ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪುರುಷಾಹಂಕಾರದ ನೆಲೆ ಮತ್ತು ಮೂಲ

Last Updated 2 ಅಕ್ಟೋಬರ್ 2016, 19:30 IST
ಅಕ್ಷರ ಗಾತ್ರ

ಇಂದು ನಮ್ಮಿಷ್ಟದ ಕಿರುಚಿತ್ರ ತಯಾರಿಸುವುದು ಹಾಗೂ ಅದನ್ನು ಜಗತ್ತಿನ ಮುಂದಿಡುವುದು ಅಷ್ಟು ಕಷ್ಟದ ಕೆಲಸವಲ್ಲ. ಇದರಿಂದಾಗಿ ಇಂದು ಅನೇಕ ವಿಷಯಗಳನ್ನು ಕುರಿತ ಸಾವಿರಾರು ಕಿರುಚಿತ್ರಗಳು ಲಭ್ಯವಿವೆ. ಇವು ಸಮಾಜದ ಚಿಂತನೆ ಹೇಗಿದೆ ಎಂಬುದನ್ನು ತೋರಿಸುವಂತೆಯೇ ಸಮಾಜದಲ್ಲಿನ ಜನರು ಹೀಗೆಲ್ಲ ಚಿಂತಿಸುತ್ತಿದ್ದಾರೆ ಎಂಬುದನ್ನೂ ತೆರೆದಿಡುತ್ತದೆ. ಎಲ್ಲವೂ ಉತ್ತಮವಾಗಿರಬೇಕೆಂದೇನೂ ಅಲ್ಲ.

ಹೇರಳವಾಗಿ ಲಭ್ಯವಿರುವ ಇಂತಹದರಲ್ಲಿ ಅಸಕ್ತಿಕರ ಕೆಲವು ವಾಹಿನಿಗಳಿವೆ. ಅವುಗಳಲ್ಲಿ ಒಂದನ್ನು ಮಾತ್ರ ತೆಗೆದುಕೊಳ್ಳುತ್ತೇನೆ. ಅದೂ ಟಾಕಿಂಗ್ ಬುಕ್ಸ್ ಮೂವೀಸ್‍ ಎಂಬ ವಾಹಿನಿಯದು. ಇದರ ಕಿರುಚಿತ್ರಗಳಿಗೆ ಪ್ರಶಸ್ತಿಯೂ ಬಂದಿದೆ.

ಅದರಲ್ಲಿನ ಒಂದು ಕಿರುಚಿತ್ರ ‘ಆಮ್ ಐ ಅ ಪ್ರಾಸ್ಟಿಟ್ಯೂಟ್‍ ’ (ನಾನೇನು ವೇಶ್ಯೆಯೇ) – ಎಂಬುದು. ಇದೊಂದು ಪುಟ್ಟ ಎಂಟು ನಿಮಿಷದ  ಕಿರುಚಿತ್ರ. ಇದರ ವೈಚಾರಿಕ ಹಂದರ ‘ಗಂಡಸೊಬ್ಬ ಹೆಣ್ಣನ್ನು ಹೇಗೆ ನಿರಂತರವಾಗಿ ಕೇವಲ ಒಂದು ಭೋಗದ ವಸ್ತುವನ್ನಾಗಿ ನೋಡುತ್ತಾ ಬಂದಿದ್ದಾನೆ’ ಎಂಬುದು. ಮುಖ್ಯಕಥೆ ನಾಲ್ಕೇ ನಿಮಿಷದಲ್ಲಿ ನಡೆದುಹೋಗುತ್ತದೆ.

ಒಬ್ಬ ಮಧ್ಯಮ ವರ್ಗದ ವಿವಾಹಿತ ಕಚೇರಿಯಿಂದ ವೇಶ್ಯೆಯ ಮನೆಗೆ ಬರುತ್ತಾನೆ. ಅವಳು ಬೇರೆ ಗಿರಾಕಿಗಳು ಬರುತ್ತಾರೆ ಬೇಗ ಬೇಗ ಎಂದು ಆತುರ ಮಾಡಿ ಕೊನೆಗೆ ಕ್ರಿಯೆ ಮುಗಿದಿಲ್ಲವೆಂದರೂ, ಕಾಲಿನಿಂದ ಒದ್ದು ಕಳಿಸುತ್ತಾಳೆ. ಇವನು ಅಶ್ಲೀಲವಾಗಿ ಬೈದುಕೊಂಡು ಮನೆಗೆ ಬರುತ್ತಾನೆ. ಹೆಂಡತಿ ಇದೇನು ಇಷ್ಟು ಬೇಗ ಬಂದಿರಿ ಎನ್ನುತ್ತಾಳೆ.  (ಆ ವಾಕ್ಯವೇ ಹೆಚ್ಚು ಹೇಳುತ್ತದೆ).

ಅವಳು ಬ್ಯಾಗ್‍ ತೆಗೆದುಕೊಂಡು ಉಪಚರಿಸಲು ಬಂದಾಗ ಇವ ತಿರಸ್ಕರಿಸುತ್ತಾನೆ. ‘ಒಂದು ಲೋಟ ನೀರು ತೆಗೊಂಡು ಬಾ’ ಎನ್ನುತ್ತಾನೆ. ಅವಳು ನೀರು ಕೊಟ್ಟು ಅಡುಗೆಮನೆಗೆ ಹೋಗಿ ತಿಂಡಿ ಮಾಡುತ್ತಿರುವಾಗ ಕಾಣುವ ಅವಳ ನಡು ಇವನಲ್ಲಿ ಆಸೆ ಹುಟ್ಟಿಸುತ್ತದೆ. ಹೋಗಿ ಆಕ್ರಮಿಸಿಕೊಳ್ಳುತ್ತಾನೆ. ಅವಳು ಈಗ ಬೇಡ ಎಂದಾಗ, ನಾನು ನಿನ್ನನ್ನ ಕೇಳಿದನೇ ಎಂದು ವ್ಯಂಗ್ಯವಾಗಿ ಹೇಳಿ ಕೊಠಡಿಗೆ ದಬ್ಬಿಕೊಂಡು ಹೋಗುತ್ತಾನೆ.

ಅವಳ ಮನದಲ್ಲಿ ಒಬ್ಬ ವೇಶ್ಯೆಯ ಕುರಿತಾಗಿ ಸಮಾಜದಲ್ಲಿರುವ ಎಲ್ಲ ಮಾತುಗಳು ಮಿಂಚಿ ಹೋಗುತ್ತವೆ. ಇವನು 'ಜಾಸ್ತಿ ನಾಟಕ ಆಡಬೇಡ' ಎನ್ನುತ್ತಾ ತನ್ನಿಚ್ಛೆ ಪೂರೈಸಿಕೊಂಡು ಹೊರಬರುತ್ತಾನೆ. ಅವಳು ನಾನೇನು ವೇಶ್ಯೆಯೇ ಎಂದುಕೊಂಡು ಕಣ್ಣೀರು ತಂದುಕೊಳ್ಳುತ್ತಾಳೆ. ಇಂತಹ ವ್ಯಕ್ತಿತ್ವ ಕುಟುಂಬವನ್ನು ತನ್ಮೂಲಕ ಸಮಾಜವನ್ನು ನಿಧಾನವಾಗಿ ಹದಗೆಡಿಸುತ್ತದೆ.

ಚಿತ್ರ ನಿರ್ಮಾಪಕರು ಹೇಳಿಕೊಂಡಿರುವ ‘… ಹೆಣ್ಣನ್ನು ಭೋಗದ ವಸ್ತುವನ್ನಾಗಿ ನೋಡಲಾಗುತ್ತಿದೆ’ ಎಂಬುದನ್ನು ಮೀರಿ ಅಥವಾ ಅದಕ್ಕೂ ಭಿನ್ನವಾದ ಅಂಶಗಳು ಇಲ್ಲಿ ಕಾಣುತ್ತದೆ. ನಿಜ, ಒಂದು ಹೆಣ್ಣು ವೇಶ್ಯೆಯಾಗುವುದು ಬಹುತೇಕ ಗಂಡಿನಿಂದಲೇ. ಅವನೂ ಅದೇ ಕ್ರಿಯೆಯಲ್ಲಿ ಭಾಗಿಯಾದರು ಅವನು ಗಂಡುವೇಶ್ಯೆ ಎಂದೇನೂ ಅನಿಸಿಕೊಳ್ಳುವುದಿಲ್ಲ, ಅವನು ತಾತ್ವಿಕವಾಗಿ ಅದೇ ಆಗಿದ್ದರೂ! ತದ್ವಿರುದ್ಧವಾಗಿ ಅವನ ಘನತೆ ಹೆಚ್ಚುವಂತಹ ಪರಿಸರವೇ ನಮ್ಮಲ್ಲಿದೆ. ಈ ಸತ್ಯಾಂಶದ ಹೊರತಾಗಿಯೂ ಇಲ್ಲಿನ ಘಟನೆಗಳು ವಿಭಿನ್ನ ನೆಲೆಗಳಲ್ಲಿ ಯೋಚಿಸುವಂತೆ ಮಾಡುತ್ತವೆ.

ಈ ಕಥೆಯ ನಾಯಕ, ವಿವಾಹಿತ. ಅವನು ವೇಶ್ಯೆಯ ಮನೆಗೆ ಏಕೆ ಹೋಗುತ್ತಾನೆ? ಈ ಪ್ರಶ್ನೆಗೆ ನೇರ ಉತ್ತರವಿಲ್ಲ. ಕಥಾಹಂದರ ನೋಡಿದರೆ ‘ದೊಡ್ಡಸ್ತಿಕೆ ಅಥವಾ ತನ್ನ ಗಂಡಸುತನ ತೋರಿಸಿಕೊಳ್ಳಲು’ ಎನ್ನುವ ಉತ್ತರ ಲಭ್ಯವಾಗುತ್ತದೆ. ಅಲ್ಲಿ ಸೋತ ಇವನು ಮನೆಯಲ್ಲಿ ಪ್ರತಾಪ ತೋರಿಸುತ್ತಾನೆ. ಎರಡೂ ಕಡೆ ಶೋಷಣೆಗೆ ಒಳಗಾಗಿದ್ದು ಹೆಣ್ಣೆ. ಆ ನೆಲೆಯಲ್ಲಿ ಕಿರುಚಿತ್ರ ಯಶಸ್ವಿ ಎನ್ನಬಹುದು.

ಈ ಇಡೀ ವ್ಯವಸ್ಥೆಗೆ ಇನ್ನೊಂದು ಆಯಾಮವಿದೆ. ಗಂಡಾಗಲಿ, ಹೆಣ್ಣಾಗಲಿ ಸಮಾಜಕ್ಕೆ ಆಕಾಶದಿಂದ ಉದುರಿದವರಲ್ಲ. ಸಮಾಜದ ಇದೇ ಜನರ ನಡುವೆ ಹುಟ್ಟಿ ಬೆರೆತು ಸಮಾಜದಲ್ಲಿನ ರೀತಿರಿವಾಜುಗಳಲ್ಲಿ ಮಿಂದು ಬೆಂದು ಬೆಳೆದವರು. ಮನೆ, ಸುತ್ತಲಿನ ಪರಿಸರ ಮತ್ತು ಲಭ್ಯವಾದ ಶಿಕ್ಷಣ ಅವರ ಮೇಲೆ ಉಂಟುಮಾಡಿದ ಪರಿಣಾಮ ಇವು ವ್ಯಕ್ತಿಯನ್ನು ಸೃಷ್ಟಿಸುತ್ತದೆ ಎಂದು ಕೊಂಡಾಗ.

ಶೋಷಕನನ್ನು ಬೇರೆಯೇ ನೆಲೆಯಿಂದ ನೋಡಬೇಕಾದ ಪರಿಸ್ಥಿತಿ ಎದುರಾಗುತ್ತದೆ. ಇಲ್ಲಿ ಹೆಣ್ಣಿಗೆ ಅಷ್ಟು ಅಯ್ಕೆಯಿಲ್ಲ. ವ್ಯವಸ್ಥೆಯ ಬಲಿಪಶುವಾಗಿ ವೇಶ್ಯೆಯಾಗಿ ಬದುಕುತ್ತಾಳೆ. ತನಗೆ ದಕ್ಕಿದ ಶಿಕ್ಷಣ, ಸಂಸ್ಕಾರದಿಂದ ಸಹಿಸುವ ಗೃಹಿಣಿಯಾಗುತ್ತಾಳೆ.

  ಈಗ ಪುರುಷನ ವಿಷಯಕ್ಕೆ ಬರೋಣ. ವೇಶ್ಯಾಸಂಗ ಮಾಡಿದರೆ ಮಾತ್ರ ದೊಡ್ಡವನು, ಗಂಡಸು ಎಂಬ ಭಾವ ಬಂದದ್ದು, ಬಲಿತದ್ದು ಹೇಗೆ? ಮಾನವನ ವಿಕಾಸದಿಂದ ನೋಡಿದರೆ ಒಂಟಿಯಾದ ಮಾನವನು ಜೊತೆಯಾಗಿ ಗುಂಪಾಗಿ ವಾಸಿಸತೊಡಗಿದಾಗ ‘ತನ್ನ ಸ್ವತ್ತು’ ಎಂಬುದರ ಆರಂಭ. ಕ್ರಮೇಣ, ಹೆಣ್ಣು ಸ್ವತ್ತು ಎಂಬುದರ ಪಟ್ಟಿಗೆ ಸೇರಿತು, ಗುಂಪಿನ ಯಜಮಾನನ ಗುಣಲಕ್ಷಣ, ಅಭ್ಯಾಸಗಳೇನಾದವು? ಬಹುಪತ್ನಿತ್ವ, ಸ್ವೇಚ್ಚಾಚಾರ ಇಲ್ಲಿ ಉದಯಿಸಿರಬೇಕು.

ಆದರೆ, ಇಂದಿನ ನಾಗರಿಕ ಮಾನವನೇಕೆ ಹೀಗೆ? ಎಂಬ ಬಹುದೊಡ್ಡ ಪ್ರಶ್ನೆ ಹಾಕಿಕೊಳ್ಳಬೇಕಾಗುತ್ತದೆ. ಒಬ್ಬ ವ್ಯಕ್ತಿ ತನ್ನ ಸಹಜೀವಿಯನ್ನು ಶೋಷಿಸಬೇಕು? ಸ್ವತ್ತು ಎಂದು ಪರಿಗಣಿಸಬೇಕು? ಎಂದು ಯೋಚಿಸಿದಾಗ ನಮ್ಮ ಸಮಾಜ ಈ ನಿಟ್ಟಿನಲ್ಲಿ ನಾಗರಿಕವಾಗಿಯೇ ಇಲ್ಲ ಎಂದು ಗುರುತಿಸಬೇಕಾಗುತ್ತದೆ. 

ಸಹಜೀವಿಯಾದ ಮತ್ತು ತನ್ನಷ್ಟೇ ಅಥವಾ ತುಸು ಹೆಚ್ಚೇ ಪ್ರಮುಖವಾದ ಹೆಣ್ಣುಜೀವವನ್ನು ಗೌರವಿಸಬೇಕು ಅಥವಾ ಕಡೆಯ ಪಕ್ಷ ಹೀಗಳೆಯಬಾರದು ಎಂಬ ಶಿಕ್ಷಣ ಅವನಿಗೆ ಈ ಸಮಾಜ ಏಕೆ ಕೊಡಲಿಲ್ಲ ಎಂಬ ಪ್ರಶ್ನೆಯೂ ಏಳುತ್ತದೆ!

ಲೈಂಗಿಕ ಶೋಷಣೆ ಕ್ರೂರವಾದದ್ದು. ದಂಪತಿಗಳಲ್ಲಿ ಅತ್ಯಂತ ಆಪ್ತ ಅನುಭವ ನೀಡಿ ಅನುಭಾವಕ್ಕೆ ಎಡೆ ಮಾಡಿಕೊಡಬೇಕಾದ ಒಂದಾಗುವಿಕೆ ಯಾಂತ್ರಿಕವಾದರೇ ನೋವಿನ ವಿಷಯವಾಗುತ್ತದೆ, ಇನ್ನು ನನ್ನನ್ನು ಶೋಷಿಸಲಾಗುತ್ತಿದೆ ಎಂಬ ಹಂತಕ್ಕೆ ತಲುಪಿದರೆ, ಅಸಹಾಯಕತೆಯ ನೆಲೆ ಮುಟ್ಟಿದರೆ? ಅದು ಘೋರ. ಕುಟುಂಬದ ಆಧಾರವೇ ಕುಸಿಯುತ್ತಾ ಬರುತ್ತದೆ. ಆ ಸಮಾಜವೂ ಅಷ್ಟರ ಮಟ್ಟಿಗೆ ಶಿಥಿಲವಾಗುತ್ತದೆ. ಮುಖವಾಡಗಳನ್ನು ಧರಿಸಿ ಬದುಕುವವರ ಸಂಖ್ಯೆ ಹೆಚ್ಚುತ್ತದೆ.

ಪ್ರಾಯಶಃ ಇಂದಿನ ವೈಚಾರಿಕ ನೆಲೆಗಟ್ಟಿನಲ್ಲಿ ಹೆಣ್ಣನ್ನು ಗೌರವಿಸಬೇಕು ಎಂಬುದಕ್ಕಿಂತ ಸಮಾನವಾಗಿ ನೋಡಬೇಕು ಎಂಬುದು ಹೆಚ್ಚು ಪ್ರಬಲವಾದ ಭಾವವಾಗಿದೆ. ಇದನ್ನು ಮಕ್ಕಳಿಂದಲೇ ಕಲಿಸಬೇಕಲ್ಲವೆ? ನಿಜದಲ್ಲಿ ಮನೆಯಲ್ಲಿ ‘ಲೇ, ನೀನು ಕಸಗುಡಿಸು’, ‘ಲೋ ನೀನು ಹೋಗಿ ದಿನಸಿ ತೆಗೆದುಕೊಂಡು ಬಾ’ ಎಂದು ಹೇಳುವಾಗಿನಿಂದಲೇ ಸ್ತ್ರೀಶೋಷಣೆಯ ಸಿದ್ಧಾಂತ ಹಾಗೂ ಪ್ರಾಯೋಗಿಕ ಶಿಕ್ಷಣ ಆರಂಭವಾಗಿಬಿಡುತ್ತದೆ! ಸಮಾನತೆಯನ್ನು ಚಿಕ್ಕಂದಿನಿಂದಲೇ ಮನೆಯಿಂದಲೇ ಕಲಿಸಬೇಕು.

ತಾಯಿಯನ್ನು ಕೀಳಾಗಿ ನೋಡುವ ತಂದೆಯಿಂದ ಮಗನು ಹೆಂಡತಿಯನ್ನು ಹೇಗೆ ನೋಡಿಕೊಳ್ಳಬೇಕು ಎಂಬುದನ್ನು ಕಲಿತರೆ, ಮೌನವಾಗಿ ಕಷ್ಟ ಸಹಿಸುತ್ತಾ ಹೋಗುವ ತಾಯಿಯನ್ನು ನೋಡಿ ಹೆಣ್ಣು ತಾನು ಹೇಗಿರಬೇಕು ಎಂಬುದನ್ನು ಕಲಿಯುತ್ತದೆ.

ತಂದೆ-ತಾಯಿಯ ನಡವಳಿಕೆ – ಬೋಧನೆಯಲ್ಲ – ಮಕ್ಕಳನ್ನು ಖಚಿತವಾಗಿ ಪ್ರಭಾವಿಸುತ್ತವೆ. ಮಾಧ್ಯಮಗಳೂ ಅಷ್ಟೆ. ಅದು ಸಿನೆಮಾ ಇರಬಹುದು, ಧಾರಾವಾಹಿ ಇರಬಹುದು, ಕೊನೆಗೆ ‘ವಾಟ್ ಈಸ್ ಯುವರ್ ಫಸ್ಟ್ ಮೂವ್’ ಎನ್ನುವ ಜಾಹೀರಾತಿರಬಹುದು – ಅತಿಯಾದ ಪ್ರಭಾವವನ್ನು ಬೀರುತ್ತವೆ. 

ಹೆಂಡತಿಯನ್ನು ಭೋಗದ ವಸ್ತುವನ್ನಾಗಿ ಕಾಣಬೇಕು ಎಂಬುದನ್ನು ಮನೆಯಿಂದ, ಸಮಾಜದಿಂದ ಕಲಿತ ಗಂಡನ್ನು ದೂಷಿಸುವುದರಿಂದ ಪ್ರಯೋಜನವೇನು? ಈ ನೆಲೆಯಲ್ಲಿ ಆ ಸಾಕ್ಷ್ಯಚಿತ್ರ ಸೋಲುತ್ತದೆ. ಉತ್ತಮ ಪ್ರಜೆಗಳನ್ನು ನಿರ್ಮಿಸುವಲ್ಲಿ ಪೋಷಕರ, ಶಿಕ್ಷಕರ ಪಾತ್ರ ಇಲ್ಲಿ ತುಂಬ ಹಿರಿದು.

ಶಿಕ್ಷಣ ಮಾತ್ರ ಇದರ ನಕಾರಾತ್ಮಕ ಅಂಶಗಳಿಂದ ಮುಕ್ತಿ ಕೊಡಿಸಬಲ್ಲುದು. ಗಂಡು–ಹೆಣ್ಣು ಇಬ್ಬರಿಗೂ ಅವಕಾಶಗಳ ಮಹಾಪೂರವೇ ಇರುವ ಇಂದಿನ ದಿನಮಾನದಲ್ಲಿ ಸಮಾನತೆ, ಪ್ರೀತಿ ಗೌರವಗಳ ಶಿಕ್ಷಣವು ಭುವಿಗೆ ಸ್ವರ್ಗವನ್ನು ಇಳಿಸಬಲ್ಲದು.

ಇದರ ಜೊತೆಗೆ ಯುಕ್ತ ವಯಸ್ಸಿನಲ್ಲಿ ಲೈಂಗಿಕ ಶಿಕ್ಷಣ ನೀಡಬೇಕು. ಇದು ಸಹಜೀವಿಗಳಲ್ಲಿ ಪ್ರೀತಿ, ಗೌರವ ಮೂಡಿಸಿ ಮುಂದೆ ಆರೋಗ್ಯಕರ ಲೈಂಗಿಕ ಜೀವನಕ್ಕೆ ಎಡೆ ಮಾಡಿಕೊಡುತ್ತದೆ. ಲೈಂಗಿಕ ಶಿಕ್ಷಣ ಎಂದ ಕೂಡಲೇ ಹೌಹಾರುವ ಅಗತ್ಯವಿಲ್ಲ. ಹಾಗೆಯೇ, ಕೆಲವರು ತಿಳಿದಿರುವಂತೆ ಲೈಂಗಿಕ ಶಿಕ್ಷಣ ಎಂದರೆ ಅತ್ಯಾಚಾರ ಮಾಡುವುದು ಹೇಗೆಂದು ಹೇಳುವುದೂ ಅಲ್ಲ.

ಅದು ಸಂಭೋಗದ ಹಾಗೂ ಅದರ ಜವಾಬ್ದಾರಿಗಳನ್ನು ಸರಿಯಾಗಿ ಮನದಟ್ಟು ಮಾಡುವ ಶಿಕ್ಷಣ. ಇದನ್ನು ನೀಡುವುದು ಹೇಗೆ ಎನ್ನುವುದಕ್ಕೆ ದಶಕಗಳ ಹಿಂದೆ ಡಾ. ಎಚ್. ನರಸಿಂಹಯ್ಯನವರೇ ಉದಾಹರಣೆ ಕೊಟ್ಟಿದ್ದಾರೆ. ಗಂಡುಹೆಣ್ಣು ಮಕ್ಕಳನ್ನು ಬೇರೆ ಬೇರೆ ಕೂರಿಸಿ ತಜ್ಞ ವೈದ್ಯರಿಂದ ಪಾಠ ಹೇಳಿಸುವುದು. ಅಂದು ನ್ಯಾಷನಲ್ ಕಾಲೇಜಿನಲ್ಲಿ ಹೆಣ್ಣುಮಕ್ಕಳಿಗೆ ಡಾ. ಅನುಪಮಾ ನಿರಂಜನ, ಗಂಡುಮಕ್ಕಳಿಗೆ ಡಾ. ಜಯರಾಮ್ ಉಪನ್ಯಾಸವನ್ನಿತ್ತರು.

ಈ ಲೈಂಗಿಕತೆಯನ್ನು ಮೀರಿದ್ದು ಒಂದಿದ್ದೆ. ಅದೇ ನಿರ್ವಾಜ್ಯ ಪ್ರೀತಿ! ಇದನ್ನು ಮಕ್ಕಳಿಗೆ ಸಮಾಜ ಅನುಸರಿಸಿ ತೋರಿಸಬೇಕು. ಅಕಸ್ಮಾತ್ತಾಗಿ ಬುದ್ಧಿಮಾಂದ್ಯೆಯನ್ನು ಮದುವೆಯಾಗಿ ಅವಳೊಂದಿಗೇ ನಲವತ್ತು ವರ್ಷ ಬಾಳಿ, ಹುಟ್ಟಿದ ಮಕ್ಕಳಲ್ಲಿ ನಾಲ್ಕು ಬುದ್ಧಿಮಾಂದ್ಯ ಮಕ್ಕಳಾದರೂ ತುಸುವೂ ದುಃಖವನ್ನು ತೋರದೇ ಮಾನವೀಯತೆ ಮೆರೆದು, ತಮ್ಮ ಜೀವಿತಾವಧಿಯಲ್ಲಿ ಅನೇಕ ಪಾಂಡಿತ್ಯ ಪೂರ್ಣ ಗ್ರಂಥಗಳನ್ನು ಬರೆದ ಪ್ರೊ. ಮಹದೇವ ಪೂಜಾರರಂಥವರು ನಮಗೆ ಆದರ್ಶವಾಗಬೇಕು.

ಅಂಥ ವಿಚಾರಗಳು ನಮ್ಮ ಯುವಜನರಲ್ಲಿ ಚರ್ಚೆಗೆ ಬರುವಂತೆ ನೋಡಿಕೊಳ್ಳಬೇಕು.  ಮಾಧ್ಯಮದ ಹಾವಳಿಯನ್ನು ನಿಯಂತ್ರಣದಲ್ಲಿಡಬೇಕು. ಮಾನವರ ಎಲ್ಲ ನಡವಳಿಕೆಯ ಮೂಲ ಪ್ರೀತಿಯಾಗಬೇಕು. ಅದೊಂದೇ ಗೆಲ್ಲುವುದು.

ಇಂದೋ ನಾಳೆಯೋ ಜನ್ಮಾಂತರದಲ್ಲೋ ಪ್ರೀತಿಯೇ ಗೆಲ್ಲುವುದು – ಎಂಬುದು ಸ್ವಾಮಿ ವಿವೇಕಾನಂದರ ಮಾತು. ನಮಗದು ಮತ್ತೊಂದು ದೊಡ್ಡ ಗುಣ ಸಹನೆಯನ್ನು ಕಲಿಸಬೇಕು. ಈ ನಿರ್ವಾಜ್ಯ ಪ್ರೀತಿಯೊಂದೇ ಪುರುಷಾಹಂಕಾರವನ್ನೂ, ಅವ್ಯವಸ್ಥೆಯಿಂದ ಕೂಡಿರುವ ಸಮಾಜವನ್ನೂ ಸರಿದಾರಿಗೆ ತರುವ ಅಸ್ತ್ರ.

**
-ಕಲ್ಗುಂಡಿ ನವೀನ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT