ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶೇಖಾವತಿ ಥಾಲಿಯೂ... ದಶ ಬಗೆಯ ಚಾಟ್‌ಗಳೂ...

ರಸಾಸ್ವಾದ
Last Updated 5 ಅಕ್ಟೋಬರ್ 2016, 19:30 IST
ಅಕ್ಷರ ಗಾತ್ರ

ದಸರಾ ಅಂದರೆ ಹತ್ತು ರಾತ್ರಿ. ಪಕ್ಕಾ ರಾಜಸ್ತಾನಿ ಸಂಪ್ರದಾಯ, ಶೈಲಿಯಲ್ಲಿ  ಜೆ.ಪಿ.ನಗರದಲ್ಲಿ ಮೈವೆತ್ತಿರುವ ‘ಕೇಸರಿಯಾ’   ಹೋಟೆಲ್‌ನಲ್ಲಿ ನಡೆದಿರುವ ‘ಚಾಟ್‌ ಫೆಸ್ಟಿವಲ್‌’ನಲ್ಲಿ ಇರುವುದೂ ಹತ್ತು ಬಗೆಯ ಚಾಟ್‌ಗಳು.

ರಾಜಸ್ತಾನದ ಶೇಖಾವತಿ  ಅರಮನೆಯಂತೆ ವಿನ್ಯಾಸಗೊಂಡಿರುವ ಈ ಹೋಟೆಲ್‌ ಇದೀಗ ನವರಾತ್ರಿಗೆ ಹಮ್ಮಿಕೊಂಡಿರುವ ಚಾಟ್‌ ಫೆಸ್ಟಿವಲ್‌ನಲ್ಲಿ ಭರ್ಜರಿ ಥಾಲಿ ಉಂಡ ನಂತರ ಉಚಿತವಾಗಿ ಯಾವುದಾದರೊಂದು ಚಾಟ್‌ ಸವಿಯುವ ಅವಕಾಶ ಕಲ್ಪಿಸಿದೆ.

‘ಲಾ ಕಾರ್ಟೆ ಮೆನುವನ್ನು ನಾವು ಥಾಲಿ ರೂಪದಲ್ಲಿ ಒದಗಿಸುತ್ತೇವೆ. ಒಂದೇ ಚಾಟ್‌ ಇರಲಿ, ಎಲ್ಲಾ ಹತ್ತೂ ಚಾಟ್‌ಗಳನ್ನು ಕೇಳಿದರೂ ನಾವು ಎಂದಿನಂತೆ ಬೆಳ್ಳಿಯ ತಟ್ಟೆ, ಕಪ್‌ಗಳಲ್ಲೇ ನೀಡುತ್ತೇವೆ. ಈ ಹಿಂದೆ ಕಾಲಕಾಲಕ್ಕೆ ಹಮ್ಮಿಕೊಂಡ ಆಹಾರೋತ್ಸವಗಳಿಗಿಂತ ಭಿನ್ನ ಸ್ವರೂಪದಲ್ಲಿ ಈ ಬಾರಿ ನವರಾತ್ರಿ ಚಾಟ್‌ ಉತ್ಸವವನ್ನು ರೂಪಿಸಿದ್ದೇವೆ’ ಎಂದು ವಿವರಿಸುತ್ತಾರೆ, ಕೇಸರಿಯಾದ ಮಾಲೀಕ ಸಿದ್ಧಾರ್ಥ ಗೋಯೆಂಕಾ.

ಆತಿಥ್ಯ, ಒಳಾಂಗಣ ವಿನ್ಯಾಸ, ಸರ್ವರ್‌ಗಳ ವಿನಯಪೂರ್ವಕ ಮಾತು, ನಗುಮುಖದ ವಿಚಾರಣೆ, ನಮ್ಮದೇ ಊಟದ ಕೋಣೆಯಲ್ಲಿ ಮನೆ ಮಂದಿಯೊಂದಿಗೆ ಕುಳಿತು ಊಟ ಮಾಡುತ್ತಿದ್ದೇವೇನೋ ಎಂಬಂತೆ ಮನಸ್ಸಿಗೆ ಹಿಡಿಸುವ ವಾತಾವರಣ... ಕೇಸರಿಯಾಗೆ ಮತ್ತೆಮತ್ತೆ ಹೋಗಬೇಕು ಎಂದುಕೊಳ್ಳಲು ಇಂಥ ಹತ್ತಾರು ಕಾರಣ ಸಿಗುತ್ತದೆ. 

ಇಲ್ಲಿನ ಒಟ್ಟು ವಾತಾವರಣಕ್ಕೆ ಗ್ರಾಹಕರು ಫಿದಾ ಆಗಿದ್ದಾರೆ. ರಾಜಸ್ತಾನಿಗಳಂತೂ ತಮ್ಮೂರಿನ ಶೇಖಾವತಿ ಹವೇಲಿಯಲ್ಲಿ ಕುಳಿತಂತೆ ಭಾವಿಸುತ್ತಾರೆ.

ವ್ಹಾವ್‌... ಶೇಖಾವತಿ ದಹಿ ವಡಾ
ಚಾಟ್‌ ಉತ್ಸವದಲ್ಲಿರುವ ಹತ್ತು ಬಗೆಯ ಚಾಟ್‌ಗಳ ಪೈಕಿ ಹೆಚ್ಚು ಇಷ್ಟವಾದದ್ದು ಶೇಖಾವತಿ ದಹಿ ವಡಾ. ಈ ಮೊಸರು ವಡೆಯನ್ನು ಚಮಚಾದಲ್ಲಿ ಬಾಯಿಗಿಡುತ್ತಿದ್ದಂತೆ ಚಾಟ್‌ ಮಸಾಲಾ, ಕರಿಮೆಣಸು,  ಹುರಿದು ಪುಡಿ ಮಾಡಿದ ಜೀರಿಗೆ ಇವುಗಳ ಸ್ವಾದ ನಮ್ಮ ರುಚಿ ಮೊಗ್ಗುಗಳನ್ನು ಚುರುಕುಗೊಳಿಸುತ್ತದೆ.

ಕ್ರಮೇಣ ಉದ್ದಿನಬೇಳೆ, ಮೆಂತೆ, ಕಡ್ಲೆಬೇಳೆ, ಸಿಹಿ ಬೆರೆತ ಹುಣಿಸೆಹುಳಿಯ ಚಟ್ನಿ ವಡೆ ತುಂಬಿದ ಬಾಯಿಗೆ ವಿಭಿನ್ನ ರುಚಿ ಹರಡುತ್ತದೆ.

ಸೋರೆಕಾಯಿಯ ಲೌಕಿ ಚಾಟ್‌ ಸ್ವಲ್ಪ ಸಪ್ಪೆ ಎನಿಸಿದರೂ, ಪಾಲಕ್‌ ಪಾಪ್ಡಿ, ರಾಜ್‌ ಕಚೋರಿ, ಕಟೋರಿ, ಆಲೂ ಟಿಕ್ಕಿ, ಅಮೆರಿಕನ್‌ ಜೋಳದ ಮಕಾಯ್‌ ಭೇಲ್ ಒಮ್ಮೆ ಸಿಹಿ, ಒಮ್ಮೆ ಸಿಹಿ ಮಿಶ್ರಿತ ಖಾರದ ಸ್ವಾದ ನೀಡುತ್ತವೆ.

ಹೋಟೆಲ್‌ನ  ಪೀಠೋಪಕರಣಗಳ ಅಂದಚೆಂದ, ತಂಪಾದ ವಾತಾವರಣವನ್ನೆಲ್ಲಾ ಕಣ್ತುಂಬಿಕೊಳ್ಳುತ್ತಾ ಒಂದೊಂದೇ ಚಾಟ್‌ಗಳನ್ನು ಬಾಯಿಗಿಳಿಸಿ ಬೆಳ್ಳಿ ಲೋಟದ ನೀರನ್ನು ಗುಟುಕಿರಿಸಿ ಬಿಲ್‌ ಪಾವತಿಸಿ ಎದ್ದೇಳುವಾಗಲೇ ಅರಿವಾದದ್ದು ಹೊಟ್ಟೆ ಅಷ್ಟೊಂದು ಭಾರವಾಗಿದೆ ಎಂದು!

ಚಾಟ್‌ಗಳು
ಆಲೂ ಟಿಕ್ಕಿ, ಸಮೋಸಾ ಚಾಟ್‌, ರಾಗ್ಡಾ ಪಟ್ಟೀಸ್‌, ಕಚೋರಿ, ರಾಜ್‌ ಕಚೋರಿ, ಕಟೋರಿ, ಪಾಪ್ಡಿ ಚಾಟ್‌, ಲೌಕಿ ಚಾಟ್‌, ಶೇಖಾವತಿ ದಹಿ ವಡಾ, ದಹಿ ಗುಜಿಯಾ.

**
ರೆಸ್ಟೊರೆಂಟ್‌: ಕೇಸರಿಯಾ
ವಿಶೇಷತೆ: ರಾಜಸ್ತಾನಿ ಶೈಲಿ ಚಾಟ್ಸ್‌
ಸಮಯ: ಮಧ್ಯಾಹ್ನ 12ರಿಂದ ಮಧ್ಯಾಹ್ನ 3.30 ಹಾಗೂ ರಾತ್ರಿ 7ರಿಂದ 11.
ಕೊನೆಯ ದಿನ: ಅ.12
ಸ್ಥಳ: ಗೋಯೆಂಕಾ ಚೇಂಬರ್ಸ್‌, 19ನೇ ಮುಖ್ಯರಸ್ತೆ, 2ನೇ ಹಂತ, ಜೆ.ಪಿ.ನಗರ.
ಸ್ಥಳ ಕಾಯ್ದಿರಿಸಲು: 080 26590800.
ಒಬ್ಬರಿಗೆ: ₹545, ಮಕ್ಕಳಿಗೆ ₹300    (5ರಿಂದ 8ವರ್ಷ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT