ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಘರ್ಷದ ಸುಳಿಯಲ್ಲಿ ವನ್ಯಜೀವಿ ಸಂರಕ್ಷಣೆ

ದೇಶದ ವನ್ಯಜೀವಿ ಸಂರಕ್ಷಣಾ ನೀತಿ ತರ್ಕಬದ್ಧ ಚಿಂತನೆಯಿಂದ ಕೂಡಿರಬೇಕು
Last Updated 2 ಅಕ್ಟೋಬರ್ 2016, 19:30 IST
ಅಕ್ಷರ ಗಾತ್ರ

ದೇಶದಾದ್ಯಂತ ಈಗ ವನ್ಯಜೀವಿ ಸಪ್ತಾಹ ನಡೆಯುತ್ತಿದೆ. ವನ್ಯಜೀವಿ ಸಂರಕ್ಷಣೆ ವಿಚಾರ ಚರ್ಚೆ, ವಾದ, ವಿವಾದಗಳ ಸುಳಿಯಲ್ಲಿ ಸಿಲುಕಿಕೊಂಡಿದೆ. ಸ್ವಾತಂತ್ರ್ಯ ಬಂದ ನಂತರ, ಮೊದಲ ಬಾರಿಗೆ 1972ರ ವನ್ಯಜೀವಿ ಸಂರಕ್ಷಣಾ ಅಧಿನಿಯಮದ 62ನೇ ಕಲಮಿನ ಉಪಬಂಧವನ್ನು ಅನ್ವಯಿಸಿ ಕೇಂದ್ರ ಸರ್ಕಾರ ಆಯ್ದ ಕೆಲವು ವನ್ಯಜೀವಿಗಳನ್ನು ವ್ಯಾಪಕ ಪ್ರಮಾಣದಲ್ಲಿ ಕೊಲ್ಲಲು ಅನುಮತಿ ನೀಡಿದೆ.

ಈ ಪರವಾನಗಿ ದೊರೆತ ಅತ್ಯಲ್ಪ ಸಮಯದಲ್ಲಿ, ಹೈದರಾಬಾದ್‌ನಿಂದ ಬಂದ ಈಡುಗಾರರು, ಬಿಹಾರದ ಮೊಕಮಾ ಗ್ರಾಮದ ಸುತ್ತಮುತ್ತ, ಮೂರೇ ದಿನಗಳಲ್ಲಿ 250 ನೀಲ್‌ಗಾಯ್ ಅಥವಾ ಮರವಿಗಳನ್ನು ಗುಂಡಿಟ್ಟು ಕೊಂದಿದ್ದಾರೆ.

ಬಿಹಾರ, ಛತ್ತೀಸಗಡ, ಮಹಾರಾಷ್ಟ್ರ, ಹಿಮಾಚಲ ಪ್ರದೇಶಗಳಲ್ಲಿ ಕಂಟಕಕಾರಿ ಎನಿಸಿದ ಮಂಗ, ಕಾಡುಹಂದಿ ಹಾಗೂ ಮಕಾಕ್ ಕೋತಿಗಳನ್ನು ಕೊಲ್ಲಲು ಅನುಮತಿ ನೀಡಲಾಗಿದೆ. ಮೊದಲ ಬಾರಿಗೆ ವ್ಯಾಪಕ ಪ್ರಮಾಣದಲ್ಲಿ ನಡೆದಿರುವ ಈ ಆಯ್ಕೆ ಮಾಡಿ ಕೊಲ್ಲುವ (ಕಲಿಂಗ್) ಪ್ರಕ್ರಿಯೆ ತೀವ್ರವಾದ ವಾಗ್ಯುದ್ಧಕ್ಕೆ ದಾರಿ ಮಾಡಿಕೊಟ್ಟಿದೆ.

ನೀಲ್‌ಗಾಯ್ ನಮ್ಮ ಬಿಹಾರ, ಉತ್ತರಪ್ರದೇಶ, ಹರಿಯಾಣ, ಗುಜರಾತ್, ಮಧ್ಯಪ್ರದೇಶ, ಪಂಜಾಬ್, ರಾಜಸ್ತಾನಗಳ ಕುರುಚಲು ಅರಣ್ಯಗಳಲ್ಲಿರುವ, ಏಷ್ಯಾ ಖಂಡದ ಅತಿ ದೊಡ್ಡ ಚಿಗರೆ (ಆಂಟಿಲೋಪ್) ಗುಂಪಿಗೆ ಸೇರಿದ ಪ್ರಾಣಿ.

ಜಿಂಕೆಯ ಗುಂಪಿಗೆ ಸೇರಿದ್ದರೂ ಹಸುವಿನಂತೆ ಕಾಣುವ ಈ ಪ್ರಾಣಿಯನ್ನು ಇತ್ತೀಚಿನವರೆಗೂ ಯಾರೂ ಕೊಲ್ಲುತ್ತಿರಲಿಲ್ಲ. ಆದರೆ ಇಂದಿನ ಪರಿಸ್ಥಿತಿಯೇ ಬೇರೆ. ಅರಣ್ಯದಂಚಿನ ಕೃಷಿ ಭೂಮಿಯಲ್ಲಿನ ಬೆಳೆಗಳನ್ನು ರಾತ್ರೋರಾತ್ರಿ ತಿಂದು ನಾಶಪಡಿಸುವ ಈ ಜೀವಿಯ ಬಗ್ಗೆ ರೈತರ ಭಾವನೆ ಬದಲಾಗಿದೆ.

ಉತ್ತರ ಭಾರತದ ಏಳು ರಾಜ್ಯಗಳಲ್ಲಿ ನೀಲ್‌ಗಾಯ್ ರೈತರ ಪರಮ ವೈರಿ. ಡೆಹ್ರಾಡೂನಿನ ವನ್ಯಜೀವಿ ಅಧ್ಯಯನ ಸಂಸ್ಥೆ ವಿಜ್ಞಾನಿಗಳ ಪ್ರಕಾರ ಇದರಿಂದ ಗೋಧಿ, ಕಾಬೂಲು ಕಡಲೆ, ಹೆಸರು ಕಾಳು, ಸಾಸಿವೆಗೆ ಅತಿ ಹೆಚ್ಚಿನ ಪ್ರಮಾಣದಲ್ಲಿ ಹಾನಿಯಾಗುತ್ತಿದೆ.

ಬಿಹಾರದ ಮೊಕಮಾ ಪ್ರದೇಶದಲ್ಲಿ ಪ್ರತಿ 100 ಕ್ವಿಂಟಲ್ ಗೋಧಿ, ಕಾಬೂಲು ಕಡಲೆ, ಹೆಸರು ಕಾಳುಗಳಲ್ಲಿ ಶೇಕಡ 35ರಿಂದ 70 ಭಾಗವನ್ನು ನೀಲ್‌ಗಾಯ್‌ಗಳು ತಿಂದು ಹಾಕುತ್ತಿವೆ. 2009ರಲ್ಲಿ ಕೇಂದ್ರ ಕೃಷಿ ಸಚಿವಾಲಯ ಸಿದ್ಧಪಡಿಸಿದ ಟಿಪ್ಪಣಿಯಲ್ಲಿ, ಈ ಬೆಳೆಗಳಲ್ಲಿ  ಉತ್ತರ ಪ್ರದೇಶದಲ್ಲಿ ಶೇಕಡ 50ರಿಂದ 70, ಹರಿಯಾಣದಲ್ಲಿ ಶೇ 50ರಿಂದ 60, ಗುಜರಾತ್‌ನಲ್ಲಿ ಶೇ 10ರಿಂದ 20ರಷ್ಟು ಪಾಲು ಪ್ರತಿವರ್ಷ ನೀಲ್‌ಗಾಯ್‌ಗಳಿಂದ ನಾಶವಾಗುತ್ತದೆಂಬ ಅಂದಾಜಿದೆ.

1972ರ ವನ್ಯಜೀವಿ ಸಂರಕ್ಷಣಾ ಅಧಿನಿಯಮದ ಕಲಂ 11(ಬಿ) ಪ್ರಕಾರ, 2, 3, 4ನೆಯ ಅನುಸೂಚಿಯಲ್ಲಿರುವ ವನ್ಯಜೀವಿಗಳು ಮನುಷ್ಯನ ಪ್ರಾಣ ಮತ್ತು ಆಸ್ತಿಪಾಸ್ತಿಗೆ ಅಪಾಯವುಂಟುಮಾಡಿದ ಸಂದರ್ಭಗಳಲ್ಲಿ, ಅಂತಹ ನಿರ್ದಿಷ್ಟ ಜೀವಿಗಳನ್ನು ಗುರುತಿಸಿ, ಕೊಲ್ಲಲು ಅನುಮತಿ ನೀಡುವ ಅಧಿಕಾರ ಆಯಾ ರಾಜ್ಯದ ಮುಖ್ಯ ವನ್ಯಜೀವಿ ಸಂರಕ್ಷಣಾ ಅಧಿಕಾರಿಗಿದೆ. ಈ ಅಧಿಕಾರದ ಬಳಕೆಯೂ ಆಗಾಗ ನಡೆದಿದೆ.

ಆದರೆ ನಿರ್ದಿಷ್ಟ ವನ್ಯಜೀವಿಗಳನ್ನು ಕಂಟಕಕಾರಿಯೆಂದು ಘೋಷಿಸಿ, ಅವುಗಳನ್ನು ಆಯ್ದು ಕೊಲ್ಲುವ ಕಲಿಂಗ್ ಪ್ರಕ್ರಿಯೆ ವ್ಯಾಪಕವಾಗಿ ಪ್ರಾರಂಭವಾಗಿರುವುದು ಈ ವರ್ಷದಿಂದ ಮಾತ್ರ. 2015ರ ಡಿಸೆಂಬರ್ 1ರಂದು, ಕೇಂದ್ರ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆಯ ಸಚಿವಾಲಯ, ಬಿಹಾರದ ಕೆಲವು ಜಿಲ್ಲೆಗಳಲ್ಲಿ ನೀಲ್‌ಗಾಯ್, ಕಾಡುಹಂದಿಯನ್ನು ಕಂಟಕಕಾರಿ ಜೀವಿಗಳೆಂದು ಘೋಷಿಸಿತು. ಈ ವರ್ಷದ ಫೆಬ್ರುವರಿ 3ರಂದು ಹೊರಡಿಸಿದ ಅಧಿಸೂಚನೆ ಉತ್ತರಾಖಂಡದ ಕೆಲ ಜಿಲ್ಲೆಗಳಲ್ಲಿ ಕಾಡು ಹಂದಿಯನ್ನೂ, ಮೇ 24ರ ಅಧಿಸೂಚನೆ ಹಿಮಾಚಲ ಪ್ರದೇಶದ ಕೆಲವು ಜಿಲ್ಲೆಗಳಲ್ಲಿ ಮಕಾಕ್ ಕೋತಿಗಳನ್ನೂ ಕಂಟಕಕಾರಿ ಜೀವಿಗಳೆಂದು ಘೋಷಿಸಿತು.

ಈ ಅಧಿಸೂಚನೆಗಳ ಫಲವಾಗಿ ಜನರ ಪ್ರಾಣ ಮತ್ತು ಆಸ್ತಿಪಾಸ್ತಿಗಳಿಗೆ ತೊಂದರೆ ಮಾಡುತ್ತಿರುವ ಜೀವಿಗಳನ್ನು ಗುರುತಿಸಿ ಕೊಲ್ಲುವ ಕೆಲಸ ಪ್ರಾರಂಭವಾಗಿದೆ. ಈ ಅಧಿಸೂಚನೆಗಳು ಒಂದು ವರ್ಷದ ಕಾಲ ಜಾರಿಯಲ್ಲಿರುತ್ತವೆ. ಕೇಂದ್ರ ಪರಿಸರ ಮತ್ತು ಅರಣ್ಯ ಸಚಿವಾಲಯದ ಪ್ರಕಾರ ದೇಶದ ವಿವಿಧ ಭಾಗಗಳಿಂದ ತಿಂಗಳೊಂದಕ್ಕೆ ಕಲಿಂಗ್ ಪ್ರಕ್ರಿಯೆಗೆ ಅನುಮತಿ ನೀಡಬೇಕೆಂದು ಕೋರಿ ಸರಾಸರಿ 12  ಪ್ರಸ್ತಾಪಗಳು ಬರುತ್ತಿವೆ.

ಉತ್ತರ ರಾಜ್ಯಗಳಷ್ಟೇ ಅಲ್ಲದೆ ಕೇರಳ, ಕರ್ನಾಟಕ, ತಮಿಳುನಾಡು, ಗೋವಾಗಳಿಂದ ಆನೆ, ಕಾಡುಹಂದಿ, ಮುಳ್ಳುಹಂದಿ, ಕಾಟಿ, ಕಡವೆ, ನವಿಲು ಬಾನೆಟ್‌ಕಪಿ, ಮುಸುವ, ಮಲಬಾರ್ ಅಳಿಲುಗಳನ್ನು ಕೆಲ ಪ್ರದೇಶಗಳಲ್ಲಿ ಕಂಟಕಕಾರಿ ಜೀವಿಗಳೆಂದು ಘೋಷಿಸಬೇಕೆಂಬ ಮನವಿಗಳು ಕೇಂದ್ರ ಸಚಿವಾಲಯಕ್ಕೆ  ಹೋಗಿವೆ.

ಮಾನವ–  ವನ್ಯಜೀವಿ ಸಂಘರ್ಷದಿಂದ ದೇಶದಾದ್ಯಂತ ಜನರ ಪ್ರಾಣ, ಆಸ್ತಿ ಹಾನಿಯ ಪ್ರಕರಣಗಳು ಹೆಚ್ಚುತ್ತಿವೆ ಎಂಬುದು ಸತ್ಯ. ಪಶ್ಚಿಮ ಬಂಗಾಳದಲ್ಲಿ 2006ರಿಂದ 2014ರವರೆಗೆ ಆನೆಗಳ ದಾಳಿಯಿಂದ ಸತ್ತವರ ಸಂಖ್ಯೆ 42. ಆದರೆ, 2015ರ ಒಂದೇ ವರ್ಷದಲ್ಲಿ ಮಡಿದವರ ಸಂಖ್ಯೆ 108. ಈ ವರ್ಷದ ಮಾರ್ಚ್ ತಿಂಗಳಿನಿಂದ ಬಂಕೂರ ಜಿಲ್ಲೆಯಲ್ಲಿ ನೆಲೆಸಿರುವ 80 ಆನೆಗಳು ಅಲ್ಲಿನ ಬೆಳೆಗಳನ್ನು ನಿರಂತರವಾಗಿ ತಿಂದು, ಜನರನ್ನು ಭಯಭೀತರನ್ನಾಗಿ ಮಾಡಿವೆ.

ವನ್ಯಜೀವಿ ಅಧಿನಿಯಮದ ಮೊದಲನೆಯ ಅನುಸೂಚಿಯಲ್ಲಿದ್ದು, ಕಟ್ಟುನಿಟ್ಟಾದ ಸಂರಕ್ಷಣೆಗೆ ಒಳಪಟ್ಟಿರುವ ಆನೆಗಳಲ್ಲಿ, ಪುಂಡಾಟದಲ್ಲಿ ತೊಡಗಿರುವ ಆನೆಗಳನ್ನು ಗುರುತಿಸಿ ಕೊಲ್ಲಲು ಪಶ್ಚಿಮ ಬಂಗಾಳ ಸರ್ಕಾರ ಕೇಂದ್ರ ಪರಿಸರ ಸಚಿವಾಲಯದ ಅನುಮತಿ ಕೇಳಿದೆ. ನಮ್ಮ ರಾಜ್ಯದ ಬೆಂಗಳೂರು, ರಾಮನಗರ, ಮಂಡ್ಯ, ಮೈಸೂರು, ಹಾಸನ, ಚಾಮರಾಜನಗರ, ಕೊಡಗು ಜಿಲ್ಲೆಗಳ ನೂರಾರು ಹಳ್ಳಿಗಳಲ್ಲಿ ಪುಂಡಾನೆಗಳ ಹಾವಳಿ ಇದೇ ದಿಕ್ಕಿನಲ್ಲಿ ಸಾಗಿದೆ.

ಕ್ಷಿಪ್ರಗತಿಯಲ್ಲಿ ತೀವ್ರವಾಗುತ್ತಿರುವ ಈ ಸಮಸ್ಯೆಯನ್ನು ನಿರ್ವಹಿಸುವ ಬಗ್ಗೆ ಅರಣ್ಯಾಧಿಕಾರಿಗಳು, ರೈತರು, ರಾಜಕಾರಣಿಗಳು, ವನ್ಯಜೀವಿ ಸಂರಕ್ಷಣಾಸಕ್ತರು, ವಿಜ್ಞಾನಿಗಳ ನಡುವೆ ಒಮ್ಮತವಿಲ್ಲ. ದೇಶದ ವನ್ಯಜೀವಿ ಸಂರಕ್ಷಣಾ ನೀತಿ ತರ್ಕಬದ್ಧ ಚಿಂತನೆಗಿಂತ ಭಾವಾತಿರೇಕಗಳಿಂದ ರೂಪುಗೊಂಡಿದೆಯೆಂಬ ಮಾತಿದೆ. ಇದರ ಫಲವಾಗಿ ಕೆಲವು ವನ್ಯಜೀವಿಗಳ ಸಂಖ್ಯೆ ಅಪಾರವಾಗಿ ಏರಿ, ಆಹಾರ-ಆವಾಸಗಳಿಗೆ ಅವು ಜನರೊಡನೆ ತೀವ್ರವಾಗಿ ಸ್ಪರ್ಧಿಸುವ ಸಂದರ್ಭ ಬಂದಿದೆ.

ಉದಾಹರಣೆಗೆ ಅರಣ್ಯದಂಚಿನ ಕೃಷಿ ಪ್ರದೇಶಗಳಲ್ಲಿ ನೀಲ್‌ಗಾಯ್‌ಗಳಿಗೆ ಯಾವ ನೈಸರ್ಗಿಕ ಶತ್ರುವೂ ಇಲ್ಲ. ಬೆಳೆಗಳಿಂದ ಉತ್ತಮವಾದ ಪೌಷ್ಟಿಕ ಆಹಾರ ದೊರೆಯುತ್ತದೆ.

ಅವುಗಳನ್ನು ಕೊಲ್ಲಲು ಧಾರ್ಮಿಕ ನಂಬಿಕೆ ಅಡ್ಡ ಬರುತ್ತದೆ. ಇವುಗಳ ಫಲವಾಗಿ ಗುಜರಾತಿನಲ್ಲಿ 1995ರಲ್ಲಿ 40 ಸಾವಿರದಷ್ಟಿದ್ದ ನೀಲ್‌ಗಾಯ್‌ಗಳ ಸಂಖ್ಯೆ 2005ರಲ್ಲಿ 1.86 ಲಕ್ಷದಷ್ಟಾಯಿತು. 10 ವರ್ಷಗಳಲ್ಲಿ ಶೇಕಡ 465ರಷ್ಟು ಹೆಚ್ಚಳ.  ಆಘಾತಕಾರಿಯಾದ ಈ ಹೆಚ್ಚಳವನ್ನು ನಿರ್ವಹಿಸುವುದು ಹೇಗೆ? ಇದೇ ಕಾರಣಕ್ಕಾಗಿ ಕಂಟಕಕಾರಿ ವನ್ಯಜೀವಿಗಳನ್ನು ಗುರುತಿಸಿ ಕೊಲ್ಲುವುದು ವನ್ಯಜೀವಿ ನಿರ್ವಹಣೆಯ ಮುಖ್ಯ ಭಾಗವಾಗಬೇಕೆಂಬುದು ಅನೇಕ ಪರಿಣತರ ವಾದ.  ಇದು ಪ್ರಪಂಚದಾದ್ಯಂತ ಮನ್ನಣೆ ಪಡೆದಿರುವ ವಿಧಾನವೂ ಹೌದು.

ಇಂಗ್ಲೆಂಡಿನಲ್ಲಿ 2006-12ರ ನಡುವೆ 1860 ಬ್ಯಾಡ್ಜರ್‌ಗಳನ್ನು ಕೊಲ್ಲಲಾಗಿದೆ. ಕೆನಡಾದ ಉತ್ತರ ಅಟ್ಲಾಂಟಿಕ್ ಕಡಲ ತೀರದಲ್ಲಿ ಪ್ರತಿವರ್ಷ ಕಡಲ ನಾಯಿಗಳ ಸಂಖ್ಯೆಯನ್ನು ನಿಯಂತ್ರಿಸಲಾಗುತ್ತದೆ. ಈ ವರ್ಷದ ಅಂತ್ಯದೊಳಗಾಗಿ 4.68 ಲಕ್ಷ ಕಡಲ ನಾಯಿಗಳನ್ನು ಕೊಲ್ಲಲು ಕೆನಡಾ ಸರ್ಕಾರ ಅನುಮತಿ ನೀಡಿದೆ. ಮಾರಿಷಸ್ ಸರ್ಕಾರ ವಾಣಿಜ್ಯ ಉದ್ದೇಶದ ಹಣ್ಣುಗಳಿಗೆ ಮಾರಕವಾಗಿರುವ 18 ಸಾವಿರ ಬಾವಲಿಗಳನ್ನು ಈ ವರ್ಷ ಕೊಲ್ಲಲಿದೆ. ಪ್ರತಿವರ್ಷ ಮೇ ತಿಂಗಳಿನಲ್ಲಿ ಆಸ್ಟ್ರೇಲಿಯಾ ಸರ್ಕಾರದ ಸೂಚನೆಯಂತೆ, ಆ ದೇಶದ ರಾಷ್ಟ್ರೀಯ ಪ್ರಾಣಿಯಾದ ಕಾಂಗರೂಗಳನ್ನು ಕೊಲ್ಲಲಾಗುತ್ತದೆ. ಈ ವರ್ಷ ಕೊಂದ ಕಾಂಗರೂಗಳ ಸಂಖ್ಯೆ 2 ಸಾವಿರ.

ಡಿಸೆಂಬರ್ 1ರ ಅಧಿಸೂಚನೆಯ ನಂತರ ಆಯ್ದ ವನ್ಯಜೀವಿಗಳನ್ನು ಕೊಲ್ಲುವ ಪ್ರಕ್ರಿಯೆ ಹಿಂದೆಂದೂ ಕಂಡಿರದಂತಹ ವೇಗದಲ್ಲಿ, ವ್ಯಾಪಕವಾಗಿ ನಡೆಯುತ್ತಿದೆಯೆಂಬುದು ಪ್ರಾಣಿ ಹಕ್ಕು ಸಂಘಟನೆಗಳ ಆಪಾದನೆ. ಈ ಸಮಸ್ಯೆಯ ಮೂಲವಿರುವುದು ಅರಣ್ಯಗಳ ಒತ್ತುವರಿ, ಆವಾಸಗಳ ನಾಶದಲ್ಲಿ. ಆ ಸಮಸ್ಯೆಗಳ ಕಡೆಗೆ ಗಮನ ಕೊಡದೆ, ನಮ್ಮ ಅನುಕೂಲಕ್ಕಾಗಿ ವನ್ಯಜೀವಿಗಳನ್ನು ಕೊಲ್ಲುವ ಈ ಹೊಸ ಪರಿಪಾಠ ತಪ್ಪು ಎಂಬುದು ಈ ಸಂಘಟನೆಗಳ ವಾದ. ಅದು ನಿಜವಾದರೂ ಆ ಸಮಸ್ಯೆಗೆ ಸುಲಭ ಪರಿಹಾರವಿಲ್ಲ.

ಬೆಳೆಗಳನ್ನು ಕಾಯುವುದು, ಸೌರವಿದ್ಯುತ್ ಬೇಲಿಗಳನ್ನು ಅಳವಡಿಸುವುದು ಮುಂತಾದವುಗಳೊಡನೆ ಘಾಟುಳ್ಳ ತುಂತುರು ದ್ರವದ ಬಳಕೆ, ಮೆಣಸಿನ ಪುಡಿ ಪೇಸ್ಟ್‌ಗಳನ್ನು ಉರಿಸುವುದು, ಆನೆಗಳ ಆರ್ತನಾದವನ್ನು ಧ್ವನಿ ಮುದ್ರಿಸಿಕೊಂಡು ಅವುಗಳಿಂದ ಆನೆಗಳನ್ನು ಹಿಮ್ಮೆಟ್ಟಿ ಸುವುದು, ಜಮೀನಿನ ಅಂಚಿನಲ್ಲಿ ಜೇನು ಸಾಕುವುದು ಮುಂತಾದ ಅನೇಕ ಸ್ಥಳೀಯ ತಂತ್ರಗಳು ಬಳಕೆಯಲ್ಲಿವೆ.

ವನ್ಯಜೀವಿಗಳ ದಟ್ಟಣೆ ಕಡಿಮೆಯಿದ್ದು  ಕೃಷಿ ಪ್ರದೇಶ ಚಿಕ್ಕದಿದ್ದಾಗ ಈ ಕ್ರಮಗಳು ಯಶಸ್ವಿಯಾಗಿರುವ ಅನೇಕ ಉದಾಹರಣೆಗಳಿವೆ. ಆದರೆ ಪದೇಪದೇ ವನ್ಯಜೀವಿಗಳ ದಾಳಿಗೆ ಈಡಾಗುವ ಪ್ರದೇಶಗಳಲ್ಲಿ ಈ ವಿಧಾನಗಳು ಹೆಚ್ಚು ಪ್ರಯೋಜನಕಾರಿಯಾಗಿಲ್ಲ. ‘ನೂರು ಕ್ವಿಂಟಲ್ ಕಾಬೂಲು ಕಡಲೆ ಇಳುವರಿ ಬರುವ ಕಡೆ  ನೀಲ್‌ಗಾಯ್‌ಗಳಿಂದ 55 ಕ್ವಿಂಟಲ್‌ ನಾಶವಾದರೆ ನನ್ನ ಕುಟುಂಬ ಹೇಗೆ ಬದುಕಬೇಕು’ ಎಂಬುದು ಬಿಹಾರದ ಮಕೋಮಾದ ಮುಖಿಯಾ ಸಿಂಗ್ ಪ್ರಶ್ನೆ. ಮಾಗಡಿ ತಾಲ್ಲೂಕಿನ ಭಂಟರಕುಪ್ಪೆ ಗ್ರಾಮದ ಮುನಿವೆಂಕಟಯ್ಯನವರ ಸಂಕಟ ಇದಕ್ಕಿಂತ ಭಿನ್ನವಲ್ಲ. ಪುಂಡು ಕಾಡಾನೆಗಳು ಹಟ ಹಿಡಿದಂತೆ ಪ್ರತಿನಿತ್ಯ ತಮ್ಮ ಬದುಕನ್ನು ನಾಶಮಾಡುತ್ತಿವೆ ಎಂಬುದು ಅವರ ಆಕ್ರೋಶ.

ಕಂಟಕಕಾರಿ ವನ್ಯಜೀವಿಗಳನ್ನು ಗುರುತಿಸಿ, ಕೊಲ್ಲುವ ಪ್ರಕ್ರಿಯೆ ವನ್ಯಜೀವಿ ನಿರ್ವಹಣೆಯ ಅವಿಭಾಜ್ಯ ಅಂಗವಾಗಿರಬೇಕು ಎಂಬುದು ಎಲ್ಲ ವನ್ಯಜೀವಿ ವಿಜ್ಞಾನಿಗಳ ಅಭಿಮತ.

ಆದರೆ ಇದನ್ನು ಬಳಸುವ ಮುನ್ನ ಹಲವಾರು ಕೆಲಸಗಳು ನಡೆಯಲೇಬೇಕೆಂಬುದು ಅವರ ಒತ್ತಾಯ. ವನ್ಯಜೀವಿಗಳ ಸ್ಥಿತಿಗತಿ, ಅವುಗಳ ಸಂಖ್ಯೆ, ದಟ್ಟಣೆ, ಅವುಗಳಲ್ಲಿನ ಏರಿಳಿತ, ಅವುಗಳಿಂದಾಗುತ್ತಿರುವ ಬೆಳೆ ಹಾನಿಯ ಪ್ರಮಾಣ ಮುಂತಾದವುಗಳಿಗೆ ಸಂಬಂಧಿಸಿದಂತೆ ನಿಖರ ಮಾಹಿತಿಗಳಿರಬೇಕು.

ಈ ಯಾವ ಮಾಹಿತಿಯೂ ಇಲ್ಲದೆ ಕೈಗೊಳ್ಳುವ ಕಲಿಂಗ್ ಕ್ರಮವನ್ನು ವಿಜ್ಞಾನಿಗಳು ಒಪ್ಪುವುದಿಲ್ಲ. ಉತ್ತರಾಖಂಡದಲ್ಲಿ ಕಾಡು ಹಂದಿಗಳಿಂದಾಗುತ್ತಿರುವ ಬೆಳೆಯ ನಾಶ ಹೆಚ್ಚಾಗಿದೆ. ಆದ್ದರಿಂದ ಕಾಡುಹಂದಿಗಳ ಸಂಖ್ಯೆ ಹೆಚ್ಚಾಗಿದೆಯೆಂಬ ನಿರ್ಧಾರಕ್ಕೆ ಪರಿಸರ ಸಚಿವಾಲಯ ಬಂದಿದ್ದು ಕಾಡು ಹಂದಿಗಳನ್ನು ಕೊಲ್ಲಲು ಅನುಮತಿ ನೀಡಿದೆ.

ಕೋತಿಗಳು ಮತ್ತು ನೀಲ್‌ಗಾಯ್‌ಗಳನ್ನು ಕೊಲ್ಲುವ ನಿರ್ಧಾರದ ಹಿಂದೆಯೂ ಇದೇ ಅವೈಜ್ಞಾನಿಕ ಧೋರಣೆಯಿದೆ ಎಂಬುದು ವಿಜ್ಞಾನಿಗಳ ಟೀಕೆ. ವನ್ಯಜೀವಿಗಳ ಸಂಖ್ಯೆ ಹೆಚ್ಚಾದಷ್ಟೂ ಜನ- ವನ್ಯಜೀವಿಗಳ ನಡುವಿನ ಸಂಘರ್ಷ ಹೆಚ್ಚುತ್ತದೆಂಬ ಮೂಲಭೂತ ನಂಬಿಕೆಯೇ ಪ್ರಶ್ನಾರ್ಹವೆನ್ನುವುದು ಅನೇಕ ವಿಜ್ಞಾನಿಗಳ ನಿಲುವು.

ಮೈಸೂರು ವಿಶ್ವವಿದ್ಯಾಲಯದ ಸಂರಕ್ಷಣಾ ಜೀವ ವಿಜ್ಞಾನಿ ಡಾ. ಮೇವಾಸಿಂಗ್, ಕಳೆದ 25 ವರ್ಷಗಳಿಂದ, ಮೈಸೂರಿನಿಂದ ಎಲ್ಲ ದಿಕ್ಕುಗಳಲ್ಲಿ ಹೊರಗೆ ಹೋಗುವ ರಸ್ತೆಗಳಲ್ಲಿ, 100 ಕಿ.ಮೀ.ವರೆಗೆ ಬಾನೆಟ್ ಮಕಾಕ್‌ಗಳ (ಕೋತಿಗಳ) ಅಧ್ಯಯನ ಮಾಡಿದ್ದಾರೆ.

ಈ ಅವಧಿಯಲ್ಲಿ ಅವುಗಳ ಸಂಖ್ಯೆ ಶೇಕಡ 60ರಷ್ಟು ಕಡಿಮೆ ಯಾಗಿರುವುದನ್ನು ದಾಖಲಿಸಿದ್ದಾರೆ. ಆದರೆ ಅವುಗಳಿಂದ ಇಂದಿಗೂ ಸಾಕಷ್ಟು ಬೆಳೆಹಾನಿಯಾಗುತ್ತಿದೆ. ವನ್ಯಜೀವಿಯೊಂದು ಮತ್ತೆ ಮತ್ತೆ ಕಾಣುತ್ತದೆಂಬ ಏಕಮಾತ್ರ ಕಾರಣದಿಂದ ಅವುಗಳ ಸಂಖ್ಯೆ ಏರಿದೆಯೆಂದು ಭಾವಿಸುವುದು ಸರಿಯಲ್ಲವೆಂಬುದು ವಿಜ್ಞಾನಿಗಳ ವಾದ. ಅವೈಜ್ಞಾನಿಕವಾಗಿ ನಡೆಸುವ ಕಲಿಂಗ್‌ನಿಂದ ತೊಂದರೆಯೇ ಹೆಚ್ಚೆಂಬುದು ವನ್ಯಜೀವಿ ಸಂಶೋಧಕರ ಖಚಿತ ಧೋರಣೆ.

ಮಾನವ- ವನ್ಯಜೀವಿಗಳ ಸಂಘರ್ಷ ಒಂದು ಸಂಕೀರ್ಣ ಸಮಸ್ಯೆ. ಅದಕ್ಕೆ ಸೂತ್ರ ರೂಪದ ಸರಳ ಪರಿಹಾರ ಅಸಾಧ್ಯ. ಬೆಳೆಗಳನ್ನು ಕಾಯುವುದು, ಸೌರವಿದ್ಯುತ್ ಬೇಲಿ, ಹಿಮ್ಮೆಟ್ಟಿಸುವ ಸ್ಥಳೀಯ ತಂತ್ರಗಳ ಬಳಕೆ, ಪುಂಡು ಜೀವಿಗಳ ಸಂತಾನಶಕ್ತಿ ಹರಣ, ಸ್ಥಳಾಂತರ, ಮಾರುಕಟ್ಟೆ ದರದಲ್ಲಿ ಬೆಳೆ ನಾಶಕ್ಕೆ ಪರಿಹಾರ- ಈ ಎಲ್ಲ ಮಾರ್ಗಗಳಿಗೂ ಅದರದೇ ಆದ ಸ್ಥಾನವಿದೆ. ಈ ಎಲ್ಲ ಪರಿಹಾರಗಳಲ್ಲೂ ಸರ್ಕಾರ ರೈತರ ಜೊತೆಯಲ್ಲಿ ನಿಲ್ಲಬೇಕು.

ಅಗತ್ಯವಾದ ಸಂದರ್ಭಗಳಲ್ಲಿ ಕಂಟಕಕಾರಿ ಜೀವಿಗಳನ್ನು ಕೊಲ್ಲುವ ನಿರ್ಧಾರವನ್ನೂ ಕೈಗೊಳ್ಳಬೇಕು. ವೈಜ್ಞಾನಿಕವಾದ ಈ ಹಾದಿ ಕಷ್ಟಕರ, ಗುರಿ ದೂರ, ನಿಜ. ಆದರೆ ಅದೇ ಈ ಜ್ವಲಂತ ಸಮಸ್ಯೆಗಿರುವ ಪ್ರಾಮಾಣಿಕವಾದ ಪರಿಹಾರ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT