ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಯಸ್ಕ ಪುರುಷ ಪದಗಳನ್ನು ತೆಗೆದಾಗ...

ಕೌಟುಂಬಿಕ ದೌರ್ಜನ್ಯ ತಡೆ ಕಾಯ್ದೆ
Last Updated 15 ಅಕ್ಟೋಬರ್ 2016, 5:36 IST
ಅಕ್ಷರ ಗಾತ್ರ

2008ರ ಸಮಯ. ‘ಸರಿತಾ ವರ್ಸಸ್ ಉಮ್ರಾವ್’ ಪ್ರಕರಣದ ವಿಚಾರಣೆ ರಾಜಸ್ತಾನ ಹೈಕೋರ್ಟ್‌ ನಲ್ಲಿ ನಡೆಯುತ್ತಿತ್ತು. ಕೌಟುಂಬಿಕ ದೌರ್ಜನ್ಯ ತಡೆ (ಡಿ.ವಿ) ಕಾಯ್ದೆಯ ಅಡಿ ದಾಖಲಾದ ಈ ಪ್ರಕರಣ ಅಲ್ಲಿ ಬಿಸಿಬಿಸಿ ಚರ್ಚೆಗೆ ಗ್ರಾಸವಾಗಿತ್ತು. ಇದಕ್ಕೆ ಕಾರಣ ಈ ಕಾಯ್ದೆಯ 2(ಕ್ಯೂ) ಕಲಮು, ಅದರಲ್ಲಿದ್ದ ಅಸ್ಪಷ್ಟತೆ.

ಮಹಿಳೆಯೊಬ್ಬಳು ಇನ್ನೊಬ್ಬ ಮಹಿಳೆಯ ಮೇಲೆ ಕೌಟುಂಬಿಕ ದೌರ್ಜನ್ಯ ಪ್ರಕರಣವನ್ನು ಡಿ.ವಿ ಕಾಯ್ದೆಯ ಅಡಿ ದಾಖಲು ಮಾಡಬಹುದೋ ಇಲ್ಲವೋ ಎಂಬುದನ್ನು ಈ ಕಲಮಿನ ಅಡಿ ಸ್ಪಷ್ಟವಾಗಿ ಹೇಳಿಲ್ಲ ಎಂದು ನ್ಯಾಯಮೂರ್ತಿಗಳು ಅಭಿಪ್ರಾಯಪಟ್ಟಿದ್ದರಿಂದ ಗೊಂದಲದ ವಾತಾವರಣ ಏರ್ಪಟ್ಟಿತ್ತು. ಅಷ್ಟಕ್ಕೂ ಈ ಗೊಂದಲಕ್ಕೆ ಕಾರಣ ಏನೆಂದರೆ,  ‘ಯಾವುದೇ ಮಹಿಳೆ ತನ್ನ ಗಂಡ ಹಾಗೂ ಆತನ ಸಂಬಂಧಿಕರ ಅಥವಾ ಪುರುಷ ಸದಸ್ಯರ ವಿರುದ್ಧ ಡಿ.ವಿ ಕಾಯ್ದೆಯ ಅಡಿ ದೂರು ದಾಖಲು ಮಾಡಬಹುದು’ ಎಂದು 2(ಕ್ಯೂ) ಕಲಮು ಹೇಳುತ್ತಿತ್ತು. ಇಲ್ಲಿರುವ ‘ಸಂಬಂಧಿಕರ’ ಶಬ್ದದ ಹಿಂದೆ ‘ಪುರುಷ ಸಂಬಂಧಿಕರು’ ಎಂದು ಉಲ್ಲೇಖ ಇಲ್ಲದಿದ್ದ ಕಾರಣ, ಅದರಲ್ಲಿ ಮಹಿಳಾ ಸಂಬಂಧಿಗಳೂ ಬರಬಹುದು ಎನ್ನುವುದು ಹೈಕೋರ್ಟ್‌ನ ಅನಿಸಿಕೆಯಾಗಿತ್ತು.

ನಂತರ ‘ನಂದಕಿಶೋರ್ ವರ್ಸಸ್ ಸ್ಟೇಟ್ ಆಫ್ ರಾಜಸ್ತಾನ’ ಪ್ರಕರಣದಲ್ಲಿ ಕೂಡ ಕೋರ್ಟ್ ಇದೇ ಅಭಿಪ್ರಾಯ ವ್ಯಕ್ತಪಡಿಸಿ, ಮಹಿಳೆ ಸಹ ಈ ಕಾಯ್ದೆಯ ವ್ಯಾಪ್ತಿಗೆ ಒಳಪಡುತ್ತಾಳೆ. ಆದ್ದರಿಂದ ಅವಳ ವಿರುದ್ಧವೂ ದೂರು ದಾಖಲು ಮಾಡಬಹುದು ಎಂದು ಸ್ಪಷ್ಟ ನಿಲುವು ತಳೆದಿತ್ತು. 2009ರಲ್ಲಿ ಆಂಧ್ರ ಪ್ರದೇಶ ಹೈಕೋರ್ಟ್ ಕೂಡ ಪ್ರಕರಣವೊಂದರಲ್ಲಿ ಇದೇ ರೀತಿಯ ಅಭಿಪ್ರಾಯಪಟ್ಟಿತ್ತು. ಆದರೆ ಮಧ್ಯಪ್ರದೇಶ ಹಾಗೂ ಮದ್ರಾಸ್ ಹೈಕೋರ್ಟ್‌್‌ಗಳಲ್ಲಿ ಮಹಿಳೆಯರ ವಿರುದ್ಧ ಡಿ.ವಿ ಕಾಯ್ದೆ ಅಡಿ ದಾಖಲಾದ ಪ್ರಕರಣಗಳ ವಿಚಾರಣೆ ವೇಳೆ ನ್ಯಾಯಮೂರ್ತಿಗಳು, ‘ಸಂಬಂಧಿಕರು’ ಎಂದರೆ  ‘ಪುರುಷ ಸಂಬಂಧಿಕರು ಮಾತ್ರ’ ಎಂದು ಹೇಳಿದ್ದರು. ಹೀಗೆ ಒಂದೊಂದು ಹೈಕೋರ್ಟ್‌ ಒಂದೊಂದು ತೆರನಾದ ನಿಲುವು ತಳೆದಿತ್ತೇ ವಿನಾ ಈ ಕಲಮಿನ ಬಗ್ಗೆ ಸುಪ್ರೀಂ ಕೋರ್ಟಿನಲ್ಲಿ ಚರ್ಚೆ ಆಗಿರಲಿಲ್ಲ.

ಆದರೆ ಈಗ ಸುಪ್ರೀಂ ಕೋರ್ಟ್, ‘ಹಿರಾಲ್ ಪಿ.ಹರ್ಸೋರಾ ವರ್ಸಸ್ ಕುಸುಮ್ ನರೋತ್ತಮದಾಸ್ ಹರ್ಸೋರಾ’ ಪ್ರಕರಣದಲ್ಲಿ 2(ಕ್ಯೂ) ಕಲಮಿನ ಬಗ್ಗೆ ಇದ್ದ ಗೊಂದಲಕ್ಕೆ ತೆರೆ ಎಳೆದಿದೆ. ಈ ಕಲಮಿನ ‘ವಯಸ್ಕ ಪುರುಷ’ ಪದಗಳು ಸಂವಿಧಾನದ 14ನೇ ವಿಧಿಯ (ಸಮಾನತೆ) ಆಶಯಗಳಿಗೆ ಪೂರಕವಾಗಿಲ್ಲ ಎನ್ನುವ ಮೂಲಕ ಅವುಗಳನ್ನು ತೆಗೆದು  ಹಾಕುವಂತೆ ಹೇಳಿದೆ. ಈ ಮೂಲಕ ಕೌಟುಂಬಿಕ ದೌರ್ಜನ್ಯ ತಡೆ ಕಾಯ್ದೆಯ ಅಡಿ ಮಹಿಳೆಯೊಬ್ಬಳು ಮಹಿಳೆಯ ವಿರುದ್ಧವೂ ಪ್ರಕರಣ ದಾಖಲು ಮಾಡಲು ಕೋರ್ಟ್ ಅನುಮತಿ ನೀಡಿದೆ. ಇದೇ ವೇಳೆ, ಕುಟುಂಬದ ಸದಸ್ಯರಾಗಿರುವ ಬಾಲಕ–ಬಾಲಕಿಯರ ವಿರುದ್ಧವೂ ಮೊಕದ್ದಮೆ ದಾಖಲಿಸಲು ಕೋರ್ಟ್‌ ಅನುಮತಿ ನೀಡಿದಂತಾಗಿದೆ.

ಹಾಗೆಂದು ಇಲ್ಲಿಯವರೆಗೆ ಡಿ.ವಿ ಕಾಯ್ದೆಯ ಅಡಿ ಪುರುಷರ ಜೊತೆ ಮಹಿಳೆಯರ ವಿರುದ್ಧವೂ ಪ್ರಕರಣ ದಾಖಲಾಗಲಿಲ್ಲ ಎಂದೇನೂ ಅರ್ಥವಲ್ಲ. ಅವರ ವಿರುದ್ಧವೂ ಕೇಸನ್ನು ದಾಖಲಿಸಿರುವ ಅನೇಕ ಪ್ರಕರಣಗಳಿವೆ. ಆದರೆ 2(ಕ್ಯೂ) ಕಲಮಿನಿಂದಾಗಿ ಹೆಚ್ಚಿನ ಪ್ರಕರಣಗಳಲ್ಲಿ  ಮಹಿಳೆಯರ ವಿರುದ್ಧದ ಮೊಕದ್ದಮೆಯನ್ನು ಕೈಬಿಡಲಾಗುತ್ತಿತ್ತು. ಆದರೆ ಈಗ ಕಾಯ್ದೆ ವಿಸ್ತೃತಗೊಂಡಿದೆ. ಮಹಿಳಾ ಸಬಲೀಕರಣದ ಸಾಕಾರಕ್ಕೆ ನೀಡಲಾಗಿದ್ದ ಕಾನೂನಿನ ಅಸ್ತ್ರವೆಂದೇ ಬಿಂಬಿತಗೊಂಡಿದ್ದ ಈ ಕಾಯ್ದೆಯ ಹರವು ಹೆಚ್ಚಿದೆ.

ಸೊಸೆಯಂದಿರಿಂದ ಕಿರುಕುಳಕ್ಕೊಳಗಾಗುವ ಹಿರಿಯ ನಾಗರಿಕರಿಗೆ ಅನುಕೂಲ ಆಗುತ್ತದೆಯೇ, ಕಿರುಕುಳ ನೀಡುವ ಅತ್ತೆ, ನಾದಿನಿಯರಿಂದ ಸೊಸೆಯಂದಿರಿಗೆ ಮುಕ್ತಿ ನೀಡುತ್ತದೆಯೇ, ಮಹಿಳೆಯರನ್ನು ಬಳಸಿಕೊಂಡು ಮತ್ತೊಬ್ಬ ಮಹಿಳೆಗೆ ತೊಂದರೆ ಕೊಡುವ ಪುರುಷರ ಪ್ರವೃತ್ತಿಗೆ ತಡೆ ಬೀಳುತ್ತದೆಯೇ,  ಮಹಿಳೆಯರು  ಮಹಿಳೆಯರ ವಿರುದ್ಧ ಹೂಡುವ ಮೊಕದ್ದಮೆಗಳಲ್ಲಿ ಹೆಚ್ಚಳ ಕಂಡುಬರುತ್ತದೆಯೇ ಅಥವಾ ಕಾಯ್ದೆಯ ದುರ್ಬಳಕೆ ಇನ್ನೂ ಹೆಚ್ಚಿಗೆ ಆಗುವ ಸಾಧ್ಯತೆ ಇದೆಯೇ ಎಂಬೆಲ್ಲಾ ಪ್ರಶ್ನೆಗಳನ್ನು ಸುಪ್ರೀಂ ಕೋರ್ಟ್‌ನ ಈ ಆದೇಶ ಹುಟ್ಟುಹಾಕಿದೆ.

ಈ ಆದೇಶ ಸ್ವಾಗತಾರ್ಹ ಎನ್ನುವ ವಿವಿಧ ತಜ್ಞರು, ದೌರ್ಜನ್ಯಕ್ಕೊಳಗಾದ ಸಂತ್ರಸ್ತರು, ಇದೇ ವೇಳೆ ಇದರಿಂದ ಆಗಬಹುದಾದ ದುರುಪಯೋಗಗಳ ಕುರಿತೂ ವಿಷಾದ ವ್ಯಕ್ತಪಡಿಸಿದ್ದಾರೆ.

‘ಮಹಿಳೆಯರ ಮೇಲೆ ದೌರ್ಜನ್ಯ ನಡೆದಾಗ ಅದಕ್ಕೆ ಪುರುಷರೇ ನೇರ ಕಾರಣ ಎನ್ನುವುದು ಸಾಮಾನ್ಯವಾಗಿ ಜನರಲ್ಲಿರುವ ಭಾವನೆ. ಆದರೆ ಇಂತಹ ದೌರ್ಜನ್ಯಗಳ ಹಿಂದೆ ಮಹಿಳೆಯರ ಪಾಲೂ ಇದೆ ಎಂಬುದನ್ನು ನಾನೇ ಅನೇಕ ಪ್ರಕರಣಗಳಲ್ಲಿ ಗಮನಿಸಿದ್ದೇನೆ. ಸುಪ್ರೀಂ ಕೋರ್ಟ್‌ನ ಈ ಆದೇಶದಿಂದ ಈಗ ಮಹಿಳೆಯರೂ ದೌರ್ಜನ್ಯ ಎಸಗಲು ಹಿಂದೆಮುಂದೆ ನೋಡುವಂತಾಗಿದೆ’ ಎನ್ನುತ್ತಾರೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಲ್ಲಿ ರಕ್ಷಣಾ ಅಧಿಕಾರಿಯೂ ಆಗಿದ್ದ ನಿವೃತ್ತ ಉಪ ನಿರ್ದೇಶಕ ಚಂದ್ರಶೇಖರಯ್ಯ ಎಚ್.ಜೆ.

‘ನೀನು ಹೋದಾಗ ನಿನ್ನ ಹೆಂಡತಿ ಹೀಗೆ ಮಾಡುತ್ತಾಳೆ, ಹಾಗೆ ಮಾಡುತ್ತಾಳೆ... ಅವಳ ನಡತೆ ಸರಿಯಿಲ್ಲ... ಅವಳು ಸರಿಯಾಗಿ ಕೆಲಸ ಮಾಡುವುದಿಲ್ಲ...’ ಹೀಗೆಲ್ಲಾ ಹೆಂಡತಿಯ ವಿರುದ್ಧ ಗಂಡನಿಗೆ ತಲೆತುಂಬಿಸುವ ಕೆಲಸ ನಡೆಯುವುದು ಆ ಕುಟುಂಬದ ಹೆಣ್ಣಿನಿಂದಲೇ ಜಾಸ್ತಿ. ಆದರೆ ಇದುವರೆಗೆ ಅವರ ವಿರುದ್ಧ ದೂರು ದಾಖಲು ಮಾಡುವ ಅವಕಾಶ ಇಲ್ಲದೇ ಹೋಗಿದ್ದರಿಂದ ಅವರು ಸುಲಭದಲ್ಲಿ ತಪ್ಪಿಸಿಕೊಳ್ಳಬಹುದಿತ್ತು. ಈಗ ಸ್ವಲ್ಪ ಮಟ್ಟಿಗಾದರೂ ಇಂತಹ ದೌರ್ಜನ್ಯಕ್ಕೆ ಕಡಿವಾಣ ಬೀಳಬಹುದು’ ಎನ್ನುತ್ತಾರೆ ಕೌಟುಂಬಿಕ ಕೋರ್ಟ್ ವಕೀಲರಾಗಿರುವ ಎನ್.ಪಿ.ಅಮೃತೇಶ್. 

ಇದೇ ಮಾತನ್ನು ಸಮರ್ಥಿಸುತ್ತಾರೆ ಇನ್ನೊಬ್ಬ ವಕೀಲ ಸತೀಶ್ ಭಟ್. ‘ಅಲ್ಲೊಂದು ಇಲ್ಲೊಂದು ಪ್ರಕರಣ ಬಿಟ್ಟರೆ ಬಹುತೇಕ ಪ್ರಕರಣಗಳಲ್ಲಿ ಮಹಿಳೆಯರ ವಿರುದ್ಧದ ಕೇಸುಗಳನ್ನು ನ್ಯಾಯಾಲಯಗಳು ವಜಾ ಮಾಡುತ್ತಿದ್ದವು. ಆದ್ದರಿಂದ ಮಹಿಳೆಯರು ಆರೋಪದಿಂದ ಸುಲಭದಲ್ಲಿ ತಪ್ಪಿಸಿಕೊಳ್ಳುವ ಅಸ್ತ್ರವನ್ನು ಕಾನೂನೇ ನೀಡಿತ್ತು. ಇದರ ಜೊತೆ ಕುಟುಂಬದಲ್ಲಿರುವ ಮಕ್ಕಳನ್ನು ಬಳಸಿಕೊಂಡೂ ದೌರ್ಜನ್ಯ ಎಸಗುವ ಪ್ರಕರಣಗಳು ನಡೆಯುತ್ತಿದ್ದವು. ಈಗ ಮಕ್ಕಳು ಕೂಡ ಇಂಥ ಕೃತ್ಯ ಎಸಗಲು ಹೆದರುತ್ತಾರೆ’ ಎನ್ನುವುದು ಅವರ ನಿಲುವು. ‘ಮಹಿಳೆಯರ ವಿರುದ್ಧ ಪ್ರಕರಣ ದಾಖಲು ಮಾಡುವ ಅವಕಾಶವಿಲ್ಲ ಎಂದು ಬಲ್ಲ ಪುರುಷರು, ದೌರ್ಜನ್ಯ ಎಸಗಲು ಮಹಿಳೆಯರನ್ನು ಬಳಸಿಕೊಳ್ಳುವ ಪ್ರವೃತ್ತಿಗೆ ತಡೆ ಬೀಳುತ್ತದೆ’ ಎನ್ನುವುದು ಕೌಟುಂಬಿಕ ಕೋರ್ಟ್‌ ವಕೀಲ ಎ.ವಿ.ಅಮರನಾಥನ್‌ ಅವರ ಅಭಿಪ್ರಾಯ.

‘2(ಕ್ಯೂ) ಕಲಮು ಅಸಾಂವಿಧಾನಿಕವಾದುದು ಎಂಬ ಸುಪ್ರೀಂ ಕೋರ್ಟ್ ಆದೇಶ ಒಳ್ಳೆಯದು ಎಂಬುದರಲ್ಲಿ ಎರಡು ಮಾತಿಲ್ಲ. ಆದರೆ ಇದರಿಂದ ದುರುಪಯೋಗದ ಸಾಧ್ಯತೆಯನ್ನೂ ಅಲ್ಲಗಳೆಯುವಂತಿಲ್ಲ’ ಎನ್ನುವ ಕೌಟುಂಬಿಕ ಕೋರ್ಟ್‌ನ ಮಧ್ಯಸ್ಥಿಕೆದಾರರಾದ ಎಂ.ಎಂ.ಕಾರಿಯಪ್ಪ,  ಕೇಸಿನ ಸತ್ಯಾಸತ್ಯತೆ ಕಂಡುಹಿಡಿಯುವ ಹೊಣೆ ಮಧ್ಯಸ್ಥಿಕೆದಾರರ ಮೇಲಿದೆ ಎನ್ನುತ್ತಾರೆ. ‘ಯಾವುದೇ ಕಾನೂನು ಜಾರಿಯಾದರೂ ಅದರ ಸದುಪಯೋಗ, ದುರುಪಯೋಗ ಎರಡೂ ಇದ್ದದ್ದೇ. ಆದರೆ ಕೌಟುಂಬಿಕ ದೌರ್ಜನ್ಯ ತಡೆ ಕಾಯ್ದೆ ಅಡಿ ದೂರು ದಾಖಲಾದಾಗ ಮಧ್ಯಸ್ಥಿಕೆದಾರರ  ಮೇಲೆ ಜವಾಬ್ದಾರಿ ಹೆಚ್ಚಿರುತ್ತದೆ.

ಇಲ್ಲಿ ತೆರೆಯ ಹಿಂದೆ ಏನೋ ನಡೆದಿರುತ್ತದೆ. ಅದನ್ನು ಹೊರಕ್ಕೆ ತೆಗೆಯುವಲ್ಲಿ ಮಧ್ಯಸ್ಥಿಕೆದಾರರು ಪ್ರಯತ್ನಿಸಬೇಕಾಗುತ್ತದೆ. ಆಗ ಇದರ ದುರುಪಯೋಗ ಮಾಡಿಕೊಳ್ಳುತ್ತಿರುವವರು ಯಾರು, ಯಾರು ಸರಿ ದಾರಿಯಲ್ಲಿ ಇದ್ದಾರೆ ಎಂಬುದನ್ನು ಕಂಡುಹಿಡಿಯುವುದು ಸುಲಭವಾಗುತ್ತದೆ. ಅದೇ ದಾರಿಯಲ್ಲಿ ನಡೆದು ಎಲ್ಲರಲ್ಲೂ ಒಗ್ಗಟ್ಟು ಮೂಡಿಸಲು ಸಹಕಾರಿಯಾಗುತ್ತದೆ’ ಎಂಬ ಅಭಿಪ್ರಾಯ ಅವರದ್ದು. ಆದ್ದರಿಂದ ಈ ಕಾಯ್ದೆಯ ಸದುಪಯೋಗ, ದುರುಪಯೋಗ ಪರಾಮರ್ಶಿಸುವ ಬದಲು ಮಧ್ಯಸ್ಥಿಕೆದಾರರು  ಯಾವ ರೀತಿ ಸಮಸ್ಯೆಗಳನ್ನು ಪರಿಹರಿಸಬಹುದು ಎಂಬುದನ್ನು ನೋಡಿದರೆ ಎಲ್ಲ ಸರಿಯಾಗುತ್ತದೆ’ ಎನ್ನುತ್ತಾರೆ.

‘ಈ ಆದೇಶದಿಂದಾಗಿ ಮಹಿಳೆಯರು  ಮಹಿಳೆಯರ ವಿರುದ್ಧ ಹೂಡುವ ಮೊಕದ್ದಮೆಗಳಲ್ಲಿ ಹೆಚ್ಚಳ ಕಂಡುಬರುವ ಸಾಧ್ಯತೆಗಳನ್ನೂ ಅಲ್ಲಗಳೆಯುವಂತಿಲ್ಲ’ ಎನ್ನುವ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ನಿವೃತ್ತ ಉಪ ನಿರ್ದೇಶಕಿ ವಿಮಲಾ ಬರಮೇಲು, ಎಲ್ಲಾ ಪ್ರಕರಣಗಳ ನೈಜತೆಯನ್ನು ಅರಿಯುವ ಜವಾಬ್ದಾರಿ ರಕ್ಷಣಾ ಅಧಿಕಾರಿಗಳ ಮೇಲಿದೆ ಎನ್ನುತ್ತಾರೆ. ರಕ್ಷಣಾ ಅಧಿಕಾರಿಯೂ ಆಗಿದ್ದ ಅವರು, ‘ದೂರು ದಾಖಲಾದ ನಂತರ ಆರೋಪಿಗಳನ್ನು ತಕ್ಷಣ ಬಂಧಿಸಬಾರದು. ಮಹಿಳೆಯರ ಮೇಲೆಯೇ ಕೇಸು ಇರಲಿ, ಪುರುಷರ ಮೇಲೇ ಕೇಸು ದಾಖಲಾಗಿರಲಿ, ಅಕ್ಕಪಕ್ಕದವರನ್ನೂ ವಿಚಾರಿಸಿ ನೋಡಬೇಕಾಗುತ್ತದೆ. ರಕ್ಷಣಾ ಅಧಿಕಾರಿಗಳ ವರದಿಯ ಆಧಾರದ ಮೇಲೆ ಕೋರ್ಟ್‌ಗಳು ಈ ಪ್ರಕರಣದ ವಿಚಾರಣೆ ಮುಂದುವರಿಸುವ ಕಾರಣ,  ಅವರು ಸರಿಯಾದ ವರದಿಯನ್ನು ಕೋರ್ಟ್‌ಗೆ ನೀಡಬೇಕಾಗುತ್ತದೆ’ ಎನ್ನುತ್ತಾರೆ.

‘ಕೌಟುಂಬಿಕ ಕಲಹದ ಹೆಚ್ಚಿನ ಸಂದರ್ಭಗಳಲ್ಲಿ ಒಬ್ಬರ ವಿರುದ್ಧ ಇನ್ನೊಬ್ಬರು ದೂರು ದಾಖಲು ಮಾಡುವಷ್ಟು ವಿಪರೀತಕ್ಕೆ ಹೋಗುವ ಮನಸ್ಸು ಇರುವುದಿಲ್ಲ. ಚಿಕ್ಕಪುಟ್ಟ ಜಗಳವಾದಾಗ, ತಪ್ಪು ಮಾಡಿದವರು ‘ಸಾರಿ’ ಎಂದು ಕೇಳಿಬಿಟ್ಟರೆ ಇನ್ನೊಬ್ಬರು ಕ್ಷಮಿಸುತ್ತಾರೆ. ಆದರೆ ‘ಸಾರಿ’ ಎನ್ನಲು ಅಹಂ ಅಡ್ಡ ಬರುತ್ತದೆ. ಅವರು ‘ಸಾರಿ’ ಕೇಳಲ್ಲ, ಇವರು ಬಿಡಲ್ಲ... ಇದೇ ಕ್ಷುಲ್ಲಕ ಕಾರಣವೊಡ್ಡಿ ಕೇಸು ದಾಖಲು ಮಾಡುತ್ತಾರೆ. ಇಲ್ಲಿ ತಪ್ಪು ಮಾಡಿರುವವರು ಗಂಡೇ ಆಗಿರಬಹುದು, ಹೆಣ್ಣೇ ಆಗಿರಬಹುದು. ಆದ್ದರಿಂದ ಹೆಣ್ಣಿನ ವಿರುದ್ಧವೂ ದೂರಿಗೆ ಈಗ ಅವಕಾಶ ಇರುವುದರಿಂದ ಮಧ್ಯಸ್ಥಿಕೆ ಕೇಂದ್ರಗಳಲ್ಲಿ ಒಂದು ಹೆಣ್ಣಿನಿಂದ ಇನ್ನೊಂದು ಹೆಣ್ಣಿಗೆ ‘ಸಾರಿ’ ಕೇಳಿಸಿಬಿಟ್ಟರೆ ಅಲ್ಲಿಗೆ ಸಮಸ್ಯೆ ಬಗೆಹರಿಯುತ್ತದೆ. ಈಗ ಆ ದಾರಿ ಸುಗಮವಾಗಿದೆ’ ಎನ್ನುತ್ತಾರೆ  ಕೌಟುಂಬಿಕ ಕೋರ್ಟ್‌ ಮಧ್ಯಸ್ಥಿಕೆದಾರರು ಹಾಗೂ ತರಬೇತುದಾರರು ಆಗಿರುವ ಎಸ್‌.ಎನ್‌. ಪ್ರಶಾಂತ್‌ಚಂದ್ರ.

ಈ ಆದೇಶ ಸೇರಿದಂತೆ ಹೆಚ್ಚಿನ ಕಾನೂನುಗಳೆಲ್ಲವೂ ಮಹಿಳೆಯರ ಪರವಾಗಿಯೇ ಇರುವುದಕ್ಕೆ ವಿಷಾದ ವ್ಯಕ್ತಪಡಿಸುವ ಕರ್ನಾಟಕ ಅತ್ತೆಯವರ ಸಂಘದ ಅಧ್ಯಕ್ಷೆ ರಾಣಿ ನಾಗರಾಜ, ‘ಎಷ್ಟೋ ಪುರುಷರು ಹೆಂಡತಿಯರ, ಅವರ ತವರು ಮನೆಯವರ ಕೈಯಲ್ಲಿ ಸಿಕ್ಕಿ ನಲುಗುತ್ತಿದ್ದಾರೆ. ನಾನೇ ಇಂಥ ಅದೆಷ್ಟೋ ಪ್ರಕರಣಗಳನ್ನು ನೋಡಿದ್ದೇನೆ. ಸುಪ್ರೀಂ ಕೋರ್ಟ್‌ ಈಗ ನೀಡಿರುವ ಆದೇಶದ ಜೊತೆಗೆ ಗಂಡಸರ ಪರವಾಗಿಯೂ ಒಂದಷ್ಟು ಕಾಯ್ದೆ–ಕಾನೂನು ಮಾಡಿದ್ದರೆ ಅನುಕೂಲ ಆಗುತ್ತಿತ್ತು’ ಎನ್ನುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT