ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉದ್ಯೋಗಿ ಸ್ನೇಹಿ ‘ಝೀಟಾ’ ಆ್ಯಪ್‌

Last Updated 11 ಅಕ್ಟೋಬರ್ 2016, 19:30 IST
ಅಕ್ಷರ ಗಾತ್ರ

ಜಗತ್ತು ಡಿಜಿಟಲೀಕರಣದತ್ತ ದಾಪುಗಾಲಿಟ್ಟಿದೆ. ಆನ್‌ಲೈನ್‌ಲ್ಲಿಯೇ ದಾಖಲೆಪತ್ರಗಳ ಸೃಷ್ಟಿ ಮತ್ತು ಅದಕ್ಕೆ ಅಧಿಕೃತ ಹಸ್ತಾಕ್ಷರ (ಇ–ಸೈನ್‌) ಮಾಡುವ ವ್ಯವಸ್ಥೆ ನಿಧಾನಗತಿಯಲ್ಲಿ ಜಾರಿಗೆ ಬರುತ್ತಿದೆ. ಸ್ಮಾರ್ಟ್‌ಫೋನ್‌ಗಳಿಂದ ಡಿಜಿಟಲ್‌ ವ್ಯವಸ್ಥೆ ಸುಲಭವಾಗಿ ಎಲ್ಲರಿಗೂ ಎಟುಕುವಂತಾಗಿದೆ.

ಮೊಬೈಲ್‌ ಮತ್ತು ಡಿಜಿಟಲ್‌ ಪೇಮೆಂಟ್ಸ್‌ಗೆ ಸಂಬಂಧಿಸಿದ ಸ್ಟಾರ್ಟ್‌ಅಪ್‌ ಕಂಪೆನಿಯಾಗಿರುವ  ಝೀಟಾ, ಉದ್ಯೋಗಿಗಳಿಗೆ ತೆರಿಗೆ ಲಾಭಗಳನ್ನು ಪಡೆದುಕೊಳ್ಳಲು ಅನುಕೂಲವಾಗುವಂತಹ  ಮೂರು ಹೊಸ ಸೇವೆಗಳನ್ನು ಪರಿಚಯಿಸಿದೆ. ಗೂಗಲ್‌ ಪ್ಲೇಸ್ಟೋರ್‌ನಿಂದ ಈ ಆ್ಯಪ್‌ ಉಚಿತವಾಗಿ ಡೌನ್‌ಲೋಡ್‌ ಮಾಡಿಕೊಳ್ಳಬಹುದು.

ಕಂಪೆನಿ ಮತ್ತು ಉದ್ಯೋಗಿಗಳ ನಡುವೆ ಏರ್ಪಟ್ಟ ಒಪ್ಪಂದದಂತೆ, ಕಂಪೆನಿಯು ಒಬ್ಬ ಉದ್ಯೋಗಿಗೆ ಒಂದಷ್ಟು ಮರುಪಾವತಿ ಮೊತ್ತವನ್ನು  (Reimbursement Amount) ಮೀಸಲಿಟ್ಟು, ಅದನ್ನು ವಿವಿಧ ರೀತಿಯ ಸೇವೆಗಳಿಗೆ ಹಂಚಿಕೆ ಮಾಡುತ್ತದೆ. ಆ ಮೊತ್ತವನ್ನು ಆ ನಿರ್ದಿಷ್ಟ ಸೇವೆಗೆ ಬಳಸಿಕೊಂಡಿದ್ದಕ್ಕೆ ಉದ್ಯೋಗಿಯು ಸೂಕ್ತ ದಾಖಲೆಗಳನ್ನು ಸಲ್ಲಿಸಿದರೆ ತಿಂಗಳ  ವೇತನದಲ್ಲಿ ಆ ಮೊತ್ತವನ್ನು ಮರಳಿ ಪಡೆಯಬಹುದು. ಇದಕ್ಕೆ ತೆರಿಗೆ ವಿನಾಯ್ತಿ ಯೂ ಸಿಗುತ್ತದೆ.

‘ಸದ್ಯಕ್ಕೆ ದೇಶದಲ್ಲಿ ಕಾಗದ, ಕಡತದ ರೂಪದಲ್ಲಿಯೇ ಈ ಸೇವೆಗಳ ನಿರ್ವಹಣೆ ಮತ್ತು ಮರುಪಾವತಿ ವ್ಯವಸ್ಥೆ ನಡೆಯುತ್ತಿದೆ. ಪ್ರತಿ ಬಾರಿಯೂ ತಾವು ಮಾಡಿದ ಖರ್ಚಿನ ರಸೀತಿ/ದಾಖಲೆ ಪಡೆಯಲು ಅಥವಾ ಅದನ್ನು ಜೋಪಾನ ಮಾಡುವುದು ರಗಳೆ ಎನ್ನುವ ಕಾರಣಕ್ಕೆ ಉದ್ಯೋಗಿಗಳು ಇಂತಹ ಸೇವೆಗಳನ್ನು ಬಳಸಿಕೊಳ್ಳದೇ ತೆರಿಗೆ ಲಾಭದಿಂದ ವಂಚಿತರಾಗುತ್ತಿದ್ದಾರೆ. ಈ ಸಮಸ್ಯೆ ನಿವಾರಿಸಲು ಈ ಆ್ಯಪ್‌ ನೆರವಿಗೆ ಬರುತ್ತದೆ’ಎಂದು ಝೀಟಾ ಕಂಪೆನಿಯ ಸಹ ಸ್ಥಾಪಕ ಭವಿನ್‌ ತುರಖಿಯಾ ಹೇಳುತ್ತಾರೆ.

‘ಆರ್‌ಬಿಐ ನಿಯಮ, ತೆರಿಗೆ ನೀತಿಗೆ ಅನುಗುಣವಾಗಿಯೇ ಇದನ್ನು ಅಭಿವೃದ್ಧಿಪಡಿಸಲಾಗಿದೆ. ಉದ್ಯೋಗಿಯ ಮಾಹಿತಿಯ ಸುರಕ್ಷತೆಗೆ ಹೆಚ್ಚಿನ ಗಮನ ನೀಡಲಾಗಿದೆ’ ಎನ್ನುತ್ತಾರೆ ಅವರು.

ಸೂಪರ್‌ ಕಾರ್ಡ್‌: ಪ್ರತಿಯೊಂದು ಸೇವೆಗೂ ಪ್ರತ್ಯೇಕವಾದ ಕೂಪನ್‌/ಕಾರ್ಡ್‌ ಬಳಸುವ ಅಗತ್ಯವಿಲ್ಲ. ಝೀಟಾ ಕಂಪೆನಿ ನೀಡುವ ಸೂಪರ್‌ ಕಾರ್ಡ್‌ ಎಲ್ಲಾ ಸೇವೆಗಳಿಗೂ ಬಳಸಬಹುದು. ಉದಾಹರಣೆಗೆ ಬಳಕೆದಾರ ಕಾರ್ಡ್‌ ಅನ್ನು ವೈದ್ಯಕೀಯ ವೆಚ್ಚಕ್ಕೆ ಬಳಸಿದರೆ ಕೆಲಸ ಮಾಡುತ್ತಿರುವ ಕಂಪೆನಿ ನೀಡಿರುವ ವೈದ್ಯಕೀಯ ವೆಚ್ಚದ ಮೊತ್ತದಿಂದ ಆ ಹಣ ಕಡಿತವಾಗುತ್ತದೆ.

ಹೀಗೆ ಪ್ರತಿಯೊಂದು ನಿರ್ದಿಷ್ಟ ಸೇವೆ ಬಳಸಿದಾಗಲೂ ಅದಕ್ಕೆ ಮೀಸಲಿಟ್ಟ ಹಣವೇ ಕಡಿತವಾಗುವಂತೆ ವ್ಯವಸ್ಥೆ ಮಾಡಲಾಗಿದೆ. ರಸೀತಿಯನ್ನು ಮೊಬೈಲ್‌ನಲ್ಲಿಯೇ ಫೋಟೊ ತೆಗೆದು ಕಳುಹಿಸಬಹುದು. ಝೀಟಾ ತಂಡ ಅದನ್ನು ಪರಿಶೀಲನೆ ನಡೆಸಿ ಹಣ ಕಡಿತ ಆಗಿರುವ ಮಾಹಿತಿಯನ್ನು ಮೊಬೈಲ್‌ ಸಂಖ್ಯೆ ಮತ್ತು ಇ–ಮೇಲ್‌ಗೆ ರವಾನಿಸುತ್ತದೆ’  ಎನ್ನುತ್ತಾರೆ ಅವರು.

ಮೊದಲಿಗೆ ಕಂಪೆನಿಯ ಮಾನವ ಸಂಪನ್ಮೂಲ ವಿಭಾಗವು (ಎಚ್‌ಆರ್‌) ಈ ಆ್ಯಪ್‌ನಲ್ಲಿ ಉದ್ಯೋಗಿಗೆ ನೀಡಬೇಕಿರುವ ಮರುಪಾವತಿ ಮೊತ್ತವನ್ನು ದಾಖಲಿಸಬೇಕು. ಉದ್ಯೋಗಿಗಳು ಸೂಪರ್‌ ಕಾರ್ಡ್‌ ಬಳಸಿ ಸುಲಭವಾಗಿ ಸೇವೆಗಳನ್ನು ಬಳಸಿಕೊಂಡು, ತೆರಿಗೆ ಲಾಭ ಪಡೆದುಕೊಳ್ಳಬಹುದು.

ಫ್ಯುಯೆಲ್‌ ಆ್ಯಂಡ್‌ ಟ್ರಾವೆಲ್‌ ಕಾರ್ಡ್‌: ಚಾಲಕನ ವೇತನ, ವಾಹನ ವಿಮೆ, ಬಾಡಿಗೆಗೆ ಕಾರು ಬಳಸಿದರೆ, ಹೀಗೆ ಕಚೇರಿ ಕೆಲಸಕ್ಕೆ ಸಂಬಂಧಿಸಿದಂತೆ ಪ್ರಯಾ ಣ ಮಾಡಿರುವ ಎಲ್ಲಾ ರೀತಿಯ ವೆಚ್ಚಗಳಿಗೆ ಇದನ್ನು ಬಳಸಬಹುದು.

ಕಮ್ಯುನಿಕೇಷನ್ಸ್‌ ಕಾರ್ಡ್‌: ಮೊಬೈಲ್‌/ದೂರವಾಣಿ/ಡೇಟಾ ಕಾರ್ಡ್‌/ಇಂಟರ್‌ನೆಟ್‌ ಬಳಸಿದರೆ ಅದಕ್ಕೆ ಸಂಬಂಧಿಸಿದ ಖರ್ಚಿನ ಹಣ ಮರುಪಾವತಿ ಪಡೆಯಲು ಇದು ನೆರವಿಗೆ ಬರುತ್ತದೆ.

ಬುಕ್‌ ಆ್ಯಂಡ್‌ ಪಿರಿಯಾಡಿಕಲ್ಸ್‌ ಕಾರ್ಡ್‌: ಓದು ಅಥವಾ ಕಚೇರಿ ಬಳಕೆಗೆ ಖರೀದಿಸುವ ಪುಸ್ತಕ  ಅಥವಾ ನಿಯತಕಾಲಿಕೆಗಳಿಗಾಗಿ ಮಾಡಿದ ವೆಚ್ಚವನ್ನು ಮರಳಿ ಪಡೆಯಲು ಇದನ್ನು ಬಳಸಬಹುದು. ಹೀಗೆ ಈ ಮೂರು ಕಾರ್ಡ್‌ಗಳನ್ನು ಬಳಸುವುದರಿಂದ ಕ್ರಮವಾಗಿ ₹6,480, ₹25,200 ಮತ್ತು ₹12,600ರಷ್ಟು  ಉಳಿತಾಯ ಮಾಡಬಹುದು. ಒಟ್ಟಾರೆ ಒಂದು ವರ್ಷಕ್ಕೆ ₹80 ಸಾವಿರದಷ್ಟು ಉಳಿಸಬಹುದು ಎಂದು ಝೀಟಾ ಕಂಪೆನಿ ತಿಳಿಸಿದೆ.

ಇತರೆ ಸೇವೆಗಳು: ಮೀಲ್‌ ಓಚರ್‌, ಮೆಡಿಕಲ್‌ ರೀ ಇಂಬರ್ಸ್‌ಮೆಂಟ್‌, ಗ್ಯಾಜೆಟ್‌  ಕಾರ್ಡ್‌ ಮತ್ತು ಗಿಫ್ಟ್‌ ಕಾರ್ಡ್‌.                                                        

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT