ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಗನಿಗೆ ತಾಯಿಯಾಗುವುದಾದರೆ. . .

Last Updated 14 ಅಕ್ಟೋಬರ್ 2016, 19:30 IST
ಅಕ್ಷರ ಗಾತ್ರ

‘ಇರುವುದೆಲ್ಲವ ಬಿಟ್ಟು, ಇರದುದರೆಡೆಗೆ ತುಡಿವುದೆ ಜೀವನ’
ಮೊದಲನೆಯದು ಹೆಣ್ಣುಮಗು, ಎರಡನೆಯ ಮಗುವಿನ ನಿರೀಕ್ಷೆ. ಆ ಸ್ತ್ರೀಯ ಮನಸ್ಸು, ಕನಸು, ಭರವಸೆ, ಆತಂಕ. ಅವಳಿಗಷ್ಟೇ ಪ್ರಿಯ!
ಈಗಿನ ಕಾಲದಲ್ಲಿ ಎರಡನೆಯ ಮಗುವನ್ನು ಯಾರು ಬಯಸುತ್ತಾರೆ – ಎನ್ನುವವರ ಕುಹಕ, ಇದೂ ಹೆಣ್ಣೇ ಆದರೆ. . .ಬೇಕಿತ್ತಾ ಎನ್ನುವವರ ನಿರಾದರ, ಗಂಡುಮಗು ಬೇಕೆನ್ನುವ ಆಸೆ ... ಎನ್ನುವವರ ತಿವಿತ. ಗಂಡೋ ಹೆಣ್ಣೋ ಒಂದೇ ಸಾಲದಾ ತೇಲಿಸಿ – ಮಾತನಾಡಿದವರು ಕೆಲವರು.

ಮೊದಲ ಕೂಸಿಗೆ ಪುಂಸವನ, ಅನವಲೋಭನ, ಸೀಮಂತ ಸಂಸ್ಕಾರದ ಸಂಭ್ರಮ. ಮುಂದಿನ ಮಗು ಆ ಸಂಸ್ಕಾರದಲ್ಲಿ ಸಹಭಾಗಿ. ಮಡಿಲಲ್ಲಿ ಮಲಗಿದ ಹೆಣ್ಣುಕೂಸು. ಮನೆಯ ನಂದಾದೀಪ. ‘ಅವನ’ ಗತ್ತು, ಮೊಂಡತನಕ್ಕೆ ಮಮತೆಯ ಲೇಪಿಸಿ ಅಪ್ಪನಾಗಿಸಿದವಳು. ಹಸಿರು ಲಂಗ-ಕುಬುಸ ತೊಟ್ಟು ಕಾಲ್ಗೆಜ್ಜೆ ಝಳಪಿಸಿ ಹೊಸ ಕಂಪು ಸೂಸಿದವಳು. ಪ್ಯಾಂಟು, ಶರಟು, ಸ್ಕರ್ಟ್, ಬರ್ಮುಡ, ಡಿವೈಡೆಡ್ ಮಿಡಿ, ಸೀರೆ, ಬಳೆ, ಸರ, ಓಲೆ ಏನು ತೊಡಿಸಿದರೂ ಒಪ್ಪುವುದವಳಿಗೆ. ಅವಳೇ ಕೃಷ್ಣ, ಅವಳೇ ಚೈತ್ರ ಗೌರಿ, ಒಂದು ಗಂಡುಮಗುವಾಗಲಿ ಎಂದು ಬಯಸಿದ್ದು ಹೌದು.

ದೇವಹೂತಿ ಒಂಬತ್ತು ಹೆಣ್ಣುಮಕ್ಕಳ ನಂತರ ಕರ್ದಮರಲ್ಲಿ ಬೇಡಿ ಕಪಿಲನನ್ನು ಪಡೆಯಲಿಲ್ಲವೆ? ತನಗಾಗಿ, ತನ್ನ ಸಾಧನೆಗಾಗಿ, ತನ್ನ ಆತ್ಮೋದ್ಧಾರಕ್ಕಾಗಿ ಕಪಿಲನನ್ನು ಮಗನನ್ನಾಗಿ ಪಡೆದವಳು ದೇವಹೂತಿ. ತಾಯಿಗಾಗಿ ಅವತರಿಸಿದವನು ಕಪಿಲ. ಅವಳ ಸಂದೇಹಗಳನ್ನು ಪರಿಹರಿಸಿ, ತತ್ತ್ವೋಪದೇಶ ಮಾಡಿದವನು ಕಪಿಲ. ತನಗಾಗಿ ತನ್ನ ಉದ್ಧಾರಕ್ಕಾಗಿ ಒದಗುವ ಮಗ ಜನಿಸಲಿ ಎಂದು ಬಯಸಬಹುದೆ?

ಮಗ ಎಂಥವನಿರಬೇಕು ? ಕನ್ನಡ ಚಲನಚಿತ್ರಗೀತೆ ‘ಹಿಂದೂಸ್ಥಾನವು ಎಂದೂ  ಮರೆಯದ ಭಾರತರತ್ನ ಜನ್ಮಿಸಲಿ...’ ಗುನುಗುನಿಸಿದಂತೆ. ಧ್ರುವನಂತೆ ಛಲವಾದಿ, ನಚೀಕೇತನಂತೆ ದಿಟ್ಟ, ಕೃಷ್ಣನಂತೆ ಚತುರ, ಪ್ರಹ್ಲಾದನಂತೆ ಶರಣಾಗತ, ಕೋಪದಲ್ಲಿ ಸಾಗರಕ್ಕೆ ಬಾಣವಿಟ್ಟ ರಾಮನಂತೆ, ಇರಬೇಕು. ಇದೆಲ್ಲ ಯಾವ ಕಾಲದಲ್ಲಿ!? ಇಂದಿನ, ಇಂಟರ್‌ನೆಟ್ ಯುಗದಲ್ಲಿ ಬೆರಳ ತುದಿಯನ್ನು ಟಚ್‌ಸ್ಕ್ರೀನ್ ಮೇಲಿರಿಸಿ ಬ್ರಹ್ಮಾಂಡವನ್ನು ಕಣ್ಣೆದುರಿಗೆ ತಂದಿರಿಸುವ ಕಾಲದಲ್ಲಿ ಇನ್ನೂ ಮಹಾಕಾವ್ಯಗಳ ಪಾತ್ರಗಳನ್ನೇ ಜಪಿಸುವುದೆ? ಹಾಗಾದರೆ ಇಂದಿನವರನ್ನು ಎದುರಿಗಿಟ್ಟುಕೊಂಡು ಮಗ ಹೀಗಿರಬೇಕೆಂದು ಬಯಸುವುದಾದರೆ, ಯಾರನ್ನು ನೆನೆಯಬೇಕು! ಮ್ಯಾರಡೋನಾ, ಮಹಾತ್ಮ ಗಾಂಧಿ, ಒಬಾಮಾ, ವಿಶ್ವೇಶ್ವರಯ್ಯ, ಮಂಡೇಲಾ, ವಿವೇಕಾನಂದ, ಆಮಿರ್ ಖಾನ್, . .
ಮನಸ್ಸು ಮುದುಡಿದಂತೆನಿಸಿ ಹೆಣ್ಣುಜೀವ ಮತ್ತೆ ಕಾವ್ಯಕ್ಕೇ ಜಿಗಿಯಿತು. ಎಂಥ ಮಗನಿರಬೇಕು! ಮಹಾಭಾರತದ ಕುಂತಿ ಮಕ್ಕಳನ್ನು ಪಡೆಯುವಾಗ ಹೇಳಿದಳಂತೆ, ‘ಎನಗೆ ಹೇಡಿ ಮಗ ಹುಟ್ಟದಿರಲಿ.’

ಎನ್ನ ಮಗ ಭೀಮನಂತಿರಲಿ! ತಾಯಿಯನ್ನು ಭುಜದಲ್ಲಿ ಹೊತ್ತು ತಿರುಗಿದವನು, ತಾಯಿ ಹೇಳಿದಳೆಂದು ಬಕಾಸುರನ ಸವರಿದವನು. ಮಡದಿಯ ಒರಟು ಕೈಗಳ ಕಂಡು ಕಣ್ಣೀರು ಮಿಡಿದವನು, ಕೃಷ್ಣನ ಮನದಿಂಗಿತವನರಿತು ಅದರಂತೆ ನಡೆದವನು.

****
ಗಂಡುಮಕ್ಕಳು ಒರಟು, ಹೇಳಿದ ಮಾತು ಕೇಳುವುದಿಲ್ಲ. ಹಟ, ಮನಸ್ಸಿಗೆ ಬಂದಂತೆ ಮಾಡುವವರು. ಸಾಕುವುದು ಕಷ್ಟ. ಕೂತು ಓದುವುದಿಲ್ಲ. ಸದಾ ಆಟ. ಹೊರಗೇ ಇರುತ್ತಾರೆ. ಏಳುವುದೂ ಬೀಳುವುದೂ, ಹಾರುವುದು. ಗಡುಸು ಧ್ವನಿ, ಮನೆ ಕೆಲಸಕ್ಕೆ ನಿಲ್ಲುವುದಿಲ್ಲ. ಊರಿನ ಉಸಾಬರಿಗೆ ಯಾವಾಗಲೂ ಮುಂದು. ಎಲ್ಲೋ ಜಗಳಾಡಿ, ಹೊಡೆದಾಡಿ ಬರುವುದು. ದೊಡ್ಡವರು ಚಿಕ್ಕವರು ಎಂದು ನೋಡದೆ ಕೂಗಾಡುವುದು. ಹೌದಾ ! ಗಂಡುಮಕ್ಕಳು ಹೀಗೆಯಾ?
ಒಂದು ಗಂಡುಮಗುವಿನ ತಾಯಿಯಾಗಿ ‘ಅವಳ’ ದಾಯಿತ್ವವೇನು?

ಮಗು ಸಮಾಜಕ್ಕೆ ಕೊಡುಗೆಯಾಗಬೇಕು, ಎನ್ನುವುದು ಬಹಳ ದೊಡ್ಡ ಮಾತಾಯಿತು. ಎಲ್ಲಕ್ಕಿಂತ ಮೊದಲು ಅವನು ಮನುಷ್ಯನಾಗಬೇಕು. ಮನುಷ್ಯ ಸಹಜವಾದ ಸಿಟ್ಟು, ಬೇಸರ, ಆಸೆ, ನಿರಾಸೆಗಳು ಇದ್ದೇ ಇದೆ. ಯಾರ ಸಂಗಡ ಜೀವನ ಸಾಗಬೇಕಿದೆಯೋ ಅವರಿಗೆ ಅವನು ಸಹ್ಯನಾಗಬೇಕಲ್ಲವೆ? ಅವನಿಗೆ ಅವನ ಬದುಕನ್ನು ಅವನದ್ದೇ ಆದ ರೀತಿಯಲ್ಲಿ ಮುನ್ನಡೆಸಲು, ರೂಪಿಸಿಕೊಳ್ಳಲು ಎಲ್ಲ ಸ್ವಾತಂತ್ರ್ಯವಿದೆ.

‘ಅಮ್ಮ’ನ ಪಾತ್ರ – ಹೆಣ್ಣನ್ನು ಮಹಾಕಾವ್ಯಗಳು ಅಸೂಯೆ, ಕುಟಿಲ, ಧೂರ್ತೆ, ಪ್ರೀತಿ, ಪ್ರೇಮ, ತ್ಯಾಗ, ಕರುಣೆ, ಶೃಂಗಾರ, ಮೋಸ ಎಂದೆಲ್ಲ ಚಿತ್ರಿಸಿವೆ. ಇತಿಹಾಸದಲ್ಲೂ ಆದರ್ಶ ತಾಯಿಯರು ಆಗಿ ಹೋಗಿದ್ದಾರೆ. ಮಕ್ಕಳಲ್ಲಿ ಗಂಡು–ಹೆಣ್ಣೆಂದು ಭೇದವೆಣಿಸದೆ ಸಮಾನ ಸಂಸ್ಕಾರ, ಪ್ರೋತ್ಸಾಹ, ಪ್ರೀತಿ, ಅನುಕೂಲಗಳನ್ನು ಒದಗಿಸುವ ಈ ದಿನಗಳಲ್ಲಿ ಗಂಡುಮಕ್ಕಳಿಗೆ ತಾಯಿಯಾಗುವುದು ಸವಾಲೇ ಹೌದು.

ಗಂಡುಮಕ್ಕಳು ತಾಯಿಯನ್ನು ಅತಿ ಎನ್ನುವಷ್ಟು ಹಚ್ಚಿಕೊಳ್ಳುತ್ತವೆ. (ಈಡಿಪಸ್ ಕಾಂಪ್ಲೆಕ್ಸ್ ಬಗ್ಗೆ ಹೇಳಲು ಹೊರಟಿಲ್ಲ.) ಅದು ತಾಯಂದಿರಿಗೆ ಪ್ರಿಯವೂ ಹೌದು. ಮಗ ಹತ್ತಿರ ಬಂದು ‘ಅಮ್ಮಾ ಯಾಕೆ ಸಪ್ಪಗಿದ್ದೀಯ, ಬೇಜಾರಾಗಿದೆಯಾ, ನಗಮ್ಮಾ’ ಎಂದರೆ ತಾಯಿಗದೆಷ್ಟು ಆಪ್ಯಾಯ. ಒಂದೆರಡು ದಿನ, ಕೆಲವು ತಿಂಗಳು, ವರ್ಷ ಕೇಳಿಯಾನು. ಆಮೇಲೆ? ಅವನು ಬೆಳೆದಂತೆ ಸ್ನೇಹಿತರು, ಓದು, ಹವ್ಯಾಸ ವಿಸ್ತರಿಸುತ್ತಾ ಹೋಗುತ್ತಾನೆ.

ಮಗ ಯಾಕೋ ಇತ್ತೀಚೆಗೆ ನನ್ನನ್ನು ವಿಚಾರಿಸುವುದೇ ಇಲ್ಲ ಎಂದು ತಾಯಿ ಹಲುಬುವಂತಾಗದೇ! ಅವನು ಕಾಳಜಿ ಮಾಡಲಿ, ಹತ್ತಿರವಿರಲಿ ಎಂದು ಬಯಸುವಂತಾಗುವುದು ಸಹಜ. ರೆಕ್ಕೆ ಬಲಿತಂತೆ ವಿಸ್ತಾರವಾದ ಆಗಸದಲ್ಲಿ ಹಾರಾಡಬೇಕು, ಹೊಸ ಜಗತ್ತಿಗೆ ತೆರೆದುಕೊಳ್ಳಬೇಕು. .. ಮರಳನ್ನು ಮುಷ್ಟಿಯಲ್ಲಿ ಎಷ್ಟೆಷ್ಟು ಬಿಗಿಯುತ್ತಾಳೋ ಅಷ್ಟೂ ಜಾರಿ ಹೋಗದೇ? ಗಾಳಿಪಟದ ಮಾಂಝಾ ಸಡಿಲಾದಷ್ಟೂ ಹಾರಾಟ ಸೊಗಸು. ಬಟ್ಟೆ ಒಗೆಯುವ ಮಶೀನಿನಿಂದ ಬಟ್ಟೆ ತೆಗೆದು ಒಣಗಿ ಹಾಕುವುದೂ ಒಂದು ಕೆಲಸವೇ.

‘ಅಮ್ಮಾ ಎಲ್ಲ ಬಟ್ಟೆ ಒಣಗಿ ಹಾಕಿದ್ದೇನೆ, ನಿನ್ನದೂ ಅಕ್ಕನದೂ ಹಾಕಿಲ್ಲ. ಯಾಕೆ ಎಂದು ಕೇಳಿದರೆ, ನಾನು ಹಾಕಲ್ಲ’. ನೇರ ಉತ್ತರ. ಸೀರೆಯ ಒಂದು ತುದಿ ಕೊಟ್ಟು ನಿಧಾನವಾಗಿ ಮಡಿಸಿ ತಂತಿಯ ಮೇಲೆ ಹರಡುವುದನ್ನು ತೋರಿಸಲಾಗದೆ! ಜಾರಿ ಬಿದ್ದೀತು. ಮತ್ತೆ ಜೋಡಿಸುವುದು. ಹರಡುವುದು. ಅವಮಾನವೆ?  ನಿನಗಿಷ್ಟವಿಲ್ಲದಿದ್ದರೆ ಪರವಾಗಿಲ್ಲ. ಬಟ್ಟೆ ಏನು ಮಾಡೀತು. ಮಗನಿಗನ್ನಿಸದಿರದೆ, ಹೌದಲ್ಲ ಅಮ್ಮ, ಅಪ್ಪನದ್ದು, ತಾತನದ್ದು, ಚಿಕ್ಕಪ್ಪನದ್ದು ಎಲ್ಲರ ಬಟ್ಟೆಯನ್ನು ಒಣಗಿಸುವಳಲ್ಲ. ಸಣ್ಣಪುಟ್ಟ ವ್ಯವಹಾರಗಳನ್ನು ಚಿಕ್ಕವಯಸ್ಸಿನಲ್ಲೇ ತಿಳಿಸಿಕೊಡಬೇಕಾದೀತು.

ಐನೂರು ರೂಪಾಯಿ ಕೊಟ್ಟು ಕೊತ್ತಂಬರಿಸೊಪ್ಪು, ಕಾಲು ಕೆಜಿ ಕಾಫಿಪುಡಿ, ಒಂದು ಲೀ ಹಾಲು ತರಬೇಕೆಂದರೆ, ಮೂರು ಬೇರೆ ಬೇರೆ ಅಂಗಡಿಗೆ ಹೋಗಬೇಕು. ಅವರೆಷ್ಟು ಚಿಲ್ಲರೆ ಕೊಡುತ್ತಾರೋ ತಂದು ಕೊಟ್ಟುಬಿಟ್ಟರೆ ಮುಗಿಯುವುದಾ?  ಬರೆದಿಡಬೇಕು. ಯಾರಿಗೆ ಎಷ್ಟು ಕೊಟ್ಟೆ. ವಾಪಸ್ಸು ತಂದದ್ದೆಷ್ಟು. ಅಷ್ಟೊಂದು ದುಡ್ಡು ಕೊಡಬಾರದೋ, ಅವನೇಕೆ ಅಂಗಡಿಗೆ ಹೋಗಬೇಕು ತಾನೇ ಗಾಡಿ ಮೇಲೆ ಹೋಗಿ ತಂದರಾಯಿತು. ಆದರೆ ಮಗನಿಗೆ ಅದೆಷ್ಟು ಸಂತಸ, ಐದು ನೂರು ರೂಪಾಯಿಗಳ ವ್ಯವಹಾರ ಮಾಡಿದ ಸಂತಸ.

ಎಲ್ಲರೂ ಕೂತು ಟಿವಿ ನೋಡಬೇಕೆಂದರೆ, ಒಂದೋ ಸಿನಿಮಾ, ಇಲ್ಲ ನ್ಯೂಸ್, ಅಥವಾ ರಿಯಾಲಿಟಿ ಷೋಗಳು. ಯಾವುದೇ ಆದರೂ ಅದರಲ್ಲಿ ಬರುವ ಹೆಣ್ಣುಪಾತ್ರಗಳು ಧರಿಸುವ ಬಟ್ಟೆಗಳು ಸಾಕಷ್ಟು ಪೋಷಕರಿಗೆ (ಭಾರತೀಯ!) ಇರುಸು ಮುರುಸಾಗುವುದು ಹೌದು. ಬೆಳೆದ ಗಂಡುಮಗನಿರುವಾಗ ನೋಡಲಾಗುವುದೆ, ಚಾನಲ್ ಬದಲಾಯಿಸಿದರೆ, ಅವನಲ್ಲಿ ನೋಡಲೇಬೇಕೆನ್ನುವ ಕುತೂಹಲ ಹುಟ್ಟದೆ? ‘ಟೇಲರ್‌ಗೆ ಬಟ್ಟೆ ಸಾಕಾಗಲಿಲ್ಲ ಎನಿಸ್ತದೆ’, ಎನ್ನುವ ಚಟಾಕಿ ಹಾರಿದರೂ ಎದ್ದು ಹೋಗುವುದೂ ಸೌಜನ್ಯವಲ್ಲವಲ್ಲ.

ಹುಟ್ಟುಹಬ್ಬ, ಸ್ನೇಹಿತರನ್ನು ಕರೆದುಕೊಂಡು ಮ್ಯಾಕ್‌ಡೋನಾಲ್ಡ್, ಪಿಜ್ಜಾ ಹಟ್‌ಗೆ ಹೋಗಬೇಕೆನಿಸುವುದು ಸಹಜ. ಆ ಸ್ನೇಹಿತರೂ ಇವನನ್ನು ಕರೆದುಕೊಂಡು ಹೋಗಿರುತ್ತಾರೆ. ಇದೀಗ ಇವನ ಸರದಿ. ಮಗನಿಗೂ ಫ್ರೆಂಚ್ ಫ್ರೈಸ್, ಸ್ಯಾಂಡ್ ವಿಚ್‌ಗಳಿಷ್ಟವೆ. ಆದರೂ ಸ್ನೇಹಿತರೆಷ್ಟು ಜನ ಬರುವವರಿದ್ದಾರೆ. ಮನೆಗೆ ಕರೆದರೆ ಹೇಗೆ. ಮಗನ ಅಬ್ಬರ ‘ಬೇಡ ಹೊರಗೇ ಹೋಗ್ತೀನಿ. ಅದೇ ಚೆನ್ನಾಗಿರತ್ತೆ’ ‘ಸರಿ. ಹೋಗುವಂತೆ, ಒಂದ್ಸಲ ಸ್ನೇಹಿತರನ್ನು ಕೇಳಿ ನೋಡು. ಆಲೂ ಪರಾಠ, ಹಯಗ್ರೀವ, ಹಪ್ಪಳ, ಅನ್ನ ಸಾರು, ಮೊಸರನ್ನ ಮಾಡಿದರೆ ಇಷ್ಟವಾಗುವುದಾ?’ ಮಗನ ಸ್ನೇಹಿತರು ಮನೆಗೆ ಬಂದು ಬಾಳೆ ಎಲೆಯಲ್ಲಿ ಊಟ ಮಾಡಿ ತುಂಬಾ ಚೆನ್ನಾಗಿತ್ತು ಆಂಟಿ, ಥ್ಯಾಂಕ್ಸ್ ಮಚಾ, ಎಂದು ಖುಷಿಯಾಗಿ ಹೊರಟಾಗಿನಿಂದ ಸ್ನೇಹಿತರ ಮನೆಗೇ ಹೋಗಿ ಊಟ ಮಾಡುವುದು ಮುಂದುವರೆಯಬಹುದು. ಹೊರಗಿನ ಆಹಾರ, ‘ಹೇಗೆ ಮಾಡಿರ್ತಾರೋ?’ ‘ಯಾರು ಮಾಡಿರ್ತಾರೋ?’ ಎನ್ನುವ ಕಾಳಜಿ ಅಮ್ಮಂದಿರದ್ದು. ಆದರೆ ತೀರಾ ಕಡಿವಾಣ ಹಾಕಲೂ ಸಾಧ್ಯವಾಗದು. ಎಲ್ಲಿ, ಯಾವಾಗ, ಎಷ್ಟು ಎನ್ನುವ ಸಂಯಮ ಬಂದರೆ ಸಾಕಷ್ಟೆ!

ಯಾವ ಕಾಲೇಜಿನಲ್ಲಿ ಎನ್‌ಸಿಸಿ ಇದೆಯೋ, ಬ್ಯಾಸ್ಕೆಟ್‌ಬಾಲ್ ಕೋಚಿಂಗ್ ಇದೆಯೋ ಅಲ್ಲಿಗೇ ಸೇರಬೇಕೆನ್ನುವುದು ಮಗನ ಇರಾದೆ;  ಮಗನನ್ನು ಐದಾರು ಕಾಲೇಜಿಗೆ ಕರೆದುಕೊಂಡು ಹೋಗಿ ಆಟದ ಮೈದಾನ, ಪಾಠದ ಕ್ರಮ ತೋರಿಸಿ, ಅಧ್ಯಾಪಕರ ಭೇಟಿ ಮಾಡಿದರೆ ತೀರ್ಮಾನ ತೆಗೆದುಕೊಳ್ಳಲು ಸುಲಭವಾಗಬಹುದು.  ಆಟವನ್ನೇ ಪ್ರಮುಖವಾಗಿ ತೆಗೆದುಕೊಂಡರೆ ಆಗುವ ಸಾಧಕ–ಬಾಧಕಗಳು, ಪಠ್ಯೇತರ ಚಟುವಟಿಕೆಗಳ ಪ್ರಾಮುಖ್ಯತೆ, ವಿದ್ಯಾಭ್ಯಾಸ-ಅಧ್ಯಯನದ ಕ್ರಮ ಎಲ್ಲವೂ ಮನೆಯವರೊಂದಿಗೆ, ಹಿತೈಷಿಗಳೊಂದಿಗೆ ಚರ್ಚಿಸಿದಾಗಲೇ ಕಲಿಕೆಯ ಶ್ರದ್ಧೆಗೆ ಪರಿಶ್ರಮದ ಬಿಸುಪು ಸೋಪಾನವಾದೀತು.

ಸ್ನೇಹಿತರ ಬಳಿ ನೈಕ್ ಶೂಸಿದೆ, ವೈಲ್ಡ್ ಕ್ರಾಫ್ಟ್ ಬ್ಯಾಗಿದೆ, ಯು ಎಸ್ ಪೋಲೋ ಶರ್ಟಿದೆ ನಂಗೂ ಅದೇ ಬೇಕು, ಎನ್ನುವ ಮಗನ ಬೇಡಿಕೆಗೆ ಏನೆನ್ನಬೇಕು. ‘ನೀನು ಓದಿ, ಕೆಲಸಕ್ಕೆ ಸೇರಿ, ಸಂಪಾದಿಸಿದಾಗ ಈ ಶೋಕಿ ಮಾಡು’, ಎನ್ನಬೇಕೆನಿಸಿದ್ದು ಹೌದು. ಅದೆಲ್ಲ ಕೊಡಿಸಲು ಸಾಧ್ಯವಿದೆಯಾ? ಆಗದೆನ್ನಲು ಕಾರಣವೇನು? ಹೂ ಮಾರುವ ಹತ್ತು ವರ್ಷದ ಹುಡುಗನೊಬ್ಬನನ್ನು ಮನೆ ಬಾಗಿಲಿಗೆ ಕರೆತಂದು, ‘ಅಮ್ಮ ಎಲ್ಲಾ ಹೂ ತೊಗೊಂಡುಬಿಡು ಎಂಬತ್ತು ರೂಪಾಯಿಯಂತೆ’, ಎಂದಾಗ ಅವನ ಅಂತಃಕರಣಕ್ಕೆ ಭೇಷ್ ಎಂದಿರಲಿಲ್ಲವೆ? ಜೀವನದ ಆವಶ್ಯಕತೆಗಳಿಗೂ, ಬೇಕುಗಳಿಗೂ ಇರುವ ವ್ಯತ್ಯಾಸವನ್ನು ಹೇಳಿದರೆ ಅವನಿಗೆ ತಿಳಿದೀತೆ? ಸರಿ ನೋಡೋಣ – ಎಂದು ಮುಂದೂಡಬೇಕೆಂದುಕೊಂಡರೆ ಒಪ್ಪುವಂತೆ ಕಾಣುತ್ತಿಲ್ಲ.

ಮಗನ ಹಳೆಯ, ಚಿಕ್ಕದಾಗಿದ್ದ ಬಟ್ಟೆಗಳನ್ನು ಪಾತ್ರೆ ತೊಳೆಯಲು ಬರುತ್ತಿದ್ದ ಗಾಳೆಮ್ಮನಿಗೆ ಕೊಟ್ಟಿತ್ತು. ಅವಳ ಮಗನ ಮೈಮೇಲೆ ಆ ಶರ್ಟು ಪ್ಯಾಂಟುಗಳನ್ನು ನೋಡಿದಂದಿನಿಂದ ಯಾವುದೇ ಬೇಡಿಕೆಗಳು ಕೇಳಿಬಂದಿಲ್ಲ ಎನ್ನುವುದು  ಮನೆಯವರೆಲ್ಲರ ಗಮನಕ್ಕೂ ನಿಲುಕಿದೆ. ಅವಳು ಡುಮ್ಮಿ, ಇವಳು ಕೂದಲು ಕಟ್ ಮಾಡಿರೋದು ಅಸಹ್ಯವಾಗಿದೆ, ಈ ಕಲರ್ ಅವಳಿಗೆ ಚೆನ್ನಾಗಿಲ್ಲ, ಅವಳಿಗೊಂದು ಟೀ ಸರಿಯಾಗಿ ಮಾಡೋಕೆ ಬರಲ್ಲ, ಕುಂಕುಮ ಹಚ್ಕೋ, ಬಳೆ ಹಾಕ್ಕೋ, ದಯವಿಟ್ಟು ಸೀರೆ ಉಟ್ಕೋಬೇಡ, ಚೂಡಿದಾರ್ ಹಾಕ್ಕೋ. ಮಗನ ಬಾಯಿಯಲ್ಲಿ ಇಂತಹ ಮಾತುಗಳು! ಹೆಣ್ಣು ತಾನು ಪ್ರೀತಿಸುವವರಿಗೆ ಇಷ್ಟವಾಗುವಂತೆ ತನ್ನನ್ನು ತಾನು ರೂಪಿ(ತೂರಿ)ಸಿಕೊಳ್ಳುತ್ತಲೇ ಬಂದಿದ್ದಾಳೆ. ‘ಊಟ ತನ್ನಿಚ್ಛೆ, ನೋಟ ಪರರಿಚ್ಛೆ’ ಎನ್ನುವುದಂತೂ ಹಳೆಯ ಮಾತಾಯಿತು.

ಬಹುಶಃ ಆಗ ಕನ್ನಡಿಯಿರಲಿಲ್ಲವೇನೋ. ಅವಳನ್ನು ಅವಳಂತೆ ಒಪ್ಪಿಕೊಳ್ಳುವ ಮನೋಭೂಮಿಕೆಗೆ ಇವನು ಸಜ್ಜಾಗುವುದೆಂತು? ಅವಳಾಗಿ ಕೇಳಿದರೆ ‘ಇದು ನಿನಗಿಷ್ಟವೇ’ ಆಗ ಹೇಳುವುದು ಒಂದು ರೀತಿ, ಅದಕ್ಕೂ ಒಂದು ಸೌಜನ್ಯ, ಔಚಿತ್ಯ ಬೇಡವೇ ಕೇಳುವ ಮೊದಲೇ ಒದರಿಬಿಡುವುದೆಂಥ ಧೋರಣೆಯಿದು.
ಸ್ತ್ರೀಕುಲವನ್ನು ಪ್ರೀತಿಸುವ, ಗೌರವಿಸುವ, ಅವಳಂತೆ ಒಪ್ಪಿಕೊಳ್ಳುವ ಸಜ್ಜನಿಕೆಯ ಮಗನಾದರೆ, ಬಯಸಿ ಪಡೆದದ್ದಕ್ಕೆ ಸಾರ್ಥಕತೆ.

ನಿಲದೆ ನಡೆವುದು ಮೊದಲು ಕೊನೆಯಿಲ್ಲದೀಯಾಟ l
ಕಳೆವುದದರಲಿ ನಮ್ಮ ಜನುಮಜನುಮಗಳು ll
ಗೆಲುವಾರ್ಗೋ! ಸೋಲಾರ್ಗೋ! ಲೆಕ್ಕನೋಡುವುದೆಂದೋ
ಫಲವು ಬರಿಯಾಟವೆಲೊ – ಮಂಕುತಿಮ್ಮ ll  

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT