ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾತಿನ ಅಬ್ಬರದಲ್ಲಿ ಕಳೆದುಹೋದ ‘ಅಂಬಾ’

Last Updated 7 ಅಕ್ಟೋಬರ್ 2016, 11:45 IST
ಅಕ್ಷರ ಗಾತ್ರ

ನಿರ್ಮಾಣ: ಆರ್. ಶ್ರೀನಿವಾಸ್ 
ನಿರ್ದೇಶನ: ಯೋಗರಾಜ ಭಟ್ 
ತಾರಾಗಣ: ಪ್ರಿಯಾಮಣಿ, ವಿಜಯ್, ವೈಜನಾಥ ಬಿರಾದಾರ್

ಶಂಕರನಾಗ್‌ ನಿರ್ದೇಶನದ ‘ಒಂದು ಮುತ್ತಿನ ಕಥೆ’ ಸಿನಿಮಾದ ಆಧುನಿಕ ರೂಪ ಯೋಗರಾಜ ಭಟ್‌ ನಿರ್ದೇಶನದ ‘ದನ ಕಾಯೋನು’. ಅಲ್ಲಿನ ಬೆಲೆಬಾಳುವ ಮುತ್ತು, ಈ ಹೊತ್ತಿನ ಅಪರೂಪದ ತಳಿಯ ಹೋರಿ. ದುಡ್ಡಿನ ಕಾರಣದಿಂದಾಗಿ ಮನುಷ್ಯರ ಮುಖವಾಡಗಳು ಕಳಚಿಬೀಳುವುದು ಹಾಗೂ ಅಂತಃಕರಣವೇ ದೊಡ್ಡದೆನ್ನುವ ಆದರ್ಶ ಎರಡು ಚಿತ್ರಗಳಲ್ಲೂ ಇದೆ.

ಆದರೆ, ‘ಒಂದು ಮುತ್ತಿನ ಕಥೆ’ ಚಿತ್ರದಲ್ಲಿರುವ ದಟ್ಟ ಪ್ರಾದೇಶಿಕ ಆವರಣ ‘ದನ ಕಾಯೋನು’ ಚಿತ್ರದಲ್ಲಿಲ್ಲ. ರಾಜಕುಮಾರ್‌, ಅರ್ಚನಾ ಅವರಂಥ ಅನುಭವಿ ಕಲಾವಿದರ ಪ್ರಭಾವಳಿ ಈ ಚಿತ್ರದಲ್ಲಿಲ್ಲ. ‘ಒಂದು ಮುತ್ತಿನ ಕಥೆ’ ಪ್ರೇಕ್ಷಕರ ಮನಸ್ಸಿನಲ್ಲಿ ಉಳಿಸುವ ಗಾಢ ವಿಷಾದ ಕೂಡ ಭಟ್ಟರ ಚಿತ್ರದಿಂದ ದಕ್ಕುವುದಿಲ್ಲ.

‘ಗಾಳಿಪಟ’ ಚಿತ್ರದ ನಂತರ ಯೋಗರಾಜ ಭಟ್‌ ಅವರು ಹೆಚ್ಚು ಸಾಧ್ಯತೆಗಳಿರುವ ಕಥೆಯನ್ನು ಆಯ್ದುಕೊಂಡಿರುವುದು ‘ದನ ಕಾಯೋನು’ ಚಿತ್ರದಲ್ಲಿಯೇ. ಊರವರ ದನಗಳನ್ನು ಕಾಯುವ ಕುಟುಂಬವೊಂದರ ತವಕತಲ್ಲಣಗಳ ಸಿನಿಮಾ ತನ್ನ ವಿಶಿಷ್ಟ ಕಥೆಯಿಂದಾಗಿ ಗಮನಸೆಳೆಯುತ್ತದೆ. ಅಪ್ಪನಾಗಿ ಬಿರಾದಾರ್‌ ಹಾಗೂ ಮಗನಾಗಿ ವಿಜಯ್‌ ಅಭಿನಯ ಚೆನ್ನಾಗಿದೆ.

ಮಂದೆಯಲಿ ಒಂದಾಗುವ ರಂಗಾಯಣ ರಘು ಅವರ ಪಾತ್ರವೂ ಸೊಗಸಾಗಿದೆ. ಆದರೆ, ಗೋಪಾಲಕರು ಹಾಗೂ ಪಶುಗಳ ನಡುವೆ ಸಾಧ್ಯವಾಗಬೇಕಾಗಿದ್ದ ಭಾವುಕ ಸಂಬಂಧ ಚಿತ್ರದಲ್ಲಿ ತೆಳುವಾಗಿದೆ. ದನಕರುಗಳ ಮಂದೆ ಕಾಣಿಸುವುದನ್ನು ಬಿಟ್ಟರೆ ಚಿತ್ರದಲ್ಲಿನ ಜನರಿಗೂ ದನಗಳಿಗೂ ಅಷ್ಟಾಗಿ ವ್ಯತ್ಯಾಸ ಇಲ್ಲ. 

ಗೋಪಾಲಕರ ಬದುಕಿನ ಅಂತರಂಗವನ್ನು ಕಾಣಿಸುವ ಪ್ರಯತ್ನ ಕೂಡ ಪರಿಣಾಮಕಾರಿಯಾಗಿಲ್ಲ. (‘ತಿಥಿ’ ಚಿತ್ರದಲ್ಲಿ ಅನಾವರಣಗೊಂಡಿರುವ ಕುರಿ ಕಾಯುತ್ತ ಊರೂರು ಅಲೆಯುವವರ ಬದುಕಿನ ಅದ್ಭುತ ಚಿತ್ರಣ ನೆನಪಾಗುತ್ತದೆ).

‘ಅಪ್ಪಟ ಭಾರತದ ಚಿತ್ರ’ ಎನ್ನುವ ಅಡಿ ಟಿಪ್ಪಣಿಯ ಸಿನಿಮಾದಲ್ಲಿ ಹಳ್ಳಿಯ ಬಾಹ್ಯ ಚೌಕಟ್ಟಷ್ಟೇ ಇದೆ. ಗ್ರಾಮೀಣ ಬದುಕಿನ ಅಬ್ಬರವನ್ನು ಕಟ್ಟಿಕೊಡಲು ತೋರಿಸಿರುವ ಉತ್ಸಾಹವನ್ನು ಊರುಕೇರಿಗಳಲ್ಲಿನ ಮೌನವನ್ನು ಒಳಗೊಳ್ಳಲು ನಿರ್ದೇಶಕರು ಪ್ರಯತ್ನಿಸಿಲ್ಲ. ಊರಿನ ಚೇರ್ಮನ್ನನ ಹೆಂಡತಿಯ ಸರ ನುಂಗಿದ ಹೋರಿಯನ್ನು ಸಾಯಿಸಲು ಹೊರಡುವ ಸನ್ನಿವೇಶದಲ್ಲಿ ಇದ್ದಕ್ಕಿದ್ದಂತೆ ಮುಸ್ಲಿಮರನ್ನು ತರುವ ಸನ್ನಿವೇಶ ಅಸೂಕ್ಷ್ಮವಾಗಿದೆ. ನಾಯಕಿಯನ್ನು ಆಸೆಬುರುಕಿಯಂತೆಯೂ ನಾಯಕನನ್ನು ಉದಾತ್ತಪುರುಷನಂತೆಯೂ ಚಿತ್ರಿಸಿರುವುದು ಕೂಡ ಕ್ಲೀಷೆಯಾಗಿದೆ.

ಯೋಗರಾಜ ಭಟ್ಟರ ಹಿಂದಿನ ಚಿತ್ರಗಳಂತೆ ‘ದನ ಕಾಯೋನು’ ಚಿತ್ರದಲ್ಲಿಯೂ ಚುರುಕಾದ ಸಂಭಾಷಣೆಗಳಿವೆ. ಹರಿಕೃಷ್ಣರ ಸಂಗೀತ ಸಂಯೋಜನೆ – ಯೋಗರಾಜ ಭಟ್‌ ಸಾಹಿತ್ಯದ ಹಾಡುಗಳು ಕೇಳಿಸಿಕೊಳ್ಳುವಂತಿವೆ, ನೋಡಿಸಿಕೊಳ್ಳುವಂತಿವೆ. ಗೋಪಾಲಕರಾಗಿ ವಿಜಯ್‌ ಥೇಟ್‌ ಹಳ್ಳಿ ಹುಡುಗನೇ ಆಗಿದ್ದರೆ, ಪೊಲೀಸ್‌ ಆಗುವ ಆಸೆಯ ಯುವತಿಯಾಗಿ ಪ್ರಿಯಾಮಣಿ ಅಭಿನಯ ಚೆನ್ನಾಗಿದೆ. ಬಿರಾದಾರ್‌ ಅವರ ಪಾತ್ರಪೋಷಣೆ ಗಟ್ಟಿತನದಿಂದ ಕೂಡಿದೆ. ಸುಜ್ಞಾನ್‌ ಛಾಯಾಗ್ರಹಣ ಕಥೆಯ ನಿರೂಪಣೆಗೆ ವೇಗವರ್ಧಕದಂತಿದೆ.

ಗ್ರಾಮೀಣ ಕಥೆಗಳ ಸಿನಿಮಾಗಳು ಅಪರೂಪವಾಗುತ್ತಿರುವ ಸಂದರ್ಭದಲ್ಲಿ ‘ದನ ಕಾಯೋನು’ ರೀತಿಯ ಪರಿಕಲ್ಪನೆಯೇ ವಿಶೇಷವಾಗಿದೆ. ಆದರೆ, ಕಥೆಯಲ್ಲಿನ ಸೂಕ್ಷ್ಮಗಳಿಗೂ ಮಿಗಿಲಾಗಿ ಸಿದ್ಧಸೂತ್ರಗಳ ರಂಜನೆಗೆ ನಿರ್ದೇಶಕರು ಒತ್ತು ನೀಡಿರುವುದರಿಂದ ಕಾಡುವ ಗುಣವನ್ನು ಸಿನಿಮಾ ಕಳೆದುಕೊಂಡಿದೆ.
ಹಳ್ಳಿಗಳ ಆತ್ಮ ಇರುವುದು ಅಲ್ಲಿನ ಬದುಕಿನಲ್ಲಿನ ಸಾವಧಾನದಲ್ಲಿ. ‘ದನ ಕಾಯೋನು’ ಚಿತ್ರದ ಆತ್ಮ ಇರುವುದು ಧಾವಂತದಲ್ಲಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT