ಬೀದರ್‌ ಎಂಬ ‘ಮಿನಿ ಪಂಜಾಬ್‌!’

ಸಿಖ್‌ ವಿದ್ಯಾರ್ಥಿಗಳು ಇಲ್ಲಿ ಎಂಜಿನಿಯರಿಂಗ್‌ ಕಲಿಯಲು ಬರುತ್ತಿದುದ್ದಕ್ಕೆ ಎರಡು ಕಾರಣಗಳನ್ನು ಗುರುತಿಸಲಾಗಿತ್ತು. ಒಂದು– ಆ ದಿನಗಳಲ್ಲಿ ಪಂಜಾಬ್‌ನಲ್ಲಿ ಭಯೋತ್ಪಾದನೆ ಹೆಚ್ಚಾಗಿತ್ತು. ಇದರಿಂದ ಶ್ರೀಮಂತ ಪೋಷಕರು ತಮ್ಮ ಮಕ್ಕಳ ಭವಿಷ್ಯದ ಬಗ್ಗೆ ಆತಂಕಗೊಂಡಿದ್ದರು. ಎರಡು– ಬೀದರ್‌ನಲ್ಲಿ ಸಿಖ್‌ ಸಮುದಾಯವೇ ನಡೆಸುವ ಶ್ರೀ ಗುರು ನಾನಕ್‌ ದೇವ್‌ ಎಂಜಿನಿಯರಿಂಗ್‌ ಕಾಲೇಜು ಇತ್ತು.

ಬೀದರ್‌ ಎಂಬ ‘ಮಿನಿ ಪಂಜಾಬ್‌!’

ಮಸುಕು..ಮಸುಕು.. ನೆನಪು. ಅದು 1988 ರ ಸೆಪ್ಟೆಂಬರ್‌ 14 ಮತ್ತು 15. ಬೀದರ್‌ ನಗರದಲ್ಲಿ ಆರು ಸಿಖ್‌ ವಿದ್ಯಾರ್ಥಿಗಳನ್ನು ಉನ್ಮತ್ತ ಗುಂಪು ಹೊಡೆದು ಹತ್ಯೆ ಮಾಡಿತು.ಇದು ಇಡೀ ದೇಶದ ಗಮನ ಸೆಳೆಯಿತು. ಈ ದುರಂತಕ್ಕೆ ಕಾರಣವಿಷ್ಟೆ–ಸಿಖ್‌ ವಿದ್ಯಾರ್ಥಿಗಳು ಗಣೇಶೋತ್ಸವಕ್ಕೆ ಕೇಳಿದಷ್ಟು ಚಂದಾ ಕೊಡಲು ನಿರಾಕರಿಸಿದ್ದು!
ಈ ಹತ್ಯಾಕಾಂಡಕ್ಕೆ ‘ಹಲವು ಆಯಾಮ’ಗಳಿವೆ ಎನ್ನುವುದು ಬಲ್ಲವರ ಮಾತು. ಆ ಮಾತು ಇರಲಿ.

ಬೀದರ್‌ ನಗರವನ್ನು ಎಂಬತ್ತು ಮತ್ತು ತೊಂಬತ್ತರದ ದಶಕದಲ್ಲಿ ‘ಮಿನಿ ಪಂಜಾಬ್‌’ ಎಂದು ಕರೆಯಲಾಗುತ್ತಿತ್ತು. ಇಲ್ಲಿ ಎಂಜಿನಿಯರಿಂಗ್‌ ಕಲಿಯಲು ಪಂಜಾಬ್‌ ಸೇರಿದಂತೆ ಉತ್ತರ ಭಾರತದಿಂದ ವಿದ್ಯಾರ್ಥಿಗಳು ಬರುತ್ತಿದ್ದರು. ನಗರದಲ್ಲಿ ಸಂಚರಿಸುವವರಿಗೆ ಗಡ್ಡಬಿಟ್ಟು, ಪಟಗ ಹೊತ್ತ ಯುವಕರು ಐಷಾರಾಮಿ ಬೈಕ್‌ಗಳ ಮೇಲೆ ಶರವೇಗದಲ್ಲಿ ಓಡಾಡುವುದು ಕಾಣಿಸುತ್ತಿತ್ತು.

ಸಿಖ್‌ ವಿದ್ಯಾರ್ಥಿಗಳು ಇಲ್ಲಿ ಎಂಜಿನಿಯರಿಂಗ್‌ ಕಲಿಯಲು ಬರುತ್ತಿದುದ್ದಕ್ಕೆ ಎರಡು ಕಾರಣಗಳನ್ನು ಗುರುತಿಸಲಾಗಿತ್ತು. ಒಂದು– ಆ ದಿನಗಳಲ್ಲಿ ಪಂಜಾಬ್‌ನಲ್ಲಿ ಭಯೋತ್ಪಾದನೆ ಹೆಚ್ಚಾಗಿತ್ತು. ಇದರಿಂದ ಶ್ರೀಮಂತ ಪೋಷಕರು ತಮ್ಮ ಮಕ್ಕಳ ಭವಿಷ್ಯದ ಬಗ್ಗೆ ಆತಂಕಗೊಂಡಿದ್ದರು. ಎರಡು– ಬೀದರ್‌ನಲ್ಲಿ ಸಿಖ್‌ ಸಮುದಾಯವೇ ನಡೆಸುವ ಶ್ರೀ ಗುರು ನಾನಕ್‌ ದೇವ್‌ ಎಂಜಿನಿಯರಿಂಗ್‌ ಕಾಲೇಜು ಇತ್ತು.

ಮುಖ್ಯವಾಗಿ ಬೀದರ್‌ ಮತ್ತು ಸಿಖ್ಖರ ನಡುವಿನ ಗಾಢ ಸಂಬಂಧಕ್ಕೆ ಧಾರ್ಮಿಕತೆಯ ಆಯಾಮವಿದೆ. ಗುರುನಾನಕ್‌ ಧರ್ಮ ಪ್ರಚಾರಕ್ಕಾಗಿ 1512 ರಲ್ಲಿ ಬೀದರ್‌ಗೆ ಬಂದಿದ್ದರು. ಕೆಲವು ದಿನ ಇಲ್ಲಿಯೇ ಉಳಿದುಕೊಂಡಿದ್ದರು. ಹೀಗೆ ಬಂದಾಗ ಭೀಕರ ಬರಗಾಲದ ಕಾರಣದಿಂದ ಜನ ಕುಡಿಯಲು ನೀರಿಲ್ಲದೇ ಕಂಗಾಲಾಗಿದ್ದರು. ಜನರ ಕಷ್ಟ ನೋಡಲಾಗದೇ ಗುರುನಾನಕರು ಗುಡ್ಡದ ತಳಭಾಗದಲ್ಲಿದ್ದ ಕಲ್ಲನ್ನು ಕಾಲಿನಿಂದ ಸರಿಸಿದಾಗ ಝರಿ ಚಿಮ್ಮಿತಂತೆ. ಆ ಝರಿ ಇಂದಿಗೂ ಹರಿಯುತ್ತಿದೆ ಎನ್ನುವ ನಂಬಿಕೆ ಇದೆ.

ಆ ಝರಿಯನ್ನು ‘ನಾನಕ್‌ ಝೀರಾ’ ಎಂದು ಕರೆಯಲಾಗುತ್ತದೆ. ನಾನಕ್‌ ಝೀರಾ ‘ಅಮೃತಕುಂಡ’ವೆಂದು ಪ್ರಸಿದ್ಧಿ ಪಡೆದಿದೆ. ಗುರುನಾನಕ್‌ ಬಂದು ಹೋದರು. ಇಷ್ಟರಿಂದಲೇ ಬೀದರ್‌ ನಗರವನ್ನು ‘ ಮಿನಿ ಪಂಜಾಬ್‌ ’ಎಂದು ಕರೆಯಲು ಸಾಧ್ಯವೇ? ಇಲ್ಲ. ಇದರ ಹಿಂದೆ ‘ಬಿಷನ್‌ ಸಿಂಗ್‌’ ಎನ್ನುವರ ದೂರದೃಷ್ಟಿಯೂ ಇತ್ತು. ಬಿಷನ್‌ಸಿಂಗ್‌ ಅವರು ಹೈದರಾಬಾದ್‌ನಲ್ಲಿ ದೊಡ್ಡ ಗುತ್ತಿಗೆದಾರರಾಗಿದ್ದರು. 1948 ರಲ್ಲಿ ಕಟ್ಟಡ ನಿರ್ಮಾಣಕ್ಕಾಗಿ ಬೀದರ್‌ಗೆ ಬಂದರು. ಇಲ್ಲಿಗೆ ಸಿವಿಲ್‌ ಗುತ್ತಿಗೆಯನ್ನು ಪರಿಚಯಿಸಿದವರು ಇವರೇ.

ಬೀದರ್‌ ಏರ್‌ ಸ್ಟೇಷನ್‌ನಲ್ಲಿ ಐದುನೂರು ವಸತಿಗೃಹಗಳು, ಚಿತ್ರಮಂದಿರ, ಅಂತರರಾಷ್ಟ್ರೀಯ ಗುಣಮಟ್ಟದ ಈಜುಕೊಳವನ್ನು ನಿರ್ಮಿಸಿದರು. ಗುರುನಾನಕ್‌ ಮತ್ತು ಬೀದರ್‌ನ ಸಂಬಂಧವನ್ನು ಅರಿತಿದ್ದ ಬಿಷನ್‌ ಸಿಂಗ್‌ ತಮ್ಮ ಸಮುದಾಯದವರನ್ನು ಒಂದುಗೂಡಿಸಿ ಸಮಿತಿಯೊಂದರನ್ನು ರಚಿಸಿದರು. ಗುರುನಾನಕ್‌ ಉಳಿದುಕೊಂಡಿದ್ದ ಜಾಗದಲ್ಲಿ ಗುರುದ್ವಾರ ನಿರ್ಮಾಣಕ್ಕೆ ಮುಂದಾದರು. ಅದೇ ಗುರುದ್ವಾರ ಇಂದು ವಿಶ್ವದ ಗಮನ ಸೆಳೆಯುತ್ತಿದೆ.

ಬೀದರ್‌ಗೆ ಸಿಖ್ಖರು ಹೆಚ್ಚಾಗಿ ಬರಲು ಧರ್ಮದ ಜೊತೆಗೆ ಐತಿಹಾಸಿಕ ಕಾರಣವೂ ಇದೆ. ಹೈದರಾಬಾದ್‌ ನಿಜಾಮ ಹಾಗೂ ಪಂಜಾಬ್‌ ರಾಜನ ನಡುವೆ ಮಿಲಿಟರಿ ಒಪ್ಪಂದವಾಗಿತ್ತು. ಆ ವೇಳೆ ಬಂದಿದ್ದ ಬಹುತೇಕ ಸಿಖ್ಖರು ಹೈದರಾಬಾದ್‌ನಲ್ಲಿ ಉಳಿದಿದ್ದರು. 1948 ರ ನಂತರ ಐದು ಕುಟುಂಬಗಳು ಇಲ್ಲಿಗೆ ಬಂದು ನೆಲೆಸಿದವು. ಬಡತನದ ಬೇಗೆ ಮತ್ತು ಅನಕ್ಷರತೆಯಿಂದ ನರಳುತ್ತಿದ್ದ ಸ್ಥಳೀಯರ ಹಿತದೃಷ್ಟಿಯಿಂದ ಸಿಖ್ಖರು ಇಲ್ಲಿ ಆಸ್ಪತ್ರೆ, ಶಾಲೆ, ಕಾಲೇಜುಗಳನ್ನು ತೆರೆದರು.

ಭಾರತದ ಏಳುನೂರು ಜಿಲ್ಲೆಗಳಲ್ಲಿ ಅತ್ಯಂತ ಹಿಂದುಳಿದ ನೂರು ಜಿಲ್ಲೆಗಳಲ್ಲಿ ಬೀದರ್‌ ಕೂಡ ಒಂದಾಗಿತ್ತು.  1980ರಲ್ಲಿ ಪ್ರಥಮವಾಗಿ ಗುರುನಾನಕ್‌ ದೇವ್‌ ಎಂಜಿನಿಯರಿಂಗ್‌ ಕಾಲೇಜು ಆರಂಭವಾಯಿತು. ಇಲ್ಲಿ ಗುರು ನಾನಕ್‌ ರಾಷ್ಟ್ರೀಯ ಹಾಕಿ ಟೂರ್ನಿಯನ್ನು ಜೋಗಾಸಿಂಗ್‌ ಶುರು ಮಾಡಿದರು.

1989 ರಲ್ಲಿ ಹೈದರಾಬಾದ್‌ನ ತಮ್ಮ ನಿವಾಸದಲ್ಲಿ ಹತ್ಯೆಯಾದ ಜೋಗಾಸಿಂಗ್‌, ಬಿಷನ್‌ಸಿಂಗ್‌ ಅವರ ಪುತ್ರ. ಇವರ ಹತ್ಯೆಗೆ ಕಾರಣವಿದೆ. ಬೀದರ್‌ನಲ್ಲಿ ಇರುವ ಸಿಖ್ಖರಿಗೆ ಸೂಕ್ತ ರಕ್ಷಣೆ ನೀಡದೇ ಹೋಗಿದ್ದರಿಂದ ತಮ್ಮ ಸಮುದಾಯದ ವಿದ್ಯಾರ್ಥಿಗಳ ಹತ್ಯೆ ನಡೆಯಿತು ಎನ್ನುವ ಸಿಟ್ಟಿಯಿಂದ ಯುವಕನೊಬ್ಬ ಗುಂಡು ಹಾರಿಸಿ ಹತ್ಯೆ ಮಾಡಿದನು.

ಇಂಥ ಕರಾಳ ಅಧ್ಯಾಯ ಬೀದರ್‌ ಮತ್ತು ಸಿಖ್ಖರ ಇತಿಹಾಸದಲ್ಲಿ ದಾಖಲಾಗಿದೆ. ‘ಗುರುಗ್ರಂಥ ಸಾಹಿಬ್‌’ ಸ್ಥಾಪನೆಯ 300 ನೇ ವರ್ಷಾಚರಣೆ ಸಂದರ್ಭದಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಅನುದಾನ ನೀಡಿದವು. ಈ ಹಣದಿಂದ ನಗರದ ರಸ್ತೆಗಳು ವಿಸ್ತಾರಗೊಂಡವು. ಉದ್ಯಾನಗಳು ಸೌಂದರ್ಯೀಕರಣಗೊಂಡವು. 55 ಕಿಲೊಮೀಟರ್‌ನಷ್ಟು ರಿಂಗ್‌ರಸ್ತೆ ನಿರ್ಮಾಣವಾಯಿತು. ಬೀದರ್‌ ನಗರ ಅಭಿವೃದ್ಧಿಯತ್ತ ಮಗ್ಗಲು ಬದಲಿಸಿತು.

‘ಸಿಖ್ಖರು ಹಿಂದೂ ಯುವತಿಯರನ್ನು, ಸಿಖ್‌ ಯುವತಿಯರು ಹಿಂದೂ ಯುವಕರನ್ನು ಮದುವೆ ಮಾಡಿಕೊಂಡಿದ್ದಾರೆ. ಮದುವೆ ವಿಷಯದಲ್ಲಿ ವಿವಾದ ಸೃಷ್ಟಿಯಾಗಿಲ್ಲ’ ಎನ್ನುತ್ತಾರೆ ಹಿರಿಯರಾದ ಜೋಗಿಂದರ್‌ ಸಿಂಗ್‌.

ಬೀದರ್‌ನಲ್ಲಿ ನೂರಾರು ವರ್ಷಗಳಿಂದ ಶರಣರ, ಸೂಫಿ ಸಂತರ ತತ್ವಗಳು ಬೇರು ಬಿಟ್ಟಿವೆ. ಸಿಖ್ಖರ ಪ್ರವೇಶದಿಂದಾಗಿ ಬಹುಸಂಸ್ಕೃತಿಗೆ ಮತ್ತೊಂದು ಆಯಾಮ ಸಿಕ್ಕಿದೆ.
ಗುರುಅಂಗದ್‌ ಹೇಳುತ್ತಾರೆ: ‘ಗುರುದ್ವಾರ ಸ್ಥಾಪಿಸಲು ಎರಡು ಕೋಣೆಗಳು ಬೇಕೇಬೇಕು. ಗುರುಗ್ರಂಥ ವಾಚನಕ್ಕೆ ಒಂದು. ಅಡುಗೆ ಮಾಡಲು ಮತ್ತೊಂದು. ಒಂದು ವೇಳೆ ಒಂದೇ ಕೋಣೆ ಇದ್ದರೆ ಅಲ್ಲಿ ಅಡುಗೆ ಮಾಡಿ’ ಎಂದು.

‘ಸಿಖ್‌ ಧರ್ಮದ ತಿರುಳು ಬಡವರಿಗೆ ಆಶ್ರಯ ನೀಡಬೇಕು. ಹಸಿದವರಿಗೆ ಅನ್ನ ಹಾಕಬೇಕು ಎನ್ನುವುದೇ ಆಗಿದೆ. ಆದ್ದರಿಂದ ಗುರುದ್ವಾರಗಳಲ್ಲಿ ಲಂಗರ್‌ (ದಾಸೋಹ) ಯಾವಾಗಲೂ ಪ್ರಧಾನವಾಗಿರುತ್ತದೆ’ ಎನ್ನುತ್ತಾರೆ ಗುರುದ್ವಾರದ ವ್ಯವಸ್ಥಾಪಕ ದರ್ಬಾರ್‌ ಸಿಂಗ್‌. ಸಿಖ್ಖರು ಶ್ರಮಜೀವಿಗಳು. ತಾವು ಮಾಡುವ ಕೆಲಸ ದೊಡ್ಡದು, ಚಿಕ್ಕದು ಎಂದು ಯೋಚಿಸುವುದಿಲ್ಲ. ಕಸ ಗುಡಿಸುವ ಕೆಲಸ ಕೊಟ್ಟರೆ ಅದನ್ನೇ ಅಚ್ಚುಕಟ್ಟಾಗಿ ಮಾಡುತ್ತಾರೆ.

ಈಗ ಬೀದರ್‌ನಲ್ಲಿ ಇಪ್ಪತ್ತು ಸಿಖ್ಖರ ಕುಟುಂಬಗಳಿವೆ. ಇವರಲ್ಲಿ ಹೆಚ್ಚಿನವರು ಸಾರಿಗೆ, ವ್ಯಾಪಾರ, ಕೃಷಿ, ಶಿಕ್ಷಣ ಕ್ಷೇತ್ರಗಳಲ್ಲಿ ತೊಡಗಿಕೊಂಡಿದ್ದಾರೆ. ಆರುನೂರು ಮಂದಿ ಗುರುದ್ವಾರದಲ್ಲಿ ಕರಸೇವಕರಾಗಿದ್ದಾರೆ. ಎಲ್ಲರೂ ಸೇರಿ ಸಂಖ್ಯೆ ಎಂಟುನೂರು ದಾಟುವುದಿಲ್ಲ. ಆದರೆ ಇವರು ಬೀದರ್‌ನ ಚಹರೆಯನ್ನೇ ಬದಲಾಯಿಸಿದ್ದಾರೆ.

ಸಕಾರಾತ್ಮಕ ಬದಲಾವಣೆಗೆ ಬೇಕಿರುವುದು ಸಂಖ್ಯೆಯಲ್ಲ; ಗುಣಮಟ್ಟದ ಕೆಲಸ ಮತ್ತು ಬದಲಿಸುವ ದೃಢ ಸಂಕಲ್ಪ. ಇಂಥ ಗುಣ ಸಿಖ್ಖರಲ್ಲಿ ಹೇರಳವಾಗಿದೆ. ನಮ್ಮ ನಡುವೆಯೇ ಇರುವ ಈ ಸಮುದಾಯದಿಂದ ಕಲಿಯುವುದು ಮತ್ತು ಸ್ಫೂರ್ತಿ ಪಡೆಯುವುದು ಬಹಳವಿದೆ.

Comments
ಈ ವಿಭಾಗದಿಂದ ಇನ್ನಷ್ಟು
ಕಾವೇರಿಯಷ್ಟೇ ಜೀವನದಿಯೇ? ಕೃಷ್ಣಾ ಅಲ್ಲವೇ?

ಈಶಾನ್ಯ ದಿಕ್ಕಿನಿಂದ
ಕಾವೇರಿಯಷ್ಟೇ ಜೀವನದಿಯೇ? ಕೃಷ್ಣಾ ಅಲ್ಲವೇ?

8 Dec, 2017
ಕೂಡಿ ಬಾಳುವುದನ್ನು ಕಲಿಸಿದ ಸಂಕರ ಭಾಷೆಗಳು

ಈಶಾನ್ಯ ದಿಕ್ಕಿನಿಂದ
ಕೂಡಿ ಬಾಳುವುದನ್ನು ಕಲಿಸಿದ ಸಂಕರ ಭಾಷೆಗಳು

24 Nov, 2017
ಹಾ.ಮಾ.ನಾಯಕ ಮತ್ತು ರಾಜ್ಯೋತ್ಸವ ಪ್ರಶಸ್ತಿ

ಈಶಾನ್ಯ ದಿಕ್ಕಿನಿಂದ
ಹಾ.ಮಾ.ನಾಯಕ ಮತ್ತು ರಾಜ್ಯೋತ್ಸವ ಪ್ರಶಸ್ತಿ

10 Nov, 2017
ಕೊಟ್ರೇಶಿ ಮಾಸ್ತರರ ಸಮುದಾಯಮುಖಿ ಪರಸಂಗ

ಈಶಾನ್ಯ ದಿಕ್ಕಿನಿಂದ
ಕೊಟ್ರೇಶಿ ಮಾಸ್ತರರ ಸಮುದಾಯಮುಖಿ ಪರಸಂಗ

27 Oct, 2017
ಬಹುಭಾಷೆ, ಸಂಸ್ಕೃತಿಗಳ ಸಂಗಮ ‘ಔರಾದ್‌’

ಈಶಾನ್ಯ ದಿಕ್ಕಿನಿಂದ
ಬಹುಭಾಷೆ, ಸಂಸ್ಕೃತಿಗಳ ಸಂಗಮ ‘ಔರಾದ್‌’

28 Sep, 2017