ಧಾರ್ಮಿಕ ರಾಷ್ಟ್ರೀಯತೆ: ರಕ್ತದಲ್ಲಿ ಅದ್ದಿ ತೆಗೆದ ದುರಂತ

ಹಿಂದೂಗಳಿಗೆ ಒಂದು ಧರ್ಮವಿದೆ, ಒಂದು ಮಾತೃಭೂಮಿಯಿದೆ. ಇಷ್ಟು ಸಾಲದು ಎಂಬಂತೆ ತನಗೆ ಧಾರ್ಮಿಕ ರಾಷ್ಟ್ರವೂ ಒಂದು ಬೇಕೆಂಬ ಬೇಡಿಕೆ ಕೆಲವು ಹಿಂದೂ ಸಂಘಟನೆಗಳ ಮುಂದಿದೆ. ಶುದ್ಧಾಂಗ ಹಿಂದೂ ರಾಷ್ಟ್ರ ನಿರ್ಮಾಣದ ಈ ಬೇಡಿಕೆಯ ಸಾಧಕ ಬಾಧಕಗಳೇನು ಎಂದು ಚರ್ಚಿಸುವ ಮೊದಲು ಬೇಡಿಕೆಗಿರುವ ಚಾರಿತ್ರಿಕ ಹಿನ್ನೆಲೆಯನ್ನಿಷ್ಟು ಅರ್ಥಮಾಡಿಕೊಳ್ಳೋಣವಂತೆ.

ಧಾರ್ಮಿಕ ರಾಷ್ಟ್ರೀಯತೆ: ರಕ್ತದಲ್ಲಿ ಅದ್ದಿ ತೆಗೆದ ದುರಂತ

ಹಿಂದೂಗಳಿಗೆ ಒಂದು ಧರ್ಮವಿದೆ, ಒಂದು ಮಾತೃಭೂಮಿಯಿದೆ. ಇಷ್ಟು ಸಾಲದು ಎಂಬಂತೆ ತನಗೆ ಧಾರ್ಮಿಕ ರಾಷ್ಟ್ರವೂ ಒಂದು ಬೇಕೆಂಬ ಬೇಡಿಕೆ ಕೆಲವು ಹಿಂದೂ ಸಂಘಟನೆಗಳ ಮುಂದಿದೆ. ಶುದ್ಧಾಂಗ ಹಿಂದೂ ರಾಷ್ಟ್ರ ನಿರ್ಮಾಣದ ಈ ಬೇಡಿಕೆಯ ಸಾಧಕ ಬಾಧಕಗಳೇನು ಎಂದು ಚರ್ಚಿಸುವ ಮೊದಲು ಬೇಡಿಕೆಗಿರುವ ಚಾರಿತ್ರಿಕ ಹಿನ್ನೆಲೆಯನ್ನಿಷ್ಟು ಅರ್ಥಮಾಡಿಕೊಳ್ಳೋಣವಂತೆ.

ಹಿಂದೂ ರಾಷ್ಟ್ರದ ಕನಸು ಇತ್ತೀಚಿನದ್ದಲ್ಲ, ಹಾಗಂತ ತೀರ ಹಳೆಯದೂ ಅಲ್ಲ. ಕಳೆದ ಶತಮಾನದ ಆರಂಭದಲ್ಲಿ ಬ್ರಿಟಿಷರ ಗುಲಾಮಗಿರಿಯಿಂದ ಬಿಡುಗಡೆ ಪಡೆಯಬೇಕೆಂಬ ಪ್ರಯತ್ನದಲ್ಲಿ ನಾವಿದ್ದಾಗ, ಒಂದು ವರ್ಗದ ಹಿಂದೂಗಳಲ್ಲಿ ಹುಟ್ಟಿಕೊಂಡ ಬೇಡಿಕೆಯಿದು. ಬೇಡಿಕೆಯ ಸುತ್ತ ಹೆಣೆದಿರುವ ಸೈದ್ಧಾಂತಿಕತೆಯನ್ನು ಹಿಂದುತ್ವ ಎಂದು ಕರೆಯಲಾಗುತ್ತದೆ.

ಹಿಂದುತ್ವಕ್ಕೆ, ಗಾಂಧೀವಾದ ಅಥವಾ ಸಮಾಜವಾದಗಳಿಗಿರುವಷ್ಟು ಗಟ್ಟಿಮುಟ್ಟಾದ ಆರ್ಥಿಕ ಹಾಗೂ ಸಾಮಾಜಿಕ ನೆಲೆಗಟ್ಟು ಇಲ್ಲವಾದರೂ, ಸಾಂಸ್ಕೃತಿಕ ದಟ್ಟತೆಯಿದೆ, ಗಟ್ಟಿ ಸಂಘಟನೆಯಿದೆ. ತನ್ನ ಸಿದ್ಧಾಂತವನ್ನು ಕಾರ್ಯರೂಪಕ್ಕಿಳಿಸಲು ಬದ್ಧವಾದ ರಾಷ್ಟ್ರೀಯ ಸ್ವಯಂಸೇವಕ ಸಂಘ ಎಂಬ ಒಂದು ಕೇಂದ್ರ ಸಂಘಟನೆಯೂ, ವಿಶ್ವ ಹಿಂದೂ ಪರಿಷತ್, ಭಜರಂಗದಳ ಇತ್ಯಾದಿ ನೂರಕ್ಕೂ ಮಿಗಿಲಾದ ಉಪ ಸಂಘಟನೆಗಳೂ ಹಿಂದುತ್ವಕ್ಕೆ ಲಭ್ಯವಿದೆ.

ಮೊದಲು ಹಿಂದೂ ಮಹಾಸಭಾ, ನಂತರ ಜನಸಂಘ, ಜನಸಂಘವು ಜನತಾ ಪಕ್ಷದಲ್ಲಿ ವಿಲೀನಗೊಂಡು, ಮತ್ತೆ ಬೇರ್ಪಟ್ಟು, ಈಗ ಭಾರತೀಯ ಜನತಾ ಪಕ್ಷ ಎಂಬ ಹೆಸರಿನ ರಾಜಕೀಯ ಪಕ್ಷವು ಹಿಂದುತ್ವಕ್ಕೆ ಲಭ್ಯವಿದೆ. 2014ರ ಚುನಾವಣೆಯಲ್ಲಿ ಬಿಜೆಪಿ  ದೊಡ್ಡ ಪ್ರಮಾಣದ ಜಯ ಗಳಿಸಿ ಹಾಲಿ ಆಡಳಿತ ನಡೆಸುತ್ತಿದೆ. ಈ ಎಲ್ಲ ಕಾರಣಗಳಿಗಾಗಿ ಧಾರ್ಮಿಕ ರಾಷ್ಟ್ರೀಯತೆಯ ಚರ್ಚೆ, ಕೇವಲ ಆರಾಮ ಕುರ್ಚಿಯ ಹರಟೆ ಮಾತ್ರವೇ ಆಗಿರದೆ, ಭಾರತೀಯ ಪ್ರಜೆಗಳ ಜೀವನ್ಮರಣದ ಪ್ರಶ್ನೆಯಾಗಿ ಪರಿಣಮಿಸಿದೆ.

ಹಿಂದುತ್ವ ಹುಟ್ಟಿಕೊಂಡ ಇಪ್ಪತ್ತನೆಯ ಶತಮಾನದ ಆರಂಭಿಕ ದಶಕದಲ್ಲಿಯೇ ಆರ್ಯ ಕ್ರೈಸ್ತತ್ವ, ಯಹೂದ್ಯತ್ವ, ಮುಸ್ಲಿಮತ್ವಗಳು ಕೂಡ ಪಶ್ಚಿಮದ ವಿವಿಧ ರಾಷ್ಟ್ರಗಳಲ್ಲಿ ಜನ್ಮ ತಾಳಿದವು. 1945ರಲ್ಲಿ ಮಧ್ಯಪ್ರಾಚ್ಯದಲ್ಲಿ ಜಗತ್ತಿನ ಮೊದಲ ನಿರ್ಮಿತ ಧಾರ್ಮಿಕ ರಾಷ್ಟ್ರವಾಗಿ, ಯಹೂದ್ಯರ ಇಸ್ರೇಲ್‌  ಅಸ್ತಿತ್ವಕ್ಕೆ ಬಂದಿತು. ಅದಾದ ಎರಡು ವರ್ಷಗಳ ನಂತರ 1947ರಲ್ಲಿ ಎರಡನೆಯ ನಿರ್ಮಿತ ಧಾರ್ಮಿಕ ರಾಷ್ಟ್ರವಾಗಿ, ಭಾರತದಿಂದ ಹೋಳಾದ ಪಾಕಿಸ್ತಾನ ಅಸ್ತಿತ್ವಕ್ಕೆ ಬಂದಿತು.

ಮೇಲುನೋಟಕ್ಕೆ ತುಂಬ ಆಕರ್ಷಕವಾಗಿ ಹಾಗೂ ಭಾವನಾತ್ಮಕವಾಗಿ ಕಾಣಿಸುವ ಧಾರ್ಮಿಕ ರಾಷ್ಟ್ರೀಯತೆ, ಮೂಲತಃ ರಕ್ತದಲ್ಲಿ ಅದ್ದಿ ತೆಗೆದ ಭಾವಹೀನ ದುರಂತವಾಗಿದೆ. ಉದಾಹರಣೆಗೆ, ಇಸ್ರೇಲ್‌ ಹುಟ್ಟಿದ್ದು ಜರ್ಮನಿಯ ಫ್ಯಾಸಿಸ್ಟರ ಆರ್ಯಕ್ರೈಸ್ತ ಅತಿರೇಕದ ಫಲಶ್ರುತಿಯಾಗಿ. ಪಾಕಿಸ್ತಾನ ಹುಟ್ಟಿದ್ದು ಅಷ್ಟೇ ಭಯಾನಕವಾದ ವಿಭಜನೆಯೆಂಬ ನರಮೇಧದಿಂದಾಗಿ. ಮೇಲ್ನೋಟಕ್ಕೆ ಅಪ್ಪಟ ದೇಸಿ ವಿಚಾರದಂತೆ ಕಂಡುಬರುವ ಹಿಂದೂರಾಷ್ಟ್ರವಾದ, ಪಶ್ಚಿಮದ ರಾಷ್ಟ್ರೀಯವಾದದ ಯಥಾವತ್ ಅನುಕರಣೆಯೇ ಹೌದು.

ಇಟಲಿ, ಜರ್ಮನಿ, ರುಮೇನಿಯ ದೇಶಗಳ ಫ್ಯಾಸಿಸ್ಟ್ ನಿರಂಕುಶವಾದವನ್ನು ರೂಪಿಸಿದ ತತ್ವವೇ ಹಿಂದುತ್ವವನ್ನೂ ಸಹ ರೂಪಿಸಿದೆ. ಧಾರ್ಮಿಕ ರಾಷ್ಟ್ರೀಯತೆ ಎಂಬುದು ಒಂದು ಕಾಯಿಲೆ. ಈ ಕಾಯಿಲೆ ಹೆಚ್ಚಾಗಿ ಕಂಡು ಬರುವುದು ಪಶ್ಚಿಮದ ಸೆಮೆಟಿಕ್ ಧರ್ಮಗಳಲ್ಲಿ. ಹಿಂದೂ ಧರ್ಮಕ್ಕೆ ಈ ಕಾಯಿಲೆ ಬಡಿಯಬಾರದಿತ್ತು, ಬಡಿದಿದೆ. ಏಕೆಂದರೆ, ಹಿಂದೂ ಧರ್ಮ ಪಶ್ಚಿಮದ ಸೆಮೆಟಿಕ್ ಧರ್ಮಗಳಿಗಿಂತ ಭಿನ್ನವಾದ ಧರ್ಮವಾಗಿದೆ.

ಪಶ್ಚಿಮದ ಕ್ರೈಸ್ತ ಯಹೂದ್ಯ ಇಸಾಯಿ (ಇಸ್ಲಾಂ) ಧರ್ಮಗಳ ಕೇಂದ್ರದಲ್ಲಿ ಏಕಪಠ್ಯವೊಂದಿರುತ್ತದೆ ಅಥವಾ ಏಕಪ್ರವಾದಿಯೊಬ್ಬನಿರುತ್ತಾನೆ. ಏಕತೆಯ ಈ ಮಿತಿಯೇ ಸೆಮೆಟಿಕ್ ಧರ್ಮಗಳಲ್ಲಿ, ಧರ್ಮಾಂಧತೆ ಹಾಗೂ ಧಾರ್ಮಿಕ ರಾಷ್ಟ್ರೀಯತೆಯ ವಿಚಾರ ಹುಟ್ಟಲಿಕ್ಕೆ ಪ್ರೇರಣೆ ನೀಡುತ್ತದೆ. ಸೆಮೆಟಿಕ್ ಧರ್ಮದ ಹೋಲಿಕೆಯಲ್ಲಿ, ಹಿಂದೂ ಜೈನ ತಾವೋ ಬೌದ್ಧ ಇತ್ಯಾದಿ ಪೌರ್ವಾತ್ಯ ಧರ್ಮಗಳು ಅನೇಕತೆಯಲ್ಲಿ ನಂಬಿಕೆಯುಳ್ಳವು.

ಹಿಂದೂ ಧರ್ಮವು ಹಲವು ಪಠ್ಯಗಳು, ಹಲವು ಸುಧಾರಕರು, ಧಾರ್ಮಿಕ ಬಂಡಾಯಗಳು ಹಾಗೂ ಧಾರ್ಮಿಕ ದಾಳಿಗಳನ್ನು ಎದುರಿಸಿ, ವಾತಾಪಿಯನ್ನು ಉಂಡು ಜೀರ್ಣಿಸಿಕೊಂಡ ಅಗಸ್ತ್ಯ ಮುನಿಯಂತೆ, ಹೊರಗನ್ನು ಒಳಗು ಮಾಡಿಕೊಳ್ಳುತ್ತ ಬೆಳೆದಿದೆ. ನೀವೇ ನೋಡಿ! ಬೌದ್ಧರು, ಜೈನರು, ಮುಸಲ್ಮಾನ ಸೂಫಿಗಳು, ಲಿಂಗಾಯತರು, ಕಬೀರಪಂಥಿಗಳು, ನಾನಕಪಂಥಿ ಸಿಖ್ಖರು, ಬ್ರಾಹ್ಮಣರು, ಶೂದ್ರರು... ಹೀಗೆ ನೂರಾರು ಪಂಥ ಜಾತಿ ಪಂಗಡಗಳ ಒಂದು ಸಂಯುಕ್ತರಂಗವಾಗಿದೆ ಹಿಂದೂಧರ್ಮ. ಮಾತ್ರವಲ್ಲ, ಈ ಧಾರ್ಮಿಕ ಸಂಯುಕ್ತರಂಗವು ಇಂದು ನಿನ್ನಿನ ಬೆಳವಣಿಗೆಯೇನಲ್ಲ.

ಸಾವಿರಾರು ವರ್ಷಗಳ ಹಿಂದಿನಿಂದಲೇ, ಮಧ್ಯ ಏಷಿಯಾದಿಂದ ದನಗಾಹಿಗಳಾಗಿ ಬಂದವರನ್ನು ನಾವು ಹಿಂದೂ ಆರ್ಯರನ್ನಾಗಿಸಿಕೊಂಡೆವು. ಹೂಣರು ಬಂದಾಗ ಹಿಂದೂ ಕ್ಷತ್ರಿಯರನ್ನಾಗಿಸಿಕೊಂಡೆವು, ವಿವಿಧ ದ್ರಾವಿಡ ಜನಾಂಗಗಳನ್ನು ಹಿಂದೂ ಶೂದ್ರರನ್ನಾಗಿಸಿಕೊಂಡೆವು, ಮುಸಲ್ಮಾನರನ್ನು ಶೈವ-ಸೂಫಿಗಳನ್ನಾಗಿಸಿಕೊಂಡೆವು, ಬುದ್ಧನನ್ನು ವಿಷ್ಣುವಿನ ಹತ್ತನೆಯ ಅವತಾರ ವನ್ನಾಗಿಸಿಕೊಂಡೆವು.

ಈ ಸಂಯುಕ್ತರಂಗದ ಒಳಗಿನಿಂದಲೇ, ಸಂಸ್ಕೃತಭಾಷೆ ವೇದ ಉಪನಿಷತ್ತು ಹಾಗೂ ಭಾರತೀಯತೆ ರೂಪುಗೊಂಡವು. ಅನೇಕತೆಯನ್ನು ತಿರಸ್ಕರಿಸಿ ಏಕಸಂಸ್ಕೃತಿಯ ಬಲವಂತ ಹೇರಿದಾಕ್ಷಣ ಹಿಂದೂ ಧರ್ಮವು, ನಮಗಿಷ್ಟವಿರಲಿ ಇಲ್ಲದಿರಲಿ, ಬ್ರಾಹ್ಮಣೀಕರಣಗೊಂಡುಬಿಡುತ್ತದೆ, ಸತ್ತ ಧರ್ಮವಾಗಿ ಬಿಡುತ್ತದೆ.

ಗಾಂಧಿ ಅವರೂ ಸಹ, ಒಂದರ್ಥದಲ್ಲಿ, ಹಿಂದೂ ರಾಷ್ಟ್ರ ನಿರ್ಮಾಪಕರೇ ತಾನೇ? ಅವರನ್ನು ನಾವು ಹಾಗೆಂದು ಕರೆಯುವುದಿಲ್ಲ ಅಷ್ಟೆ. ಏಕೆ ಕರೆಯುವುದಿಲ್ಲವೆಂದರೆ ಗಾಂಧಿ ಅವರ ಪರಿಕಲ್ಪನೆ ಧಾರ್ಮಿಕ ರಾಷ್ಟ್ರೀಯತೆಗೆ ತದ್ವಿರುದ್ಧವಾದದ್ದು. ಮುಸಲ್ಮಾನರು ಕ್ರೈಸ್ತರು ಪಾರ್ಸಿಗಳು, ಯಾರೇ ಇರಲಿ, ನಮ್ಮಲ್ಲಿರುವಷ್ಟು ಕಾಲ ನಮ್ಮವರೇ ಹೌದು ಎಂದು ನಂಬುತ್ತಾರೆ ಗಾಂಧೀಜಿ. ಗಾಂಧಿ ಅವರ ಈ ನಂಬಿಕೆ ಹಿಂದೂ ಧರ್ಮದ ಮೂಲ ಆಶಯಕ್ಕೆ ಹತ್ತಿರವಾದದ್ದಾಗಿದೆ.

ಇಪ್ಪತನೆಯ ಶತಮಾನದ ಆದಿಭಾಗದಲ್ಲಿ ವಿವಿಧ ಹಿಂದೂ ಸುಧಾರಕ ಪಂಥಗಳು ಮರು ಮತಾಂತರವನ್ನು ಆರಂಭಿಸುವವರೆಗೆ ಮತಾಂತರದ ಪರಿಕಲ್ಪನೆಯೇ ನಮ್ಮಲ್ಲಿ ಇರಲಿಲ್ಲ. ಹಾಗೆಂದೇ ಗಾಂಧೀಜಿ ಮತಾಂತರಗಳನ್ನು ವಿರೋಧಿಸಿದರು. ಹಾಗೆಂದು ಹಿಂದೂ ಧರ್ಮದಲ್ಲಿ ಎಲ್ಲವೂ ಸರಿಯಿದೆ ಎಂದು ಗಾಂಧೀಜಿ ತಿಳಿದಿರಲಿಲ್ಲ. ಕೆಲವು ಸಂಗತಿಗಳಲ್ಲಿ ಹಿಂದೂ ಧರ್ಮದ ವೈಶಾಲ್ಯತೆ ಕೇವಲ ದೇಹ ವೈಶಾಲ್ಯತೆಯೇ ಹೊರತು ಹೃದಯ ವೈಶಾಲ್ಯತೆಯಲ್ಲ ಎಂದವರಿಗೆ ತಿಳಿದಿತ್ತು.

ಹಿಂದೂ ಧರ್ಮದಲ್ಲಿ ಎಲ್ಲ ಹೊರಗಿನವರೂ ಒಳಗಿನವರೇನೋ ಆಗುತ್ತಿದ್ದರು, ಆದರೆ ಕೆಳಸ್ತರಗಳ ಒಳಗಿನವರಾಗುತ್ತಿದ್ದರು. ಹಾಗಾಗಿ, ಬ್ರಾಹ್ಮಣ ಜಾತಿಯು ಯಾವತ್ತಿಗೂ ಮೇಲ್‌ಸ್ತರದಲ್ಲಿಯೇ ಉಳಿದು ಬರುತ್ತಿತ್ತು. ಈ ವಿಸಂಗತಿಯನ್ನೇ, ಭಕ್ತಿಪಂಥದ ವಿವಿಧ ಸಂತರು ಹಾಗೂ ಜ್ಯೋತಿಬಾಫುಲೆ, ಅಂಬೇಡ್ಕರ್, ರಾಮಸ್ವಾಮಿ ನಾಯಕರ್ ಇತ್ಯಾದಿ ಸಮಕಾಲೀನ ಸಾಮಾಜಿಕ ಹೋರಾಟಗಾರರು ಬದಲಿಸಲು ಪ್ರಯತ್ನಿಸಿದ್ದು. ಗಾಂಧೀಜಿ ಅಸ್ಪೃಶ್ಯತೆಯ ವಿರುದ್ಧ ಹೋರಾಡಿದ್ದು ಹಾಗೂ ಅಂತರ್‌ಜಾತೀಯ ವಿವಾಹಗಳನ್ನು ಬೆಂಬಲಿಸಿದ್ದು ಈ ಕಾರಣಕ್ಕಾಗಿಯೇ ಸರಿ.

ಈ ಎಲ್ಲ ಸಂಗತಿಗಳ ಅರಿವು ಬಿಜೆಪಿಗಿಲ್ಲ ಎಂದು ತಿಳಿದರೆ ಮೂರ್ಖತನವಾದೀತು. ದೇಶ ಆಳುವ ಗಂಭೀರ ಪ್ರಯತ್ನ ನಡೆಸಿರುವ ಅದು ಅನುಭವದಿಂದ ಪಾಠ ಕಲಿಯುತ್ತಿದೆ. ರಾಜಕೀಯ ಅನುಭವದ ಮೂಲಕವೇ ಹಿಂದೂ ರಾಷ್ಟ್ರ ಪರಿಕಲ್ಪನೆಯ ಎಲ್ಲ ಆಂತರಿಕ ವೈರುಧ್ಯಗಳನ್ನೂ ಅದು ಅರಿಯತೊಡಗಿದೆ. ಆದರೆ ಧಾರ್ಮಿಕ ರಾಷ್ಟ್ರೀಯತೆಯ ಪರಿಕಲ್ಪನೆಯಿಂದ ಬಹಿರಂಗವಾಗಿ ದೂರ ಸರಿಯುವುದು ಅದಕ್ಕೆ ಸುಲಭವಿಲ್ಲ. ಬಿಸಿತುಪ್ಪ ನುಂಗಿದೆ ಬಿಜೆಪಿ. ತುಪ್ಪ ಉಗುಳಲೂ ಆಗದೆ ನುಂಗಲೂ ಬಾರದೆ ಸಂಕಟಪಡುತ್ತಿದೆ ಅದು.

ಬಿಜೆಪಿಯ ಸಂಕಟವನ್ನು ನೀವೇ ಗಮನಿಸಿ; ಹಿಂದೂ ರಾಷ್ಟ್ರವಾದಿಯೊಬ್ಬ ಹಿಂದೂ ರಾಷ್ಟ್ರ ನಿರ್ಮಾಣದ ಸಲುವಾಗಿಯೇ ಕೊಂದುಹಾಕಿದ ಗಾಂಧೀಜಿಯನ್ನು ತನ್ನವನನ್ನಾಗಿಸಿಕೊಳ್ಳ ಹೊರಟಿದೆ ಅದು, ಗಾಂಧಿ ಕೊಲೆಗಾರ ಗೋಡ್ಸೆಯಿಂದ ದೂರ ಸರಿಯುವ ಪ್ರಯತ್ನ ನಡೆಸಿದೆ, ಅಂಬೇಡ್ಕರ್ ವಿವೇಕಾನಂದ ಭಗತ್ ಸಿಂಗ್ ವಲ್ಲಭಭಾಯಿ ಪಟೇಲ್ ಸುಭಾಷ್‌ಚಂದ್ರ ಬೋಸ್ ನಾರಾಯಣಗುರು ಮೊದಲ್ಗೊಂಡು, ಭಿನ್ನ ಸೈದ್ಧಾಂತಿಕ ಹಿನ್ನೆಲೆಯ ಹಲವು ಮಹನೀಯರನ್ನು ಅಪ್ಪಿಕೊಳ್ಳುವ ಸಾಹಸ ನಡೆಸಿದೆ.

ಮುಸಲ್ಮಾನರು ಹಾಗೂ ಕ್ರೈಸ್ತರನ್ನು ಪ್ರತ್ಯೇಕಿಸಿ ನೋಡುವ ಹಿಂದುತ್ವದ ಮೂಲ ನಿಲುವೂ ಕೂಡ ಆ ಪಕ್ಷಕ್ಕೆ ಹೊರೆಯಾಗತೊಡಗಿದೆ. ಜಮ್ಮು ಕಾಶ್ಮೀರದ ಸಮಸ್ಯೆಯನ್ನೇ ತೆಗೆದುಕೊಳ್ಳಿ. ಸಿದ್ಧಾಂತಕ್ಕೆ ಕಟ್ಟುಬಿದ್ದು ಜಗ್ಗಿದರೆ ಜಮ್ಮುವಿನಿಂದ ಕಾಶ್ಮೀರ ಹರಿಯುತ್ತದೆ, ಇನ್ನಷ್ಟು ಬಲವಾಗಿ ಜಗ್ಗಿದರೆ ಭಾರತವೇ ಹರಿಯುತ್ತದೆ.

ನಮ್ಮ ಮುಂದಿರುವ ಪ್ರಶ್ನೆಯೆಂದರೆ, ನಾವು ಭಾರತೀಯ ಪ್ರಜೆಗಳು ಈ ಪರಿಸ್ಥಿತಿಯನ್ನು ಹೇಗೆ ನಿಭಾಯಿಸುತ್ತೇವೆ ಎಂಬುದು. ಹಿಂದುತ್ವವೆಂಬ ಬಿಸಿತುಪ್ಪವನ್ನು ನುಂಗಿಬಿಡುವಂತೆ ಬಲವಂತ ಹೇರುತ್ತೇವೆಯೇ ಅಥವಾ ಉಗುಳುವಂತೆ ಬಿಜೆಪಿಯ ಮನ ಒಲಿಸುತ್ತೇವೆಯೇ ಎಂಬುದು. ಬಿಸಿತುಪ್ಪವನ್ನು ನುಂಗುವಂತೆ ಬಿಜೆಪಿಯನ್ನು ಪ್ರಚೋದಿಸುತ್ತಿರುವವರು ಕೇವಲ ಬಲಪಂಥೀಯರು ಮಾತ್ರವೇ ಅಲ್ಲ, ಅತಿರೇಕವಾದಿ ಎಡಪಂಥೀಯರೂ ಸಹ ಈ ಕೆಲಸ ಮಾಡುತ್ತಿದ್ದಾರೆ.

ಪಾಶ್ಚಾತ್ಯ ಮಾದರಿಯ ಸ್ಯೂಡೋ ಸೆಕ್ಯುಲರಿಸಂ ಹಾಗೂ ಪಾಶ್ಚಾತ್ಯ ಮಾದರಿಯ ಹಿಂದುತ್ವ ಎರಡನ್ನೂ ತಿರಸ್ಕರಿಸುವುದೇ ಭಾರತೀಯರಿಗಿರುವ ಸೂಕ್ತ ಆಯ್ಕೆಯಾಗಿದೆ. ಹಾಗೆ ತಿರಸ್ಕರಿಸಿ, ವೈವಿಧ್ಯತೆಯಲ್ಲಿ ಏಕತೆಯನ್ನು ಕಾಣುವುದೇ ಭಾರತೀಯ ರಾಷ್ಟ್ರೀಯತೆಯಾಗಿದೆ. ಇಷ್ಟಕ್ಕೂ, ರಾಜಕೀಯವಾಗಿ ಬಿಜೆಪಿಯನ್ನು ತಿರಸ್ಕರಿಸಲಿಕ್ಕೆ ಗಂಭೀರವಾದ ಕಾರಣಗಳು ಈಗಾಗಲೇ ಲಭ್ಯವಿವೆ. ಯಾವ ಕಾರಣವು ಕಾಂಗ್ರೆಸ್ ಪಕ್ಷವನ್ನು ಸೋಲಿಸೆಂದು ಭಾರತೀಯ ಪ್ರಜೆಗಳಿಗೆ ಪ್ರೇರಣೆ ನೀಡಿತೋ ಅದೇ ಕಾರಣವು ಬಿಜೆಪಿಗೂ ಅನ್ವಯಿಸುತ್ತದೆ. ಕಾಂಗ್ರೆಸ್ಸಿನಂತೆಯೇ ಬಿಜೆಪಿ ಸಹ ಶ್ರೀಮಂತರ ಪಕ್ಷವಾಗಿದೆ.

ಕಾಂಗ್ರೆಸನಂತೆಯೇ ಭ್ರಷ್ಟ ಉದ್ದಿಮೆಪತಿಗಳ ಬೆಂಬಲ ಪಡೆದು ಭ್ರಷ್ಟ ಉದ್ದಿಮೆಪತಿಗಳ ಬೆಂಬಲಕ್ಕೆ ನಿಂತಿದೆ ಅದು. ಜೊತೆಗೆ ಕಾಂಗ್ರೆಸ್‌ಗಿಂತಲೂ ಮಿಗಿಲಾಗಿ, ತಾತ್ವಿಕ ಎಡಬಿಡಂಗಿತನವೊಂದನ್ನು ಅದು ಪ್ರದರ್ಶಿಸುತ್ತಿದೆ.

ಇತ್ತ ಯಂತ್ರ ನಾಗರಿಕತೆಯೂ ಇರಲಿ ಅತ್ತ ಸಾಂಸ್ಕೃತಿಕ ಶುದ್ಧತೆಯೂ ಇರಲಿ, ಇತ್ತ ಸ್ಮಾರ್ಟ್‌ ಸಿಟಿಯೂ ಇರಲಿ ಅತ್ತ ಗ್ರಾಮ ಸ್ವರಾಜ್ಯವೂ ನಳನಳಿಸಲಿ, ಇತ್ತ ಮಾರುಕಟ್ಟೆ ಪ್ರಣೀತ ಆರ್ಥಿಕತೆಯೂ ಇರಲಿ ಅತ್ತ ನೀತಿ ನಡತೆಗಳೂ ಉಳಿದು ಬರಲಿ ಎಂಬ ದ್ವಂದ್ವ ಪ್ರದರ್ಶಿಸುತ್ತಿದೆ ಅದು. ಎಲ್ಲಕ್ಕಿಂತ ಮಿಗಿಲಾಗಿ ಹಿಂದೂ ಧರ್ಮವನ್ನು ಮೇಲೆತ್ತುವ ಬದಲು ತಾನೇ ಹಿಂದೂ ಮಠಮಾನ್ಯಗಳ ಬೆನ್ನೇರಿ ನಿಂತಿದೆ ಬಿಜೆಪಿ.

ಸಮಸ್ಯೆ ಪ್ರಜೆಗಳದ್ದು. ಎಡಬಿಡಂಗಿತನವೂ ಸಹ ಪ್ರಜೆಗಳದ್ದೇ ಹೌದು. ಪ್ರಜೆಗಳು ಕೇವಲ ವೋಟುದಾರರಲ್ಲ. ಅವರು ಸಮಾಜ ಸುಧಾರಕರೂ ಆಗಬೇಕು. ಅವರ ಆಯ್ಕೆ ಕೇವಲ ಎರಡು ಭ್ರಷ್ಟ ರಾಜಕೀಯ ಪಕ್ಷಗಳ ನಡುವಿನಲ್ಲಿಲ್ಲ. ಅಲ್ಪಸಂಖ್ಯಾತರು ದಲಿತರು ಕಾರ್ಮಿಕರು ಮುದುಕರು ಮಹಿಳೆಯರು ಮಕ್ಕಳು ಇತ್ಯಾದಿಯಾಗಿ, ಎಲ್ಲ ಬಡಜನರ ಸಂಯಕ್ತರಂಗ ರಚಿಸಿಕೊಳ್ಳುವ ಆಯ್ಕೆ ಈಗಲೂ ಅವರ ಮುಂದೆ ತೆರೆದಿದೆ.

Comments
ಈ ವಿಭಾಗದಿಂದ ಇನ್ನಷ್ಟು
ರಾಮಾಯಣವೆಂಬುದು ಎಡಪಂಥ

ಸಂಭಾಷಣೆ
ರಾಮಾಯಣವೆಂಬುದು ಎಡಪಂಥ

15 Mar, 2018
ವರ್ಗ ಸಂಘರ್ಷ ಹಾಗೂ ಧರ್ಮ

ಸಂಭಾಷಣೆ
ವರ್ಗ ಸಂಘರ್ಷ ಹಾಗೂ ಧರ್ಮ

1 Mar, 2018
ಇದು ಧರ್ಮಯುದ್ಧ... ಸಭ್ಯ ಸಂಸ್ಕೃತಿ

ಸಂಭಾಷಣೆ
ಇದು ಧರ್ಮಯುದ್ಧ... ಸಭ್ಯ ಸಂಸ್ಕೃತಿ

15 Feb, 2018
ಮಂಟೇಸ್ವಾಮಿಗಳ ಸಮಕಾಲೀನ ಮಹತ್ವ

ಸಂಭಾಷಣೆ
ಮಂಟೇಸ್ವಾಮಿಗಳ ಸಮಕಾಲೀನ ಮಹತ್ವ

1 Feb, 2018
ಕೈ ಉತ್ಪನ್ನಗಳ ಪರವಾದ ಚಳವಳಿ ಏಕೆ ಬೇಕು?

ಸಂಭಾಷಣೆ
ಕೈ ಉತ್ಪನ್ನಗಳ ಪರವಾದ ಚಳವಳಿ ಏಕೆ ಬೇಕು?

18 Jan, 2018