ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜೀವನದ ಉತ್ಸವದಲ್ಲಿ ಶಕ್ತಿಯ ಆರಾಧನೆ

Last Updated 7 ಅಕ್ಟೋಬರ್ 2016, 19:30 IST
ಅಕ್ಷರ ಗಾತ್ರ

ಮನುಷ್ಯನ ಜೀವನದುದಕ್ಕೂ ಅನಿವಾರ್ಯವಾಗಿರುವಂಥದ್ದು ಶಕ್ತಿ. ಅವನ ಹುಟ್ಟಿನಿಂದ ಮೊದಲುಗೊಂಡು ಅವನು ಮಾಡುವ ಎಲ್ಲ ಕೆಲಸಗಳಿಗೂ ಮೂಲವೇ ಶಕ್ತಿ; ಅಷ್ಟೇಕೆ, ಇಡಿಯ ಸೃಷ್ಟಿಯೇ ಶಕ್ತಿಯಿಂದ ಆಗಿದೆ; ಶಕ್ತಿಮೂಲವಾಗಿದೆ. ಭಾರತೀಯ ಸಂಸ್ಕೃತಿಯಲ್ಲಿ ಶಕ್ತಿಯನ್ನು ತಾಯಿಯ ರೂಪದಲ್ಲಿ ಕಂಡು ಆರಾಧಿಸಲಾಗಿದೆ; ಈಗಲೂ ಆರಾಧಿಸಲಾಗುತ್ತಿದೆ.

ಶಕ್ತಿಯನ್ನು ತಾಯಿಯಾಗಿ ಕಂಡು; ಆ ತಾಯಿಯನ್ನು ಜಗನ್ಮಾತೆಯಾಗಿ ಪೂಜಿಸಲಾಗುತ್ತದೆ. ತಾಯಿ ಎಂದರೆ ನಮ್ಮ ಹುಟ್ಟು; ನಮ್ಮನ್ನು ಪ್ರತಿ ಕ್ಷಣವೂ ಪ್ರೀತಿಯಿಂದಲೇ ಕಾಪಾಡುವವಳು. ಶಕ್ತಿಯನ್ನು ಈ ಹಿನ್ನೆಲೆಯಲ್ಲಿ ಕಂಡಿರುವುದು ನಮ್ಮ ಸಂಸ್ಕೃತಿಯ ಹಿರಿಮೆ, ಪ್ರಕೃತಿಯನ್ನೇ ತಾಯಿಯ ರೂಪದಲ್ಲಿ ಭಾವಿಸಿಕೊಂಡಿರುವುದು ಕೂಡ ಇಲ್ಲಿ ಗಮನಾರ್ಹ.

ಮಕ್ಕಳ ಅಭಿವೃದ್ಧಿಯನ್ನು ಕಂಡು ಸಂತಸ ಪಡುವ ತಾಯಿ, ಅದೇ ಮಕ್ಕಳು ತಪ್ಪು ಮಾಡಿದಾಗ ಶಿಕ್ಷಿಸಲೂ ಮುಂದಾಗುತ್ತಾಳೆ; ಹೀಗೆ ಮಾಡುವುದು ಕೂಡ ಮಕ್ಕಳ ಒಳಿತಿಗಾಗಿಯೇ. ಜಗನ್ಮಾತೆಯನ್ನು ಈ ವಿಧದಲ್ಲೂ ಕಾಣಲಾಗಿದೆ.

ಶರತ್ಕಾಲದಲ್ಲಿ ಆಚರಿಸುವ ನವರಾತ್ರಿ (ಸರಿಯಾದ ರೂಪ ‘ನವರಾತ್ರ’)ಯಲ್ಲಿ ಜಗನ್ಮಾತೆಯ ಹಲವು ಸ್ವರೂಪಗಳನ್ನು ಪೂಜಿಸಲಾಗುತ್ತದೆ. ಇದರಲ್ಲಿ ಅವಳ ಸೌಮ್ಯರೂಪವೂ ಇದೆ; ಉಗ್ರರೂಪವೂ ಇದೆ. ನಮ್ಮ ಜೀವನ ಹೇಗೆ ಶಕ್ತಿಯಿಂದ ತುಂಬಿದೆ ಎನ್ನುವುದಕ್ಕೂ ಈ ಹಬ್ಬ ಸಂಕೇತದಂತಿದೆ.

ಶಕ್ತಿ ಎಂದರೆ ಕೇವಲ ದೈಹಿಕ ಬಲವಷ್ಟೇ ಅಲ್ಲ; ನಮ್ಮ ಅಂತರಂಗದ ದೃಢತೆಯೂ ಶಕ್ತಿಯ ಸ್ವರೂಪವೇ. ವಿದ್ಯೆ, ಸೌಂದರ್ಯ, ಧನ, ಧಾನ್ಯ, ಮನಸ್ಸು, ಬುದ್ಧಿ, ಕ್ರಿಯೆ, ಸಂಕಲ್ಪ,  – ಹೀಗೆ ಜೀವನದ ಒಂದೊಂದು ವಿವರವೂ ಶಕ್ತಿಯ ರೂಪವೇ ಹೌದು. ಶಕ್ತಿ ಎಂದರೆ ಕೇವಲ ಹೊರಗಿನಶಕ್ತಿಯಲ್ಲ; ಅದು ಅಂತರಂಗದ ಬಲವೂ ಹೌದು; ಅಂತರಂಗದ ಸೌಂದರ್ಯವೂ ಹೌದು.

ಇವೆಲ್ಲವನ್ನೂ ಪ್ರತಿನಿಧಿಸುವಂತೆ ನವರಾತ್ರಿಯ ಆಚರಣೆ ರೂಪುಗೊಂಡಿದೆ. ಈ ಸಂದರ್ಭದಲ್ಲಿ ದುರ್ಗಾಪಾರಾಯಣ, ರಾಮಾಯಣದ ಪಾರಾಯಣಗಳನ್ನೂ ನಡೆಸುವುದುಂಟು. ಪಾರಾಯಣ ಎಂದರೆ ಗ್ರಂಥವೊಂದು ನಮ್ಮ ಜೀವನದ ಭಾಗವಾಗುವುದು ಎಂದರ್ಥ; ಆ ಆದರ್ಶದಂತೆ ನಮ್ಮ ಬದುಕನ್ನು ರೂಪಿಸಿಕೊಳ್ಳುವುದು ಎಂದರ್ಥ.

ನವರಾತ್ರಿಯನ್ನು ಒಂಬತ್ತು ದಿನಗಳಿಗೆ ಸೀಮಿತಮಾಡದೆ ಅದನ್ನು ಹತ್ತನೆಯ ದಿನಕ್ಕೂ ವಿಸ್ತರಿಸಿರುವುದು ವಿಶೇಷ. ಹತ್ತನೆಯ ದಿನವನ್ನು ‘ವಿಜಯದಶಮಿ’ ಎಂದು ಕರೆದಿರುವುದು ಕೂಡ ಸ್ವಾರಸ್ಯಕರವಾಗಿದೆ. ನಮ್ಮ ಅಂತರಂಗವೂ ಬಹಿರಂಗವೂ ಶಕ್ತಯುತವಾಗಿದ್ದರೆ ಜೀವನದಲ್ಲಿ ಜಯ ಸಿಗುವುದು ಖಂಡಿತವಷ್ಟೆ.

***
ನವದುರ್ಗೆಯರು

ನವರಾತ್ರಿಯಲ್ಲಿ ಪೂಜಿತರಾಗುವರು ನವದುರ್ಗೆಯರು; ಇವರು ಶಕ್ತಿಯ ಬೇರೆ ಬೇರೆ ರೂಪಗಳು. ದುರ್ಗೆಯ ರೂಪಗಳು ಅನಂತ. ಆದರೆ ಅವಳು ಪ್ರತಿನಿಧಿಸುವ ಶಕ್ತಿಯ ಎಲ್ಲ ರೂಪಗಳ ಸಂಕೇತವಾಗಿ ನವರಾತ್ರಿಯಂದು ಅವಳ ಒಂಬತ್ತು ರೂಪಗಳನ್ನು ಪೂಜಿಸಲಾಗುತ್ತದೆ.

*
ಶೈಲಪುತ್ರೀ

ಮೊದಲನೆಯ ದಿನ ಪೂಜಿತವಾಗುವ ದೇವಿಯ ಹೆಸರು ಶೈಲಪುತ್ರೀ. ಪರ್ವತರಾಜ ಹಿಮವಂತನ ಮಗಳಾಗಿ ದೇವಿ ಅವತರಿಸಿದ ಕಾರಣ ಅವಳನ್ನು ‘ಶೈಲಪುತ್ರೀ’ ಎಂದು ಕರೆಯುತ್ತಾರೆ. ಅವಳನ್ನು ಕುರಿತ ಧ್ಯಾನಶ್ಲೋಕ ಹೀಗಿದೆ:

ವಂದೇ ವಂಛಿತಲಾಭಾಯ ಚಂದ್ರಾರ್ಧಕೃತಶೇಖರಾಮ್‌ l
ವೃಷಾರೂಢಾಂ ಶೂಲಧರಾಂ ಶೈಲಪುತ್ರೀ
ಯಶಸ್ವಿನೀಮ್‌ ll

ವೃಷಭವಾಹನೆಯಾದ ಶೈಲಪುತ್ರಿಯು ಬಲಗೈಯಲ್ಲಿ ತ್ರಿಶೂಲವನ್ನು ಮತ್ತು ಎಡಗೈಯಲ್ಲಿ ಕಮಲದ ಹೂವನ್ನು ಹಿಡಿದಿದ್ದಾಳೆ. ಅವಳು ಬೇಡಿದ ವರವನ್ನು ನೀಡುವವಳು. ಹಿಂದಿನ ಜನ್ಮದಲ್ಲಿ ಪ್ರಜಾಪತಿಯಾದ ದಕ್ಷನ ಮಗಳಾಗಿ ಹುಟ್ಟಿದ್ದಳು.

ಅವಳ ಪತಿ ಶಿವನಿಗೆ ಎದುರಾದ ಅಪಮಾನವನ್ನು ಸಹಿಸದೆ ತನ್ನ ದೇಹವನ್ನೇ ಅಗ್ನಿಗೆ ಅರ್ಪಣೆ ಮಾಡಿದಳು. ಮುಂದೆ ಅವಳೇ ‘ಪಾರ್ವತೀ’ ರೂಪದಲ್ಲಿ ಜನಿಸಿದಳು. ‘ಹೈಮವತೀ’ ಎಂಬ ಇನ್ನೊಂದು ಹೆಸರೂ ಅವಳಿಗುಂಟು.

*
ಬ್ರಹ್ಮಚಾರಿಣೀ

ಎರಡನೆಯ ದಿನ ಪೂಜಿತವಾಗುವ ದೇವಿಯ ಹೆಸರು ‘ಬ್ರಹ್ಮಚಾರಿಣೀ’. ‘ಬ್ರಹ್ಮ ’ ಎಂದರೆ ತಪಸ್ಸು ಎಂದರ್ಥ; ಸದಾ ಕಾಲ ಅವಳು ತಪಸ್ಸಿನಲ್ಲಿರುವುದರಿಂದ ಅವಳಿಗೆ ಈ ಹೆಸರು ಬಂದಿದೆ. ಬಲಗೈಯಲ್ಲಿ ಜಪಮಾಲೆಯನ್ನೂ ಎಡಗೈಯಲ್ಲಿ ಕಮಂಡಲವನ್ನೂ ಹಿಡಿದಿದ್ದಾಳೆ. ಅವಳನ್ನು ಕುರಿತ ಧ್ಯಾನಶ್ಲೋಕ ಹೀಗಿದೆ:

ದಧಾನ ಕರಪದ್ಮಾಭ್ಯಾಮಕ್ಷಮಾಲಾಕಮಂಡಲೂ l
ದೇವೀ ಪ್ರಸೀದತು ಮಯಿ ಬ್ರಹ್ಮಚಾರಿಣ್ಯನುತ್ತಮಾ ll


ಶಿವನನ್ನು ವರಿಸಿದಳು ಹಿಮವಂತನ ಪುತ್ರಿಯಾಗಿ ಜನಿಸಿದ ದೇವಿ ಕಠಿಣ ತಪಸ್ಸನ್ನು ಮಾಡಿದಳು. ಹೀಗಾಗಿ ಅವಳಿಗೆ ಈ ಹೆಸರು ಬಂದಿತು. ಮಗಳ ತಪಸ್ಸಿನ ತೀವ್ರತೆಯನ್ನು ನೋಡಿ ‘ನೋಡು! ಬೇಡ!!’ – ತಪಸ್ಸು ಬೇಡ ( ಉಮಾ) – ಎಂದು ಮೇನಾದೇವಿ ಹೇಳಿದಳಂತೆ; ಆದುದರಿಂದ ‘ಉಮಾ’ ಎಂಬ ಹೆಸರನ್ನೂ ಪಡೆದಳು.

*
ಚಂದ್ರಘಂಟಾ

ಮೂರನೆಯ ದಿನ ಪೂಜಿವಾಗುವ ದೇವಿಯ ಹೆಸರು ಚಂದ್ರಘಂಟಾ. ಸಿಂಹವಾಹನೆಯಾಗಿರುವ ಅವಳು ಯುದ್ಧಕ್ಕೆ ಸಿದ್ಧಳಾದ ಸ್ಥಿತಿಯಲ್ಲಿರುತ್ತಾಳೆ. ಯುದ್ಧಕ್ಕೆ ಬೇಕಾದ ಅಸ್ತ್ರಶಸ್ತ್ರಗಳನ್ನು ಹತ್ತು ಕೈಗಳಲ್ಲಿ ಹಿಡಿದಿದ್ದಾಳೆ. ಇವಳ ತಲೆಯಲ್ಲಿ ಗಂಟೆಯ ಆಕಾರದಲ್ಲಿ ಚಂದ್ರನಿದ್ದಾನೆ. ಗಂಟೆಯ ನಾದದಿಂದಲೇ ಅವಳು ದುಷ್ಟರನ್ನು ನಿಗ್ರಹಿಸುತ್ತಾಳೆ. ಚಂದ್ರಘಂಟಾದೇವಿಯ ಧ್ಯಾನಶ್ಲೋಕ ಹೀಗಿದೆ:

ಪಿಂಡಜಪ್ರವರಾರೂಢಾ ಚಂಡಕೋಪಾಸ್ತ್ರಕೈರ್ಯುತಾ l
ಪ್ರಸಾದಂ ತನುತೇ ಮಹ್ಯಂ ಚಂದ್ರಘಂಟೇತಿ ವಿಶ್ರುತಾ l


*
ಕೂಷ್ಮಾಂಡಾ

ನಾಲ್ಕನೆಯ ದಿನ ಪೂಜಿತವಾಗುವ ದೇವಿ ‘ಕಾಷ್ಮಾಂಡಾ.’ ಅಂಡ ಎಂದರೆ ಬ್ರಹ್ಮಾಂಡ; ಸೃಷ್ಟಿ. ಇಡಿಯ ಸೃಷ್ಟಿಯೇ ದೇವಿಯಿಂದಾಗಿದೆ; ಆದುದರಿಂದ ಅವಳು ‘ಕಾಷ್ಮಾಂಡಾ’. ಅವಳು ತನ್ನ ನಗುವಿನಿಂದಿಲೇ ಜಗತ್ತನ್ನು ಸೃಷ್ಟಿಸಿದಳಂತೆ. ಕೈಯಲ್ಲಿ ಅಮೃತಕಲಶವನ್ನು ಹಿಡಿದಿದಿರುವ ದೇವಿ ಕೂಷ್ಮಾಂಡಾಳ ವಾಹನ ಸಿಂಹ. ಅವಳನ್ನು ಕುರಿತ ಧ್ಯಾನಶ್ಲೋಕ ಹೀಗಿದೆ:

ಸುರಾಸಂಪೂರ್ಣಕಲಶಂ ರುಧಿರಾಪ್ಲುತಮೇವ ಚ  l
ದಧಾನಾ ಹಸ್ತಪದ್ಮಾಭ್ಯಾಂ ಕೂಷ್ಮಾಂಡಾ ಶುಭದಾಸ್ತು ಮೇ ll


*
ಸ್ಮಂದಮಾತಾ

ಐದನೆಯ ದಿನ ದುರ್ಗೆಯನ್ನು ‘ಸ್ಕಂದಮಾತಾ’ ರೂಪದಲ್ಲಿ ಪೂಜಿಸಲಾಗುತ್ತದೆ. ‘ಸ್ಕಂದ’ ಎಂದರೆ ಸುಬ್ರಹ್ಮಣ್ಯನ ತಾಯಿಯಾದುದರಿಂದ ಜಗನ್ಮಾತೆಗೆ ಈ ಹೆಸರು ಬಂದಿದೆ. ಸುಬ್ರಹ್ಮಣ್ಯನಿಗೆ ಹಲವು ಹೆಸರುಗಳು; ಅವುಗಳಲ್ಲಿ ಒಂದು ‘ಕುಮಾರ’.

ಅವನು ದೇವತೆಗಳ ಸೇನಾಪತಿ. ಸಿಂಹವಾಹನೆಯಾಗಿರುವ ಸ್ಕಂದಮಾತಾ ಮಗನಾದ ಸ್ಕಂದನನ್ನು ತೊಡೆಯ ಮೇಲೆ ಕುಳ್ಳರಿಸಿಕೊಂಡಿದ್ದಾಳೆ. ಅವಳ ಧ್ಯಾನಶ್ಲೋಕ ಹೀಗಿದೆ:

ಸಿಂಹಾಸನಗತಾ ನಿತ್ಯಂ ಪದ್ಮಾಶ್ರಿತಕರದ್ವಯಾಮ್‌ l
ಶುಭಸ್ತದಾ ಸದಾ ದೇವೀ ಸ್ಕಂದಮಾತಾ ಯಶಸ್ವಿನೀ ll


*
ಕಾತ್ಯಾಯನೀ

ದುರ್ಗೆಯ ಆರನೆಯ ಸ್ವರೂಪವೇ ‘ಕಾತ್ಯಾಯನೀ.’ ಮಹಿಷಾಸುರನ ಸಂಹಾರಕ್ಕೆಂದು ದೇವಿ ರೂಪತಾಳಿದಾಗ ಅವಳನ್ನು ಮೊದಲು ಪೂಜಿಸಿದ್ದು ಮಹರ್ಷಿ ಕಾತ್ಯಾಯನ. ಹೀಗಾಗಿ ಅವಳಿಗೆ ‘ಕಾತ್ಯಾಯಿನೀ’ ಎಂಬ ಹೆಸರು ಬಂದಿತು. ಸಿಂಹವಾಹನೆಯಾದ ಅವಳು ಕೈಯಲ್ಲಿ ಖಡ್ಗವನ್ನು ಹಿಡಿದ್ದಾಳೇ. ಅವಳ ಧ್ಯಾನಶ್ಲೋಕ ಹೀಗಿದೆ:

ಚಂದ್ರಹಾಸೋಜ್ಜ್ವಲಕರಾ ಶಾರ್ದೂಲವರವಾಹನಾ l
ಕಾತ್ಯಾಯನೀ ಶುಭಂ ದದ್ಯಾದ್ದೇವೀ ದಾನವಘಾತಿನೀ ll


*
ಕಾಲರಾತ್ರೀ

ದುರ್ಗೆಯ ಏಳನೆಯ ಸ್ವರೂಪವೇ ‘ಕಾಲರಾತ್ರೀ’. ಇವಳು ನೋಡಲು ಭಯಂಕರಸ್ವರೂಪಳು; ಮೂರು ಕಣ್ಣನ್ನು ಹೊಂದಿದವಳು. ಆದರೆ ಅವಳು ಎಲ್ಲರಿಗೂ ಒಳ್ಳೆಯದನ್ನೇ ಮಾಡುವವಳು. ಅವಳ ವಾಹನ ಕತ್ತೆ. ತಾಯಿ ಕಾಲರಾತ್ರಿಯ ಧ್ಯಾನಶ್ಲೋಕ ಹೀಗಿದೆ:

ಏಕವೇಣೀ ಜಪಾಕರ್ಣಪೂರ ನಗ್ನಾ ಖರಸ್ಥಿತಾ l
ಲಂಬೋಷ್ಠೀ ಕರ್ಣಿಕಾಕರ್ಣೀ ತೈಲಾಭ್ಯಕ್ತಶರೀರಿಣೀ ll
ವಾಮಪಾದೋಲ್ಲಸಲ್ಲೋಹಲತಾಕಂಟಕಭೂಷಣಾ l
ವರ್ಧನಮೂರ್ಧಧ್ವಜಾ ಕೃಷ್ಣಾ ಕಾಲರಾತ್ರಿರ್ಭಯಂಕರೀ ll


*
ಮಹಾಗೌರೀ

ಎಂಟನೆಯ ದಿನ ಪೂಜಿತವಾಗುವ ದುರ್ಗೆಯ ರೂಪವೇ ಮಹಾಗೌರೀ. ಬಿಳಿಯ ಬಣ್ಣದಲ್ಲಿರುವುದರಿಂದ ದೇವಿಗೆ ಈ ಹೆಸರು ಬಂದಿದೆ. ಬಿಳಿ ಎನ್ನುವುದು ಶುದ್ಧತ್ವಕ್ಕೆ ಸಂಕೇತ. ಅವಳ ವಾಹನ ಬಿಳಿಯ ಎತ್ತು. ಅವಳ ಧ್ಯಾನಶ್ಲೋಕ ಹೀಗಿದೆ:

ಶ್ವೇತೇ ವೃಷೇ ಸಮಾರೂಢಾ ಶ್ವೇತಾಂಬರಧರಾ ಶುಚಿಃ|
ಮಹಾಗೌರೀ ಶುಭಂ ದದ್ಯಾನ್ಮಹಾದೇವಪ್ರಮೋದದಾ ll


*
ಸಿದ್ಧಿದಾತ್ರೀ

ದೇವಿಯ ಒಂಬತ್ತನೆಯ ರೂಪವೇ ಸಿದ್ಧಿದಾತ್ರೀ. ಅವಳು ಎಲ್ಲ ಬಗೆಯ ಸಿದ್ಧಿಗಳನ್ನೂ ಕೊಡುವವಳು; ಹೀಗಾಗಿ ಅವಳಿಗೆ ಈ ಹೆಸರು ಬಂದಿದೆ. ಅವಳ ಧ್ಯಾನಶ್ಲೋಕ ಹೀಗಿದೆ:

ಸಿದ್ಧಗಂದರ್ವಯಕ್ಷಾದ್ಯೈರಸುರೈರಮರೈರಪಿ l
ಸೇವ್ಯಮಾನಾ ಸದಾ ಭೂಯಾತ್‌ ಸಿದ್ಧಿದಾ ಸಿದ್ಧಿದಾಯಿನೀ ll

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT