ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿಸ್ತಿಗೆ ಗಸ್ತು ಮಾಡದಿರಲಿ ಶಿಕ್ಷಣ

Last Updated 16 ಅಕ್ಟೋಬರ್ 2016, 19:30 IST
ಅಕ್ಷರ ಗಾತ್ರ

ಶಿಕ್ಷಣದಲ್ಲಿ ಶಿಸ್ತಿನ ಪಾತ್ರವೇನು ಎಂದು ಆಲೋಚಿಸುವ ಸಮಯವಿದು. ಹಿಂದೆ ಅಧ್ಯಾಪಕನಾದವನು ವಿದ್ಯಾರ್ಥಿಯನ್ನು ದಂಡಿಸಲು ಹಿಂದೆ-ಮುಂದೆ ನೋಡುತ್ತಿರಲಿಲ್ಲ. ಆದರೆ ಇಂದಿನ ಪರಿಸ್ಥಿತಿ ಬೇರೆ. ಮಕ್ಕಳ ಹಕ್ಕು, ಪೋಷಕರ ಕಕ್ಕುಲಾತಿ, ವಿದ್ಯಾ ಇಲಾಖೆಯ ನಿಯಮಾವಳಿಗಳು ದೇಹದಂಡನೆಯನ್ನು ಖಂಡಿಸುತ್ತವೆ.

ನನ್ನ ಗುರುಗಳಾದ ಸ್ವಾಮಿ ಪುರುಷೋತ್ತಮಾನಂದಜಿಯವರು ಶಿಸ್ತಿನ ಬಗ್ಗೆ ಹೇಳುತ್ತಿದ್ದುದು, ‘ಶಿಸ್ತಿಗೆ ಗಸ್ತು ಕೊಟ್ಟಿದ್ದರ ಪರಿಣಾಮವೇ ಇಂದು ಶಿಕ್ಷಣ ಹದಗೆಟ್ಟಿರುವುದು.’ ಆಂಗ್ಲಪದಗಳಾದ  ‘ಡಿಸೈಪಲ್’ ಮತ್ತು ‘ಡಿಸಿಪ್ಲೀನ್’ ಅವಿನಾಭಾವ ಸಂಬಂಧವನ್ನು ಸೂಚಿಸುತ್ತವೆ. ಯಾರಿಗೆ ಡಿಸಿಪ್ಲೀನ್ ಇಲ್ಲವೋ ಅವನು ಡಿಸೈಪಲ್ ಹೇಗಾಗುತ್ತಾನೆ? ದಂಡನೆಯಿಲ್ಲದೆ ಮನುಷ್ಯನನ್ನು ಸರಿದಾರಿಯಲ್ಲಿ ನಡೆಯುವಂತೆ ಮಾಡುವುದು ಕಷ್ಟ ಎಂಬುದು ಸಾಮಾನ್ಯಜ್ಞಾನ. ರಸ್ತೆಯ ನಿಯಮ ಮುರಿದವರಿಗೆ ದಂಡ ವಿಧಿಸುವುದರಿಂದ ಹಿಡಿದು ಎಲ್ಲ ಬಗೆಯ ತಪ್ಪುನಡೆಗೆ ದಂಡನೆಗಳಿರುವುದರಿಂದಲೇ ಸಮಾಜ ಸರಾಗವಾಗಿ ನಡೆದಿದೆ. ಪೊಲೀಸರ ಲಾಠಿಯ ಭಯವಿಲ್ಲದೆ ಇದ್ದರೆ ಕಳ್ಳರ ಹಾವಳಿ ತಪ್ಪಲು ಸಾಧ್ಯವೆ?

ದಂಡನೆಗಳಲ್ಲಿಯೂ ನಾನಾ ಬಗೆ. ಶಿಕ್ಷಣಕ್ಷೇತ್ರಕ್ಕೆ ಸಂಬಂಧಿಸಿದಂತೆ ಇಲಾಖೆಯ ಸುತ್ತೋಲೆಗಳಲ್ಲಿ ಶಿಸ್ತುಕ್ರಮಗಳನ್ನು ಕುರಿತು ಸ್ಪಷ್ಟನಿರ್ದೇಶನ ನೀಡಿರುತ್ತವೆ. ಆದರೆ ಎಲ್ಲ ಕಡೆಯಲ್ಲಿಯೂ ಆದಂತೆ ಈ ಲಿಖಿತ ಆದೇಶಗಳನ್ನು ಜಾರಿಗೆ ತರುವವರ ಮನೋಧರ್ಮ ಮತ್ತು ಅನುಷ್ಠಾನಶೈಲಿಯನ್ನು ಅನುಸರಿಸಿ ಅದು ಪರಿಣಾಮ ಬೀರುತ್ತದೆ. ಕೆಲವೊಮ್ಮೆ ಅದನ್ನು ನಾವು ಅಕ್ಷರಶಃ ಪಾಲಿಸುವುದಿಲ್ಲ. ಮತ್ತು ಹಾಗೆ ಪಾಲಿಸಲೂಬಾರದು.

ದಂಡಾಧಿಕಾರವಿದೆಯೆಂದು ಮನಬಂದಂತೆ ಬಳಸಿದರೆ ಅದರಿಂದ ನಷ್ಟವೇ ಹೆಚ್ಚು. ಅಥವಾ ಅದನ್ನು ಬಳಸದಿದ್ದರೂ ಅಪಾಯವಿದೆ. ಆದರೆ ಯಾವಾಗ, ಎಷ್ಟು ಬಳಸಬೇಕೆಂಬುದೇ ಜಾಣ್ಮೆ. ಅಧ್ಯಾಪಕನಿಗೆ ಇದು ಅನುಭವದಿಂದ ಬರುತ್ತದೆ, ಸುತ್ತೋಲೆಗಳನ್ನು ಓದುವುದರಿಂದಲ್ಲ. ಪ್ರತಿ ಸೆಮಿಸ್ಟರ್ ಅಂತ್ಯದಲ್ಲಿ ನಡೆಯುವ ಹಾಜರಾತಿ ಕೊರತೆ ಮೇಳದ ಉದಾಹರಣೆಯೊಂದಿಗೆ ಇದನ್ನು ವಿವರಿಸುವುದು ಉಚಿತ. ವಿಶ್ವವಿದ್ಯಾಲಯದ ನಿಯಮಾವಳಿಯಂತೆ ನಾವು ಸೆಮಿಸ್ಟರ್ ಅಂತ್ಯದಲ್ಲಿ ಹಾಜರಾತಿ ಕೊರತೆ ಇರುವವರ ಪಟ್ಟಿ ಪ್ರಕಟಿಸುತ್ತೇವೆ.

ಅಂದಿನಿಂದ ನೋಡಬೇಕು ತರಗತಿ ಪ್ರಾಧ್ಯಾಪಕರ ಮುಂದಿನ ಮೇಳವನ್ನು. ವೈದ್ಯಕೀಯ ಪ್ರಮಾಣಪತ್ರಗಳೇನು, ಅಜ್ಜ-ಅಜ್ಜಿಯರ ಸಾವುಗಳೇನು, ಸೋದರವರ್ಗದ ಮದುವೆಯೇನು, ಕಾರಣಸಹಿತ ವಿವರಗಳ ರಾಶಿ ನಮ್ಮ ಮುಂದೆ ಬೀಳುತ್ತವೆ. ಜೊತೆಗೆ ನವರಸ ಸೂಸುವ ಭಂಗಿಗಳು, ಮಾತುಗಳು ಮತ್ತೂ ಬೆನ್ನ ಹಿಂದಿನ ಬೆದರಿಕೆಗಳು. ಜಳ್ಳು  ಗಟ್ಟಿ ತೂರಿ ದಂಡದ ಮೊತ್ತ ನಿಗದಿ ಮಾಡಿ(ಅಲ್ಲೂ ಚೌಕಾಶಿ ನಡೆಯುತ್ತದೆ; ನಾನು ತಮಾಷೆಯಾಗಿ ಹೇಳುತ್ತೇನೆ: ‘ಪರವಾಗಿಲ್ಲ ದಂಡಕಟ್ಟಿ. ಇದು ಮನರಂಜನಾ ತೆರಿಗೆ. ತರಗತಿಗಳನ್ನು ಬಿಟ್ಟು ನೀವು ಹೊರಗೆ ತಿರುಗಾಡಿ ಪಡೆದ ಮನರಂಜನೆಗೆ ಈಗ ತೆರಿಗೆ ಕಟ್ಟುತ್ತಿದ್ದೀರಿ.....’ ) ಇಲ್ಲಿ ಅವರ ಕೊರತೆಯ ಶೇಕಡಾಂಶದ ಮೇಲೆ ದಂಡದ ಪ್ರಮಾಣ.

ಅಂತೂ ಇಂತೂ ಇವರನ್ನು ಸಾಗಹಾಕುವ ವೇಳೆಗೆ ಸುಸ್ತಾಗಿಹೋಗುತ್ತದೆ. ಆದರೆ ಕೆಲವೊಂದು ಪ್ರಕರಣಗಳಲ್ಲಿ ನಾವೇ ಖುದ್ದಾಗಿ ಮಾಫಿ ಕೂಡ ಮಾಡಿಬಿಡುತ್ತೇವೆ. ಕಳೆದ ಬಾರಿ ಈ ಹಾಜರಾತಿ ಕೊರತೆ ಮೇಳಕ್ಕೆ ಒಬ್ಬ ವಿದ್ಯಾರ್ಥಿ ತನ್ನ ತಂದೆಯೊಂದಿಗೆ ಬಂದಿದ್ದ. ಅವನಿಗೊಂದು ವಿಚಿತ್ರ ಕಾಯಿಲೆ. ಯಾವುದೇ ಗುಂಪಿನಲ್ಲಿ ಅವನು ಹೆಚ್ಚುಹೊತ್ತು ಕುಳಿತಿರಲಾರ. ಅದೊಂದು ಬಗೆಯ ಫೋಬಿಯಾ. ಅದಕ್ಕಾಗಿ ಅವನು ಮನೋವೈದ್ಯರಿಂದ ಚಿಕಿತ್ಸೆಯನ್ನೂ ಪಡೆಯುತ್ತಿದ್ದ. ಮತ್ತು ಈ ವಿಚಾರವನ್ನು ಆತ ಇತರರ ಮುಂದೆ ಹೇಳುವಂತೆಯೂ ಇರಲಿಲ್ಲ. ಅವನ ವರ್ಗ ಅಧ್ಯಾಪಕರು ವಿನಾಯಿತಿ ನೀಡಲು ಸಾಧ್ಯವೇ ಇಲ್ಲವೆಂದು ನಿರಾಕರಿಸಿಬಿಟ್ಟಿದ್ದರು. ಆದರೂ ನನ್ನನ್ನು ಭೇಟಿಯಾಗಿ ಎಂದು ಸಲಹೆ ನೀಡಿ ಕಳುಹಿಸಿದ್ದರು.

ವಿದ್ಯಾರ್ಥಿ ಮತ್ತು ಅವನ ತಂದೆಯೊಂದಿಗೆ ಸುಮಾರು ಹೊತ್ತು ಮಾತನಾಡಿ, ವೈದ್ಯಕೀಯ ದಾಖಲೆಗಳನ್ನು ಪರಾಮರ್ಶಿಸಿ ಅವನಿಗೆ ಪೂರ್ಣ ವಿನಾಯಿತಿ ನೀಡಬಹುದೆಂದು ಶಿಫಾರಸು ಮಾಡಿ ಕಳಿಸಿದೆ. ಮುಂದೆ ಪರೀಕ್ಷೆಗಳು ಮುಗಿದು ಫಲಿತಾಂಶಗಳು ಪ್ರಕಟಗೊಂಡಾಗ ಅವನು ಇಡೀ ತರಗತಿಯಲ್ಲಿ ಎಲ್ಲರಿಗಿಂತ ಹೆಚ್ಚಿನ ಅಂಕ ಪಡೆದು ಪಾಸಾಗಿದ್ದ!

ಶಿಸ್ತು ಎಂಬುದು ಕೇವಲ ನಿಯಮಪಾಲನೆಯಲ್ಲ. ಅದೊಂದು ಬಗೆಯ ಅನುಶಾಸನ. ವ್ಯವಸ್ಥಿತ ಜೀವನಕ್ಕೆ ಅತ್ಯಂತ ಪೂರಕವಾದ ಅಂಶ ಶಿಸ್ತು. ವಿದ್ಯಾರ್ಜನೆಗೆ ಸಂಬಂಧಿಸಿದಂತೆ ದೇಹ-ಮನಸ್ಸುಗಳನ್ನು ಹದ್ದುಬಸ್ತಿನಲ್ಲಿಡಬೇಕಾದ್ದು ವಿದ್ಯಾರ್ಥಿಯ ಕರ್ತವ್ಯ. ಒಂದು ಗಂಟೆಯ ಅವಧಿಯಲ್ಲಿ ನೂರು ಬಾರಿ ಭಂಗಿ ಬದಲಿಸಿದರೆ ಅವನ ದೇಹವೆಷ್ಟು ಅಶಿಸ್ತು ಹೊಂದಿದೆ? ಅಂತಹ ಅಲುಗಾಡುವ ದೇಹದಲ್ಲಿ ಸ್ಥಿರಮನಸ್ಸು ನಿಲ್ಲಲು ಸಾಧ್ಯವೆ? ಇಂತಹ ತುಳುಕಾಡುವ ಮನಸ್ಸು ವಿಷಯವನ್ನು ಗ್ರಹಿಸುವುದು ಹೇಗೆ? ವಿದ್ಯಾರ್ಥಿಯಾದವನು ಕಡೇಪಕ್ಷ ಒಂದು ಗಂಟೆಯಾದರೂ ಸ್ಥಿರವಾಗಿ ಕುಳಿತುಕೊಳ್ಳುವುದನ್ನು ಅಭ್ಯಾಸ ಮಾಡಬೇಕು. ಯೋಗದಲ್ಲಿ ಇದನ್ನು ‘ಆಸನಸಿದ್ಧಿ ’ ಎನ್ನುತ್ತಾರೆ. ದೇಹವೇ ನೆಟ್ಟಗೆ ಕೂರದಿದ್ದರೆ ಮನವೆಂತು ಕುಳಿತೀತು?

ವಿದ್ಯಾರ್ಥಿಗೂ ಯೋಗಿಗೂ ಹೆಚ್ಚು ಅಂತರವೇನಿಲ್ಲ; ಇಬ್ಬರೂ ಸಾಧಕರೇ. ಆದುದರಿಂದ ಶಿಸ್ತು ಎಂಬುದು ಇಬ್ಬರಿಗೂ ಇರಬೇಕಾದ ಸಾಮಾನ್ಯ ನಿಯಮ. ಕ್ರೀಡಾಪಟುಗಳು, ಎನ್.ಸಿ. ಸಿ, ಎನ್.ಎಸ್.ಎಸ್. ವಿದ್ಯಾರ್ಥಿಗಳು ಹೆಚ್ಚಿನ ಶಿಸ್ತು ಪಾಲಿಸುವುದು ಕೂಡ ಶಿಕ್ಷಕರ ಗಮನಕ್ಕೆ ಬಂದಿದೆ. ಹೀಗಾಗಿ ಹೆಚ್ಚು ಹೆಚ್ಚು ವಿದ್ಯಾರ್ಥಿಗಳು ಇಂತಹ ಚಟುವಟಿಕೆಗಳಲ್ಲಿ ತೊಡಗಿಕೊಳ್ಳುವುದು ಒಳಿತು. ಯೋಗಾಸನಗಳ ಅಭ್ಯಾಸ ಕೂಡ ಹಲವು ಕಾಲೇಜುಗಳಲ್ಲಿ ಇದೆ. ಇದೊಂದು ಧಾರ್ಮಿಕ ವಿಧಿ ಎಂದು ಭಾವಿಸದೆ, ಜೀವನಶೈಲಿಗೆ ಪೂರಕವಾದ, ಜೀವನದ ಗುಣಮಟ್ಟವನ್ನು ವೃದ್ಧಿಸುವ ವ್ಯಾಯಾಮವೆಂದಾದರೂ ಇದನ್ನು ಅಭ್ಯಾಸ ಮಾಡಬೇಕು.

ಶಿಸ್ತು ಎಂಬುದು ಆರಂಭದಲ್ಲಿ ಹೊರಗಿನಿಂದ ಆರೋಪಿತವಾದ ಗುಣವಾದರೂ ಕ್ರಮೇಣ ಅದು ವ್ಯಕ್ತಿಯ ಸ್ವಭಾವದ ಒಂದಂಶವೇ ಆಗಿಬಿಡುತ್ತದೆ. ಸಮಯದ ತೀವ್ರ ಅಭಾವದಿಂದ ಬಳಲುತ್ತಿದ್ದರು ಬಾಪು. ಆದುದರಿಂದ ಅವರು ಪ್ರತಿ ಸೆಕೆಂಡಿಗೂ ಲೆಕ್ಕ ಇಡುವ ಶಿಸ್ತು ಪಾಲಿಸುತ್ತಿದ್ದರು. ಅವರ ದಿನಚರಿಯಲ್ಲಿ ಪ್ರತಿಯೊಂದು ಕಾರ್ಯಕ್ಕೂ ನಿಗದಿತ ಸಮಯವಿರುತ್ತಿತ್ತು. ಅದು ಯಾವುದೇ ಕಾರಣಕ್ಕೂ ಆ ಚೌಕಟ್ಟನ್ನು ಮೀರುವಂತಿರಲಿಲ್ಲ. ಒಮ್ಮೆ ವೈಸರಾಯರು ಅವರನ್ನು ಭೇಟಿಯಾಗಲು ಬಂದಿದ್ದರು. ನಿಗದಿತ ಸಮಯ ಮುಗಿದ ಕೂಡಲೆ ಗಾಂಧೀಜಿ ಎದ್ದು ನಿಂತು ಹೇಳಿದರು: ‘ಕ್ಷಮಿಸಿ, ಈಗ ನನ್ನ ಮೇಕೆಗೆ ಮೇವು ಉಣಿಸುವ ಸಮಯ.’

ಆಲ್‌ಫ್ರೆಡ್ ಪಾರ್ಕಿನಲ್ಲಿ ಪೊಲೀಸರೊಂದಿಗೆ ಗುಂಡಿನ ಕಾಳಗದಲ್ಲಿ ತೊಡಗಿದ್ದರೂ ತಾನು ಬಳಸುತ್ತಿದ್ದ ಗುಂಡುಗಳ ಕರಾರುವಾಕ್ ಲೆಕ್ಕ ಚಂದ್ರಶೇಖರ ಆಜಾದರ ಮನಸ್ಸಿನಲ್ಲಿತ್ತು. ಆದುದರಿಂದಲೇ ಕೊನೆಯ ಗುಂಡನ್ನು ತಮಗೇ ಮೀಸಲಿಟ್ಟುಕೊಳ್ಳಲು ಸಾಧ್ಯವಾಯಿತು. ಈ ಬಗೆಯ ಶಿಸ್ತು ಸಮಯಸ್ಫೂರ್ತಿಯಿಂದ ಬರುವಂತಹದ್ದಲ್ಲ. ಅದು ಸತತ ಅಭ್ಯಾಸದಿಂದ ಬರುವಂತಹದ್ದು. ತರಗತಿಗಳಿಗೆ ತಡವಾಗಿ ಬರುವುದು ಕೇವಲ ವಿದ್ಯಾರ್ಥಿಗಳಲ್ಲ, ಹಲವಾರು ಅಧ್ಯಾಪಕರೂ ತಡವಾಗಿಯೇ ತಮ್ಮ ತರಗತಿಗಳನ್ನು ಪ್ರವೇಶಿಸುತ್ತಾರೆ.

ನಾನು ಅಧ್ಯಾಪನ ವೃತ್ತಿ ಆರಂಭಿಸಿದ್ದು ನಾನು ಕಲಿತ ಕಾಲೇಜಿನಲ್ಲೇ. ನನಗೆ ಪಾಠ ಮಾಡಿದ ಗುರುಗಳೊಂದಿಗೆ ಸಹೋದ್ಯೋಗಿಯಾಗಿ ಕುಳಿತುಕೊಳ್ಳುವ ಪುಣ್ಯ ನನ್ನದು. ಆರಂಭದಲ್ಲಿ ಒಂದೆರಡು ದಿನ ತರಗತಿಗಳಿಗೆ ತಡವಾಗಿಯೂ ಹೋದೆ. ಆದರೆ, ಯಾವಾಗ ನನಗೆ ಪಾಠ ಮಾಡಿದ ಅಧ್ಯಾಪಕರುಗಳೇ ಪಕ್ಕದ ತರಗತಿಯ ಬಳಿ ಬೆಲ್ಲು ಬಾರಿಸುವ ಮೊದಲೇ ಬಾಗಿಲ ಬಳಿ ಸನ್ನದ್ಧರಾಗಿ ನಿಂತಿರುವುದನ್ನು ಕಾಣಲಾರಂಭಿಸಿದೆನೋ ಆಗ ನಾನೂ ತಿದ್ದಿಕೊಂಡೆ, ಬೆಲ್ಲು ಹೊಡೆಯುವ ಮೊದಲೇ ತರಗತಿಯ ಬಳಿ ನಿಲ್ಲಲು ಆರಂಭಿಸಿದೆ. ಅಧ್ಯಾಪನ ವೃತ್ತಿಯಲ್ಲಿ ನಾನು ಕಲಿತ ಮೊದಲ ಶಿಸ್ತಿನ ಪಾಠ ಇದು.

ನನ್ನ ಗುರುಗಳಾದ ಸ್ವಾಮಿ ಪುರುಷೋತ್ತಮಾನಂದಜಿ ಶಿಸ್ತಿನ ಸಿಪಾಯಿ ಆಗಿದ್ದರು. ಆದರೆ ಅವರು ಯಾರನ್ನಾದರೂ ದಂಡಿಸಿದ್ದನ್ನು ನಾನು ಕಂಡೇ ಇರಲಿಲ್ಲ. ಅವರ ನಡೆ, ನುಡಿ, ನಿರ್ದೇಶನಗಳು ಎಂತಿದ್ದವೆಂದರೆ ಅವರೆದುರಿಗೆ ನಿಂತವರು ಆ ನಿರ್ದೇಶನಗಳನ್ನು ಚಾಚೂ ತಪ್ಪದೆ ಪಾಲಿಸುತ್ತಿದ್ದರು. ಯಾವಾಗ ಗುರುಗಳಲ್ಲಿ ಆ ಸ್ಥಿರತೆ ಇರುತ್ತದೊ, ವಿದ್ಯಾರ್ಥಿಗಳಲ್ಲಿ ಅದು ಪ್ರತಿಫಲಿತವಾಗುತ್ತದೆ.

ಗುರುಗಳು ನಮಗೆ ಕೋಲಾಟ, ನಾಟಕ ಆಶ್ರಮದ ಸೇವೆ, ಕೈಂಕರ್ಯ ಎಲ್ಲವನ್ನೂ ಕಲಿಸುತ್ತಿದ್ದರು. ಅವರು ದಂಡಿಸುವುದಿಲ್ಲವೆಂದು ತಿಳಿದಿದ್ದರೂ ನಮ್ಮ ಕೆಲಸಗಳು ಅವರಿಗೆ ತೃಪ್ತಿಕರವಾಗಿ ಕಾಣಬರದಿದ್ದರೆ ಅದಕ್ಕಿಂತ ದೊಡ್ಡ ನೋವು ನಮಗೆ ಇಲ್ಲ ಎಂಬ ಅರಿವು ನಮ್ಮ ಪ್ರಜ್ಞೆಯಲ್ಲಿ ದಾಖಲಾಗಿರುತ್ತಿತ್ತು. ಇನ್ನು ತಪ್ಪು ಮಾಡಿದಾಗ ಅವರ ವಾಗ್ದಂಡನೆಯೇ ಸಾಕಾಗಿತ್ತು ನಾವು ತಿದ್ದಿಕೊಳ್ಳಲು. ಅಂತಹವರನ್ನು ಸಮಾಧಾನಪಡಿಸುವುದೇ ಹಿರಿಯ ಸ್ವಯಂಸೇವಕರಿಗೆ ಸವಾಲಾಗುತ್ತಿತ್ತು. ಅವರಿಗೆ ಮತ್ತೆ ಸೇವೆಗೆ ಮತ್ತೊಂದು ಅವಕಾಶ ಮಾಡಿಕೊಟ್ಟು ಗುರುಗಳಿಂದ ಭೇಷ್ ಎನ್ನಿಸಿಕೊಳ್ಳುವವರೆಗೆ ಸಮಾಧಾನ ಇರುತ್ತಿರಲಿಲ್ಲ. ನಮ್ಮನ್ನು ಅವರಿಗೆ ಕಟ್ಟಿಹಾಕಿದ್ದು ಅಪರಿಮಿತ ಪ್ರೀತಿ.

ಒಂದು ದಿನ ನಾನವರನ್ನು ಕೇಳಿದೆ: ‘ನಿಮ್ಮನ್ನು ಕಂಡರೆ ನಮಗೆ ಪ್ರೀತಿ. ಆದರೂ ಒಂದು ಬಗೆಯ ಭಯ, ಅದೇಕೆ ಹಾಗೆ?’  ಮುಗುಳ್ನಕ್ಕು ಉತ್ತರಿಸಿದರು: ‘ಶಿಸ್ತು ನನ್ನ ವ್ಯಕ್ತಿತ್ವದಲ್ಲಿ ಎದ್ದುಕಾಣುತ್ತದೆ. ಅದು ನಿನ್ನೊಳಗೆ ಸ್ಥಾಪನೆಯಾಗುವವರೆಗೂ ಈ ಅಂತರ. ಭಯ ಇರಲಿ, ಒಳ್ಳೆಯದು. ಭಯದಿಂದಲೇ ಭಕ್ತಿ! ಬಾ ಈಗ ವಾಕ್ ಮಾಡೋಣ. ...’ ಈಗಲೂ ವಿದ್ಯಾರ್ಥಿಗಳೊಂದಿಗೆ ನಾನು ಇದೇ ಮಾದರಿಯ ಸಂಬಂಧವನ್ನು ಸ್ಥಾಪಿಸಲು ಪ್ರಯತ್ನಿಸುತ್ತೇನೆ. ತರಗತಿಯ ಹೊರಗೆ ನಾನವರ ಮಿತ್ರ; ಆದರೆ ಒಳಗೆ ಶಿಸ್ತಿನ ಗುರು. ಅಸೈನ್‌ಮೆಂಟ್, ಅಟೆಂಡೆನ್ಸ್, ಪರೀಕ್ಷೆ ಎಲ್ಲ ಕಟ್ಟುನಿಟ್ಟು ಆದರೆ ಅವರ ಬಗೆಗಿನ ಪ್ರೀತಿ ಎಂಬುದು ಮಾತ್ರ ಶುದ್ಧ, ಅನಂತ. ಶಿಸ್ತಿಗೋಸುಗ ಅವರನ್ನು ದಂಡಿಸುತ್ತೇನೆ, ದಂಡಿಸಬೇಕು. ಆದರೆ ಅದಕ್ಕೆ ಮಾನದಂಡ ಮನುಷ್ಯತ್ವ. ನನ್ನ ಮಗ/ಮಗಳು ಆ ತಪ್ಪು ಮಾಡಿದ್ದರೆ ಏನು ಶಿಕ್ಷೆ ಕೊಡಬಹುದೋ ಅದೇ ಶಿಕ್ಷೆ. ಶಿಸ್ತಿಗಾಗಿ ಅದು ಕಪಾಳಮೋಕ್ಷವೂ ಆಗಿರಬಹುದು ಅಥವಾ ಪ್ರೀತಿಗಾಗಿ ವಿದ್ಯಾರ್ಥಿಭವನದ ಮಸಾಲೆದೋಸೆಯೂ ಆಗಿರಬಹುದು! ಶಿಸ್ತಿಗೆ ಗಸ್ತು ಕೊಡದಂತೆ ಶಿಕ್ಷಣಕ್ಷೇತ್ರವನ್ನು ನಡೆಸುವುದು ನಮ್ಮೆಲ್ಲರ ಜವಾಬ್ದಾರಿ.
*

* ದಂಡನೆಗೆ ಖಂಡನೆ ಬೇಡ.
* ಮನಬಂದಂತೆ ದಂಡಿಸಿದರೆ ಹೆಚ್ಚು ನಷ್ಟ.
* ಕಲಿಕೆಯಲ್ಲಿ ಶಿಸ್ತು ಅನುಶಾಸನ ಇರಲಿ.
* ಶಿಸ್ತು ಅಭ್ಯಾಸದಿಂದ ಬರುತ್ತದೆ.

(ಲೇಖಕರು ಶಿಕ್ಷಣತಜ್ಞರು)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT