ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಎಜುಕೇಷನಲ್ ಸ್ಟ್ರೈಕ್’

Last Updated 15 ಫೆಬ್ರುವರಿ 2017, 19:30 IST
ಅಕ್ಷರ ಗಾತ್ರ

ಶಾಲೆ ಮಕ್ಕಳು ಸಿಕ್ಕರೆ ಸಾಕು, ಅವರಿಗೆ ಅವರ ಶಿಕ್ಷಣಕ್ಕೆ ಸಂಬಂಧಿಸಿದ ಪ್ರಶ್ನೆಗಳನ್ನು ಕೇಳುವುದು ನನಗೆ ಮುಂಚಿನಿಂದಲೂ ರೂಢಿ. ಈ ಪ್ರಶ್ನಾವಳಿಯೊಳಗೆ ಕಪ್ಪೆ ಕರಕರ ಪದ್ಯ, ಅಪವರ್ತಿಸುವಿಕೆ, ಲಂಭಕೋನ ಪ್ರಮೇಯ, ಭಾರತದ ಸ್ವಾತಂತ್ರ್ಯ ಸಂಗ್ರಾಮ, ದ್ಯುತಿಸಂಶ್ಲೇಷಣೆ, ಸಾಮಾನ್ಯ ಜ್ಞಾನ ಹೀಗೆ ಇನ್ನೂ ಹಲವಾರು ಸಂಗತಿಗಳು ಆಗಾಗ್ಗೆ ಹಾದು ಹೋಗುತ್ತಿರುತ್ತವೆ.

ಒಬ್ಬನೇ ಬಸ್ಸಿನೊಳಗೆ ಪ್ರಯಾಣಿಸುವಾಗ ಬೇಸರವನ್ನು ಹತ್ತಿಕ್ಕುವ ಸಲುವಾಗಿ ಯಾರಾದರೂ ಶಾಲಾ ವಿದ್ಯಾರ್ಥಿಗಳು ಸಿಕ್ಕರೆ ಸಾಕು ಎಂದು ನನ್ನ ಮನಸ್ಸು ಯಾವಾಗಲೂ ತುಡಿಯುತ್ತಿರುತ್ತದೆ. ಒಮ್ಮೊಮ್ಮೆ ಅವರ ಪೋಷಕರ ಮುಂದೆಯೇ ವಿದ್ಯಾರ್ಥಿಗಳಿಗೆ ಪ್ರಶ್ನೆಗಳನ್ನು ಕೇಳಿ ಅವರನ್ನು ತಬ್ಬಿಬ್ಬು ಮಾಡಿ ಮಜಾ ತೆಗೆದುಕೊಳ್ಳುವುದು ನನಗೆ ಖುಷಿ ಕೊಡುವ  ವಿಚಾರ.

ಇಷ್ಟೆಲ್ಲಾ ಪೀಠಿಕೆಯನ್ನು ಏಕೆ ಹೇಳುತ್ತಿದ್ದೇನೆಂದರೆ, ಹೀಗೆ ಒಂದು ಸಲ ಬೆಂಗಳೂರಿನಲ್ಲಿ ಬಸ್ಸಿನಲ್ಲಿ ಸಂಚರಿಸಬೇಕಾದರೆ ನನ್ನ ಪಕ್ಕ ಕುಳಿತಿದ್ದ ಓರ್ವ ಇಂಗ್ಲಿಷ್ ಮೀಡಿಯಂನ ಹುಡುಗನೊಬ್ಬ ತನ್ನ ಪುಸ್ತಕವನ್ನು ತೆರೆದುಕೊಂಡು ಏನನ್ನೋ ಓದಿಕೊಳ್ಳುತ್ತಿದ್ದ. ನಾನು ನನ್ನ ರೂಢಿಯಂತೆ ಅವನ ಜೊತೆ ಮಾತಾರಂಭಿಸಿ ಪಠ್ಯಕ್ಕೆ ಸಂಬಂಧಿಸಿದ ಒಂದಷ್ಟು ಪ್ರಶ್ನೆಗಳನ್ನು ಕೇಳಿ ಅವನು ನೀಡಿದ ಉತ್ತರಗಳಿಂದ ಖುಷಿಯಾಗಿ, ಸಾಮಾನ್ಯ ಜ್ಞಾನದ ಒಂದೆರಡು ಪ್ರಶ್ನೆಗಳನ್ನು ಕೇಳುವ ಉತ್ಸಾಹದಿಂದ ಪ್ರಶ್ನೆ ಕೇಳಿದೆ. ನಾನು ಕೇಳಿದ ಪ್ರಶ್ನೆಯು ಅತ್ಯಂತ ಸರಳವಾಗಿಯೇ ಇತ್ತು. ಆದರೆ ಅವನು ಅದಕ್ಕೆ ನೀಡಿದ ಉತ್ತರ ಮಾತ್ರ ಈಗಿನ ಕಾಲದ ಎಲ್ಲಾ ವಿದ್ಯಾರ್ಥಿಗಳ ಒಮ್ಮತದಂತೆ ನನಗೆ ಕಂಡು ಬಂತು.

ನಾನು ಕೇಳಿದ ಅತೀ ಕಷ್ಟದ ಪ್ರಶ್ನೆ ಏನೆಂದರೆ- ನಾವು ದಿನವೂ ಕುಡಿಯುವ ಹಾಲು ಎಲ್ಲಿಂದ ಬರುತ್ತೆ? ಇಷ್ಟೇ. ಅದಕ್ಕೆ ಅವನು ನೀಡಿದ ಉತ್ತರ- ಹಾಲಿನ ಪ್ಯಾಕೆಟ್ಟಿಂದ ಬರುತ್ತೆ ಅಂತ. ನಿಜಕ್ಕೂ ನಾನು ಇಂತಹ ಅನಿರೀಕ್ಷಿತ ಉತ್ತರ ಕೇಳಿ ದಿಗ್ಭ್ರಾಂತನಾದೆ. ಆಮೇಲೆ ಸ್ವಲ್ಪ ಸಾವಧಾನವಾಗಿ ಯೋಚಿಸತೊಡಗಿದೆ. ಪಾಪ ಅವನದೇನೂ ತಪ್ಪಿಲ್ಲ ಎಂಬುದು ಗೋಚರವಾಯಿತು. ಇಂತಹ ಪರಿಸ್ಥಿತಿಗೆ ವಿದ್ಯಾರ್ಥಿಗಳಿಗಿಂತ ನಮ್ಮ ಸೋ ಕಾಲ್ಡ್ ಶಿಕ್ಷಣ ವ್ಯವಸ್ಥೆಯೆಂಬುದು ಮನವರಿಕೆಯಾಯಿತು.

ಈಗಿನ ಪಠ್ಯಕ್ರಮದಲ್ಲಿ ಎಷ್ಟರ ಮಟ್ಟಿಗೆ ಹಳ್ಳಿ, ಕೃಷಿ, ದನ, ಕರು ಪಶುಸಂಗೋಪನೆಯ ಬಗ್ಗೆ ನಾವು ಮಕ್ಕಳಿಗೆ ಹೇಳಿಕೊಡುತ್ತಿದ್ದೇವೆ ಎಂಬುದನ್ನು ಕೂಲಂಕಷವಾಗಿ ನೋಡಬೇಕು. ಈಗೇನಿದ್ದರೂ ನಮ್ಮವರಿಗೆ ನಮ್ಮ ಹಿತ್ತಲಗಿಡದ ಹೂವಿಗಿಂತ, ಕೆನಡಾದ ಲಿಲ್ಲಿ ಹೂವಿನ ಕುರಿತು ಅರಿಯುವುದು ಬಹಳ ಜರೂರಿಯಾಗಿಬಿಟ್ಟಿದೆ.

ನಾವು ಶಾಲೆಯನ್ನು ಕಲಿಯುತ್ತಿದ್ದಾಗಿದ್ದ ‘ನನ್ನಯ ಮುದ್ದಿನ ಅಕಳ ಕರುವು’, ‘ಪುಣ್ಯಕೋಟಿ’ ಮುಂತಾದ ಪದ್ಯಗಳು, ಹೈಸ್ಕೂಲಿನಲ್ಲಿ ಓದುವಾಗ ಎಚ್.ಜೆ ಲಕ್ಕಪ್ಪ ಗೌಡರ ಹಸುವಿನ ತ್ಯಾಗದ ಕುರಿತಾದ ಕರುಣಾಜನಕ ಕತೆಯಾದ ‘ತ್ಯಾಗಮಯೀ’ ಹೀಗೆ ಇನ್ನೂ ಮುಂತಾದ ನಮ್ಮ ಬಾಲ್ಯವನ್ನು ರೂಪಿಸಿದ ಬರಹಗಳೆಲ್ಲವೂ ಇಂದು ಎಲ್ಲೋ ವನವಾಸ ಹೋದ ಹಾಗೆ ಕಾಣುತ್ತಿದೆ.

ಆದರೆ ಈವತ್ತಿನ ಪುಸ್ತಕಗಳಲ್ಲಿ ಎಷ್ಟರ ಮಟ್ಟಿಗೆ ನಮ್ಮ ಅವಿಭಾಜ್ಯ ಅಂಗವಾದ ಕೃಷಿ ಮತ್ತು ಅದರ ಉಪಕಸುಬುಗಳ ಬಗ್ಗೆ ತಿಳಿಸಿಕೊಡಲಾಗುತ್ತಿದೆ ಎಂಬುದೇ ನನ್ನ ಯಕ್ಷಪ್ರಶ್ನೆ. (ಸಂಕ್ರಾಂತಿ ಸುಖ ದುಖಃ- ಲೇ. ಎ. ಆರ್. ಮಣಿಕಾಂತ್,  ಏಳನೇ ತರಗತಿ ಪುಸ್ತಕ ಇದನ್ನು ಹೊರತುಪಡಿಸಿ).

ಇಂತಹ ಗಳಿಗೆಯಲ್ಲೇ ನಮ್ಮ ಗ್ರಾಮೀಣ ಹಬ್ಬಗಳಾದ ಕಂಬಳ, ಸಂಕ್ರಾಂತಿ, ಎಳ್ಳು ಅಮವಾಸ್ಯೆಯಂತಹ ಕೃಷಿ, ರಾಸು ಸಂಬಂಧಿ ಹಬ್ಬಗಳು ಆಕರ್ಷಣೆಯನ್ನು ಕಳೆದುಕೊಳ್ಳುತ್ತಿವೆ. ಎಲ್ಲವನ್ನೂ ಗೂಗಲ್ಲಿನಿಂದ ಗಿಟ್ಟಿಸಿಕೊಳ್ಳಲಾಗುವುದಿಲ್ಲ ಎಂಬ ಸತ್ಯ ಗೊತ್ತಿದ್ದರೂ ನಾವಿನ್ನೂ ತಂತ್ರಜ್ಞಾನದ ಸುತ್ತಲೇ ಗಿರಕಿ ಹೊಡಿಯುತ್ತಿರುವುದು ದೊಡ್ಡ ಜೋಕಿನಂತೆ ಕಾಣುತ್ತದೆ ನನಗೆ.

ಹಾಗಾಗಿ ಮತ್ತೆ ಇದೆಲ್ಲವನ್ನೂ ಮರಳಿ ಪಡೆದುಕೊಳ್ಳಬೇಕಾದರೆ ಮಕ್ಕಳ ಮನಸ್ಸಿನಲ್ಲಿ ಕೃಷಿ, ಪಶುಸಂಗೋಪನೆಯ ಕುರಿತಾಗಿ ತಿಳಿವಳಿಕೆಯನ್ನು ಮೂಡಿಸಬೇಕಾಗಿದೆ. ಪಠ್ಯದಲ್ಲಿ ಅಧಿಕವಾಗಿ ಇಂತಹ ಅನಿವಾರ್ಯವಾದ ಪಾಠಗಳನ್ನು ಸೇರಿಸಿ, ಕೊಠಡಿಯಿಂದಾಚೆಗಿನ ಪಾಠವನ್ನು ತಿಳಿಹೇಳುವ ‘ಎಜುಕೇಷನಲ್ ಸ್ಟ್ರೈಕ್’ ಮಾಡುವ ಮುಖೇನ ನಶಿಸಿ ಹೋಗುತ್ತಿರುವ ಗ್ರಾಮೀಣ ಸೊಗಡನ್ನು ಕಾಪಾಡಿಕೊಳ್ಳುವುದು ನಮ್ಮ ಹಕ್ಕಾಗಿದೆ.

‘ರೈತ ಈ ದೇಶದ ಬೆನ್ನೆಲುಬು’ ಇಂಥದೇ ಹಳಸಿದ ಮಾತನ್ನು ಕೇಳಿ ಕೇಳಿ ಬೇಜಾರಾಗಿರುವ ಜನಾಂಗಕ್ಕೆ ನಿಜವಾಗಿಯೂ ರೈತರ ಕಷ್ಟಕಾರ್ಪಣ್ಯ, ಅವರ ಮನಃಸ್ಥಿತಿ, ಈವತ್ತಿನ ಕೃಷಿಯ ಸಾಧಕ ಭಾದಕಗಳ ಬಗ್ಗೆ ತಿಳಿಸಿ, ಯುವಜನತೆಯನ್ನು ಕೃಷಿಯತ್ತ ಸೆಳೆಯದೇ ಹೋದರೆ ಮುಂದೊಂದು ದಿವಸ ನಮ್ಮ ಮುಂದಿನ ತಲೆಮಾರು ಹೊಲ, ಹಸು, ಕರು, ಕೋಳಿ, ರಾಗಿ ಕಣ, ಬಣವೆಯನ್ನು ಬರೀ ಗೂಗಲ್ ಇಮೇಜಿನಿಂದ ಡೌನ್ ಲೋಡ್ ಮಾಡಿಕೊಂಡು ನೋಡಿ ಅಚ್ಚರಿ ಪಡುವ ದಿನಗಳೇನು ದೂರವಿರುವುದಿಲ್ಲ.
-ಮಹೇಂದ್ರ ಎಸ್ ತೆಲಗರಹಳ್ಳಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT