ಶತಮಾನದ ಚರ್ಚ್‌

ಮುಳುಗೇಳುವ ರೋಸರಿ ಚರ್ಚ್

ಮುಳುಗಡೆಯಿಂದಾಗಿ ತನ್ನ ಸ್ವರೂಪವನ್ನು ಕಳೆದುಕೊಂಡಿರುವ ಹಾಸನದ ಶೆಟ್ಟಿಹಳ್ಳಿಯ ರೋಸರಿ ಚರ್ಚ್, ಬದಲಾದ ಸ್ವರೂಪದಿಂದಲೇ ಹೆಚ್ಚು ಪ್ರವಾಸಿಗರನ್ನು ತನ್ನತ್ತ ಆಕರ್ಷಿಸುತ್ತಿದೆ.

ರೋಸರಿ ಚರ್ಚ್

ಆಧುನಿಕ ನಿರ್ಮಾಣಗಳು ಹೇಗೆ ಪ್ರಾಚೀನ ಸಂಸ್ಕೃತಿಯನ್ನು ಮುಳುಗಿಸಬಲ್ಲದು ಎಂಬುದಕ್ಕೆ ಅಣೆಕಟ್ಟುಗಳು ಸಾಕ್ಷಿಯಾಗಿವೆ. ಕೆ.ಆರ್‌.ಎಸ್‌ ಜಲಾಶಯದಿಂದ ಹೊಯ್ಸಳರ ನಿರ್ಮಾಣದ ವೇಣುಗೋಪಾಲಸ್ವಾಮಿ, ಕನ್ನೇಶ್ವರ ಮತ್ತು ಕಾಳಮ್ಮ ದೇವಾಲಯಗಳು, ಕಬಿನಿ ಹಿನ್ನೀರಿನಲ್ಲಿ ಮಾಂಕಾಳಮ್ಮ ಮತ್ತು ಭವಾನಿಶಂಕರ ದೇವಾಲಯಗಳು ಮುಳುಗಡೆಯಾದ ನಿದರ್ಶನವಿದೆ. ನೀರು ಕಡಿಮೆಯಾದಾಗ ದೇವಾಲಯಗಳು ಗೋಚರಿಸುತ್ತದೆ.

ಹೀಗೆ ಮುಳುಗಡೆಯಿಂದಾಗಿ ತನ್ನ ಸ್ವರೂಪವನ್ನು ಕಳೆದುಕೊಂಡರೂ ಪ್ರವಾಸಿಗರನ್ನು ತನ್ನತ್ತ ಆಕರ್ಷಿಸುತ್ತಿದೆ ಶೆಟ್ಟಿಹಳ್ಳಿಯ ರೋಸರಿ ಚರ್ಚ್. ಹಿನ್ನೀರು ಹೆಚ್ಚಾಗುತ್ತಿದ್ದಂತೆ ಮುಳುಗುವ ಈ ಚರ್ಚ್‌ ಅನ್ನು ಹತ್ತಿರದಿಂದ ನೋಡಲು ತೆಪ್ಪದಲ್ಲಿ ತೆರಳುವ ಪ್ರವಾಸಿಗರು, ನೀರು ಕಡಿಮೆಯಿದ್ದಾಗ ಚರ್ಚ್‌ ಬಳಿಯೇ ವಾಹನವನ್ನು ನಿಲ್ಲಿಸಿ ಕಣ್ತುಂಬಿಕೊಳ್ಳುತ್ತಾರೆ.

ಹಾಸನದಿಂದ 15 ಕಿ.ಮೀ ದೂರದಲ್ಲಿರುವ ಶೆಟ್ಟಿಹಳ್ಳಿಯಲ್ಲಿರುವ ಈ ಚರ್ಚ್ ಅನ್ನು ಸುಮಾರು 1860 ರಲ್ಲಿ ಮೈಸೂರು ರಾಜ್ಯದಲ್ಲಿದ್ದ ಫ್ರೆಂಚ್ ಪಾದ್ರಿಗಳು ನಿರ್ಮಾಣ ಮಾಡಿದ್ದರು. ಸುಣ್ಣದ ಗಾರೆ, ಸುಟ್ಟ ಇಟ್ಟಿಗೆ ಬಳಸಿ ಗೋಥಿಕ್ ವಾಸ್ತುಶಿಲ್ಪ ಮಾದರಿಯಲ್ಲಿ ಇದನ್ನು ಕಟ್ಟಲಾಗಿದೆ. 

ಚರ್ಚ್‌ನ ಸುಂದರ ಕಮಾನುಗಳು, ಗೋಪುರ, ಎತ್ತರದ ಬಾಗಿಲುಗಳು, ಮಿನಾರುಗಳು ಆಗಸದ ಹಿಮ್ಮೇಳದಲ್ಲಿ ನೋಡುಗರ ಕಣ್ಣಿಗೆ ಹಬ್ಬವನ್ನುಂಟು ಮಾಡುತ್ತವೆ. ತನ್ನ ಬಾಹ್ಯ ಮತ್ತು ಒಳ ವಿನ್ಯಾಸದಿಂದಲೇ ಮನಸೆಳೆಯುತ್ತದೆ. ಹಲವು ಚಿತ್ರಗಳ ಚಿತ್ರೀಕರಣವೂ ಇಲ್ಲಿ ನಡೆದಿದೆ.

ಹಾಸನ ಸೇರಿದಂತೆ ಮೂರು ಜಿಲ್ಲೆಗಳಿಗೆ ನೀರಾವರಿ ವ್ಯವಸ್ಥೆ ಕಲ್ಪಿಸಲು, 1960ರಲ್ಲಿ ಹಾಸನದ ಜೀವನದಿ­ ಹೇಮಾವತಿಗೆ ಗೊರೂರು ಗ್ರಾಮದ ಬಳಿ ಅಣೆಕಟ್ಟೆ ನಿರ್ಮಾಣವಾಯಿತು. ಆಗ ಶೆಟ್ಟಿಹಳ್ಳಿ ಸೇರಿದಂತೆ ಸುಮಾರು 28 ಗ್ರಾಮಗಳು ಅಣೆಕಟ್ಟೆಯ ಹಿನ್ನೀರಿನಲ್ಲಿ ಮುಳುಗಡೆಯಾದವು. ಆಗ ಒಂದೂವರೆ ಶತಮಾನದ ರೋಸರಿ ಚರ್ಚ್‌ ಕೂಡ ಹೇಮಾವತಿ ಅಣೆಕಟ್ಟೆಯ ಒಡಲು ಸೇರಿಕೊಂಡಿತು.

ಸುಮಾರು ಐದೂವರೆ ದಶಕದಿಂದ ಶೆಟ್ಟಿಹಳ್ಳಿ ಚರ್ಚ್ ಹಿನ್ನೀರಿನಲ್ಲಿ ಮುಳುಗೇಳುತ್ತಿದೆ. ಚರ್ಚ್‌ನ ಮೂಲ ಸ್ವರೂಪ ಬದಲಾಗುತ್ತಿದೆ. ವರ್ಷದಿಂದ ವರ್ಷಕ್ಕೆ ಚರ್ಚ್‌ನ ಗೋಡೆ, ಕಮಾನು ಹಾಗೂ ಗೋಪುರಗಳು ಕುಸಿಯುತ್ತಾ ಹಿನ್ನೀರಿನ ಒಡಲಲ್ಲಿ ಮಣ್ಣಾಗುತ್ತಿವೆ.

ಕಟ್ಟಡದ ಕಮಾನುಗಳು ಬಹುತೇಕ ಶಿಥಿಲಗೊಂಡಿವೆ. ನೀರಿನಲ್ಲಿ ಮುಳುಗೇಳುವ ಇದರ ಸಂರಕ್ಷಣೆಯೂ ಕಷ್ಟಸಾಧ್ಯ. ಹಾಗೆಂದು ಆಧುನಿಕ ಬದುಕಿಗೆ ಬೇಕಾದ ಅಣೆಕಟ್ಟನ್ನು ಜೀವವಿರೋಧಿ ಎನ್ನಲೂ ಆಗುವುದಿಲ್ಲ. ಶಿಥಿಲತೆಯಲ್ಲೂ ಸೌಂದರ್ಯವನ್ನು ಹೊಂದಿರುವ ಚರ್ಚ್‌ನ ಪಳೆಯುಳಿಕೆಗಳನ್ನು ಹಿನ್ನೀರಿನ ಹೊಂಬೆಳಕಿನಲ್ಲಿ, ಆಗಸದ ಚಿತ್ತಾರದ ಜೊತೆಯಾಗಿ ಮನತುಂಬಿಸಿಕೊಳ್ಳುವುದೇ ಭಾಗ್ಯವೆನ್ನಬಹುದು.

Comments
ಈ ವಿಭಾಗದಿಂದ ಇನ್ನಷ್ಟು
ಹಳಿಗಳ ಮೇಲೆ ನೆನಪಿನ ಉಯ್ಯಾಲೆ...

ಪ್ರವಾಸ ಕಥನ
ಹಳಿಗಳ ಮೇಲೆ ನೆನಪಿನ ಉಯ್ಯಾಲೆ...

21 Jan, 2018
ಹೂ ಕಣಿವೆಯ ಸೌಂದರ್ಯ ಮತ್ತು ನೆತ್ತರ ಚರಿತ್ರೆ...

ಪುಷ್ಟಪ್ರಿಯರ ಪಾಲಿನ ಸ್ವರ್ಗ
ಹೂ ಕಣಿವೆಯ ಸೌಂದರ್ಯ ಮತ್ತು ನೆತ್ತರ ಚರಿತ್ರೆ...

31 Dec, 2017
ವಂಗನಾಡಿನ ಮಾಸದ ಸ್ವಪ್ನಗಳು...

ಕೋಲ್ಕತ್ತ
ವಂಗನಾಡಿನ ಮಾಸದ ಸ್ವಪ್ನಗಳು...

10 Dec, 2017
ಜನಕಪುರಿಯ ಝಲಕ್

ನೇಪಾಳ
ಜನಕಪುರಿಯ ಝಲಕ್

3 Dec, 2017
ಆಸ್ಟ್ರೇಲಿಯಾ ಎಂಬ ಖಂಡ ದೇಶದೊಳಗೆ...

ಗಗನಚುಂಬಿ ಕಟ್ಟಡಗಳು
ಆಸ್ಟ್ರೇಲಿಯಾ ಎಂಬ ಖಂಡ ದೇಶದೊಳಗೆ...

29 Oct, 2017