ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಗೀತ ಕಲಿಯುವವರಿಗೆ ಯೂಜಿಶಿಯನ್ ಆ್ಯಪ್...

Last Updated 4 ಅಕ್ಟೋಬರ್ 2016, 19:30 IST
ಅಕ್ಷರ ಗಾತ್ರ

ಭಾರತದ ಆಧುನಿಕ ಪೂರ್ವ ಕಾಲದಲ್ಲಿ ಸಂಗೀತ ಕಲಿಕೆ ಎಂದರೆ ಶ್ರದ್ಧೆ ಮತ್ತು ಗುರುಭಕ್ತಿಯ ಪ್ರತೀಕ ಎಂದೇ ಅರ್ಥ! ಗುರುವಿನ ಗುಲಾಮರಾಗುವ ತನಕ ಸಂಗೀತ ಸಿದ್ಧಿಸುವುದಿಲ್ಲ ಎಂದು ಹಲವಾರು ಸಂತರು, ದಾಸರು ತಮ್ಮ ಕೀರ್ತನೆಗಳ ಮೂಲಕ ಹೇಳಿರುವುದನ್ನು ನಾವು ಕೇಳಿದ್ದೇವೆ! ಕಾಲ ಬದಲಾದಂತೆ  ಸಂಗೀತ ಕಲಿಕೆಯಲ್ಲೂ ಸಾಕಷ್ಟು ಬದಲಾವಣೆಗಳಾಗಿವೆ.

ಗುರುಕುಲ ಪದ್ಧತಿಯಿಂದ ಹಿಡಿದು ಇಂದಿನ ಸಂಗೀತ ಶಾಲೆ, ವಿದ್ಯಾಲಯಗಳವರೆಗೂ ಮಹತ್ವದ ಪಲ್ಲಟಗಳಾಗಿವೆ. ಇದೀಗ ತಂತ್ರಜ್ಞಾನದ ಪರಿಣಾಮ ಸಂಗೀತ ಕಲಿಕೆ ಕೂಡ  ಬೆರಳ ತುದಿಯಲ್ಲೇ ಲಭ್ಯವಿದೆ.

ಈ ಸ್ಮಾರ್ಟ್‌ಫೋನ್ ಯುಗದಲ್ಲಿ ಸಂಗೀತ ಕಲಿಯುಲು ನಾವು ಗುರು  ಹುಡುಕಿಕೊಂಡು ಹೋಗುವ ಪ್ರಮೇಯವೇ ಇಲ್ಲ! ಹಾಗೇ ಸಂಗೀತ ಶಾಲೆ, ವಿದ್ಯಾಲಯಗಳಿಗೂ ಹೋಗುವ ಜರೂರತ್ ಕೂಡ ಇಲ್ಲ! ಕೇವಲ ಒಂದು ಸ್ಮಾರ್ಟ್‌ಫೋನ್ ಮೂಲಕವೇ ಸಂಗೀತವನ್ನು ಅಭ್ಯಾಸ ಮಾಡಬಹುದು! ಅದಕ್ಕಾಗಿಯೇ ಯೂಜಿಶಿಯನ್ ಎಂಬ ಕಂಪೆನಿ ಸಂಗೀತದ ಗಂಧ ಗಾಳಿ ಗೊತ್ತಿಲ್ಲದ ಜನಸಾಮಾನ್ಯರಿಗಾಗಿ ನೂತನ ಆ್ಯಪ್ ಅನ್ನು ಸಿದ್ಧಪಡಿಸಿ ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. ಆಸಕ್ತರು ಇದರ ಮೂಲಕ ಸುಲಭವಾಗಿ ಸಂಗೀತ ಕಲಿಯಬಹುದು ಎನ್ನುತ್ತಾರೆ ಯೂಜಿಶಿಯನ್ ಆ್ಯಪ್‌ನ ವಿನ್ಯಾಸಕರು.

ಆಂಡ್ರಾಯ್ಡ್‌ ಮತ್ತು ಐಓಎಸ್ ಪ್ಲಾಟ್‌ಪಾರಂ ಬಳಕೆದಾರರು ಸ್ಮಾರ್ಟ್‌ಫೋನ್‌ನಲ್ಲಿ ಯೂಜಿಶಿಯನ್ (Yousician)  ಆ್ಯಪ್ ಡೌನ್‌ಲೋಡ್ ಮಾಡಿಕೊಂಡು ಸಂಗೀತ ಕಲಿಯಬಹುದು. ಗಿಟಾರ್, ಪಿಯಾನೊ, ಡ್ರಮ್ಸ್ ವಾದ್ಯಗಳನ್ನು ನುಡಿಸಬಹುದು. ವಿಶೇಷವಾಗಿ ಅಭಿವೃದ್ಧಿಪಡಿಸಿರುವ ಈ ಆ್ಯಪ್ ಹೊಸದಾಗಿ ಮತ್ತು ಸ್ವತಂತ್ರವಾಗಿ ಅಭ್ಯಾಸ ಮಾಡುವವರಿಗೆ ಆಡಿಯೊ, ವಿಡಿಯೊ ಮತ್ತು ಬರವಣಿಗೆ ಮೂಲಕ ಮಾರ್ಗದರ್ಶನ ನೀಡುತ್ತದೆ.

ನಮ್ಮ ಸ್ಮಾರ್ಟ್‌ಫೋನ್‌ನಲ್ಲೇ ಗಿಟಾರ್ ಮತ್ತು ಪಿಯಾನೊ ಅಭ್ಯಾಸ ಮಾಡುವುದಕ್ಕಾಗಿ ವಾದ್ಯಗಳ ಗ್ರಾಫಿಕ್ಸ್ ಚಿತ್ರಗಳನ್ನು ಬಳಸಲಾಗಿದೆ. ಪಿಯಾನೊದ ಕೀಗಳು ಮತ್ತು ಗಿಟಾರ್ ತಂತಿಯನ್ನು ಸ್ಪರ್ಶಿಸಿದರೆ ಸಾಕು ನಾದ ಚಿಮ್ಮುತ್ತದೆ. ಈ ಆ್ಯಪ್‌ನಲ್ಲಿ ನಾಲ್ಕು ಹಂತದ ಕಲಿಕಾ ಕೋರ್ಸ್‌ಗಳನ್ನು ಅಳವಡಿಸಲಾಗಿದೆ. ಮೊದಲ ಹಂತದಲ್ಲಿ ಪೂರ್ಣವಾಗಿ ಕಲಿತವರು ಎರಡನೇ ಹಂತಕ್ಕೆ ಪ್ರವೇಶ ಪಡೆಯುತ್ತಾರೆ.

ಹೀಗೆ ನಾಲ್ಕು ಹಂತಗಳಲ್ಲಿ ಯಶಸ್ವಿಯಾದವರು ಸುಲಭವಾಗಿ ಸಂಗೀತ ಕಚೇರಿಗಳನ್ನು ನಡೆಸಿಕೊಡುವಷ್ಟು ಸಾಮರ್ಥ್ಯ ಅಥವಾ ಪರಿಣತಿ ಪಡೆದಿರುತ್ತಾರೆ ಎಂದು ಆ್ಯಪ್ ವಿನ್ಯಾಸಕರು ಹೇಳುತ್ತಾರೆ. ಪ್ರಸ್ತುತ ಈ ಆ್ಯಪ್ ನಲ್ಲಿ ಭಾರತೀಯ ಸಂಗೀತಕ್ಕೆ ಸಂಬಂಧಿಸಿದ ಯಾವ ಪ್ರಕಾರವನ್ನು ಅಳವಡಿಸಿಲ್ಲ.

ಇದರಲ್ಲಿ ಪಾಪ್, ರಾಕ್ ಪ್ರಕಾರಗಳ ಕಲಿಕೆ ಹಾಗೂ ಗಿಟಾರ್, ಪಿಯಾನೊ, ಡ್ರಮ್ಸ್ ವಾದ್ಯಗಳನ್ನು ಮಾತ್ರ ನುಡಿಸಬಹುದಾಗಿದೆ. ಮುಂದಿನ ದಿನಗಳಲ್ಲಿ ಭಾರತೀಯ ಶಾಸ್ತ್ರಿಯ ಸಂಗೀತ ಪ್ರಕಾರಗಳನ್ನು ಅಳವಡಿಸುವ ಯೋಚನೆ ಇದೆ ಎನ್ನುತ್ತಾರೆ ಯೂಜಿಶಿಯನ್ ಆ್ಯಪ್ ಪ್ರವರ್ತಕರು.

ಬೇಸಿಕ್ ಕಲಿಕೆ ಉಚಿತವಾಗಿದ್ದು ನಾಲ್ಕು ಹಂತದ ಕೋರ್ಸ್‌ಗಳನ್ನು ಕಲಿಯಬೇಕಾದರೆ ಹಣ ಪಾವತಿ ಮಾಡಬೇಕು. ಒಂದು ತಿಂಗಳಿಗೆ ₹ 900   ಶುಲ್ಕ ತೆರಬೇಕು. ಕಲಿಕೆಯ ಸಂದರ್ಭದಲ್ಲಿ ನಮ್ಮ ಫೋನ್ ಪರದೆ ಎರಡು ಭಾಗವಾಗುತ್ತದೆ. ಕೆಳಗಿನ ಪರದೆಯಲ್ಲಿ ಪಿಯಾನೊ ಕೀಗಳನ್ನು ನುಡಿಸಬೇಕಾಗುತ್ತದೆ.

ಮೇಲಿನ ಪರದೆಯಲ್ಲಿ ಕಲಿಕೆಗೆ ಮಾರ್ಗದರ್ಶನ ಮಾಹಿತಿ ಬರುತ್ತಿರುತ್ತದೆ. ಉದಾಹರಣೆಗೆ ಸ.ರಿ.ಗ.ಮ.ಪ.ದ.ನಿ.ಸ. ನುಡಿಸಲು ಯಾವ ಕೀಗಳನ್ನು ಬಳಸಿದರೆ ನಾದ ಒಮ್ಮುತ್ತದೆ ಎಂಬುದನ್ನು ಮೇಲಿನ ಪರದೆಯಲ್ಲಿ ವಿಡಿಯೊ, ಆಡಿಯೊ ಮತ್ತು ಗ್ರಾಫಿಕ್ಸ್‌ನಲ್ಲಿ ತೋರಿಸಲಾಗುತ್ತದೆ. ಮೇಲಿನ ಪರದೆ ನೋಡಿ ಕೊಂಡೇ ಆಸಕ್ತರು ಸಂಗೀತ ಅಭ್ಯಸಿಸಬಹುದು.

ಇದು ಆಫ್‌ಲೈನ್‌ನಲ್ಲಿ ಲಭ್ಯವಿಲ್ಲವಾದ್ದರಿಂದ ಸಂಗೀತ ಕಲಿಕೆಗೆ ಇಂಟರ್‌ನೆಟ್ ಸಂಪರ್ಕ ಅವಶ್ಯಕವಾಗಿ ಬೇಕೇ ಬೇಕು. ಆಪ್ ಡೌನ್‌ಲೋಡ್ ಮಾಡಿಕೊಂಡ ಮೇಲೆ ಅಭ್ಯಾಸದ ಪಠ್ಯವನ್ನು ಸಂಪೂರ್ಣವಾಗಿ ಓದಿದ ಮೇಲೆ ಕಲಿಕೆಯಲ್ಲಿ ತೊಡಗುವುದು ಉತ್ತಮ. ಯೂಜಿಶಿಯನ್ ಆ್ಯಪ್ ಗೂಗಲ್ ಪ್ಲೆಸ್ಟೋರ್‌ನಲ್ಲಿ ಲಭ್ಯವಿದ್ದು ಸಂಗೀತ ಆಸಕ್ತರು ಉಚಿತವಾಗಿ ಡೌನ್‌ಲೋಡ್ ಮಾಡಿಕೊಳ್ಳಬಹುದು. ಹೆಚ್ಚಿನ ಮಾಹಿಗೆ ಈ ಕೆಳಕಂಡ ವೆಬ್‌ಸೈಟ್ ನೋಡಬಹುದು.
http://get.yousician.com

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT