ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಮಾನತೆ ಅಗತ್ಯ

ಕೌಟುಂಬಿಕ ದೌರ್ಜನ್ಯ ತಡೆ ಕಾಯ್ದೆ
Last Updated 14 ಅಕ್ಟೋಬರ್ 2016, 19:30 IST
ಅಕ್ಷರ ಗಾತ್ರ

ಹೆಚ್ಚಿನ ಸಂದರ್ಭಗಳಲ್ಲಿ, ತಪ್ಪೇ ಮಾಡದ ವಯಸ್ಸಾದ ಅತ್ತೆ, ಮಾವನ ಮೇಲೂ ದೂರು ದಾಖಲಿಸುವವರು ಹಲವರಿದ್ದಾರೆ. ಜೊತೆಗೆ ಅತ್ತೆಯಂದಿರಿಗೆ ಸರಿಯಾಗಿ ಊಟ ಕೊಡದೆ, ಔಷಧಿಗೆ ಹಣ ನೀಡದೆ ಕಿರುಕುಳ ನೀಡುತ್ತಾರೆ. ಹೀಗೆ ಹಿಂಸೆಗೆ ಒಳಗಾಗುವ ಮಂದಿಗೆ ಈ ಕಾನೂನಿನಿಂದ ಅನುಕೂಲವಿದೆ.

ಹೆಂಗಸರಿಗೆ ಮಾತ್ರವೇ ಯಾಕೆ ಸುರಕ್ಷತೆ, ಗಂಡಸರಿಗೂ ಸುರಕ್ಷತೆಯ ಅವಶ್ಯಕತೆಯಿದೆ ಅಲ್ಲವೇ? ಸಾಮಾನ್ಯವಾಗಿ  ಪುರುಷರೇ ಹೆಚ್ಚು ದೌರ್ಜನ್ಯ ಎಸಗುತ್ತಾರೆ ಎಂಬ  ಕಲ್ಪನೆ ಇದೆ.   ವಾಸ್ತವವಾಗಿ ಪರಿಸ್ಥಿತಿ ಹಾಗಿಲ್ಲ. ಎಷ್ಟೋ ಸಂದರ್ಭಗಳಲ್ಲಿ ಪತ್ನಿ ಕಾಟ ತಾಳಲಾರದೆ ಪತಿಯೂ ಆತ್ಮಹತ್ಯೆ ಮಾಡಿಕೊಳ್ಳುತ್ತಾನೆ. ವಿದೇಶಗಳಲ್ಲಿ ಹೆಣ್ಣು, ಗಂಡು ಇಬ್ಬರಿಗೂ ದೂರು ಸಲ್ಲಿಸಲು ಸಮಾನ ಅವಕಾಶವಿದೆ. ನಮ್ಮಲ್ಲೂ ಇಂಥ ಕಾನೂನಿನ ಅಗತ್ಯವಿದೆ.

ಈ ಆದೇಶದಿಂದ ದೂರು ದಾಖಲಿಸುವುದು ಒಂದು ಸ್ಪರ್ಧೆಯಾದರೂ ಆಗಬಹುದು. ಮಹಿಳೆಯನ್ನು ಬಳಸಿಕೊಂಡು ಮತ್ತೊಬ್ಬ ಮಹಿಳೆಯ ಮೇಲೆ ಪ್ರಕರಣ ದಾಖಲಿಸುವುದು  ಅಧಿಕವಾಗಬಹುದು. ಸೊಸೆ ದೂರು ನೀಡಿದಳು ಎಂಬ ಕಾರಣಕ್ಕೆ ಅತ್ತೆಯೂ ದೂರು ನೀಡಬಹುದು. ಆದರೆ ನಿಜವಾಗಿ ಕಾನೂನಿನಿಂದ ಕೌಟುಂಬಿಕ ಸಮಸ್ಯೆಯನ್ನು ಬಗೆಹರಿಸುವುದು ಸಾಧ್ಯವಿಲ್ಲ. ಆಪ್ತ ಸಮಾಲೋಚನೆಯ ಮೂಲಕ ಮಾತ್ರವೇ ಇಂಥ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಸಾಧ್ಯ.
- ಕುಮಾರ್ ಜಹಗೀರದಾರ್, ಅಧ್ಯಕ್ಷ, ‘ಕ್ರಿಸ್ಪ್ ’ ಸ್ವಯಂಸೇವಾ ಸಂಸ್ಥೆ

ಪುರುಷ  ಸಮಾಜದ ಪಿತೂರಿ

‘ಕೌಟುಂಬಿಕ ದೌರ್ಜನ್ಯ ತಡೆ ಕಾಯ್ದೆ’ ಬಂದಾಗಿನಿಂದಲೂ ಅದರ ವಿರುದ್ಧ ಹಲವರ ಕಣ್ಣಿತ್ತು. ಇದು ಮಹಿಳಾ ಪರ ಕಾಯ್ದೆ, ಇದರ ದುರುಪಯೋಗ ಮಾಡಿಕೊಳ್ಳುತ್ತಾರೆ, ಪುರುಷರಿಗೆ ಅನ್ಯಾಯವಾಗುತ್ತಿದೆ ಎಂದು ಬೊಬ್ಬೆ ಹಾಕುವವರೇ ಹೆಚ್ಚಿದ್ದರು. ಕೆಲವು ಪುರುಷರು ಸಂಘಟನೆಯನ್ನು ಕಟ್ಟಿಕೊಂಡು ಈ ಕಾನೂನಿನ ಬದಲಾವಣೆಗೆ ಪ್ರಯತ್ನಪಟ್ಟಿದ್ದರು. ಈಗ ಪುರುಷ ಪ್ರಾಧಾನ್ಯಕ್ಕೆ ಒತ್ತು ನೀಡುವ ಕೇಂದ್ರ ಸರ್ಕಾರವೇ ಇರುವುದರಿಂದ ಇದನ್ನು ಬದಲಾವಣೆ ಮಾಡುವುದು ಸುಲಭವಾಗಿದೆ. ಈ ಸರ್ಕಾರ ಇರುವುದೇ ಮನುಸ್ಮೃತಿ ಪಾಲನೆ ಮಾಡಲು. ಈ ಆದೇಶ ಮಹಿಳಾ ಪರವಾಗಿಯೇ ಇದೆ ಅನಿಸಿದರೂ, ಪತಿ ತನ್ನ ಅಮ್ಮನ ಸಹಾಯ ಬಳಸಿಕೊಂಡು ದೂರು ದಾಖಲಿಸುವ ಸಂದರ್ಭದಲ್ಲಿ ಪುನಃ ಇಲ್ಲಿ ಶೋಷಣೆಗೆ ಒಳಗಾಗುವುದು ಮಹಿಳೆಯೆ. 

ಹಿಂದೆ ಇದ್ದ ಕಾಯ್ದೆ ಕೂಡ ಪರಿಣಾಮಕಾರಿಯಾಗಿ ಅನುಷ್ಠಾನವಾಗಿಲ್ಲ. ಎಷ್ಟೋ ವೇಳೆ ಪತಿ ಪರಿಹಾರದ ಹಣ ನೀಡುವುದಿಲ್ಲ. ಜೊತೆಗೆ ಆಕೆ ಹಲವು ಬಗೆಯ ಕಿರುಕುಳಗಳಿಗೆ ಒಳಗಾಗುತ್ತಾಳೆ.  ಆದರೂ ಈ ಕಾನೂನಿನ ದುರುಪಯೋಗವಾಗುತ್ತಿದೆ ಎಂದು ಗೋಳಿಡುವವರೇ ಹೆಚ್ಚು. ಸೂಕ್ಷ್ಮ ಕಾನೂನು ವ್ಯವಸ್ಥೆಯ ಜೊತೆಗೆ ಸರ್ಕಾರವಿದ್ದಿದ್ದರೆ ಇಂಥ ಆದೇಶ ಬರುತ್ತಿರಲಿಲ್ಲ. ಒಂದು ವೇಳೆ ಸೊಸೆ ಸುಳ್ಳು ಪ್ರಕರಣ ದಾಖಲಿಸಿದರೆ ಅದರ ವಿರುದ್ಧ ಕ್ರಮ ಕೈಗೊಳ್ಳಲು ಹಲವಾರು ಕಲಮುಗಳಿವೆ. ಅದನ್ನು ಬಳಸಿಕೊಂಡು ತಪ್ಪಿತಸ್ಥರು ಯಾರು ಎಂಬುದನ್ನು ಸಾಬೀತು ಮಾಡಬಹುದು. ಅದಕ್ಕಾಗಿ ಕಾಯ್ದೆಯಲ್ಲಿ ಬದಲಾವಣೆ ತರುವುದು ಸರಿಯಲ್ಲ. ಇದು ಪುರುಷ ಸಮಾಜದ ಪಿತೂರಿ.
- ಅಖಿಲಾ ವಿದ್ಯಾಸಂದ್ರ, ಸಾಮಾಜಿಕ ಹೋರಾಟಗಾರ್ತಿ

ಹಿರಿಯರಿಗೆ ಅನುಕೂಲ

ಈ ರೀತಿಯ ಆದೇಶ ಬರಬೇಕು ಎಂದು ಬಹಳ ವರ್ಷಗಳಿಂದ ಬಯಸಿದ್ದೆ. ಒಮ್ಮೆ ವಯಸ್ಸಾದ ಮಹಿಳೆಯೊಬ್ಬರು ನನ್ನ ಬಳಿ  ‘ಸೊಸೆಗೆ ನಾವು ಕಿರುಕುಳ ನೀಡುತ್ತಿದ್ದೇವೆ ಎಂದು ಅವಳು ಸುಳ್ಳು ಪ್ರಕರಣ ದಾಖಲಿಸಿದಳು. ಈ ಕಾರಣಕ್ಕೆ ನನ್ನ ಪತಿ ಹೃದಯಾಘಾತದಿಂದ ತೀರಿಹೋದರು. ಮಗ ಜೈಲಿಗೆ ಹೋದ. ನನ್ನ ಗೋಳನ್ನು ಯಾರ ಬಳಿ ಹೇಳಲಿ. ನಾನೂ ಹೆಣ್ಣು, ನನಗ್ಯಾಕೆ ಕಾನೂನಿನಲ್ಲಿ ನ್ಯಾಯವಿಲ್ಲ’ ಎಂದು ಪ್ರಶ್ನಿಸಿದರು. ಅತ್ತೆ ಮಾತ್ರವೇ ಅಲ್ಲ ಸೊಸೆಯೂ ಕ್ರೂರಿಯಾಗಿರಬಹುದು. ಇಂಥ ಆದೇಶದಿಂದ  ಇಬ್ಬರೂ ತಮ್ಮ ಗೋಳನ್ನು ಹೇಳಿಕೊಳ್ಳಲು ಅವಕಾಶ ದೊರಕಿದೆ.

ಎಲ್ಲಾ ಕಾನೂನುಗಳೂ ದುರುಪಯೋಗವಾಗುವ ಸಂಭವವಿರುತ್ತದೆ. ಇದರಲ್ಲಿಯೂ ಹಾಗೆಯೇ ಆಗಬಹುದು.  ಹಿಂಸೆ ಕೊಟ್ಟವರ ಮೇಲೆ ಮತ್ತೊಬ್ಬರು ಪ್ರಕರಣ ದಾಖಲಿಸುತ್ತಾರೆ. ಈ ಆದೇಶದಿಂದ ಅತ್ತೆಯಂದಿರಿಗೂ ಉಪಯೋಗವಾಗುವುದು ಸುಳ್ಳಲ್ಲ. ಮಹಿಳೆಯ ಮೇಲೆ ದೌರ್ಜನ್ಯ ಎಸಗುವ ಮಹಿಳೆಯರ ವರ್ತನೆಗೂ ಇದರಿಂದ ಕಡಿವಾಣ ಬೀಳುತ್ತದೆ.  

ಇಂಥ ಪ್ರಕರಣಗಳನ್ನು ಕಾನೂನಿನ ಮೂಲಕ ಬಗೆಹರಿಸಿಕೊಳ್ಳುವುದಕ್ಕಿಂತ ಮನೆಯವರೇ ಪರಿಹಾರ ಕಂಡುಕೊಳ್ಳಬೇಕು. ಒಮ್ಮೆ ಕಾನೂನಿನ ಮೆಟ್ಟಿಲು ಹತ್ತಿದರೆ  ಮನಸ್ಸುಗಳು ಒಡೆಯುತ್ತವೆ. ಅಲ್ಲಿ ಪುನಃ ಪ್ರೀತಿ ಹುಟ್ಟುವುದು ಕಷ್ಟ. ವಿಧಿಯಿಲ್ಲದಾಗ ಕೊನೆಯ ಅಸ್ತ್ರವಾಗಿ ಕಾನೂನಿನ ಬಳಕೆಯಾಗುವಂತಿರಬೇಕು.
- ಬಿ.ಟಿ.ಲಲಿತಾ ನಾಯಕ್‌, ಲೇಖಕಿ

ಸುಳ್ಳು ಪ್ರಕರಣಕ್ಕೆ ಕಡಿವಾಣ

ಈ ಆದೇಶ ಸಂಪೂರ್ಣ ಸಂತೋಷವನ್ನೇನೂ ತಂದಿಲ್ಲ. ಇಷ್ಟು ದಿನ ಸೊಸೆಯ ಪರವಾಗಿಯೇ ಕಾನೂನು ಇತ್ತು. ಸೊಸೆ ಕೆಟ್ಟವಳಾಗಿದ್ದರೆ ಇಡೀ ಮನೆಯವರು ಅವಳ ವರ್ತನೆಯನ್ನು ಸಹಿಸಿಕೊಳ್ಳಬೇಕಾಗಿತ್ತು. ಎಷ್ಟೋ ಸಂದರ್ಭಗಳಲ್ಲಿ ಸೊಸೆಯೊಬ್ಬಳಿಂದ ಕುಟುಂಬವೇ ಒಡೆದಿರುವ ಉದಾಹರಣೆ ಗಳಿವೆ.  ಆಕೆ ದೂರು ನೀಡುತ್ತಾಳೆ, ಇದರಿಂದ ಮನೆ ಮಂದಿಯೆಲ್ಲ ಕಷ್ಟ ಅನುಭವಿಸಬೇಕಾಗುತ್ತದೆ ಎಂಬ ಕಾರಣಕ್ಕೆ ಸುಮ್ಮನಿರುತ್ತಿದ್ದರು. ಈಗ ಅತ್ತೆಗೂ ದೂರು ದಾಖಲಿಸುವ ಅವಕಾಶ ನೀಡಿರುವುದರಿಂದಾಗಿ ಸುಳ್ಳು ಪ್ರಕರಣ ದಾಖಲಿಸಲು ಸೊಸೆ ಹೆದರುತ್ತಾಳೆ.
ಆದರೆ ನಮ್ಮ ನಿರೀಕ್ಷೆ ಇದಕ್ಕೂ ಹೆಚ್ಚಿನದಾಗಿತ್ತು. ಗಂಡು, ಹೆಣ್ಣು ಭೇದವಿಲ್ಲದ ಕಾನೂನು ಬಂದರಷ್ಟೇ ಸಮಾನತೆ ಸಾಧ್ಯ.
- ಸುರೇಶ್‌ ಕೃಷ್ಣಮೂರ್ತಿ, ಕೌಟುಂಬಿಕ ಆಪ್ತ ಸಮಾಲೋಚಕ

ರಕ್ಷಣಾ ಅಧಿಕಾರಿ ಪಾತ್ರ ಮುಖ್ಯ

ಹೆಂಗಸರಿಂದಾಗಿ ಕಣ್ಣೀರು ಹಾಕುವ ಎಷ್ಟೋ ಗಂಡಸರನ್ನು ನಾನು ನೋಡಿದ್ದೇನೆ. ನಾನು ರಕ್ಷಣಾ ಅಧಿಕಾರಿಯಾಗಿದ್ದಾಗ ತಿಂಗಳಿಗೆ 20–30 ದೌರ್ಜನ್ಯ ಪ್ರಕರಣಗಳನ್ನು ಬಗೆಹರಿಸಿದ್ದೇನೆ. ನನ್ನ ಅನುಭವದ ಪ್ರಕಾರ, ಆದೇಶಗಳು ಏನೇ ಇದ್ದರೂ ರಕ್ಷಣಾ ಅಧಿಕಾರಿಗಳ ಪಾತ್ರ ಇಲ್ಲಿ ಪ್ರಮುಖವಾಗುತ್ತದೆ.
- ವಿಮಲಾ ಬರಮೇಲು, ನಿವೃತ್ತ ಉಪ ನಿರ್ದೇಶಕಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ

ಗೊಂದಲಕ್ಕೆ ಸಿಕ್ಕಿದೆ ಉತ್ತರ
ಕೆಲವು ಪ್ರಕರಣಗಳಲ್ಲಿ ಮಹಿಳೆಯ ಮೇಲೆ ದೌರ್ಜನ್ಯ ನಡೆಸಿದ್ದ ಮಹಿಳೆಯರು ಕಾಯ್ದೆಯ ದುರುಪಯೋಗ ಪಡೆದುಕೊಂಡು  ಸುಲಭದಲ್ಲಿ ತಪ್ಪಿಸಿಕೊಳ್ಳುತ್ತಿದ್ದರು. ಇವರನ್ನು ಶಿಕ್ಷೆಗೆ ಒಳಪಡಿಸಬೇಕೇ ಬೇಡವೇ ಎಂಬ ಬಗ್ಗೆ ಕರ್ನಾಟಕ ಹೈಕೋರ್ಟ್‌ಗೆ  ಬಂದ ಕೆಲವು ಪ್ರಕರಣಗಳಲ್ಲೂ ನ್ಯಾಯಮೂರ್ತಿಗಳಿಂದ ವಿಭಿನ್ನ ಅಭಿಪ್ರಾಯಗಳು ವ್ಯಕ್ತವಾಗಿದ್ದಿದೆ. ಆದ್ದರಿಂದ ಇಂಥ ಗೊಂದಲಗಳಿಗೆ ಸುಪ್ರೀಂ ಕೋರ್ಟ್‌ನ ಆದೇಶ ಉತ್ತರ ನೀಡಿದೆ. 
- ಪಿ.ಜಿ.ನಾಡಗೌಡರ್, ಕೌಟುಂಬಿಕ ಕೋರ್ಟ್‌ನ ನಿವೃತ್ತ ನ್ಯಾಯಾಧೀಶ

ಮಹತ್ತರ ಬದಲಾವಣೆ ನಿರೀಕ್ಷೆ

ದಾಂಪತ್ಯ ಕೆಡಲು ಎಷ್ಟೋ ಬಾರಿ, ಕುಟುಂಬದಲ್ಲಿರುವ ಮಕ್ಕಳು ಸೇರಿದಂತೆ ಎಲ್ಲ ಸದಸ್ಯರೂ ಕಾರಣರಾಗಿರುತ್ತಾರೆ. ಅಂತಹ ಸಂದರ್ಭದಲ್ಲಿ ಕುಟುಂಬದ ಪ್ರತಿ ಸದಸ್ಯರನ್ನೂ ಪ್ರತಿವಾದಿಯನ್ನಾಗಿ ಮಾಡುವುದರಿಂದ ಅಂತಹ ಪ್ರಕರಣಗಳು ಮಧ್ಯಸ್ಥಿಕೆಗಾಗಿ ಬಂದಾಗ ಸಂಘರ್ಷದ ಮೂಲ ಅರಿಯಲು ನೆರವಾಗುತ್ತದೆ.
ಆದ್ದರಿಂದ ಸುಪ್ರೀಂ ಕೋರ್ಟ್‌ನ ಈ ಆದೇಶ ಮಹತ್ತರ ಬದಲಾವಣೆ ತರುವ ನಿರೀಕ್ಷೆ ಇದೆ.
- ಎಸ್‌.ಎನ್‌. ಪ್ರಶಾಂತ್‌ಚಂದ್ರ, ಕೌಟುಂಬಿಕ ಕೋರ್ಟ್‌ ಮಧ್ಯಸ್ಥಿಕೆದಾರ, ತರಬೇತುದಾರ

ಹೆದರುವ ಮಹಿಳೆಯರು
ನಾನು ದೌರ್ಜನ್ಯ ಪ್ರಕರಣಗಳ ವಿಚಾರಣೆ ನಡೆಸುವಾಗ ಇಂಥದ್ದೊಂದು ಕಾನೂನು ಬೇಕು ಎನಿಸುತ್ತಿತ್ತು. ಗ್ರಾಮೀಣ ಪ್ರದೇಶದ ಮಹಿಳೆಯರಿಗೆ ಇದರಿಂದ ಇನ್ನೂ ಹೆಚ್ಚು ಅನುಕೂಲ ಆಗುತ್ತದೆ ಅನಿಸುತ್ತಿದೆ.
ತಮ್ಮ ಮೇಲೆ ಕೇಸು ಆಗುವುದಿಲ್ಲ ಎಂದು ದೌರ್ಜನ್ಯಕ್ಕೆ ಮುಂದಾಗುತ್ತಿದ್ದ ಮಹಿಳೆಯರು ಈಗ ಹೆದರಿಕೊಳ್ಳುತ್ತಾರೆ.
- ಓಬಳಪ್ಪ ಕೆ.ಎಚ್‌., ನಿವೃತ್ತ ಜಂಟಿ ನಿರ್ದೇಶಕ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ

ನಿಷ್ಪಕ್ಷಪಾತ ಆಗಿರಬೇಕು

ಪ್ರತಿಷ್ಠಿತರ ಮನೆಗಳಲ್ಲೂ ಮಹಿಳೆಯರಿಂದ ಮಹಿಳೆಯರ ಮೇಲೆ ದೌರ್ಜನ್ಯ ಆಗುವುದನ್ನು ಕಂಡಿದ್ದೇನೆ. ಸುಪ್ರೀಂ ಕೋರ್ಟ್‌ ಆದೇಶ ಒಳ್ಳೆಯದು. ಆದರೆ ಕಾಯ್ದೆ ದುರುಪಯೋಗ ಆಗದಂತೆ ನೋಡಿಕೊಳ್ಳುವ ಹೊಣೆ ಪೊಲೀಸರ ಮೇಲಿದೆ.

ಈ ಕಾಯ್ದೆ ಅಡಿ ದೂರು ದಾಖಲಾದ ತಕ್ಷಣ ಪೊಲೀಸರು ಖುದ್ದಾಗಿ ವಿಚಾರಣೆ ನಡೆಸುವ ಕಾರಣ, ಅವರಿಗೆ ಆ ಪ್ರಕರಣದ ಒಳಹೊರವು ಎಲ್ಲವೂ ಚೆನ್ನಾಗಿ ಗೊತ್ತಾಗುತ್ತದೆ. ಆ ಸಂದರ್ಭದಲ್ಲಿ  ನಿಷ್ಪಕ್ಷಪಾತವಾಗಿ, ಯಾವ ಆಸೆ–ಆಮಿಷಗಳಿಗೆ ಬಲಿಯಾಗದೆ ಪ್ರಕರಣದ ತನಿಖೆ ನಡೆಸಬೇಕು. ಅಂದರೆ ಮಾತ್ರ ಸುಪ್ರೀಂ ಕೋರ್ಟ್‌ನ ಈ ಆದೇಶಕ್ಕೆ ಬೆಲೆ ಬರುತ್ತದೆ
- ಬಿ.ಕೆ.ಶಿವರಾಂ, ನಿವೃತ್ತ ಪೊಲೀಸ್‌ ಅಧಿಕಾರಿ

ದುರುಪಯೋಗ ಸಲ್ಲದು
ಹೆಣ್ಣು ಮಕ್ಕಳ ಪರವಾಗಿರುವ ಈಗಿನ ಆದೇಶದಿಂದ ಇನ್ನಷ್ಟು ಕೇಸುಗಳು ಕೋರ್ಟ್‌ಗಳನ್ನು ತುಂಬಿಕೊಳ್ಳುತ್ತವೆ. ಕಾನೂನೇ ಬೇರೆ, ಜೀವನವೇ ಬೇರೆ. ಕಾನೂನು ಓದಿ ಸಂಸಾರ ಮಾಡಲು ಆಗುವುದಿಲ್ಲ. ಆದ್ದರಿಂದ ಆದೇಶಗಳು ಏನೇ ಇದ್ದರೂ ಅದು ದುರುಪಯೋಗ ಆಗದಂತೆ ನೋಡಿಕೊಳ್ಳಬೇಕು.
- ರಾಣಿ ನಾಗರಾಜ, ಅಧ್ಯಕ್ಷೆ, ಕರ್ನಾಟಕ ಅತ್ತೆಯವರ ಸಂಘ

ಅತ್ತೆಯರು ನಿರಾಳ

ನನ್ನ ಸೊಸೆ ನನಗೆ ಕೊಟ್ಟ ಹಿಂಸೆ ಅಷ್ಟಿಷ್ಟಲ್ಲ.  ನಾನು ಅವಳ ವಿರುದ್ಧ ಕೌಟುಂಬಿಕ ದೌರ್ಜನ್ಯ ತಡೆ ಕಾಯ್ದೆಯಡಿ ಕೇಸು ಹಾಕಿದಾಗ, ಮಹಿಳೆ ವಿರುದ್ಧ ಕೇಸು ಹಾಕುವಂತಿಲ್ಲ ಎಂದು ಮ್ಯಾಜಿಸ್ಟ್ರೇಟ್‌ ಕೋರ್ಟ್‌ ಹೇಳಿಬಿಟ್ಟಿತು. ಈಗ ತುಂಬಾ ವಿಚಾರಣೆ ನಂತರ ಸೊಸೆಗೆ ನೋಟಿಸ್‌ ಜಾರಿ ಮಾಡಿದೆ. ಕೇಸು ಮುಂದುವರಿಯುವ ಬಗ್ಗೆ ಸಂದೇಹವಿತ್ತು. ನನ್ನಂತೆ  ಇಳಿವಯಸ್ಸಿನಲ್ಲಿರುವ ಎಷ್ಟೋ ಅತ್ತೆಯಂದಿರಿಗೆ ಈಗಿನ ಆದೇಶದಿಂದ ನಿರಾಳವಾಗಿದೆ.
- ರತ್ನಮ್ಮ, ಕೌಟುಂಬಿಕ ದೌರ್ಜನ್ಯದ ಸಂತ್ರಸ್ತೆ
ಅಭಿಪ್ರಾಯ ಸಂಗ್ರಹ: ವಿದ್ಯಾಶ್ರೀ ಎಸ್‌., ಸುಚೇತನಾ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT