ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜೀವದಯೆಯ ಜುಂಜಪ್ಪನ ಸೀಮೆ

Last Updated 15 ಅಕ್ಟೋಬರ್ 2016, 19:30 IST
ಅಕ್ಷರ ಗಾತ್ರ

ಜುಂಜಪ್ಪ ಕಾಡುಗೊಲ್ಲ ಸಮುದಾಯದ ಬುಡಕಟ್ಟು ವೀರ. ಸುಮಾರು 17 ಅಥವಾ 18ನೇ ಶತಮಾನದಲ್ಲಿ ತನ್ನ ಸಮುದಾಯದ ನಡುವೆ ಬದುಕಿ ಬಾಳಿದವನು. ತನ್ನ ಸಮುದಾಯದ ಚರಾಸ್ತಿಯಾದ ದನಕರುಗಳ ರಕ್ಷಣೆಗೋಸ್ಕರ ಹೋರಾಡಿ, ಕೊನೆಗೆ ತನ್ನ ಸೋದರಮಾವಂದಿರ ಕುತಂತ್ರಕ್ಕೆ ಬಲಿಯಾಗಿ ಪ್ರಾಣತೆತ್ತ ಸಮುದಾಯದ ನಾಯಕ.

ತುಮಕೂರು ಜಿಲ್ಲೆ ಶಿರಾ ತಾಲ್ಲೂಕಿನ ಕಳುವೋರಳ್ಳಿ ಜುಂಜಪ್ಪ ಹುಟ್ಟಿ ಬೆಳೆದ ಹಳ್ಳಿ. ಬೇವಿನಹಳ್ಳಿ, ಶಿರಾ, ತಾವರೆಕೆರೆ, ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆ ತಾಲ್ಲೂಕಿನ ತಾಳ್ಯ, ಮದ್ದೇರಿ – ಇವೆಲ್ಲಾ ಜುಂಜಪ್ಪ ನಡೆದಾಡಿದ ಸ್ಥಳಗಳು. ಪಶುಪಾಲಕರಾದ ಕಾಡುಗೊಲ್ಲರು ದಕ್ಷಿಣ ಕರ್ನಾಟಕದ ತುಮಕೂರು ಮತ್ತು ಚಿತ್ರದುರ್ಗ ಜಿಲ್ಲೆಗಳ ಕೆಲವು ಭಾಗಗಳಲ್ಲಿ ವ್ಯಾಪಕವಾಗಿ ಹರಡಿಕೊಂಡಿದ್ದಾರೆ.

ಮೂಲತಃ ಅಲೆಮಾರಿ ಬುಡಕಟ್ಟಿನವರಾದ ಕಾಡುಗೊಲ್ಲರು ತಮ್ಮ ಕರುಳುಬಳ್ಳಿಗಳಂತಿದ್ದ ಗೋವುಗಳೊಂದಿಗೆ ಹುಲ್ಲುಗಾವುಗಳನ್ನು ಅರಸುತ್ತಾ, ಕಾವಲಿನಿಂದ ಕಾವಲಿಗೆ ಅಲೆದಾಡುತ್ತಿದ್ದವರು. ‘ಎಲ್ಲಿ ಹುಲ್ಲು–ನೀರು ಐತೋ ಅದೇ ನಮ್ಮ ಮನಿ ಮಾರು’ ಎಂದು ಹೇಳುವ ಕಾಡುಗೊಲ್ಲರ ಜೀವನ ವಿಧಾನ, ಅವರ ಆಚರಣೆ–ನಂಬಿಕೆಗಳು, ಮೌಖಿಕ ಸಾಹಿತ್ಯ, ಮುಂತಾದುವುಗಳನ್ನು ಕುರಿತು ಕನ್ನಡದ ಜನಪದ ಸಾಹಿತ್ಯದಲ್ಲಿ ಸಾಕಷ್ಟು ಅಧ್ಯಯನಗಳು ನಡೆದಿವೆ ಹಾಗೂ ಜುಂಜಪ್ಪನ ಕಾವ್ಯದ ಸಂಗ್ರಹಗಳೂ ಪ್ರಕಾಶಗೊಂಡಿವೆ.

ತಮ್ಮ ರಕ್ಷಣೆಗಾಗಿ ಹೋರಾಡಿ ಮಡಿದ ಜುಂಜಪ್ಪನನ್ನು ಕುರಿತು ಸಮೃದ್ಧವಾದ ಜನಪದ ಕಾವ್ಯ, ತ್ರಿಪದಿ, ಗದ್ಯಕಥನ ಹಾಗೂ ಗಣೆ ಕಾವ್ಯಗಳನ್ನು ಕಾಡುಗೊಲ್ಲ ಸಮುದಾಯವು ತಮ್ಮ ಅಂತರಾಳದ ಪ್ರೀತಿಯಿಂದ ಸೃಷ್ಟಿಸಿದೆ. ಇಷ್ಟು ವೈವಿಧ್ಯವೂ ಸಮೃದ್ಧವೂ ಆದ ಮೌಖಿಕ ಸಾಹಿತ್ಯ ಜುಂಜಪ್ಪನನ್ನು ಬಿಟ್ಟರೆ, ಕನ್ನಡದ ಯಾವುದೇ ಜನಪದ ಸಾಂಸ್ಕೃತಿಕ ನಾಯಕರುಗಳನ್ನು ಕುರಿತು ಸೃಷ್ಟಿಯಾಗಿಲ್ಲ ಎನ್ನುವುದೇ ಒಂದು ವಿಶೇಷ!

ಕಾಡುಗೊಲ್ಲರ ಸಾಮೂಹಿಕ ಸುಪ್ತಚೇತನದ ಅಪಾರ ಅನುಭವಗಳನ್ನು ಹೊತ್ತುಕೊಂಡೇ ಜನ್ಮತಾಳಿದವನು ಜುಂಜಪ್ಪ. ಎಲ್ಲ ಪವಾಡಪುರುಷರ ಹುಟ್ಟಿನಂತೆ ಜುಂಜಪ್ಪನದು ಸಹಜ ಹುಟ್ಟಲ್ಲ! ಇವನು ಅಯೋನಿಜ. ತನ್ನ ತಾಯಿಯ ಬೆನ್ನಿನಿಂದ ಹುಟ್ಟಿಬಂದವನು ಎಂದು ನಮ್ಮ ಜನಪದರು ತಮ್ಮ ಕಲ್ಪನಾ ಶಕ್ತಿಯಿಂದ ಜುಂಜಪ್ಪನ ಹುಟ್ಟನ್ನು ವೈಭವೀಕರಿಸಿದ್ದಾರೆ.

ತನ್ನ ಸಮುದಾಯದ ಸುಪ್ತಚೇತನದಲ್ಲಿದ್ದ ಪ್ರೇರಣಾ ಶಕ್ತಿಯು ಜುಂಜಪ್ಪನನ್ನು ಒಬ್ಬ ಜನಾಂಗೀಯ ನಾಯಕನಾಗಿ ರೂಪುಗೊಳ್ಳಲು ಸಹಾಯಮಾಡಿದೆ. ಆದ್ದರಿಂದಲೇ ಜುಂಜಪ್ಪನನ್ನು ಕುರಿತು ಮೂಡಿಬಂದಿರುವ ಭಾಷಿಕ ಅಭಿವ್ಯಕ್ತಿಗಳೆಲ್ಲ ಒಂದು ಸಾಮೂಹಿಕ ಅನುಭವಗಳ ಕಾವ್ಯ ಎನ್ನಬಹುದು. ಇಡೀ ಸಮುದಾಯದ ಸ್ವಾವಲಂಬನೆ, ಸ್ವಾತಂತ್ರ್ಯ ಮತ್ತು ಜೀವಕೋಟಿಯ ಒಳಿತಿಗಾಗಿ ಮಿಡಿಯುವ ಜುಂಜಪ್ಪನ ಕಾವ್ಯವು ನಿರ್ಲಕ್ಷಿತ ಸಮುದಾಯಗಳ ಲೋಕದೃಷ್ಟಿಯನ್ನು ಅದ್ಭುತವಾಗಿ ಕಟ್ಟಿಕೊಡುತ್ತದೆ.

ಜುಂಜಪ್ಪನ ಕಾವ್ಯವು ಸ್ಥಿರ ಪಠ್ಯವಲ್ಲ! ಬದಲಾಗಿ ವಿವಿಧ ಕಾಲ ಮತ್ತು ಸನ್ನಿವೇಶಗಳಲ್ಲಿ ವಿಕಾಸಹೊಂದುತ್ತಾ, ಇಂದಿಗೂ ಜೀವನದಿಯಂತೆ ಕಾಡುಗೊಲ್ಲ ಸಮುದಾಯದ ಸುಪ್ತಚೇತನದಲ್ಲಿ ಹರಿಯುತ್ತಿದೆ. ಜುಂಜಪ್ಪ ನಡೆದಾಡಿದ ಸೀಮೆಗಳಲ್ಲಿ ಅವನ ಹೆಜ್ಜೆಗುರುತುಗಳನ್ನು ಭಾವುಕತೆಯಿಂದ ಈಗಲೂ ಗುರ್ತಿಸುವ ಕಾಡುಗೊಲ್ಲರಿಗೆ ಜುಂಜಪ್ಪ ಗತದಲ್ಲಿ ಆಗಿಹೋದ ವ್ಯಕ್ತಿಯಲ್ಲ! ಮಾಸದ ಸೂರ್ಯ–ಚಂದ್ರರಂತೆ ಅವರ ನಿತ್ಯ ಬದುಕಿನಲ್ಲಿ ಈಗಲೂ ಜೀವಂತವಿರುವ ಚೇತನ. ಆದ್ದರಿಂದಲೇ ಜುಂಜಪ್ಪನನ್ನು ಕುರಿತ ಅಸಂಖ್ಯ ನಂಬಿಕೆಗಳು, ಆಚರಣೆಗಳು, ಘನತರ ಭಾಷಿಕ ರೂಹುಗಳು ಹೇರಳವಾಗಿ ಸೃಷ್ಟಿಯಾಗಿವೆ. 


ಜುಂಜಪ್ಪನ ದನ–ಕರುಗಳು ಮೈದುಂಬಿಕೊಂಡು ಬೆಳೆದು, ಅವುಗಳ ಸಂಖ್ಯೆ ದಿನೇ ದಿನೇ ಹೆಚ್ಚಾಗುತ್ತಿದ್ದುದನ್ನು ಅವನ ಸೋದರಮಾವಂದಿರು ಸಹಿಸದಾದರು! ಅವನ ಮೇಲೆ ಬೇರೆಯವರನ್ನು ಎತ್ತಿಕಟ್ಟುತ್ತಾ ಜುಂಜಪ್ಪನಿಗೆ ಕೊಡಬಾರದ ಕಷ್ಟಕೋಟಲೆಗಳನ್ನು ಕೊಡುತ್ತಿದ್ದರು. ಮಾಟ–ಮಂತ್ರಗಳನ್ನು ಮಾಡಿಸಿ ಅವನ ಸುಳಿ ತೆಗೆಯಲು ಇನ್ನಿಲ್ಲದಂತೆ ಪ್ರಯತ್ನಿಸಿದರು.

ಸೋದರಮಾವಂದಿರ ಎಲ್ಲ ಪ್ರಯತ್ನಗಳೂ ನಿಷ್ಫಲವಾದವು. ಇವನನ್ನು ಹೀಗೇ ಬಿಟ್ಟರೆ ನಮ್ಮ ಬುಡವನ್ನೇ ತೆಗೆಯುತ್ತಾನೆ ಎಂದು ಭಾವಿಸಿದ ಸೋದರಮಾವಂದಿರು ಜುಂಜಪ್ಪನ ತಾಯಿ – ತಮ್ಮ ಒಡಹುಟ್ಟು ತಂಗಿ ಚಿನ್ನಮ್ಮನ ಮೂಲಕ ಜುಂಜಪ್ಪನನ್ನು ‘ಎತ್ತಿನ ದೇವರು’ ಮಾಡಲು ತಮ್ಮ ಮನೆಗೆ ಕರೆಸಿಕೊಂಡರು. ಆಲುಸ್ವಾರೆಯಲ್ಲಿ ಉತ್ರಾಣಿ ಮದ್ದು–ಉರಿಮದ್ದನ್ನು ಮಾಡಿ ಅಗ್ರದ ಎಲೆಯನ್ನೇ ಹಾಸಿ ಊಟಕ್ಕೆ ಬಡಿಸಿದರು.

ಸೋದರಮಾವಂದಿರ ಸಂಚನ್ನು ಅರಿತ ಜುಂಜಪ್ಪ ವಿಷಬೆರಸಿದ ಅನ್ನವನ್ನು ಭೇದ ಮಾಡದೆ ತಿನ್ನಲು ನಿರ್ಧರಿಸಿ, ಮೊದಲು ತನ್ನ ಪ್ರೀತಿಪಾತ್ರ ಜೂಲು ನಾಯಿಗೆ ಹಾಕಿದ. ಅನ್ನ ತಿನ್ನುತ್ತಿದ್ದಂತೆ ಜೂಲು ನಾಯಿ ಸತ್ತಿತು. ನೆರೆದಿದ್ದ ಜನರೆಲ್ಲಾ ವಿಷದ ಅನ್ನ ತಿನ್ನಬೇಡವೆಂದು ಹೇಳಿದರೂ ಕೇಳದ ಜುಂಜಪ್ಪ ಪಾಲಿಗೆ ಬಂದಿದ್ದೇ ಪಂಚಾಮೃತ ಎಂದು ಹೇಳಿ ವಿಷದ ಅನ್ನ ತಿಂದು ಮಡಿದುಬಿದ್ದ.

ಅಣ್ಣನ ಸಾವನ್ನು ನೋಡಿದ ಜುಂಜಪ್ಪನ ತಮ್ಮಂದಿರಾದ ಮಾರ–ಮೈಲರು ತಾವೂ ಅಗ್ರದೆಲೆಯಲ್ಲಿ ಉಳಿದಿದ್ದ ವಿಷವನ್ನು ನಾಲಗೆಯಿಂದ ನೆಕ್ಕಿ ಸತ್ತುಬಿದ್ದರು. ಜುಂಜಪ್ಪನ ಸಾವನ್ನು ನೋಡಿದ ಅವನ ಪ್ರೀತಿಪಾತ್ರ ಎತ್ತು ಬಡಮೈಲ ಸಂಕಟ ತಡೆಯಲಾರದೆ ಅಗ್ರದೆಲೆಯನ್ನೇ ತಿಂದು ಅಬ್ಬರಿಸಿ ಪ್ರಾಣಬಿಟ್ಟಿತು. ಇದಕ್ಕೆ ಪ್ರತಿಯಾಗಿ ಸತ್ತೇಳು ದಿನಕೆ ಕೈಲಾಸದಲ್ಲಿದ್ದ ಮಾರಣ್ಣ, ಮೈಲಣ್ಣ, ಹಿರಿಯೋನು ಜುಂಜಪ್ಪ ಒಟ್ಟುಗೂಡಿ ತಮಗೆ ವಿಷವಿಕ್ಕಿದ ಕಂಬೇರಹಟ್ಟಿಯ ಮಾವಂದಿರ ಮೇಲೆ ಬೆಂಕಿಯ ಮಳೆಗರೆದರು. ಕಂಬೇರಹಟ್ಟಿ ಉರಿದು ಬೂದಿಯಾಯಿತು. ಕಂಬೇರರು ದಿಕ್ಕಿಲ್ಲದೆ ಸಾಯುತ್ತಾರೆ.

ತನ್ನ ಹದಿನೇಳನೇ ವಯಸ್ಸಿಗೆ ಸೋದರಮಾವಂದಿರ ದ್ವೇಷದಿಂದ ಮಡಿದ ಜುಂಜಪ್ಪ ಮತ್ತು ಅವನ ಇಬ್ಬರು ತಮ್ಮಂದಿರಿಗೆ ಕಳುವೋರಳ್ಳಿಯಲ್ಲಿ ಒಂದೇ ಮಣ್ಣಮನೆ ಮಾಡಿ ಸಮಾಧಿಮಾಡುತ್ತಾರೆ. ಜುಂಜಪ್ಪನ ಸಮಾಧಿ ಎದುರಿನಲ್ಲೇ ಬಡಮೈಲನ ಸಮಾಧಿಯೂ ನಡೆಯುತ್ತದೆ. ಜುಂಜಪ್ಪನ ಸಮಾಧಿಯನ್ನು ‘ಜುಂಜಪ್ಪನ ಗುಡ್ಡೆ’ ಎಂದು ಜನ ಈಗ ಕರೆಯುತ್ತಾರೆ. ಜುಂಜಪ್ಪನ ಸಮಾಧಿ ಮೇಲೆ ಕಲ್ಲು ಹಾಸಿ, ಕಲ್ಲಗುಡಿಯಲ್ಲಿ ಬೆನವನನ್ನು ಇಟ್ಟು ಜನ ಪೂಜಿಸುತ್ತಾರೆ. ವಿಷದ ಅನ್ನ ತಿಂದು ಸತ್ತ ಜೂಲುನಾಯಿ ‘ಜುಂಜಪ್ಪನ ಗುಡ್ಡೆ’ ಎದುರಿನಲ್ಲೇ ಕಲ್ಲುಬಾಣ ಆಗಿದೆ.

ಇದನ್ನು ‘ಜೂಲುನಾಯಿ ಗುಡ್ಡೆ’ ಎಂದು ಕರೆಯುತ್ತಾರೆ. ಈ ದಾರಿಯಲ್ಲಿ ಓಡಾಡುವವರು ಒಂದು ಕಲ್ಲನ್ನು ಎತ್ತಿ ಗುಡ್ಡೆಗೆ ಹಾಕುತ್ತಾರೆ. ಆ ಕಲ್ಲುಗುಡ್ಡೆ ಈಗಲೂ ಇದೆ, ಹಾಗೆಯೇ ಜುಂಜಪ್ಪನ ತಂದೆ ಮಲೆಗೊಂಡ ಮತ್ತು ತಾಯಿ ಚಿನ್ನಮ್ಮನ ಸಮಾಧಿ ಕಳುವೋರಳ್ಳಿಯ ದೇವರ ಹೊಲದಲ್ಲಿದೆ. ಇದೇ ಹೊಲದಲ್ಲಿರುವ ದೊಡ್ಡ ಅರಳೀಮರವನ್ನು ಜುಂಜಪ್ಪನ ತಂದೆ–ತಾಯಿಗಳೇ ನೆಟ್ಟು ಬೆಳೆಸಿದ್ದೆಂದು ಕಳುವೋರಳ್ಳಿಯವರು ಹೇಳುತ್ತಾರೆ. ಇವೆಲ್ಲವೂ ಈಗ ಕೇಳುವವರಿಲ್ಲದೆ ಅನಾಥವಾಗಿ ಜನಪದರ ವಿಸ್ಮೃತಿಯ ಸ್ಮಾರಕಗಳಂತೆ ನಿಂತಿವೆ.

ಸುಮಾರು ಇಪ್ಪತ್ತೇಳೂವರೆ ಎಕರೆಯಲ್ಲಿದ್ದ ಜುಂಜಪ್ಪನ ಗುಡ್ಡೆ ಸುತ್ತಲೂ ಈಗ ವಿಶಾಲವಾದ ಕಲ್ಲಿನ ಪೌಳಿಯನ್ನು ನಿರ್ಮಿಸಿದ್ದಾರೆ. ಜುಂಜಪ್ಪನ ಗುಡ್ಡೆಗೆ ಸೇರಿದ ಉಳಿದ ಭೂಮಿ ಬಲಾಢ್ಯರಿಂದ ಒತ್ತುವರಿಯಾಗಿ ತಿನ್ನುವವರ ಪಾಲಾಗಿದೆ ಎಂದು ಸ್ಥಳೀಯ ಜನರು ಅಳಲು ತೋಡಿಕೊಳ್ಳುತ್ತಾರೆ. ಸಮರ್ಪಕವಾದ ನಿರ್ವಹಣೆಯಿಲ್ಲದೆ ಜುಂಜಪ್ಪನ ಗುಡ್ಡೆ ಶಿಥಿಲಾವಸ್ಥೆಯಲ್ಲಿದೆ. ಪೌಳಿಯ ಮುಂದೆ ದೊಡ್ಡದೊಂದು ಬೇವಿನಮರ ಮಾತ್ರ ತನ್ನ ಕೈಲಾದಷ್ಟು ನೆರಳನ್ನು ನೀಡುತ್ತಿದೆ. ಅಲ್ಲಿಗೆ ಹೋಗಲು ರಸ್ತೆಯಾಗಲಿ, ಸೂಚನಾಫಲಕವಾಗಲಿ ನಮಗೆ ಕಾಣಿಸುವುದಿಲ್ಲ.

ಬಹುಶಃ ಅನೇಕ ಜನರಿಗೆ ಜುಂಜಪ್ಪನ ಸಮಾಧಿ ಇದೆ ಎನ್ನುವುದು ಗೊತ್ತಿದೆಯೋ? ಗೊತ್ತಿಲ್ಲವೋ? ಅದೂ ಅನುಮಾನವೇ! ಹೇಗೋ ದಾರಿಹೋಕರ ನೆರವನ್ನು ಪಡೆದು ಜುಂಜಪ್ಪಗುಡ್ಡೆಗೆ ಬಂದರೂ ಅಲ್ಲಿ ನೀರಿನ ವ್ಯವಸ್ಥೆಯಾಗಲಿ, ಜುಂಜಪ್ಪನ ಬಗ್ಗೆ ಮಾಹಿತಿಯಾಗಲಿ ದೊರೆಯುವುದಿಲ್ಲ! ನಮ್ಮ ಸರ್ಕಾರ ಪ್ರತಿವರ್ಷ ಕರ್ನಾಟಕದಲ್ಲಿರುವ ಪ್ರತಿಷ್ಠಿತ ಸಮುದಾಯಕ್ಕೆ ಸೇರಿದವರ ಅನೇಕ ಸ್ಮಾರಕಗಳನ್ನು ಊರ್ಜಿತಗೊಳಿಸಲು ತನ್ನ ಬೊಕ್ಕಸದಿಂದ ಹಣ ನೀಡುತ್ತಿದೆ. ಆದರೆ ಸಮಾಜದ ಅಂಚಿನಲ್ಲಿರುವ ಅಲೆಮಾರಿ ಸಮುದಾಯದ ಕಾಡುಗೊಲ್ಲರ ದೈವ, ಜೀವದಯೆಯ ಪ್ರತೀಕವೆನಿಸಿದ ಜುಂಜಪ್ಪನ ಸಮಾಧಿಯನ್ನು ನಿರ್ಲಕ್ಷಿಸಿದೆ. ಈಗಲೂ ಇದನ್ನು ಜನಪದ ಸಂಸ್ಕೃತಿಯ ಉತ್ಕೃಷ್ಟ ಸ್ಮಾರಕವನ್ನಾಗಿ ರೂಪಿಸುವ ಎಲ್ಲ ಸಾಧ್ಯತೆಗಳೂ ಇವೆ.

ನಮಗೆ ಮಹರ್ಷಿ ಟಾಲ್‌ಸ್ಟಾಯ್ ಅವರ ಸಮಾಧಿಯೂ ಗೊತ್ತು! ಶೇಕ್ಸ್‌ಪಿಯರ್‌ನ ಸ್ಮಾರಕವೂ ಗೊತ್ತು! ಹಾಗೆಯೇ ಕರ್ನಾಟಕದಲ್ಲಿರುವ ಅನೇಕ ಸ್ಮಾರಕಗಳ ಬಗ್ಗೆಯೂ ನಮಗೆ ತಿಳಿದಿದೆ. ಆದರೆ ನಮ್ಮ ಕಣ್ಣಿನ ಕೆಳಗೇ ಇರುವ, ಜನಪದ ಮಹಾಕಾವ್ಯವೊಂದರ ನಾಯಕ, ತನ್ನ ಸಮುದಾಯದ ನಡುವೆ ಜಾತ್ಯಾತೀತ ವ್ಯಕ್ತಿಯಾಗಿ, ದನ–ಕರುಗಳ ಉಳಿವಿಗಾಗಿ ಬಾಳಿ–ಬದುಕಿದ ಜುಂಜಪ್ಪನ ಹುಟ್ಟಿದ ನೆಲೆ, ಸಮಾಧಿಗೊಂಡ ಸ್ಥಳದ ಬಗ್ಗೆ ಗೊತ್ತಿಲ್ಲದಿರುವುದು ವಿಪರ್ಯಾಸದ ಸಂಗತಿ! ಪ್ರತಿವರ್ಷ ಈ ಭಾಗದಲ್ಲಿ ದೀವಳಿಗೆಯಲ್ಲಿ ಜುಂಜಪ್ಪನ ಜಾತ್ರೆ ‘ಮೇಲುದೀವಿಗೆ’ ಮತ್ತು ‘ಕಿರುದೀವಿಗೆ’ ಎಂದು ಎರಡು ದಿನ ವಿಶಿಷ್ಟ ಆಚರಣೆಗಳೊಂದಿಗೆ ಸಡಗರದಿಂದ ನಡೆಯುತ್ತದೆ. ಹಾಗೂ ಯುಗಾದಿಯ ಮರುದಿನ ನಡೆಯುವ ಕರಿದಿನದಂದು ಬಹುದೊಡ್ಡ ಜಾತ್ರೆ ನಡೆಯುತ್ತದೆ. ಎಲ್ಲ ಜಾತಿ, ಸಮುದಾಯದ ಜನರು ಪಾಲ್ಗೊಳ್ಳುವ ಈ ಜಾತ್ರೆಗೆ ನೆರೆ ರಾಜ್ಯಗಳಾದ ಆಂಧ್ರಪ್ರದೇಶ, ತಮಿಳುನಾಡಿನಿಂದಲೂ ಜುಂಜಪ್ಪನ ಭಕ್ತರು ಬರುತ್ತಾರೆ. ಮೂಲತಃ ಜುಂಜಪ್ಪ ವೀರಭದ್ರನ ಅಂಶದಿಂದ ಹುಟ್ಟಿದ ಶೈವದೇವರಾದರೂ ಆಚರಣೆಯಲ್ಲಿ ಜುಂಜಪ್ಪನನ್ನು ಸಂಪೂರ್ಣವಾಗಿ ವೈಷ್ಣವೀಕರಿಸಿರುವುದು ಇತಿಹಾಸದ ಒಂದು ವ್ಯಂಗ್ಯ.

ಭಾರತದ ಸಂದರ್ಭದಲ್ಲಿ ವೈದಿಕ ಚಿಂತನಾ ಮಾರ್ಗ ಮತ್ತು ವಸಾಹತುವಾದವು ಇಲ್ಲಿನ ಜಾನಪದವನ್ನೂ ಸೇರಿದಂತೆ, ಬಹುತ್ವದ ದೇಸೀ ಆಕೃತಿಗಳು ಕೀಳರಿಮೆಗೆ ತುತ್ತಾಗುವಂತೆ ಮಾಡಿವೆ. ಯಜಮಾನಿಕೆ ಸಂಸ್ಕೃತಿಯ ಮೌಲ್ಯಗಳನ್ನು ಸಮರ್ಥಿಸಿ, ಅದನ್ನೇ ಸಾರ್ವತ್ರಿಕಗೊಳಿಸುವ ಆಶಯಗಳನ್ನು ಒಳಗೊಂಡ ಮಹಾಕಥನಗಳ ಎದುರಿಗೆ, ಸಾಮರಸ್ಯ ಮತ್ತು ಎಲ್ಲ ಜೀವಿಗಳ ಹಿತವನ್ನೇ ಆಶಯವಾಗುಳ್ಳ ಜಾನಪದ ಪಠ್ಯಗಳು ಬೌದ್ಧಿಕ ಸಾಮ್ಯಪಡೆದ ವರ್ಗದ ಹಿಡಿತವನ್ನು ಸಮರ್ಥವಾಗಿ ತೊಡೆದುಹಾಕುತ್ತವೆ.

ಈ ಹಿನ್ನೆಲೆಯಲ್ಲಿ ಮಾರ್ಗಪರಂಪರೆಯ ಕಾವ್ಯಮೀಮಾಂಸೆಯ ಸಿದ್ಧಸೂತ್ರಗಳಿಗೆ ಪರ್ಯಾಯವಾಗಿ ಸೃಷ್ಟಿಯಾಗಿರುವ ಕಾಡುಗೊಲ್ಲ ಸಮುದಾಯದ ಭಾಷಿಕ ಕಲೆ ಸಾಮರಸ್ಯದ ಅಭಿವ್ಯಕ್ತಿ. ಪಶುಪಾಲಕ ಸಮುದಾಯದ ಅಲೆಮಾರಿ ಜೀವನ ಶೈಲಿ, ಸಂಸ್ಕೃತಿಯ ವಿಕಾಸ, ಜನಪದ ಸಾಹಿತ್ಯ, ನಂಬಿಕೆ, ಆಚರಣೆ ಮತ್ತು ಜೀವದಯೆಯ ಮಹಾಕೋಶದಂತಿರುವ ಇದು, ಉನ್ನತ ವರ್ಗದವರು ತಮ್ಮ ನಿರೂಪಗಳಲ್ಲಿ ಕಡೆಗಣಿಸಿದ ಇತಿಹಾಸ ಕಥನವನ್ನು ಕಟ್ಟಿಕೊಡುತ್ತದೆ. ಲೋಕಗ್ರಹಿಕೆಯಲ್ಲಿ ಎರಡು ದಾರಿಗಳಿವೆ; ಕಾಣದುದನ್ನು ಅರಸುವುದು ಒಂದು ಬಗೆಯಾದರೆ, ಕಂಡದುದನ್ನು ಅರಸುವುದು ಇನ್ನೊಂದು ಬಗೆ. ಇದು ಕಂಡದುದನ್ನೇ ಅರಸುವ ಕ್ರಮ.

(ಈ ಲೇಖನಕ್ಕೆ ಅಗತ್ಯವೆನಿಸಿದ ಮಾಹಿತಿಯನ್ನು ಡಾ. ಮೀರಾಸಾಬಿಹಳ್ಳಿ ಶಿವಣ್ಣ ಅವರ ಜುಂಜಪ್ಪ ಎನ್ನುವ ಕೃತಿಯಿಂದ ಪಡೆದಿದ್ದೇನೆ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT