ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂವಹನಕ್ಕೆ ಬೇಕು ರಸಲೇಪ

Last Updated 9 ಅಕ್ಟೋಬರ್ 2016, 19:30 IST
ಅಕ್ಷರ ಗಾತ್ರ

ತರಗತಿಯ ಕೊನೆಯ ಪೀರಿಯಡ್‌ ಮುಗಿಸಿ ಹೋಗುವಾಗ ವಿದ್ಯಾರ್ಥಿಗಳು ನಗುತ್ತಾ ಕಿರಿಚಾಡುತ್ತಾ ಹೋಗುವುದನ್ನು ನಾನು ಕಂಡಾಗಲೆಲ್ಲಾ, ನನ್ನ ಮನಸ್ಸು ಸೇವೆಗೆ ಸೇರಿದ ದಿನಗಳನ್ನು ನೆನಪಿಸಿಕೊಳ್ಳುತ್ತದೆ. ‘ತರಗತಿಗಳನ್ನು ಬೆಲ್‌ ಆಗುವ ಮೊದಲೇ ಬಿಡಬೇಡಿ. ಹಾಗೆ ಬಿಡಲೇಬೇಕಾದಲ್ಲಿ ಗದ್ದಲವಿಲ್ಲದೆ ಕಾಲೇಜು ದಾಟಿ ಹೋಗುವ ಹಾಗೆ ವಿದ್ಯಾರ್ಥಿಗಳಿಗೆ ಸೂಚನೆ ನೀಡಿ’–  ಎಂದು ನಮ್ಮ ಪ್ರಾಚಾರ್ಯರು ಸೂಚನೆಯನ್ನು ಪದೇ  ಪದೇ ನೀಡುತ್ತಿದ್ದರು. ಕೆರೆ ತುಂಬಿ ಕೋಡಿ ಹರಿವ ಹಾಗೆ, ತರಗತಿ ನಡೆಯುವವರೆಗೆ ತುಂಬಿಟ್ಟ ಮಾತಿನ ಕೆರೆ ಬೆಲ್‌ ಆದ ಕೂಡಲೇ,  ಭೋರ್ಗರೆದು ಮಾತಾಗಿ ಹರಿಯುತ್ತದೆ.

ನಾನು  ಶಾಲೆಯಿಂದ ಹೊರಗೆ ಬರುವಾಗ ಹಾಗೆ ಗದ್ದಲ ಮಾಡುತ್ತಾ ಹೊರಗೆ ಬಂದ ನೆನಪೇ ಇಲ್ಲ. ಈ ಕುರಿತು ನನ್ನ ಗೆಳೆಯರು ನನ್ನನ್ನು ನಗೆಯಾಡುತ್ತಿದ್ದರು. ನನ್ನ ಮನಸ್ಸು ಮಿಡಿದ ವೀಣೆಯ ತಂತಿಯ ಹಾಗೆ ಕಂಪಿಸುತ್ತಲೇ ಇರುತ್ತಿತ್ತು. ಕಲಿತ ಪರಿಕಲ್ಪನೆಯ ಉಳಿದ ಮಗ್ಗುಲನ್ನು ಕುರಿತ ಹಾಗೆ ಪ್ರಶ್ನೆಗಳು ಏಳುತ್ತಿದ್ದವು. ಯಾವ ಪ್ರಶ್ನೆ ಕೇಳಿ ಗೆಳೆಯರನ್ನು ಅಚ್ಚರಿಗೊಳಿಸಲಿ ಎಂಬ ಆಲೋಚನೆಗಳು ಮನಸ್ಸಿನಲ್ಲಿ ಮೂಡಿ ಮುಳುಗುತ್ತಿದ್ದವು. ಮನಸ್ಸು ಮಗ್ನವಾಗಿದ್ದಾಗ ಬಾಯಿ ಮೂಕವಾಗಿರುತ್ತಿತ್ತು!

ನನ್ನ ಶಾಲಾ ದಿನಗಳನ್ನು ಹಾಗೂ ಪ್ರಾಚಾರ್ಯರು ನೀಡಿದ ಸೂಚನೆಯನ್ನೂ ಪರಿಗಣಿಸಿ ನಾನು ಒಂದು ತೀರ್ಮಾನ ಕೈಗೊಂಡೆ; ತರಗತಿಯಲ್ಲಿ ಮಕ್ಕಳಿಗೆ ಮಾತನಾಡದಂತೆ ಮತ್ತೆ ಮತ್ತೆ ‘ಸೈಲೆನ್ಸ್‌’ ಎಂದು ಅಬ್ಬರದಿಂದ ಮಾನವನ್ನು ನಾನೇ ಮುರಿಯುವುದೂ ಬೇಡ. ಅವರ ಅಭಿವ್ಯಕ್ತಿಯ ಚಟಕ್ಕೆ ಅಣೆಕಟ್ಟು ಕಟ್ಟುವುದೂ ಬೇಡ. ಬದಲಾಗಿ ಅವರು ಪ್ರತಿಕ್ರಿಯೆ ತೋರಿಸಲು ಪ್ರೋತ್ಸಾಹ ನೀಡಿದರಾಯಿತು. ಊಹೂಂ, ಈ ಪ್ರಯತ್ನವೂ ಸಾಗಲಿಲ್ಲ. ಹೊಸ ಪಾಠವನ್ನು ಅದೂ ಕಂಡರಿಯದ ವಸ್ತು/ವಿಷಯವನ್ನು ಒಳಗೊಂಡ ಪಾಠವನ್ನು ಕೇಳಿದ ಕೂಡಲೇ ಪ್ರತಿಕ್ರಿಯೆ ತೋರುವಷ್ಟು ‘ಚುರುಕು’ ಮಕ್ಕಳಿಗೆ ಇರುತ್ತಿರಲಿಲ್ಲ.

ಮಿಗಿಲಾಗಿ, ಕಾಲೇಜಿಗೆ ಬರುವ ವೇಳೆಗೆ ಅವರಿಗೆ, ಮೌನದ ಶಿಸ್ತನ್ನು ಹೇರಿ, ಅಧ್ಯಾಪಕರೆದುರಿಗೆ ಪ್ರತಿಕ್ರಿಯೆ ತೋರುವುದು ಉದ್ಧಟತನವೆಂದು ಒಪ್ಪಿಸಲಾಗಿರುತ್ತಿತ್ತು. ಪ್ರತಿಕ್ರಿಯೆ ತೋರಿದರೆ ಗೆಳೆಯರೆಲ್ಲರೆದುರು ನಗೆಪಾಟಲಾಗುವ ಭೀತಿಯನ್ನೂ ಮೂಡಿಸಲಾಗಿರುತ್ತಿತ್ತು. ಹೀಗಾಗಿ ಅವರು ಮಾತನಾಡುತ್ತಿರಲಿಲ್ಲ. ಇದಕ್ಕೆ ಪರಿಹಾರವನ್ನು ಹುಡುಕುವ ಸವಾಲನ್ನು ನಾನೇ ಎದುರಿಸಿದೆ. ಮಾತನಾಡದೆ ಹೋದರೆ ಹೋಗಲಿ, ಕನಿಷ್ಠಪಕ್ಷ ಮಕ್ಕಳು ಪ್ರತಿಕ್ರಿಯೆ ತೋರಿಸಬಲ್ಲರು.

ನಾನು ಪಾಠ ಮಾಡುತ್ತಲೇ ನನ್ನ ಪ್ರತಿಕ್ರಿಯೆಯನ್ನು ತೋರಿಸುತ್ತಾ – ಆ ಪ್ರತಿಕ್ರಿಯೆಯ ಭಾವದ ಅಲೆಯನ್ನು ಮೂಡಿಸುತ್ತಿದ್ದೆ. ಆಗ ವಿದ್ಯಾರ್ಥಿಗಳು ಸ್ಪಂದಿಸಲೇಬೇಕಲ್ಲವೆ? ಮಾಹಿತಿಗೆ ಸಂಬಂಧಿಸಿದ ಹಾಗೆ ನಗೆಹನಿ ಹೇಳಿದರೆ ವಿದ್ಯಾರ್ಥಿಗಳು ನಗಲೇಬೇಕು; ನಗುತ್ತಿದ್ದರು. ಹೀಗಾಗಿ ನೀರಸ ಮಾಹಿತಿಯ ಜೊತೆ ಜೊತೆಗೆ ರಸಾವೇಶವನ್ನು ಸೃಷ್ಟಿಸುವುದು ನನಗೆ ಕರಗತವಾಯಿತು. ವಿಜ್ಞಾನದ ಇತಿಹಾಸ ಆಧರಿಸಿಯೋ, ವಿಜ್ಞಾನದ ಪರಿಕಲ್ಪನೆಯನ್ನು ಒಳಗೊಂಡ ಪ್ರಸಂಗದ ಮೂಲಕವೋ, ನಾನು, ಮಕ್ಕಳ ಅಭಿವ್ಯಕ್ತಿಗೆ ಅನುವು ಮಾಡಿಕೊಡುತ್ತಿದ್ದೆ.

ಇದರ ಪರಿಣಾಮವಾಗಿ ನನ್ನ ತರಗತಿ/ಉಪನ್ಯಾಸ ಕಾರ್ಯಕ್ರಮದಲ್ಲಿ ಎಂದೂ ಪೂರ್ಣಮೌನ ಇರುತ್ತಿರಲಿಲ್ಲ. ವಿದ್ಯಾರ್ಥಿಗಳಿಗೂ ಸಂಭಾವಿತವಾಗಿ ಪ್ರತಿಕ್ರಿಯೆ ತೋರುವ ಸಾಧ್ಯತೆಯನ್ನು ಕಲಿಸುವಲ್ಲಿ ಯಶಸ್ವಿಯಾದೆ. ಸೋಜಿಗವೆಂದರೆ, ನನ್ನ ತರಗತಿ ಮುಗಿದ ಕೂಡಲೇ ವಿದ್ಯಾರ್ಥಿಗಳು ಗದ್ದಲ ಮಾಡುತ್ತಾ ಹೊರಬರುತ್ತಿರಲಿಲ್ಲ? ಅಂದರೆ, ಅವರು ಮಾತುಗಳನ್ನು ಅಭಿವ್ಯಕ್ತಿಗೆ ಅವಕಾಶವನ್ನು ಬಳಕೆ ಮಾಡಿಕೊಂಡಿರುತ್ತಿದ್ದರೆಂದಾಯಿತು.

ಇತರ ತರಗತಿಗಳಿಗೆ ಹೋಲಿಸಿದರೆ, ನನ್ನ ತರಗತಿಯಿಂದ ಹೊರಬರುತ್ತಿದ್ದ ವಿದ್ಯಾರ್ಥಿಗಳು ಸಾಪೇಕ್ಷವಾಗಿ ಗಂಭೀರವಾಗಿರುತ್ತಿದ್ದರು. ತರಗತಿಯಲ್ಲಿಯೂ ಪರಿಪೂರ್ಣಮೌನ ಇರುತ್ತಿರಲಿಲ್ಲ. ಆದರೆ ಅಧ್ಯಾಪಕರೇ ಮೂಡಿಸುವ ಆವೇಶದ ಅಲೆಗೆ ಸ್ಪಂದಿಸಬೇಕಾದ  ಎಚ್ಚರದಿಂದಾಗಿ ವಿದ್ಯಾರ್ಥಿಗಳು ಪರಸ್ಪರ ಮಾತನಾಡುವುದು ಕಡಿಮೆ ಆಯಿತು! ಒಂದು ದಿನ, ‘ಟಂಡಾಲ್‌ ಪರಿಣಾಮ’ ಪಾಠ ಮಾಡುವಾಗ ಒಬ್ಬ ಹುಡುಗ ಇನ್ನೊಬ್ಬನ ಕಿವಿಯಲ್ಲಿ ಏನೋ ಹೇಳಿದ; ಇಬ್ಬರೂ ನಕ್ಕರು.

ಅದನ್ನು ಗಮನಿಸಿದ ನಾನು, ನಮಗೂ ಅವನೇನು ತಿಳಿಸಿದನೆಂದು ಹೇಳಲು ಸೂಚಿಸಿದೆ. ಆಗ ಅವನ ಪಕ್ಕದಲ್ಲಿದ್ದ ಹುಡುಗ ‘ತಿಂದ್‌ ಹಾಳ್‌’ ಎಂದು ಹೇಳಿದನೆಂದು ತಿಳಿಸಿ ನಕ್ಕ.  ನಾನೂ ನಕ್ಕು ಹೇಳಿದೆ: ತಿಂದದ್ದೆಲ್ಲಾ ಊರ್ಜಿತವಲ್ಲ. ಆದರೆ ಅದು ಊರ್ಜಿತವಾಗಬೇಕಾದರೆ ಜೀರ್ಣಿಸಿಕೊಳ್ಳಬೇಕು. ಇದು ಪಾಠಕ್ಕೂ ನಿಜ; ಊಟಕ್ಕೂ ನಿಜ. ಇದನ್ನು ತರಗತಿಯಿಂದ ಹೊರಗೆ ಬಂದು ಹೇಳಿದ್ದರೆ ನಾನೂ ಮೆಚ್ಚುತ್ತಿದ್ದೆ.

ಪಾಠವನ್ನು ‘ತಿನ್ನುವಾಗಲೆ’ ‘ತಿಂದ್‌ ಹಾಳ್‌’ ಎಂದು ಹೇಳಿ ‘ತಿನ್ನದೆ’ ಪಾಠ ಹಾಳಾಗುವುದು ಬೇಡ. ಅಂದಿನಿಂದ ವಿದ್ಯಾರ್ಥಿಗಳು ಮತ್ತಷ್ಟು ಆತ್ಮೀಯರಾದರು. ಮೂಕವಿಸ್ಮಿತರಾಗಿ ಆನಂದಿಸಿದವರೇ ಬಹಳ. ಎಲ್ಲೋ ಒಬ್ಬೊಬ್ಬರು ಮೆಚ್ಚುಗೆ ಸೂಚಿಸುತ್ತಿದ್ದರು. ಬೇರೆ ತರಗತಿಯ ಹುಡುಗರೂ ಬಿಡುವಿದ್ದಾಗ ನನ್ನ ತರಗತಿಗೆ ಬರುತ್ತಿದ್ದುದನ್ನು ಗಮನಿಸಿದೆ.

ಆಕ್ಷೇಪಣೆಗಳೂ ಆದುದುಂಟು. ವಿಶೇಷವಾಗಿ ಮನೆ ಪಾಠಕ್ಕೆ ಹೋಗುತ್ತಿದ್ದ ಹುಡುಗರು, ‘ಪರೀಕ್ಷೆಗೆ ಬೇಡವಾದುದನ್ನು ಹೇಳುತ್ತಾರೆಂದೂ, ಪಾಠ್ಯೇತರ ವಿಷಯಗಳು ಅತಿಯಾಯಿತೆಂದು ದೂರುವುದು ನನ್ನ ಕಿವಿಗೂ ಬಿತ್ತು. ಆದರೂ ಅದನ್ನು ಉಪೇಕ್ಷೆ  ಮಾಡಿ ತನ್ನ ವಿಧಾನ ಮುಂದುವರಿಸಿದೆ. ತರಗತಿಯಲ್ಲಿ ಲವಲವಿಕೆಯ ವಾತಾವರಣ ಇರುತ್ತಿತ್ತಾದರೂ ಪೂರ್ಣ ಮೌನ ಇರುತ್ತಿರಲಿಲ್ಲ. ಹಾಗೇನಾದರೂ ವಿದ್ಯಾರ್ಥಿಗಳು ‘ಶ್ರೀಮದ್ಗಾಂಭೀರ್ಯ’ ಪ್ರದರ್ಶಿಸಿದರೆನ್ನ!ಿ ಆಗ ನಾನು ಯಾವುದಾದರೂ ರೋಚಕ ಸಂಗತಿಯನ್ನು ಹೇಳಿ ಮೋಡ ಕವಿದ ವಾತಾವರಣ ತಿಳಿಯಾಗುವಂತೆ ಮಾಡುತ್ತಿದ್ದೆ.

ಬಾವಿಯಿಂದ ನೀರು ಸೇದುವ ಪ್ರಕ್ರಿಯೆಯನ್ನು ಗಮನಿಸಿ. ಹಗ್ಗವನ್ನು ಪೂರಾ ಸಡಿಲಬಿಟ್ಟರೆ ಕೊಡ ಬೋರಲಾಗಿ ಬೀಳುವುದು. ಬೀಳುವಾಗಿನ ಶಬ್ದವನ್ನು ಬಿಟ್ಟರೆ ಅನಂತರ ಪೂರ್ಣ ಮೌನ. ಹಗ್ಗವನ್ನು ಬಿಗಿಯಾಗಿ ಜಗ್ಗಿದರೆ ಕೊಡ ನೀರಿನ ಮೇಲೆಯೇ ಉಳಿಯುವುದು. ಹಗ್ಗವನ್ನು ಸಡಿಲವಾಗಿ ಬಿಡುತ್ತಾ ಹೋಗಿ ಕೊಡದ ಕಂಠವು ನೀರಿನ ಮೇಲ್ಪದರದಲ್ಲಿ ನಿಲ್ಲುವಂತೆ ಹಿಡಿದರೆ ಆಗ ಭಯಂಕರವಾಗಿ ಗರ್ಜಿಸುತ್ತಾ ನೀರು ಒಳ ಸೇರುತ್ತ ಒಳಗಿರುವ ಗಾಳಿಯನ್ನು ಹೊರಗೆ ದೂಡುವುದು.

ಹಾಗೆಯೇ ವಿದ್ಯಾರ್ಥಿಯ  ಅಂತರಂಗದಲ್ಲಿ ಆವರಿಸಿ ಅಜ್ಞಾನದ ಪೂರ್ವಗ್ರಹವೆಂಬ ಗಾಳಿಯು ಹೊರಹೋಗಲು ಅನುವಾಗಿ ಜ್ಞಾನವು ಆತನ ಅಂತರಂಗ ಪ್ರವೇಶಿಸುವಂತೆ ಮಾಡಬೇಕಾದರೆ ಹಗ್ಗದ ಬಿಗಿ ಅತಿಯಾಗಿಯೂ ಆಗದೆ, ಕಡಿಮೆಯೂ ಆಗದೆ ಹಿತವಾಗಿ ಇದ್ದರೆ ಮಾತ್ರ ಸಾಧ್ಯ. ಜ್ಞಾನಗಂಗೆಯ ಪ್ರವೇಶ ಅಜ್ಞಾನ ಪೂರ್ವಗ್ರಹದ ಹೊರದೂಡಿಕೆ ಆಗುವಾಗ ಕೊಂಚ ಗದ್ದಲ ಅನಿವಾರ್ಯ.

ಆದರೆ ಆ ಗದ್ದಲ ತರಗತಿಯಲ್ಲೇ ಆದರೆ ಪಠ್ಯಕ್ರಮ ಮುಗಿಸಲು ಅಸಾಧ್ಯ. ಆದ್ದರಿಂದ ವಿದ್ಯಾರ್ಥಿಗಳು ಸೌಮ್ಯ ಪ್ರತಿಕ್ರಿಯೆ ಮಾಡಲು ಅವಕಾಶವು ಇರಬೇಕು. ಹಾಗೆಯೇ ಅವರು ತರಗತಿ ಮುಗಿದಮೇಲೂ ಪ್ರಶ್ನೆ ಕೇಳಲು ಅಧ್ಯಾಪಕರ ಬಳಿಗೆ ಬರಲು ಸಲುಗೆಯು ಈ ಭಾವದ ಅಲೆಯಿಂದ ಉಂಟಾಗಬೇಕು. ಇದು ನಾನು ಕಂಡುಕೊಂಡು ಆಚರಿಸುತ್ತಾ ಬಂದಿರುವ ಕ್ರಮ. 

ಇದರಿಂದ ನನಗೆ ಏನೋ ವಿಶೇಷ  ಆದಾಯವುಂಟಾಯಿತು. ಉಪನ್ಯಾಸಕನಾಗಿ, ವಿಷಯ ನಿರೂಪಣೆ ಮಾಡುತ್ತಲೇ ಸಭಿಕರ ಮನೋಧರ್ಮ ಗಮನಿಸುವ ಕಲೆ  ಕರಗತವಾಯಿತು. ಅವರಿಗೆ ಅಗತ್ಯ ಮಾಹಿತಿ ತಿಳಿಸಿದಾಗ ಅದು ಆಯಾಸವನ್ನು ಗುರುತಿಸಿ ಪರಿಹರಿಸುವ ಕೆಲಸಕ್ಕೆ ಈ  ವೀಕ್ಷಣೆ ಮತ್ತು ಸಭೆಯ ಪರವಾಗಿ ಪ್ರತಿಕ್ರಿಯೆಯನ್ನು ಮಾಡುತ್ತಾ ಅವರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವುದು ಸಾಧ್ಯವಾಯಿತು.

ಒಮ್ಮೆ ನನ್ನ ತಂದೆಯವರು ಯಾವುದೋ ಕೆಲಸಕ್ಕೆಂದು ನನ್ನನ್ನು ಹುಡುಕಿಕೊಂಡು ಬಂದರು. ನಾನು ಯಾವ ಕೊಠಡಿಯಲ್ಲಿ ಪಾಠ ಮಾಡುತ್ತಿರುವೆಂದು ವಿಚಾರಿಸಿದರು. ಆಗ ನಮ್ಮ ಕಾಲೇಜು ಸಿಬ್ಬಂದಿಯೊಬ್ಬ ಹೀಗೆ ಹೇಳಿದ.  ಯಾವ ಕೊಠಡಿಯಲ್ಲಿ ಅಧಿಕ ಗದ್ದಲ ಇರುತ್ತದೆಯೋ ಅದೇ ಕೊಠಡಿಯಲ್ಲಿ ನಿಮ್ಮ ಮಗ ಪಾಠ ಹೇಳುತ್ತಿರುತ್ತಾರೆ!

ನನ್ನನ್ನು ಭೇಟಿ ಮಾಡಿ ಹಿಂತಿರುಗಿದ ನನ್ನ ತಂದೆಯವರು ನಾನು ಮನೆಗೆ ಬಂದ ಕೂಡಲೇ ನನ್ನನ್ನು ತರಾಟೆಗೆ ತೆಗೆದುಕೊಂಡರು. ಶಿಸ್ತನ್ನೇ ನಂಬಿ ತಮ್ಮ ಉದ್ಯೋಗ ನಿರ್ವಹಿಸಿದ್ದ ಅವರು ತನ್ನ ತರಗತಿಯ ಆಶಿಸ್ತಿನಿಂದ ಬೇಸರಗೊಂಡಿರುವುದು ಸಹಜ. ಅವರು ನಿವೃತ್ತ ಪೊಲೀಸ್‌ ಅಧಿಕಾರಿ. ಆಗ ನಾನೆಂದೆ. ಅಪರಾಧಿಗಳು ಗದ್ದಲ ಮಾಡಿದಂತೆ ಸೆರೆಮನೆ ಅಧಿಕಾರಿ ನೋಡಿಕೊಳ್ಳಬಹುದು. ಆದರೆ ಮಕ್ಕಳ ಮನಸ್ಸನ್ನು ಸೆರೆ ಹಿಡಿಯುವ ಕಾರ್ಯದಲ್ಲಿ ಗದ್ದಲ ಸಹಜ.

ವಿದ್ಯಾರ್ಥಿಗಳು ಅರಳುವ ಮನಸ್ಸಿನವರು. ಆದರೆ ಮೊಗ್ಗು ನೀರವವಾಗಿ ಅರಳುವ ಹಾಗೆ ಅವರು ಸುಮ್ಮನೆ ಅರಳಲಾರರು. ಜನ ಬಾಣಲೆಯ ಕಾಳಿನ ಹಾಗೆ ಸದ್ದು ಮಾಡುತ್ತಲೇ ಅರಳಬೇಕು. ಅವರ ಪ್ರತಿಕ್ರಿಯೆ ನನಗೆ ಸ್ಫೂರ್ತಿಯ ಸೆಲೆ. ಆದರೆ ಅದು ಸಾಮೂಹಿಕ ಸಂಗತ ಪ್ರತಿಕ್ರಿಯೆ. ಖಾಸಗಿ  ವಿಚಾರಗಳ ಹರಟೆ ಮಾಡಲ್ಲ.

ನನ್ನ ತಂದೆ ಸುಮ್ಮನಾದರು. ನನ್ನ ವಾದವನ್ನು ಅವರು ಒಪ್ಪಿದರೋ ಇಲ್ಲವೋ ತಿಳಿಯದು. ನಾನಂತೂ  ಮಾತಿನ ನೀರಸವಾಕ್ಯಗಳ ಗುಳಿಗೆಗೆ ಸಿಹಿ ಲೇಪನ ನೀಡದೆ ಉತ್ಸಾಹ ತುಂಬಲಾರೆ. ಜನರ ಸಕಾರಾತ್ಮಕ ಪ್ರತಿಕ್ರಿಯೆ ನನಗೆ ಶ್ವಾಸ ಹಾಗೂ ವಿಶ್ವಾಸದಾಯಕ ಆಕ್ಸಿಜನ್‌.

* ಮಕ್ಕಳ ಮನಸ್ಸನ್ನು ಸೆರೆ ಹಿಡಿಯುವ ಕಾರ್ಯದಲ್ಲಿ ಗದ್ದಲ ಸಹಜ. ವಿದ್ಯಾರ್ಥಿಗಳು ಅರಳುವ ಮನಸ್ಸಿನವರು. ಆದರೆ ಮೊಗ್ಗು ನೀರವವಾಗಿ ಅರಳುವ ಹಾಗೆ ಅವರು ಸುಮ್ಮನೆ ಅರಳಲಾರರು. ಜನ ಬಾಣಲೆಯ ಕಾಳಿನ ಹಾಗೆ ಸದ್ದು ಮಾಡುತ್ತಲೇ ಅರಳಬೇಕು.

*ಪ್ರತಿಕ್ರಿಯೆಗೆ ಪ್ರೋತ್ಸಾಹ
*ಸಾಮೂಹಿಕ ಚರ್ಚೆ
*ಸ್ಪಂದನೆಗೆ ಅವಕಾಶ
*ರಸಾವೇಶ
*ಮುಕ್ತ ಅವಕಾಶ
*ಸ್ನೇಹಿತರಾಗಿರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT