ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಂಗಳೂರು ನಗರದ ಅಸಾಧಾರಣ ವಿಶ್ವಕೋಶ

ವಿಮರ್ಶೆ
Last Updated 8 ಅಕ್ಟೋಬರ್ 2016, 19:30 IST
ಅಕ್ಷರ ಗಾತ್ರ

ಮಂಗಳೂರು ದರ್ಶನ (3 ಸಂಪುಟಗಳು)
ಪ್ರಧಾನ ಸಂಪಾದಕ: ವಿವೇಕ ರೈ, ಪ್ರ: ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರ, ಪುಟ:2498, ಬೆಲೆ:₹ 1500 ಮಂಗಳೂರು- 575006

ಕುಡ್ಲ (ತುಳು), ಕೊಡಿಯಾಲ್ (ಕೊಂಕಣಿ), ಮಂಗಳಾಪುರ (ಸಂಸ್ಕೃತ/ಮಲಯಾಳಂ), Manganour (ಗ್ರೀಕ್), Manjarur (ಅರಾಬಿಕ್), Mangalor  (ಪೋರ್ಚುಗೀಸ್), ಇತ್ಯಾದಿ ಹೆಸರುಗಳಿಂದ ಭಿನ್ನ ಕಾಲಘಟ್ಟಗಳಲ್ಲಿ ಕರೆಯಲಾಗಿರುವ ಇಂದಿನ ಮಂಗಳೂರು, ಇತಿಹಾಸತಜ್ಞರ ಪ್ರಕಾರ, ಕ್ರಿ.ಶ. ಒಂದನೆಯ ಶತಮಾನದಲ್ಲಿ ಕರಾವಳಿಯ ಗುರುಪುರ–ನೇತ್ರಾವತಿ ನದಿಗಳ ನಡುವೆ ಅಸ್ತಿತ್ವಕ್ಕೆ ಬಂದಿತು. ಅಂದು ಒಂದು ಕಿರು ಜನವಸತಿಯ ಸ್ಥಳವಾಗಿದ್ದುದು ಕಳೆದ 2000 ವರ್ಷಗಳ ಅವಧಿಯಲ್ಲಿ ಪಟ್ಟಣವಾಗಿ, ನಗರವಾಗಿ, ಮಹಾನಗರವಾಗಿ, ಪಶ್ಚಿಮ ಕರಾವಳಿಯ ಒಂದು ಮಹತ್ವದ ಬಂದರಾಗಿ, ಶಿಕ್ಷಣ ಹಾಗೂ ಬ್ಯಾಂಕಿಂಗ್ ಕ್ಷೇತ್ರಗಳಲ್ಲಿ ಬೃಹತ್ತಾಗಿ ಬೆಳೆದು ಬಂದುದರ ಕಥನವನ್ನು ಸುಮಾರು 2500 ಪುಟಗಳಷ್ಟು ವಿಸ್ತಾರವಾಗಿರುವ ‘ಮಂಗಳೂರು ದರ್ಶನ’ ಅಧಿಕೃತವಾಗಿ ಹಾಗೂ ರೋಚಕವಾಗಿ ಕಟ್ಟಿಕೊಡುತ್ತದೆ. ಹಾಗೆ ನೋಡಿದರೆ ಬಿಡಿನಗರಗಳ ಅಧ್ಯಯನ ಅಷ್ಟೇನೂ ಹೊಸದಲ್ಲ; ಭಾರತದಲ್ಲಿಯೇ ದೆಹಲಿ, ಕೋಲ್ಕತ್ತಾ, ಮುಂಬೈ, ಚೆನ್ನೈ ಇತ್ಯಾದಿ ನಗರಗಳ ಅಧ್ಯಯನಗಳು ಪುಸ್ತಕರೂಪದಲ್ಲಿ ಹಾಗೂ ಲೇಖನಗಳ ರೂಪದಲ್ಲಿ ಸಾಕಷ್ಟು ಪ್ರಕಟವಾಗಿವೆ. 


ಆದರೆ ಹೆಚ್ಚಿನ ಅಧ್ಯಯನಗಳು ಈ ನಗರಗಳ ಚಾರಿತ್ರಿಕ, ಜನಾಂಗಿಕ (ಎಥ್ನೋಗ್ರಾಫಿಕ್), ಆರ್ಥಿಕ, ಸಾಂಸ್ಕೃತಿಕ, ಇತ್ಯಾದಿ ಒಂದು ಪರಿಪ್ರೇಕ್ಷ್ಯದಿಂದ ಮಾಡಿರುವಂತಹವು. ಆದರೆ, ‘ಮಂಗಳೂರು ದರ್ಶನ’ವು ಇವೆಲ್ಲಾ ಪರಿಪ್ರೇಕ್ಷ್ಯಗಳನ್ನೂ ಒಳಗೊಂಡ ಒಂದು ಬೃಹತ್ ಸರ್ವಾಂಗೀಣ ಅಧ್ಯಯನ.    
 
ಈ ಅಧ್ಯಯನದ ಸಂಪುಟ ಒಂದರಲ್ಲಿ, ಮಂಗಳೂರಿನ ಹೆಸರು, ಭೂಪ್ರದೇಶ ಹಾಗೂ ಪರಿಸರ; ಮಂಗಳೂರಿನ ಇತಿಹಾಸ; ಬ್ರಿಟಿಷ್ ಆಡಳಿತ; ಧಾರ್ಮಿಕ ಕೇಂದ್ರಗಳು, ಸಂಘ–ಸಂಸ್ಥೆಗಳು; ಮತ್ತು ಸಂಸ್ಕೃತಿ ಮತ್ತು ಕಲೆ ಇವುಗಳನ್ನು ಕುರಿತ 71 ಲೇಖನಗಳಿವೆ; ಸಂಪುಟ ಎರಡರಲ್ಲಿ, ಮಂಗಳೂರು ನಗರಾಡಳಿತ, ಸಾರಿಗೆ ಸಂಪರ್ಕ, ನಗರಾಭಿವೃದ್ಧಿ ಪ್ರಾಧಿಕಾರ, ಸರಕಾರಿ ಸಂಸ್ಥೆಗಳು, ಉದ್ಯಮ, ಶಿಕ್ಷಣ, ಮಾಧ್ಯಮಗಳು ಇತ್ಯಾದಿಗಳನ್ನು ಕುರಿತ 121 ಲೇಖನಗಳಿವೆ; ಸಂಪುಟ ಮೂರರಲ್ಲಿ, ಮಂಗಳೂರಿನ ಹಿರಿಯರು, ಸಾಹಿತ್ಯ, ಸಾಹಿತ್ಯ–ಕಲಾ ಸಾಧಕರು, ಕ್ರೀಡೆಗಳು, ಸಿನಿಮಾ, ಮತ್ತು ಹಿರಿಯ ನಾಗರಿಕರೊಡನೆ ಸಂದರ್ಶನಗಳು, ಇತ್ಯಾದಿ 30 ಲೇಖನಗಳಿವೆ. ಮೂರೂ ಸಂಪುಟಗಳು ಸೇರಿದಂತೆ ಒಟ್ಟು 218 ಲೇಖನಗಳಿವೆ.

ಇವುಗಳಲ್ಲಿಯೂ ಮಂಗಳೂರಿನಲ್ಲಿ ಮಾಧ್ಯಮಗಳ ಹುಟ್ಟು ಮತ್ತು ಬೆಳವಣಿಗೆ (ಭಿನ್ನ ಭಾಷೆಗಳಲ್ಲಿ ಸುಮಾರು 223 ಪತ್ರಿಕೆಗಳ ಪರಿಚಯ), ತುಳು ಚಿತ್ರರಂಗದ ಸಮಗ್ರ ಇತಿಹಾಸ, ಧಾರ್ಮಿಕ ಕ್ಷೇತ್ರಗಳು ಇತ್ಯಾದಿ ಲೇಖನಗಳು ಮೊದಲ ಬಾರಿಗೆ ಸಂಬಂಧಿಸಿದ ವಿಷಯಗಳ ವ್ಯಾಪಕ ಅಧ್ಯಯನಗಳಾಗಿವೆ. ಮೂರನೆಯ ಸಂಪುಟದಲ್ಲಿ ಇರುವ ಮಂಗಳೂರಿನ ಹಿರಿಯ ನಾಗರಿಕರೊಡನೆ ನಡೆಸಿರುವ ಸಂದರ್ಶನಗಳು ತುಂಬಾ ವಿಶಿಷ್ಟವಾಗಿವೆ. ಸಮಾಜದ ನಾನಾ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿರುವ ಸುಮಾರು 228 ಜನರನ್ನು ಸಂದರ್ಶಿಸಿ, 400ಕ್ಕೂ ಹೆಚ್ಚು ಗಂಟೆಗಳ ಸಂದರ್ಶನವನ್ನು ಸಂಪಾದಕರು ದಾಖಲಿಸಿದ್ದಾರೆ; ಮತ್ತು ಈ ಹಿರಿಯರು ಕಳೆದ ಎಂಬತ್ತು ವರ್ಷಗಳಲ್ಲಿ ಮಂಗಳೂರು ಬೆಳೆದ ಪರಿಯನ್ನು ವಿವರಿಸಿದ್ದಾರೆ.

ಇಂತಹ ವೈಯಕ್ತಿಕ ಕಥನಗಳಿಗೂ ಈ ದರ್ಶನದಲ್ಲಿ ಸ್ಥಾನವನ್ನು ಕೊಟ್ಟಿರುವುದು ವಿಶೇಷ ಗಮನಕ್ಕೆ ಪಾತ್ರವಾಗುತ್ತದೆ. ಹಾಗೆಯೇ, ಮಂಗಳೂರನ್ನು ಕಟ್ಟಿ ಬೆಳೆಸಲು ಶ್ರಮಿಸಿದ ಹಿಂದಿನ ಹಾಗೂ ಇಂದಿನ ಮಹನೀಯರ ಸಂಕ್ಷಿಪ್ತ ಪರಿಚಯಗಳೂ ಇಲ್ಲಿವೆ. ಇಷ್ಟೇ ಅಲ್ಲದೆ, ವರ್ಣಚಿತ್ರಗಳು ಹಾಗೂ ‘ಬಾಸೆಲ್ ಮಿಷನ್ ಆರ್ಕೈವ್ಸ್‌’ನಲ್ಲಿದ್ದ ಅನೇಕ ಅಪರೂಪದ ಕಪ್ಪು–ಬಿಳುಪು ಚಿತ್ರಗಳು, ರೇಖಾಚಿತ್ರಗಳು, ಇವೆಲ್ಲವೂ ಸೇರಿದಂತೆ ನೂರಾರು ಚಿತ್ರಗಳು ಈ ಸಂಪುಟಗಳಲ್ಲಿವೆ. ಸಂಕ್ಷಿಪ್ತವಾಗಿ ಹೇಳುವುದಾದರೆ ಈ ಅಧ್ಯಯನ ಮಂಗಳೂರಿನ ವಿಶ್ವಕೋಶವೇ ಸರಿ.

ಮೂರು ಸಂಪುಟಗಳಲ್ಲಿರುವ ಎಲ್ಲ ಲೇಖನಗಳನ್ನು ಚರ್ಚಿಸುವುದು ಹೋಗಲಿ, ಪರಿಚಯಿಸುವುದೂ ಈ ಲೇಖನದ ವ್ಯಾಪ್ತಿಯಲ್ಲಿ ಅಸಾಧ್ಯ. ಆದುದರಿಂದ, ಕೇವಲ ಮೊದಲ ಸಂಪುಟದಲ್ಲಿರುವ ಕೆಲವು ಲೇಖನಗಳ ಮುಖ್ಯಾಂಶಗಳನ್ನು ಮಾತ್ರ ಇಲ್ಲಿ ಪ್ರಸ್ತಾಪಿಸುತ್ತಿದ್ದೇನೆ.

1. ಪ್ರಮುಖ ಶಾಸನ: ‘ನೀರುಮಾರ್ಗ ಶಾಸನ’ (ಪಿ. ಎನ್. ನರಸಿಂಹಮೂರ್ತಿ) ಎಂಬ ಲೇಖನವು ವಿಜಯನಗರ ಸ್ಥಾಪನೆಗೂ ವಿದ್ಯಾರಣ್ಯ ಯತಿಗಳಿಗೂ ಇದ್ದ ಬಹು ಚರ್ಚಿತ ಸಂಬಂಧ ಕುರಿತು ಬೆಳಕು ಚೆಲ್ಲುತ್ತದೆ (ಪು. 161–164). ಮಂಗಳೂರು ಬಳಿಯ ನೀರುಮಾರ್ಗ ಎಂಬ ಗ್ರಾಮದಲ್ಲಿ ದೊರಕಿದ, ಪ್ರಾಯಃ 1353ರಲ್ಲಿ ರಚಿತವಾದ ಈ ಪ್ರಾಚೀನ ಶಿಲಾಶಾಸನವು ಒಂದನೆಯ ಬುಕ್ಕರಾಯನು 76 ಮುಡಿ ಬೀಜಬಿತ್ತುವಷ್ಟು ವಿಸ್ತಾರವಾದ ಭೂಮಿಯನ್ನು ಶ್ರೀ ವಿದ್ಯಾರಣ್ಯಶ್ರೀಪದಂಗಳಿಗೆ ದಾನ ಕೊಟ್ಟುದನ್ನು ದಾಖಲಿಸುತ್ತದೆ. ಯತಿಗಳಾಗಿದ್ದ ವಿದ್ಯಾರಣ್ಯರು ಶೃಂಗೇರಿಯ ಪೀಠಾಧಿಪತಿಗಳಾಗಿರಲಿಲ್ಲ, ಆದರೆ ಬುಕ್ಕರಾಯನಿಗೆ ರಾಜ್ಯಸ್ಥಾಪನೆಯಲ್ಲಿ ಅಗಾಧ ಸ್ಫೂರ್ತಿದಾಯಕರಾಗಿದ್ದರು ಎಂಬುದನ್ನು ಈ ಲೇಖನವು ಮಂಡಿಸುತ್ತದೆ.

2. ಹೈದರ್– ಟಿಪ್ಪು: ಸದಾ ಕಾವೇರಿದ ವಾದ–ವಿವಾದಗಳಿಗೆ ಗುರಿಯಾಗಿರುವ ಹೈದರ್–ಟಿಪ್ಪು ಮತ್ತು ಮಂಗಳೂರು ಈ ವಿಷಯವನ್ನು ಕುರಿತು ದೀರ್ಘ ಹಾಗೂ ವಿದ್ವತ್ಪೂರ್ಣ ಲೇಖನವನ್ನು ಇತಿಹಾಸಜ್ಞ ಬಿ. ಸುರೇಂದ್ರರಾವ್ ಬರೆದಿದ್ದಾರೆ (ಪು. 183–204). ಈ ಲೇಖನದಲ್ಲಿ ಅವರು ಪ್ರಬಲ ನೌಕಾಪಡೆಯನ್ನು ಕಟ್ಟದೆ ಬ್ರಿಟಿಷರನ್ನು ಜಯಿಸಲು ಸಾಧ್ಯವಿಲ್ಲ ಎಂಬ ಹೈದರ್‌ನ ಗ್ರಹಿಕೆ, ಹೈದರ್– ಟಿಪ್ಪು ಕೈಗೊಂಡ ಮೂರು ಮಂಗಳೂರು ಯುದ್ಧಗಳು, ಟಿಪ್ಪು ಮತ್ತು ಮಂಗಳೂರಿನ ಕ್ರೈಸ್ತ ಸಮುದಾಯ, ಇತ್ಯಾದಿಗಳನ್ನು ಚರ್ಚಿಸಿ, ಟಿಪ್ಪು ಮತಾಂಧ ಮತ್ತು ಕ್ರೂರಿ ಅಥವಾ ಟಿಪ್ಪು ಪರಧರ್ಮ ಸಹಿಷ್ಣು ಮತ್ತು ರಾಷ್ಟ್ರಪ್ರೇಮಿ ಎಂಬಂತಹ ಎರಡೂ ವಾದಗಳಲ್ಲಿರುವ ಉತ್ಪ್ರೇಕ್ಷೆಯನ್ನು ಸಾಧಾರವಾಗಿ ಗುರುತಿಸುತ್ತಾರೆ. ಅವರ ವಾದವೇನೆಂದರೆ, ಟಿಪ್ಪು ತನ್ನ ರಾಜ್ಯದಲ್ಲಿ ಎಲ್ಲಾ ಧರ್ಮಗಳನ್ನೂ ಉದಾರವಾಗಿ ಕಂಡರೂ ಪರರಾಜ್ಯಗಳಲ್ಲಿ ಅವನು ಕ್ರೂರಿಯಾಗಿಯೇ ವರ್ತಿಸಿದನು; ರಾಜಪ್ರಭುತ್ವಗಳ ಗಾಥೆಯಲ್ಲಿ ಅಪ್ಪಟ ಸಂತರನ್ನು ಅಥವಾ ತೀರ ದುಷ್ಟರನ್ನು ಹುಡುಕಿ ತೆಗೆಯುವುದು ಕಷ್ಟ.      

3. ಗಾಂಧೀಜಿ: ಗಾಂಧೀಜಿಯವರು ಮಂಗಳೂರಿಗೆ ಮೂರು ಬಾರಿ (1920, 1927, 1934) ಭೇಟಿ ಕೊಟ್ಟಾಗ ಅವರು ಮಾಡಿದ ಭಾಷಣಗಳ ಸಾರಾಂಶ ಮತ್ತು ಪ್ರಭಾವ ಇವುಗಳನ್ನು ಕುರಿತಾಗಿರುವ ವಿನಯ ರಾವ್ ಅವರ ಲೇಖನವನ್ನು ಶಶಿಕಲಾ ಅವರು ಅನುವಾದಿಸಿದ್ದಾರೆ (ಪು. 331–350). ಗಾಂಧೀಜಿಯವರು ಮೇಕೆ ಹಾಲನ್ನು ಕುಡಿಯುತ್ತಿದ್ದುದರಿಂದ ಮಂಗಳೂರಿಗೂ ಅವರು ಒಂದು ಮೇಕೆಯನ್ನು ತಂದಿದ್ದರಂತೆ. ಎರಡನೆಯ ಭೇಟಿಯ ಸಂದರ್ಭದಲ್ಲಿ ಗಾಂಧೀಜಿ ತಮ್ಮ ಭಾಷಣದಲ್ಲಿ ಒಮ್ಮೆ ಹೀಗೆ ಸ್ತ್ರೀಯರಿಗೆ ಕರೆ ಕೊಡುತ್ತಾರೆ: ‘ತಮ್ಮ ಒಡವೆಗಳನ್ನು ಕೊಡಬಯಸುವ ಮಹಿಳೆಯರಿದ್ದರೆ ನಾನು ನಿಮಗೆ ಒಂದು ಮಾತು ಹೇಳುತ್ತೇನೆ.  ಸೀತಾದೇವಿ ನಿಮ್ಮ ಆದರ್ಶವಾಗಲಿ; ಆಕೆ ತನ್ನ ಸ್ವಾಭಾವಿಕ ರೂಪದಿಂದಲೇ ಸುಂದರವಾಗಿ ಕಾಣುತ್ತಿದ್ದಂತೆ, ನೀವು ನಿಮ್ಮ ಸೌಂದರ್ಯಕ್ಕೆ ಯಾವುದೇ ವಿಧವಾದ ಆಭರಣದ ಒತ್ತಾಸೆಯನ್ನೂ ಬಯಸಬಾರದು’ (ಪು. 340). ಇಡೀ ಲೇಖನವು ಹೇಗೆ ಕರಾವಳಿಯಲ್ಲಿ ಗಾಂಧೀಜಿಯವರ ಪ್ರಭಾವ ಅವರ ಭೇಟಿ–ಭಾಷಣಗಳಿಂದ ವ್ಯಾಪಕವಾಗಿ ಬೆಳೆಯಿತು ಎಂಬುದನ್ನು ದಾಖಲಿಸುತ್ತದೆ.

4. ಸಹಬಾಳ್ವೆ: ಪ್ರಾಚೀನ ಕಾಲದಿಂದಲೂ ಮಂಗಳೂರು (ಅಥವಾ ಕರಾವಳಿ ಪ್ರದೇಶವು) ಬಹುಧರ್ಮ ಸಾಮರಸ್ಯದ ಬದುಕಿಗೆ ಪ್ರಸಿದ್ಧವಾಗಿದೆ. ಹಿಂದೂಧರ್ಮದ ಶೈವ, ವೈಷ್ಣವ, ಶಾಕ್ತ, ಗಾಣಪತ್ಯ, ಇತ್ಯಾದಿ ಶಾಖೆಗಳು ಮತ್ತು ಜೈನಧರ್ಮವು ಬಹು ಹಿಂದಿನಿಂದಲೇ ಕರಾವಳಿಯಲ್ಲಿ ಆಳವಾಗಿ ಬೇರೂರಿದ್ದುವು. ಕ್ರಿ.ಶ. ಏಳನೇಯ ಶತಮಾನದಲ್ಲಿ ಇಸ್ಲಾಂ ಕರಾವಳಿಯನ್ನು ಪ್ರವೇಶಿಸಿತು, ಹಾಗೂ ಇಲ್ಲಿಯ ಮೊದಲ ಮುಸ್ಲಿಂ ಸಮುದಾಯ ಬ್ಯಾರಿಗಳದ್ದು. ಅನಂತರ, ಹತ್ತನೆಯ ಶತಮಾನದಲ್ಲಿ ನಾಥಪಂಥೀಯರು, 13–14ನೆಯ ಶತಮಾನಗಳಲ್ಲಿ ರೋಮನ್ ಕ್ರೈಸ್ತರು ಮತ್ತು 19ನೆಯ ಶತಮಾನದಲ್ಲಿ ಪ್ರಾಟೆಸ್ಟಂಟ್ ಮಿಶನರಿಗಳು, 16ನೆಯ ಶತಮಾನದಲ್ಲಿ ವೀರಶೈವ ಧರ್ಮೀಯರು, 19ನೆಯ ಶತಮಾನದಲ್ಲಿ ಬ್ರಹ್ಮೋಸಮಾಜಿಗಳು ಇವರೆಲ್ಲರೂ ಮಂಗಳೂರಿನಲ್ಲಿ ಅನೇಕ ಶತಮಾನಗಳ ಕಾಲ ಸಹಬಾಳ್ವೆಯನ್ನು ನಡೆಸಿದುದನ್ನು ನಾಲ್ಕನೆಯ ಅಧ್ಯಾಯದ ಅನೇಕ ಲೇಖನಗಳು ದಾಖಲಿಸುತ್ತವೆ.

‘ಮಂಗಳೂರಿನ ಧಾರ್ಮಿಕ ಕೇಂದ್ರಗಳು’ ಎಂಬ ಐದನೆಯ ಅಧ್ಯಾಯ ಮಂಗಳೂರಿನ (ಕರಾವಳಿಯ) ಸರ್ವಧರ್ಮ ಸಾಮರಸ್ಯದ ಬಾಳ್ವೆಗೆ ಕನ್ನಡಿ ಹಿಡಿಯುತ್ತದೆ (ಪು. 395–480). ಮಂಗಳೂರು ಒಂದರಲ್ಲಿಯೇ ಇರುವ ಹಿಂದೂ ದೇವ–ದೇವತೆಗಳ 21 ದೇವಾಲಯಗಳು, ಬಹು ಸಂಖ್ಯೆಯಲ್ಲಿರುವ ದೈವಗಳ ಹಾಗೂ ಕೋಲ–ನೇಮಗಳ ಆವಾಸಸ್ಥಾನಗಳು, ನಾಥಪಂಥೀಯ ಕದ್ರಿ ಮಂಜುನಾಥ ದೇವಾಲಯ, 40 ಮಸೀದಿಗಳು ಮತ್ತು ದರ್ಗಾಗಳು, 17 ಭಿನ್ನ ಮಾದರಿಗಳ ಚರ್ಚುಗಳು, ಜೈನ ಬಸದಿ, ವೀರಶೈವ ಮಠ, ಸಿಖ್ಖರ ಗುರುದ್ವಾರ, ಇತ್ಯಾದಿಗಳ ಇತಿಹಾಸವನ್ನು ಈ ಅಧ್ಯಾಯದಲ್ಲಿರುವ ಲೇಖನಗಳು ಕಟ್ಟಿಕೊಡುತ್ತವೆ. ಈ ಭಾಗಕ್ಕೆ ಪೂರಕವಾಗಿ, ಮಂಗಳೂರಿನಲ್ಲಿ ಒಂದು ಸುತ್ತು ಬಂದರೆ ಕೇಳಿಬರುವ ಕನ್ನಡ, ತುಳು, ಕೊಂಕಣಿ, ಬ್ಯಾರಿ, ಮಲಯಾಳಿ, ಇಂಗ್ಲಿಷ್, ಇತ್ಯಾದಿ ಭಾಷೆಗಳು. ಪ್ರಧಾನ ಸಂಪಾದಕರು ಹೇಳುವಂತೆ ಭಾಷಾ ವಿಜ್ಞಾನಿಗಳಿಗೆ ಸವಾಲಾಗಿ ನಿಂತ ಊರು ಮಂಗಳೂರು. ಬಹು ಧರ್ಮೀಯ–ಬಹು ಭಾಷಿಕ–ಬಹು ಸಾಂಸ್ಕೃತಿಕ ಸಮಾಜಕ್ಕೆ ಮಂಗಳೂರು ಒಂದು ಪ್ರಮುಖ ಮಾದರಿ ಎಂಬುದು ಸ್ಪಷ್ಟ.

5. ದರ್ಶನದ ಸ್ವರೂಪ: ಜೋನಥನ್ ಬೀವರ್‌ಸ್ಟಾಕ್ ಮತ್ತಿತರು ಬರೆದಿರುವ “World-city Network: A New Metageography” ಎಂಬ ಪ್ರಸಿದ್ಧ ಲೇಖನದಲ್ಲಿ ಒಂದು ಮಾದರಿ ನಗರವನ್ನು ಹೀಗೆ ನಿರ್ವಚಿಸುತ್ತಾರೆ: “These cities exist in a world of flows, linkages, connections and relations” (ಚಲನಶೀಲತೆ, ಸಂಪರ್ಕಗಳು, ಜೋಡಣೆ ಮತ್ತು ಸಂಬಂಧಗಳು ಕಟ್ಟುವ ಪ್ರಪಂಚದಲ್ಲಿ ಇಂತಹ ನಗರಗಳು ಅಸ್ತಿತ್ವಕ್ಕೆ ಬರುತ್ತವೆ).

ಮಂಗಳೂರು ನಗರದ ಭೌಗೋಳಿಕ ಸ್ಥಿತಿಯನ್ನು ಪರಿಗಣಿಸಿದರೆ ಈ ಗುಣಗಳು ಯಾವುವೂ ಮಂಗಳೂರಿಗೆ ಅನ್ವಯವಾಗುವಂತೆ ಕಾಣುವುದಿಲ್ಲ. ಒಂದು ಕಡೆ ಚೀನಾದ ಗೋಡೆಯಂತೆ ಕರಾವಳಿಯನ್ನು ಬೇರ್ಪಡಿಸುವ ದುರ್ಗಮ ಪಶ್ಚಿಮ ಘಟ್ಟಗಳು, ಮತ್ತೊಂದು ಕಡೆ ಅರೇಬಿಯನ್ ಸಮುದ್ರ ಇವುಗಳು ಮಂಗಳೂರನ್ನು ಒಂದು ಒಂಟಿ ದ್ವೀಪದಂತೆ ಇರಿಸಿವೆ. ಮತ್ತೆ, ಕರಾವಳಿಯಲ್ಲಿ ಬೇಸಗೆಯಲ್ಲಿರುವ ಉರಿಬಿಸಿಲು ಹಾಗೂ ಮಳೆಗಾಲದಲ್ಲಿ ಸುರಿಯುವ ಜಡಿ ಮಳೆ –ಇವೆಲ್ಲವುಗಳ ಕಾರಣದಿಂದ ಮಂಗಳೂರು ಹೊರ ಪ್ರಪಂಚದೊಡನೆ ಯಾವ ಸಂಬಂಧವೂ ಸಾಧ್ಯವಿಲ್ಲದಂತಹ, ಹೊರ ಪ್ರಪಂಚದಲ್ಲಾಗುವ ಬದಲಾವಣೆಗಳಿಂದ ದೂರವಿರುವ, ಯಾವುದೇ ದೊಡ್ಡ ಯುದ್ಧ ಅಥವಾ ಕ್ಷಾಮ–ಡಾಮರಗಳಿಲ್ಲದ ಹಾಗೂ ದೈನಂದಿನ ಜಂಜಾಟದಲ್ಲಿ ಮುಳುಗಿ ಹೋಗಿರುವ ಸ್ಥಗಿತ ಮತ್ತು ಸಾಂಪ್ರದಾಯಿಕ ಸಮಾಜವಾಗಿಬಿಡಬಹುದಿತ್ತು. ಆದರೆ, ಅದು ಸಂಭಾವ್ಯತೆ ಅಷ್ಟೇ, ವಾಸ್ತವವಲ್ಲ.

ಕಠಿಣ ಹವಾಮಾನ ಮತ್ತು ಶ್ರಮಸಾಧ್ಯ ಕೃಷಿಕೇಂದ್ರಿತ ಕಷ್ಟಕರ ಬದುಕು ಒಂದು ಬಗೆಯ ಛಲವನ್ನು ಸೃಷ್ಟಿಸಿದಂತೆ ಕಾಣುತ್ತದೆ. ಈ ಛಲವೇ ನೆಲಮಾರ್ಗದಲ್ಲಿ ಅಲ್ಲದಿದ್ದರೂ ಜಲಸಂಪರ್ಕ ಸಾಧ್ಯತೆಗಳನ್ನೆಲ್ಲಾ ದುಡಿಸಿಕೊಂಡು, ದುಬಾಯಿ, ಮಸ್ಕತ್, ಇತ್ಯಾದಿ ದೂರ ದೇಶಗಳೊಡನೆ ವ್ಯಾಪಾರ–ವಹಿವಾಟುಗಳನ್ನು ನಡೆಸುವ ಸಾಹಸ ಪ್ರವೃತ್ತಿಯನ್ನು ಇಲ್ಲಿಯ ಜನರಲ್ಲಿ ಬೆಳೆಸಿದುದನ್ನು ಅನೇಕ ಲೇಖನಗಳು ದಾಖಲಿಸುತ್ತವೆ.

ಕ್ರಿ.ಪೂ. 4ನೇಯ ಶತಮಾನದಿಂದಲೇ ಗ್ರೀಸ್ ಮತ್ತು ದಕ್ಷಿಣ ಭಾರತದ ನಡುವಿನ ಸಂಬಂಧಗಳ ಉಲ್ಲೇಖಗಳು ದೊರೆಯುತ್ತವೆ. ದಕ್ಷಿಣ ಭಾರತದ ಪ್ರಮುಖ ವ್ಯಾಪಾರ ಕೇಂದ್ರಗಳ ಉಲ್ಲೇಖದಲ್ಲಿ ಮಂಗರೌತ್ (Mangarouth) ಎನ್ನುವ ಹೆಸರು ಬರುತ್ತದೆ (ಪು. 6).  ಈ ಛಲ ಮತ್ತು ಸಾಹಸ ಪ್ರವೃತ್ತಿಯೇ ಅನ್ಯ ಧರ್ಮೀಯರೊಡನೆ, ಅನ್ಯ ಭಾಷಿಕರೊಡನೆ ಬದುಕುವ ಸಹನೆ ಹಾಗೂ ಸಹಬಾಳ್ವೆಯನ್ನು ಕಲಿಸಿತು ಎಂದು ಕಾಣುತ್ತದೆ. ಆಧುನಿಕ ಕಾಲದಲ್ಲಿಯೂ ಮಂಗಳೂರಿನಿಂದ ಮುಂಬಯಿಗೆ ಬರಿಗೈಯಲ್ಲಿ ತೆರಳಿ ಅಲ್ಲಿ ತಮ್ಮ ಸಮೃದ್ಧ ಬದುಕನ್ನು ಕಟ್ಟಿಕೊಂಡ ಕರಾವಳಿ ಜನರ ಸಾಹಸ ಇಂದು ಸರ್ವವಿದಿತ.

ಅದೇ ನೆಲೆಯಲ್ಲಿ ಈ ಬಗೆಯ ವ್ಯಾಪಕ ವ್ಯಾವಹಾರಿಕ ಸಂಬಂಧಗಳು ಇಡೀ ಸಮಾಜಕ್ಕೆ ಪ್ರಯೋಗಶೀಲತೆ ಹಾಗೂ ಬಂಡುಕೋರತನವನ್ನು ಕೊಟ್ಟವು ಎಂದು ಹೇಳಬಹುದು. ಆಧುನಿಕ ಕಾಲದಲ್ಲಿ, ಕರ್ನಾಟಕದಲ್ಲಿ (ಬಂಗಾಳದಲ್ಲಿ ಪ್ರಾರಂಭವಾದ) ಸುಧಾರಣಾವಾದವು ಮೊದಲಿಗೆ ಕರಾವಳಿಯಲ್ಲಿ ಕಾಲಿಟ್ಟಿತು. ಆಧುನಿಕ ಕನ್ನಡ ಸಾಹಿತ್ಯದ ಎಲ್ಲಾ ನೂತನ ಪ್ರಯೋಗಗಳು ಮೊದಲಿಗೆ ಕರಾವಳಿಯಲ್ಲಿ ನಡೆದುವು: ಕನ್ನಡದ ಮೊದಲ ವೃತ್ತಪತ್ರಿಕೆ, ಮೊದಲ ಸಣ್ಣಕಥೆ–ಕಾದಂಬರಿ, ಮೊದಲ ಗದ್ಯ ಮಹಾಕಾವ್ಯ, ಇಂಗ್ಲಿಷ್ ಕವನಗಳ ಮೊದಲ ಅನುವಾದಗಳು, ಇತ್ಯಾದಿ. ಹಾಗೆಯೇ, ಬ್ರಹ್ಮೋಸಮಾಜ–ಆರ್ಯಸಮಾಜಗಳ ಶಾಖೆಗಳು, ಮೊದಲ ಮಹಿಳಾ ಕಾಲೇಜು, ಬ್ಯಾಂಕಿಂಗ್ ಉದ್ಯಮ, ಆಧುನಿಕ ಶಿಕ್ಷಣ ಸಂಸ್ಥೆಗಳು, ಇತ್ಯಾದಿ ಮಂಗಳೂರಿನಲ್ಲಿ ಅಸ್ತಿತ್ವಕ್ಕೆ ಬಂದುವು.

ಸಂಕ್ಷಿಪ್ತವಾಗಿ ಹೇಳುವುದಾದರೆ, ಮಂಗಳೂರು ಮಹಾನಗರದ ಅಸಾಧಾರಣ ಜೀವಂತಿಕೆಯನ್ನು ಹಾಗೂ ಕ್ರಿಯಾಶೀಲತೆಯನ್ನು ‘ಮಂಗಳೂರು ದರ್ಶನ’ದ ಮೂರು ಸಂಪುಟಗಳು ಸಾಧಾರವಾಗಿ ಕಟ್ಟಿಕೊಡುತ್ತವೆ. ಈ ಸಂಪುಟಗಳ ಸಂಪಾದಕ ವರ್ಗದ ಎಲ್ಲಾ ವಿದ್ವಾಂಸರೂ, ಈ ಯೋಜನೆಗೆ ಚಾಲನೆ ಕೊಟ್ಟ ದಕ್ಷಿಣ ಕನ್ನಡ ಜಿಲ್ಲೆಯ ಜಿಲ್ಲಾಧಿಕಾರಿಗಳು, ‘ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರ’ದ ಆಯುಕ್ತರು, ಇವರೆಲ್ಲರೂ ಅಭಿನಂದನೀಯರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT