ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇಂಗ್ಲಿಷ್‌ಗೆ ಹೆದರುವುದೇಕೆ?

Last Updated 16 ಅಕ್ಟೋಬರ್ 2016, 19:30 IST
ಅಕ್ಷರ ಗಾತ್ರ

ಆ ಬಾಲಕ ನನ್ನ ಹತ್ತಿರದ ಬಂಧುವಿನ ಮಗ. ಮೊನ್ನೆ ಅವರ ಮನೆಗೆ ಹೋದಾಗ ಆತ ಶ್ರದ್ಧೆಯಿಂದ ಟಿ.ವಿ. ನೋಡುತ್ತಿದ್ದ. ಹಿಂದಿ ಭಾಷೆಯಲ್ಲಿನ ಮಕ್ಕಳ ಕಾರ್ಟೂನ್ ಚಾನೆಲ್ ‘ಡಿಸ್ನಿ’ ವೀಕ್ಷಿಸುತ್ತಿದ್ದವನನ್ನು ಸುಮ್ಮನೆ ಮಾತಿಗೆಳೆದೆ. ನಾನು ಹಿಂದಿಯಲ್ಲಿ ಕೇಳಿದ ಎಲ್ಲ ಪ್ರಶ್ನೆಗಳಿಗೂ ಪಟಪಟನೆ ಅದೇ ಭಾಷೆಯಲ್ಲಿ ಉತ್ತರಿಸುವುದನ್ನು ಕಂಡು ಆಶ್ಚರ್ಯವಾಯ್ತು! ಅಷ್ಟು ಶುದ್ಧವಾಗಿ ಮಾತನಾಡುತ್ತಿದ್ದ. ಈಗಷ್ಟೇ ನಾಲ್ಕನೆ ತರಗತಿಯಲ್ಲಿದ್ದಾನೆ.

ಶಾಲೆಯಲ್ಲಿ ಕಲಿಕೆಗೆ ಇನ್ನೂ ಹಿಂದಿ ಭಾಷೆಯ ವಿಷಯವೇ ಶುರುವಾಗಿಲ್ಲ! ಕ್ಲಾಸ್ ರೂಮಿನಲ್ಲಿ ಇಲ್ಲದ ಭಾಷೆಯನ್ನು ಇಷ್ಟು ಸೊಗಸಾಗಿ ಮಾತನಾಡುವುದು ನನಗೆ ಆಶ್ಚರ್ಯದ ಜೊತೆಗೆ ಕುತೂಹಲವನ್ನು ತಂದಿತ್ತು. ಹೌದು, ಅವನು ಪ್ರತಿದಿನ ಆ ಕಾರ್ಟೂನ್ ಚಾನೆಲ್ ನೋಡುತ್ತಿದ್ದ. ಬರವಣಿಗೆಯ ಹಂಗಿಲ್ಲದೆ, ವ್ಯಾಕರಣದ ಗೋಜಿಲ್ಲದೆ, ಕಲಿಯಬೇಕೆಂಬ ಒತ್ತಡವಿಲ್ಲದೆ, ಮಾತನಾಡುವ ಅನಿವಾರ್ಯತೆ ಇಲ್ಲದೆ ನಿಯಮಿತವಾಗಿ ಆಲಿಸುತ್ತಾ ಸಹಜವಾಗಿಯೆ ಆ ಭಾಷೆಯಲ್ಲಿ ಮಾತನಾಡುವುದನ್ನು ಕಲಿತಿದ್ದ. ಅಂದರೆ ಒಂದು ಭಾಷೆಯನ್ನು ಕಲಿಯುವುದು ಎಷ್ಟು ಸುಲಭವಲ್ಲವೆ?

ಇತ್ತೀಚೆಗೆ ಪರಿಚಿತರೊಬ್ಬರು ಸಿಕ್ಕಿದ್ದರು. ಅವರ ಮಗ ಬಿ.ಬಿ.ಎಮ್.ನಲ್ಲಿ ಏಳನೇ ರ್‍ಯಾಂಕ್ ಪಡೆದ ನಂತರ ಕೆಲಸಕ್ಕೆ ಪ್ರಯತ್ನಿಸಿದ. ಸರಿಯಾದ ಉದ್ಯೋಗ ಸಿಗದೆ ಎಂ.ಬಿ.ಎ. ಮುಗಿಸಿ ಮತ್ತೆ ಈಗ ಒಳ್ಳೆಯ ಕೆಲಸದ ಬೇಟೆಯಲ್ಲಿದ್ದಾನೆ. ಹಲವಾರು ಸ್ಪರ್ಧಾತ್ಮಕ ಪರೀಕ್ಷೆಗಳು, ಬ್ಯಾಂಕಿಂಗ್ ಎಕ್ಸಾಮ್‌ಗಳನ್ನು ಬರೆದರೂ ಉದ್ಯೋಗ ಸಿಗದಿದ್ದರಿಂದ ಹತಾಶನಾಗಿದ್ದಾನೆ. ಈ ಪರೀಕ್ಷೆಗಳಿಗೆ ತಯಾರಾಗಲೆಂದು ಕೋಚಿಂಗ್ ತರಗತಿಗಳಿಗೆ ಸಾವಿರಾರು ರೂಪಾಯಿ ಸುರಿದಿದ್ದಾನೆ. ಇನ್ನೂ ಪಾಸಾಗಲು ಮಾತ್ರ ಸಾಧ್ಯವಾಗಿಲ್ಲ. ಹಾಗೆಯೇ ಮಾತನಾಡುತ್ತಾ ಅವರು ಮಗನ ಸಮಸ್ಯೆಯ ಕಾರಣವನ್ನೂ ಬಿಚ್ಚಿಟ್ಟರು.

ಲಿಖಿತ ಪರೀಕ್ಷೆಗಳಲ್ಲಿ ಆತ ಇಂಗ್ಲಿಷ್ ವಿಷಯದಲ್ಲಿ ಫೇಲಾಗುತ್ತಿದ್ದಾನೆ. ಕಂಪೆನಿಗಳ ಸಂದರ್ಶನದಲ್ಲೂ ಅಷ್ಟೇ, ಇಂಗ್ಲಿಷ್‌ನಲ್ಲಿ ಮಾತನಾಡಲು ಸಾಧ್ಯವಾಗದೆ ಸೋಲುತ್ತಿದ್ದಾನೆ ಎಂದವರು ತಮ್ಮ ಬೇಸರ ತೋಡಿಕೊಂಡಾಗ ನನ್ನ ಮನಸ್ಸಿಗೂ ಪಿಚ್ಚೆನಿಸಿತ್ತು! ಹೌದು, ಇದು ಆ ಹುಡುಗನ ಕತೆಯಷ್ಟೇ ಅಲ್ಲ. ಇಂಗ್ಲಿಷ್ ಭಾಷೆಯನ್ನು ಕಬ್ಬಿಣದ ಕಡಲೆಯಾಗಿರಿಸಿಕೊಂಡ ನಮ್ಮ ಬಹುತೇಕ ಗ್ರಾಮೀಣ ವಿದ್ಯಾರ್ಥಿಗಳ ವ್ಯಥೆಯೂ ಹೌದು. ಹಾಗಾದರೆ ಈ ಭಾಷೆ ಅಷ್ಟು ಕಠಿಣವೆ? ಖಂಡಿತ ಅಲ್ಲ. ಇಂಗ್ಲಿಷ್ ತುಂಬಾ ಸರಳ ಭಾಷೆ. ಆದರೂ ಇದು ಒಲಿಯದಿರಲು ಕಾರಣಗಳು ಬೇರೆ ಇವೆ.

ಸಾಮಾನ್ಯವಾಗಿ ಒಂದು ಭಾಷೆಯನ್ನು ಮಾತನಾಡಬೇಕಾದರೆ/ಕಲಿಯಬೇಕಾದರೆ ಅಲ್ಲಿನ ಪರಿಸರದಲ್ಲಿ ಆ ಭಾಷೆಯನ್ನು ಮಾತನಾಡುವವರು ಸಾಕಷ್ಟಿರಬೇಕು. ಸದಾ ಅದು ಕಿವಿಯ ಮೇಲೆ ಬೀಳುತ್ತಿರಬೇಕು. ಪರಿಣಾಮಕಾರಿಯಾಗಿ ಕಲಿಸುವ ವ್ಯವಸ್ಥೆಯಿರಬೇಕು. ಬಳಸುವ ಅನಿವಾರ್ಯತೆಯಿರಬೇಕು. ಆಗ ಹೆಚ್ಚು ಶ್ರಮವಿಲ್ಲದೆ ಭಾಷೆ ಒಲಿಯುತ್ತದೆ. ಆದರೆ ಇಲ್ಲಿನ ಸಮಸ್ಯೆಯೆಂದರೆ ಇಂಗ್ಲಿಷ್ ನಮ್ಮ ಆಡುಭಾಷೆಯಲ್ಲ, ಪರಿಸರದ ಭಾಷೆಯೂ ಅಲ್ಲ. ಜೊತೆಗೆ ಈ ಭಾಷೆಯ ಕುರಿತಾದ ಪೂರ್ವಗ್ರಹಗಳು ಹಲವು.

‘ಈ ಭಾಷೆ ತುಂಬಾ ಕಠಿಣ. ಅದರಲ್ಲೂ ಗ್ರಾಮೀಣ ಮಕ್ಕಳಿಗಂತೂ ಮಾತನಾಡಲು ಖಂಡಿತ ಸಾಧ್ಯವಾಗದು. ಈ ಭಾಷೆ ಬರದಿದ್ದವರು ದಡ್ಡರು. ಗ್ರಾಮರ್(ವ್ಯಾಕರಣ) ತುಂಬಾ ಕಷ್ಟ. ತಪ್ಪು ತಪ್ಪಾಗಿ ಇಂಗ್ಲಿಷ್ ಮಾತನಾಡುವುದೆಂದರೆ ನಮ್ಮ ಪೆದ್ದುತನ ತೋರಿದಂತೆ, ಮಾನ-ಮರ್ಯಾದೆ ಎಲ್ಲ ಹರಾಜು. ಮಾತನಾಡಿ ಮಾನ ಕಳೆದುಕೊಳ್ಳುವುದಕ್ಕಿಂತ ಬಾಯಿ ಬಿಡದಿದ್ದರೆ ಒಳ್ಳೆಯದು. ಸುಮ್ಮನೆ ಕೈ ತೋರಿಸಿ ಅವಲಕ್ಷಣ ಎನಿಸಿಕೊಳ್ಳುವುದು ಯಾಕೆ?... ’ ಇವೇ ಮುಂತಾದ ತಪ್ಪು ಗ್ರಹಿಕೆಗಳು, ನಕಾರಾತ್ಮಕ ಭಾವನೆಗಳು ಸುಪ್ತಮನಸ್ಸಿನಲ್ಲಿ ಗಟ್ಟಿಯಾಗಿ ತಳವೂರಿರುವುದರಿಂದ ಈ ಭಾಷೆಯೆಂದರೆ ಸಾಕು ಏನೋ ಹಿಂಜರಿಕೆ, ಮಾತನಾಡಲು ಮುಜುಗರ, ತಪ್ಪಾದರೆ ಎಂಬ ಹೆದರಿಕೆ.

ಈ ಕೀಳರಿಮೆ, ಭಯ, ಆತ್ಮವಿಶ್ವಾಸದ ಕೊರತೆಯಿಂದಲೆ ಸಂದರ್ಶನಗಳಲ್ಲಿ ಸೋಲುತ್ತಿದ್ದಾರೆ. ಗೊತ್ತಿರುವುದನ್ನೂ ಸರಿಯಾಗಿ ಹೇಳಲಾಗದೆ ಒದ್ದಾಡುತ್ತಾರೆ. ಈ ಆತಂಕದಿಂದಲೆ ಭಾಷಾ ಜ್ಞಾನದ ಲಿಖಿತ ಪರೀಕ್ಷೆ ಪಾಸು ಮಾಡಲಾಗದೆ ಹತಾಶರಾಗುತ್ತಿದ್ದಾರೆ. ಅಂಕಪಟ್ಟಿ ಉತ್ತಮ ಅಂಕಗಳನ್ನು ತೋರಿಸುತ್ತಿದ್ದರೂ ಒಳ್ಳೆಯ ಉದ್ಯೋಗ ಗಿಟ್ಟಿಸಲಾಗದೆ ಖಿನ್ನತೆಗೆ ಜಾರುತ್ತಿದ್ದಾರೆ.

ಇಂಗ್ಲಿಷ್ ಅಂತಲ್ಲ ಯಾವುದೇ ಭಾಷೆಯಲ್ಲಿ ಸುಲಭವಾಗಿ ಮಾತನಾಡುವುದನ್ನು ಕಲಿಯಲು ಒಂದು ಸೂತ್ರವಿದೆ. ಆಸಕ್ತಿಯಿಂದ ಈ ಕ್ರಮದಲ್ಲಿ ಪ್ರಯತ್ನ ಹಾಕಿದರೆ ಸಂವಹನ ಸುಲಭವಾಗುತ್ತದೆ. ಇದೇ LSRW ಸೂತ್ರ. 

L - Listening (ಆಲಿಸುವುದು): ಇಂಗ್ಲಿಷ್‌ನಲ್ಲಿ ಮಾತನಾಡಲು ಕಲಿಯಬೇಕಿದ್ದರೆ ಪ್ರತಿನಿತ್ಯ ಅದು ಕಿವಿಯ ಮೇಲೆ ಬೀಳುತ್ತಿರಬೇಕು. ಈ ಭಾಷೆಯ ಪರಿಸರವಿದ್ದಾಗ ಪರಿಣಾಮ ಬೇಗ. ಚಿಂತೆಯಿಲ್ಲ, ಕನ್ನಡದ ವಾತಾವರಣದಲ್ಲೂ ಇಂಗ್ಲಿಷ್ ಧ್ವನಿ ಕೇಳಬೇಕಾದರೆ ಪ್ರತಿನಿತ್ಯ ದೂರದರ್ಶನದಲ್ಲಿ ನಿಗದಿತ ಅವಧಿಗೆ ಇಂಗ್ಲಿಷ್ ಕಾರ್ಯಕ್ರಮ ವೀಕ್ಷಿಸಬೇಕು. ಬಹಳಷ್ಟು ನ್ಯೂಸ್ ಚಾನೆಲ್‌ಗಳು ಇರುವುದರಿಂದ ಇಂಗ್ಲಿಷ್ ವಾರ್ತೆಗಳು, ಚರ್ಚೆಗಳು, ಸಂದರ್ಶನಗಳನ್ನು ನಿಯಮಿತವಾಗಿ ವೀಕ್ಷಿಸುವುದರಿಂದ ಭಾಷೆಯ ಕುರಿತು ಜ್ಞಾನ ಹೆಚ್ಚುತ್ತದೆ. ಪದಸಂಪತ್ತು ಬೆಳೆಯುತ್ತದೆ. ವ್ಯಾಕರಣದ ಬಗ್ಗೆ ತಲೆ ಕೆಡಿಸಿಕೊಳ್ಳದೆ ವಾಕ್ಯಗಳನ್ನು ಮಾಡುವ ಕಲೆ ಹಾಗೆಯೇ ಕರಗತವಾಗುತ್ತದೆ. ಟಿ.ವಿ. ವೀಕ್ಷಣೆಯಿಂದಲೆ ಹಿಂದಿಯಲ್ಲಿ ಸಂವಹನ ಕೌಶಲ ಕಲಿತ ಬಾಲಕನ ನಿದರ್ಶನ ಈ ವಿಧಾನ ಅದೆಷ್ಟು ಪರಿಣಾಮಕಾರಿ ಎಂಬದನ್ನು ತಿಳಿಸುತ್ತದೆ.

S - Speaking (ಮಾತನಾಡುವುದು): ‘ಹಾಡ್ತಾ ಹಾಡ್ತಾ ರಾಗ’ ಎಂಬಂತೆ ಬಳಸುತ್ತಾ ಹೋದಂತೆ ಭಾಷೆಯ ಮೇಲೆ ಹಿಡಿತ ಸಿಗುತ್ತಾ ಹೋಗುತ್ತದೆ. ಮೊದಮೊದಲು ತಪ್ಪಾಗುವುದು, ಪದಗಳಿಗೆ ತಡಕಾಡುವುದು ಸಹಜ. ಕಲಿಕೆಯಲ್ಲಿ ಇವು ಸಾಮಾನ್ಯ. ಇದರಿಂದ ಮುಜುಗರ ಪಡಬೇಕಾಗಿಲ್ಲ. ಸ್ನೇಹಿತರ ಜೊತೆ ಇಂಗ್ಲಿಷ್‌ನಲ್ಲಿ ಹರಟುವುದು, ಅವಕಾಶ ಸಿಕ್ಕಾಗಲೆಲ್ಲ ಈ ಭಾಷೆಯಲ್ಲಿ ಮಾತನಾಡುತ್ತಹೋದಂತೆ ಭಾಷೆ ಒಲಿಯುವುದು. ಹೊರರಾಜ್ಯದವರೊ, ವಿದೇಶಿಯರೊ ತಪ್ಪು ತಪ್ಪಾಗಿ ಕನ್ನಡ ಮಾತನಾಡುವುದು, ತೊದಲುವುದು ಕಂಡಾಗ ನಮ್ಮ ಭಾಷೆಯನ್ನು ಕಲಿಯಲು ಪ್ರಯತ್ನಿಸುತ್ತಿರುವುದು ನೋಡಿ ಖುಷಿಯಾಗುತ್ತದೆ ಅಲ್ಲವೆ? ಇಲ್ಲಿಯೂ ಹಾಗೆಯೆ.

R - Reading (ಓದುವುದು): ಭಾಷೆ, ವಾಕ್ಯ ರಚನೆ, ವ್ಯಾಕರಣ, ಶಬ್ದಸಂಪತ್ತನ್ನು ಅರಿಯಲು ಇಂಗ್ಲಿಷ್ ವರ್ತಮಾನಪತ್ರಿಕೆ, ಪುಸ್ತಕಗಳನ್ನು ಓದುವ ಅಭ್ಯಾಸ ಮಾಡಿಕೊಳ್ಳಬೇಕು. ನಿರಂತರ ಓದುವಿಕೆಯಿಂದ ಮಾತನಾಡುವಾಗ ಪದಗಳು ಸರಾಗವಾಗಿ ಹೊರಬರುತ್ತವೆ. ವಾಕ್ಯರಚನೆ ಸುಲಭವಾಗುತ್ತದೆ.

W - Writing (ಬರೆಯುವುದು): ಸಂವಹನವನ್ನು ಕರಗತ ಮಾಡಿಕೊಳ್ಳುವ ಪ್ರಕ್ರಿಯೆಯಲ್ಲಿ ಬರೆದು ಕಲಿಯುವಿಕೆಗೆ ಕೊನೆಯ ಆದ್ಯತೆ. ಮೇಲಿನ ಮೂರೂ ಕ್ರಮಗಳ ಜೊತೆಗೆ ಬರೆದು ಅಭ್ಯಾಸ ಮಾಡಿದಾಗ ಭಾಷೆಯ ಮೇಲೆ ಹಿಡಿತ ಹೆಚ್ಚುತ್ತದೆ, ಹಸ್ತಾಕ್ಷರ ಸುಧಾರಿಸುತ್ತದೆ, ಕಾಗುಣಿತ(ಸ್ಪೆಲ್ಲಿಂಗ್) ತಿಳಿಯುತ್ತದೆ.
ಆದರೆ, ನಮ್ಮ ಶಾಲೆಗಳಲ್ಲಿ ಇಂಗ್ಲಿಷ್ ಕಲಿಸುತ್ತಿರುವ ವಿಧಾನ ಪೂರ್ಣ ವಿರುದ್ಧವಾಗಿದೆ. ಇಲ್ಲಿ ಮೊದಲು ಬರವಣಿಗೆ ನಂತರ ಓದಲು ಕಲಿಸಲಾಗುತ್ತದೆ. ಭಾಷಾ ನಿಯಮಗಳು, ವ್ಯಾಕರಣ ಎಂದೆಲ್ಲ ತಲೆಗೆ ತುಂಬಲಾಗುತ್ತದೆ. ಗಮನವೆಲ್ಲಾ ವ್ಯಾಕರಣದ ಕಡೆಗಿದ್ದರೆ ವಾಕ್ಯರಚನೆ ಕ್ಲಿಷ್ಟ.
ನಮ್ಮ ಮಕ್ಕಳಿಗೆ, ಅದರಲ್ಲೂ ಹಳ್ಳಿಯ ವಿದ್ಯಾರ್ಥಿಗಳಿಗೆ ಇಂಗ್ಲಿಷ್ ತುಂಬ ಕಠಿಣವೆನಿಸಲು ಇದೇ ಕಾರಣ. LSRW ಸೂತ್ರದ ಜೊತೆಗೆ ಪ್ರಾಥಮಿಕ ಹಂತದಿಂದಲೇ ಮಕ್ಕಳಿಗೆ ತರಗತಿಯಲ್ಲಿ ಪ್ರಶ್ನೆ ಕೇಳುವ, ಅಭಿಪ್ರಾಯ ವ್ಯಕ್ತಪಡಿಸುವ ಮನೋಭಾವನೆ ಬೆಳೆಸಬೇಕು. ಉತ್ತಮ ಸಂವಹನವನ್ನು ಉತ್ತೇಜಿಸಬೇಕು. ಈ ಕಲೆಯನ್ನು ಮೈಗೂಡಿಸಿಕೊಂಡಾಗ ಮಾತ್ರ ಗ್ರಾಮೀಣ ವಿದ್ಯಾರ್ಥಿಗಳೂ ಉತ್ತಮ ಉದ್ಯೋಗ ಪಡೆದುಕೊಳ್ಳಬಲ್ಲರು.

(ಲೇಖಕರು ವ್ಯಕ್ತಿತ್ವ ವಿಕಸನ ತರಬೇತುದಾರರು)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT