ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಂ.ಆರ್.ಶ್ರೀ. ಅವರ ‘ಕವಿಯ ಸೋಲು’

ಹಳತು ಹೊನ್ನು
Last Updated 8 ಅಕ್ಟೋಬರ್ 2016, 19:30 IST
ಅಕ್ಷರ ಗಾತ್ರ

‘ಕವಿಯ ಸೋಲು’ ಎಂ.ಆರ್. ಶ್ರೀನಿವಾಸಮೂರ್ತಿ ಅವರ ಕವನ ಸಂಕಲನ. ಇದರ ಮೊದಲ ಆವೃತ್ತಿ 1933ರಲ್ಲಿ ಬೆಂಗಳೂರು ನಗರದ ‘ಸತ್ಯಶೋಧನ ಪ್ರಕಟನ ಮಂದಿರ’ದಿಂದ ಪ್ರಕಟವಾಯಿತು. ಅಂದಿನ ಇದರ ಬೆಲೆ ಒಂದು ರೂಪಾಯಿ ನಾಲ್ಕು ಆಣೆ.

ಆಗಸ್ಟ್ 28, 1892ರಲ್ಲಿ ಮೈಸೂರಿನಲ್ಲಿ ಜನಿಸಿದ ಎಂ.ಆರ್. ಶ್ರೀನಿವಾಸಮೂರ್ತಿ ಅವರು 1915ರಲ್ಲಿ ವಿಜ್ಞಾನದಲ್ಲಿ ಬಿ.ಎ. ಪದವಿಯನ್ನು ಪಡೆದು, ನಂತರ ಬಿ.ಟಿ. ಪರೀಕ್ಷೆ ಮಾಡಿಕೊಂಡು ನಾರ್ಮಲ್ ಮಾಧ್ಯಮಿಕ ಶಾಲೆಯೊಂದರ ಮುಖ್ಯೋಪಾಧ್ಯಾಯರಾಗಿ, ರೇಂಜ್ ಇನ್‌ಸ್ಪೆಕ್ಟರ್ ಆಗಿ 1947ರಲ್ಲಿ ನಿವೃತ್ತರಾದರು. ವಚನ ವಾಙ್ಮಯಕ್ಕೆ ಒಲಿದ ಅವರಿಗೆ 1940ರಲ್ಲಿ ಬಾದಾಮಿಯ ಶಿವಯೋಗ ಮಂದಿರವು ‘ವಚನ ವಾಙ್ಮಯ ವಿಶಾರದ’ ಎನ್ನುವ ಪ್ರಶಸ್ತಿಯನ್ನು ನೀಡಿ ಗೌರವಿಸಿತು. ‘ಭಕ್ತಿ ಭಂಡಾರಿ ಬಸವಣ್ಣನವರು’ (ಜೀವನ ಚರಿತ್ರೆ), ‘ವಚನಧರ್ಮ ಸಾರ’ (ವಿಮರ್ಶೆ) ಹಾಗೂ ‘ಪ್ರಭುಲಿಂಗಲೀಲೆಯಸಂಗ್ರಹ’ (1934  ಗ್ರಂಥ ಸಂಪಾದನೆ) – ಅವರ ಮೌಲಿಕ ಕೃತಿಗಳು. ‘ವೀರಶೈವ ಸಾಹಿತ್ಯ ಚರಿತ್ರೆ’ ಅವರ ಅಪ್ರಕಟಿತ ಕೃತಿ. ‘ಆಯಸ್ಕಾಂತತೆ ಮತ್ತು ವಿದ್ಯುಚ್ಛಕ್ತಿ’ (1933) ಹಾಗೂ 1939ರಲ್ಲಿ ಪ್ರಕಟಗೊಂಡ ‘ಉಪಾಧ್ಯಾಯರ ಆರೋಗ್ಯ ಕೈಪಿಡಿ’ (ಸಚಿತ್ರ) ಇವು ಇವರ ವಿಜ್ಞಾನದ ಕೃತಿಗಳು. ಪ್ರಸಿದ್ಧ ವಾಗ್ಮಿಯೂ ಆಡಳಿತಗಾರರೂ ಆಗಿದ್ದ ಅವರು 1950ರಲ್ಲಿ ಸೊಲ್ಲಾಪುರದಲ್ಲಿ ನಡೆದ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು.

ಕನ್ನಡ ಸಾಹಿತ್ಯ ಪರಿಷತ್ತನ್ನು ಕಟ್ಟಿ ಬೆಳೆಸಿದ ಮಹನೀಯರಲ್ಲೊಬ್ಬರಾದ ಶ್ರೀಯುತರು 1950–53ರ ಅವಧಿಯಲ್ಲಿ ಪರಿಷತ್ತಿನ ಅಧ್ಯಕ್ಷರಾಗಿದ್ದು, ‘ಕನ್ನಡ ನುಡಿ’ ಹಾಗೂ ‘ಕನ್ನಡ ಸಾಹಿತ್ಯ ಪರಿಷತ್ಪತ್ರಿಕೆ’ ಹಾಗೂ ‘ಪ್ರಬುದ್ಧ ಕರ್ಣಾಟಕ’ಗಳ ಸಂಪಾದಕರೂ ಆಗಿದ್ದರು. ಮೈಸೂರು ವಿಶ್ವವಿದ್ಯಾನಿಲಯದವರು ಪ್ರಕಟಿಸಿರುವ ‘ಬೃಹತ್ ಇಂಗ್ಲಿಷ್–ಕನ್ನಡ ನಿಘಂಟು’ವಿನ (1939) ಪ್ರಧಾನ ಸಂಪಾದಕರಾಗಿದ್ದ ಅವರು 16ನೇ ಸೆಪ್ಟೆಂಬರ್ 1953ರಲ್ಲಿ ನಿಧನ ಹೊಂದಿದರು.

‘ಕವಿಯ ಸೋಲು’ ಅವರ ಏಕೈಕ ಕವಿತಾಸಂಗ್ರಹ. ‘ನಮ್ಮ ಗೌರಿ’ ಎಂಬುದು ಸರಳ ರಗಳೆಯಲ್ಲಿ ರಚಿತವಾಗಿರುವ ಅವರ ಅಪ್ರಕಟಿತ ಕಥನ ಕವನ (ಇದರ ಕವಿಯ ಸ್ವಹಾಸ್ತಾಕ್ಷರ ಮೂಲ ಪ್ರತಿ ಈ ಟಿಪ್ಪಣಿಕಾರನ ಬಳಿಯಲ್ಲಿದೆ). ‘ಕಂಠೀರವ ವಿಜಯ’ (1923),  ‘ನಾಗರಿಕ’ (1930), ‘ರೂಲ್ಸ್ ಮೇಷ್ಟ್ರು’ (1941) ಹಾಗೂ ‘ಧರ್ಮದುರಂತ’ (1947) ಇವರ ಪ್ರಕಟಿತ ನಾಟಕಗಳು ಮತ್ತು ‘ಯದುವಿಜಯ’ ಅಪ್ರಕಟಿತ ನಾಟಕ. ‘ಸಾವಿತ್ರಿ’ (1917) ಹಾಗೂ ‘ಮಹಾತ್ಯಾಗ’ ಕಾದಂಬರಿಗಳಾಗಿದ್ದರೆ ‘ರಂಗಣ್ಣನ ಕನಸಿನ ದಿನಗಳು’ ಒಂದು ಅಪೂರ್ವ ಅನುಭವ ಕಥನ.

‘ಶ್ಯಾಮೂ’ ಎನ್ನುವ ಕಥಾಕೃತಿಯನ್ನು ಎಂ.ಆರ್.ಶ್ರೀ ರಚಿಸಿದ್ದರೆಂದು ಉಲ್ಲೇಖಿಸಿರುವ ಡಿ.ವಿ.ಜಿ ಅವರು, ‘‘ಸುಸಂಸ್ಕೃತ ಜನರಿಗೆ ಭಾಷಣದಲ್ಲಿ ಬೇಕಾದ ಗುಣ ಬರಿಯ ವಾಗ್ಝರಿಯಲ್ಲ. ಪದಗಳಲ್ಲಿ ವಿಷಯಸ್ವಾರಸ್ಯವಿರಬೇಕು. ವಿಷಯಗೌರವ ಮತ್ತು ಶಬ್ದತೇಜಸ್ಸುಗಳ ಜೊತೆಗೆ ಉಚಿತವಾದ ಆಕಾರಭಾವ ಸೇರಿರಬೇಕು. ಇವೆರಡಕ್ಕೂ ಸಹಾಯಕವಾಗಿ ಶುದ್ಧವಾದ ಕಂಠಸ್ವರವಿರಬೇಕು. ಸುಸಂಸ್ಕೃತ ಜನರ ದೃಷ್ಟಿಯಿಂದ ಕನ್ನಡದಲ್ಲಿ ಅತ್ಯುತ್ತಮ ಭಾಷಣಕಾರರೆಂದರೆ ನನಗೆ ಪರಿಚಿತರಾದವರಲ್ಲಿ ವೆಂಕಣ್ಣಯ್ಯನವರೊಬ್ಬರು. ಶ್ರೀನಿವಾಸಮೂರ್ತಿಗಳೊಬ್ಬರು. ವೆಂಕಣ್ಣಯ್ಯನವರಲ್ಲಿ ವಿಚಾರಗಾಂಭೀರ್ಯ ಮತ್ತು ಶೈಲಿಯ ಓಜಸ್ಸು ಮುಖ್ಯಗುಣಗಳಾಗಿದ್ದವು. ಮೂರ್ತಿಯವರಲ್ಲಿ ಈ ಗುಣಗಳ ಜೊತೆಗೆ ಮೃದು ಹಾಸ್ಯವೂ ಸೇರಿರುತ್ತಿತ್ತು’’ ಎಂದು ಸೂಕ್ತವಾಗಿಯೇ ಬರೆದಿರುತ್ತಾರೆ.

ಅಷ್ಟ ಕಿರೀಟಾಕಾರದ, ಒಂದು ನೂರು ಪುಟಗಳ ಪ್ರಸಕ್ತ ಸಂಕಲನದಲ್ಲಿ ಒಟ್ಟು ಹದಿನಾರು ಕವಿತೆಗಳೂ ಒಂದು ಏಕಾಂಕ ನಾಟಕವೂ ಇದೆ. ‘ದೇವರಿಗೆ’, ‘ತತ್ವಜ್ಞಾನಿ’, ‘ಬೂಟಾಟಿಕೆ’, ‘ಏಕಾಗಬಾರದು?’, ‘ದೇವಯಾನಿ’, ‘ಯಾರು ಹೆಚ್ಚು?’, ‘ಎಲ್ಲಿಗೆ?’, ‘ಹಿರಿಯ ದಾನಿ’, ‘ಪುಣ್ಯಶಾಲಿ’, ‘ಪೂಜಾರಿ’, ‘ಒಂದು ಕಾಗದ’, ‘ವೇದಾಂತ’, ‘ಚಂಡಿಗೆ ಮೊರೆ’, ‘ಜಾಣ–ಕೋಣ’, ‘ಮುಪ್ಪು ಮತ್ತು ಲಲಿತಾಂಗಿ’ –  ಈ ಸಂಕಲನದ ಹದಿನಾರು ಕವಿತೆಗಳು. ‘ಕವಿಯ ಸೋಲು’ ಹೆಸರಿನದು ಒಂಬತ್ತು ಪುಟಗಳ, ಎರಡೇ ಪಾತ್ರಗಳನ್ನುಳ್ಳ ಒಂದು ಕಿರಿಯ ಏಕಾಂಕ ನಾಟಕ. ‘ತತ್ವಜ್ಞಾನಿ’ ಕಥನ ಕವನ 350 ಸಾಲುಗಳ ಸರಳ ರಗಳೆಯಲ್ಲಿ ರಚಿತವಾದ ಕವಿತೆ. ಐದು ಮಾತ್ರೆಗಳಿಗೆ ಬದಲು ನಾಲ್ಕು ಮಾತ್ರೆಗಳ ಗಣಗಳಿರುವ ಪ್ರಾಯೋಗಿಕ ಕವಿತೆ. ಇಲ್ಲಿನ ನಾಯಕ ಓರ್ವ ಜಟಕಾ ಸಾಬಿ. ಆತನ ಜೀವನಶೈಲಿ ಹಾಗೂ ಮನೋಧರ್ಮದ ಹಿನ್ನೆಲೆಯಲ್ಲಿ ತತ್ವಜ್ಞಾನದ ಜಿಜ್ಞಾಸೆಯಿದೆ. ‘ಬೂಟಾಟಿಕೆ’ ಕವಿತೆ ತೋರಿಕೆಯ ಧಾರ್ಮಿಕ ಜನರ ಪೊಳ್ಳುತನವನ್ನು ವಿಡಂಬಿಸುತ್ತದೆ. ಕವಿತೆಯ ಅಂತ್ಯದಲ್ಲಿ–

ರಾಮಕೃಷ್ಣರು ಬೇಡ ಘೋಷಘೀಷರು ಬೇಡ                                                                                  
ಬಂದ ಫಲ ಕಂಡೆವಯ್ಯ                                                                                     
ಇಂದ್ರಜಾಲಿಗನೊಬ್ಬ ನಮಗಿಂದು ಬೇಕಯ್ಯ                                                                          
ಅವನೆಮಗೆ ದೇವರಯ್ಯ

ಎಂದು ಮಾರ್ಮಿಕವಾಗಿ ಮುಕ್ತಾಯಗೊಳಿಸುತ್ತಾರೆ. ‘ಯಾರು ಹೆಚ್ಚು?’ ಕವಿತೆಯಲ್ಲಿ ದೇವರು ಹಾಗೂ ದೇವಾಲಯಗಳನ್ನು ಕೇವಲ ಕಲ್ಲಮೂರ್ತಿ ಹಾಗೂ ಕಟ್ಟಡಗಳೆಂದು ಹೇಳಲಾಗಿದೆ. ‘ಪೂಜಾರಿ’ ಕವಿತೆಯಲ್ಲಿ ಅಪ್ರಾಮಾಣಿಕ ಪೂಜಾರಿಯೊಬ್ಬನ ಅಂತರಂಗದ ಅಳಲನ್ನು ಆತ್ಮಶೋಧನಾತ್ಮಕವಾದ ಶೈಲಿಯಲ್ಲಿ ನಿರೂಪಿಸಲಾಗಿದೆ. ವೇದಾಂತಿಗಳು ಉಪದೇಶಿಸುವ ಪುರಾಣ ಕೇವಲ ಪುಸ್ತಕದ ಬದನೆಕಾಯಿಯೇ ಹೊರತು ನಿಜಜೀವನದಲ್ಲಿನ ಧರ್ಮಸಂಕಟಗಳಿಗೆ ಯಾವ ಪರಿಹಾರವನ್ನೂ ನೀಡಲಾರದು ಎನ್ನುವ ಸತ್ಯವನ್ನು ‘ವೇದಾಂತ’ ಕವಿತೆಯಲ್ಲಿ ತೀಕ್ಷ್ಣ ವ್ಯಂಗ್ಯ ವಿಡಂಬನೆಗಳಿಗೆ ಒಳಪಡಿಸಲಾಗಿದೆ.

‘ಕವಿಯ ಸೋಲು’ ಏಕಾಂಕದಲ್ಲಿ ಕವಿರಾಜ ಹಾಗೂ ಘೂಕರಾಜರ ಪಾತ್ರಗಳಿವೆ. ಅಪಶಕುನದ ಪಕ್ಷಿ ಎಂಬ ಅಪಕೀರ್ತಿಗೆ ಭಾಜನವಾಗಿರುವ ಗೂಬೆಯೇ ಘೂಕರಾಜ. ಘೂಕರಾಜನು ಕವಿರಾಜನನ್ನು ಕುರಿತು ಕವಿಗೆ ಸಮಕಾಲೀನ ಪ್ರಜ್ಷೆಯಿಲ್ಲ, ಕೇವಲ ಕೆಲಸಕ್ಕೆ ಬಾರದ ಉತ್ಪ್ರೇಕ್ಷಿತ ಸೌಂದರ್ಯಾರಾಧನೆಯಲ್ಲಿ ತೊಡಗಿ ನಿಜವಾದ ಪ್ರಕೃತಿಗೆ, ಸಾಮಾಜಿಕತೆಗೆ ಗಮನಕೊಡುತ್ತಿಲ್ಲ ಎಂದು ಛೇಡಿಸುತ್ತಾನೆ. ಕವಿಯು ಕೊನೆಗೆ ಇದನ್ನು ಒಪ್ಪಿಕೊಂಡು ‘ಎನ್ನುಮಂ ನಾಡುಮಂ ದಯೆಯಿಂದ ಉಳಿಸಿರುವೆ, ನಿನಗೀಗ ಸಾಷ್ಟಾಂಗ ವಂದನೆಯು, ನಾಡಲಿಹ ಕ್ರಿಮಿಕೀಟ ಮೃಗಪಕ್ಷಿ ಎನ್ನ ಬಂಧುಗಳಯ್ಯ, ತರುಲತೆಗಳೆಲ್ಲವುಂ ಎನ್ನ ಬಳಗಗಳಯ್ಯ, ನೋಡಿ ಸುಖಿಸುವೆನಯ್ಯ’ ಎಂದು ಘೂಕರಾಜನಿಗೆ ಶರಣಾಗುತ್ತಾನೆ.

ಎಂ.ಆರ್‌.ಶ್ರೀ ಅವರು ವಚನಗಳಲ್ಲಿನ ಅಧ್ಯಯನದಲ್ಲಿ ತೊಡಗಿ, ಶುಷ್ಕ ಪಾಡಿತ್ಯವನ್ನು ವರ್ಜಿಸಿ, ನವ್ಯೋತ್ತರ ಕಾಲಘಟ್ಟದ ಸಾಹಿತ್ಯದ ವಸ್ತವನ್ನು ತಮ್ಮ ಕಾವ್ಯವಸ್ತು ಆಗಿಸಿಕೊಳ್ಳುವಷ್ಟರಮಟ್ಟಿಗೆ ಪ್ರಗತಿಪರರಾಗಿರುವುದು ಕಂಡುಬರುತ್ತದೆ. ಇದಕ್ಕೆ ನಿದರ್ಶನವಾಗಿ ಅವರ‘ಒಂದು ಕಾಗದ’ ಕವಿತೆ ಗಮನಿಸಬಹುದು.

ಈ ಕವಿತೆಯಲ್ಲಿ ಮುದುಕನೊಬ್ಬನಿಗೆ ಬಲವಂತವಾಗಿ ಮದುವೆ ಮಾಡಿಸಲ್ಪಟ್ಟ ಹದಿಹರಯದ ಹುಡುಗಿಯೊಬ್ಬಳ ಮನೋವೇದನೆ, ಹಾಗೂ ಅಸಹಾಯತೆಗಳನ್ನು ಕವಿ ಹೃದಯಂಗಮವಾಗಿ ನಿರೂಪಿಸಿದ್ದಾರೆ. ಅವಳು ಗಂಡನಿಗೆ ಬರೆದ ಕಾಗದದಲ್ಲಿ – ‘‘ನೀವು ನನಗೆ ಗಂಡನಲ್ಲ | ನಾನು ನಿಮಗೆ ಹೆಂಡಿರಲ್ಲ | ನೀವು ತಿಳಿವುದು || ಕುಂಟು ಕಾಲು ಬಚ್ಚು ಬಾಯಿ | ಮೆಳ್ಳುಗಣ್ಣು, ನಿಮ್ಮ ಸೇವೆ | ಮಾಡಲಾರೆನು || ಬ್ರಹ್ಮ ಹಿಂದೆ ಗಂಟು ಹಾಕಿ | ಗಂಡಹೆಂಡಿರಾದೆವೆಂದು | ನೀವು ಬಗೆವಿರಿ || ಬ್ರಹ್ಮ ಗಿಮ್ಮ ಹಾಕಲಿಲ್ಲ | ಅಪ್ಪ ತಂದು ನನಗೆ ನಿಮಗೆ | ಗಂಟು ಹಾಕಿದ || ಕೋರ್ಟು ಗೀರ್ಟು ಆಡಬೇಡಿ | ಜಡ್ಜಿ ಧರ್ಮವೇನು ಬಲ್ಲ | ನಾನು ತಿಳಿಸುವೆ || ಕುರ್ಚಿ ಮೇಲೆ ಕುಳಿತುಕೊಂಡು | ಏನೊ ಗೀಚಿ ಎದ್ದು ಬರುವ | ಮಾತಿದಲ್ಲವು|| ತನ್ನ ಮಗಳ ನಿಮಗೆ ಕೊಟ್ಟು | ತನ್ನ ಮಗನ ಎನಗೆ ಕೊಟ್ಟು | ಮದುವೆ ಮಾಡಲಿ || ಬಯ್ವ ಜನರು ಜರಿವ ಜನರು | ಅವರಿಗೇನು ಬಾಯಿಕೊಬ್ಬು | ನೋವು ತೆಗೆವರೆ? || ಬಲ್ಲೆನವರ ಮನದ ಭಾವ | ಇಂದು ನಾನು ಸೂಳೆಯಾಗೆ | ಸುಖಿಪರೆಲ್ಲರು ||’’ – ಹೀಗೆ ನಿಷ್ಠುರವಾಗಿ ಬರೆಯುತ್ತಾಳೆ. ಈ ಕವಿತೆ 1933ರಲ್ಲಿ ಪ್ರಕಟವಾಗಿದೆ ಎನ್ನುವುದನ್ನು ನಾವು ಗಮನಿಸಬೇಕು.

ಕನ್ನಡದ ಹಿರಿಯ ನವೋದಯ ಕವಿಗಳ ಹಲವಾರು ಸಂಕಲನಗಳು ಮರುಮುದ್ರಣಗಳಾಗಿದ್ದು, ಮೂರ್ತಿ ಅವರಂತಹ ಪ್ರಗತಿಪರ ಕವಿಯ ‘ಕವಿಯ ಸೋಲು’ ಸಂಕಲನ ಎರಡನೇ ಮುದ್ರಣವನ್ನೇ ಕಾಣದಿರುವುದು ಕವಿಯ ಸೋಲೋ ಕನ್ನಡ ಸಮುದಾಯದ ಸೋಲೋ ಎಂಬುದನ್ನು ಪ್ರಾಜ್ಞರು ನಿರ್ಧರಿಸಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT