆಯ ತೀವ್ರತೆಯ ಅನುಸಾರ ವಿವಿಧ ಹಂತದ ಆರೋಗ್ಯ ಕೇಂದ್ರಗಳಿಗೆ ಚಿಕಿತ್ಸೆಗಾಗಿ ಶಿಫಾರಸು ಮಾಡಲಾಗುತ್ತದೆ ಎನ್ನುತ್ತವೆ ಸರ್ಕಾರದ ಅಂಕಿಅಂಶಗಳು.

ಆದರೆ ಸೂಕ್ತ ಸಮಯಕ್ಕೆ ವೆಂಟಿಲೇಟರ್‌ (ಕೃತಕ ಉಸಿರಾಟ ವ್ಯವಸ್ಥೆ) ಸೌಲಭ್ಯ ಲಭಿಸದೆ ಒಂದೂವರೆ ವರ್ಷದ ಮಗುವೊಂದು ಬೆಂಗಳೂರಿನ ಸರ್ಕಾರಿ ಆಸ್ಪತ್ರೆಯೊಂದರಲ್ಲಿ ಇತ್ತೀಚೆಗೆ ಸಾವಿಗೀಡಾದ ಬಳಿಕ ಸರ್ಕಾರಿ ಆಸ್ಪತ್ರೆಗಳಲ್ಲಿನ ವೆಂಟಿಲೇಟರ್‌ಗಳ ಸ್ಥಿತಿಗತಿ ಬೆಳಕಿಗೆ ಬಂದಿತ್ತು. ಜೀವ ಉಳಿಸಬೇಕಾದ ಸಂಜೀವಿನಿಯಾಗಿರುವ ವೆಂಟಿಲೇಟರ್‌ಗಳ ಸಮಸ್ಯೆ ಸರ್ಕಾರಿ ಆಸ್ಪತ್ರೆಗಳ ಪಾಲಿಗೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ.

ಬಹುತೇಕ ಕಡೆ ವೆಂಟಿಲೇಟರ್‌ಗಳ ಕೊರತೆ ಇದೆ. ಜೊತೆಗೆ ಅವುಗಳನ್ನು ನಿರ್ವಹಿಸಲು ತಜ್ಞರು ಸಹ ಇಲ್ಲ. ಹೀಗಾಗಿ ಲಕ್ಷಾಂತರ ರೂಪಾಯಿ ಮೌಲ್ಯದ ವೆಂಟಿಲೇಟರ್‌ಗಳು ಹಾಳಾಗುತ್ತಿವೆ ಎನ್ನುವ ಆರೋಪ ಇದೆ.

ಇತ್ತೀಚೆಗೆ ತೀವ್ರ ನಿಗಾ ಘಟಕಗಳಿಗೆ ದಾಖಲಾಗುತ್ತಿರುವವರ ಸಂಖ್ಯೆ ಹೆಚ್ಚಾಗುತ್ತಿದೆ. ಆದರೆ, ಐಸಿಯುಗಳು ಮತ್ತು ಹಾಸಿಗೆಗಳ ಕೊರತೆ ಇದೆ. ವೆಂಟಿಲೇಟರ್‌ಗಳ ಸಮರ್ಪಕ ನಿರ್ವಹಣೆಗಾಗಿ ತಜ್ಞರನ್ನು ನೇಮಿಸಿ ಅಗತ್ಯ ಸೌಕರ್ಯ ಕಲ್ಪಿಸುವಂತೆ ಸರ್ಕಾರಕ್ಕೆ ಪತ್ರ ಬರೆದರೆ, ಇರುವುದರಲ್ಲಿಯೇ ಚಿಕಿತ್ಸೆ ನೀಡಿ ಎಂಬ ಉತ್ತರ ಬರುತ್ತದೆ ಎಂದು ಸರ್ಕಾರಿ ಆಸ್ಪತ್ರೆಯೊಂದರ ವೈದ್ಯರು ಹೇಳುತ್ತಾರೆ.

ಬೆಂಗಳೂರಿನಲ್ಲಿ ನಿಮ್ಹಾನ್ಸ್ ಹೊರತುಪಡಿಸಿ ಉಳಿದೆಲ್ಲ ಸರ್ಕಾರಿ ಆಸ್ಪತ್ರೆಗಳಲ್ಲಿ ಕೇವಲ ಬೆರಳಣಿಕೆಯಷ್ಟು ಸಂಖ್ಯೆಯಲ್ಲಿ ವೆಂಟಿಲೇಟರ್ ಸೌಲಭ್ಯವಿದೆ. ಇನ್ನು ತುರ್ತು ಸಂದರ್ಭಗಳಲ್ಲಿ ರೋಗಿಗಳನ್ನು ಆಸ್ಪತ್ರೆಯಿಂದ ಆಸ್ಪತ್ರೆಗೆ ಕರೆದೊಯ್ಯಲು ವೆಂಟಿಲೇಟರ್ ಸೌಲಭ್ಯವುಳ್ಳ ಆಂಬುಲೆನ್ಸ್‌ಗಳ ಕೊರತೆ ಇದೆ. ಎಲ್ಲಾ 108 ಆಂಬುಲೆನ್ಸ್‌ಗಳಲ್ಲಿ ವೆಂಟಿಲೇಟರ್ ಸೌಲಭ್ಯವಿಲ್ಲ. ಆಸ್ಪತ್ರೆಗಳಲ್ಲೂ ವೆಂಟಿಲೇಟರ್ ಸೌಲಭ್ಯದ ಒಂದೆರಡು ಆಂಬುಲೆನ್ಸ್‌ಗಳಷ್ಟೇ ಇವೆ. ಹೆಚ್ಚುವರಿಯಾಗಿ ಬೇಕಾದರೆ ಖಾಸಗಿ ಆಂಬುಲೆನ್ಸ್‌ಗಳ ಮೊರೆ ಹೋಗುವುದು ಅನಿವಾರ್ಯವಾಗಿದೆ.

2013- 14ನೇ ಸಾಲಿನಲ್ಲಿ ಕೊಪ್ಪಳ ಜಿಲ್ಲೆ ಶಿಶುಮರಣಕ್ಕೆ ಸಂಬಂಧಿಸಿದಂತೆ ರಾಜ್ಯದಾದ್ಯಂತ ಸುದ್ದಿಯಾಗಿತ್ತು. ಆಗ 654ರಷ್ಟಿದ್ದ ಶಿಶು ಮರಣ ಪ್ರಮಾಣ 2014-15 ನೇ ಸಾಲಿನಲ್ಲಿ 621ರಷ್ಟಿತ್ತು. ಇದೀಗ 2015- 16ನೇ ಸಾಲಿನಲ್ಲಿ ಜುಲೈವರೆಗೆ 203 ಶಿಶುಗಳು ಸಾವಿಗೀಡಾಗಿವೆ. ಜಿಲ್ಲೆಯಲ್ಲಿ ಶಿಶು ಮರಣ ಪ್ರಮಾಣ ನಿರೀಕ್ಷಿತ ಪ್ರಮಾಣದಲ್ಲಿ ಇಳಿಕೆಯಾಗದಿರುವುದು ಆತಂಕ ಮೂಡಿಸಿದೆ.

ಕೊಪ್ಪಳ ಜಿಲ್ಲಾ ಆಸ್ಪತ್ರೆಗೆ ಬರಲು ವೈದ್ಯರು ಒಪ್ಪುತ್ತಿಲ್ಲ. ಬಂದವರೆಲ್ಲ ಅಲ್ಪ ಅವಧಿಯಲ್ಲೇ ಕೆಲಸ ಬಿಟ್ಟು ಹೋಗಿದ್ದಾರೆ. ಕ್ಷುಲ್ಲಕ ಕಾರಣಕ್ಕಾಗಿ ವೈದ್ಯರ ಮೇಲೆ ನಡೆದ ಹಲ್ಲೆ ಯತ್ನಗಳು, ರೋಗಿಗಳ ಸಂಬಂಧಿಕರು ಹಾಗೂ ಸ್ಥಳೀಯ ಹಿತಾಸಕ್ತಿಗಳ ಗಲಾಟೆ, ಜನಪ್ರತಿನಿಧಿಗಳ ಮಧ್ಯಪ್ರವೇಶ ಇತ್ಯಾದಿ ಕಾರಣಗಳಿಂದ ಉತ್ತಮ ವೇತನದ ಭರವಸೆ ನೀಡಿದರೂ ವೈದ್ಯರು ಬರಲು ಒಪ್ಪುತ್ತಿಲ್ಲ ಎನ್ನುತ್ತವೆ ಜಿಲ್ಲಾ ಆಸ್ಪತ್ರೆಯ ಮೂಲಗಳು. ಈ ಭಾಗದ ಮಕ್ಕಳಲ್ಲಿ ಹೆಚ್ಚಾಗಿರುವ ಅಪೌಷ್ಟಿಕತೆಗೆ ಅಸ್ವಚ್ಛತೆಯೇ ಮೂಲ ಕಾರಣ.

‘ಹುಬ್ಬಳ್ಳಿಯಲ್ಲಿರುವ ಕರ್ನಾಟಕ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಗೆ ಉತ್ತರ ಕರ್ನಾಟಕದ 11 ಜಿಲ್ಲೆಗಳಿಂದ ಗರ್ಭಿಣಿಯರು ಬರುತ್ತಾರೆ. ಇಲ್ಲಿ ನವಜಾತ ಶಿಶುಗಳ ಸಂಖ್ಯೆ ಹೆಚ್ಚುತ್ತಲೇ ಇದೆ. ಆದರೆ, ತಾಯಿ– ಮಗು ಆರೈಕೆಗೆ ಸಂಬಂಧಿಸಿ ತೆಗೆದುಕೊಂಡ ಕ್ರಮಗಳಿಂದ ಪರಿಣಾಮಕಾರಿ ಬದಲಾವಣೆ ಸಾಧ್ಯವಾಗಿದೆ. ನವಜಾತ ಶಿಶುಗಳ ಮರಣ ಪ್ರಮಾಣ ಕಳೆದ ಮೂರು ವರ್ಷಗಳಲ್ಲಿ ಶೇ 42ರಷ್ಟು ಇಳಿಕೆಯಾಗಿದೆ’ ಎನ್ನುತ್ತಾರೆ ಕಿಮ್ಸ್‌ ಚಿಕ್ಕಮಕ್ಕಳ ವಿಭಾಗದ ಮುಖ್ಯಸ್ಥ ಡಾ. ಪ್ರಕಾಶ ವಾರಿ.

ಇಲ್ಲಿ ಮಕ್ಕಳ ವಾರ್ಡಿನಲ್ಲಿ ಅಪೌಷ್ಟಿಕ ಮಕ್ಕಳ ಚಿಕಿತ್ಸೆಗಾಗಿ 20 ಹಾಸಿಗೆಗಳ ವಿಶೇಷ ವಾರ್ಡ್ ಇದೆ. ಉತ್ತರ ಕರ್ನಾಟಕ ಭಾಗದಲ್ಲಿ ಅಪೌಷ್ಟಿಕತೆಯಿಂದ ಬಳಲುವ ಮಕ್ಕಳ ಚಿಕಿತ್ಸೆಗೆ ಈ ಕೇಂದ್ರ ಆಶಾಕಿರಣವಾಗಿದೆ.

ಮಧ್ಯ ಕರ್ನಾಟಕ ಭಾಗದಲ್ಲಿ ಮಕ್ಕಳ ತಜ್ಞ ವೈದ್ಯರಿಗೆ ದಾವಣಗೆರೆ ಪ್ರಸಿದ್ಧಿ. ಇಲ್ಲಿ ಹಲವಾರು ಖಾಸಗಿ ನರ್ಸಿಂಗ್‌ ಹೋಮ್‌, ಕ್ಲಿನಿಕ್‌ಗಳಿವೆ. ಈ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುವುದಕ್ಕಾಗಿಯೇ ಹಾವೇರಿ, ಬಳ್ಳಾರಿ ಹಾಗೂ ಚಿತ್ರದುರ್ಗ ಜಿಲ್ಲೆಗಳ ಗ್ರಾಮೀಣ ಪ್ರದೇಶಗಳಿಂದ ರೋಗಿಗಳು ಬರುತ್ತಾರೆ. ಆದರೆ ಕಾಯಿಲೆ ಉಲ್ಬಣಿಸುತ್ತಿದ್ದಂತೆ ಇಲ್ಲಿನ ವೈದ್ಯರು ಹೊರ ಜಿಲ್ಲೆಗಳ ಖಾಸಗಿ ಆಸ್ಪತ್ರೆಗಳಿಗೆ ಕಳುಹಿಸುತ್ತಾರೆ.

‘ವೈದ್ಯರು ಸಕಾಲದಲ್ಲಿ ರೋಗ ಲಕ್ಷಣ ಪತ್ತೆಹಚ್ಚುವುದಿಲ್ಲ. ಅನಗತ್ಯವಾಗಿ ರಕ್ತ, ಮೂತ್ರ ಸೇರಿದಂತೆ ವಿವಿಧ ಪರೀಕ್ಷೆಗಳ ನೆಪದಲ್ಲಿ ರೋಗಿಗಳಿಂದ ಹಣ ಸುಲಿಗೆ ಮಾಡುತ್ತಾರೆ. ಇದು ಇಲ್ಲಿನ ನರ್ಸಿಂಗ್‌ ಹೋಮ್‌ಗಳ ದೊಡ್ಡ ದಂಧೆಯಾಗಿದೆ. ಕಾಯಿಲೆ ತೀವ್ರಗೊಳ್ಳುತ್ತಿದ್ದಂತೆ ಹೊರ ಜಿಲ್ಲೆಗಳ ಆಸ್ಪತ್ರೆಗೆ ರೋಗಿಗಳನ್ನು ಸಾಗಹಾಕುತ್ತಾರೆ.

ಇದೇ ಆಗಸ್ಟ್‌, ಸೆಪ್ಟೆಂಬರ್‌ನಲ್ಲಿ ನಗರದಲ್ಲಿ ಶಂಕಿತ ಡೆಂಗಿ ಹಾಗೂ ಮಲೇರಿಯಾ ಜ್ವರ ಹೆಚ್ಚಾಗಿ, ಮಕ್ಕಳು, ಮಹಿಳೆಯರು ಸೇರಿದಂತೆ ನೂರಾರು ರೋಗಿಗಳು ಇಲ್ಲಿನ ಆಸ್ಪತ್ರೆಗಳಿಗೆ ದಾಖಲಾದರು. ಆದರೆ ಸಕಾಲಕ್ಕೆ ಚಿಕಿತ್ಸೆ ಸಿಗದೆ ಮೂವರು ಮಕ್ಕಳು ಸೆಪ್ಟೆಂಬರ್‌ ತಿಂಗಳಿನಲ್ಲಿ ಒಂದೇ ದಿನ ಮೃತಪಟ್ಟರುಎಂದು ಈಚೆಗೆ ಶಂಕಿತ ಜ್ವರದಿಂದ ಮೃತಪಟ್ಟ ಬಾಲಕ ಹರ್ಷಿತ್‌ನ ದೊಡ್ಡಪ್ಪ ಸುರೇಶ್‌ ಆರೋಪಿಸುತ್ತಾರೆ.

‘ನಮ್ಮಲ್ಲಿನ ಆಸ್ಪತ್ರೆಗಳಲ್ಲೇ ರೋಗಿಗಳಿಗೆ ಉತ್ತಮ ಚಿಕಿತ್ಸೆ ನೀಡಲಾಗುತ್ತಿದೆ. ಇತ್ತೀಚಿನ ದಿನಗಳಲ್ಲಿ ಹೊರ ಜಿಲ್ಲೆಯ ಆಸ್ಪತ್ರೆಗಳಿಗೆ ಹೋಗುವ ರೋಗಿಗಳ ಸಂಖ್ಯೆಯಲ್ಲಿ ಇಳಿಮುಖವಾಗಿದೆ’ ಎಂದು ಬಾಪೂಜಿ ಮಕ್ಕಳ ಆಸ್ಪತ್ರೆಯ ನಿರ್ದೇಶಕ ಹಾಗೂ ಮಕ್ಕಳ ತಜ್ಞ ಡಾ. ಬಾಣಾಪುರ್‌ ಮಠ್‌ ಸಮರ್ಥಿಸಿಕೊಳ್ಳುತ್ತಾರೆ.

ವೆಂಟಿಲೇಟರ್ ಸೌಲಭ್ಯ ಸಿಗದೆ ಕೊನೆಯುಸಿರೆಳೆದ ಬೆಂಗಳೂರಿನ ಗಗನಾ, ಡೆಂಗಿಯಿಂದ ಜೀವತೆತ್ತ ದಾವಣಗೆರೆಯ ಹರ್ಷಿತ್ ಪ್ರಕರಣ ಕೇವಲ ಉದಾಹರಣೆಗಳಷ್ಟೆ. ಇಂಥ ಒಂದೋ ಎರಡೋ ಘಟನೆಗಳಷ್ಟೇ ಸುದ್ದಿಯಾಗುತ್ತವೆ. ಬಹುತೇಕ ಪ್ರಕರಣಗಳು ಸದ್ದಿಲ್ಲದೆ ನಡೆದು ಹೋಗುತ್ತಿವೆ. ಬಡವರ ಕಣ್ಣೀರು, ಅಸಹಾಯಕತೆಗೆ ಆಸ್ಪತ್ರೆಗಳ ಶವಾಗಾರದ ಗೋಡೆಗಳಷ್ಟೇ ಸಾಕ್ಷಿಯಾಗಿ ಉಳಿದಿವೆ. ಇನ್ನೆಷ್ಟು ಜೀವಗಳು ನಮ್ಮ ಆರೋಗ್ಯ ಅವ್ಯವಸ್ಥೆಗೆ ಬಲಿ ಆಗಬೇಕು? ಉತ್ತರಿಸುವ ಜವಾಬ್ದಾರಿ ಹೊತ್ತ ಸರ್ಕಾರ ಸಮಸ್ಯೆ ಪರಿಹಾರಕ್ಕೆ ಪ್ರಾಮಾಣಿಕ ಪ್ರಯತ್ನ ಮಾಡಬೇಕಿದೆ.

ಅಪೌಷ್ಟಿಕತೆ ಕೊನೆಗೊಳಿಸಲು ಕಸರತ್ತು
ಅಭಿವೃದ್ಧಿ ಪಥದಲ್ಲಿರುವ ಕರ್ನಾಟಕದಲ್ಲಿ 5 ವರ್ಷದ ಹಿಂದೆ ತೀವ್ರ ಅಪೌಷ್ಟಿಕತೆಯಿಂದ ಬಳಲುತ್ತಿದ್ದ 75 ಸಾವಿರಕ್ಕೂ ಹೆಚ್ಚಿನ ಸಂಖ್ಯೆಯ ಮಕ್ಕಳಿದ್ದರು ಎಂದರೆ ಯಾರಿಗೂ ನಂಬಲು ಸಾಧ್ಯವಾಗಲಾರದು. ಜೋತಾಡುವ ಚರ್ಮ, ಮೂಳೆಗಳ ಹಂದರ, ಮುಖ ಎದೆಗೂಡುಗಳಲ್ಲಿ ಎದ್ದುನಿಂತ ಮೂಳೆ, ವಕ್ರವಾಗಿ ಚಲಿಸುವ ಅಸ್ಥಿಪಂಜರ, ಅಂಕು ಡೊಂಕು ಕೈಕಾಲು, ಗುಡಾಣದಂತಹ ಹೊಟ್ಟೆ, ಪೇಲವ ಕಣ್ಣು... ರಾಯಚೂರು ಜಿಲ್ಲೆಯ ದೇವದುರ್ಗ ತಾಲ್ಲೂಕಿನಲ್ಲಿದ್ದ ಆ ಮಕ್ಕಳು ಆಫ್ರಿಕಾ ಖಂಡದ ಸೊಮಾಲಿಯಾ, ಸೂಡಾನ್‌ ದೇಶಗಳ ಮಕ್ಕಳನ್ನು ನೆನಪಿಗೆ ತರುತ್ತಿದ್ದವು. ನಂತರದ ಸ್ಥಾನ ಬಾಗಲಕೋಟೆ ಮತ್ತು ಕೊಪ್ಪಳದ್ದಾಗಿತ್ತು. ಆದರೆ, ಆ ಮಟ್ಟದಲ್ಲಿ ಅಪೌಷ್ಟಿಕ ಮಕ್ಕಳು ಈಗ ಇಲ್ಲ ಎನ್ನುವುದು ಅಧಿಕಾರಿಗಳ ವಾದ.

ಪೌಷ್ಟಿಕವಾಗಿರುವ ಮಕ್ಕಳು, ಪೌಷ್ಟಿಕಾಂಶದ ಕೊರತೆಯಿರುವ ಮಕ್ಕಳು ಹಾಗೂ ತೀವ್ರತರದ ಅಪೌಷ್ಟಿಕ ಮಕ್ಕಳು ಎಂದು ಸರ್ಕಾರ ವಿಭಾಗಿಸಿದೆ. ತೀವ್ರತರದ ಅಪೌಷ್ಟಿಕ ಮಕ್ಕಳಿಗಾಗಿ ಆಹಾರ ಹಾಗೂ ಮಾತ್ರೆಗಳನ್ನು ಅಂಗನವಾಡಿ ಮುಖಾಂತರ ನೀಡಲಾಗುತ್ತಿದೆ. ಪ್ರತಿ ತಿಂಗಳು ಅಂಗನವಾಡಿ ವ್ಯಾಪ್ತಿಯಲ್ಲಿ ಬರುವ ಆರು ವರ್ಷದೊಳಗಿನ ಮಕ್ಕಳ ತೂಕ ಅಳೆಯಬೇಕು ಹಾಗೂ ಆರೋಗ್ಯ ಪರೀಕ್ಷೆ ನಡೆಸಬೇಕು.

ಇದರ ಪೂರ್ಣ ವಿವರವನ್ನು ಸರ್ಕಾರಕ್ಕೆ ತಲುಪಿಸಬೇಕು. ನಂತರ ತೀವ್ರತರದ ಅಪೌಷ್ಟಿಕತೆ ಇರುವ ಮಕ್ಕಳಿಗೆ ಸರಿಯಾದ ಆಹಾರ ದೊರೆಯುವಂತೆ ಅಂಗನವಾಡಿಯಲ್ಲಿ ಆಹಾರ ನೀಡಬೇಕು. ಆದರೆ ಈ ಯೋಜನೆ ಅಪೂರ್ಣವಾಗಿದೆ ಎಂಬುದು ಹಲವು ಮಕ್ಕಳ ಸಂಸ್ಥೆಗಳ ಅಭಿಪ್ರಾಯ. ಅಪೌಷ್ಟಿಕತೆಯಿಂದ ಸಾವಿಗೀಡಾದ ಮಕ್ಕಳ ದುರಂತ ಅಂತ್ಯಕ್ಕೆ ಬಾಲ್ಯ ವಿವಾಹ ಪದ್ಧತಿ, ರಕ್ತಸಂಬಂಧಗಳಲ್ಲಿನ ಮದುವೆ, ಪೋಷಕರ ಮೂಢನಂಬಿಕೆ ಮತ್ತಿತರ ಅಂಶಗಳೇ ಕಾರಣ ಎನ್ನುವುದು ಸರ್ಕಾರದ ವಾದ.

‘ಅಂಗನವಾಡಿ ಕೇಂದ್ರಗಳಿಗೆ ದವಸ ಧಾನ್ಯಗಳು ಕೆಲವೊಮ್ಮೆ  ಕಳಪೆಯಿಂದ ಕೂಡಿರುತ್ತವೆ’ ಎಂದು ರಾಜ್ಯ ಅಂಗನವಾಡಿ ಕಾರ್ಯಕರ್ತೆ/ಸಹಾಯಕಿಯರ (ಎಐಟಿಯುಸಿ) ಫೆಡರೇಷನ್ ರಾಜ್ಯ ಘಟಕದ ಅಧ್ಯಕ್ಷ ಎಚ್‌.ಕೆ.ರಾಮಚಂದ್ರಪ್ಪ ಹೇಳುತ್ತಾರೆ.

ಅಪೌಷ್ಟಿಕ ಮಕ್ಕಳಿಗೆ ಒಮ್ಮೆ ಪೌಷ್ಟಿಕ ಆಹಾರ ನೀಡಿದರೆ ಜವಾಬ್ದಾರಿ ಮುಗಿಯಿತು ಎಂದು ಸರ್ಕಾರ ಅಂದುಕೊಂಡಂತಿದೆ. ಈ ವಯಸ್ಸಿನ ಮಕ್ಕಳಿಗೆ ದಿನದಲ್ಲಿ ನಿಗದಿತ ಪ್ರಮಾಣದಲ್ಲಿ 5ರಿಂದ 6 ಬಾರಿ ಆಹಾರ ನೀಡಬೇಕು. ಸರ್ಕಾರ ತೀವ್ರ ಅಪೌಷ್ಟಿಕ ಮಕ್ಕಳನ್ನು ಮಾತ್ರ ಗಣನೆಗೆ ತೆಗೆದುಕೊಳ್ಳುತ್ತಿದೆ. ಆದರೆ ಪೌಷ್ಟಿಕಾಂಶದ ಕೊರತೆಯಿರುವ  ಮಕ್ಕಳನ್ನು ಅಲಕ್ಷಿಸಿದರೆ ಅವರು ಅಪಾಯದ ಹಂತ ತಲುಪುವ ಸಾಧ್ಯತೆ ಇದೆ’ ಎನ್ನುತ್ತಾರೆ.

30 ವರ್ಷಗಳಿಂದ ಅನುಷ್ಠಾನದಲ್ಲಿರುವ ಮಕ್ಕಳ ಸಮಗ್ರ ಅಭಿವೃದ್ಧಿ ಸೇವಾ ಕಾರ್ಯಕ್ರಮ (ಐ.ಸಿ.ಡಿ.ಎಸ್) ಹಲವು ಹಂತಗಳಲ್ಲಿ ಯಶಸ್ವಿಯಾಗಿದ್ದರೂ ಮಕ್ಕಳ ಅಪೌಷ್ಟಿಕತೆಯ ವಿಷಯದಲ್ಲಿ ಮಾತ್ರ ಅಂತಹ ಗಮನಾರ್ಹವಾದ ಯಶಸ್ಸು ಕಂಡಿಲ್ಲ. ಕಾರಣ ಈ ಯೋಜನೆ ಕೇವಲ ಆಹಾರ ಪೂರೈಕೆಗೆ ಆದ್ಯತೆ ನೀಡಿತ್ತೇ ಹೊರತು ಪೌಷ್ಟಿಕತೆ ಮತ್ತು ಆರೋಗ್ಯ ಶಿಕ್ಷಣಕ್ಕೆ ಹೆಚ್ಚಿನ ಮಹತ್ವ ಕೊಟ್ಟಂತಿಲ್ಲ.

ಮಕ್ಕಳಲ್ಲಿರುವ ಅಪೌಷ್ಟಿಕತೆ ಹೋಗಲಾಡಿಸುವ ಉದ್ದೇಶದೊಂದಿಗೆ ಜಾರಿಯಾಗಿರುವ ಸಮಗ್ರ ಶಿಶು ಅಭಿವೃದ್ಧಿ ಯೋಜನೆ ಮತ್ತು ಅಂಗನವಾಡಿ ಕೇಂದ್ರಗಳನ್ನು ಬಲಗೊಳಿಸುವ ಬದಲಿಗೆ ಖಾಸಗಿಯವರಿಗೆ ಹಸ್ತಾಂತರಿಸುವ ಸರ್ಕಾರದ ಉದ್ದೇಶಕ್ಕೆ ತೀವ್ರ ವಿರೋಧ ವ್ಯಕ್ತಪಡಿಸುತ್ತಾರೆ ಕರ್ನಾಟಕ ರಾಜ್ಯ ಅಂಗನವಾಡಿ ನೌಕರರ ಸಂಘದ ಅಧ್ಯಕ್ಷೆ ಎಸ್‌.ವರಲಕ್ಷಿ.

ಅಂಗನವಾಡಿ ವ್ಯವಸ್ಥೆ ಸಂಪೂರ್ಣ ಖಾಸಗಿಮಯವಾಗಿ, ನಂತರ ಖಾಸಗಿ ವ್ಯಕ್ತಿಗಳು ಮತ್ತು ಸ್ವಯಂ ಸೇವಾ ಸಂಸ್ಥೆಗಳು ಈ ವ್ಯವಸ್ಥೆಯಿಂದ ಹಿಂದೆ ಸರಿದರೆ  ಇಡೀ ವ್ಯವಸ್ಥೆಯೇ ಡೋಲಾಯಮಾನವಾಗುತ್ತದೆ ಎನ್ನುವ ಆತಂಕ ಅವರದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT