ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಘವೇಶ್ವರ ಶ್ರೀಗಳ ಅರ್ಜಿಗೆ ಆಕ್ಷೇಪ

ಆಡಳಿತಾಧಿಕಾರಿ ನೇಮಕಕ್ಕೆ ಅರ್ಜಿ ವಿಚಾರಣೆ ವಿಭಾಗೀಯ ಪೀಠಕ್ಕೆ ವರ್ಗಾವಣೆ
Last Updated 4 ಅಕ್ಟೋಬರ್ 2016, 19:30 IST
ಅಕ್ಷರ ಗಾತ್ರ

ಬೆಂಗಳೂರು: ಹೊಸನಗರದ ರಾಮಚಂದ್ರಾಪುರ ಮಠಕ್ಕೆ ಆಡಳಿತಾಧಿಕಾರಿ ನೇಮಕ ಮಾಡಬೇಕೆಂಬ ಮನವಿ ಕುರಿತಂತೆ ಮುಖ್ಯ ಕಾರ್ಯದರ್ಶಿ  ನಡೆಸುತ್ತಿರುವ ವಿಚಾರಣೆಗೆ ತಡೆ ನೀಡುವಂತೆ ಕೋರಿದ್ದ ಅರ್ಜಿಯನ್ನು ಹೈಕೋರ್ಟ್‌ ಏಕಸದಸ್ಯ ಪೀಠವು ಮುಖ್ಯ ನ್ಯಾಯಮೂರ್ತಿಗಳ ವಿಭಾಗೀಯ ಪೀಠಕ್ಕೆ ವರ್ಗಾಯಿಸಿದೆ.

ಈ ಕುರಿತಂತೆ ರಾಮಚಂದ್ರಾಪುರ ಮಠದ ಪೀಠಾಧ್ಯಕ್ಷ ರಾಘವೇಶ್ವರ ಭಾರತೀ ಸ್ವಾಮೀಜಿ ಸಲ್ಲಿಸಿರುವ ಅರ್ಜಿಯನ್ನು ನ್ಯಾಯಮೂರ್ತಿ ಎ.ಎಸ್‌.ಬೋಪಣ್ಣ ಅವರಿದ್ದ ಏಕಸದಸ್ಯ ಪೀಠವು ಮಂಗಳವಾರ ವಿಚಾರಣೆ ನಡೆಸಿತು.

ಶ್ರೀಗಳ ಪರ ಹಾಜರಾಗಿದ್ದ ಹಿರಿಯ ವಕೀಲ ಕೆ.ಜಿ.ರಾಘವನ್ ಅವರು, ‘ಆಡಳಿತಾಧಿಕಾರಿ ನೇಮಕ ಮಾಡಬೇಕು ಎಂಬ ಮನವಿಯನ್ನು ವಿಚಾರಣೆ ನಡೆಸಲು ಮುಖ್ಯ ಕಾರ್ಯದರ್ಶಿ ಅವರಿಗೆ ಮುಜರಾಯಿ ಕಾಯ್ದೆ ಪ್ರಕಾರ ಅವಕಾಶವಿಲ್ಲ’ ಎಂದು ಹೇಳಿದರು.

ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಸರ್ಕಾರಿ ವಕೀಲ ಡಿ. ಲಕ್ಷ್ಮೀನಾರಾಯಣ ಅವರು, ‘ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಗಳ ನೇತೃತ್ವದ ವಿಭಾಗೀಯ ಪೀಠದ ನಿರ್ದೇಶನದ ಅನುಸಾರವೇ ಮುಖ್ಯ ಕಾರ್ಯದರ್ಶಿ ಈ ಕುರಿತ ಮನವಿ ವಿಚಾರಣೆ ನಡೆಸುತ್ತಿದ್ದಾರೆ. ಒಂದು ವೇಳೆ ಅರ್ಜಿದಾರರಿಗೆ ಏನಾದರೂ ಆಕ್ಷೇಪಣೆ ಇದ್ದಲ್ಲಿ ವಿಭಾಗೀಯ ಪೀಠದಲ್ಲೇ ಅದನ್ನು ಪ್ರಶ್ನಿಸಬಹುದು’ ಎಂದರು. ಇದನ್ನು ಮಾನ್ಯ ಮಾಡಿದ ನ್ಯಾಯಮೂರ್ತಿಗಳು ಅರ್ಜಿಯನ್ನು ವಿಭಾಗೀಯ ಪೀಠಕ್ಕೆ ವರ್ಗಾಯಿಸಿ ಆದೇಶಿಸಿದರು.

8ಕ್ಕೆ ಪ್ರತಿಭಟನೆ
ರಾಮಚಂದ್ರಾಪುರ ಮಠಕ್ಕೆ ಆಡಳಿತಾಧಿಕಾರಿ ನೇಮಕ ಮಾಡಿ ತನ್ನ ಸುಪರ್ದಿಗೆ ಪಡೆಯಲು ಸರ್ಕಾರ ಯತ್ನಿಸುತ್ತಿರುವುದು ಅನ್ಯಾಯ ಎಂದು ರಾಮಚಂದ್ರಾಪುರ ಮಠದ ಪ್ರಕಟಣೆ ತಿಳಿಸಿದೆ.

ಶ್ರೀಗಳಿಂದ ಅವ್ಯವಹಾರ ಆರೋಪ
ರಾಘವೇಶ್ವರ ಶ್ರೀಗಳು ಮಠಾಧಿಪತಿಯಾಗಿ ಅನುಸರಿಸಬೇಕಾದ ಧಾರ್ಮಿಕ ನಿಯಮಗಳನ್ನು ಉಲ್ಲಂಘಿಸಿದ್ದಾರೆ. ಹಲವಾರು ಕ್ರಿಮಿನಲ್‌ ಪ್ರಕರಣಗಳಲ್ಲಿ ಆರೋಪಿಯಾಗಿದ್ದಾರೆ.  ಮಠದ ಹಣಕಾಸು ವ್ಯವಹಾರಗಳಲ್ಲಿ ಭಾರಿ ಅವ್ಯವಹಾರ ನಡೆದಿರುವ ದೂರುಗಳಿವೆ.

ಶ್ರೀಗಳು ತಮ್ಮ ನಡತೆಯಿಂದ ಮಠದ ಘನತೆಯನ್ನು ಕುಗ್ಗಿಸಿದ್ದಾರೆ. ಸರ್ಕಾರ ಮಠದ ಅವ್ಯವಹಾರಗಳನ್ನು ಗಮನಿಸಿಯೂ ಕಣ್ಣು ಮುಚ್ಚಿ ಕುಳಿತಿದೆ.ನಾವು ಶ್ರೀಮಠದ ಅನನ್ಯ ಭಕ್ತರಾಗಿದ್ದು  ಇಲ್ಲಿ ನಡೆಯುತ್ತಿರುವ ಅವ್ಯವಹಾರಗಳನ್ನು ತಡೆಯಲು ಕೂಡಲೇ ಆಡಳಿತಾಧಿಕಾರಿ ನೇಮಿಸಲು ಸರ್ಕಾರಕ್ಕೆ ನಿರ್ದೇಶಿಸಬೇಕು ಎಂದು ಕೋರಿ ಎದುರ್ಕುಳ ಈಶ್ವರಭಟ್‌ ಸೇರಿದಂತೆ ಆರು ಜನ ಸಾರ್ವಜನಿಕ ಹಿತಾಸಕ್ತಿ ಅರ್ಜಿ  (ಪಿಐಎಲ್‌) ಸಲ್ಲಿಸಿದ್ದಾರೆ.

ಈ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಎಸ್‌.ಕೆ.ಮುಖರ್ಜಿ ನೇತೃತ್ವದ ವಿಭಾಗೀಯ ಪೀಠ ವಿಚಾರಣೆ ನಡೆಸುತ್ತಿದ್ದು, ಅರ್ಜಿದಾರರ ಮನವಿ ಪರಿಶೀಲಿಸುವಂತೆ ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಮಧ್ಯಂತರ ಆದೇಶದ ಮೂಲಕ  ನಿರ್ದೇಶನ ನೀಡಿತ್ತು. ಈ ನಿರ್ದೇಶನದ ಅನ್ವಯ ಮುಖ್ಯ ಕಾರ್ಯದರ್ಶಿ ಮನವಿ ವಿಚಾರಣೆ ನಡೆಸುತ್ತಿದ್ದಾರೆ.

‘ಮಠವನ್ನು ಉಳಿಸಿಕೊಳ್ಳುವ ದಿಸೆಯಲ್ಲಿ ಇದೇ 8ರಂದು ಹೊಸನಗರದ  ರಾಮಚಂದ್ರಾಪುರ ಮಠದಲ್ಲಿ ಬೆಳಿಗ್ಗೆ 10 ಗಂಟೆಯಿಂದ ಸಂಜೆವರೆಗೆ ಭಕ್ತರಿಂದ ಮೌನ ಪ್ರತಿಭಟನೆ ಮತ್ತು ಉಪವಾಸ ನಡೆಸಲಾಗುತ್ತಿದೆ’ ಎಂದು ತಿಳಿಸಲಾಗಿದೆ. ಪ್ರತಿಭಟನೆ ನೇತೃತ್ವವನ್ನು ರಾಘವೇಶ್ವರ ಶ್ರೀಗಳು ವಹಿಸಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT