ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನ್ಯಾಯ ವ್ಯವಸ್ಥೆಗೆ ‘ಭಸ್ಮ’ವಾದ ಆರೋಪಿ...!

Last Updated 15 ಅಕ್ಟೋಬರ್ 2016, 19:30 IST
ಅಕ್ಷರ ಗಾತ್ರ

ನಾನು ಇಲ್ಲಿ ನಿರೂಪಿಸುತ್ತಿರುವುದು ನನ್ನ ಮನಸ್ಸನ್ನು ಬಹುವಾಗಿ ಕಲಕಿದ ಕೊಲೆಯಲ್ಲದ ಕೊಲೆ ಪ್ರಕರಣ.
ಶಿವಣ್ಣನವರು ಬೆಂಗಳೂರು ಬಿಇಎಲ್ ಕಾರ್ಖಾನೆಯಲ್ಲಿ ನೌಕರರಾಗಿದ್ದು, 1995ರಲ್ಲಿ ನಿವೃತ್ತರಾಗಿದ್ದರು. ಕಾರ್ಖಾನೆಯ ಪಕ್ಕದಲ್ಲಿ ಪುಟ್ಟ ಮನೆ ಮಾಡಿಕೊಂಡಿದ್ದರು. ಮಗ ಉದಯ ಉನ್ನತ ವ್ಯಾಸಂಗ ಮುಗಿಸಿ ಬೆಂಗಳೂರಿನ ಪ್ರತಿಷ್ಠಿತ ಕಂಪೆನಿಯೊಂದರಲ್ಲಿ ಅವನ ಸ್ನೇಹಿತರೆಲ್ಲ ಅಸೂಯೆ ಪಡುವಷ್ಟು ಸಂಬಳ ಪಡೆಯಲು ಪ್ರಾರಂಭಿಸಿದ್ದ. 

1999ರಲ್ಲಿ ತುಮಕೂರಿನ ಶೋಭಾ ಎಂಬಾಕೆ ಜೊತೆ ಉದಯನ ಮದುವೆಯಾಯಿತು. ಉದಯ, ಕಂಪೆನಿ ವತಿಯಿಂದ ಹೊರದೇಶಗಳಿಗೆ ಹೋಗುತ್ತಿದ್ದ ಕಾರಣ ಪ್ರತಿ ತಿಂಗಳ ಬಹುಭಾಗವನ್ನು ಅಲ್ಲಿಯೇ ಕಳೆಯುತ್ತಿದ್ದ.

ಆತ, ಮದುವೆಯ ನಂತರ ಪತ್ನಿ ಮತ್ತು ಅತ್ತೆ ಮಾವಂದಿರನ್ನು ಇನ್ನಿಲ್ಲದಂತೆ ಹಚ್ಚಿಕೊಂಡ. ಹೆಂಡತಿಯ ಆಸೆಯಂತೆ ಆಕೆಯನ್ನು ತವರಿನಲ್ಲಿಯೇ ಇರಿಸಿದ. ಹೊರದೇಶಗಳಿಂದ ಬೆಂಗಳೂರಿಗೆ ಬಂದಾಗ ವಿಮಾನ ನಿಲ್ದಾಣದಿಂದ ನೇರವಾಗಿ ಅತ್ತೆಯ ಮನೆಗೆ ಹೋಗುವುದು ಪರಿಪಾಠವಾಯಿತು. ತಾನು ತಂದ ಅಪರೂಪದ ವಸ್ತುಗಳನ್ನು, ತನ್ನಲ್ಲಿದ್ದ ಹಣವನ್ನು ಅತ್ತೆಯ ಮನೆಯಲ್ಲಿಯೇ ಇರಿಸುತ್ತಿದ್ದ.

ಈ ನಡುವೆ ದಂಪತಿಗೆ ಗಂಡು ಮಗುವಾಯಿತು. ಮಗುವಾದ ಮೇಲೆ ಶೋಭಾಳ ಮನೆಯವರ ಜೊತೆ ಉದಯನ ಬಾಂಧವ್ಯ ಮತ್ತಷ್ಟು ಹೆಚ್ಚಾಯಿತು. ತನ್ನ ಹೆಂಡತಿಯ ಆಣತಿಯಂತೆ ಅತ್ತೆಗೆ 10 ಲಕ್ಷ ರೂಪಾಯಿ ಕೊಟ್ಟ. ಅದರಲ್ಲಿ ಅತ್ತೆ ಬಡ್ಡಿ ವ್ಯವಹಾರ ಪ್ರಾರಂಭಿಸಿದಳು.

ತವರಿನಲ್ಲಿಯೇ ಇದ್ದ ಶೋಭಾಳಿಗೆ  ಅತ್ತೆ ಮನೆಯ ಸಂಬಂಧವೇ ಇಲ್ಲದಾಯಿತು. ವಿದೇಶ ಸಂಚಾರದಲ್ಲಿಯೇ ಮುಳುಗಿರುತ್ತಿದ್ದ ಉದಯನೂ ಇದರ ಬಗ್ಗೆ ತಲೆ ಕೆಡಿಸಿಕೊಳ್ಳಲಿಲ್ಲ. ತನ್ನ ತಂದೆ–ತಾಯಿ ಬದಲಿಗೆ ಹೆಂಡತಿ ಮನೆಯವರ ‘ಸೇವೆ’ಯಲ್ಲಿಯೇ ಮುಳುಗಿದ. ಇದರ ದುರುಪಯೋಗ ಪಡೆದುಕೊಂಡ ಇವರೆಲ್ಲಾ, ಉದಯನಿಂದ ಮತ್ತಷ್ಟು, ಇನ್ನಷ್ಟು ಬಾಚಿಕೊಳ್ಳತೊಡಗಿದರು. ಈ ಕುತಂತ್ರ ಅರಿಯದ ಉದಯ, ಅವರ ಆಸೆಗಳನ್ನು ಪೂರೈಸುತ್ತಾ ಹೋದ.

ಹೀಗೆ ಎರಡು ವರ್ಷ ಸಂದಿತು. ಶೋಭಾಳ ತವರಿನವರ ದುರಾಸೆಯ ಬೆಟ್ಟ ಬೆಳೆಯುತ್ತಾ ಹೋಯಿತು. 2001ರ ಕೊನೆಯಲ್ಲಿ ಉದಯನಿಗೆ ತಾನು ಮಾಡುತ್ತಿರುವ ತಪ್ಪಿನ ಅರಿವಾಯಿತು. ಈ ಬಗ್ಗೆ ಪಶ್ಚಾತ್ತಾಪ ಪಟ್ಟುಕೊಂಡ. ಇನ್ನು ಮುಂದಾದರೂ ತಾನು ತನ್ನ ಅಪ್ಪ–ಅಮ್ಮನಿಗೆ ಸಹಾಯ ಮಾಡಬೇಕು ಎಂದು ಮನಸ್ಸು ಮಾಡಿದ.

ಇದರಿಂದಾಗಿ, ವಿದೇಶಕ್ಕೆ ಹೋದಾಗಲೆಲ್ಲ ವಿಮಾನ ನಿಲ್ದಾಣದಿಂದ ನೇರವಾಗಿ ತನ್ನ ಮನೆಗೆ ಬರತೊಡಗಿದ. ತರುವ ವಿಶೇಷ ವಸ್ತುಗಳನ್ನು ಮತ್ತು ಹಣವನ್ನು ತಂದೆ–ತಾಯಿಗೆ ನೀಡತೊಡಗಿದ. ತನ್ನ ಹೆಂಡತಿಗೆ ಬುದ್ಧಿಮಾತು ಹೇಳಿ ತವರು ಮನೆಯಿಂದ ಕರೆಸಿಕೊಂಡೂ ಬಿಟ್ಟ. ಉದಯನಲ್ಲಾದ ಈ ಕ್ಷಿಪ್ರ ಬದಲಾವಣೆ ಎಲ್ಲರಿಗಿಂತ ಹೆಚ್ಚು ಶೋಭಾಳನ್ನು ಕೆರಳಿಸಿತು. ತನ್ನ ತವರು ಮನೆಯವರಿಗೆ ಸಿಗುತ್ತಿದ್ದ ಅಮೂಲ್ಯ ವಸ್ತು, ದುಡ್ಡು ಎಲ್ಲವೂ ಅತ್ತೆಯ ಮನೆ ಸೇರುತ್ತಿದ್ದುದು ಆಕೆಯಿಂದ ಸಹಿಸಲು ಆಗಲಿಲ್ಲ.

ತೀಕಾರ ಭಾವನೆ ಹೆಡೆಯಾಡಲು ಮುಂದಾಯಿತು. ಹೇಗಾದರೂ ಮಾಡಿ ಗಂಡನನ್ನು ಮೊದಲಿನಂತೆಯೇ ಮಾಡಬೇಕು ಎಂದು ನಿರ್ಧರಿಸಿ, ಆ ಬಗ್ಗೆ ತನ್ನ ಅಕ್ಕ ಶ್ವೇತಾಳ ಜೊತೆ ಚರ್ಚಿಸಿದಳು. ಮದುವೆಯಾದರೂ ಗಂಡನ ಮನೆಯಲ್ಲಿ ಸರಿಯಾಗಿ ಬಾಳುವೆ ನಡೆಸದಿದ್ದ ಶ್ವೇತಾ, ಶೋಭಾಳೊಂದಿಗೆ ಕೈ ಜೋಡಿಸಲು ಸಿದ್ಧವಾದಳು.

ಈ ಯೋಜನೆಯಂತೆ ಶೋಭಾ ಅತ್ತೆ ಮಾವಂದಿರಿಗೆ ಕಿರುಕುಳ ನೀಡತೊಡಗಿದಳು. ತನ್ನ ಮಗುವನ್ನು ಅವರು ಮುಟ್ಟದಂತೆ ತಡೆದಳು. ಮೊಮ್ಮಗುವನ್ನು ಅವರು ತುಂಬಾ ಪ್ರೀತಿಸುತ್ತಿದ್ದರಿಂದ ಮಗುವಿಗೇ ಹಿಂಸೆ ನೀಡಿ ಅತ್ತೆ–ಮಾವಂದಿರಿಗೆ ನೋವಾಗುವಂತೆ ಮಾಡಿ ವಿಕೃತ ಸಂತೋಷ ಅನುಭವಿಸತೊಡಗಿದಳು. ಇದರಿಂದ ಉದಯನ ಅಪ್ಪ–ಅಮ್ಮನಿಗೆ ತುಂಬಾ ನೋವಾಗತೊಡಗಿತು. ಉದಯನ ತಂದೆ ಶಿವಣ್ಣ, ಶೋಭಾಳ ತಂದೆಗೆ ಫೋನಾಯಿಸಿ, ‘ನಿಮ್ಮ ಮಗಳು ಮೊಮ್ಮಗನಿಗೆ ಹೊಡೆದು ಹಿಂಸಿಸುತ್ತಾಳೆ, ಅದು ಅಳುವುದನ್ನು ನೋಡಲು, ಸಹಿಸಲು ನಮ್ಮಿಂದ ಆಗುತ್ತಿಲ್ಲ. ನಿಮ್ಮ ಮಗಳನ್ನು ಪ್ರಶ್ನಿಸಿದರೆ ಹುಚ್ಚಿಯಂತೆ ವರ್ತಿಸುತ್ತಾಳೆ. ದಯಮಾಡಿ ಅವಳಿಗೆ ಬುದ್ಧಿ ಹೇಳಿ’ ಎಂದರು. ಅದಕ್ಕೆ ಅವಳ ಅಪ್ಪ ಏನೂ ಹೇಳದೆ ಫೋನ್‌ ಕುಕ್ಕಿದರು. ಇದರಿಂದ ಶಿವಣ್ಣನವರಿಗೆ ನಿರಾಸೆಯಾಯಿತು.

ಮರುದಿನ ಉದಯನ ಅಪ್ಪ–ಅಮ್ಮ ಸಮೀಪದಲ್ಲಿದ್ದ ತಮ್ಮ ಮಗಳ ಮನೆಗೆ ಹೋದರು. ಸ್ವಲ್ಪ ಸಮಯದಲ್ಲೇ ಅಲ್ಲಿಗೆ ಏದುಸಿರು ಬಿಡುತ್ತಾ ಓಡಿ ಬಂದ ಪಕ್ಕದ ಮನೆಯವ, ‘ನಿಮ್ಮ ಸೊಸೆ, ಮನೆಯ ಹಿಂದಿನ ಶೌಚಾಲಯದಲ್ಲಿ ಬೆಂಕಿ ಹಚ್ಚಿಕೊಂಡು ಚೀರಾಡುತ್ತಿದ್ದಾಳೆ, ಬೇಗ ಬನ್ನಿ’ ಎಂದ. ಗಾಬರಿಗೊಂಡ ಎಲ್ಲರೂ ಒಂದೇ ಉಸಿರಿನಲ್ಲಿ ಓಡಿ ಮನೆ ತಲುಪಿದಾಗ ಮನೆ ಮುಂದೆ ಜನ ಸೇರಿದ್ದರು. ಉದಯ ಕಂಗಾಲಾಗಿ ಎದೆ ಬಡಿದುಕೊಳ್ಳುತ್ತಿದ್ದ. ಸ್ಥಳೀಯ ಪೊಲೀಸ್‌ ಠಾಣೆಯಿಂದ ಪೊಲೀಸ್ ಪೇದೆಗಳು ಅಲ್ಲಿಗೆ ಬಂದು ಪ್ರಯಾಸದಿಂದ ಬಾಗಿಲು ಒಡೆದರು. ಆದರೆ ಅದಾಗಲೇ ಶೋಭಾ ಸುಟ್ಟಗಾಯಗಳಿಂದ ಸತ್ತು ಹೋಗಿದ್ದಳು.

ಅಂದೇ ಮಧ್ಯಾಹ್ನ ಆಸ್ಪತ್ರೆಯಲ್ಲಿ ಶವದ ಪಂಚನಾಮೆಗೆ ಪೊಲೀಸರಿಂದ ಸಿದ್ಧತೆ ನಡೆಯುತ್ತಿತ್ತು. ಶೋಭಾಳ ಅಪ್ಪ–ಅಮ್ಮ ಎಲ್ಲರೂ ರೋದಿಸುತ್ತಾ ಅಲ್ಲಿಗೆ ಬಂದವರೇ ‘ಉದಯ  ಹಾಗೂ ಪೋಷಕರು ಶೋಭಾಳನ್ನು ಕೊಂದಿದ್ದಾರೆ, ಇದು ಕೊಲೆ’ ಎಂದು ಕಿರುಚಾಡಿದರು. ಅಲ್ಲಿದ್ದ ಎಕ್ಸಿಕ್ಯುಟಿವ್ ಮ್ಯಾಜಿಸ್ಟ್ರೇಟ್ ಎಲ್ಲರನ್ನೂ ಸಮಾಧಾನಗೊಳಿಸಿ ಹೇಳಿಕೆಗಳನ್ನು ದಾಖಲಿಸಿಕೊಂಡರು.

ಆಗ ಅವರು ನೀಡಿದ ಹೇಳಿಕೆ ಎಂದರೆ, ‘ಶೋಭಾಳ ಮದುವೆಯ ಸಮಯದಲ್ಲಿ ಮತ್ತು ನಂತರ ಉದಯನ ಮನೆಯವರು ಹತ್ತಾರು ಲಕ್ಷ ರೂಪಾಯಿ ನಗದು ಅಲ್ಲದೆ ಚಿನ್ನದ ಒಡವೆಗಳನ್ನು ವರೋಪಚಾರವಾಗಿ ಪಡೆದಿದ್ದರು. ವರದಕ್ಷಿಣೆಗಾಗಿ ಬೇಡಿಕೆ ಮುಂದುವರೆದಿತ್ತು. ಶೋಭಾ ಅದನ್ನು ತರಲು ನಿರಾಕರಿಸಿದ ಕಾರಣ ಚಾಕುವಿನಿಂದ ತಿವಿದು ಶೌಚಾಲಯಕ್ಕೆ ನೂಕಿ ಬೆಂಕಿ ಹಚ್ಚಿದ್ದಾರೆ...’ ಎಂದು.

ಇದರ ಆಧಾರದ ಮೇಲೆ ಉದಯ, ಅವನ ತಾಯಿ, ತಂದೆ, ಅಕ್ಕ ಮತ್ತು ಭಾವನವರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಾಯಿತು. ತನಿಖೆ ನಡೆದು  ಆರೋಪಪಟ್ಟಿಯನ್ನು ಕೋರ್ಟ್‌ಗೆ ಒಪ್ಪಿಸಲಾಯಿತು. 

ಸೆಷನ್ಸ್‌ ಕೋರ್ಟ್‌ನಲ್ಲಿ ಎಲ್ಲಾ ಆರೋಪಿಗಳನ್ನು ಪ್ರತಿನಿಧಿಸುವ ಹೊಣೆ ನನ್ನದಾಯಿತು. ವಿಚಾರಣೆ ನಡೆಯುವ ವೇಳೆ ಪಬ್ಲಿಕ್ ಪ್ರಾಸಿಕ್ಯೂಟರ್ ಅವರು ಆರೋಪಿಗಳ ಮೇಲೆ ಸ್ವಲ್ಪ ಹೆಚ್ಚೇ ಎನ್ನುವಂತೆ ಗಮನ ಕೇಂದ್ರೀಕರಿಸಿದ್ದು ಎದ್ದುಕಾಣುತ್ತಿತ್ತು.  ಯಾವ ಯಾವ ದಿನ ತಮ್ಮಿಂದ ಉದಯನ ಮನೆಯವರು ಹಣ ವಸೂಲಿ ಮಾಡಿದ್ದರು ಎಂಬ ಬಗ್ಗೆ ಶೋಭಾಳ ಮನೆಯವರು ಒಂದಿಷ್ಟು ‘ಖಚಿತ’ ದಿನಾಂಕವನ್ನೂ ಕೋರ್ಟ್‌ಗೆ ನೀಡಿದರು. ಇವೆಲ್ಲದಕ್ಕೂ ತಾವೇ ಪ್ರತ್ಯಕ್ಷ ಸಾಕ್ಷಿಗಳು ಎಂದು ಶೋಭಾಳ ಚಿಕ್ಕಪ್ಪಂದಿರೂ ಹೇಳಿಕೆ ನೀಡಿದರು.  ಶವಪರೀಕ್ಷೆ ಮಾಡಿದ ವೈದ್ಯರು ಮೃತಳ ಮೈಮೇಲೆ ರಕ್ತದ ಗಾಯಗಳಿದ್ದು ಅವು ಸಾವಿಗೆ ಮುನ್ನ ಉಂಟಾದವುಗಳೆಂದು ಅಭಿಪ್ರಾಯ ವ್ಯಕ್ತಪಡಿಸಿದರು. ತಾವು ಸ್ಥಳಕ್ಕೆ ಬರುತ್ತಿದ್ದಂತೆಯೇ ಆರೋಪಿಗಳು ನಾಪತ್ತೆಯಾದರೆಂದು ಪೊಲೀಸ್ ಅಧಿಕಾರಿಗಳು ಹೇಳಿದರು.

ಉದಯ ಹಾಗೂ ಆತನ ಮನೆಯವರೇ ಅಪರಾಧಿಗಳು ಎನ್ನಲು ಇಷ್ಟು ಸಾಕಲ್ಲವೇ! ಸಾಲದು ಎಂಬುದಕ್ಕೆ  ಪಬ್ಲಿಕ್ ಪ್ರಾಸಿಕ್ಯೂಟರ್ ಅವರು ಊಹಿಸಲೂ ಸಾಧ್ಯವಾಗದ ಅನೇಕ ಸಾಕ್ಷ್ಯಾಧಾರಗಳನ್ನು ಸಲ್ಲಿಸಿದರು. ಇದನ್ನೆಲ್ಲಾ ನೋಡುತ್ತಿದ್ದ ನನಗೆ ಈ ಎಲ್ಲಾ ಸಾಕ್ಷ್ಯಾಧಾರಗಳು ಸಂಪೂರ್ಣ ಸುಳ್ಳು ಎಂದು ಸಾಬೀತು ಮಾಡುವುದು ದೊಡ್ಡ ಸವಾಲಾಯಿತು.

ನಿರಪರಾಧಿಗಳಾಗಿದ್ದ ಉದಯ ಹಾಗೂ ಆತನ ಮನೆಯವರನ್ನು ಬಿಡುಗಡೆ ಮಾಡಿಸಲೇಬೇಕಿತ್ತು. ದಾಖಲೆಗಳನ್ನು ತಿರುವಿ ತಿರುವಿ ಹಾಕಿದೆ. ಆಗ ನನ್ನ ಕಣ್ಣಿಗೆ ಬಿದ್ದದ್ದು ವರದಕ್ಷಿಣೆ ಆರೋಪದ ದಾಖಲೆ. ಉದಯ ಖುದ್ದಾಗಿ ಹಣ ಪಡೆದುಕೊಂಡಿದ್ದ ಎಂದು ಶೋಭಾಳ ಮನೆಯವರು ನೀಡಿದ್ದ ‘ಖಚಿತ’ ದಿನಾಂಕಗಳಲ್ಲಿ ಉದಯ ಊರಿನಲ್ಲಿಯೇ ಇರಲಿಲ್ಲ. ವಿದೇಶಕ್ಕೆ ಹೋಗಿದ್ದ. ಅದು ಅವನ ಪಾಸ್‌ಪೋರ್ಟಿನಲ್ಲಿ ದಾಖಲಾಗಿತ್ತು. ಇದನ್ನು ಕೋರ್ಟ್‌ ಮುಂದಿಟ್ಟೆ.

ಶೋಭಾಳ ಮದುವೆಯ ಸಂದರ್ಭದಲ್ಲಿ ಅವಳ ತಂದೆ ಹಾಗೂ ಚಿಕ್ಕಪ್ಪಂದಿರ ನಡುವೆ ಆಸ್ತಿ ವಿವಾದಕ್ಕಾಗಿ ಜಗಳವಾಗಿತ್ತು. ಆದ್ದರಿಂದ ಮದುವೆಗೆ ಅವರಾರೂ ಬಂದಿರಲಿಲ್ಲ. ಅದನ್ನು ಮದುವೆಯ ಫೋಟೊಗಳಿಂದ ಸಾಬೀತು ಮಾಡಿದೆ. ಅಲ್ಲಿಗೆ, ವರದಕ್ಷಿಣೆ ಪಡೆದಿದ್ದನ್ನು ಖುದ್ದಾಗಿ ನೋಡಿರುವುದಾಗಿ ಹೇಳಿಕೊಂಡಿದ್ದ ಶೋಭಾಳ ಚಿಕ್ಕಪ್ಪಂದಿರ ಮಾತು (ಪ್ರಾಸಿಕ್ಯೂಷನ್ ಕರೆತಂದಿದ್ದ ಸಾಕ್ಷಿಗಳು) ಸುಳ್ಳು ಎಂದು ಕೋರ್ಟ್‌ಗೆ ಮನವರಿಕೆಯಾಯಿತು. ವರದಕ್ಷಿಣೆಗೆಂದು ತಾವು ಬ್ಯಾಂಕಿನಿಂದ ಹಣ ತೆಗೆದು ದುಡ್ಡು ನೀಡಿರುವುದಾಗಿ ಶೋಭಾಳ ತಂದೆ  ಕೋರ್ಟಿನಲ್ಲಿ ಹೇಳಿಕೆ ನೀಡಿ, ಅದರ ದಾಖಲೆ ಒದಗಿಸಿದ್ದರು. ಆದರೆ ಅವರು ತೆಗೆದ ದುಡ್ಡು ಅವರದ್ದೇ ಹೃದಯ ಶಸ್ತ್ರಚಿಕಿತ್ಸೆಗೇ ವಿನಾ ವರದಕ್ಷಿಣೆಗಾಗಿ ಅಲ್ಲ ಎಂಬುದನ್ನು ಆಸ್ಪತ್ರೆಯ ದಾಖಲೆಗಳಿಂದ ಸಾಬೀತು ಮಾಡಿದೆ.

ಆರೋಪಿಗಳಿಗೆ ವರದಾನವಾಗಿ ಬಂದವರು ಶೋಭಾಳ ಅಕ್ಕ ಶ್ವೇತಾಳ ಮಾವ ನೀಲಕಂಠಯ್ಯ. ನಾನು ಪಾಟಿ ಸವಾಲು ಮಾಡಿದಾಗ ಅವರು ತಮ್ಮ ಸೊಸೆ ಶ್ವೇತಾಳ ಅವಗುಣಗಳನ್ನು ಎಳೆಎಳೆಯಾಗಿ ವಿವರಿಸಿದರು. ‘ನನ್ನ ಸೊಸೆ ಶ್ವೇತಾ ಮದುವೆಯಾಗಿ ಬಂದ ಒಂದೆರಡು ವರ್ಷಗಳಲ್ಲೇ ತನ್ನ ವರ್ತನೆಯಿಂದ ನಮ್ಮೆಲ್ಲರಿಗೆ ಬೇಸರ ತಂದಿದ್ದಳು. ಸಣ್ಣಪುಟ್ಟ ವಿಚಾರಗಳಿಗೂ ಸಂಯಮ ಕಳೆದುಕೊಳ್ಳುತ್ತಿದ್ದಳು. ಎಲ್ಲಾ ವಿಚಾರಗಳಲ್ಲಿ ತನ್ನದೇ ಪ್ರಭಾವ ಬೀರುವ ನಡತೆಯನ್ನು ದಿನೇ ದಿನೇ ಹೆಚ್ಚಿಸಿಕೊಂಡಳು. ಒಂದು ರಾತ್ರಿ ವಿಷ ಸೇವನೆ ಮಾಡಿ ಆತ್ಮಹತ್ಯೆಗೂ ಪ್ರಯತ್ನಿಸಿದ್ದಳು. ವೈದ್ಯೆಯಾದ ನನ್ನ ಮಗಳು ಆಕೆಯ ಪ್ರಾಣ ಉಳಿಸಿದಳು’ ಎಂದು ನುಡಿದರು. ಶ್ವೇತಾಳಂತೆಯೇ ವಿಚಿತ್ರ ಮನಸ್ಥಿತಿ ಆಕೆಯ ತಂಗಿ ಶೋಭಾಳದ್ದೂ ಎಂಬ ಬಗ್ಗೆ ವಿವರಣೆ ನೀಡಿದರು.

ಅವರು ಈ ರೀತಿ ಹೇಳಿಕೆ ನೀಡಿದ ನಂತರ ಪಬ್ಲಿಕ್ ಪ್ರಾಸಿಕ್ಯೂಟರ್ ಅವರು  ನಿಯಮದ ಪ್ರಕಾರ, ಶ್ವೇತಾಳ ಗಂಡ ಜಯದೇವ ಅವರನ್ನು ವಿಚಾರಣೆಗೆ ಒಳಪಡಿಸಬೇಕಿತ್ತು. ಏಕೆಂದರೆ ಅವರು ಕೂಡ ಸಾಕ್ಷಿದಾರರಲ್ಲಿ ಒಬ್ಬರಾಗಿದ್ದರು. ಆದರೆ ವಿಚಿತ್ರ ಎಂದರೆ ಪ್ರಾಸಿಕ್ಯೂಟರ್‌ ಹಾಗೆ ಮಾಡಲೇ ಇಲ್ಲ. ಇವನ್ನೆಲ್ಲಾ ಗಮನಿಸಿದಾಗ ಎಂಥವರಿಗೂ ಶೋಭಾ ಆತ್ಮಹತ್ಯೆ  ಮಾಡಿಕೊಂಡಿರಬಹುದು ಎಂದು ಮೇಲ್ನೋಟಕ್ಕೆ ಸಾಬೀತಾಗುವಂತಿತ್ತು.

ಶೋಭಾ ಬೆಂಕಿ ಹಚ್ಚಿಕೊಂಡ ನಂತರ ಸಾಯುವವರೆಗೆ ಶೌಚಾಲಯದಲ್ಲಿ ಒದ್ದಾಡಿದ್ದ ಕಾರಣ, ಅಲ್ಲಿದ್ದ ಸಾಮಗ್ರಿಗಳೆಲ್ಲ ತಗುಲಿ ಅವರ ಮೈಮೇಲೆ ಗಾಯಗಳಾಗಿದ್ದಿರಬಹುದು’ ಎಂದು ಶವಪರೀಕ್ಷೆ ಮಾಡಿದ ವೈದ್ಯರು ಹೇಳಿದರು. ಆದ್ದರಿಂದ ಅವು ಉದಯನ ಮನೆಯವರು ಮಾಡಿದ ಗಾಯಗಳಲ್ಲ ಎಂದು ಕೋರ್ಟ್‌ಗೆ ಮನವರಿಕೆಯಾಯಿತು.

ತಾನು ಅತ್ತೆಗೆ ನೀಡಿದ್ದ 10 ಲಕ್ಷ ರೂಪಾಯಿಗಳನ್ನು ವಾಪಸು ಪಡೆದುಕೊಂಡು ಬರುವಂತೆ ಶೋಭಾಳಿಗೆ  (ಆಕೆ ಸಾಯುವ ಐದು ದಿನ ಮುಂಚೆ) ಉದಯ ಹೇಳಿದ್ದ. ಆ ಹಣದಿಂದ ತಾನು ಇರುವ ಚಿಕ್ಕ ಮನೆಯಲ್ಲಿ ತಂದೆಗಾಗಿ ಒಂದು ಕೋಣೆ ಕಟ್ಟುವ ಇರಾದೆ ಅವನದಾಗಿತ್ತು. ಆದರೆ ಶೋಭಾಳ ತಾಯಿ ಚುಚ್ಚುಮಾತುಗಳನ್ನಾಡಿ, ನಿಂದಿಸಿ, ಹಣ ಕೊಡದೆ ಮಗಳನ್ನು ವಾಪಸ್‌ ಕಳುಹಿಸಿದ್ದಳು. ಶೋಭಾ ಅಲ್ಲಿಂದ ಬೆಂಗಳೂರಿಗೆ ವಾಪಸ್‌ ಬಂದದ್ದು ಸಾಯುವ ಹಿಂದಿನ ದಿನ. ಈ ಸಂದರ್ಭವೂ, ವಿಚಿತ್ರ ಸ್ವಭಾವದ ಶೋಭಾ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಪುಷ್ಟೀಕರಿಸಿತು.

ಆರೋಪಿಗಳ ಬಿಡುಗಡೆಗೆ ಇಷ್ಟು ಸಾಕು ಎಂದರು ನ್ಯಾಯಾಧೀಶ ಡಿ.ವೈ.ಬಸಾಪುರ. ಆರೋಪಿಗಳು ನಿರಪರಾಧಿಗಳಾದರು. ಆದರೆ ಸರ್ಕಾರ (ಪ್ರಾಸಿಕ್ಯೂಷನ್‌) ಅಲ್ಲಿಗೆ ಸುಮ್ಮನಾಗಲಿಲ್ಲ. ಈ ಆದೇಶದ ವಿರುದ್ಧ ಹೈಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿತು. ಆದರೆ ಅಲ್ಲಿಯೂ ಆರೋಪಿಗಳಿಗೆ ಜಯವಾಯಿತು.

ಹೆಂಡತಿಯನ್ನು ಸುಟ್ಟು ಕೊಲೆ ಮಾಡಿದ ಆಪಾದನೆ ಹೊತ್ತ ಮುಗ್ಧ ಉದಯ ಕಾನೂನಿನ ದೃಷ್ಟಿಯಲ್ಲಿ ಕೊನೆಗೂ ನಿರಪರಾಧಿಯಾದ. ಆದರೆ ಆತನನ್ನು ಪೊಲೀಸರು ಬಂಧಿಸಿದ ದಿನದಿಂದ ಹಿಡಿದು ಹೈಕೋರ್ಟ್‌ ತೀರ್ಪು ನೀಡುವವರೆಗೆ ಏಳು ವರ್ಷ ಕಳೆದಿತ್ತು! ಉಳಿದ ಆರೋಪಿಗಳು ಜಾಮೀನಿನ ಮೇಲೆ ಹೊರಕ್ಕೆ ಇದ್ದರೆ, ಉದಯ ಏಳು ವರ್ಷ ವಿಚಾರಣಾಧೀನ ಕೈದಿಯಾಗಿ ಜೈಲಿನಲ್ಲಿಯೇ ಇದ್ದ. ನಮ್ಮ ನ್ಯಾಯ ವ್ಯವಸ್ಥೆಯನ್ನು ಅಣಕಿಸುವಂತೆ ಈ ಏಳು ವರ್ಷಗಳ ಸೆರೆಮನೆವಾಸ ಉದಯನನ್ನು ಮಾನಸಿಕವಾಗಿ ಸುಟ್ಟು ಭಸ್ಮ ಮಾಡಿತ್ತು!

(ಕಕ್ಷಿದಾರರ ಹೆಸರು ಬದಲಾಯಿಸಲಾಗಿದೆ)
ಲೇಖಕ ಹೈಕೋರ್ಟ್‌ ವಕೀಲ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT