ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಲೇಜಿನಲ್ಲಿ ರಾಜಕೀಯ

Last Updated 5 ಅಕ್ಟೋಬರ್ 2016, 19:30 IST
ಅಕ್ಷರ ಗಾತ್ರ

ಸಾಮಾಜಿಕ ಪ್ರಜ್ಞೆ  ಅಪರಾಧವೇ?
ವಿಶ್ವವಿದ್ಯಾಲಯಗಳ ಆವರಣದೊಳಗೆ ಪಕ್ಷ, ರಾಜಕೀಯ ನುಸುಳಲು ಬಿಡಬಾರದೆಂದು ನಿರ್ಬಂಧಿಸಲು ಹೊರಡುವುದು ಮೇಲ್ನೋಟಕ್ಕೆ ಸರಿ ಎನಿಸಿದರೂ, ಕಾಲೇಜು ವಿದ್ಯಾರ್ಥಿಗಳು ರಾಜಕೀಯ ಚಟುವಟಿಕೆಗಳಿಂದ ದೂರ ಉಳಿಯಲು ಸಾಧ್ಯವೇ ಮತ್ತು ಸಾಧುವೇ ಎಂಬುದನ್ನು ಗಮನಿಸಲು ಹೊರಟರೆ, ನಮ್ಮ ಚುನಾವಣಾ ರಾಜಕೀಯದ ಪರಿಧಿಯೊಳಗೆ ಮತದಾರರ ರೂಪದಲ್ಲಿ ನಿಂತಿರುವ ವಿದ್ಯಾರ್ಥಿಗಳು ತಮ್ಮದೇ ಆದ ರಾಜಕೀಯ ಒಲವು ಬೆಳೆಸಿಕೊಳ್ಳುವುದು, ನಿಲುವು ತಾಳುವುದು ಸ್ವಾಭಾವಿಕವೆಂಬಂತೆಯೇ ತೋರುತ್ತದೆ.

ಮತದಾರರ ರೂಪದಲ್ಲಿ ನಮ್ಮ ರಾಜಕೀಯ ವ್ಯವಸ್ಥೆಯ ಬೇರುಗಳಾಗಿ ನಿಂತಿರುವವರನ್ನು, ನಿಮಗೆ ರಾಜಕೀಯದ ಉಸಾಬರಿ ಏಕೆ? ಓದುವುದರತ್ತ ಮಾತ್ರ ಗಮನಹರಿಸಿ ಎಂದು ಬಲಪ್ರಯೋಗ ಮಾಡಿ ಉರುಳಿಸುವುದು ಸಮಂಜಸವೇ? ಅಷ್ಟಕ್ಕೂ ಅವರು ಓದಬೇಕಿರುವುದಾದರೂ ಏಕೆ? ಕೇವಲ ಹೊಟ್ಟೆಪಾಡಿಗಾಗಿಯೇ? ವಿದ್ಯಾವಂತ ಸಮೂಹ ಈ ವ್ಯವಸ್ಥೆಯೊಂದಿಗೆ ಒಡನಾಟ ಬೆಳೆಸಿಕೊಳ್ಳುವ ಅಗತ್ಯತೆ ಇಲ್ಲವೇ?

ಆಳುವವರು ಇಡುವ ಹೆಜ್ಜೆಗಳಿಂದ ಶುರುವಾಗುವ ವ್ಯವಸ್ಥೆಯನ್ನು ಸುಧಾರಿಸುವ ಅಥವಾ ಹದಗೆಡಿಸುವ ಸರಪಳಿಯಲ್ಲಿ ವಿದ್ಯಾರ್ಥಿ ಸಮೂಹವೂ ಪ್ರಮುಖ ಕೊಂಡಿಯೇ ಅಲ್ಲವೇ? ತಾವು ಏನನ್ನು ಓದುತ್ತಿದ್ದೇವೆ, ನಮ್ಮ ಓದಿನಿಂದ ನಮಗೆ ಮತ್ತು ಈ ಸಮಾಜಕ್ಕೆ ಏನು ದಕ್ಕುತ್ತದೆ ಅಂತೆಲ್ಲ ವಿದ್ಯಾರ್ಥಿಗಳು ಯೋಚಿಸಲೂ ಹೋಗಬಾರದೆ? ಆಡಳಿತ ಮಂಡಳಿ ಅಥವಾ ಸರ್ಕಾರ ವಿಶ್ವವಿದ್ಯಾಲಯಗಳ ಆವರಣದಲ್ಲಿ ರಾಜಕೀಯ ಚಟುವಟಿಕೆಗಳಿಗೆ ಅವಕಾಶ ನೀಡುವುದಿಲ್ಲವೆಂದು ಸಾರಿದರೂ, ಹಲವು ಒಳದಾರಿಗಳ ಮೂಲಕ ಎಲ್ಲ ಬಗೆಯ ರಾಜಕೀಯವೂ ಒಳನುಸುಳುತ್ತದೆ.

ವಿದ್ಯಾರ್ಥಿಗಳು ಯಾವುದೋ ಒಂದು ರಾಜಕೀಯ ಪಕ್ಷದ ಕಾರ್ಯಕರ್ತರಂತೆ ವರ್ತಿಸದೆ ತಮ್ಮ ಗ್ರಹಿಕೆಯ ಆಧಾರದಲ್ಲಿ ತಳೆಯುವ ರಾಜಕೀಯ ನಿಲುವುಗಳನ್ನು ಗೌರವಿಸಬೇಕಾದ್ದು ಎಲ್ಲರ ಜವಾಬ್ದಾರಿ. ವ್ಯಕ್ತಿ ಕೇಂದ್ರಿತ ಮನಸ್ಥಿತಿ ವಿಜೃಂಭಿಸುತ್ತಿರುವ ಹೊತ್ತಲ್ಲಿ ತಾವು ಜೀವಿಸುತ್ತಿರುವ ವ್ಯವಸ್ಥೆಯನ್ನು ಸುಧಾರಿಸುವ ನಿಟ್ಟಿನಲ್ಲಿ ಆಲೋಚಿಸುವ ವಿದ್ಯಾರ್ಥಿ ಸಮೂಹವನ್ನು ಯಾವುದೇ ವಿಶ್ವವಿದ್ಯಾಲಯ ರೂಪಿಸುತ್ತಿದ್ದರೂ ಅದು ಅಭಿನಂದನಾರ್ಹ. ಅಂತಹ ವಾತಾವರಣ ಇನ್ನಿತರ ವಿಶ್ವವಿದ್ಯಾಲಯಗಳಲ್ಲೂ ನೆಲೆಗೊಳ್ಳುವಂತಾಗಬೇಕೆಂದು ಅಪೇಕ್ಷಿಸುವುದು ಅಪರಾಧವಂತೂ ಅಲ್ಲ.

ಭಿನ್ನ ನಿಲುವುಗಳನ್ನು ಒಪ್ಪಿಕೊಳ್ಳಲು ಸಾಧ್ಯವಾಗದಿದ್ದರೂ ಕನಿಷ್ಠ ಪಕ್ಷ ಗೌರವಿಸುವ ಮೂಲಕ ಆರೋಗ್ಯಕರ ಚರ್ಚೆಯನ್ನು ಸದಾ ಕಾಲ ಚಾಲ್ತಿಯಲ್ಲಿಟ್ಟಿರುವುದು ಸಮಾಜದ ಆರೋಗ್ಯದ ದೃಷ್ಟಿಯಿಂದ ಅತ್ಯಗತ್ಯ. ಹಾಗಾಗಿ ಯಾವುದೇ ಪಂಥದ ವಿಚಾರಧಾರೆಯೇ ಆಗಿರಲಿ, ಅದನ್ನು ಒಪ್ಪುವ ಅಥವಾ ತಿರಸ್ಕರಿಸುವ ಸ್ವಾತಂತ್ರ್ಯ ಎಲ್ಲರಿಗೂ ಇದೆ, ವಿದ್ಯಾರ್ಥಿಗಳಿಗೂ. ತನ್ನ ರಾಜಕೀಯ ಕಾರ್ಯಸೂಚಿಯ ಭಾಗವಾಗಿ ಭಿನ್ನ ನಿಲುವು ಮತ್ತು ವಿಚಾರಧಾರೆಯ ದಮನಕ್ಕಾಗಿ ಇನ್ನಿಲ್ಲದ ಕಸರತ್ತು ನಡೆಸುವ ಆಳುವವರ ವಿರುದ್ಧ ದನಿ ಎತ್ತುವ ಹಕ್ಕು ವಿಶ್ವವಿದ್ಯಾಲಯಗಳಲ್ಲಿ ಓದುವ ವಿದ್ಯಾರ್ಥಿಗಳಿಂದಿಡಿದು ಎಲ್ಲರಿಗೂ ಇದೆ.

ನಮ್ಮನ್ನು ಆಳುವವರು ಅನುಸರಿಸುವ ನೀತಿಗಳು, ವಿದ್ಯಾರ್ಥಿಗಳನ್ನೂ ಒಳಗೊಂಡಂತೆ ಎಲ್ಲರ ಮೇಲೂ ನೇರ ಪರಿಣಾಮ ಬೀರುವುದರಿಂದ ವಿಶ್ವವಿದ್ಯಾಲಯಗಳ ಆವರಣದಲ್ಲೂ ಸರ್ಕಾರದ ತಪ್ಪು ನಡೆಗಳನ್ನು ವಿಮರ್ಶಿಸುವ ವಿದ್ಯಾರ್ಥಿ ಸಮೂಹ ಸೃಷ್ಟಿಯಾಗುವುದು ಸದಾಕಾಲ ಜರುಗಲೇಬೇಕಿರುವ ಬೆಳವಣಿಗೆ.

ಓದಿ ಒಂದೊಳ್ಳೆ ನೌಕರಿ ಗಿಟ್ಟಿಸಿಕೊಂಡು ತಮ್ಮ ಪಾಡಿಗೆ ತಾವು ಇದ್ದುಬಿಡೋಣವೆಂದುಕೊಳ್ಳುವ ಆರಾಮ ಜೀವಿಗಳನ್ನಷ್ಟೆ ರೂಪಿಸುವ ಹೊಣೆಗಾರಿಕೆ ನಮ್ಮ ವಿಶ್ವವಿದ್ಯಾಲಯಗಳ ಮೇಲೆ ಇರಬೇಕೆಂದು ಅಪೇಕ್ಷಿಸುವುದು ಸ್ವೀಕಾರಾರ್ಹವೇ?

ರಾಜಕೀಯ ಒಲವು-ನಿಲುವುಗಳ ಹೊರತಾಗಿಯೂ ವಿದ್ಯಾರ್ಥಿಗಳು ಎದುರಿಸುವ ಸಮಸ್ಯೆಗಳನ್ನು ಆಳುವವರ ಗಮನಕ್ಕೆ ತರುವ ಸಲುವಾಗಿ ಕೆಲ ವಿದ್ಯಾರ್ಥಿ ಸಂಘಟನೆಗಳು ನಡೆಸಿಕೊಂಡು ಬರುತ್ತಿರುವ ವಿದ್ಯಾರ್ಥಿ ಕೇಂದ್ರಿತ ಹೋರಾಟಗಳ ಕುರಿತು ಮೆಚ್ಚುಗೆ ಇದೆ. ಇದೇ ವೇಳೆ ವಿದ್ಯಾರ್ಥಿಗಳ ಸಮಸ್ಯೆಗಳನ್ನು ಕಡೆಗಣಿಸಿ ತಾವು ಬೆಂಬಲಿಸುವ ರಾಜಕೀಯ ಪಕ್ಷದ ಹಿತ ಕಾಯುವ ಸಲುವಾಗಿ ಮಾತ್ರ ಹೋರಾಡುವ ವಿದ್ಯಾರ್ಥಿ ಸಂಘಟನೆಗಳ ಬಗೆಗೆ ಬೇಸರವೂ ಇದೆ. ಆದರೂ, ತಮ್ಮದೇ ಇತಿ ಮಿತಿಯಲ್ಲಿ ವಿದ್ಯಾರ್ಥಿಗಳಲ್ಲಿ ರಾಜಕೀಯ ಮತ್ತು ಸಾಮಾಜಿಕ ಪ್ರಜ್ಞೆ ಬಿತ್ತಲು ಒಂದಿಷ್ಟಾದರೂ ಯತ್ನಿಸುತ್ತಿರುವ ಸಂಘಟನೆಗಳ ಚಟುವಟಿಕೆಗಳಿಗೆ ನಿರ್ಬಂಧ ಹೇರುವುದರಿಂದ ನಾವು ಸಾಧಿಸುವುದಾದರೂ ಏನನ್ನು ಎಂದು ಪ್ರಶ್ನಿಸಿಕೊಳ್ಳಬೇಕಿದೆ.
-ಎಚ್. ಕೆ. ಶರತ್ ಹಾಸನ

*
ಹಿಂದಿನದ್ದೆಲ್ಲಾ ಸರಿಯಿಲ್ಲವೇ?
ಇಂದಿನ ರಾಜಕಾರಣಿಗಳ ಅಪ್ರಾಮಾಣಿಕತೆ, ಅನ್ಯಾಯ, ದರ್ಪ, ಶೋಷಣೆಗಳು ಸಾಮಾನ್ಯ ಜನರಲ್ಲಿ ‘ರಾಜಕೀಯ ಹೊಲಸು’ ಎಂಬ ಭಾವನೆಯನ್ನು ಮೂಡಿಸಿದೆ. ಇನ್ನೊಂದು ಕಡೆ ಇದನ್ನೇ ಬಂಡವಾಳ ಮಾಡಿಕೊಂಡು ವಿದ್ಯಾರ್ಥಿ-ಯುವಜನರು ತಮಗಾದ ಅನ್ಯಾಯವನ್ನು ವಿರೋಧಿಸಿ ಪ್ರತಿಭಟಿಸಿದರೂ ಅದನ್ನು ರಾಜಕೀಯ ಮಾಡುತ್ತಿದ್ದಾರೆ ಎಂದು ವ್ಯಂಗ್ಯ ಮಾಡುವವರು ಇದ್ದಾರೆ. ನನಗೆ ಈ ಸಂದರ್ಭದಲ್ಲಿ ನೇತಾಜಿ ಹೇಳಿದ ಮಾತು ನೆನಪಿಗೆ ಬರುತ್ತದೆ. ‘ಅನ್ಯಾಯವನ್ನು ವಿರೋಧಿಸುವುದೇ ರಾಜಕೀಯವೆಂದು ಕರೆಯುವುದಾದರೇ, ಇವತ್ತಿನ ವಿದ್ಯಾರ್ಥಿ, ಯುವಕರಿಗೆ ಈ ರಾಜಕೀಯ ಮಾಡುವುದಕ್ಕಿಂತ ಮುಖ್ಯವಾದುದು ಬೇರೊಂದಿಲ್ಲ’.

ಬ್ರಿಟಿಷರ ದಾಸ್ಯದಿಂದ ಭಾರತದ ಜನರನ್ನು ವಿಮುಕ್ತಿಗೊಳಿಸಲು, ಸ್ವಾತಂತ್ರ್ಯಗೊಳಿಸುವುದೇ ನಮ್ಮ ಮೊಟ್ಟ ಮೊದಲ ಆದ್ಯತೆ, ಕರ್ತವ್ಯವೆಂದು ಭಾವಿಸಿ, ನೇಣು ಹಗ್ಗವನ್ನು ಹೂವಿನ ಮಾಲೆಯಂತೆ ಧರಿಸಿ ಹುತಾತ್ಮನಾದ ಕ್ರಾಂತಿಕಾರಿ ಭಗತ್‌ಸಿಂಗ್ ಕೂಡ ತಮ್ಮ ವಿದ್ಯಾರ್ಥಿ ಜೀವನದಲ್ಲೇ ರಾಜಕೀಯ ಹೋರಾಟಕ್ಕೆ ದಾಪುಗಾಲಿಟ್ಟಿದ್ದು. ಅಷ್ಟೇ ಯಾಕೆ ಖುದಿರಾಂ ಬೋಸ್, ಸುಭಾಷ್ ಚಂದ್ರ ಬೋಸ್, ರಾಜಗುರು, ಅಶ್ವಕುಲ್ಲಾಖಾನ್, ಪ್ರೀತಿಲತಾ ವದೇದ್ದಾರ್, ಹೀಗೆ ನೂರಾರು ಸಂಖ್ಯೆಯಲ್ಲಿ ಸ್ವಾತಂತ್ರ್ಯ ಸಂಗ್ರಾಮಕ್ಕೆ ಧುಮುಕಿದ್ದಾರೆ. ರಾಜಕೀಯ ಕಾಲೇಜು, ವಿಶ್ವವಿದ್ಯಾಲಯಗಳ ಹೊರಗಿರಲಿ ಎನ್ನುವವರ ಪ್ರಕಾರ, ಮೇಲಿನವರು ಮಾಡಿರುವುದು ತಪ್ಪೇ?

ಕಾಲೇಜು ರಾಜಕೀಯವನ್ನು ನೇತ್ಯಾತ್ಮಕವಾಗಿ ಬಿಂಬಿಸಲಾಗುತ್ತಿದೆ. ಯಾಕೆಂದರೆ, ಇವತ್ತು ದೇಶದ ಅಪ್ರಜಾತಾಂತ್ರಿಕತೆ, ಅವೈಜ್ಞಾನಿಕತೆ, ಧರ್ಮಾಂಧತೆಗಳನ್ನು, ಪ್ರಜಾಪ್ರತಿನಿಧಿಗಳ ಭಂಡತನಗಳನ್ನು ಪ್ರಶ್ನಿಸುವ, ಧಿಕ್ಕರಿಸುವ, ಹೋರಾಡುವ ಧೈರ್ಯ ವಿದ್ಯಾರ್ಥಿಗಳಿಗಿದೆ. ಇದನ್ನು ಆರಂಭದಲ್ಲೇ ತುಳಿಯಲು ಇದು ಅವರಿಗಿರುವ ಮೂಲಮಂತ್ರವಾಗಿದೆ ಅಷ್ಟೆ.

ಸಂತೋಷದ ಸಂಗತಿ ಎಂದರೆ, ಇಷ್ಟೆಲ್ಲ ಪ್ರತಿಕೂಲ ವಾತಾವರಣದಲ್ಲೂ ವೈಚಾರಿಕ, ವೈಜ್ಞಾನಿಕ ಚಿಂತನೆಗಳು ಚರ್ಚೆಯಾಗುತ್ತಿವೆ. ದೌರ್ಜನ್ಯಗಳನ್ನು ಆಮೂಲಾಗ್ರಹವಾಗಿ ಬದಲಿಸುವ, ಹೊಸ ಮನ್ವಂತರಕ್ಕೆ ನಾಂದಿ ಹಾಡುವ ಪ್ರಯತ್ನ ನಡೆದಿದೆ. ಹಾಗಾಗಿ ಕಾಲೇಜು ರಾಜಕೀಯವನ್ನು ಋಣಾತ್ಮಕವಾಗಿ ನೋಡದೆ, ಪೂರ್ವಾಗ್ರಹಿಗಳಾಗದೆ ಆಂತರಿಕ ಸಮಾಜದ ಆರ್ಥಿಕ, ರಾಜಕೀಯದ ಚಲನವಲನಗಳನ್ನು ಸೂಕ್ಷ್ಮವಾಗಿ ನೋಡುವ ಪ್ರಯತ್ನವನ್ನು ಎಲ್ಲರೂ ಮಾಡಬೇಕಿದೆ.
–ಅಕ್ಷಯ್ ಊರಮುಂದಿನ ಧಾರವಾಡ

*
ಇಂಥ ರಾಜಕೀಯ ಬೇಕೇಕೆ?
ದೇಶದ ಆರ್ಥಿಕ ಬೆನ್ನೆಲುಬಾಗಿ ರೈತರಿದ್ದರೆ, ಆ ದೇಶದ ಉಜ್ವಲ ಭವಿಷ್ಯ ನಿರ್ಮಾಣಕರ್ತರು ಯುವಕರು. ಸ್ವಾತಂತ್ರ ಹೋರಾಟದಿಂದ ಇಂದಿನವರೆಗೂ ಯುವಕರೇ ಎಲ್ಲ ರಂಗದಲ್ಲಿಯೂ ಮುಂಚೂಣಿಯಲ್ಲಿದ್ದಾರೆ. ಇಂದಿನ ದಿನಗಳಲ್ಲಿ ಯುವಕರು ಎಷ್ಟರ ಮಟ್ಟಿಗೆ ಅಭಿವೃದ್ಧಿ ಪಥದತ್ತ ಸಾಗುತ್ತಿದ್ದಾರೋ ಅಷ್ಟೇ ದೇಶವಿನಾಶ ಕಾರ್ಯಗಳಲ್ಲಿಯೂ ತೊಡಗಿಕೊಂಡಿದ್ದಾರೆ.

ಭ್ರಷ್ಟ ರಾಜಕೀಯದ ಬಗ್ಗೆ ಧ್ವನಿ ಎತ್ತುವ ಯುವಪಡೆಗೆ ಕಾಲೇಜುಗಳಲ್ಲಿ ರಾಜಕೀಯವನ್ನಿಟ್ಟಿದ್ದು ತಪ್ಪಲ್ಲ. ಆದರೆ ಪ್ರತಿಯೊಂದು ವಿಶ್ವವಿದ್ಯಾಲಯ ಹಾಗೂ ದೊಡ್ಡ ದೊಡ್ಡ ಕಾಲೇಜುಗಳಲ್ಲಿ ಇಂದು ಕಾಲೇಜಿನ ನಾಯಕನನ್ನು ಆರಿಸಲು ರಾಜಕೀಯ, ವಿದ್ಯಾಲಯಗಳಲ್ಲಿ ಹಾಸುಹೊಕ್ಕಿದೆ. ರಾಷ್ಟ್ರೀಯ ಪಕ್ಷಗಳು ತಮ್ಮ ನಿಲುವನ್ನು ಈ ಯುವ ವೃಂದಗಳಲ್ಲಿ ಬಿತ್ತುವ ಮೂಲಕ ಕಾಲೇಜುಗಳಲ್ಲಿಯೂ ಪಕ್ಷಾಧಾರಿತ ರಾಜಕೀಯ ನಡೆಯುವಂತೆ ಮಾಡಿಬಿಟ್ಟಿವೆ.

ಬೆಲ್ಲ ಎಲ್ಲಿ ಇರುತ್ತೋ ಅಲ್ಲಿ ನೊಣವಿರುತ್ತದೆ. ಹಾಗೆ ಎಲ್ಲಿ ರಾಜಕೀಯ ವಿಷಯವಾಗಿ ಚರ್ಚೆ ನಡೆಯುತ್ತದೆಯೋ ಅಲ್ಲಿ ರಾಜಕೀಯ ಮಾಡುವ ಮುಖವಾಡಗಳು ಇರುತ್ತವೆ. ಈ ರಾಜಕೀಯ ವ್ಯಕ್ತಿಗಳನ್ನು ಹೊರತುಪಡಿಸಿದ ರಾಜಕೀಯ ಕಾಲೇಜುಗಳಲ್ಲಿ ಇರಲಿ.

ಕಾಲೇಜಿನಲ್ಲಿ ಮೊದಲು ರಾಜಕೀಯವು ಕೇವಲ ವಿದ್ಯಾರ್ಥಿ ನಾಯಕರ ಆಯ್ಕೆಯ ಪ್ರಕ್ರಿಯೆ ಆಗಿತ್ತು ಹಾಗೂ ವಿದ್ಯಾರ್ಥಿಗಳ ಬೇಕು ಬೇಡವನ್ನು ನಿರ್ಧರಿಸಲು ಒಬ್ಬ ಮುಖಂಡನನ್ನು ರೂಪಿಸುವ ಸಂಘಟನೆಯ ಮೂಲವಾಗಿತ್ತು. ಆದರೆ ಇಂದು ಅದು ಯಾವುದೋ ಒಂದು ಪಕ್ಷಕ್ಕೆ ಅಂಟಿಕೊಂಡು ಅದರ ಅಡಿಯಲ್ಲಿ ಕಾರ್ಯವನ್ನು ಮಾಡುತ್ತಿರುವುದು, ರಾಜಕೀಯ ಪಕ್ಷಗಳು ಕಾಲೇಜು ರಾಜಕೀಯದಲ್ಲಿ ಭಾಗಿಯಾಗುವುದು ಕಂಡುಬರುತ್ತಿದೆ. ಕಾಲೇಜುಗಳಲ್ಲಿ ರಾಜಕೀಯದ ಪರಿಣಾಮದಿಂದಾಗಿ ನಡೆಯುತ್ತಿರುವ ಗುಂಡು ತುಂಡುಗಳ ಹಂಚುವಿಕೆ ಮತ್ತು ಹಣದ ಆಮಿಷ ನೋಡಿದರೆ ಇಂಥ ರಾಜಕೀಯ ಬೇಕೇ ಎನ್ನಿಸುತ್ತದೆ.  –------ಶ್ರೀನಿಧಿ ವ್ಹಿ. ಸಪಳಿಗ ಬೆಳಗಾವಿ

*
ಗಾಳದ ಮೀನುಗಳಾಗುವಾಗ...
ಕಾಲೇಜಿನಲ್ಲಿ ಲಕ್ಷಾಂತರ  ವಿದ್ಯಾರ್ಥಿಗಳು ಹಲವಾರು ವಿಭಾಗಗಳಲ್ಲಿ, ವಿವಿಧ ತರಗತಿಯಲ್ಲಿ ವಿದ್ಯಾಭ್ಯಾಸ ಮಾಡುತ್ತಿರುತ್ತಾರೆ. ಅವರನ್ನು ಒಂದುಗೂಡಿಸುವುದು ವಿದ್ಯಾರ್ಥಿ ಸಂಘಗಳು. ಇದಕ್ಕೆಂದು ವಿದ್ಯಾರ್ಥಿಗಳ ಚುನಾವಣೆಗಳಾಗುತ್ತವೆ, ಚುನಾಯಿತ ವಿದ್ಯಾರ್ಥಿಗಳು ಬಹುಮತ ಗಳಿಸಿ ವಿದ್ಯಾರ್ಥಿ ನಾಯಕರಾಗುತ್ತಾರೆ. ಇಂಥ ಚುನಾವಣೆಗಳು ಪಕ್ಷದ ಹಿತವಾಗಿರಬೇಕು. ಆದರೆ ಹೀಗಾಗುತ್ತಿಲ್ಲ. ಹಲವಾರು ರಾಜಕೀಯ ನಾಯಕರ ಮಕ್ಕಳು ಕಾಲೇಜಿನಲ್ಲಿ ಕಲಿಯುತ್ತಿರುತ್ತಾರೆ. ಹಲವಾರು ರಾಜಕೀಯ ಪಕ್ಷಗಳ ನಾಯಕರ ಮಕ್ಕಳು ಚುನಾವಣೆಗೆ ಸ್ಪರ್ಧಿಸಿ ಕಾಲೇಜುಗಳನ್ನು ರಾಜಕೀಯ ಅಖಾಡವನ್ನಾಗಿಸುತ್ತಿದ್ದಾರೆ.

ಹೆಚ್ಚು ಕಡಿಮೆ ಸರ್ಕಾರಿ ಕಾಲೇಜುಗಳು ನೇಪಥ್ಯಕ್ಕೆ ಸರಿಯುತ್ತಿದ್ದು ಖಾಸಗಿ ಕಾಲೇಜುಗಳೇ ಈಗ ವಿಜೃಂಭಿಸುತ್ತಿವೆ. ಬಹುಪಾಲು ಕಾಲೇಜಿನ ಸ್ಥಾಪಕರು, ರಾಜಕೀಯ ನಾಯಕರೇ ಆಗಿರುತ್ತಾರೆ ಅಥವಾ ಕಾಲೇಜಿಗೆ ಸಾಕಷ್ಟು ವಂತಿಗೆಯನ್ನು ನೀಡಿದ ರಾಜಕೀಯೇತರ ವ್ಯಕ್ತಿಗಳಾಗಿರುತ್ತಾರೆ. ಹೀಗಾಗಿ ರಾಜಕೀಯ ಮೂಲದಿಂದಲೇ ಹದಗೆಡುತ್ತಿದೆ. ಈ ರೀತಿ ಆಗುವುದನ್ನು ತಡೆಗಟ್ಟಿ, ಕಟ್ಟುನಿಟ್ಟಿನ ನಿಯಮಗಳನ್ನು ಸರ್ಕಾರ ಕೈಗೊಂಡರೆ ಮಾತ್ರ  ರಾಜಕೀಯದ ನಿಜ ಅರ್ಥವನ್ನು ಯುವಮನದಲ್ಲಿ ಬಿತ್ತಬಹುದು ಎಂಬುದು ನನ್ನ ಅಭಿಪ್ರಾಯ. ಆದರೆ ಇದಾಗದೇ ಇಂದಿನ ಯುವಜನರು ಗಾಳದ ಮೀನುಗಳಾಗಿ ಇರುವ ಉದಾಹರಣೆಗಳೇ ನಮ್ಮ ಕಣ್ಣ ಮುಂದಿವೆ.
­– ಅಬ್ದುಲ್‌ ವಹ್ಹಾಬ್‌ ಮುಲ್ಲಾ ಗಂಗಾವತಿ

*
ಪಾಠಗಳ ಹಿಂದೆ ಓಡುತ್ತಾ...
‘ಯಾವ ಕಾಲಕೂ ಯಾವ ದೇಶಕೂ ಯುವಕ ಶಕ್ತಿ ಚಿಲುಮೆ, ಇಳೆಗೆ ಇಳಿದು ಆ ನಭಕೆ ಬೆಳೆದು ಜಗ ಕಾಸಿ ಬಡಿವ ಕುಲುಮೆ’ ಎಂದು ಚನ್ನವೀರ ಕಣವಿಯವರು ಹೇಳುವಂತೆ, ಎಲ್ಲಾ ಕಾಲದಲ್ಲೂ, ಎಲ್ಲಾ ದೇಶದಲ್ಲೂ ಹಾಗೂ ಎಲ್ಲಾ ಕ್ಷೇತ್ರದಲ್ಲೂ ಸಕ್ರಿಯರಾಗಿರಬೇಕಿದ್ದ ಈ ಯುವಸಮೂಹ ಇಂದು ರಾಜಕೀಯ ಕ್ಷೇತ್ರದಿಂದ ಬಹುಮೈಲಿ ದೂರ ಉಳಿದಿದೆ. ಯುವ ಸಮುದಾಯದಲ್ಲಿ ಅಪಾರ ರಾಜಕೀಯ ಆಸಕ್ತಿ ಬೆಳಸಿ ರಾಜಕೀಯದ ಮೂಲ ಪಾಠ ಹೇಳ ಬೇಕಿದ್ದ ಕಾಲೇಜುಗಳು ರಾಜಕೀಯವನ್ನು ನೇತ್ಯಾತ್ಮಕವಾಗಿ ಬಿಂಬಿಸುತ್ತಿರುವುದು ವಿಷಾದಕರ ಬೆಳವಣಿಗೆಯಾಗಿದೆ.

ಇಂದಿನ ಬಹುತೇಕ ಕಾಲೇಜುಗಳು ಶೈಕ್ಷಣಿಕ ವಾತಾವರಣವನ್ನು ಮಾತ್ರ ಸೃಷ್ಟಿಸುವಲ್ಲಿ ಮತ್ತು ಸುಧಾರಿಸುವಲ್ಲಿಯೇ ನಿರತವಾದರೆ, ಜೊತೆಗೆ ಬಹುಪಾಲು ಶೈಕ್ಷಣಿಕ ಕ್ಷೇತ್ರವನ್ನು ಆವರಿಸಿರುವ ಸೆಮಿಸ್ಟರ್ ಪದ್ಧತಿಯು ವಿದ್ಯಾರ್ಥಿಗಳು ಸದಾ ಶೈಕ್ಷಣಿಕ ಚಟುವಟಿಕೆಗಳಲ್ಲಿಯೇ ಮಗ್ನರಾಗಿರುವಂತೆ ಮಾಡಿ ರಾಜಕೀಯ, ಸಾಂಸ್ಕೃತಿಕ ಕ್ಷೇತ್ರಗಳಿಂದ ಸಂಪೂರ್ಣವಾಗಿ ಹೊರಗುಳಿಯುವಲ್ಲಿ ಯಶಸ್ವಿಯಾಗಿವೆ.

ಇತ್ತೀಚಿನ ಪ್ರವೃತ್ತಿಗಳು, ಬೆಳವಣಿಗೆಗಳು ಕಾಲೇಜುಗಳಲ್ಲಿ ರಾಜಕೀಯವನ್ನು ಅಪರಾಧವೆಂದೋ ನೇತ್ಯಾತ್ಮಕವೆಂದೋ ಬಿಂಬಿಸುತ್ತಿವೆ. ಪ್ರಜಾಪ್ರಭುತ್ವ ವ್ಯವಸ್ಥೆಯ ಪ್ರತೀಕದಂತಿರುವ ಚುನಾವಣೆಗಳ ಅರಿವನ್ನು ಕಾಲೇಜು ಹಂತದಿಂದಲೇ ಮೂಡಿಸಬೇಕಿದ್ದ ಕಾಲೇಜು, ಚುನಾವಣೆಗಳನ್ನು ಬಹುತೇಕ ಕಾಲೇಜುಗಳು ವಿವಿಧ ಕಾರಣ ನೀಡಿ ರದ್ದು ಮಾಡಿವೆ. ಒಂದೊಮ್ಮೆ ಚುನಾವಣೆಗಳು ನಡೆದರೂ, ಅದರಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುವವರ ಸಂಖ್ಯೆ ಬಹುವಿರಳ.

ರಾಜಕೀಯ ಕನಸು, ಆಲೋಚನೆ, ಹುಮ್ಮಸ್ಸು, ಆಸೆ, ಆಶಯಗಳನ್ನು ಬಿತ್ತುವ ಪರಿಣಾಮಕಾರಿ ವೇದಿಕೆಯಾಗಬೇಕಿದ್ದ ಕಾಲೇಜು, ವಿಶ್ವವಿದ್ಯಾಲಯಗಳು ರಾಜಕೀಯದಿಂದ ಯುವ ಜನತೆಯನ್ನು ಅಸ್ಪೃಶ್ಯರನ್ನಾಗಿ ಮಾಡಿವೆ. ಒಂದು ಕಾಲದಲ್ಲಿ ರಾಜಕೀಯದ ಬೇರು ಬೆಳೆಯಲು ಕಾರಣವಾಗಿದ್ದ ಕಾಲೇಜುಗಲೇ ಇಂದು ಸಕಾರಾತ್ಮಕ ರಾಜಕೀಯವೆಂಬ ಬೀಜ ಮೊಳಕೆಯೊಡೆಯುವ ಮುನ್ನವೇ ದೇಶದ್ರೋಹವೆಂಬ ಕೀಟನಾಶಕ ಸಿಂಪಡಿಸಿ ಬೀಜಾವಸ್ಥೆಯಲ್ಲಿಯೇ ಬತ್ತುವಂತೆ ಮಾಡುತ್ತಿವೆ.

ಯುವ ಮನಸ್ಸುಗಳು ಸದಾ ಅವಿಶ್ರಾಂತತೆಯಿಂದ ಕೂಡಿರುವಂತೆ ಮಾಡಿ ಈ ರಾಜಕೀಯ ಕ್ಷೇತ್ರದಿಂದ ದೂರ ಉಳಿಯುವಂತೆ ಮಾಡುವ ನಮ್ಮ ಸಮಾಜದ ಶಿಖರ ಪ್ರಾಯ ವ್ಯಕ್ತಿಗಳು, ಶಕ್ತಿಗಳು ಎಂದೆನಿಸಿಕೊಂಡವರು ರಾಜಕೀಯದ ಕರಿನೆರಳಿನಿಂದ ವಿದ್ಯಾರ್ಥಿಗಳು, ಕ್ಯಾಂಪಸ್‌ಗಳು ಮುಕ್ತವಾಗಿರಬೇಕೆಂದು ಬೊಬ್ಬೆ ಇಡುತ್ತಾ ತಾವು ಮಾತ್ರ ಭ್ರಷ್ಟ ರಾಜಕೀಯದ ಪೋಷಕರಾಗಿ ಸಕಾರಾತ್ಮಕ ರಾಜಕೀಯ ಬೆಳವಣಿಗೆಗೆ ತೊಡಕಾಗಿ, ಪರಿಸ್ಥಿತಿಯ ಲಾಭ ಪಡೆಯಲು ಅವಿರತ ಶ್ರಮಿಸುತ್ತಿದ್ದಾರೆ.

ಕಾಲೇಜುಗಳು ಕೇವಲ ಬೋಧನೆಯ ಕೇಂದ್ರಗಳಾಗದೆ ದೇಶದ ರಾಜಕೀಯದ ಆಗು-ಹೋಗುಗಳಿಗೆ ಸಕಾರಾತ್ಮಕವಾಗಿ ಸ್ಪಂದಿಸುವ ಪ್ರಜಾಪ್ರಭುತ್ವ ಮೌಲ್ಯಗಳನ್ನು ಬಿತ್ತುವ ಪ್ರಾಥಮಿಕ ಕೇಂದ್ರಗಳಾಗಬೇಕು. ಆದರೆ ಇಂದಿನ ಯುವ ಮನಸ್ಸುಗಳಲ್ಲಿ ರಾಜಕೀಯವೆಂದರೆ ಕೇವಲ ಭ್ರಷ್ಟಾಚಾರ, ಅನಾಚಾರವೆಂಬುದನ್ನು ಅಚ್ಚೊತ್ತಿ ರಾಜಕೀಯದ ಸಕಾರಣ ಸಾಧ್ಯತೆಗಳನ್ನು ದೂರವಾಗಿಸಿವೆ. ಕೇವಲ ಒಂದು ವರ್ಗದ ಕಪಿ ಮುಷ್ಟಿಯಲ್ಲಿರುವ ರಾಜಕೀಯದಲ್ಲಿ ಎಲ್ಲರೂ ಸಕ್ರಿಯರಾಗುವಂತೆ ಮಾಡಲು ಕಾಲೇಜುಗಳು ಸೂಕ್ತ ವೇದಿಕೆಯಾಗಿವೆ.

ಸದಾ ಬದಲಾವಣೆಗಾಗಿ ಹಂಬಲಿಸುವ ಯುವಮನಗಳಲ್ಲಿ, ಸಮಾಜ ಪರಿವರ್ತನೆಯ ಶ್ರೇಷ್ಠ ಸಾಧನಗಳಲ್ಲಿ ರಾಜಕೀಯವು ಅಗ್ರಮಾನ್ಯವಾದುದು ಎಂಬ ಅರಿವನ್ನು ಮೂಡಿಸಿ ಈಗಾಗಲೇ ಕಾಲೇಜುಗಳಲ್ಲಿ ಬಾಡಿ ಬಸವಳಿದಿರುವ ಇತ್ಯಾತ್ಮಕ ಮತ್ತು ಸಕಾರಣಾತ್ಮಕ ರಾಜಕೀಯದ ಎಳೆಯನ್ನು ಹಸಿರಾಗಿಸಲು ಗಾಂಧಿಯಂತಹ ಅದಮ್ಯ ಚೇತನವೊಂದು ಮತ್ತೆ ಜನ್ಮವೆತ್ತ ಬೇಕಿದೆ.
–ಅಭಿಲಾಷ ಬಿ. ಸಿ.

*
ಒಂದಷ್ಟು ಅನುಭವ ಸಿಗಲಿ ಬಿಡಿ...
ಓದುವಾಗ ರಾಜಕೀಯವನ್ನೇಕೆ ಆರಿಸಿಕೊಳ್ಳಬಾರದು?. ನಮ್ಮನ್ನಾಳುವ ಅದೆಷ್ಟು ಜನಪ್ರತಿನಿಧಿಗಳು ಜ್ಞಾನಿಗಳಾಗಿದ್ದಾರೆ? ಇಡೀ ದೇಶವನ್ನೇ ಅವರಿಗೆ ಕೊಟ್ಟು ಕೂರುವಾಗ ವಿದ್ಯಾರ್ಥಿಗಳೇಕೆ ಈ ಕಡೆ ಗಮನ ಹರಿಸಬಾರದು?.

ರಾಜಕೀಯ ಎಂದಾಕ್ಷಣ ಅದು ನಕಾರಾತ್ಮಕವಾಗಿಯೇ ನಮ್ಮೆದುರು ತೆರೆದುಕೊಳ್ಳುತ್ತದೆ. ಆದರೆ ದೇಶಕ್ಕೆ ಯಾಕೆ ವಿದ್ಯಾವಂತರು ಬರಬಾರದು? ಈ ನಿಟ್ಟಿನಲ್ಲಿ ನಾವೇಕೆ ನಮ್ಮ ಮಕ್ಕಳನ್ನು ಪ್ರೇರೇಪಿಸಬಾರದು? ಅಂತ ಒಮ್ಮೆ ಯೋಚಿಸಿದರೆ ಅರಿತವರಿಂದ ರಾಜ್ಯ ಒಂದಷ್ಟು ಬದಲಾವಣೆಗಳನ್ನು ಕಾಣಬಹುದು ಎಂದೂ ಅನ್ನಿಸುತ್ತದೆ.

ಇದಕ್ಕೆ ವೇದಿಕೆಯೂ ಕಾಲೇಜಿನಿಂದಲೇ ಶುರುವಾದರೆ ಒಂದಷ್ಟು ಕೈಗೆಟುಕುವ ಅನುಭವಗಳಿಂದ ಕಲಿಯುವುದು ಸಾಕಷ್ಟಿರುತ್ತದೆ. ಕಾಲೇಜಿನ ಚುನಾವಣೆಗಳು ಕೇವಲ ಕಾಲೇಜಿಗಷ್ಟೇ ಏಕೆ ಸೀಮಿತವಾಗಿರದೆ, ಅದು ಭವ್ಯ ಭಾರತದ ನಿರ್ಮಾಣಕ್ಕೆ ಸಹ ನೆರವಾಗಲು ಸಿಗುವ ಒಂದು ಅವಕಾಶವೂ ಆಗಬಹುದಲ್ಲವೇ?

ನಾಯಕತ್ವ ಗುಣಗಳು ಕಾಲೇಜಿನ ರಾಜಕೀಯದಿಂದಲೇ ಶುರುವಾಗಬೇಕು. ವಿದ್ಯೆ, ಜ್ಞಾನಕ್ಕೆ ಬೇಕಾದ ಕಾಲೇಜು ರಾಜಕೀಯದ ಪಾಠಗಳನ್ನು ಕಲಿಸಿದರೆ ಒಳ್ಳೆಯದೇ ಅಲ್ಲವೇ? ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಗೆ ಕಾಲೇಜು ರಾಜಕೀಯ ಇರಲೇಬೇಕು. ಅಂದು ಕಾಲೇಜಿನ ರಾಜಕೀಯದಲ್ಲಿ ಹೆಸರಾಗಿ ವ್ಯರ್ಥ ಎನ್ನಿಸಿಕೊಂಡಿದ್ದ ಸ್ನೇಹಿತ ಇದೀಗ ರಾಜಕೀಯ ರಂಗದಲ್ಲಿ ನಮಗಿಂತ ಒಂದು ಹೆಜ್ಜೆ ಮುಂದಿದ್ದಾನೆ. ರಾಜಕೀಯ ಎನ್ನುವುದೇ ಸರಿಯಲ್ಲ ಎಂದುಕೊಂಡು ವಿದ್ಯಾರ್ಥಿಗಳನ್ನು ಅದರಿಂದ ದೂರವಿಡುವ ಬದಲು ಅದರಲ್ಲಿನ ಒಳ ಹರಿವುಗಳನ್ನು ತಿಳಿಸಿಕೊಡುವ ಮೂಲಕ ರಾಜಕೀಯದ ಬಗ್ಗೆ ತಿಳಿವಳಿಕೆ ಮೂಡಿಸಲು ಪೋಷಕರು ಮುಂದಾಗಬೇಕು.

ಎಲ್ಲರೂ ಒಪ್ಪಿಕೊಂಡಿರುವಂತೆ ಯುವಕರಲ್ಲಿನ ಬಿಸಿರಕ್ತಕ್ಕೆ ತಾಕತ್ತಿದೆ. ಅದಕ್ಕೆ ಕೇವಲ ಎಂಜಿನಿಯರಿಂಗ್, ಡಾಕ್ಟರ್ ಆಗುವ ಹುಮ್ಮಸ್ಸು ಮಾತ್ರ ಇದೆ ಎಂದುಕೊಂಡೋ ಅಥವಾ ರಾಜಕೀಯ ಕೆಲಸಕ್ಕೆ ಬಾರದ್ದು ಎಂದುಕೊಂಡೋ ಅದರಿಂದ ದೂರ ಇಡುವ ಬದಲು ಭವಿಷ್ಯದ ಭದ್ರ ಜನಪ್ರತಿನಿಧಿಯಾಗಿ ರೂಪುಗೊಳ್ಳಲು ಸಹಕರಿಸಬೇಕಲ್ಲವೇ? ರಾಜಕೀಯಕ್ಕೂ ಕಾಲೇಜು ಬುನಾದಿಯಾದರೆ ತಪ್ಪೇನು? ಇದು ಯುವಕರಲ್ಲಿ ಹೊಸ ಆಲೋಚನೆಗಳನ್ನು ಬಿತ್ತಿ, ಸುಂದರ ಸಮಾಜ ನಿರ್ಮಿಸಲು ನೆರವಾದರೆ ಅದಕ್ಕಿಂತ ಮತ್ತೊಂದು ಪ್ರತಿಫಲ ಸಿಗುವುದುಂಟೇ...?
–ರಮ್ಯಶ್ರೀ ಜಿ.ಎನ್.

*
ಬ್ರಹ್ಮಸಂದ್ರವಿಷಯ ಮಾತ್ರವೇ ಆಗುತ್ತಿರುವ ದುರದೃಷ್ಟ
ನಾಯಕತ್ವವನ್ನು ರೂಪಿಸುವ ರಾಜಕೀಯ ಪ್ರಕ್ರಿಯೆಗೆ ವಿದ್ಯಾರ್ಥಿಗಳೇಕೆ ತೊಡಗಬಾರದು? ವಿದ್ಯಾರ್ಥಿಗಳ ಪಠ್ಯ ಹಾಗೂ ಇತರೆಲ್ಲ ಚಟುವಟಿಕೆಗಳಿಗೆ ನೀರೆರೆಯುವ ಕಾಲೇಜುಗಳು ವಿದ್ಯಾರ್ಥಿದೆಸಿಯಲ್ಲಿಯೇ ನಾಯಕತ್ವವನ್ನು ರೂಪಿಸಿಕೊಳ್ಳುವಂತಹ ಸುವರ್ಣಾವಕಾಶಕ್ಕೆ ಒಪ್ಪದಿರುವುದೇಕೆ? ಇಂದಿನ ವಿದ್ಯಾರ್ಥಿನಾಯಕ/ನಾಯಕಿಯರು ನಾಳೆ ಸಮಾಜಕ್ಕೆ ಸುಭದ್ರ ನಾಯಕತ್ವ ನೀಡುವುದಿಲ್ಲವೇ? ‘ದೇಶದ ಭವಿಷ್ಯ ತರಗತಿಗಳಲ್ಲಿ ರೂಪುಗೊಳ್ಳುತ್ತದೆ’ ಎಂಬ ಮಾತು ಈ ವಿಷಯದಲ್ಲಿ ಸೋಲುವುದೇಕೆ?  ಹಲವು ವಿದ್ಯಾಸಂಸ್ಥೆಗಳು ಇಂದು ಸಮಾಜದ ಪಟ್ಟಭದ್ರ ಹಿಡಿತದಲ್ಲಿವೆ. 

ಬಹುತೇಕ ಕಡೆ ವಿದ್ಯಾರ್ಥಿ ಸಂಘದ ಹೆಸರಿನಲ್ಲಿ ಪುಂಡಾಟಿಕೆ, ಪುಡಿರಾಜಕೀಯ ನಡೆಯುತ್ತಿದೆ. ಹೊಡೆದಾಟ ಬಡಿದಾಟಗಳಿಗೂ ಕಡಿಮೆಯಿಲ್ಲ. ಪೋಷಕರು ಹೊಟ್ಟೆ ಬಟ್ಟೆ ಕಟ್ಟಿ ಮಕ್ಕಳನ್ನು ಕಾಲೇಜಿಗೆ ಕಳುಹಿಸುವುದು ಓದುವುದಕ್ಕೇ ಹೊರತು ರಾಜಕೀಯ ಮಾಡಲು ಅಲ್ಲ ಎಂಬುದೂ ವಾಸ್ತವ. ವಿದ್ಯಾರ್ಥಿ ರಾಜಕೀಯವನ್ನು ವಿರೋಧಿಸುವವರ ವಾದ ಇದುವೇ ಆಗಿದೆ. ಇದನ್ನು ಬಗೆಹರಿಸಿಕೊಳ್ಳದೆ ನಾವು ಮುಂದೆ ಹೋಗುವಂತಿಲ್ಲ. ವಿದ್ಯಾರ್ಥಿ ರಾಜಕೀಯದ ಮೂಲ ತತ್ವವೆಂದರೆ ಯುವ ನಾಯಕತ್ವವನ್ನು ರೂಪುಗೊಳಿಸುವುದು. ಯುವಜನರ ನಾಯಕತ್ವವೆನ್ನುವುದು ಅವರ ವಿದ್ಯಾಭ್ಯಾಸ ಮತ್ತು ಭವಿಷ್ಯದ ಏಳಿಗೆಗೆ ಪೂರಕವಾಗಿರಬೇಕೆ ಹೊರತು ಅದಕ್ಕೆ ವ್ಯತಿರಿಕ್ತವಾಗಿರಬಾರದು. 

ಈ ರೀತಿಯ ಸಕಾರಾತ್ಮಕ ವಾತಾವರಣವನ್ನು ರೂಪಿಸುವುದು ಸರ್ಕಾರಿ ಶಿಕ್ಷಣ ಸಂಸ್ಥೆಗಳಿಗೆ ತುಸು ಕಷ್ಟವಾದರೂ ಅಸಾಧ್ಯವಂತೂ ಅಲ್ಲವೇ ಅಲ್ಲ.  ಇದಕ್ಕೆ ಪೂರಕವಾಗಿ ಕೆಲ ಕಠಿಣ ನೀತಿ-ನಿಬಂಧನೆಗಳನ್ನು ರೂಪಿಸಿ ಅನುಷ್ಠಾನಗೊಳಿಸಬಹುದು. ಸಕಾರಾತ್ಮಕ ವಿದ್ಯಾರ್ಥಿ ರಾಜಕೀಯದ ದೊಡ್ಡ ಫಲ ಉತ್ತಮ ನಾಯಕತ್ವದ ಅಭಾವವಿರುವ ಇಂದಿನ ಸಮಾಜಕ್ಕೆ ದಕ್ಕುತ್ತದೆ.  ಕಾಲೇಜು ಎಂದರೆ ಕೇವಲ ಪಠ್ಯ ಎಂಬ ಕಲ್ಪನೆಯಿಂದ ಹೊರಬರದಿದ್ದರೆ ರಾಜಕೀಯ ಎಂಬುದು ಅಂಕಗಳಿಕೆಯ ಒಂದು ವಿಷಯ ಮಾತ್ರವೇ ಆಗುತ್ತದೆ. 
–ಕಿಶೋರ್. ಆರ್ ತುಮಕೂರು

ನಾಯಕತ್ವ ನಿರಾಕರಣೆ ಎಷ್ಟು ಸರಿ?
ಇತ್ತೀಚೆಗೆ ಶಿಕ್ಷಣ ಕ್ಷೇತ್ರದ ಗಮನ ಪರೀಕ್ಷೆ, ಅಂಕ ಮತ್ತು ಕಚೇರಿ ಉದ್ಯೋಗಗಳಿಗೆ ಮಾತ್ರ ಸೀಮಿತವಾಗಿ; ಅದರಾಚೆಗಿನ ರಾಜಕೀಯ, ಸಾಮಾಜಿಕ ಹಾಗೂ ಸಾಂಸ್ಕೃತಿಕ ಕ್ಷೇತ್ರಗಳ ಬಗೆಗೆ ನಿರ್ಲಕ್ಷ್ಯ ಧೋರಣೆಯನ್ನು ಬೆಳೆಸುತ್ತಿದೆ. ಇದಕ್ಕೆ ಅತ್ಯುತ್ತಮ ಉದಾಹರಣೆಯಾಗಿ ಇತ್ತೀಚೆಗೆ ಕಾಲೇಜುಗಳಲ್ಲಿ ವಿದ್ಯಾರ್ಥಿ ಸಂಘಗಳೇ ಇಲ್ಲವಾಗುತ್ತಿರುವ ಸ್ಥಿತಿಯನ್ನು ಗಮನಿಸಬಹುದು.

ಅಪರೂಪಕ್ಕೆ ಅಸ್ತಿತ್ವದಲ್ಲಿರುವ ವಿದ್ಯಾರ್ಥಿ ಸಂಘಗಳು ಉದ್ಘಾಟನೆ ಮತ್ತು ಸಮಾರೋಪ ಸಮಾರಂಭ ಎಂಬ ಎರಡು ಸಾಂಪ್ರದಾಯಿಕ ಕಾರ್ಯಕ್ರಮಗಳನ್ನು ಏರ್ಪಡಿಸಿ; ಅದರಲ್ಲಿ ಕೆಲವು ವಿದ್ಯಾರ್ಥಿ ನಾಯಕರು ಸಮಾರಂಭದ ವೇದಿಕೆಯ ಮೇಲೆ ಕುಳಿತು ಇನ್ನೂ ಕೆಲವರು ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಸಹಪಾಠಿಗಳ ಜೊತೆ ಕುಣಿದು ಕುಪ್ಪಳಿಸಿದರೆ ಸಂಘದ ಕಾರ್ಯಕ್ರಮಗಳು ಮುಗಿದಂತೆಯೇ. ಬಹಳವೆಂದರೆ ಅಷ್ಟೇನು ಮುಖ್ಯವಲ್ಲದ ಒಂದೆರಡು ಪ್ರತಿಭಟನೆಗಳನ್ನು ಮಾಡಬಹುದು ಅಷ್ಟೇ.

ಅದರಾಚೆಗೆ ಸಂಘಗಳ ಮಹತ್ವವಾಗಲಿ ಜವಾಬ್ದಾರಿಗಳಾಗಲಿ ಯಾವ ವಿದ್ಯಾರ್ಥಿಗೂ ತಿಳಿದಿಲ್ಲ. ಇದಕ್ಕೆ ಪೂರಕವೆಂಬಂತೆ ವಿದ್ಯಾಸಂಸ್ಥೆಗಳು ವಿದ್ಯಾರ್ಥಿ ಸಂಘಗಳ ಚುನಾವಣೆಗಳ ಸಂದರ್ಭದಲ್ಲಿ ನಡೆಯುವ ಕೆಲವು ಅಹಿತಕರ ನಡವಳಿಕೆಗಳನ್ನು ಮುಂದಿರಿಸಿಕೊಂಡು ವಿದ್ಯಾರ್ಥಿ ಸಂಘಗಳನ್ನು ಹಾಗೂ ಅವುಗಳ ಚುನಾವಣೆಗಳನ್ನು ಸಾರಾಸಗಟಾಗಿ ನಿರಾಕರಿಸುವ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಿವೆ. ವಿದ್ಯಾರ್ಥಿ ಸಂಘಗಳ ಚುನಾವಣೆಗಳಲ್ಲಿ ಸಕ್ರಿಯ ರಾಜಕೀಯ ಪಕ್ಷಗಳು ನೇರವಾಗಿ ಕಾಲೇಜು ಆವರಣಗಳನ್ನು ಪ್ರವೇಶಿಸುವುದು ಹಾಗೂ ವಿದ್ಯಾರ್ಥಿ ಸಂಘಗಳನ್ನು ತಮ್ಮ ಹಿತಾಸಕ್ತಿಗೆ ಬಳಸಿಕೊಳ್ಳುವ ಪರಿಯು ಆಡಳಿತ ಮಂಡಳಿಗಳ ಇಂಥ ತೀರ್ಮಾನಗಳಿಗೆ ಇನ್ನಷ್ಟು ಪುಷ್ಟಿ ನೀಡುತ್ತಿವೆ. 

ಈ ಬೆಳವಣಿಗೆಯಿಂದ ಭವಿಷ್ಯದ ರಾಜಕೀಯ ನಾಯಕತ್ವದ ಗುಣಗಳು ಹಾಗೂ ಮೌಲ್ಯಗಳ, ಹೆಜ್ಜೆಗಳನ್ನು ಅರಿಯಬೇಕಿದ್ದ ವಿದ್ಯಾರ್ಥಿಗಳು ಹಿಂದೆ ಬೀಳುವಂತಾಗಿದೆ. ವಿದ್ಯಾರ್ಥಿಗಳು ತೋರುವ ಈ ಅಸಂಗತ ನಡೆಗಳಿಂದ ವಿದ್ಯಾರ್ಥಿ ಸಂಘಗಳ ಅಸ್ತಿತ್ವವನ್ನು ಅಲ್ಲಗೆಳೆಯುವ ವಿದ್ಯಾಸಂಸ್ಥೆಗಳ ನಿಲುವು ‘ನೆಗಡಿಯಾದರೆ ಮೂಗನ್ನೇ ಕೊಯ್ದು ಬಿಸುಟುವಂತಿದೆ’.

ತಮ್ಮ ಕಾಲೇಜಿನ ಹಳೆಯ ವಿದ್ಯಾರ್ಥಿ ಸಂಘಗಳ ದಾಖಲೆ ಮತ್ತು ಭಾಷಣಗಳಲ್ಲಿ ‘ನಮ್ಮ ಕಾಲೇಜು ಅತ್ಯುತ್ತಮ ರಾಜಕಾರಣಿಗಳನ್ನು ನೀಡಿದೆ’ ಎಂದು ಹೆಮ್ಮೆಯಿಂದ ಹೇಳಿಕೊಳ್ಳುವ ಕಾಲೇಜುಗಳು ಅಂಥ ರಾಜಕೀಯ ನಾಯಕರನ್ನು ಸೃಷ್ಟಿಸಬಲ್ಲ ಅವಕಾಶಗಳನ್ನು ಇಲ್ಲವಾಗಿಸಿದ ಬಗ್ಗೆ ಯಾವುದೇ ಪಶ್ಚಾತಾಪವಿಲ್ಲದಿರುವುದು ವಿಚಿತ್ರವಾಗಿ ಕಾಣುತ್ತಿದೆ.

ಒಂದು ಕಾಲಕ್ಕೆ ವಿಶ್ವವಿದ್ಯಾಲಯದ ಸೆನೆಟ್‌ಗೆ ಆಯ್ಕೆಯಾಗಿ ಇಡೀ ವಿದ್ಯಾರ್ಥಿ ಸಮುದಾಯವನ್ನು ಪ್ರತಿನಿಧಿಸುತ್ತಿದ್ದ ಯುವ ವಿದ್ಯಾರ್ಥಿ ನಾಯಕರ ಸಾಧನೆಗಳನ್ನು ಗುಣಗಾನ ಮಾಡುವ ಅಧ್ಯಾಪಕರು ಇಂದಿಗೂ ವಿಶ್ವವಿದ್ಯಾಲಯ ಹಾಗೂ ಕಾಲೇಜುಗಳ ವಿದ್ಯಾವಿಷಯಕಪರಿಷತ್ತು, ಅಧ್ಯಯನಮಂಡಳಿಗಳಂತಹ ಮಹತ್ವದ ಸಮಿತಿಗಳಲ್ಲಿ ಇರುವ ವಿದ್ಯಾರ್ಥಿ ಪ್ರತಿನಿಧಿತ್ವವನ್ನು ಹೆಸರಿಗೆ ಮಾತ್ರ ಉಳಿಸಿಕೊಂಡಿರುವ ಬಗ್ಗೆ ಕಿಂಚಿತ್ತು ಯೋಚಿಸದಿರುವುದು ಆಶ್ಚರ್ಯವನ್ನು ಉಂಟುಮಾಡುತ್ತದೆ. ಒಟ್ಟಾರೆ ವಿದ್ಯಾರ್ಥಿಗಳ ಇಂಥ ಯಡವಟ್ಟು ಹಾಗೂ ವಿದ್ಯಾಸಂಸ್ಥೆಗಳ ಜಾಣ ನಡೆಗಳಿಂದ ಭವಿಷ್ಯದ ರಾಜಕಾರಣಕ್ಕೆ ಬೇಕಾದ ಯುವಶಕ್ತಿ  ಹಿಮ್ಮುಖವಾಗಿ ನಡೆಯುತ್ತಿರುವುದು ಈ ಕಾಲದ ದೊಡ್ಡ ದುರಂತವೆಂದೇ ಹೇಳಬೇಕು.

ಇದೆಲ್ಲಕ್ಕೂ ತಿಲಕವಿಟ್ಟಂತೆ ಸಮಕಾಲೀನ ರಾಜಕಾರಣದ ಕೆಟ್ಟ ಬೆಳವಣಿಗೆಗಳು ವಿದ್ಯಾರ್ಥಿಗಳನ್ನು ರಾಜಕೀಯ ನಿರಾಸಕ್ತಿಯ ಕಡೆಗೆ ಕೊಂಡೊಯ್ಯುತ್ತಿವೆ. ಇದು ಆರೋಗ್ಯಕರ ಸಮಾಜ ನಿರ್ಮಾಣ ಕಾರ್ಯಕ್ಕೆ ಬಹುಪ್ರಮುಖ ಪೆಟ್ಟು ನೀಡುತ್ತಿದೆ ಎಂಬುದನ್ನು ಇನ್ನಾದರೂ ವಿದ್ಯಾರ್ಥಿಗಳು ಹಾಗೂ ವಿದ್ಯಾಸಂಸ್ಥೆಗಳು ಅರಿತುಕೊಳ್ಳಬೇಕಿದೆ. ಇಲ್ಲವಾದರೆ ಇದಕ್ಕೆ ತಕ್ಕ ಬೆಲೆ ತೆರಬೇಕಾಗುತ್ತದೆ ಎಂಬುದನ್ನು ಮರೆಯಬಾರದು.
–ಡಾ. ಎಸ್.ಎಂ. ಮುತ್ತಯ್ಯ ಶಿವಮೊಗ್ಗ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT