ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಮ್ವೇ

ಕಥೆ
Last Updated 15 ಅಕ್ಟೋಬರ್ 2016, 19:30 IST
ಅಕ್ಷರ ಗಾತ್ರ

‘ಇಲ್ಲಿ ಕಣ್ಣಿಂದ ಕಣ್ಣಿಗೆ ಬೆಳಕನ್ನು ದಾಟಿಸುವುದು ಎಷ್ಟೊಂದು ಕಷ್ಟ’ 
–ಅರೀಫ್ ರಾಜ

ಎರಡು ದಿನಗಳಿಂದ ನೆಟ್‌ವರ್ಕ್‌ ಸಮಸ್ಯೆಯಿಂದ ನನ್ನ ಮೊಬೈಲ್ ಕೆಲಸ ಮಾಡುತ್ತಿರಲಿಲ್ಲ. ಮಾಡಿದ ಕರೆಗಳು ಕನೆಕ್ಟ್ ಆಗದಿರುವುದು, ಮೆಸೇಜುಗಳು ತಲುಪದಿರುವುದು, ಇ ಮೇಲುಗಳು ಲೋಡ್ ಆಗದಿರುವುದು, ಹೀಗೆ. ಕಸ್ಟಮರ್ ಕೇರಿಗೆ ಕರೆ ಮಾಡಿ ವಿಚಾರಿಸಿದೆ.

‘Thank you for calling Airtel Customer Care sir. How may I help you?”
‘ನೋಡಿ, ಎರಡು ದಿನದಿಂದ ಒಂದೂ ಕಾಲ್ ಅಥವ ಎಸ್ಸೆಮೆಸ್ ಮಾಡಕ್ಕಾಗ್ತಾಯಿಲ್ಲ. ಇಂಟರ್ನೆಟ್ ಡಾಟಾ ಕೂಡ ಕೆಲಸ ಮಾಡ್ತಿಲ್ಲ. ಇ ಮೇಲ್ ಚೆಕ್ ಮಾಡಕ್ಕಾಗ್ತಾಯಿಲ್ಲ. ಹೀಗಾದ್ರೆ ನಮ್ಮ ಕೆಲಸಕ್ಕೆ ತೊಂದರೆ ಅಗತ್ತೆ. ಫೋನ್ ಇದ್ದೂ ಇಲ್ಲದಂತಾಗಿದೆ. ಬೇಗ ಈ ಪ್ರಾಬ್ಲಮ್ ಅಟೆಂಡ್ ಮಾಡಿ’
‘ಸರ್, ಇಡೀ ಬೆಂಗಳೂರಿನಲ್ಲಿ ಮೇಜರ್ ನೆಟ್‌ವರ್ಕ್‌ ಬ್ರೇಕ್ ಡೌನ್ ಆಗಿದೆ. We are working 24/7 to restore connectivity as soon as possible. ನಮಗೆ ಬೆಂಗಳೂರಿನ ಎಲ್ಲಾ ಕಡೆಯಿಂದ ಕಂಪ್ಲೇಂಟ್ಸ್ ಬರ್ತಾಯಿದೆ. ಆದಷ್ಟು ಬೇಗ ಸರಿಮಾಡ್ತೀವಿ’.

ಡಿಸ್‌ ಕನೆಕ್ಟ್ ಮಾಡಿದ ಹತ್ತು ನಿಮಿಷಕ್ಕೆ ಮತ್ತೊಂದು ಕರೆ ಬಂತು. ‘How would you rate our service on a scale of 1 to 5, 1 being the least and 5 being the highest’. ತಕ್ಷಣ ಕಟ್ ಮಾಡಿದೆ.

ಎಂದಿನಂತೆ ಹತ್ತು ಗಂಟೆಗೆ ಮನೆಯಿಂದ ಹೊರಟು ಸಿಲ್ಕ್ ಬೋರ್ಡ್ ಸಿಗ್ನಲ್ ಹತ್ತಿರ ಟ್ರಾಫಿಕ್ಕಿನಲ್ಲಿ ಸಿಕ್ಕಿ ಹಾಕಿಕೊಳ್ಳುವುದು ಅಭ್ಯಾಸವಾಗಿಬಿಟ್ಟಿತ್ತು. ಇವತ್ತು ನಿಂತಿದ್ದಾಗ ಪಕ್ಕದಲ್ಲಿ ಎರಡು ಎಂಜಿನೀರಿಂಗ್ ಕಾಲೇಜ್ ವ್ಯಾನುಗಳು ಹಾಗು ಹಿಂದೆ ನಿರಂತರವಾಗಿ ಹಾರ್ನ್ ಚಚ್ಚುತಿದ್ದ ನಾಲ್ಕು ಆಟೋಗಳಿದ್ದವು. ನನ್ನ ಬಲಕ್ಕೆ ನೀಲಿ ಸ್ಕೂಟರ್‌ನಲ್ಲಿ ಬಂದು ನಿಂತವಳ ಪರ್ಫ್ಯೂಮ್ ವಾಸನೆ ಹೊಗೆಯ ಜೊತೆಗೆ ಸೇರಿಕೊಂಡಿತು. ಹೆಲ್ಮೆಟ್, ಕಪ್ಪು ಕನ್ನಡಕ, ಮಫ್ಲರ್ ಎಲ್ಲಾ ಸುತ್ತಿಕೊಂಡಿದ್ದರಿಂದ ನೋಡಲು ಪ್ರಯತ್ನಿಸಿದರೂ ಏನೂ ಕಾಣಲಿಲ್ಲ. ತುಟಿ ಹಾಗು ಕೈಕಾಲುಗಳು ಡಿಸೆಂಬರ್ ಚಳಿಗೆ ಒಡೆದು, ಉರಿಯುತ್ತಿತ್ತು.

ಎರಡು ತಿಂಗಳ ಹಿಂದೆ, ಈ ಸಮಯಕ್ಕೆ ವಾರಾಣಸಿಯ ಗಲ್ಲಿಗಳಲ್ಲಿ ಬೆವರು ಸುರಿಸುತ್ತ ನಡೆದಾಡುತ್ತಿದ್ದೆ. ಮಣಿಕರ್ಣಿಕಾ ಘಾಟಿನ ಕಣ್ಣು ಕುಕ್ಕುವ ಬೆಂಕಿಯ ಹೊಗೆ ಮತ್ತು ನಿರಂತರವಾಗಿ ಸುಟ್ಟು ಬೂದಿಯಾಗುತ್ತಿರುವ ದೇಹಗಳ ನೆನಪಾಯಿತು.

ಆಫೀಸು ತಲುಪಿದೆ. ನಾಲ್ಕು ಹೊಸ ಇ ಮೇಲುಗಳನ್ನು ಓದಿ, ತಕ್ಷಣ ಮುಗಿಸಬೇಕಾದ ಒಂದೆರಡು ಕೆಲಸಗಳನ್ನು ಮುಗಿಸಿ ಟೀ ಕುಡಿಯಲು ಹೊರಟೆ. ಲಾಬಿಯಲ್ಲಿದ್ದ ನ್ಯೂಸ್‌ ಪೇಪರ್ ತಿರುವಿ ಹಾಕುತ್ತಿದ್ದಾಗ ಒಂದು ಸಣ್ಣ ಜಾಹೀರಾತು ಕಂಡಿತು. ವಸುಂಧರ ತನ್ನ ಬ್ಯಾಂಡ್ ಜೊತೆಗೆ ವಿಂಡ್‌ಮಿಲ್ಸ್ ಪಬ್ಬಿನಲ್ಲಿ ನಾಳೆ ರಾತ್ರಿ ಹತ್ತು ಗಂಟೆಗೆ ಹಾಡಲಿರುವ ವಿವರವಿತ್ತು.

ಡೆಸ್ಕಿಗೆ ಹಿಂದಿರುಗಿ ಕಂಪನಿಯ ವೆಬ್‌ಸೈಟ್‌ ತೆರೆದೆ. ಒಂದು ತಿಂಗಳ ಹಿಂದೆ ನಮ್ಮ ಕಂಪನಿಗೆ ಹೊಸ ಸಿಇಓ ಬಂದ ಮೇಲೆ ಕೆಲವು ಬದಲಾವಣೆಗಳು ಆಗಿದ್ದವು. ಮುಂದೆಯೂ ಆಗುವ ಸೂಚನೆಗಳಿದ್ದವು. ಬಿಸಿನೆಸ್ ಮಾಡುವ ಶೈಲಿಯಲ್ಲಿ ಅಗ್ರೆಷನ್‍ ಬಹಳ ಮುಖ್ಯವೆಂದು ಹೊಸ ಸಿಇಓ ಪದೇ ಪದೇ ತನ್ನ ಭಾಷಣಗಳಲ್ಲಿ ಹೇಳುತ್ತಿದ್ದ. ತಾನು ಕಂಪನಿಗೆ ಬಂದ ಮೇಲೆ ಎಚ್‍ಆರ್ ಹಾಗು ಮಾರ್ಕೆಟಿಂಗ್ ವಿಭಾಗಗಳಲ್ಲಿ ಹೊಸ ಹೆಡ್‌ಗಳನ್ನು ನೇಮಕ ಮಾಡಿದ್ದ. ಹೀಗೆ ಹೊಸದಾಗಿ ಅಯ್ಕೆಯಾಗಿದ್ದ ಮಾರ್ಕೆಟಿಂಗ್ ಚೀಫ್ ‘ವೈ’ ಅವರನ್ನು ವಿಕ್ರಮ್ ಮಿಸ್ತ್ರೀ ಸಂದರ್ಶಿಸಿದ್ದ ವಿಡಿಯೊ ವೆಬ್‌ಸೈಟ್‌ನಲ್ಲಿ ಮುದ್ರಿಸಲಾಗಿತ್ತು.

ಮಿಸ್ತ್ರೀ ಕಮ್ಯೂನಿಕೇಶನ್ಸ್ ವಿಭಾಗದ ಮುಖ್ಯಸ್ಥ. ಬಹಳ ವರ್ಷಗಳಿಂದ ನಿಷ್ಠಾವಂತ ಕೆಲಸಗಾರನಾಗಿದ್ದು ಸೂಕ್ಷ್ಮವಾದ, ಒಳನೋಟಗಳುಳ್ಳ ಪ್ರಶ್ನೆಗಳನ್ನು ಕಂಪನಿಯ ಪ್ರತೀ ನಿರ್ಣಾಯಕ ಹಂತಗಳಲ್ಲಿ ಕೇಳುತ್ತಿದ್ದರಿಂದ ನಮ್ಮೆಲ್ಲರ ಸಾಕ್ಷಿ ಪ್ರಜ್ಞೆಯಂತಿದ್ದ. ಅವನು ನಡೆಸುತ್ತಿದ್ದ ಸಂದರ್ಶನಗಳನ್ನು ಹುಡುಕಿ ತಪ್ಪದೇ ನೋಡುತ್ತಿದ್ದೆ. ತಾನು ಹಾಕುತ್ತಿದ್ದ ಬೂದು ಬಣ್ಣದ ಬ್ಲೇಜರ್ ತನ್ನ ಸಾಲ್ಟ್ ಅಂಡ್ ಪೆಪ್ಪರ್ ಕೂದಲಿಗೆ ಹೊಂದಿಕೊಂಡು ಆಪ್ತವಾಗಿಯೂ, ಆಕರ್ಷಕವಾಗಿಯೂ ಕಾಣುತ್ತಿದ್ದ. ಜಾಹ್ನವಿ ಮತ್ತು ಮಾಧವ್‌ಗೆ ಸಂದರ್ಶನದ ಕೊಂಡಿಯನ್ನು ಕಳಿಸಿ ಕೂಡಲೇ ನೋಡಲು ಹೇಳಿದೆ.

ಮಧ್ಯಾಹ್ನ 12.30 ಗಂಟೆಗೆ ಮಯೂರ್‌ನನ್ನು ಭೇಟಿ ಮಾಡಿ ಅವನ ಡ್ಯಾನ್ಸ್ ಶೋನಲ್ಲಿ ನಾನು ತೆಗೆದ ಫೋಟೊಗಳನ್ನು ಕೊಡುವುದಾಗಿ ಹೇಳಿದ್ದು ನೆನಪಾಗಿ ಕೂಡಲೇ ಆಫೀಸ್ ಹಿಂಭಾಗದಲ್ಲಿದ್ದ ಕಾಫೀ ಡೇಗೆ ಧಾವಿಸಿದೆ. ಮಯೂರ್ ಆಗಲೆ ತಲುಪಿ ಕಾಫೀ ಡೇ ಮುಂದೆ ತನ್ನ ಸ್ಕೂಟರ್ ಮೇಲೆ ಕುಳಿತು ಮೋಬೈಲ್‌ನಲ್ಲಿ ಏನೋ ನೋಡುತಿದ್ದ. ರಸ್ತೆಯಲ್ಲಿ ವೆಹಿಕಲ್ಲುಗಳು ಒಂದೇ ಸಮನೆ ಹರಿದಾಡುತ್ತಿದ್ದರಿಂದ ದಾಟಲಾಗದೆ ಬಿಡುವಾಗಲೆಂದು ಆಫೀಸ್ ಗೇಟಿನ ಬಳಿಯೇ ಕಾಯುತ್ತಾ ಅವನನ್ನು ನೋಡುತ್ತಾ ನಿಂತೆ. ಉದ್ದ ಬಿಟ್ಟಿದ್ದ ಗುಂಗರು ಕೂದಲನ್ನು ಒಟ್ಟು ಮಾಡಿ ಪೋನಿಟೈಲ್ ಕಟ್ಟಿಕೊಂಡಿದ್ದ.

ತೆಳ್ಳನೆಯ ಮೈಕಟ್ಟು, ಕಣ್ಣಿಗೆ ಮುಖದ ಅವಿಭಾಜ್ಯ ಅಂಗದಂತಿದ್ದ ಕಪ್ಪು ಸನ್‌ಗ್ಲಾಸಸ್. ಮೈಕೇಲ್ ಜಾಕ್ಸನ್‌ನ ಪರಮ ಭಕ್ತನಾಗಿದ್ದ ಇವನು ಇ-ಸಿಟಿಯಲ್ಲಿ ಮಕ್ಕಳಿಗಾಗಿ ಒಂದು ಡ್ಯಾನ್ಸ್ ಸ್ಕೂಲ್ ತೆರೆದಿದ್ದ. ಕಳೆದ ವಾರ ನಡೆದ ಸ್ಕೂಲಿನ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಎಮ್.ಜೇ ಡ್ಯಾನ್ಸ್ ಮಾಡಿ ಎಲ್ಲರನ್ನು ಮೋಡಿ ಮಾಡಿದ್ದ. ಆಫೀಸು ಕೆಲಸದ ಜೊತೆಜೊತೆಗೇ ಡ್ಯಾನ್ಸ್ ಸ್ಕೂಲಿನ ಚಟುವಟಿಕೆಗಳನ್ನು ನಿಭಾಯಿಸುತ್ತಿದ್ದ ಇವನು ಈಗ ಯಾವುದೋ ಯೋಚನೆಯಲ್ಲಿ ಮುಳುಗಿರುವಂತಿದ್ದ.

ಐದು ನಿಮಿಷದ ನಂತರ ತನ್ನ ಮೊಬೈಲನ್ನು ಜೇಬಿನಲ್ಲಿಟ್ಟುಕೊಂಡು ರಸ್ತೆಯನ್ನು ನೋಡಿದಾಗ ನಿರಂತರವಾಗಿ ಚಲಿಸುತ್ತಿದ್ದ ವಾಹನಗಳ ಗದ್ದಲದ ನಡುವೆಯೇ ನಮ್ಮ ಕಣ್ಣುಗಳು ಒಂದು ಕ್ಷಣ ತೀಕ್ಷ್ಣವಾಗಿ ಸಂಧಿಸಿದವು. ನಾನು ಅವನನ್ನು ಗಮನಿಸುತ್ತಾ ನಿಂತದ್ದು ಅವನಿಗೆ ಗೊತ್ತಾಗಿ ಮುಜುಗರವಾದಂತೆ ತೋರಿತು.

‘ಸರ್!! ಬಂದ್ರಾ! ಮರೆತು ಬಿಟ್ಟರೇನೋ ಅನ್ಕೊಂಡಿದ್ದೆ. ಫೋಟೊಸ್ ಚೆನ್ನಾಗಿ ಬಂದಿದ್ಯಾ? ನೋಡೋಕ್ಕೆ ಒಂದು ವಾರದಿಂದ ಕಾಯ್ತಿದ್ದೆ!’. ನನ್ನ ಕೈಯಲ್ಲಿದ್ದ ಸಿಡಿ ತೆಗೆದುಕೊಂಡು ನನ್ನನ್ನು ನೋಡಿದ.

‘ಎಷ್ಟು ವರ್ಷದಿಂದ ಇಲ್ಲಿ ಕೆಲ್ಸಾ ಮಾಡ್ತಿದ್ದೀರಾ? ಎಷ್ಟು ವಯಸ್ಸು ನಿಮ್ಗೆ?’
‘28; 6 ವರ್ಷ ಆಯ್ತು’
‘ನಂಗೆ 35 ಸರ್! US ನಲ್ಲಿ ಕನ್ಸಲ್ಟೆಂಟ್ ಕೆಲಸಕ್ಕೆ ಹೋಗ್ಬೇಕು. ಅವಕಾಶಕ್ಕೆ ಕಾಯ್ತಿದ್ದೀನಿ. ಇಲ್ಲಿ ಇದ್ರೆ ಏನೂ ಬಗೆಹರಿಯಲ್ಲ’, ಸನ್‌ಗ್ಲಾಸಸ್ ತೆಗೆದು ಜೇಬಿನಲ್ಲಿಟ್ಟುಕೊಂಡ.

‘ಇನ್ನೊಂದು ವಿಷಯ ಸರ್. ಎರಡು ತಿಂಗಳ ಹಿಂದೆ ನನ್ನ ಗರ್ಲ್‌ಫ್ರೆಂಡ್ ಏನೋ ಹಾರೋಸ್ಕೋಪ್ ಸಮಸ್ಯೆ ಅಂತ ಒಂದೇ ಕ್ಷಣದಲ್ಲಿ ಕೈಕೊಟ್ಬಿಟ್ಲು. ಏನ್ ಮಾಡೋದು ಸಾರ್ ಹೀಗಾದ್ರೆ? ಎರಡು ತಿಂಗಳು ಸತ್ ಸತ್ ಬದುಕಿದೆ’.

ಇದ್ದಕಿದ್ದಂತೆ ಖಾಸಗಿ ವಿಷಯ ತೋಡಿಕೊಂಡಿದ್ದರಿಂದ ತನಗೇ ಸ್ವಲ್ಪ ಸಂಕೋಚವಾಗಿ ನನ್ನ ಎಡಗೈಯನ್ನು ಬಿಗಿಯಾಗಿ ಹಿಡಿದು, ಸಣ್ಣ ಅಸಹಾಯಕ ನಗು ಬೀರಿ,‘ಬರ್ತಿನಿ ಸರ್, ಥ್ಯಾಂಕ್ಸ್ ಫಾರ್ ದಿ ಫೋಟೊಸ್’, ಎಂದು ಇ-ಸಿಟಿ ಫೇಸ್ ಎರಡು ಕಡೆ ಗಾಡಿ ತಿರುಗಿಸಿ ಹೊರಟೇ ಬಿಟ್ಟ.

ಆಫೀಸಿನಿಂದ ಹೊರಡುವಷ್ಟರಲ್ಲಿ ರಾತ್ರಿ ಹತ್ತು ಗಂಟೆಯಾಗಿತ್ತು. ಇ-ಸಿಟಿಯಿಂದ ಹೊರಬಂದು ಹೊಸೂರ್ ರಸ್ತೆ ಸೇರಿದೆ. ಹೆದ್ದಾರಿಯ ಬದಿಯಲ್ಲಿ ದೊಡ್ಡದೊಂದು ಬಿಲ್‌ಬೋರ್ಡ್ ಮೇಲೆ ಒಂಟಿ ಕೆಲಸಗಾರನೊಬ್ಬ, ಯಾವುದೇ ಹಗ್ಗಗಳ ಸಹಾಯವಿಲ್ಲದೆ ಹತ್ತಿ, ಒಂದು ಪೋಸ್ಟರ್ ನೇತುಹಾಕಲು ಯತ್ನಿಸುತಿದ್ದ. ಬಿಲ್‌ಬೋರ್ಡ್‌ನ ತುದಿಯಿಂದ ಕೆಂಪು, ಹಳದಿ, ನೀಲಿ, ಕಪ್ಪು ಬಣ್ಣದ ಹತ್ತಾರು ಚಿಂದಿ ಬಟ್ಟೆಗಳು ಜೋತು ಬಿದ್ದಿದ್ದವು. ಕೆಲವರು ರಸ್ತೆ ಬದಿಯಲ್ಲಿ ಬೈಕ್ ನಿಲ್ಲಿಸಿ ಕೆಲಸಗಾರನ ಆ ಭಯಾನಕ ಸರ್ಕಸ್‌ ಅನ್ನು ನೋಡುತ್ತಾ ನಿಂತಿದ್ದರು. ಅವನು ಹಿಡಿದಿದ್ದು ಐಸಿಐಸಿಐ ಬ್ಯಾಂಕಿನ ಪೋಸ್ಟರ್.

ಪೋಸ್ಟರಿನಲ್ಲಿ ಒಂದು ಹುಡುಗ ಹುಡುಗಿಯ ಚಿತ್ರದ ತುಣುಕು ಕಂಡಿತು. ಹುಡುಗ ಹುಡುಗಿ ಒಂದು ಕೈಯನ್ನು ಪರಸ್ಪರ ಹಿಡಿದು ಮತ್ತೊಂದು ಕೈಯಲ್ಲಿ ಹಿಡಿದಿದ್ದ ತಮ್ಮ ಸ್ಮಾರ್ಟ್ ಫೋನಿನಲ್ಲಿ ಏನನ್ನೋ ನೊಡುತ್ತಾ ನಗುತ್ತಿದ್ದ ಹಾಗೆ ಕಂಡಿತು. ಈ ಪೋಸ್ಟರ್ ಕೆಲಸಗಾರನ ಒಂದು ಕೈಯಿಂದ ಇನ್ನೊಂದು ಕೈಗೆ ಬದಲಾವಣೆಯಾಗುತ್ತಿದ್ದದನ್ನು ನಾನೂ ನೋಡುತ್ತಾ ನಿಂತೆ.

ರಸ್ತೆಯಲ್ಲಿ ಬರೀ ಟ್ರಕ್ಕುಗಳು ರಭಸದಿಂದ ಹರಿದಾಡುತ್ತಿದ್ದವು. ಅಲ್ಲೊಂದು ಇಲ್ಲೊಂದು ಬೈಕುಗಳು. ಇಬ್ಬರು ಹುಡುಗರು ದೂರದಲ್ಲಿದ್ದ ಟ್ರಾಫಿಕ್‌ ಪೊಲೀಸ್‌ ಕಣ್ಣು ತಪ್ಪಿಸಿ, ಹೆದ್ದಾರಿಯ ನಡುವಿನ ಡಿವೈಡರ್ ಮೇಲೆ ನಿಲ್ಲಿಸಿದ್ದ ದೊಡ್ಡ ಬ್ಯಾರಿಕೇಡ್ ಮೇಲೆ ಹತ್ತಿ, ಮೇಲಿಂದ ಧುಮುಕಿ ರಸ್ತೆಯನ್ನು ದಾಟಿದರು. ಪಕ್ಕದಲ್ಲಿದ್ದ ಆಟೋ ಚಾಲಕ ಹುಡುಗರ ಸಾಹಸವನ್ನು ನೋಡಿ ಅವಕ್ಕಾಗಿ ಬೈಯಲಾರಂಭಿಸಿದ.

ಜೆಪಿ ನಗರದ 27ನೇ ಕ್ರಾಸಿನಲ್ಲಿದ್ದ ವಿದ್ಯುತ್ ಅಪಾರ್ಟ್‌ಮೆಂಟ್‌ ತಲುಪಿದೆ. ವಿಸಿಟರ್ಸ್ ಪುಸ್ತಕದಲ್ಲಿ ಸಹಿ ಹಾಕುತ್ತಿರುವಾಗ ನನಗಿಂತ ಮುಂಚೆ ಅದೇ ಫ್ಲಾಟಿಗೆ ಬಂದಿದ್ದ ಐದಾರು ಜನ ಸಹಿ ಹಾಕಿರುವುದು ಕಂಡಿತು. ಐದನೇ ಫ್ಲೋರಿನಲ್ಲಿದ್ದ ಫ್ಲಾಟಿಗೆ ಹೋಗಿ ಬೆಲ್ ಮಾಡಿದೆ. ನಿಯತಿ ಬಾಗಿಲು ತೆಗೆದು ‘Hey come on in, I am sorry there’s a bit of smoke, hope you don’t have much of trouble’, ಎಂದು ಹೇಳಿ ಮಿಂಚಿನಂತೆ ಒಳಗೆ ಹೋಗಿ ಕಾಣೆಯಾದಳು.

ನನಗೆ ಅಲ್ಲಿ ಅವಳೊಬ್ಬಳೇ ಪರಿಚಯವಿದ್ದದ್ದು. ಸುಮಾರು ಏಳೆಂಟು ಜನರಿದ್ದರು. ನೆಲದ ಮೇಲೆ ಕಾರ್ಪೆಟ್ ಹಾಸಿದ್ದ ವಿಶಾಲವಾದ ಲಿವಿಂಗ್ ರೂಮ್. ಮಧ್ಯದಲ್ಲಿ ಒಂದು ಅಗಲವಾದ ಟ್ರೇಯೊಳಗೆ ಕಿತ್ತಲೆ ಹಣ್ಣುಗಳಿದ್ದವು. ಕೆಲವರು ಹಣ್ಣು ತಿನ್ನುತ್ತ ಪಿಸುಗುಡುತ್ತಿದ್ದರು. ನಾನು ಒಂದು ಖಾಲಿ ಜಾಗವನ್ನು ನೋಡಿ ಗೋಡೆಗೆ ಒರಗಿ ಕೂತೆ. ಟ್ಯೂಬ್‌ಲೈಟ್‌ ಆರಿಸಿತ್ತು. ಹಳದಿ ಬಣ್ಣದ ಬಲ್ಬ್ ಹಾಕಿದ್ದರಿಂದ ರೂಮಿಗೆ ಮಂದ ಹೊಳಪು ಬಂದಿತ್ತು. ಒಂದು ತುದಿಯಲ್ಲಿ ತುಳಸಿ ಗಿಡದ ಪಾಟ್ ಇತ್ತು. ಪಾಟಿನ ಪಕ್ಕದಲ್ಲಿ ಚಿಕ್ಕದೊಂದು ಹಣತೆ ಉರಿಯುತ್ತಿತ್ತು.

‘So we are here to try out something called Contact Improvisation.. anybody have an idea what that is?’ ಎಂದು ನಿಧಾನವಾಗಿ ನಿಯತಿ ಮ್ಯೂಸಿಕ್ ಸಿಸ್ಟೆಮ್ಮಿನ ವಾಲ್ಯೂಮ್ ಕಡಿಮೆ ಮಾಡಿದಳು. ಒಂದು ಸಣ್ಣ ಮೌನ ಆವರಿಸಿತು. ‘Hey just tell them it’s not going to be some group orgy happening here!’ ಎಂದು ಮತ್ತೊಬ್ಬ ಮಾತು ಸೇರಿಸಿದ. ಇನ್ನಷ್ಟು ಮುಜುಗರದ ಮೌನ ಮತ್ತು ಅಲ್ಲಿಲ್ಲಿ ಕೇಳಿಸಿದ ಪಿಸುಮಾತು. ಕುತೂಹಲ ಹೆಚ್ಚಿತು. ‘So contact impro is basically to touch your dance partner. As simple as that. Experience touch in its barest form. Let’s begin by giving each other a hug’.

ಎಲ್ಲರೂ ಎದ್ದು ನಿಂತು ನಗುತ್ತಾ ಪಕ್ಕದಲ್ಲಿದ್ದವರನ್ನು ಅಪ್ಪಿಕೊಂಡೆವು. ದೃಷ್ಟಿಯಲ್ಲಿ ಅಸ್ಥಿರತೆ, ಸಂಕೋಚವಿತ್ತು. ಮ್ಯೂಸಿಕ್ ಸಿಸ್ಟೆಮ್ಮಿನ ವಾಲ್ಯೂಮ್ ಕೊಂಚ ಏರಿಸಿ ನಿಯತಿ ಮತ್ತು ಜೋಸೆಫ್ ಮುಂದೆ ಬಂದು ಡ್ಯಾನ್ಸ್ ಮಾಡಲು ಶುರುಮಾಡಿದರು. ನಿಯತಿ ಹಲವು ವರ್ಷಗಳಿಂದ ಡ್ಯಾನ್ಸ್ ಹಾಗು ಕಲರಿಪಾಯಟ್ಟು ಎಂಬ ಸಮರ ಕಲೆಯನ್ನು ಕಲಿಯುತಿದದ್ದು ನನಗೆ ತಿಳಿದಿತ್ತಾದರೂ ಹತ್ತಿರದಿಂದ ಎಂದೂ ನೋಡಿರಲಿಲ್ಲ. ತರಬೇತಿ ಪಡೆದು ಪಳಗಿದ ಅದ್ಭುತ ದೇಹಗಳು.

ಬಾಗಿ ಬಳುಕಿ ಯಾವುದೋ ಸೋಜಿಗದ ಮಾತನಾಡುವ ದೇಹಗಳು. ಒಂದು ಕ್ಷಣ ಪರಸ್ಪರ ಹೆಣೆದುಕೊಂಡು ಮರುಘಳಿಗೆಯಲ್ಲೇ ಬಿಡಿಸಿಕೊಳ್ಳುತ್ತಿದ್ದ ಸ್ಫುಟವಾದ ದೇಹಗಳು. ಕೆಲವು ನಿಮಿಷಗಳ ನಂತರ ಇನ್ನಿಬ್ಬರು ಹೆಜ್ಜೆ ಹಾಕಲು ಶುರುಮಾಡಿದರು. ಡ್ಯಾನ್ಸ್ ಮಾಡುತ್ತಿದ್ದವರ ಸಂಖ್ಯೆ ಹೆಚ್ಚಾದಂತೆ ವಾತಾವರಣ ಹಗುರಾದಂತೆನಿಸಿತು. ಒಬ್ಬರನ್ನೊಬ್ಬರು ಮುಟ್ಟುತ್ತಿದ್ದರು.

ನಿಧಾನವಾಗಿ ಅವರೊಂದಿಗೆ ಸೇರಿಕೊಂಡೆ. ಕೈಗಳನ್ನು ಚಾಚಿ ಮೆಲ್ಲಗೆ ಸುತ್ತುತ್ತಿರುವಾಗ ಮತ್ತೊಬ್ಬರ ಮೈಕೈಗಳು ಅಕಸ್ಮಾತಾಗಿ ತಗುಲುತ್ತಿದ್ದವು. ಕಣ್ಣು ಮುಚ್ಚಿ ಸ್ವಲ್ಪ ಹೊತ್ತು ನಿಧಾನವಾಗಿ ಕುಣಿದಾಡಿದ ಮೇಲೆ ನನ್ನ ದೇಹ ತನ್ನದೇ ಲಯ ಕಂಡುಕೊಂಡಂತಿತ್ತು. ಅಕಸ್ಮಾತಾಗಿ ಆಗುತ್ತಿದ್ದ ಮತ್ತೊಬ್ಬರ ದೇಹದ ಸ್ಪರ್ಶಕ್ಕೆ ನನ್ನ ಕೈಗಳು ಕ್ರಮೇಣವಾಗಿ ಪ್ರತಿಕ್ರಿಯಿಸತೊಡಗಿದವು. ಒಂದು ಮೂಲೆಯಲ್ಲಿ ನಿಂತು ಮುಜುಗರದಿಂದ ಮೈಕೈ ಆಡಿಸುತ್ತಿದ್ದವನು, ಈಗ ರೂಮಿನ ಅರ್ಧ ಭಾಗವನ್ನು ನನ್ನದಾಗಿಸಿಕೊಂಡಿದ್ದೆ.

ಪದೇ ಪದೇ ತಗುಲುತ್ತಿದ್ದ ಒಬ್ಬಳ ಕೈ, ಭುಜಗಳು ನನ್ನ ಜೊತೆಗೇ ನಡೆದಾಡುತ್ತಿರುವಂತೆ ಭಾಸವಾಯಿತು. ಸ್ವಲ್ಪ ಹೊತ್ತಿನ ನಂತರ ಒಮ್ಮೆ ಕಣ್ಣು ತೆರೆದೆ. ಅವಳು ತಿಳಿ ಹಳದಿ ಬಣ್ಣದ ಸಲ್ವಾರ್ ಹಾಕಿದ್ದಳು. ಬೆವರಿನಿಂದ ಕೂದಲೆಳೆಗಳು ಹಣೆಗೆ ಅಂಟಿದ್ದವು. ಮೈಬಣ್ಣ ಕಪ್ಪು. ಒಂದು ಕ್ಷಣವೂ ಕಣ್ಣು ಬಿಡದೆ ಮೈಮರೆತಿದ್ದಳು. ಅವಳ ಎಡಭುಜವನ್ನು ಮೆಲ್ಲಗೆ ಹಿಡಿದೆ. ಅವಳು ಆಗಲು ಕಣ್ಣು ತೆರೆಯಲಿಲ್ಲ, ಆದರೆ ಪ್ರತಿಕ್ರಿಯಿಸಿದಳು.

ಕ್ರಮೇಣ ನನ್ನ ಹಿಡಿತ ಇನ್ನೂ ಬಿಗಿಯಾಯಿತು. ಸೊಂಟವನ್ನು ಹಿಡಿದು ಹತ್ತಿರಕ್ಕೆಳೆದೆ. ಅವಳು ಹತ್ತಿರಕ್ಕೆ ಬಂದು ತನ್ನೆರಡೂ ಕೈಗಳನ್ನು ಚಾಚಿ ನನ್ನ ಭುಜದ ಮೇಲಿರಿಸಿದಳು. ಮುಟ್ಟು! ಮುಟ್ಟು! ಎಂದು ನನಗೆ ನಾನೇ ಹೇಳಿಕೊಂಡೆ. ನನ್ನ ಎಲ್ಲಾ ಖಾಯಿಲೆಗಳಿಗೆ ಈ ಮುಟ್ಟಿನಲ್ಲೇ ನಿವಾರಣೆಯಿದೆ ಎನಿಸಿತು.

ಇಷ್ಟು ಖಚಿತವಾಗಿ ನಾನು ಯಾರನ್ನೂ ಮುಟ್ಟಿರಲಿಲ್ಲ. ಅವಳು ಇನ್ನೂ ಹತ್ತಿರ ಬಂದು, ಮೆಲ್ಲಗೆ ನನ್ನ ಕಿವಿಯಲ್ಲಿ ‘you smell of Yardley’ ಎಂದಳು. ನಾನು ಯಾಡ್ಲಿ ಡಿಯೋಡೆರೆಂಟ್ ಯಾವತ್ತೂ ಬಳಿಸಿರಲಿಲ್ಲ. ಸ್ಪರ್ಶದ ಯಾವುದೋ ಅಲೌಕಿಕ ತಾಣದಲ್ಲಿ ಕಳೆದು ಹೋಗಿದ್ದ ನನಗೆ ಅವಳು ಯಾಕೆ ಹಾಗೆಂದಳು ಅಂತ ಯೋಚಿಸಲಿಕ್ಕಾಗಲೀ ಅಥವಾ ಉತ್ತರಿಸಲಿಕ್ಕಾಗಲೀ ವ್ಯವಧಾನವಿರಲಿಲ್ಲ. ನಕ್ಕು ಸುಮ್ಮನಾದೆ.

ಹೀಗೆ ಅವಳ ಜೊತೆಗೆ ಕುಣಿಯುತ್ತಾ ಸುಮಾರು ಮುಕ್ಕಾಲು ಗಂಟೆಯೇ ಆಯಿತು. ಇತರರೂ ತಮ್ಮ ತಮ್ಮಲ್ಲೇ ಮಗ್ನರಾಗಿದ್ದರು. ನಾವಿಬ್ಬರು ಬಾಲ್ಕನಿಗೆ ಹೋದೆವು. ಅಲ್ಲಿನ ತಣ್ಣನೆ ಗಾಳಿ, ಮೈಯ ಬಿಸಿ, ಕತ್ತಲು ಮತ್ತು ಏಕಾಂತ ನನ್ನನ್ನು ಪರವಶಗೊಳಿಸಿತು. ಅವಳ ತುಟಿಗಳನ್ನು ದೀರ್ಘವಾಗಿ ಚುಂಬಿಸಿದೆ. ಅವಳು ನಾಚಿ ಹೆದರಿದಳು. ನಾವು ನೆಲಕ್ಕುರುಳಿ ಅಪ್ಪಿಕೊಂಡು ಮುದ್ದಿಸತೊಡಗಿದೆವು. ಕೆಂಡದಂತೆ ಸುಡುತ್ತಿದ್ದ ನಮ್ಮ ದೇಹಗಳು ಪರಸ್ಪರ ತಣಿಸಿಕೊಂಡು ತಂಪಾದ ಮೇಲೆ ಆಯಾಸವಾಗಿ ಅಲ್ಲೇ ಮಲಗಿ ರಸ್ತೆಯನ್ನು ನೋಡುತ್ತಿದ್ದೆವು. ಅಲ್ಲೊಂದು ಇಲ್ಲೊಂದು ಕಾರುಗಳು ಕಂಡವು. ಅಪಾರ್ಟ್‌ಮೆಂಟಿನನ ವಾಚ್‌ಮನ್ ಗೇಟಿನ ಬಳಿ ನಡೆದಾಡುತ್ತಿದ್ದ. ಅವಳ ಹೆಸರು ನನಗೆ ಇನ್ನೂ ಗೊತ್ತಿರಲಿಲ್ಲ. ಕೇಳಲಿಕ್ಕೂ ತೋಚಲಿಲ್ಲ. ಬದಲಾಗಿ ‘ನಿನ್ನ ಊರು ಯಾವುದು?’ ಎಂದು ಕೇಳಿದೆ.

‘ಪೆರುಂದುರೈ..’
‘ಎಲ್ಲಿದೆ ಅದು?’
‘ತಮಿಳುನಾಡಿನ ಈರೋಡು ಜಿಲ್ಲೆಯ ಸಣ್ಣ ಊರು’
ಈರೋಡಿನ ಪರಿಚಯ ನನಗಿತ್ತು. ನನ್ನ ಹಲವಾರು ಆಫೀಸ್ ಗೆಳೆಯರು ಈರೋಡಿನವರಾಗಿದ್ದರು. ಆದರೆ ಪೆರುಂದುರೈ ಹೆಸರನ್ನು ಕೇಳಿರಲಿಲ್ಲ.
‘ಬೆಂಗಳೂರು ಹೇಗಿದೆ?’
‘ವಿಚಿತ್ರವಾಗಿದೆ..’
ನಮ್ಮ ನಡುವಿನ ಮೌನ ಅಭದ್ರವಾಗಿತ್ತು.

‘ನಾನು ನನ್ನ ಊರನ್ನು ಬಿಟ್ಟು ಹೊರಗೆ ಬಂದಿರುವುದು ಇದೇ ಮೊದಲು. ಇದು ನನಗೆ ಬಹಳ ಹೊಸತು. ವಾರಕ್ಕೆ ಎರಡು ದಿನ ಸಂಜೆ ಐದರಿಂದ ಏಳೂವರೆಗೆ ಕೌನ್ಸಿಲಿಂಗ್‌ಗೆ ಹೋಗುತ್ತೇನೆ’.

ಅವಳನ್ನು ಹತ್ತಿರದಿಂದ ಮತ್ತೊಮ್ಮೆ ದಿಟ್ಟಿಸಿ ನೋಡಿದೆ. ಅವಳ ಆಳವಾದ ಕಡುಗಪ್ಪು ಕಣ್ಣುಗಳಲ್ಲಿ ಪ್ರಶ್ನೆಗಳಿದ್ದವು. ಬಾಲ್ಕನಿಯಿಂದ ಒಳಗೆ ಬಂದೆವು. ಡ್ಯಾನ್ಸ್ ಮಾಡುತ್ತಿದ್ದವರ ಗುಂಪು ಚದುರಿತ್ತು.

ನಿಯತಿ ಮೋಬೈಲ್‌ನಲ್ಲಿ ಯಾರ ಜೊತೆಗೊ ಮಾತಾಡುತ್ತಿದ್ದಳು. ಜೋಸೆಫ್ ಮೆಲ್ಲಗೆ ಗಿಟಾರ್ ನುಡಿಸುತ್ತಿದ್ದ. ಇಬ್ಬರು ಅಲ್ಲೆ ನೆಲದ ಮೇಲೆ ಕೂತೆವು. ಪಕ್ಕದಲ್ಲಿ ಸುಸ್ತಾಗಿ ಮಲಗಿದ್ದ ಹುಡುಗ ಗೊರಕೆ ಹೊಡೆಯುತ್ತಿದ್ದ. ದೀರ್ಘವಾದ ನಿಧಾನಗತಿಯ, ಸಮಾಧಾನವಾದ ಉಸಿರಿನ ಸದ್ದು ಇಡೀ ಕೋಣೆಯನ್ನು ತುಂಬಿಕೊಂಡಿತು. ಅವಳು ತನ್ನ ಬೆರಳುಗಳನ್ನು ನನ್ನ ಅಂಗೈಯೊಳಗೆ ಬಿಗಿಯಾಗಿ ಸೇರಿಸಿದಳು. ‘ಯಾರಾದರೂ ಗೊರಕೆ ಹೊಡೆಯುತ್ತಿದ್ದರೆ ನಿರಾಳವಾಗುತ್ತದೆ. ನನ್ನ ಮನೆಯ ನೆನಪಾಗುತ್ತದೆ. ‘It’s reassuring’ ಎಂದು ಪಿಸುಗುಟ್ಟಿದಳು. ಹಾಗೆಯೇ ಗೋಡೆಗೆ ಒರಗಿದೆವು. ಯಾವ ಗಳಿಗೆಯಲ್ಲಿ ನಿದ್ದೆಗೆ ಜಾರಿದೆನೆಂದು ತಿಳಿಯಲೇ ಇಲ್ಲ.

ಕಣ್ಣು ಬಿಟ್ಟಾಗ ಕಿಟಕಿಗೆ ಹಾಕಿದ್ದ ಹಸಿರು ಪರದೆಗಳ ನಡುವಿನಿಂದ ಹಿತವಾದ ಬೆಳಕು ಹರಿದು ಬರುತ್ತಿತ್ತು. ಅರೆ ಎಚ್ಚರದಲ್ಲಿ ಎದ್ದು ಕೂತೆ. ಅಕ್ಕ ಪಕ್ಕ ಯಾರೂ ಕಾಣಲಿಲ್ಲ. ಬಹಳ ವರ್ಷಗಳ ಹಿಂದೆ ಬೆಳಿಗ್ಗೆ ದಿನಕ್ಕಿಂತ ಬೇಗ ಎದ್ದುಬಿಟ್ಟರೆ ಅಮ್ಮ ಹಾಡುತ್ತಿದ್ದ ಹಾಡು ನೆನಪಾಯಿತು.

‘ಬೆಳಗೀನ ಜಾವಕ್ಕೆ ಮೂಡಲ್ ಕೆಂಪಾದಾಗ
ಸ್ವಾಮಿ ಮೂಡಿ ಬರುವಾಗ ಹಾಡಿ ಹಾಡಿ ಅಳತಾನ ಜೋ ಜೋ
ಬೆಳ್ಳಿಯಾ ಹಂಡೆಗೆ ಬಂಗಾರ ಗಿಂಡಿಯ ಹಾಕಿ
ತುಂಬಿ ತುಂಬಿ ಹೊಯ್ಯುವಾಗ ನಿಮಿನಿಮಿರಿ ಅಳತಾನ ಜೋ ಜೋ
ಬೆಳಗೀನ ಜಾವಕ್ಕೆ..’
ನೆಲದ ಮೇಲೆ ಕೈಯಾಡಿಸಿದಾಗ ಪಕ್ಕದಲ್ಲಿ ಒಂದು ಸಣ್ಣ ಚೀಟಿ ಸಿಕ್ಕಿತು. ಅದರಲ್ಲಿ ‘thanks for yesterday’ ಎಂದು ಪೆನ್ಸಿಲ್‌ನಲ್ಲಿ ಬರೆದ ಬಿಡಿ ಅಕ್ಷರಗಳಿದ್ದವು.

ಊಟಕ್ಕೆಂದು ಫುಡ್‌ಕೋರ್ಟ್‌ಗೆ ಜಾಹ್ನವಿ, ಮಾಧವ್ ಮತ್ತೆ ನಾನು ಹೋದೆವು. ನೆನ್ನೆ ನೋಡಿದ ಸಂದರ್ಶನದ ಪ್ರಸ್ತಾಪವಾಯಿತು. ಊಟ ಮಾಡುತ್ತಾ ಕಂಪನಿಯಲ್ಲಿ ಆಗಬಹುದಾದ ಬದಲಾವಣೆಗಳ ಬಗ್ಗೆ ಹರಟಿದೆವು. ‘ನೆನ್ನೆ ಇನ್ನೊಬ್ಬನ ಹತ್ರ ಇಲ್ಲಾ ಅನ್ನೊಕ್ಕಾಗದೆ ಸಿಕ್ಕಾಕೊಂಡ್ಬಿಟ್ಟೆ. ಒಂದು ಗಂಟೆ ಆಮ್ವೇ, ಆಮ್ವೇ ಅಂತ ತಲೆ ತಿಂದ್ಬಿಟ್ಟಾ. ಥೂ ಬಿಕ್ನಾಸಿಗಳು! ಆಮೇಲೆ ಯಾವ್ದೋ ಮುಖ್ಯವಾದ ಮೀಟಿಂಗ್ ಇದೇ ಹೇಳಿ ಆಚೆಗೆ ಬಂದೆ. ಕೊರುಸ್ಕೊಳಕ್ಕೆ ಇನ್ನೊಂದಿಬ್ರು ಇದ್ರು. ಸದ್ಯ ನಾನು ಬಚಾವ್ ಆದೆ’ ಎಂದು ಮಾಧವ್ ಹೇಳಿದ.

ಜಾಹ್ನವಿ ಮತ್ತು ಮಾಧವ್ ನನ್ನ ಆಫೀಸ್ ವಲಯದ ಹಳೆಯ ಸ್ನೇಹಿತರು. ನಾನು ಹಾಗು ಮಾಧವ್ ಒಟ್ಟಿಗೆ ಕಂಪನಿಗೆ ಸೇರಿದ್ದೆವು. ಜಾಹ್ನವಿ ನನಗಿಂತ ಮೂರು ವರ್ಷ ಸೀನಿಯರ್.

ನಾವು ಕೆಲಸಕ್ಕೆ ಸೇರಿದ ವರ್ಷದ ಗುಂಪಿನ ಶೇಕಡಾ 90ರಷ್ಟು ಹುಡುಗ ಹುಡುಗಿಯರು ಈಗ ಕಂಪನಿಯಲ್ಲಿ ಇರಲಿಲ್ಲ. ಎಲ್ಲರೂ ಕ್ರಮೇಣ ಕಂಪನಿ ಬಿಡುತ್ತಾ ಬೇರೆ ಕಂಪನಿಗಳಿಗೆ ಸೇರಿದ್ದರು. ಇನ್ನೂ ಕೆಲವರು ಹೊರದೇಶಗಳಿಗೆ ಹೋಗಿ ತಮ್ಮ ನೆಲೆ ಕಂಡುಕೊಂಡಿದ್ದರು. ಇಲ್ಲಿ ಬರುತ್ತಿದ್ದ ಸಂಬಳ ಕಡಿಮೆ ಎನ್ನುವುದು ಹಲವಾರು ಜನರು ಬಿಡಲು ಮುಖ್ಯ ಕಾರಣವಾಗಿತ್ತು. ಇನ್ನೂ ಕೆಲವರು ಕಂಪನಿ ಕೆಲಸದ ಜೊತೆಗೇ ವೈಯಕ್ತಿಕ ಬಿಸಿನೆಸ್‌ಗಳನ್ನು ಪ್ರಾರಂಭಿಸಿದ್ದರು. ಹೀಗೆ ಆಮ್ವೇ ಎನ್ನುವ ಸಂಸ್ಥೆಯ ಫ್ರಾಂಚೈಸೀ ಪಡೆದುಕೊಂಡಿದ್ದವರು ಕೆಲವರಿದ್ದರು.

ಆಮ್ವೇ ಎನ್ನುವುದು ವಿವಿಧ ಬಗೆಯ ಸೌಂದರ್ಯ, ಆರೋಗ್ಯ ಹಾಗು ಗೃಹ  ಉತ್ಪನ್ನಗಳನ್ನು ಮಾರುಕಟ್ಟೆಯ ಬೆಲೆಗಿಂತ ಕಡಿಮೆ ದರದಲ್ಲಿ ಮಾರಾಟ ಮಾಡುವ ಸಂಸ್ಥೆ. ಫ್ರಾಂಚೈಸಿ ಪಡೆದವರು ಆಮ್ವೇ ಪದಾರ್ಥಗಳನ್ನು ಕೊಳ್ಳುವುದು; ಸೋಪು, ಎನರ್ಜಿ ಡ್ರಿಂಕ್, ಟ್ಯಾಲ್ಕಮ್ ಪೌಡರ್, ಹೇರ್ ಆಯಿಲ್, ಪರ್ಫ್ಯೂಮ್ ಇತ್ಯಾದಿ. ನಂತರ ಅವುಗಳನ್ನು ಇನ್ನೊಬ್ಬರಿಗೆ ಪರಿಚಯಿಸುವುದು. ಪದಾರ್ಥಗಳನ್ನು ಅವರಿಗೆ ಮಾರಿ ಕಮಿಷನ್ ಪಡೆಯುವುದು. ಇನ್ನೊಬ್ಬರು ಇದೇ ರೀತಿ ಮತ್ತೊಬ್ಬರಿಗೆ ಮಾರುವುದು. ಹೀಗೆ ಕ್ರಮೇಣ ಗೆಳೆಯರ, ಪರಿಚಿತರ ವಲಯದಲ್ಲಿ ಆಮ್ವೇ ಚೈನ್ ಬೆಳೆಯುತ್ತಿದ್ದಂತೆ ಕಮಿಷನ್ ದುಡ್ಡು ಇಮ್ಮಡಿಸುವುದಷ್ಟೇ ಆಲ್ಲದೆ ಬೋನಸ್ ಹಣ ಕೂಡ ದೊರೆಯುವುದು.

ರಿಲೇಷನ್‌ಷಿಪ್‌ ಮಾರ್ಕೆಟಿಂಗ್ ಮಾಡೆಲ್ ಎಂದು ಕರೆಯಲ್ಪಡುತ್ತಿದ್ದ ಈ ವ್ಯಾಪಾರ ಮಾದರಿ ಬಹಳ ಶ್ರಮ ಹಾಗು ನಿಷ್ಠೆಯನ್ನು ಬೇಡಿದರೂ ಅಪಾರ ಲಾಭದಾಯಕವಾದ್ದರಿಂದ ಆಮ್ವೇ ಸೇರಿಕೊಂಡ ಕೇವಲ ಎರಡೇ ತಿಂಗಳುಗಳಲ್ಲಿ ತಮ್ಮ ದೆಸೆ ಬದಲಾದ ಅದ್ಭುತ ಪರಿಯನ್ನು ನನಗೆ ಕೆಲವರು ವರ್ಣಿಸಿದ್ದಿದೆ.

ಮಾಧವ್‌ ಪೇಚಾಟವನ್ನು ಕಂಡು ನಾವು ಮಜಾ ತೆಗೆದುಕೊಳ್ಳುತಿದ್ದಾಗ ಜಾಹ್ನವಿ ಇದ್ದಕ್ಕಿದ್ದಂತೆ ನೆನ್ನೆ ನೋಡಿದ ಸಂದರ್ಶನವನ್ನು ನಡೆಸುತ್ತಿದ್ದವನೂ ಆಮ್ವೇ ಕಾರ್ಡ್ ಹೋಲ್ಡರ್ ಎನ್ನುವುದನ್ನು ಹೇಳಿದಳು. ಅವಳು ಹೇಳಿದ್ದು ಮಿಸ್ತ್ರೀ ಬಗ್ಗೆ.

‘ಓಹ್ ಹೌದು, He is No. 1 Amway man! ಕಂತ್ರಿ ನನ್ ಮಗ!’ ಮಾಧವ್ ನಗುತ್ತಾ ಹೇಳಿದ. ‘ಇವನದ್ದು ಒಂದು ತಮಾಷೆಯ ವಿಡಿಯೊ ಇದೆ ತೋರಿಸ್ತೀನಿ ಇರಿ. ಹೋದ ವಾರ ವಾಟ್ಸ್‌ಆ್ಯಪಿನಲ್ಲಿ ಬಂದ ಫಾರ್ವರ್ಡ್’, ಎಂದು ಫೋನಿನಲ್ಲಿ ಹುಡುಕತೊಡಗಿದ. ನನಗೆ ಮಿಸ್ತ್ರೀಯ ಆಮ್ವೇ ಲಿಂಕಿನ ಬಗ್ಗೆ ತಿಳಿದಿರಲಿಲ್ಲ. ಊಟ ಮುಗಿಸಿ ಮೂರು ಜನ ಡೆಸ್ಕಿಗೆ ಹಿಂದಿರುಗುತ್ತಿದ್ದಾಗ  ‘ಸಿಕ್ತು! ಸಿಕ್ತು!’ ಎಂದು ನಮ್ಮಿಬ್ಬರನ್ನು ಅಲ್ಲೇ ನಿಲ್ಲಿಸಿ ಮಾಧವ್ ವಿಡಿಯೊ ತೋರಿಸಿದ.

ತೀರಾ ಕಡಿಮೆ ಬೆಳಕಿನಲ್ಲಿ ರೆಕಾರ್ಡ್ ಮಾಡಿದ ಲೋ ಕ್ವಾಲಿಟಿ ವಿಡಿಯೊ. ಕಾನ್ಫರೆನ್ಸ್ ರೂಮೊಂದರಲ್ಲಿ ಮಿಸ್ತ್ರೀ ನಾಲ್ಕು ಜನ ಯುವ ಕಾರ್ಮಿಕರ ಎದುರು ಮಾತನಾಡುತ್ತಿದ್ದ. ಅದೇ ಬಿಳಿಯ ಶರ್ಟು, ಕಂದು ಬಣ್ಣದ ಬ್ಲೇಜರ್. ‘Amway! This could be your game changer. Here we do the work of connecting people. We are a human chain!’ ಎಂದು ಉದ್ಗರಿಸುತ್ತಿದ್ದ. ಪವರ್ ಪಾಯಿಂಟ್ ಪ್ರೆಸೆಂಟೇಶನ್ ಮೂಲಕ ಕೆಲವು ಗ್ರಾಫುಗಳನ್ನು ತೊರಿಸಿ, ವಿವರಿಸುತ್ತಾ ತನ್ನದೇ ಆದ ಲಹರಿಯಲ್ಲಿದ್ದ. ನಾನು ಈವರೆಗೂ ಕಂಡೇ ಇರದಿದ್ದ ಮತ್ತೊಬ್ಬ ಮಿಸ್ತ್ರಿಯನ್ನು ಆ ವಿಡಿಯೊದಲ್ಲಿ ಕಂಡೆ. ಜಾಹ್ನವಿ, ಮಾಧವ್ ಮತ್ತೆ ಇವನ ಲೇವಡಿಯಲ್ಲಿ ತೊಡಗಿದರು.

ನಾನು ಇಷ್ಟ ಪಡುತ್ತಿದ್ದ ವ್ಯಕ್ತಿಯೊಬ್ಬ ಇವರ ನಡುವೆ ಇಷ್ಟು ಹಗುರಾಗಿದ್ದು ಬೇಸರವಾಯಿತು. ನಿಜವಾಗಿಯೂ ಆ ವಿಡಿಯೊದಲ್ಲಿ ಕಂಡದ್ದು ಮಿಸ್ತ್ರೀನ? ಅಥವ ಇದು ಯಾರದೋ ಕುಚೇಷ್ಟೆಯಾ? ಅವನಿಗೆ ಯಾಕೆ ಬೇಕಿತ್ತು ಈ ಲೆಕ್ಕಾಚಾರದ ಆಟ? ಒಂದು ಕ್ಷಣ, ಆ ವಿಡಿಯೊ ನಮ್ಮ ಕೈಗೆ ಸಿಗಬಾರದಿತ್ತೇನೋ ಅನಿಸಿತು.

ಅಂದು ರಾತ್ರಿ ಕನ್ನಡಿಯ ಮುಂದೆ ನಿಂತಾಗ ಕಣ್ಣಿನಡಿಯಲ್ಲಿನ ಕಪ್ಪು ಸುತ್ತುಗಳು ಎದ್ದು ಕಾಣುತ್ತಿದ್ದವು. ಆರು ವರ್ಷ ಯಾವ ಮಾಯದಲ್ಲಿ ಕಳೆಯಿತು ತಿಳಿಯಲೇ ಇಲ್ಲ. ಸ್ವಲ್ಪ ಹೊತ್ತು ಈಜಾಡಿ ಬರಲು ಮನಸಾಗಿ ಅಪಾರ್ಟ್‌ಮೆಂಟಿನನ ಬೇಸ್‌ಮೆಂಟಿನ ಈಜುಕೊಳದತ್ತ ನಡೆದೆ. ನೀಲಿ ಫ್ಲಡ್ ಲೈಟ್ ಬೆಳಕಿನಡಿಯಲ್ಲಿ ನಿಚ್ಚಳವಾಗಿ ಕಾಣುತ್ತಿದ್ದ ನೀರಿನಲ್ಲಿ ಧುಮುಕಿದೆ. ನೀರಿನೊಳಗೆ ಮುಳುಗಿ ಈಜುತ್ತಿರುವಾಗ ಮಿಸ್ತ್ರೀಯ ಜೊತೆಗಿನ ಮೊದಲ ಭೇಟಿ ನೆನಪಾಯಿತು.

ಕಂಪನಿ ಸೇರಿಕೊಂಡು ಇನ್ನೂ ಆರು ತಿಂಗಳೂ ಆಗಿರಲಿಲ್ಲ. ಮೈಸೂರಿನ ಟ್ರೈನಿಂಗ್ ದಿನಗಳು. ಸತತವಾಗಿ ಮೂರು ಪರೀಕ್ಷೆಗಳಲ್ಲಿ ನಪಾಸಾಗಿ ಸಂಪೂರ್ಣವಾಗಿ ಕುಗ್ಗಿಹೋಗಿದ್ದೆ. ಭವ್ಯವಾದ ಟ್ರೈನಿಂಗ್ ಸೆಂಟರಿನ ಆವರಣ ಸ್ಮಶಾನದಂತೆನಿಸಿ ಜೊತೆಯಲ್ಲಿದ್ದವರಾರೂ ಮನುಷ್ಯರಲ್ಲ ಎನಿಸಿದ್ದಾಗ ನನಗೆ ಪರಿಚಯವೇ ಇರದಿದ್ದ ಮಿಸ್ತ್ರೀಯ ಕ್ಯಾಬಿನ್ ಹುಡುಕಿಕೊಂಡು ಹೋಗಿದ್ದೆ. ಆಗ ಅವನು ಟ್ರೈನಿಂಗ್ ಸೆಂಟರಿನ ಒಂದು ಅಂಗವಾಗಿದ್ದ ಲೀಡರ್‌ಷಿಪ್‌ ಇನ್‌ಸ್ಟಿಟ್ಯೂಟಿನ ಮುಖ್ಯಸ್ಥನಾಗಿದ್ದ. ವೆಬ್‌ಸೈಟಿನಲ್ಲಿ ಅವನ ಸಂದರ್ಶನ ನೋಡಿದ ಮೇಲೆ ಮುಖಪರಿಚಯವಾಗಿತ್ತು. ಕ್ಯಾಬಿನ್ನಿನಲ್ಲಿ ಅವನಿರಲಿಲ್ಲ.

ಸಂಜೆ ಏಳು ಗಂಟೆಯಾಗಿತ್ತು. ಅಲ್ಲೇ ನಡೆದು ಹೋಗುತ್ತಿದ್ದ ಇಬ್ಬರು ಹುಡುಗರನ್ನು ಮಿಸ್ತ್ರೀಯ ಬಗ್ಗೆ ಕೇಳಿದಾಗ ಅವನು ಪ್ರತಿದಿನ ಆರರಿಂದ ಎಂಟರ ವರೆಗೆ ಈಜಲು ಹೋಗುವ ವಿಷಯ ತಿಳಿಯಿತು. ಎದುರಿಗಿದ್ದ ಸೋಫಾದ ಮೇಲೆ ಕಾಯುತ್ತಾ ಕುಳಿತೆ. ಏಳೂವರೆ ಸುಮಾರಿಗೆ ಹಿಂದಿನಿಂದ ಭುಜದ ಮೇಲೆ ಕೈಯಿಟ್ಟು ‘Are you waiting for someone?’ ಎಂಬ ಆತ್ಮೀಯ ಧ್ವನಿ ಕೇಳಿಸಿತು. ಹಿಂದೆ ತಿರುಗಿದರೆ ಈಜು ಮುಗಿಸಿ ಬಂದಿದ್ದ ಮಿಸ್ತ್ರೀ ಕಂಡ.
ಮೊದಲನೆಯ ಭೇಟಿಯಾದರೂ ತೀರ ಪರಿಚಿತನೆನಿಸಿದ.

ಅವನು ಕೇಳಿದ ಪ್ರಶ್ನೆಗೆ ಏನು ಹೇಳಬೇಕು ಎಂದು ತೋಚದೆ ಬಿಕ್ಕಿಬಿಕ್ಕಿ ಅತ್ತುಬಿಟ್ಟೆ. ನಾನು ಒಂದು ಗಂಟೆಯಿಂದ ಕಾಯುತ್ತಿದ್ದುದು ಗೊತ್ತಾಗಿ ಕಳವಳಗೊಂಡು, ವಿಪರೀತ ಸಂಕೋಚವಾಗಿ ತಕ್ಷಣ ತನ್ನ ಜೊತೆಗೆ ಆಫೀಸ್ ಹತ್ತಿರವಿದ್ದ ಸೈಲೆಂಟ್ ಶೋರ್ಸ್ ರೆಸಾರ್ಟಿಗೆ ಕರೆದುಕೊಂಡು ಹೋಗಿದ್ದ. ಅದ್ಭುತವಾದ ಮಾತುಗಾರನಾಗಿದ್ದ ಇವನ ಬಳಿ ನನ್ನ ಸಮಸ್ಯೆಗಳಿಗೂ ಪರಿಹಾರವಾಗಬಲ್ಲ ಮಾತುಗಳಿರಬಹುದು ಎಂದುಕೊಂಡಿದ್ದ ನನ್ನ ಜೊತೆ ಅವನು ಹೆಚ್ಚು ಮಾತಾಡಲಿಲ್ಲ.

ನಾಲ್ಕನೆಯ ಪರೀಕ್ಷೆಯಲ್ಲೂ ನಪಾಸಾದರೆ ಕಂಪನಿಯಿಂದ ತೆಗೆದು ಉದ್ಯೋಗದ ಕರಾರನ್ನು ರದ್ದುಗೊಳಿಸುವರೆಂದು ನಿರ್ದಾಕ್ಷಿಣ್ಯವಾಗಿ ಹೇಳಿದರೂ ಇಷ್ಟು ಕ್ಷುಲ್ಲಕ ಕಾರಣಕ್ಕೆ ದುಖಿಃಸುವ ಅವಶ್ಯಕತೆಯಿಲ್ಲವೆಂದು ಹೇಳಿದ್ದ. ‘ಕೆಲಸದ ಯೋಚನೆ ಬಿಡು. ಇದಲ್ಲದಿದ್ದರೆ ಮತ್ತೊಂದು ಸಿಗುತ್ತದೆ. ನಿನ್ನ ಒಳಬದುಕನ್ನು ಪೋಷಿಸು. ನಿನ್ನ ಬಳಿಯಿರುವ ಅಮೂಲ್ಯ ಕ್ಷಣಗಳನ್ನು ಜೀವಿಸು’ ಎಂದು ಹೇಳಿದ್ದ. ರೆಸಾರ್ಟಿನ ಫೌಂಟೇನ್ ಪಕ್ಕದ ಟೇಬಲಿನಲ್ಲಿ ಕುಳಿತು ನಿಂಬೆ ಸೋಡ ಹೀರುತ್ತಾ ಕಳೆದ ಆ ಸಂಜೆ ನನ್ನನ್ನು ಸ್ವಲ್ಪ ಗೆಲುವಾಗಿಸಿತ್ತು.

ಸಂಜೆಗಾಗಿ ಉತ್ಸುಕನಾಗಿ ಕಾಯುತ್ತಿದ್ದೆ. ದೆಹಲಿ ಮೂಲದವಳಾಗಿದ್ದ ವಸುಂಧರಾಳ ಜಾಜ್ ಮತ್ತು ಬ್ಲೂಸ್ ಹಾಡುಗಳನ್ನು ನಾನು ಹಲವಾರು ವರ್ಷಗಳಿಂದ ಕೇಳಿ ಗೆಳೆಯರಿಗೂ ಪರಿಚಯಿಸಿದ್ದೆ. ಅವಳ ಜೊತೆ ಗಿಟಾರ್ ನುಡಿಸುವ ಆದಿಲ್ ಕೂಡ ಸೂಕ್ಷ್ಮ ಕಲೆಗಾರ. ಬೀಟಲ್ಸ್‍ನ ಪ್ರಸಿದ್ಧ ‘Yesterday’ ಹಾಡನ್ನು ಅವರಿಬ್ಬರೂ ಜಾಜ್ ಶೈಲಿಯಲ್ಲಿ ಹಾಡಿ ಅದಕ್ಕೆ ಬೇರೆ ರಂಗು ಕೊಟ್ಟಿದ್ದು ನನಗೆ ಹುಚ್ಚು ಹಿಡಿಸಿತ್ತು.

ಹಾಡಿನ ಲಯವನ್ನು ನಿಧಾನಗೊಳಿಸಿ, ಸಾಲುಗಳ ನಡುವಿನ ಮೌನವನ್ನು ವಿಸ್ತರಿಸಿ ಬೀಟಲ್ಸ್ ಹಾಡನ್ನು ಸಂಪೂರ್ಣ ತಮ್ಮದಾಗಿಸಿಕೊಂಡು ನೀರಿನಲ್ಲಿ ಮೀನು ಈಜಾಡುವಂತೆ ಇಬ್ಬರು ಅದರಲ್ಲಿ ತೊಡಗಿದ್ದರು. ಹಾಡೊಂದು, ಕೇಳಿದ ಎಷ್ಟೋ ಸಮಯದ ನಂತರ ಮನಸ್ಸಿನಲ್ಲಿ ಬೆಳೆಯುವುದು ನಿಜಕ್ಕು ಅದ್ಭುತ. ಕೇಳುವಾಗ ಆಗುವುದು ನಂತರ ಬೆಳೆಯುವುದಕ್ಕೆ ಒಂದು ನೆಪಮಾತ್ರ. ಹಾಡಿನ ಗುಂಗಿನಲ್ಲಿ ಇಡೀ ಮಧ್ಯಾಹ್ನ ಕಳೆದುಹೋಯಿತು. 8.30 ಆಗಿತ್ತು. ಇ-ಸಿಟಿಯಿಂದ ವೈಟ್ ಫೀಲ್ಡ್ ತಲುಪುವಷ್ಟರಲ್ಲಿ ಕುತ್ತಿಗೆ, ಬೆನ್ನು ಕಿತ್ತು ಬರುವಹಾಗಾಗಿತ್ತು.

ವಿಂಡ್‌ಮಿಲ್‌, ದೊಡ್ಡ ಕಟ್ಟಡವೊಂದರ ಟೆರೇಸ್ ಮೇಲಿದ್ದ ಸಣ್ಣ ಪಬ್ ಆದರೂ ಪ್ರತೀ ವಾರ ಆಯೋಜಿಸಲಾಗುತ್ತಿದ್ದ ಲೈವ್ ಮ್ಯೂಸಿಕ್‌ನಿಂದಾಗಿ ಜನಪ್ರಿಯವಾಗಿತ್ತು. ಪಾರ್ಕಿಂಗ್ ಲಾಟಿನಲ್ಲಿ ‘Adil & Vasundhara Live’ ಎನ್ನುವ ಪೋಸ್ಟರ್ ಅಂಟಿಸಿತ್ತು. ಆದಿಲ್ ಮತ್ತು ವಸುಂಧರ ಒಟ್ಟಿಗೆ ಇದ್ದ ಒಂದು ಕಪ್ಪು ಬಿಳುಪು ಚಿತ್ರವಿತ್ತು. ಪೋಸ್ಟರಿಗೆ ಕೆಂಪು ಬಣ್ಣದ ಚೌಕಟ್ಟು. ಲಿಫ್ಟಿನಲ್ಲಿ ಆರನೆಯ ಮಹಡಿಗೆ ಏರುತ್ತಿರುವಾಗ ದೂರದ ರಸ್ತೆಯಲ್ಲಿ ವಾಹನಗಳ ಹೆಡ್‌ಲೈಟುಗಳು ಸತತವಾಗಿ ಮಿನುಗುತ್ತಿರುವುದು ಕಂಡಿತು.

ಪಬ್ ಒಳಗೆ ಹೋಗಿ ಒಂದು ಮೂಲೆಯಲ್ಲಿದ್ದ ಸಿಂಗಲ್ ಸೀಟರ್ ಸೋಫಾದ ಮೇಲೆ ಕುಳಿತೆ. ಬೆಳಕು ಮಂದವಾಗಿತ್ತು. ಮೂರು ಜನ ಸ್ಟೇಜಿನ ಮೇಲೆ ಮೈಕ್ ಟೆಸ್ಟ್ ಮಾಡುತ್ತಿದ್ದರು. ವಸುಂಧರಾ ಎಲ್ಲಿದ್ದಾಳೆ ಅಂತ ಹುಡುಕಿದೆ. ಕಾಣಿಸಲಿಲ್ಲ. ಚಿಕ್ಕ ಚಿಕ್ಕ ಗೋಲಾಕಾರದ ಟೇಬಲ್ಲುಗಳ ಸುತ್ತಲೂ ಇದ್ದ ಸೋಫಾದಲ್ಲಿ ಜನರು ಕೂತಿದ್ದರು. ಟೇಬಲ್ಲಿನ ಮಧ್ಯದಲ್ಲಿ ಹಸಿರು ಬಣ್ಣದ ಗಿಡ್ಡ ಕ್ಯಾಂಡಲ್ ಇತ್ತು. ನನ್ನ ಟೇಬಲ್ಲಿನ ಮೂರು ಟೇಬಲ್ ಆಚೆಗೆ ಮಧ್ಯವಯಸ್ಸಿನ ಜೋಡಿಯೊಂದು ಅಕ್ಕ ಪಕ್ಕ ಕುಳಿತುಕೊಂಡು ಸಮಾಧಾನದಿಂದ ಎಲ್ಲರನ್ನೂ ಗಮನಿಸುತ್ತಿದ್ದರು. ಆಗಾಗ ಏನೋ ನೆನಪಿಸಿಕೊಂಡು ನಗುತ್ತಿದ್ದರು.

ರಾತ್ರಿಯ ಕತ್ತಲೆಯಲ್ಲಿ ಕಣ್ಣಿಗೆ ರಾಚುತ್ತಿದ್ದ ಸ್ಟ್ರೀಟ್ ಲೈಟುಗಳು. ತುದಿಮೊದಲಿಲ್ಲದಂತೆ ಒಂದಕ್ಕೊಂದು ಸುತ್ತಿಕೊಂಡಿದ್ದ ಟೆಲಿಫೋನ್ ವೈರುಗಳು. ಅಲ್ಲಿ ನೋಡು! ಫ್ಲೈ ಓವರ್ ಮೇಲೆ ನಗರದ ಇಡೀ ಜನ ಸಮುದಾಯ ಓಡುತ್ತಿದೆ. ಒಬ್ಬರ ಹಿಂದೆ ಒಬ್ಬರು. ಜನರ ಮುಂದೆ ಅದೊಂದು ಬೃಹದಾಕಾರದ ಫುಟ್ ಬಾಲ್ ಉರುಳುತ್ತಿದೆ. ಎಲ್ಲರೂ ಅದರ ಹಿಂದೆ ಒಂದೇ ಸಮನೆ ಓಡುತ್ತಿದ್ದಾರೆ. ಬೇಗ. ಹೊತ್ತು ಮೀರುತ್ತಿದೆ. ಓಡು. ಇಲ್ಲೇ ಹೂತು ಹೋಗುವ ಮೊದಲು ಅವರೊಂದಿಗೆ ಸೇರಿ ಓಡು!

‘Sir..sir.. Anything to drink sir?” ಎಂದು ಹಿಂದಿನಿಂದ ಧ್ವನಿ ಕೇಳಿದಾಗ ಜೊಂಪು ಹತ್ತಿದ್ದು ತಿಳಿಯಿತು. ಒಂದು ಟ್ಯೂಬೋರ್ಗ್ ಕೇಳಿದೆ. ಅಷ್ಟರಲ್ಲಿ ಇಬ್ಬರು ಸ್ಟೇಜ್ ಮೇಲೆ ಬಂದರು. ಯಾರದು? ಓಹ್! ಆದಿಲ್ ಮತ್ತು ವಸುಂಧರ. ಫೋಟೊದಲ್ಲಿ ಇದ್ದಂತೆಯೆ ಒಂದು ಕಪ್ಪು ಸ್ಲೀವ್‌ಲೆಸ್ ಟಾಪ್ ಹಾಗು ನೀಲಿ ಜೀನ್ಸ್ ಹಾಕಿದ್ದಳು. ಉದ್ದ ಬಿಟ್ಟಿದ್ದ ಕೂದಲು. ತುಸು ದಪ್ಪಗಿದ್ದ ಶರೀರ. ಅವಳನ್ನು ನೋಡುತ್ತಾ ನೋಡುತ್ತಾ ನಿಧಾನಕ್ಕೆ ಕತ್ತನ್ನು ಮೇಲಕ್ಕೆ ಎತ್ತಿದೆ. ಕುತ್ತಿಗೆಯ ಹಿಂಭಾಗ ಇನ್ನೂ ನೋಯುತ್ತಲೇ ಇತ್ತು. ಆದಿಲ್ ಗಿಟಾರ್ ನುಡಿಸಲು ಶುರು ಮಾಡಿದ. ಅವಳ ಧ್ವನಿ ಗಿಟಾರ್ ತಂತಿಗಳ ನಡುವೆ ಬರಲಿ ಎಂದು ಕಣ್ಣು ಮುಚ್ಚಿ ಕಾಯುತ್ತಿದ್ದೆ. ಅದೇ ಹಾಡು..

Yesterday, love was such an easy game to play
Now I need a place to hide away
Suddenly I am not half the man I used to be
There’s a shadow hanging over me
Yesterday came suddenly..

ವೈಟರ್ ಬಾಟಲ್ ತೆಗೆದು ಮಗ್ಗಿನೊಳಗೆ ನಾಜೂಕಾಗಿ ಬಿಯರ್ ಸುರಿದ. ಒಂದು ಗುಟುಕು ಕುಡಿದು ಬಾಲ್ಕನಿಯ ಕಡೆ ನೋಡಿದೆ.  ಫ್ಲೈ ಓವರ್ ಮೇಲೆ ಅದೇ ವಾಹನಗಳ ಸುರಿಮಳೆ. ಸ್ಟ್ರೀಟ್ ಲೈಟ್, ಹೆಡ್ ಲೈಟ್ ಎರಡೂ ಬೆರೆತು ಹೋಗಿದ್ದವು. ಹಠಾತ್ತಾಗಿ ಜೇಬಿನಲಿದ್ದ ನನ್ನ ಫೋನ್ ರಿಂಗಾಯಿತು. ನಾಲ್ಕು ದಿನದಿಂದ ಫೋನ್ ಇದ್ದದ್ದೇ ಮರೆತು ಹೋಗಿದ್ದರಿಂದ ತಬ್ಬಿಬ್ಬಾಗಿ ಬಾಲ್ಕನಿಯ ಕಡೆ ನಡೆದೆ. ಅಪರಿಚಿತವಾದ ನಂಬರ್...

‘hello’
‘hello sir, I am calling from airtel. Connectivity has been restored sir. You should be able to make calls and receive calls now. Sorry for the inconvenience. Have a good evening’


ಡಿಸ್ಕನೆಕ್ಟ್ ಮಾಡಿದೆ. ದೂರದ ಹೆದ್ದಾರಿಯಲ್ಲಿ ಮತ್ತೊಂದು ಬೃಹದಾಕಾರದ ಬಿಲ್‌ಬೋರ್ಡ್ ಕಂಡಿತು. ಅದರಲ್ಲಿ ಮನುಷ್ಯನೊಬ್ಬನ ಕ್ಲೋಸಪ್ ಛಾಯಾಚಿತ್ರ. ಪರಿಚಿತವೆನಿಸಿದ ಮುಖ. ಸಣ್ಣ ಕನ್ನಡಕ. ಬೂದು ಬಣ್ಣದ ಬ್ಲೇಜರ್. ಅಲ್ಲಲ್ಲಿ ಬಿಳಿಯಾಗಿದ್ದ ಗುಂಗರು ಕೂದಲು. ಮಿಸ್ತ್ರೀ!! ಇವನ ಫೋಟೊ ಬಿಲ್‌ಬೋರ್ಡ್ ಮೇಲೆ? ಫೋಟೊ ಕೆಳಗೆ ಸಣ್ಣ ಅಕ್ಷರಗಳಲ್ಲಿ ಏನೋ ಬರೆದಿತ್ತು. ಬಲತುದಿಯಲ್ಲಿ ಅಸ್ಪಷ್ಟವಾಗಿ ಕಂಡ ಯಾವುದೋ ಸಂಸ್ಥೆಯ ಲೋಗೊ.

ಎರಡನೆಯ ಹಾಡು ಶುರುವಾದಂತೆನಿಸಿ ಒಳಗೆ ಹಿಂದಿರುಗಿದೆ. ಮತ್ತೊಂದು ಗುಟುಕು ಬಿಯರ್ ಕುಡಿದು ಫೋನ್ ಪಕ್ಕದಲ್ಲಿಟ್ಟೆ. ಶುರುವಾಯಿತು. ನಾಲ್ಕು ದಿನದಿಂದ ಕಟ್ಟಿಕೊಂಡಿದ್ದ ಮೆಸೇಜುಗಳು, ಈಮೇಲುಗಳು, ಮಿಸ್ಡ್ ಕಾಲುಗಳು, ಎಲ್ಲವೂ ಒಮ್ಮೆಲೇ ಬಂದು ಅಪ್ಪಳಿಸಿದವು. ಫೋನ್ ಸತತವಾಗಿ ವೈಬ್ರೇಟ್ ಆಗುತ್ತಲೇ ಇತ್ತು. ಸ್ವಿಚಾಫ್ ಮಾಡಲು ಪ್ರಯತ್ನಿಸಿದೆ. ಆಗಲಿಲ್ಲ. ಕೀಪ್ಯಾಡಿನ ಗುಂಡಿಗಳು ಒತ್ತಿ ಒತ್ತಿ ಮಾಸಿಹೋಗಿದ್ದವು.

ಇಷ್ಟರ ಮಧ್ಯೆ ಎರಡನೆಯ ಹಾಡು ಮುಗಿದದ್ದು ನನ್ನ ಗಮನಕ್ಕೆ ಬರಲಿಲ್ಲ. ಮೈಕ್  ತೊಂದರೆಯಿಂದಾಗಿ ಹತ್ತು ನಿಮಿಷಗಳ ವಿರಾಮ ನೀಡಲಾಗಿತ್ತು. ಕೆಲವರು ಎದ್ದು ಹೊರಗೆ ಹೋಗಿದ್ದರಿಂದ ಅಲ್ಲಲ್ಲಿ ಖಾಲಿ ಟೇಬಲ್ಲುಗಳು ಕಂಡವು. ಮಧ್ಯವಯಸ್ಸಿನ ಜೋಡಿ ನನ್ನನ್ನೇ ನೋಡುತ್ತಿದ್ದರು.
ಕಸ್ಟಮರ್ ಕೇರಿನವನು ಹೇಳಿದ ಮಾತು ಮತ್ತೆ ನೆನಪಾಯತು.‘Connectivity has been restored’
-ಪ್ರತೀಕ್‌ ಮುಕುಂದ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT