ಅರ್ಭಕರಿಗೆ ನಮಸ್ಕಾರ

ಅರ್ಧರಾಜ್ಯವನ್ನು ತನ್ನದಾಗಿಸಿಕೊಂಡು, ಗಂಗೆಯ ದಕ್ಷಿಣ ದಿಶೆಯ ಅರ್ಧವನ್ನು ದ್ರುಪದನಿಗೇ ಬಿಟ್ಟುಕೊಟ್ಟು, ತಾನೂ ರಾಜನೇ ಆಗಿ ದ್ರುಪದಸಮಾನನೇ ಆದ ಮೇಲೆ, ‘ಈಗ ಸಮಾನರಾದೆವು; ಹಿಂದಿನ ಸ್ನೇಹವನ್ನು ಮುಂದುವರಿಸೋಣವೇ’ ಎಂದು ಆಳವಾಗಿ ಕುಟುಕಿದ.

ಅರ್ಭಕರಿಗೆ ನಮಸ್ಕಾರ

‘ಅಗ್ನಿ’ಯು ಮಹಾಭಾರತದ ಕೇಂದ್ರ ಪ್ರತಿಮೆಯಾಗಿ ಉರಿಯುತ್ತಿದೆ. ಅಗ್ನಿ ಎಂದಾಗ ಅದು ಕರ್ಮಕಾಂಡದ ದೈವತವೂ ಹೌದು. ಕರ್ಮಕಾಂಡವೆಂದಾಗ ಅದು ಯಜ್ಞಯಾಗಾದಿ ಆಚರಣೆಗಳೂ ಹೌದು. ತಾತ್ತ್ವಿಕವಾಗಿ, ಪ್ರಕೃತಿಯ ಪರೋಕ್ಷಶಕ್ತಿಗಳ ಜೊತೆ ಒಡನಾಟವೂ ಹೌದು. ಈ ಪರೋಕ್ಷಶಕ್ತಿಗಳನ್ನು ದೇವತೆಗಳು ಎಂದು ಕರೆದರು. ಪರೋಕ್ಷ ಪ್ರಿಯರಾಗಿರುವುದೇ – ಅಂದರೆ ತೆರೆಯ ಮರೆಯಲ್ಲಿರುವುದೇ ದೇವತೆಗಳ ಗುಣ ಎಂದರು.

ಇದಕ್ಕಿಂತ ಭಿನ್ನವಾಗಿ, ಪ್ರತ್ಯಕ್ಷಪ್ರಿಯತೆ – ಅಂದರೆ ತಾನು ಎಲ್ಲೆಲ್ಲೂ ಕಾಣಿಸಿಕೊಳ್ಳಬೇಕೆಂಬ ಸ್ವ–ಪ್ರದರ್ಶನ ಗುಣ, ನಟನೆಯ ಗುಣ, ರಂಗಪ್ರಿಯತೆ – ಇವೆಲ್ಲ ಮನುಷ್ಯರ ಗುಣ ಎಂದರು. ಪ್ರಕೃತಿಯ ಈ ಎರಡು ಶಕ್ತಿಗಳು, ಪರೋಕ್ಷ ಮತ್ತು ಪ್ರತ್ಯಕ್ಷ – ದೇವತೆಗಳು ಮತ್ತು ಮನುಷ್ಯರು – ಪರಸ್ಪರ ಗುರುತಿಸಿಕೊಂಡಾಗ, ಸೇರಿದಾಗ; ಅದನ್ನು ದೊಡ್ಡ ಶ್ರೇಯಸ್ಸು ಎಂದು ಸ್ವಯಂ ಕೃಷ್ಣ ಹೇಳಿದ್ದಾನೆ – ಮಹಾಭಾರತದ ಮುಖ್ಯ ಭಾಗವೇ ಆಗಿರುವ ಗೀತೆಯಲ್ಲಿ.

ಪ್ರತ್ಯಕ್ಷಕ್ಕೆ ಪರೋಕ್ಷದ ಗುರುತಾದಾಗ ಪ್ರತ್ಯಕ್ಷಕ್ಕೆ ಒದಗುವ ಆಳ, ಗಾಂಭೀರ್ಯಗಳ ಆಯಾಮಗಳೇ ಬೇರೆ. ಪರೋಕ್ಷವು ಪ್ರತ್ಯಕ್ಷವನ್ನು ಗುರುತಿಸಿದಾಗ ಅಲ್ಲಿ ಉಂಟಾಗುವ ಪ್ರೀತಿ–ವಾತ್ಸಲ್ಯಗಳ ಸ್ಪಂದನಗಳೇ ಬೇರೆ. ಇವೆರಡೂ ಹೀಗೆ ಸೇರುವುದನ್ನು ‘ಯಜ್ಞ’ ಎಂಬ ಪರಿಭಾಷೆಯಲ್ಲಿಯೇ ಕೃಷ್ಣ ಕರೆದಿದ್ದಾನೆ. ಈಗ ಇದು ನಿಜವಾದ ‘ಅಗ್ನಿ–ಹೋತ್ರ’, ನಿಸರ್ಗದಲ್ಲಿ ನಡೆಯುತ್ತಲೇ ಇದೆ ಕೂಡ.

ಸಸ್ಯಗಳು ಸೂರ್ಯನ ಬಿಸಿಲಿಗೆ ಹಂಬಲಿಸುವಂತೆ ಪ್ರತ್ಯಕ್ಷವು ಪರೋಕ್ಷವನ್ನು ಹಂಬಲಿಸುತ್ತದೆ. ತಾಯಿಹಕ್ಕಿ, ತಾಯಿಹಾವು ತಮ್ಮ ಮೊಟ್ಟೆಗಳಿಗೆ ಕಾವು ಕೊಡುವಂತೆ ಪರೋಕ್ಷವು ಪ್ರತ್ಯಕ್ಷವನ್ನು ಲಾಲನೆ ಮಾಡುತ್ತದೆ. ಎರಡು ಬದಿಯಲ್ಲಿಯೂ ಇದು ಬೆಚ್ಚನೆಯ ಅನುಭವ!

ಈ ಅನುಭವವನ್ನು ಕೃಷ್ಣ ಬೇರೆ ಮಾತುಗಳಲ್ಲಿ ಹೇಳಿದ. ಆಹಾರದಿಂದ ಜೀವಜಾತಗಳ ಪೋಷಣೆಯಲ್ಲವೆ – ಮಳೆಯಿಂದ ಬೆಳೆ ಬೆಳೆದು ಆಹಾರದ ಸೃಷ್ಟಿಯಲ್ಲವೆ – ಮಳೆಗರೆವ ಮೋಡಗಳಿಗೆ ಸೌರಶಕ್ತಿಯೆ ಮೂಲವಲ್ಲವೆ – ‘ಯಜ್ಞ’ವು ಸೌರಶಕ್ತಿಯ ವೃದ್ಧಿಗೆ ಕಾರಣವಾಗುವ ಕರ್ಮ ಎಂದು ಕೃಷ್ಣ ಬಾಯ್ತುಂಬ ಬಣ್ಣಿಸಿದ. ಹೀಗೆ ಇದೊಂದು ಚಕ್ರ ಎಂದ.

ಯಜ್ಞಚಕ್ರ; ಜೀವನಚಕ್ರ ಎಂದ. ಅಂದರೆ ಪ್ರಕೃತಿಯಿಂದ ಪಡೆದುದನ್ನು ಮರಳಿ ಪ್ರಕೃತಿಗೆ ಒಪ್ಪಿಸುವ ವಿಧಾನವೇ ‘ಯಜ್ಞ’ ಎಂದ, ‘ಕೆರೆಯ ನೀರನ್ನು ಕೆರೆಗೆ ಚೆಲ್ಲಿ’ – ಎಂದಂತೆ.ಇಂಥ ಬದುಕಿನಲ್ಲಿ ಒಂದು ಬಗೆಯ ಸಮತೋಲನವಿರುತ್ತದೆ. ಪರೋಕ್ಷವನ್ನು ಕೆಡಿಸದ ಪ್ರತ್ಯಕ್ಷದ ದರ್ಪವಿಲ್ಲದ ನಡೆ, ಪ್ರತ್ಯಕ್ಷವನ್ನು ತನ್ನೊಳಗಿಂದಲೇ ಕಾಪಿಡುವ ಪರೋಕ್ಷದ ಪ್ರೀತಿಯ ಕಾವು – ಇವುಗಳ ಹೃದ್ಯವಾದ ಸಮತೋಲನವಿರುತ್ತದೆ.

ಈ ಸಮತೋಲನದ ಸ್ಥಿತಿಯನ್ನು ಅಗ್ನಿಯ ದೃಷ್ಟಾಂತದ ಮೂಲಕವೇ ಅರ್ಥ ಮಾಡಿಕೊಳ್ಳುವುದು ಉಚಿತವೆಂದೇ – ‘ಮರದೊಳಗಣ ಮಂದಾಗ್ನಿ’ ಎಂದು ಕರೆದರು. ಈ ಮಾತು ಅಲ್ಲಮನದು. ಇದೇ ಮಾತು ‘ಭಾಗವತ’ದಲ್ಲಿ ಇದೆ. ‘ದಾರುಷು ಅಗ್ನಿಮಿವಸ್ಥಿತಂ’. ‘ಮರದೊಳಡಗಿದ ಬೆಂಕಿಯಂತೆ’.

ಒಳಗಡೆ ಇರುವಾಗ ಅದು ಜೀವಪೋಷಕವಾದ ಅಗ್ನಿ, ಪ್ರಾಣಾಗ್ನಿ, ಯಜ್ಞಾಗ್ನಿ. ಆದುದರಿಂದ ‘ಮಂದಾಗ್ನಿ’. ‘ಮಂದಾಗ್ನಿ’ ಎಂದು ಏಕೆ ಹೇಳುತ್ತಾರೆಂದರೆ – ಒಂದೊಮ್ಮೆ ಒಳಗಿದ್ದುದು ಹೊರಬಂದರೆ ಅದು ಉಗ್ರವಾಗಬಹುದು, ಪ್ರಳಯಾಗ್ನಿಯೇ ಆಗಬಹುದು ಎಂಬ ಸೂಚನೆಗಾಗಿ! ಅಲ್ಲದೆ ಒಳಗಿದ್ದು ಯಾವುದರ ಜೀವಂತಿಕೆಗೆ ಕಾರಣವಾಗಿತ್ತೋ ಆ ಮರವನ್ನೇ ಸುಡುತ್ತಲೇ ಅದು ಪ್ರಕಟಗೊಳ್ಳುತ್ತೆ, ಅದು ಹಾಗೆಯೇ ಪ್ರಕಟವಾಗಬೇಕಷ್ಟೆ; ತಾನು ಇದುವರೆಗೆ ಪೋಷಿಸಿದ್ದೇ ತನ್ನ ಇಂಧನವೂ ಆಗಬಲ್ಲುದು ಎಂದು ತೋರಿಸದೆ ಅದಕ್ಕೆ ಬೇರೆ ದಾರಿ ಇಲ್ಲ ಎಂಬುದರ ಸೂಚನೆಗಾಗಿ! ಇದೇ, ಸಮತೋಲನವು ಕಳೆದುಹೋದ ಸ್ಥಿತಿ. ಇದೇ ನಿಜವಾದ ಅರ್ಥದಲ್ಲಿ ‘ಯಜ್ಞ–ಭಂಗ!’

ಸಮತೋಲನವು ಏಕೆ ಕೆಡುತ್ತದೆಂದರೆ – ಪ್ರತ್ಯಕ್ಷವು ಪರೋಕ್ಷವನ್ನು ತನಗೆ ಬೇಕಾದಂತೆ ಬಳಸಿಕೊಳ್ಳಬಹುದು ಎಂದು ಭಾವಿಸುವುದರಿಂದ. ಅರ್ಥಾತ್‌, ಪ್ರಕೃತಿ ಇರುವುದೇ ತನ್ನ ಬಳಕೆಗಾಗಿ ಎಂದು ಮನುಷ್ಯರು ಭಾವಿಸುವುದರಿಂದ. ಯಾವ ರೀತಿಗಳಲ್ಲೆಲ್ಲ ಬಳಸಿಕೊಳ್ಳಬಹುದು ಎಂದು ತಮ್ಮ ಆಸೆ–ಆಕಾಂಕ್ಷೆಗಳನ್ನು ಮನುಷ್ಯರು ವಿಸ್ತರಿಸಿಕೊಳ್ಳುವುದರಿಂದ; ಆಸೆಗಳ ಈಡೇರಿಕೆಗಾಗಿ ನಿರಂತರ ಕಲ್ಪನಾಶೀಲರಾಗಿರುವುದರಿಂದ; ಸಮತೋಲನದ ಮಹತ್ತ್ವವನ್ನೇ ಅರಿಯಲಾರದಷ್ಟು ರಾಗ–ದ್ವೇಷಗಳಿಗೆ ವಶರಾಗುವುದರಿಂದ. ಇಂಥ ಪರೋಕ್ಷವನ್ನು ಗಮನಿಸದ ಬದುಕನ್ನು ಮತ್ತೆ ಕೃಷ್ಣ ಗೀತೆಯಲ್ಲಿ ಕಟುವಾಗಿ ಹಳಿದಿದ್ದಾನೆ.

‘ಕಾಮಾತ್ಮಾನಃ ಸ್ವರ್ಗಪರಾಃ ಜನ್ಮ ಕರ್ಮಫಲಪ್ರದಾಂ ಕ್ರಿಯಾವಿಶೇಷ ಬಹುಲಾಂ ಭೋಗೈಶ್ವರ್ಯ ಗತಿಂ ಪ್ರತಿ’ – ಆಸೆ ತುಂಬಿದ ಮನಸುಗಳ ಈ ಮಂದಿ – ಸ್ವರ್ಗಾಭಿಲಾಷಿಗಳು – ಬಗೆ ಬಗೆಯ ಜಟಿಲ ಕ್ರಿಯಾಕಲಾಪಗಳೇ ಮೆಚ್ಚಾಗಿ ಅದರಲ್ಲಿ ತೊಡಗಿದವರು – ಭೋಗೈಕ ಪರಾಯಣರು – ಎಂದು ಜರೆದಿದ್ದಾನೆ. ಇಂಥ ಮಂದಿಯ ಮಾತು – ಇವರು ವೇದವಾಕ್ಯಗಳನ್ನೇ ಉಲ್ಲೇಖಿಸಿದರೂ – ಕೇಳದಿರು, ಬೇರೆಯೇ ಹಾದಿಯನ್ನು ಹಿಡಿ ಎಂದು ಅರ್ಜುನನಿಗೆ ಎಚ್ಚರಿಸಿದ್ದಾನೆ.

ಸಮತೋಲನವು ಕೆಟ್ಟುಹೋದ ಇಂಥ ಸಂದರ್ಭಗಳಲ್ಲಿ ಕರ್ಮಕಾಂಡದ ಅಗ್ನಿಯೇ ಮಲಿನವಾಗುತ್ತೆ, ನೀರು ಮಲಿನವಾದಂತೆ. ಗಾಳಿ ಮಲಿನವಾದಂತೆ. ಎಲ್ಲವನ್ನೂ ಶುದ್ಧ ಮಾಡುವ ಅಗ್ನಿಯೇ – ಅಗ್ನಿ ಶುದ್ಧಿ ಎನ್ನುವ ಮಾತೇ ಇದೆ – ಮಲಿನವಾಗುತ್ತೆ. ‘ಪೃಥಿವೀ ಗತಯೌವನ’ – ಭೂಮಿಯೇ ತನ್ನ ಸೃಷ್ಟಿಶಕ್ತಿಯನ್ನು ಕಳೆದುಕೊಂಡಂತೆ ಎಂದು ಇನ್ನೊಂದು ಸಂದರ್ಭದಲ್ಲಿ ವ್ಯಾಸರೇ ಹೇಳಿದ್ದುಂಟು.

ಮಹಾಭಾರತದ ಆಂತರಿಕ ಸಂದರ್ಭವನ್ನು ಇದಕ್ಕಿಂತ ಮಾರ್ಮಿಕವಾಗಿ ಹೇಳುವುದು ಅಸಾಧ್ಯ. ಇಂಥದೊಂದು ಸಂದರ್ಭ – ಪಾಂಚಾಲ ರಾಜನಾದ ದ್ರುಪದ, ದ್ರೋಣಾಚಾರ್ಯನ ವಧೆಗಾಗಿ ಏರ್ಪಡಿಸಿದ ಯಜ್ಞಕಲಾಪದಲ್ಲಿ ಉಂಟಾಗಿತ್ತು. ಪ್ರಾಯಃ ದ್ರುಪದ–ದ್ರೋಣರ ಪರಸ್ಪರ ದ್ವೇಷವೇ ಮಹಾಭಾರತದ ಮಹಾಯುದ್ಧಕ್ಕೆ ಕಾರಣವಾದ ಮೂಲಬೀಜಗಳಲ್ಲಿ ಒಂದಾಗಿತ್ತು. ಈ ಬ್ರಾಹ್ಮಣ–ಕ್ಷತ್ರಿಯರೀರ್ವರೂ ದ್ರೋಣನ ತಂದೆಯಾದ ಭರದ್ವಾಜನ ಗುರುಕುಲದಲ್ಲಿಯೇ ಸಹಪಾಠಿಗಳಾಗಿದ್ದರು.

ದ್ರೋಣನು ಇಷ್ಟರಲ್ಲಿಯೇ ತೃಪ್ತನಾಗದೆ ಪರಶುರಾಮನಲ್ಲಿ ಮತ್ತೆ ಅಭ್ಯಸಿಸಿ ಕ್ಷತ್ರಿಯವಿದ್ಯೆಯಲ್ಲಿ ಪಾರಂಗತನಾಗಿದ್ದ. ಬದುಕಿನಲ್ಲಿ ನೆಲೆಯೂರಲೆಂದು, ಇಷ್ಟರಲ್ಲಿ ಪಾಂಚಾಲದ ರಾಜನೇ ಆಗಿದ್ದ ದ್ರುಪದನಲ್ಲಿ ತೆರಳಿ ಸಹಾಯವನ್ನು ಯಾಚಿಸಿದರೆ, ದ್ರೋಣನೆಂಬ ಈ ಬಾಲ್ಯಸ್ನೇಹಿತನನ್ನು ದ್ರುಪದ ನಿರ್ದಾಕ್ಷಿಣ್ಯದಿಂದ ತಿರಸ್ಕರಿಸಿದ್ದ. ‘ಸಖಪೂರ್ವಂ ಕಿಮಿಷ್ಯತೇ’ – ಬಾಲ್ಯಕಾಲದ ಗೆಳೆತನದ ಮಾತು ಈಗೇಕೆ? ರಾಜರಿಗೆ ಪಾಮರರಲ್ಲಿ ಸ್ನೇಹವೆ? ಎಂದು ಉದ್ಧಟನಾಗಿ ನುಡಿದಿದ್ದ. ದ್ರೋಣನಲ್ಲಿ ಈ ಕಹಿ ಉಳಿದುಬಿಟ್ಟಿತು.

ಕ್ಷತ್ರಿಯಶಿಷ್ಯರನ್ನು ತಾನು ರೂಪಿಸಿ ಅವರ ಮೂಲಕವೇ ಈ ಮದಾಂಧ ಕ್ಷತ್ರಿಯನನ್ನು ಸೋಲಿಸಬೇಕೆಂಬ ಹುರುಡು ಹುಟ್ಟಿತು. ತಾನೂ ‘ರಾಜ’ನಾಗಬೇಕೆಂಬ ಆಸೆಯೂ ಮೊಳೆತುಬಿಟ್ಟಿತೇನೋ! ಹಾಗೆ, ಪಾಂಚಾಲರ ಪಾರಂಪರಿಕ ಹಗೆಗಳಾಗಿರುವ ‘ಕುರು’ಗಳನ್ನು ದ್ರೋಣನು ಆಶ್ರಯಿಸಿದ. ಹಸ್ತಿನೆಗೆ ಬಂದು ಭೀಷ್ಮನನ್ನು ನೆಚ್ಚಿದ. ಕ್ಷತ್ರಿಯ ಮಕ್ಕಳಿಗೇ  ಕ್ಷಾತ್ರವಿದ್ಯೆಯ ಪರಮ ಸೂಕ್ಷ್ಮಗಳನ್ನು ಕಲಿಸಿದ ದೊಡ್ಡ ಗುರುವಾದ. ತನ್ನ ಶಿಷ್ಯರಿಂದಲೇ – ಮುಖ್ಯವಾಗಿ ಅರ್ಜುನನಿಂದ – ದ್ರುಪದನನ್ನು ಸೋಲಿಸಿ ಕೆಡವಿದ.

ಅರ್ಧರಾಜ್ಯವನ್ನು ತನ್ನದಾಗಿಸಿಕೊಂಡು, ಗಂಗೆಯ ದಕ್ಷಿಣ ದಿಶೆಯ ಅರ್ಧವನ್ನು ದ್ರುಪದನಿಗೇ ಬಿಟ್ಟುಕೊಟ್ಟು, ತಾನೂ ರಾಜನೇ ಆಗಿ ದ್ರುಪದಸಮಾನನೇ ಆದ ಮೇಲೆ, ‘ಈಗ ಸಮಾನರಾದೆವು; ಹಿಂದಿನ ಸ್ನೇಹವನ್ನು ಮುಂದುವರಿಸೋಣವೇ’ ಎಂದು ಆಳವಾಗಿ ಕುಟುಕಿದ.

ಈಗಲೂ ಬ್ರಾಹ್ಮಣರಲ್ಲಿ ಹಳೆಯ ಸಾಂಪ್ರದಾಯಿಕರು ಮಹಾಭಾರತ ಯುದ್ಧೋತ್ತರ ಕಾಲದಲ್ಲಿ ತಾವು ‘ಅಹಿಚ್ಛತ್ರ’ದಿಂದ ಹೊರಟು ಈ ಕಡೆಗೆ ದಕ್ಷಿಣಕ್ಕೆ ಬಂದವರಿರಬೇಕು ಎಂದು ಊಹಿಸುವವರಿದ್ದಾರೆ. ‘ಅಹಿಚ್ಛತ್ರ’ವೆಂದರೆ ದ್ರೋಣನು ತನ್ನದಾಗಿಸಿಕೊಂಡ ಪಾಂಚಾಲದ ಭಾಗ. ಪ್ರಾಯಃ ದ್ರೋಣನೇ ಮೊದಲ ಬ್ರಾಹ್ಮಣರಾಜನಿರಬೇಕು – ಇತಿಹಾಸದಲ್ಲಿ. ಅಥವಾ ತಾವೂ ಕ್ಷತ್ರಿಯರಂತೆ ಆಳಬಲ್ಲೆವು ಎಂಬ ಕನಸನ್ನು ಬ್ರಾಹ್ಮಣರಲ್ಲಿ – ಆ ಉದ್ದೇಶವಿಲ್ಲದೆ – ಬಿತ್ತಿದವನು ದ್ರೋಣನಿರಬೇಕು. ಆ ಮಾತು ಬೇರೆ.

ದ್ರುಪದ ಸ್ನೇಹವನ್ನು ಮರೆತರೂ ದ್ರೋಣನನ್ನು ಮರೆಯಲಿಲ್ಲ. ಕ್ಷತ್ರಿಯ ಗುಣವಾದ ಯುದ್ಧದ ಮೂಲಕವೇ ತನ್ನನ್ನು ಕಟ್ಟಿ ಕೆಡವಿದ ಬ್ರಾಹ್ಮಣನನ್ನು, ಬ್ರಾಹ್ಮಣಗುಣವಾದ ಯಜ್ಞದ ಮೂಲಕವೇ ಸಾಯಿಸುವ ಪ್ರತಿತಂತ್ರವನ್ನು ದ್ರುಪದ ಕೈಗೊಂಡ. ದ್ರುಪದನ ಹೆಸರೇ ‘ಯಜ್ಞಸೇನ’ ಎಂದು.

‘ಯಜ್ಞ’ವು ಮನುಷ್ಯರ ಇಷ್ಟಕಾಮಗಳನ್ನು ಪೂರೈಸಬಲ್ಲ ಅಲೌಕಿಕ ಸಾಧನವೂ ಆಗಿರುವುದರಿಂದ, ದ್ರೋಣನನ್ನು ಕೊಲ್ಲಬಲ್ಲ ಮಗನನ್ನು ಪಡೆಯುವಂಥ ಯಜ್ಞಕ್ಕಾಗಿ, ದ್ರೋಣನಿಗಾಗಿ ತನ್ನನ್ನು ಸೋಲಿಸಿದ ಅರ್ಜುನನನ್ನೇ ದ್ರೋಣನಿಂದ ತಪ್ಪಿಸಿ ತನ್ನವನನ್ನಾಗಿ ಮಾಡಿಕೊಳ್ಳಲು ಅರ್ಜುನನನ್ನೇ ಪತಿಯನ್ನಾಗಿ ಪಡೆಯಲಿರುವ ಮಗಳನ್ನು ಪಡೆಯುವಂಥ ಯಜ್ಞಕ್ಕಾಗಿ, ಯಾಜ–ಉಪಯಾಜರೆಂಬ ಬ್ರಾಹ್ಮಣ ಸೋದರರನ್ನೇ ಆಶ್ರಯಿಸಿದನಂತೆ. ಯಾಜ–ಉಪಯಾಜಿರೆಂಬ ಹೆಸರುಗಳೇ ಇವರ ಯಾಜ್ಞಿಕ ಮನೋಧರ್ಮವನ್ನು ಹೇಳುತ್ತವೆ. ಹಾಗೆ, ನಡೆದ ಯಜ್ಞದಲ್ಲಿ ಯಜ್ಞಕುಂಡದಿಂದಲೇ ಧೃಷ್ಟದ್ಯುಮ್ನನೆಂಬ ಮಗನನ್ನೂ, ಕೃಷ್ಣೆ ಎಂಬ ಮಗಳನ್ನೂ – ಇವಳೇ ದ್ರೌಪದೀ – ಪಡೆದನಂತೆ. ಅದಿರಲಿ.

ದ್ರೋಣನನ್ನು ಕೊಲ್ಲುವುದಕ್ಕಾಗಿ ಯಜ್ಞ! ಧೃಷ್ಟದ್ಯುಮ್ನನ ಬದುಕಿನ ಉದ್ದೇಶವೇ ದ್ರೋಣನ ಹತ್ಯೆ! ಯಜ್ಞಸಂಸ್ಕೃತಿ ಎಲ್ಲಿಗೆ ಬಂತು! ಪರೋಕ್ಷಶಕ್ತಿಗಳಿಂದ ನಾವು ಬಯಸುವುದೇನನ್ನು? ಯುದ್ಧಕ್ಕೂ ಯಜ್ಞಕ್ಕೂ ಏನು ಅಂತರ ಉಳಿಯಿತು? ಇದು ಅಗ್ನಿಯೇ ಮಲಿನಗೊಳ್ಳುವ ಸಂದರ್ಭ! ಅರಗಿನ ಮನೆಯ ಸಂದರ್ಭವನ್ನು ನೋಡಿ. ಮನೆ ಸುಡುವುದುಂಟು. ಸುಡುವುದಕ್ಕಾಗಿಯೇ ಮನೆ ಕಟ್ಟುವುದುಂಟೆ? ಅರಗಿನ ಮನೆಯ ಉರಿಯಿಂದ – ಖಾಂಡವದಹನದ ಕಾಡ್ಗಿಚ್ಚಿಗೆ – ಸಂದರ್ಭಗಳು ಬೇರೆಯಾದರೂ, ಹೆಚ್ಚು ದೂರವಿಲ್ಲ.

ಈ ಕಾಡ್ಗಿಚ್ಚು, ಮಹಾಭಾರತದಲ್ಲಿ ಮತ್ತೊಮ್ಮೆ ಕೊನೆಗೆ ಕಾಣಿಸಿಕೊಂಡಿದೆ, ಆಶ್ರಮವಾಸಿಕ ಪರ್ವದಲ್ಲಿ. ಧೃತರಾಷ್ಟ್ರ, ಗಾಂಧಾರಿ ಮತ್ತು ಕುಂತಿ ವಿರಕ್ತರಾಗಿ ಕಾಡಿಗೆ ತೆರಳುವರು. ಮಕ್ಕಳನ್ನು ಒಪ್ಪಿಸಿಯೇ ತಾವು ವಾನಪ್ರಸ್ಥರಾಗುವರು. ಕಾಡಿನಲ್ಲಿ ಕಾಡ್ಗಿಚ್ಚಿಗೆ ಸಿಕ್ಕಿಯೇ ಸಜೀವ ದಹನಗೊಳ್ಳುವರು! ವಿರಕ್ತರಾದುದರಿಂದ ಸಾವಿಗೆ ಸಿದ್ಧರೇ ಆಗಿದ್ದುದರಿಂದ ಸಾವನ್ನು ಬಯಸುತ್ತಲೇ ಇದ್ದುದರಿಂದ ಇದು ದುಃಖದಾಯಕವಲ್ಲದಿದ್ದರೂ ದಿಗ್ಬ್ರಮೆಯುಂಟುಮಾಡುವಂಥದೇ ಹೌದು.

ಅಗ್ನಿಯ ಹಬ್ಬುಗೆ ಎಲ್ಲಿಂದ ಎಲ್ಲಿಯವರೆಗೆ! ದ್ರುಪದನ ಯಜ್ಞದಿಂದ ತೊಡಗಿ ಜನಮೇಜಯನ ಸರ್ಪಯಾಗದವರೆಗೆ! ಅರಗಿನ ಮನೆಯ ಉರಿಯಿಂದ ತೊಡಗಿ ಖಾಂಡವದ ಕಾಡ್ಗಿಚ್ಚಿನವರೆಗೆ – ಮತ್ತೂ ಆಚೆಗೆ! ಅರಗಿನ ಮನೆಯ ಬೆಂಕಿಯಿಂದ ಪಾರಾದ ಕುಂತಿ ಕೊನೆಗೂ ಕಾಡ್ಗಿಚ್ಚಿಗೇ ತುತ್ತಾದಳು. ಆಗ, ಕುಂತಿಯ ಬದುಕು ಪಕ್ವವಾಗಿತ್ತೇನೋ ನಿಜ.

ಪಕ್ವವಾಗುವುದೆಂದರೇ ಬೇಯುವುದೇ ಅಲ್ಲವೆ! ಬೆಂದೇ ಪಕ್ವವಾಗಬೇಕಲ್ಲವೆ! ಬದುಕಿನ ಈ ಕಾವಿನಿಂದ ಯಾರೂ ತಪ್ಪಿಸಿಕೊಳ್ಳುವಂತಿಲ್ಲವೇನೋ; ತಪ್ಪಿಸಿಕೊಳ್ಳಬಾರದೇನೋ. ಏನು! ಕೃಷ್ಣ ದ್ವೈಪಾಯನ ವ್ಯಾಸರು ಪಂಚಾಗ್ನಿಗಳ ನಡುವೆ ಕುಳಿತು ಧ್ಯಾನಸ್ಥರಾಗಿ ಯಾರನ್ನೂ ತಲ್ಲಣಗೊಳಿಸುವ ಈ ಮಹಾಕೃತಿಯನ್ನು ಬರೆದರೇ ಎಂದು ತಳಮಳಿಸಿದರೆ – ಇಲ್ಲಿ ಈ ಮಹಾಕೃತಿಯಲ್ಲಿ ಇನ್ನೊಂದೆಡೆಯಲ್ಲಿ ಈ ಎಲ್ಲ ಕನಲುವ ಕೆಂಡದ ರಾಶಿಯ ನಡುವೆ, ಇನ್ನೊಂದೇ ರೀತಿಯಲ್ಲಿ ಮುಗ್ಧತೆಯ ಮಹಾಶಕ್ತಿಯೆ ಅನಾವರಣವಾಗಿರುವುದು ಮನಮುಟ್ಟುತ್ತದೆ.

ಮುಗ್ಧತೆಯ ಶಕ್ತಿ ಕಾಣಿಸುವುದು ಅರ್ಭಕರಲ್ಲಿ, ಅಂದರೆ ಮಕ್ಕಳಲ್ಲಿ, ಎಳೆಯರಲ್ಲಿ. ಆಸ್ತೀಕ ಅಂಥ ಅರ್ಭಕ. ಇನ್ನೂ ಎಳೆಯ, ಮುಗ್ಧ. ಈ ಸರ್ಪಯಾಗ, ಈ ಜನಾಂಗಕ್ಕೆ, ಈ ಜೀವದ್ರೋಹ – ಇದು ಸರಿಯಲ್ಲ ಎಂದು ಆಸ್ತೀಕನಿಗೆ ಹೊಳೆದಿದೆ. ತನ್ನೊಳಗೆ ಬಲವಾಗಿ ಅನ್ನಿಸುತ್ತಿರುವುದನ್ನು ಅವನು ಕಾರ್ಯಗತಗೊಳಿಸಲೇಬೇಕು. ಏಕೆಂದರೆ ಇದು ತನ್ನ ಜೀವನ್ಮರಣಪ್ರಶ್ನೆ. ಇನ್ನೊಂದು ರೀತಿಯಲ್ಲಿ ತಾನು ಈ ಉದ್ದೇಶಕ್ಕಾಗಿಯೇ ಹುಟ್ಟಿಕೊಂಡವನಂತೆ ಆಸ್ತೀಕನಿಗೆ ತೀವ್ರವಾಗಿ ಅನ್ನಿಸುತ್ತದೆ! ಇದೇ ಮುಗ್ಧತೆಯ ಬಲ!

ದ್ರೋಣವಧೆಗಾಗಿಯೇ ಹುಟ್ಟಿಕೊಂಡವನೊಬ್ಬನಿದ್ದರೆ ಇಲ್ಲಿ ಸರ್ಪಯಾಗವನ್ನು ತಡೆಯಲೆಂದೇ ಹುಟ್ಟಿಕೊಂಡವನೊಬ್ಬನಿರುವನು – ಆಸ್ತೀಕ. ಎಂಥ ವೈದೃಶ್ಯ! ಆಸ್ತೀಕ, ಯಾಗಶಾಲೆಯ ಬಳಿ ತೆರಳಿದನು. ಜನಮೇಜಯನ ಬಳಿ ಹೋಗಬೇಕೆಂದರೆ ಭಟರು ಒಳ ಬಿಡುತ್ತಿಲ್ಲ. ಆಗಲಿ; ಆಸ್ತೀಕ ಅಲ್ಲೇ ನಿಂತು, ಈ ಯಾಗವನ್ನೂ ರಾಜನನ್ನೂ ಯಾಜ್ಞಿಕರನ್ನೂ ಅಗ್ನಿಯನ್ನೂ ಉದಾರವಾಗಿ ಸ್ತುತಿಸಿದನು. ಆದರೆ ಹಾಗೆ ಸ್ತುತಿಸುವಲ್ಲಿ, ‘ಪಾರಿಕ್ಷಿತ ಸ್ವಸ್ತಿ ನೋಸ್ತು ಪ್ರಿಯೇಭ್ಯಃ’ – ನಮಗೆ ಪ್ರಿಯರಾದವರೆಲ್ಲರಿಗೂ ಅಂದರೆ ತನಗೆ ಪ್ರಿಯರಾದ ಸರ್ಪಗಳಿಗೂ ಕೂಡ ಮಂಗಳವಾಗಲಿ – ಓ ಜನಮೇಜಯ – ಎಂದು ಸಾರಿ ಸಾರಿ ಹೇಳಲು ಮರೆಯುವುದಿಲ್ಲ. ಜನಮೇಜಯನಿಗೆ ಆಸ್ತೀಕನ ಮಾತು ಮನಮುಟ್ಟಿತು.

ಮಾತಿನ ಶಕ್ತಿ ಇದು. ವಾಸ್ತವವನ್ನು ಭಾವಸ್ತರಕ್ಕೆ ಒಯ್ಯುವುದು, ಒಯ್ದು, ವಾಸ್ತವದಲ್ಲಿ ಕಾಣದ, ಕಾಣಲಾಗದೇ ಇದ್ದ ಸೂಕ್ಷ್ಮಗಳನ್ನು ಕಾಣಿಸುವುದು. ಕಾಣಿಸಿ, ನಮ್ಮನ್ನೆ ಹೊಸದಾಗಿಸುವುದು! ಹೊಸ ಮನಸ್ಸಿಗೆ ಹಳೆ ಮನಸ್ಸು ರುಚಿಸದಂತೆ ಮಾಡುವುದು. ಆಗ ಬದುಕಿಗೇ ಹೊಸ ತಿರುವು ಉಂಟಾಗುವುದು.

ಜನಮೇಜಯನಿಗೆ ಹಾಗೆಯೇ ಆಯಿತು. ಅವನು ಎಳೆಯನಿಗೆ ಮನಸೋತ. ನಿನಗೆ ಬೇಕಾದ್ದು ನೀಡುವೆನೆಂದ. ದೊರೆ, ವರಪ್ರದಾನದ ಹುಮ್ಮಸ್ಸಿನಲ್ಲಿದ್ದ. ಆಸ್ತೀಕ ಕೈಮುಗಿದು ಇಷ್ಟೇ ಕೇಳಿದ: ‘ಈ ಯಜ್ಞಕಲಾಪ ಇಲ್ಲಿಗೇ ಮುಕ್ತಾಯವಾಗಲಿ. ಈ ಕ್ಷಣದಿಂದ, ಒಂದೇ ಒಂದು ಹಾವಾದರೂ ಬೆಂಕಿಗೆ ಬಿದ್ದು ಚಡಪಡಿಸದಿರಲಿ. ಇದನ್ನು ಬಿಟ್ಟು ನನಗೆ ಇನ್ನೇನೂ ಬೇಕಿಲ್ಲ’.

ದೊರೆ ಈಗ ವಾಸ್ತವಕ್ಕೆ ಮರಳಿದ. ಮಾತು ಕೊಟ್ಟಾಗಿತ್ತು. ಇನ್ನು ಹಿಂದೆ ಬರುವಂತಿರಲಿಲ್ಲ. ಆಸ್ತೀಕನನ್ನು ಅವನ ಮಾತಿನಿಂದ ವಿಮುಖಗೊಳಿಸುವುದು ಅಸಾಧ್ಯಪ್ರಾಯವಾದ ಸಂಗತಿಯಾಗಿತ್ತು. ಅಲ್ಲದೆ ತಾನು ಯಾರನ್ನು ತೀವ್ರವಾಗಿ ದ್ವೇಷಿಸುತ್ತಿದ್ದೆನೋ ಆ ತಕ್ಷಕ ಸರ್ಪ ಇನ್ನೂ ಯಾಗದ ಬೆಂಕಿಗೆ ಬಿದ್ದಿರಲಿಲ್ಲ. ಇಷ್ಟರಲ್ಲಿ ಯಾಗ ಸಮಾಪ್ತಿಯಾದರೆ – ತಕ್ಷಕ ಉಳಿದುಕೊಳ್ಳುತ್ತಾನೆ. ಅಂದರೆ ಒಂದು ರೀತಿಯಲ್ಲಿ ಸರ್ಪಯಾಗವೇ ವ್ಯರ್ಥವಾದಂತೆ.

ದ್ವೇಷವೇ ವ್ಯರ್ಥ ಎಂದು ಈ ಎಳೆಯ ಸೂಚಿಸುತ್ತಿದ್ದಾನೇನು! ಇಷ್ಟು ಸರ್ಪಗಳನ್ನು ಆಹುತಿ ತೆಗೆದುಕೊಂಡೂ ಇನ್ನೂ ನಿನ್ನ ದ್ವೇಷ ತಣಿಯಲಿಲ್ಲವೆ ಎಂದು ಹುಡುಗ ಕೇಳುತ್ತಿರುವಂತಿದೆಯಲ್ಲ! ದೊರೆಗೆ ತನ್ನ ಮುಂದೆ, ಕಣ್ಣಿನಲ್ಲಿ ಕರುಣೆಯನ್ನು ತುಳುಕಿಸುತ್ತ ಕೈ ಮುಗಿದು ನಿಂತಿದ್ದ ಈ ಎಳೆಯನನ್ನು ಕಂಡು – ಮೊದಲ ಬಾರಿಗೆ ‘ಜಯ’ ಎಂದರೇನೆಂದು ಅರ್ಥವಾಗತೊಡಗಿತು. ಅವನೊಳಗೆ ಭಾವ ಅಲೆಗಳು ಏಳತೊಡಗಿದವು.

ಈ ಎಳೆಯನಿಗೆ ಹೊಳೆದದ್ದು – ಇಷ್ಟು ದೊಡ್ಡ ಪಂಡಿತಮಂಡಳಿಯಲ್ಲಿ ಯಾರಿಗೂ ಹೊಳೆಯಲಿಲ್ಲವೆ? ಏಕೆ ಹೊಳೆಯಲಿಲ್ಲ? ಅಥವಾ ಹೊಳೆದರೂ ಹೇಳಲಿಲ್ಲವೋ? ತಾನಂತೂ ದ್ವೇಷದಲ್ಲಿ ಹುಚ್ಚಾಗಿದ್ದೆ. ಅಂದರೆ ರಾಜನ ದ್ವೇಷಕ್ಕೆ ತುತ್ತಾದವರನ್ನು ಎಲ್ಲರೂ ತಮಗೆ ತಿಳಿಯದೆಯೇ ದ್ವೇಷಿಸುವರೇ? ದ್ವೇಷದ ಬೆಂಕಿ ಕಾಡ್ಗಿಚ್ಚಿನಂತೆ ಹಬ್ಬುವುದೇನು?
ಜನಮೇಜಯ ತನ್ನ ಮಾತನ್ನು  ಹಿಂದೆಗೆದುಕೊಳ್ಳುವಂತಿರಲಿಲ್ಲ.

ಯಜ್ಞದ ನಿಯಮಗಳನ್ನು ಒಪ್ಪಿಯೇ ಅದನ್ನೇನೂ ಭಂಗಿಸದೆ ಅಂದರೆ ಒಳಗಿನವನಾಗಿಯೇ ಆಸ್ತೀಕ ಗೆದ್ದುಬಿಟ್ಟಿದ್ದ. ಅವನ ಮುಗ್ಧತೆಯಿಂದಲೇ ಯಜ್ಞಭಂಗವಾಯಿತು! ಒಂದು ಜನಾಂಗವನ್ನು ಸರ್ವನಾಶದಿಂದ ಉಳಿಸಿದ ಶ್ರೇಯಸ್ಸು ಆಸ್ತೀಕನದಾಯಿತು. ಇಷ್ಟಾದ ಮೇಲೆ ನಾಗಶ್ರೇಷ್ಠರೆಲ್ಲ ಆಸ್ತೀಕನನ್ನು ಮುದ್ದಾಡಿ, ಬೇಕಾದ ವರವನ್ನು ಕೇಳು ಎಂದರಂತೆ. ಅಷ್ಟರಲ್ಲಾಗಲೇ ಹುಡುಗನಿಗೆ, ಸ್ತುತಿಯ ಮಹತ್ತ್ವ, ಅಂದರೆ ಮಾತಿನ ಮಹತ್ತ್ವ – ಕಥನದ ಮಹತ್ತ್ವ ಅರಿವಿಗೆ ಬಂದಿತ್ತು. ಆಸ್ತೀಕ, ನಾಗಗಳಿಗೆ ಹೇಳಿದನಂತೆ.

‘ಸರ್ಪಯಾಗದ ಕಥನವನ್ನು ಕೇಳಿದವರಿಗೆ ನಿಮ್ಮಿಂದ ಯಾವ ಭಯವೂ ಇರಕೂಡದು. ಈ ಮಾತನ್ನು ನೆರವೇರಿಸಿ’. ನಾಗಗಳು ಹೆಡೆ ತೂಗಿದುವಂತೆ. ಕಥನವನ್ನು ತಿಳಿದವರೆಲ್ಲರೂ ಕಥನದ ಭಾಗವಾಗುವರಲ್ಲವೆ! ಇನ್ನೂ ಒಂದು ಮಾತು ಹೇಳುವರು: ಹಾವು ಎಲ್ಲೋ ಎದುರಾದಾಗ ‘ಆಸ್ತೀಕ’ ಎನ್ನಬೇಕಂತೆ. ಅದನ್ನು ಕೇಳಿದ ಹಾವು, ಇವನು ನಮ್ಮವನೇ ಎಂದುಕೊಂಡು ತನ್ನ ಪಾಡಿಗೆ ತಾನು ಸರಿದು ಹೋಗುವುದಂತೆ. ಆಸ್ತೀಕನ ಮುಗ್ಧತೆಯು ಆ ಪದವನ್ನು ಉಚ್ಚರಿಸಿದವರಲ್ಲೂ ಸಂಕ್ರಮಿಸುವುದು.ಪದವನ್ನು ಕೇಳಿದವರಲ್ಲಿಯೂ ಸಂಕ್ರಮಿಸುವುದು. ಇದೂ ಕಥನದ ಪರಿಣಾಮವೇ.

ಈ ಮಹಾನ್‌ ಇತಿಹಾಸದ ರಚಯಿತರಾದ ವ್ಯಾಸರ ಮನ ನೆಟ್ಟಿರುವುದು ಬಾಲ್ಯದ, ಎಳೆತನದ, ಮುಗ್ಧತೆಯ ಮಹತ್ತ್ವವನ್ನು ತಿಳಿಯಪಡಿಸಬೇಕೆಂಬುದರಲ್ಲಿ. ಸ್ವಯಂ ವ್ಯಾಸರಿಗೇ ಬಾಲ್ಯವಿರಲಿಲ್ಲ. ತಾಯಿವಾತ್ಸಲ್ಯದ ಒಡನಾಟವಿರಲಿಲ್ಲ. ಇದು ವ್ಯಾಸರನ್ನು ಆಳದಲ್ಲಿ ಕಾಡುತ್ತಿದ್ದಿರಬೇಕು. ಅವರು ಮಹಾಭಾರತದಲ್ಲಿ ‘ಅಣಿ ಮಾಂಡವ್ಯ’ನ ಕಥೆ ಹೇಳುತ್ತಾರೆ. ಮಾಂಡವ್ಯನೊಬ್ಬ ತಪಸ್ವಿ. ಅದು ಹೇಗೋ ತಸ್ಕರರ ಗುಂಪಿನೊಂದಿಗೆ ಗುರುತಿಸಲ್ಪಟ್ಟು, ಕಳ್ಳರ ಜತೆ ಮಾಂಡವ್ಯನೂ ಶೂಲಕ್ಕೇರಿಸಲ್ಪಟ್ಟಿದ್ದ.

ಈತ ಯೋಗಿಯಾದುದರಿಂದ, ಯಮಧರ್ಮನಲ್ಲಿಗೆ ತೆರಳುತ್ತಾನೆ. ತಾನು ಮಾಡಿದ ಯಾವ ತಪ್ಪಿಗೆ, ಶೂಲಕ್ಕೆ ಗುರಿಯಾಗಬೇಕಾದ ಶಿಕ್ಷೆ ತನಗೆ ವಿಧಿಸಲಾಯಿತು ಎಂದು ತಿಳಿಯಬಯಸುತ್ತಾನೆ. ನೀನು ನಾಲ್ಕರ ಎಳೆಯವನಾಗಿದ್ದಾಗ ಕ್ರಿಮಿಕೀಟಗಳನ್ನು ಹಿಡಿದು ಚುಚ್ಚಿ ಸಾಯಿಸುತ್ತಿದ್ದೆ, ಆ ಪಾಪಕ್ಕೆ ಹೀಗೆ ಶೂಲಕ್ಕೇರಬೇಕಾಗಿ ಬಂದಿದೆ ಎಂದು ತರ್ಕಬದ್ಧವಾಗಿ ಎನ್ನುವಂತೆ ಯಮಧರ್ಮ ಮಾಂಡವ್ಯನಿಗೆ ಮನದಟ್ಟು ಮಾಡುವ ಪ್ರಯತ್ನವನ್ನು ಮಾಡಿದರೆ, ಮಾಂಡವ್ಯ ಸಹಜವಾಗಿ ಸಿಟ್ಟುಗೊಳ್ಳುತ್ತಾನೆ.

ಲೋಕದ ರೀತಿ ನೀತಿ, ಒಳಿತು ಕೆಡುಕು, ಪುಣ್ಯ, ಪಾಪವೆಂದರೇನೆಂದೇ ತಿಳಿಯದ ಮುಗ್ಧ ಎಳೆಯರ ಮೇಲೆ ನಿಮ್ಮ ಭಾವನೆಗಳನ್ನು ಹೇರುತ್ತೀರಲ್ಲ – ನಿನಗೆ ಧಿಕ್ಕಾರವಿರಲಿ ಎನ್ನುತ್ತಾನೆ. ಮುಗ್ಧತೆಯ ಮಹತ್ತ್ವವೇ ತಿಳಿಯದ ಮಂದಿ ನೀವು ಎನ್ನುತ್ತಾನೆ. ಕಡುಕೋಪದಿಂದ, ‘ನೀನು ಲೋಕದಲ್ಲಿ ಮನುಷ್ಯನಾಗಿ –  ಶೂದ್ರನಾಗಿ – ಹುಟ್ಟು’ ಎಂದು ಯಮನಿಗೇ ಶಾಪವೀಯುತ್ತಾನೆ. ಆಗಲಾದರೂ, ಬಾಲ್ಯದ ಮಹತ್ತ್ವ ಯಮನಿಗೆ ಅರ್ಥವಾದೀತು ಎಂದುಕೊಂಡಿರಬೇಕು – ಮಾಂಡವ್ಯ.

ಆದರೆ ಎಲ್ಲಕ್ಕಿಂತ ಮುಖ್ಯವಾದ ಮಾತೆಂದರೆ – ಬಾಲ್ಯವನ್ನು ವಿಸ್ತರಿಸುವ ಅಭಿಮತವನ್ನು ಮಾಂಡವ್ಯ ಸ್ಥಾಪಿಸುತ್ತಾನೆ. ಅದುವರೆಗೆ ಹುಟ್ಟಿ ಹನ್ನೆರಡು ವರ್ಷಗಳ ತನಕ ಬಾಲ್ಯ ಎನ್ನುವ ಗಣನೆ ಇತ್ತು. ಮಾಂಡವ್ಯ ಈ ಗಣನೆಯನ್ನು ಒಪ್ಪದೆ, ಹದಿನಾಲ್ಕು ವರ್ಷಗಳ ತನಕ ಬಾಲ್ಯವಿರಬೇಕು ಎಂದು ತಿದ್ದುತ್ತಾನೆ. ಲೋಕಕ್ಕೆ ಬಾಲ್ಯವನ್ನು ಗುರುತಿಸುವ ಶಕ್ತಿ ಬೆಳೆಯಬೇಕು. ವೇದ ಹೇಳಿದ್ದು – ನಮೋ ಅರ್ಭಕೇಭ್ಯಃ ಸಂಸ್ಕೃತಿಗೆ ಬಾಲ್ಯವನ್ನು ದೀರ್ಘವಾಗಿಸುವ ಆಶಯ. ನಾಗರಿಕತೆಗೆ ಬಾಲ್ಯವನ್ನು ಹ್ರಸ್ವವಾಗಿಸುವ ಆತುರ.

Comments
ಈ ವಿಭಾಗದಿಂದ ಇನ್ನಷ್ಟು
ಸಭೆಯ ಸತ್ಯ

ಭಾರತಯಾತ್ರೆ
ಸಭೆಯ ಸತ್ಯ

7 May, 2017
‘ಉರಿಯ ನಾಲಗೆ’

ಭಾರತಯಾತ್ರೆ
‘ಉರಿಯ ನಾಲಗೆ’

23 Apr, 2017
ಮಹಿಳೆಯಲಿ ಮಾನವರ ಕೃತಿ ಗೆಲಬಹುದೆ?

ಭಾರತಯಾತ್ರೆ
ಮಹಿಳೆಯಲಿ ಮಾನವರ ಕೃತಿ ಗೆಲಬಹುದೆ?

9 Apr, 2017
‘ಕಾಮ’ ಮತ್ತು ‘ಸಾವು’ಗಳ ಸಹಗಮನ

ಭಾರತಯಾತ್ರೆ
‘ಕಾಮ’ ಮತ್ತು ‘ಸಾವು’ಗಳ ಸಹಗಮನ

12 Mar, 2017

ಭಾರತಯಾತ್ರೆ
ಪಾಂಡು–ಮಾದ್ರಿ

ಮೃಗಗಳಾಗಿ ಕ್ರೀಡಿಸುತ್ತಿದ್ದ ಮುನಿದಂಪತಿಗಳನ್ನು ಗುರಿತಪ್ಪದ ಬೇಟೆಗಾರ ಪಾಂಡು ಒಂದೇ ಬಾಣದಲ್ಲಿ ಕೆಡವಿದ್ದ. ಬಿಟ್ಟ ಬಾಣ ಹಿಂದೆ ಬರುವುದಿಲ್ಲವೇನೋ ನಿಜ. ಆದರೆ ಕೊಟ್ಟ ನೋವು ಇಮ್ಮಡಿಯಾಗಿ...

25 Feb, 2017