ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಗುಜರಾತ್ ಮಾದರಿಯಿಂದ ನಾಶ’

‘ಚಲೋ ಉಡುಪಿ’ ಸ್ವಾಭಿಮಾನಿ ಸಂಘರ್ಷ ಯಾತ್ರೆ ಸಮಾರೋಪ
Last Updated 9 ಅಕ್ಟೋಬರ್ 2016, 19:30 IST
ಅಕ್ಷರ ಗಾತ್ರ

ಉಡುಪಿ: ‘ಮನುವಾದ ಹಾಗೂ ಬ್ರಾಹ್ಮಣವಾದದ ವಿರುದ್ಧ ಆರಂಭವಾಗಿರುವ ಈ ದಲಿತ ಹಾಗೂ ಹಿಂದುಳಿದ ವರ್ಗದವರ ಹೋರಾಟವನ್ನು ಅದೇ ಸ್ಫೂರ್ತಿಯಲ್ಲಿ ಆಹಾರ, ಬಟ್ಟೆ, ವಸತಿ, ಶಿಕ್ಷಣ ಮತ್ತು ಉದ್ಯೋಗದ ಹಕ್ಕಿನ ಹೋರಾಟಕ್ಕೂ ವಿಸ್ತರಿಸೋಣ’ ಎಂದು ಗುಜರಾತ್‌ನ ಊನಾ ಹೋರಾಟ ಸಂಘಟಕರಲ್ಲಿ ಪ್ರಮುಖರಾದ ಜಿಗ್ನೇಶ್‌ ಮೇವಾನಿ ಹೇಳಿದರು.

ನಗರದ ಬೀಡಿನಗುಡ್ಡೆಯ ಬಯಲು ರಂಗ ಮಂದಿರದಲ್ಲಿ ಭಾನುವಾರ ನಡೆದ ದಲಿತ ದಮನಿತರ ಸ್ವಾಭಿಮಾನಿ ಹೋರಾಟ ಸಮಿತಿ ‘ಆಹಾರ ನಮ್ಮ ಆಯ್ಕೆ, ಭೂಮಿ ನಮ್ಮ ಹಕ್ಕು’ ಎಂಬ ಘೋಷವಾಕ್ಯದೊಂದಿಗೆ ಆಯೋಜಿಸಿದ್ದ ‘ಚಲೋ ಉಡುಪಿ’ ಸ್ವಾಭಿಮಾನಿ ಸಂಘರ್ಷ ಯಾತ್ರೆಯ ಸಮಾರೋಪ ಸಮಾವೇಶಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

‘ಪೌರೋಹಿತ್ಯ ಯಾರು ಮಾಡಬೇಕು ಹಾಗೂ ಮಲವನ್ನು ಯಾರು ಸ್ವಚ್ಛಗೊಳಿಸಬೇಕು ಎಂದು ಜಾತಿವಾದ ನಿರ್ಧರಿಸಿದ್ದು, ಇದನ್ನು ನಾವು ಧಿಕ್ಕರಿಸೋಣ. ಗೋವಿನ ಬಾಲವನ್ನು ಗೋ ರಕ್ಷಕರೇ ಇಟ್ಟುಕೊಳ್ಳಲಿ, ನಮಗೆ ಭೂಮಿ ನೀಡಲಿ. ಭೂಮಿಯ ಹಕ್ಕಿಗಾಗಿ ಹೋರಾಟವನ್ನು ಮುಂದುವರೆಸೋಣ. ಕೇಂದ್ರ ಸರ್ಕಾರವು ಅದಾನಿ, ಅಂಬಾನಿ ಹಾಗೂ ಎಸ್ಸಾರ್ ಸಮೂಹ ಸಂಸ್ಥೆಗಳಿಗೆ ಭೂಮಿಯನ್ನು ನೀಡುವುದಾದರೆ ಅದೇ ಭೂಮಿಯನ್ನು ದಲಿತರು, ಹಿಂದುಳಿದವರು ಹಾಗೂ ಆದಿವಾಸಿಗಳಿಗೆ ನೀಡಲು ಏಕೆ ಸಾಧ್ಯವಾಗದು’ ಎಂದು ಅವರು ಮಾರ್ಮಿಕವಾಗಿ ಪ್ರಶ್ನಿಸಿದರು.

‘ಕೇಂದ್ರದಲ್ಲಿ ನರೇಂದ್ರ ಮೋದಿ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಗೋ ರಕ್ಷಕರ ಅಹಂಕಾರ ಜಾಸ್ತಿಯಾಗಿದೆ. ದಲಿತ, ಹಿಂದುಳಿದ ಹಾಗೂ ಅಲ್ಪಸಂಖ್ಯಾತರ ಮೇಲೆ ಮನಸ್ಸಿಗೆ ಬಂದಾಗ ಹಲ್ಲೆ ಮಾಡಬಹುದು ಎಂದು ಅವರು ಭಾವಿಸಿಕೊಂಡಿದ್ದಾರೆ.

ಎಲ್ಲ ಗೋ ರಕ್ಷಕರ ಸಮಿತಿಗಳನ್ನು ಸರ್ಕಾರ ಈ ಕೂಡಲೇ ನಿಷೇಧಿಸಬೇಕು. ‘ಸಬ್‌ ಕಾ ಸಾಥ್‌ ಸಬ್‌ ಕಾ ವಿಕಾಸ್‌’ ಎಂಬ ಮೋದಿ ಅವರ ಘೋಷಣೆ  ಹಾಗೂ ಗುಜರಾತ್‌ ಅಭಿವೃದ್ಧಿ ಮಾದರಿಯು ದಲಿತರ ವಿನಾಶ– ಸರ್ವನಾಶದ ಮಾದರಿಯಾಗಿದೆ. ಊನಾದಲ್ಲಿ ಸತ್ತ ದನದ ಚರ್ಮ ಸುಲಿದ ಯುವಕರ ಮೇಲೆ ನಡೆದ ಹಲ್ಲೆಯ ವಿರುದ್ಧ ಆರಂಭಿಸಿದ ಹೋರಾಟ ಗುಜರಾತ್‌ಗೆ ಮಾತ್ರ ಸೀಮಿತವಾಗಬಾರದು, ಹೋರಾಟವನ್ನು ಇಡೀ ದೇಶಕ್ಕೆ ವಿಸ್ತರಿಸಬೇಕು’ ಎಂದರು.

2002ರ ಗೋಧ್ರಾ ಹತ್ಯಾಕಾಂಡಕ್ಕೆ ಸಂಬಂಧಿಸಿದಂತೆ ಬ್ರಾಹ್ಮಣ, ಬನಿಯಾ ಸೇರಿದಂತೆ ಕೇವಲ 27 ಮಂದಿ ಮೇಲ್ವರ್ಗದವರ ಮೇಲೆ ಪ್ರಕರಣ ದಾಖಲಾಯಿತು. ಆದರೆ, 746 ದಲಿತರು ಹಾಗೂ 749 ಹಿಂದುಳಿದ ವರ್ಗದವರ ಮೇಲೆ ಪ್ರಕರಣ ದಾಖಲಾದವು.

ಸಂಘ ಪರಿವಾರ ಹಾಗೂ ಬಿಜೆಪಿಯ ರಹಸ್ಯ ಕಾರ್ಯಸೂಚಿ ಏನು ಎಂಬುದನ್ನು ಈ ಅಂಕಿ– ಅಂಶಗಳು ತಿಳಿಸುತ್ತವೆ. ಸಂಘ ಪರಿವಾರ ಹಾಗೂ ಬಿಜೆಪಿ ಜತೆಗಿರುವ ದಲಿತರು ಹಾಗೂ ಹಿಂದುಳಿದ ವರ್ಗದವರು ಈ ವಿಷಯವನ್ನು ಮನದಟ್ಟು ಮಾಡಿಕೊಂಡು ಅವರ ಹಿಡಿತದಿಂದ ಹೊರಬರಬೇಕು ಎಂದು ಹೇಳಿದರು.

‘ಗುಜರಾತಿನ 1590 ಗ್ರಾಮಗಳಲ್ಲಿ ಈಗಲೂ 96 ತರಹದ ಅಸ್ಪೃಶ್ಯತೆ ಜಾರಿಯಲ್ಲಿದೆ. 119 ಗ್ರಾಮಗಳ ದಲಿತರು ಈಗಲೂ ಪೊಲೀಸರ ರಕ್ಷಣೆಯಲ್ಲಿ ಜೀವನ ಸಾಗಿಸುತ್ತಿದ್ದಾರೆ. ಪೊಲೀಸ್‌ ರಕ್ಷಣೆಯನ್ನು ಹಿಂದಕ್ಕೆ ಪಡೆದರೆ ಆ ದಲಿತರ ಮೇಲೆ ಹಲ್ಲೆಯಾಗುವುದು ನಿಶ್ಚಿತ.

ಕಂದಾಯ ಗ್ರಾಮದ ವ್ಯಾಪ್ತಿಯಲ್ಲಿರುವ ಸರ್ಕಾರದ ಜಮೀನಿನ ಶೇ 50ರಷ್ಟನ್ನು ಪರಿಶಿಷ್ಟ ಜಾತಿ– ಪಂಗಡ ಹಾಗೂ ಆದಿವಾಸಿಗಳಿಗೆ ಹಂಚಲು ಕರ್ನಾಟಕ ಭೂ ಮಂಜೂರಾತಿ ಕಾಯ್ದೆಯಲ್ಲಿ ಅವಕಾಶ ಇದೆ. ಈ ಕಾಯ್ದೆಗೆ 1992ರಲ್ಲಿ ತಿದ್ದುಪಡಿ ತಂದು ಜಮೀನು ಹಂಚಿಕೆ ಪ್ರಮಾಣವನ್ನು ಶೇ 75ಕ್ಕೂ ಹೆಚ್ಚಿಸಲಾಗಿದೆ. ಆದರೆ, ಎಷ್ಟು ಪ್ರಮಾಣದಲ್ಲಿ ಭೂಮಿ ಹಂಚಿಕೆಯಾಗಿದೆ? ಭೂ ಸುಧಾರಣೆಯನ್ನು ಜಾರಿಗೊಳಿಸದಿದ್ದರೆ ಹೋರಾಟ ಅನಿವಾರ್ಯವಾಗಲಿದೆ’ ಎಂದು ಎಚ್ಚರಿಸಿದರು.

ಮುಖ್ಯಮಂತ್ರಿ ಅವರ ಮಾಧ್ಯಮ ಸಲಹೆಗಾರ ದಿನೇಶ್ ಅಮಿನ್‌ ಮಟ್ಟು, ಚಿಂತಕ ಸಿ.ಎಸ್‌. ದ್ವಾರಕಾನಾಥ್‌, ಎ.ಕೆ. ಸುಬ್ಬಯ್ಯ, ಭಾಸ್ಕರ ಪ್ರಸಾದ್, ಹುಲಿಕುಂಟೆ ಮೂರ್ತಿ, ವಿಕಾಸ್‌ ಮೌರ್ಯ, ಗೌರಿ ಲಂಕೇಶ್, ಸುಂದರ ಮಾಸ್ತರ್‌, ದಿನಕರ ಎಸ್‌. ಬೆಂಗ್ರೆ ಉಪಸ್ಥಿತರಿದ್ದರು.

ರಾಜ್ಯದ ಮೂಲೆ ಮೂಲೆಗಳಿಂದ ಬಂದಿದ್ದ ಸಾವಿರಾರು ಜನ ಸಮಾವೇಶಕ್ಕೂ ಮೊದಲು ನಡೆದ ಬೃಹತ್ ಜಾಥಾದಲ್ಲಿ ಪಾಲ್ಗೊಂಡಿದ್ದರು.  ದಲಿತ ಸ್ವಾಭಿಮಾನದ ಸಂಕೇತವಾದ ನೀಲಿ ಬಾವುಟ ಹಿಡಿದು ಸಾಗಿದ ಪರಿಣಾಮ ಇಡೀ ನಗರ ನೀಲಿಮಯವಾಗಿತ್ತು. ಅಪಾರ ಸಂಖ್ಯೆಯಲ್ಲಿ ಮುಸ್ಲಿಮರು ಹಾಗೂ ಕ್ರಿಶ್ಚಿಯನ್ನರು ಇದ್ದರು.

***
ಜೈಲಿಗೆ ಹೋಗಲು  ಸಿದ್ಧನಾಗಿ ಬರುತ್ತೇನೆ!

ತಮ್ಮ ಭಾಷಣವನ್ನು ಕೇವಲ ಗುಜರಾತ್‌ ಸರ್ಕಾರ ಮತ್ತು ಕೇಂದ್ರ ಸರ್ಕಾರವನ್ನು ಟೀಕಿಸಲು ಮಾತ್ರ ಸೀಮಿತಗೊಳಿಸದ ಜಿಗ್ನೇಶ್‌ ಮೇವಾನಿ, ಕರ್ನಾಟಕ ಸರ್ಕಾರವನ್ನೂ ಸರಿಯಾಗಿಯೇ ತಡವಿದರು.  ದಲಿತರು, ಹಿಂದುಳಿದವರು ಹಾಗೂ ಆದಿವಾಸಿಗಳಿಗೆ ಎಷ್ಟು ಭೂಮಿ ಮಂಜೂರು ಮಾಡಲಾಗಿದೆ ಎಂದು ಕರ್ನಾಟಕ ಸರ್ಕಾರ ಶ್ವೇತ ಪತ್ರ ಹೊರಡಿಸಬೇಕು ಎಂದು ಆಗ್ರಹಿಸಿದರು.

‘10 ಲಕ್ಷ ಎಕರೆ ಬಗರ್ ಹುಕುಂ ಜಮೀನು ಈ ವರೆಗೂ ಫಲಾನುಭವಿಗಳಿಗೆ ಹಂಚಿಕೆಯಾಗಿಲ್ಲ. ಅಲ್ಲದೆ, ಉಡುಪಿ ಶ್ರೀಕೃಷ್ಣ ಮಠದಲ್ಲಿ ಪಂಕ್ತಿಭೇದ ಸಹ ನಡೆಯತ್ತಿದೆ ಎಂದು ಗೊತ್ತಾಗಿದೆ. ಈ ಎರಡು ವಿಷಯಗಳನ್ನು ಇಟ್ಟುಕೊಂಡು ಇನ್ನು ಎರಡು ತಿಂಗಳ ಒಳಗೆ ಹೋರಾಟ ರೂಪಿಸಿ ದಿನಾಂಕ ನಿಗದಿಪಡಿಸಿ. ಜೈಲಿಗೆ ಹೋಗಲು ಸಿದ್ಧನಾಗಿಯೇ ನಾನು ಹೋರಾಟಕ್ಕೆ ಇಳಿಯುತ್ತೇನೆ, ಶ್ರೀಕೃಷ್ಣ ಮಠವನ್ನು ಸಹ ಪ್ರವೇಶಿಸುತ್ತೇನೆ ’ ಎಂದು ಅವರು ಎಚ್ಚರಿಕೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT