ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯಾಕೆ ಬೇಕಿತ್ತು ಈ ಎಡವಟ್ಟು?

ತಟಸ್ಥ ಸ್ಥಳದಲ್ಲಿ ರಣಜಿ
Last Updated 16 ಅಕ್ಟೋಬರ್ 2016, 19:30 IST
ಅಕ್ಷರ ಗಾತ್ರ

ಈ ಬಾರಿಯ ರಣಜಿ ಟೂರ್ನಿ ಆರಂಭವಾಗಿ ಎರಡು ಸುತ್ತಿನ ಪಂದ್ಯಗಳಷ್ಟೇ ಮುಗಿದಿವೆ. ಆಗಲೇ ಬಿಸಿಸಿಐನ ಹೊಸ ನಿಯಮದ ಬಗ್ಗೆ ಟೀಕಾ ಪ್ರಹಾರಗಳು ಕೇಳಿಬರುತ್ತಿವೆ. ತಟಸ್ಥ ಸ್ಥಳದಲ್ಲಿ ರಣಜಿ ನಡೆದರೆ ಪಂದ್ಯಗಳು ಹೆಚ್ಚು ಸ್ಪರ್ಧಾತ್ಮಕವಾಗಿರುತ್ತವೆ ಆದ್ದರಿಂದ ತಟಸ್ಥ ಸ್ಥಳವೇ ಸೂಕ್ತ ಎನ್ನುವುದು ಕ್ರಿಕೆಟ್‌ ಮಂಡಳಿಯ ವಾದ. ಆದರೆ ಇದರಿಂದ ಏನೆಲ್ಲಾ ಸಮಸ್ಯೆಗಳು ಎಂಬುದು ಟೂರ್ನಿ ಆರಂಭವಾದ 15 ದಿನಗಳಲ್ಲಿಯೇ ಬಯಲಾಗಿದೆ.

ದೇಶಿ ಟೂರ್ನಿಗಳಲ್ಲಿ ಹೆಚ್ಚು ಪ್ರಾಮುಖ್ಯತೆ ಹೊಂದಿರುವ ರಣಜಿಯ ಎಲ್ಲಾ ಪಂದ್ಯಗಳನ್ನು ತಟಸ್ಥ ಸ್ಥಳದಲ್ಲಿ ನಡೆಸಬೇಕೆಂದು 2012ರಲ್ಲಿ ಬಿಸಿಸಿಐ ಯೋಜನೆ ರೂಪಿಸಿತ್ತಾದರೂ ಆಗ ಆಟಗಾರರು ಮತ್ತು ರಾಜ್ಯ ಕ್ರಿಕೆಟ್‌ ಸಂಸ್ಥೆಗಳು ವಿರೋಧ ವ್ಯಕ್ತಪಡಿಸಿದ್ದವು. ಇದರಿಂದ ಆಗ ಈ ಹೊಸ ನಿಯಮ ಜಾರಿಗೆ ಬರಲಿಲ್ಲ. ಭಾರತ ಕ್ರಿಕೆಟ್‌ ತಂಡದ ಮಾಜಿ ನಾಯಕ ಸೌರವ್ ಗಂಗೂಲಿ ಅವರು ಬಿಸಿಸಿಐ ತಾಂತ್ರಿಕ ಸಮಿತಿಯ ಮುಖ್ಯಸ್ಥರಾಗಿ ನೇಮಕವಾದ ಬಳಿಕ ತಟಸ್ಥ ಸ್ಥಳದಲ್ಲಿ ಪಂದ್ಯಗಳನ್ನು ಆಯೋಜಿಸುವ ಹಳೆಯ ಯೋಜನೆಗೆ ಮರುಜೀವ ನೀಡಿದರು. ಈ ವಿಷಯವನ್ನು ಬಿಸಿಸಿಐ ಕಾರ್ಯಕಾರಿ ಸಮಿತಿಯ ಸಭೆಯ ಮುಂದಿಟ್ಟು ಒಪ್ಪಿಗೆಯನ್ನೂ ಪಡೆದರು. ಆದ್ದರಿಂದ ಪರ ವಿರೋಧದ ನಡುವೆ ಹೊಸ ನಿಯಮ ಜಾರಿಗೆ ಬಂದಿದೆ. ಆದರೆ ಹೊಸ ನಿಯಮದ ಉದ್ದೇಶವೇ ಈಗ ಉಲ್ಟಾ ಆಗಿದೆ.

ಹೊಸ ನಿಯಮ ಬಂದಿದ್ದು ಹೀಗೆ
2015–16ರ ರಣಜಿ ಟೂರ್ನಿಯ ಒಂಬತ್ತು ಪಂದ್ಯಗಳು ಕೇವಲ ಎರಡೇ ದಿನಗಳಲ್ಲಿ ಮುಗಿದು ಹೋಗಿದ್ದವು. ತವರಿನ ತಂಡ ತನ್ನ ಅನುಕೂಲಕ್ಕೆ ತಕ್ಕಂತೆ ಪಿಚ್‌ ಮಾಡಿಕೊಂಡಿದ್ದರಿಂದ ಈ ರೀತಿಯ ಕೆಟ್ಟ ಫಲಿತಾಂಶ ಬರುತ್ತಿದೆ. ಕಳಪೆ ಪಿಚ್‌ಗಳು ಹೊಸ ಆಟಗಾರರ ಕ್ರಿಕೆಟ್‌ ಬದುಕನ್ನೇ ನುಂಗಿ ಹಾಕುತ್ತಿವೆ ಎಂದು ಭಾರತ ಜೂನಿಯರ್ ತಂಡದ ಕೋಚ್‌ ರಾಹುಲ್‌ ದ್ರಾವಿಡ್ ಟೀಕಿಸಿದ್ದರು. ಆದ್ದರಿಂದ ಗಂಗೂಲಿ ಅವರು ಈ ಸಮಸ್ಯೆಗೆ ತಟಸ್ಥ ಸ್ಥಳದ ಪರಿಹಾರ ಹುಡುಕಿದರು.

ಆದರೆ ಹೊಸ ನಿಯಮ ಜಾರಿಗೆ ಬಂದ ಬಳಿಕ ಫಲಿತಾಂಶದಲ್ಲಿ ನಿರೀಕ್ಷಿತ ಬದಲಾವಣೆಯಾಗಿಲ್ಲ. ಯೋಜನಾಬದ್ಧವಾಗಿ ಆಡಿದ ಬಲಿಷ್ಠ ತಂಡಗಳಿಗೆ ಜಯ ಲಭಿಸಿದೆ. ಕಳಪೆ ಪ್ರದರ್ಶನ ನೀಡಿದ ತಂಡಗಳು ಸೋಲು ಕಂಡಿವೆ. ಒಂದು ತಂಡದ ಶಕ್ತಿ ಮತ್ತು ದೌರ್ಬಲ್ಯದ ಮೇಲೆ ಆ ತಂಡದ ಸೋಲು ಗೆಲುವು ಅವಲಂಬಿತವಾಗಿದೆಯೇ ಹೊರತು ಪಿಚ್‌ಗಳ ಮೇಲಲ್ಲ ಎಂಬುದು ಮೊದಲ ಸುತ್ತಿನ ಪಂದ್ಯಗಳಲ್ಲಿ ಸಾಬೀತಾಗಿದೆ. ಇದಕ್ಕೆ ಹಲವು ಪಂದ್ಯಗಳ ಫಲಿತಾಂಶಗಳೇ ಸಾಕ್ಷಿ.

ಹರಿಯಾಣದ ರೋಹ್ಟಕ್‌ನಲ್ಲಿ ನಡೆದ ಮುಂಬೈ ಮತ್ತು ತಮಿಳುನಾಡು ನಡುವಣ ಪಂದ್ಯ ಎರಡೂವರೆ ದಿನಗಳಲ್ಲಿಯೇ ಮುಗಿದು ಹೋಯಿತು. ಮೊದಲ ಇನಿಂಗ್ಸ್‌ನಲ್ಲಿ ತಮಿಳುನಾಡು 87 ರನ್‌ ಮತ್ತು ಎರಡನೇ ಇನಿಂಗ್ಸ್‌ನಲ್ಲಿ 185 ರನ್‌ ಮಾತ್ರ ಕಲೆ ಹಾಕಿತ್ತು. ಈ ಪಂದ್ಯದಲ್ಲಿ ಮುಂಬೈ ಎರಡನೇ ಇನಿಂಗ್ಸ್‌ನಲ್ಲಿ 97 ರನ್ ಕಲೆ ಹಾಕುವಷ್ಟರಲ್ಲಿ ಎಂಟು ವಿಕೆಟ್‌ಗಳನ್ನು ಕಳೆದುಕೊಂಡಿತ್ತು. ಮೊದಲ ದಿನದಾಟದಲ್ಲಿ 14, ಎರಡನೇ ದಿನ 12 ಮತ್ತು ಮೂರನೇ ದಿನ 12 ವಿಕೆಟ್‌ಗಳು ಪತನವಾಗಿದ್ದವು. ಸ್ಪರ್ಧಾತ್ಮಕ ಪಿಚ್‌ ಎಂದರೆ ಇದೇನಾ?

ಹೈದರಾಬಾದ್‌ನಲ್ಲಿ ನಡೆದ ಇನ್ನೊಂದು ಪಂದ್ಯದ ಫಲಿತಾಂಶವೂ ಅಚ್ಚರಿ ಮೂಡಿಸುವಂತಿದೆ. ಆ ಪಂದ್ಯದಲ್ಲಿ ಮಧ್ಯಪ್ರದೇಶ ಮೊದಲ ಇನಿಂಗ್ಸ್‌ನಲ್ಲಿ 465 ರನ್‌ ಹೊಡೆದಿತ್ತು. ಆದರೆ ಎದುರಾಳಿ ಉತ್ತರ ಪ್ರದೇಶ ಎರಡೂ ಇನಿಂಗ್ಸ್‌ (176 ಮತ್ತು 225) ಸೇರಿ ಗಳಿಸಿದ್ದು 401 ರನ್‌. ಇದರಿಂದ ಮಧ್ಯಪ್ರದೇಶ 64 ರನ್‌ಗಳ ಸುಲಭ ಜಯ ಪಡೆಯಿತು.

ಅಷ್ಟೇ ಏಕೆ ಮೊದಲ ಬಾರಿಗೆ ರಣಜಿ ಟೂರ್ನಿಯಲ್ಲಿ ಅವಕಾಶ ಪಡೆದಿರುವ ಛತ್ತೀಸಗಡ ತಂಡ ಅಕ್ಟೋಬರ್‌ ಮೊದಲ ವಾರದಲ್ಲಿ ನಡೆದ ತನ್ನ ಮೊದಲ ಪಂದ್ಯದಲ್ಲಿ ಸಾಮರ್ಥ್ಯ ಸಾಬೀತು ಮಾಡಿದೆ. ಈ ತಂಡ 255 ರನ್ ಗಳಿಸಿತ್ತು. ಎದುರಾಳಿ ತ್ರಿಪುರ ತಂಡವನ್ನು ಮೊದಲ ಇನಿಂಗ್ಸ್‌ನಲ್ಲಿ 118 ಮತ್ತು ಎರಡನೇ ಇನಿಂಗ್ಸ್‌ನಲ್ಲಿ 149 ರನ್‌ಗೆ ಆಲೌಟ್‌ ಮಾಡಿತ್ತು. ಇದು ಛತ್ತೀಸಗಡ ತಂಡದ ಸಾಮರ್ಥ್ಯವೋ ಅಥವಾ ಪಿಚ್‌ ಮರ್ಮವೋ ಎನ್ನುವುದನ್ನು ಕ್ರಿಕೆಟ್ ಪ್ರೇಮಿಗಳೇ ನಿರ್ಧರಿಸಬೇಕು.

ಇವೆಲ್ಲವೂ ಉದಾಹರಣೆಗಳಷ್ಟೇ. ಈ ಬಾರಿಯ ಮೊದಲ ಸುತ್ತಿನ ಪಂದ್ಯಗಳಲ್ಲಿ ರಾಜಸ್ತಾನ ತಂಡವನ್ನು 105 ರನ್‌ಗಳಿಗೆ ಕಟ್ಟಿ ಹಾಕಿ ಸೌರಾಷ್ಟ್ರ ಪಂದ್ಯವನ್ನು ಡ್ರಾ ಮಾಡಿಕೊಂಡಿತ್ತು. ಕಲ್ಯಾಣಿಯಲ್ಲಿ ಜರುಗಿದ ಪಂದ್ಯದಲ್ಲಿ ಕೇರಳ ಮೊದಲ ಇನಿಂಗ್ಸ್‌ನಲ್ಲಿ 306 ರನ್‌ ಕಲೆ ಹಾಕಿತ್ತು. ಆದರೆ ಜಮ್ಮು ಮತ್ತು ಕಾಶ್ಮೀರ ತಂಡವನ್ನು 121 ರನ್‌ಗಳಿಗೆ ಆಲೌಟ್‌ ಮಾಡಿತ್ತು. ಈ ಎಲ್ಲಾ ಫಲಿತಾಂಶಗಳು ಬಂದಿದ್ದು ಆಯಾ ತಂಡಗಳ ಸಾಮರ್ಥ್ಯದಿಂದಲೇ ಹೊರತು ಬಿಸಿಸಿಐನ ಹೊಸ ನಿಯಮದಿಂದಲ್ಲ.

ಹೊಸ ನಿಯಮದಿಂದ ಸಮಸ್ಯೆಗಳೇನು?
ಹಳೆ ನಿಯಮದ ಪ್ರಕಾರ ಪ್ರತಿ ತಂಡಗಳು ತವರಿನಲ್ಲಿ ನಾಲ್ಕು ಮತ್ತು ಹೊರಗಡೆ ನಾಲ್ಕು ಪಂದ್ಯಗಳನ್ನು ಆಡಬೇಕಿತ್ತು. ಆದರೆ ಹೊಸ ನಿಯಮದ ಪ್ರಕಾರ ಎಲ್ಲಾ ತಂಡಗಳು ತಟಸ್ಥ ಸ್ಥಳದಲ್ಲಿ ಪಂದ್ಯಗಳನ್ನು ಆಡಲಿವೆ. ಇದರಿಂದ ಎಲ್ಲಾ ತಂಡಗಳು ಪದೇ ಪದೇ ಪ್ರವಾಸ ಮಾಡಬೇಕಾಗುತ್ತದೆ. ನಾಲ್ಕು ದಿನಗಳ ಅಂತರದಲ್ಲಿ ಮತ್ತೊಂದು ಪಂದ್ಯ ನಡೆಯುವ ಕಾರಣ ಆಟಗಾರರಿಗೆ ಪ್ರವಾಸವೇ ದೊಡ್ಡ ಹೊರೆಯಾಗುತ್ತದೆ.

‘ಮೇಲಿಂದ ಮೇಲೆ ಪ್ರವಾಸ ಮಾಡುವುದರಿಂದ ಬೆನ್ನು ನೋವು ಬರುತ್ತದೆ. ಇದೆಲ್ಲಕ್ಕಿಂತ ಹೆಚ್ಚಾಗಿ ತವರಿನ ಅಭಿಮಾನಿಗಳ ಬೆಂಬಲವಿಲ್ಲದೇ ಪಂದ್ಯವಾಡಿದರೆ ಅದರಿಂದ ಲಾಭವಾದರೂ ಏನು’ ಎಂದು ಕರ್ನಾಟಕ ತಂಡದ ವಿಕೆಟ್‌ ಕೀಪರ್ ಸಿ.ಎಂ. ಗೌತಮ್‌ ಪ್ರಶ್ನಿಸುತ್ತಾರೆ.

ಹೋದ ವಾರ ಕರ್ನಾಟಕ ಮತ್ತು ಜಾರ್ಖಂಡ್ ತಂಡಗಳು ಗ್ರೇಟರ್‌ ನೋಯ್ಡಾದಲ್ಲಿ ಪಂದ್ಯವಾಡಿದವು. ಆ ಪಂದ್ಯವನ್ನು ನೋಡಲು ಬೆರಳೆಣಿಕೆಯಷ್ಟೇ ಜನ ಬಂದಿದ್ದರು. ಒಂದು ವೇಳೆ ಆ ಪಂದ್ಯವನ್ನು ಕರ್ನಾಟಕ ಅಥವಾ ಜಾರ್ಖಂಡ್‌ನಲ್ಲಿ ಆಯೋಜಿಸಿದ್ದರೆ ಒಂದು ತಂಡದ ಅಭಿಮಾನಿಗಳಿಗಾದರೂ ತವರಿನ ತಂಡದ ಪಂದ್ಯ ನೋಡಲು ಅವಕಾಶ ಸಿಗುತ್ತಿತ್ತು. ಮುಂದಿನ ಬಾರಿಯಾದರೂ ಬಿಸಿಸಿಐ ಈ ನಿಟ್ಟಿನಲ್ಲಿ ಚಿಂತಿಸಲಿ.
*
‘ಬಿಸಿಸಿಐ ವಿರುದ್ಧ ಹೋಗಲು ಸಾಧ್ಯವೇ’
ತವರಿನ ತಂಡದಲ್ಲಿ ಆಡಿದರೆ ಆ ರಾಜ್ಯದ ತಂಡ ತನಗೆ ಅನುಕೂಲವಾಗುವಂತೆ ಪಿಚ್‌ ನಿರ್ಮಿಸಿಕೊಳ್ಳುತ್ತದೆ. ಇದರಿಂದ ಎದುರಾಳಿ ತಂಡಕ್ಕೆ ಕಷ್ಟವಾಗುತ್ತದೆ ಎಂದು ಬಿಸಿಸಿಐ ತಟಸ್ಥ ಸ್ಥಳದ ಪರಿಹಾರ ಕಂಡುಕೊಂಡಿದೆ. ಆದರೆ ಇದಕ್ಕೆ ತಟಸ್ಥ ಸ್ಥಳವೇ ಪರಿಹಾರವಲ್ಲ ಎಂದು ಕೆಲ ಕ್ರಿಕೆಟಿಗರು ಅಭಿಪ್ರಾಯಪಟ್ಟಿದ್ದಾರೆ.

‘ಬೇರೆ ವಲಯಗಳ ಪಿಚ್‌ ಕ್ಯುರೇಟರ್‌ಗಳನ್ನು ಒಂದು ವಾರ ಮೊದಲು ಕರೆಯಿಸಿ ಪಿಚ್‌ ಸಜ್ಜು ಮಾಡಿಸಬಹುದಿತ್ತು. ಆಗ ತಟಸ್ಥ ಸ್ಥಳದ ಪ್ರಶ್ನೆಯೇ ಬರುತ್ತಿರಲಿಲ್ಲ. ಈಗಿನ ನಿಯಮದ ಪ್ರಕಾರ ಹೊರ ರಾಜ್ಯದ ತಂಡಗಳು ಬಂದು ನಮ್ಮ ರಾಜ್ಯದಲ್ಲಿ ಪಂದ್ಯವಾಡಿದರೆ ಉತ್ತಮ ಪಿಚ್ ಸಜ್ಜು ಮಾಡಲು ಕ್ಯುರೇಟರ್‌ಗೆ ಆಸಕ್ತಿಯಾದರೂ ಎಲ್ಲಿರುತ್ತದೆ. ಇದನ್ನು ಬಿಸಿಸಿಐ ಅರ್ಥಮಾಡಿಕೊಳ್ಳಬೇಕು. ಹೊಸ ನಿಯಮವನ್ನು ಎಲ್ಲಾ ರಾಜ್ಯ ಸಂಸ್ಥೆಗಳು ಮತ್ತು ಹಲವು ಆಟಗಾರರು ಅನಿವಾರ್ಯವಾಗಿ ಒಪ್ಪಿಕೊಂಡಿದ್ದಾರೆ. ಮಂಡಳಿ ನಿರ್ಧಾರದ ವಿರುದ್ಧ ಮುಂದುವರಿಯಲು ನಮಗೆ ಸಾಧ್ಯವೇ’ ಎಂದು ಹೆಸರು ಹೇಳಲು ಬಯಸದ ಕರ್ನಾಟಕ ತಂಡದ ಆಟಗಾರನೊಬ್ಬ ಪ್ರಶ್ನಿಸಿದ್ದಾರೆ.
*
ನಾಕೌಟ್‌ ಹಂತಕ್ಕೂ ವಿರೋಧವಿತ್ತು
ಬಿಸಿಸಿಐ ಮೊದಲು ರಣಜಿ ಟೂರ್ನಿಯ ನಾಕೌಟ್‌ ಹಂತದ ಪಂದ್ಯಗಳನ್ನಷ್ಟೇ ತಟಸ್ಥ ಸ್ಥಳದಲ್ಲಿ ಆಯೋಜಿಸುತ್ತಿತ್ತು. ಆಗಲೇ ಹಲವು ರಾಜ್ಯ ಕ್ರಿಕೆಟ್ ಸಂಸ್ಥೆಗಳು ವಿರೋಧ ವ್ಯಕ್ತಪಡಿಸಿದ್ದವು. 2013–14 ಮತ್ತು 2014–15ರಲ್ಲಿ ಕರ್ನಾಟಕ ತಂಡ ಕ್ರಮವಾಗಿ ಹೈದರಾಬಾದ್‌ ಮತ್ತು ಮುಂಬೈನಲ್ಲಿ  ಫೈನಲ್‌ ಆಡಿ ಪ್ರಶಸ್ತಿ ಗೆದ್ದಿದ್ದವು. ಆಗಲೂ ಪಂದ್ಯ ವೀಕ್ಷಿಸಲು ಹೆಚ್ಚಿನ ಜನ ಬಂದಿರಲಿಲ್ಲ. ಆದ್ದರಿಂದ ಆಗ ಎಲ್ಲಾ ಪಂದ್ಯಗಳನ್ನು ಒಂದು ತಂಡದ ತವರಿನ ಸ್ಥಳದಲ್ಲಿ ಆಯೋಜಿಸಬೇಕು ಎನ್ನುವ ಕೂಗು ಎದ್ದಿತ್ತು.
*
ಹಳೆಯ ನಿಯಮವೇ ಚೆನ್ನಾಗಿತ್ತು
ರಣಜಿ ಪಂದ್ಯಗಳನ್ನು ನೋಡಲು ಜನ ಬರುವುದೇ ಕಡಿಮೆ. ಇನ್ನು  ತಟಸ್ಥ ಸ್ಥಳದಲ್ಲಿ ಪಂದ್ಯ ಆಯೋಜಿಸಿದರೆ ನೋಡಲು ಯಾರಿಗೆ ತಾನೆ ಇಷ್ಟವಿರುತ್ತದೆ. ಹುಬ್ಬಳ್ಳಿ, ಮೈಸೂರು, ಶಿವಮೊಗ್ಗ ನಗರಗಳಲ್ಲಿ ರಣಜಿ ಪಂದ್ಯಗಳು ನಡೆದರೆ ಕನಿಷ್ಠ  ಹತ್ತು ಸಾವಿರ ಜನ ಪಂದ್ಯ ವೀಕ್ಷಿಸುತ್ತಾರೆ. ಇದರಿಂದ ಕ್ರಿಕೆಟ್‌ನ ಜನಪ್ರಿಯತೆ ಮತ್ತಷ್ಟು ಹೆಚ್ಚಾಗುತ್ತಿತ್ತು. ಹಳೆಯ ನಿಯಮವೇ ಸರಿಯಾಗಿತ್ತು.
ಆರ್‌. ಸುಧಾಕರರಾವ್‌
ಕೆಎಸ್‌ಸಿಎ ಆಯ್ಕೆ ಸಮಿತಿ ಮುಖ್ಯಸ್ಥ
*
ಯಾರಿಗಾಗಿ ತಟಸ್ಥ ಸ್ಥಳ
ಪ್ರತಿ ರಾಜ್ಯದಲ್ಲಿಯೂ ಖ್ಯಾತನಾಮ ಆಟಗಾರರು ಇರುತ್ತಾರೆ. ಅವರನ್ನು ನೋಡಬೇಕೆಂದು ಸಾಕಷ್ಟು ಕ್ರಿಕೆಟ್‌ ಪ್ರೇಮಿಗಳು ಕಾಯುತ್ತಿರುತ್ತಾರೆ. ಅವರ ಆಸೆಗೆ ರಣಜಿ ಪ್ರಮುಖ ವೇದಿಕೆಯಾಗಿತ್ತು. ಈಗ ತಟಸ್ಥ ಸ್ಥಳದಲ್ಲಿ ಪಂದ್ಯಗಳು ನಡೆಯುತ್ತಿರುವುದರಿಂದ ಯಾರಿಗೆ ತಾನೇ ಲಾಭವಿದೆ. ದೇಶಿ ಕ್ರಿಕೆಟ್‌ ಪಂದ್ಯಗಳನ್ನು ಗ್ರಾಮೀಣ ಮಟ್ಟಕ್ಕೂವಿಸ್ತರಿಸಬೇಕು ಎನ್ನುವ ನಮ್ಮ ಗುರಿಗೆ ಹೊಸ ನಿಯಮದಿಂದ ಹಿನ್ನಡೆಯಾಗುತ್ತಿದೆ.
ಬ್ರಿಜೇಶ್ ಪಟೇಲ್‌,
ಕೆಎಸ್‌ಸಿಎ ಕಾರ್ಯದರ್ಶಿ
*
ಮೊದಲಿನ ನಿಯಮದಂತೆ ತವರಿನಲ್ಲಿ ನಾಲ್ಕು ಮತ್ತು ಹೊರಗಡೆ ನಾಲ್ಕು ಪಂದ್ಯಗಳನ್ನು ನಡೆಸಬೇಕಿತ್ತು. ಮೊದಲಿನಂತೆ ಈಗ ಹೆಚ್ಚು ಜನ  ಕ್ರೀಡಾಂಗಣಕ್ಕೆ ಬಂದು ರಣಜಿ ಪಂದ್ಯಗಳನ್ನು ನೋಡದಿದ್ದರೂ ಕೆಲ ಕ್ರಿಕೆಟ್‌ ಪ್ರೇಮಿಗಳಿಗೆ ತವರಿನ ತಂಡದ ಪಂದ್ಯ ನೋಡಲು ಅವಕಾಶ ಸಿಗುತ್ತಿತ್ತು.
ಸನತ್‌ ಕುಮಾರ್
ಕರ್ನಾಟಕದ ಮಾಜಿ ಕ್ರಿಕೆಟಿಗ
*
ತಟಸ್ಥ ಸ್ಥಳದಲ್ಲಿ ಪಂದ್ಯಗಳನ್ನು ಆಯೋಜಿಸಿ ಬಿಸಿಸಿಐ ಹೊಸ ಪ್ರಯೋಗ ಮಾಡುತ್ತಿದೆ. ಇದರಿಂದ ತವರಿನಲ್ಲಿ ನಮಗೆ ಒಂದೂ ಪಂದ್ಯ ಆಡಲು ಸಾಧ್ಯವಾಗುವುದಿಲ್ಲ ನಿಜ. ಆದರೆ ಈಗಿನ ಸ್ಪರ್ಧಾತ್ಮಕತೆಗೆ ತಕ್ಕಂತೆ ಆಟಗಾರರಿಗೆ ಉತ್ತಮ ಅವಕಾಶ ಸಿಗುತ್ತದೆ. ಆಟಗಾರರ ಆಟದ ಗುಣಮಟ್ಟವೂ ಹೆಚ್ಚಾಗುತ್ತದೆ.
ಜೆ. ಅರುಣ್‌ ಕುಮಾರ್‌
ಕರ್ನಾಟಕ ತಂಡದ ಮುಖ್ಯ ಕೋಚ್‌
*
ತಟಸ್ಥ ಸ್ಥಳದಲ್ಲಿ ಪಂದ್ಯಗಳು ನಡೆಯುತ್ತಿರುವುದರಿಂದ ಪಿಚ್‌ ಕ್ಯುರೇಟರ್‌ಗಳ ಮೇಲೆ ಒತ್ತಡ ಕಡಿಮೆಯಾಗಿದೆ. ಇಲ್ಲವಾದರೆ ನಾವು ತವರಿನ ತಂಡಕ್ಕೆ ಅನುಕೂಲವಾಗುವಂತೆ ಪಿಚ್ ಸಜ್ಜು ಮಾಡಬೇಕಾಗುತ್ತಿತ್ತು. ಹೊಸ ನಿಯಮದಿಂದ ಯಾವ ಒತ್ತಡವೂ ಇಲ್ಲದೆ ಕೆಲಸ ಮಾಡಲು ಸಾಧ್ಯವಾಗುತ್ತಿದೆ.
ಮನೀಷ್‌ ಕುಮಾರ್‌,
ಗ್ರೇಟರ್‌ ನೋಯ್ಡಾ ಕ್ರೀಡಾಂಗಣದ ಪಿಚ್‌ ಕ್ಯುರೇಟರ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT