ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಪಂಜಾಬಿ ರಸವಾಡ’ದಲ್ಲಿ ತರಹೇವಾರಿ ತಂದೂರಿ ಖಾದ್ಯ

Last Updated 16 ಅಕ್ಟೋಬರ್ 2016, 19:30 IST
ಅಕ್ಷರ ಗಾತ್ರ

ಶುದ್ಧ ಸಸ್ಯಾಹಾರಿ ಊಟವನ್ನು ಬಡಿಸುವ ಪಂಜಾಬಿ ಹೋಟೆಲ್‌ಗಳು ನಗರದಲ್ಲಿ ಕಡಿಮೆ. ಆದರೆ ಇಲ್ಲೊಂದು ಪಂಜಾಬ್‌ ಹೋಟೆಲ್‌ ಇದೆ. ಇಲ್ಲಿ ಸಸ್ಯಾಹಾರವಷ್ಟೇ ಸಿಗುತ್ತದೆ.

ಹೌದು, ಜಯನಗರದಲ್ಲಿರುವ ಪಂಜಾಬಿ ರಸ್‌ವಾಡ ಹೋಟೆಲ್‌ನಲ್ಲಿ ಸಸ್ಯಾಹಾರವಷ್ಟೇ ಸಿಗುತ್ತದೆ. ಇಲ್ಲಿ ಮಾಡುವ ಗ್ರೇವಿಗೆ ತೆಂಗಿನಕಾಯಿ ಬದಲಿಗೆ ಗೋಡಂಬಿ ಹಾಕುತ್ತಾರೆ. ದೆಹಲಿಯ ಪನ್ನೀರ್‌ನಿಂದ ಮಾಡಿದ ಪನ್ನೀರ್‌ ಟಿಕ್ಕ ರಸವಾಡದ ಮತ್ತೊಂದು ಸಿಗ್ನೇಚರ್‌ ತಿನಿಸು. ಇಲ್ಲಿಗೆ ಬರುವ ಗ್ರಾಹಕರಿಗೆ ಸ್ವಾತಂತ್ರ್ಯ ಹೋರಾಟಗಾರರ ಚಿತ್ರದೊಂದಿಗೆ ಅವರ ಬದುಕು, ಹೋರಾಟದ ಮಾಹಿತಿಯುಳ್ಳ ಮೆನುವನ್ನು ಮೊದಲು ಕೊಡುತ್ತಾರೆ. ನಂತರ ಸ್ಟಾರ್ಟರ್‌ನ ಸರದಿ.

ಸ್ಟಾರ್ಟರ್‌ನಲ್ಲಿ ಕೊಡುವ ಪನ್ನೀರ್‌ ಪಂಜಾಬಿ ಟಿಕ್ಕ ಹೆಚ್ಚು ರುಚಿಯಾಗಿರುತ್ತದೆ. ಮೊಸರು, ಮಸಾಲೆ ಮಿಶ್ರಣದ ಪನ್ನೀರನ್ನು ತಂದೂರಿಯಲ್ಲಿ ಬೇಯಿಸಿರುತ್ತಾರೆ. ಈ ಟಿಕ್ಕ ಹೆಚ್ಚು ಖಾರವಲ್ಲದ ರುಚಿ ನೀಡುತ್ತದೆ. ಜೊತೆಗೆ ಅರಬರಾ ಕಬಾಬ್‌, ಗೋಬಿ ಅಮೃತ್ಸರಿ, ಪನ್ನೀರ್‌ ಪಕೋಡ, ಅಣಬೆ ಟಿಕ್ಕ... ಹೀಗೆ ತರಹೇವಾರಿ ಖಾದ್ಯಗಳಿವೆ.

ಚಂಡೀಗಡದ ಇಂಡಿಯನ್‌ ಹೋಟೆಲ್‌ ಮ್ಯಾನೇಜ್‌ಮೆಂಟ್‌ನಲ್ಲಿ ಚಿನ್ನದ ಪದಕ ಪಡೆದ ಅರವಿಂದ್ ರಥೂರಿ ಅವರು ಇಲ್ಲಿನ ಮುಖ್ಯ ಬಾಣಸಿಗರು. ಪಂಜಾಬ್‌, ರಾಜಸ್ತಾನ, ಮಂಗಳೂರಿನ ಹೋಟೆಲ್‌ಗಳಲ್ಲಿ ಕೆಲಸ ಮಾಡಿದ ಅನುಭವ ಇವರಿಗಿದೆ.

ಪಾನೀಯದಲ್ಲಿ ಒಣಹಣ್ಣುಗಳಿಂದ ಮಾಡಿದ ಪಂಜಾಬ್‌ ಸಿಹಿ ಲಸ್ಸಿ, ಪಂಜಾಬಿ ಕೇಸರ್‌ ಲಸ್ಸಿ, ಪುದೀನ ಶರಬತ್ತು, ಶುಂಠಿ ಖಾರ ಲಸ್ಸಿ, ಜೀರಿಗೆ ಖಾರ ಲಸ್ಸಿ, ಮಜ್ಜಿಗೆ, ನಿಂಬೆಹಣ್ಣಿನ ಶರಬತ್ತುಗಳಿವೆ.

ಸೂಪ್‌ನಲ್ಲಿ ಟೊಮೆಟೊ, ಕ್ರೀಂ ಆಫ್‌ ಸೂಪ್‌, ಸಬ್ಜಿ ಕಾ ಶೊರಬ, ಟೊಮೆಟೊ ಧನಿಯಾ ಶೊರಬ, ದಾಲ್‌ ಪಾಲಕ್‌ ಶೊರಬ ಆಯ್ಕೆ ಮಾಡಿಕೊಳ್ಳಬಹುದು.

ಪುದೀನಾ ಚಟ್ನಿ ಹಾಗೂ ಸಲಾಡ್‌ನೊಂದಿಗೆ ಕೊಡುವ ಫ್ಯಾಮಿಲಿ ಪ್ಲಾಟರ್‌ನಲ್ಲಿ ಆರು ಬಗೆಯ ಕಬಾಬ್‌ಗಳಿರುತ್ತವೆ. ರೋಟಿ, ನಾನ್‌, ಲಚ್ಚಾ ಪರಾಟ, ಅಮೃತ್ಸರಿ ಕುಲ್ಚ ಜೊತೆಗೆ ನೆಂಚಿಕೊಳ್ಳಲು ಕಾರ್ನ್‌ ಮಿರ್ಚ್‌ ಮಸಾಲ, ಪನ್ನೀರ್‌ ಟಿಕ್ಕ ಮಸಾಲ, ಅಣಬೆ ಮಸಾಲ, ಪನ್ನೀರ್‌ ಚಟ್ನಿವಾಲ ಸಾಗ್‌, ದಾಲ್‌ ಮಖನಿ, ಮಲೈ ಕೋಫ್ತಾ ಆರ್ಡರ್‌ ಮಾಡಬಹುದು. ಇವುಗಳಲ್ಲದೇ ಕಾಶ್ಮೀರಿ ನಾನ್‌, ಗಾರ್ಲಿಕ್‌ ನಾನ್‌, ಚೀಸ್‌ ನಾನ್‌ ಸಹ ಆಹಾರಪ್ರಿಯರಿಗೆ ಇಷ್ಟವಾಗಲಿವೆ. ಇಲ್ಲಿ ಥಾಲಿಯೂ (₹320) ಸಿಗುತ್ತದೆ.

ಊಟವಾದ ಮೇಲೆ ಸಿಹಿ ತಿನಿಸು ಇರಲೇಬೇಕು. ಅದಕ್ಕೆಂದೇ ಪಂಜಾಬಿ ಕುಲ್ಫಿ, ಕುಲ್ಫಿ ವಿತ್‌ ರಬ್ಡಿ, ಹಲ್ವಾ, ಗುಲಾಬ್‌ ಜಾಮೂನು, ಲಚ್ಚಾ ದಾರ್‌ ರಬ್ಡಿ, ಐಸ್‌ಕ್ರೀಂ ಇವೆ.

ಹೋಟೆಲ್‌: ಪಂಜಾಬಿ ರಸ್‌ವಾಡ
ವಿಶೇಷತೆ: ಪಂಜಾಬಿ ಸಸ್ಯಾಹಾರ ಆಹಾರ
ಸಮಯ: ಮಧ್ಯಾಹ್ನ 12ರಿಂದ 3.30 ಹಾಗೂ ಸಂಜೆ 7ರಿಂದ 11.

ಒಬ್ಬರಿಗೆ: ₹320

ಸ್ಥಳ: ಎಸ್‌ಎಂ ಟವರ್ಸ್‌, ಮೊದಲ ಮಹಡಿ, 11ನೇ ಮುಖ್ಯರಸ್ತೆ, 3ನೇ ಬ್ಲಾಕ್‌, ಜಯನಗರ.
ಸ್ಥಳ ಕಾಯ್ದಿರಿಸಲು: 97171 24545

ದೆಹಲಿಯ ಪನ್ನೀರ್‌ ಬಳಕೆ
ಪಂಜಾಬಿ ಹೋಟೆಲ್‌ಗಳಲ್ಲಿ ಸಾಮಾನ್ಯವಾಗಿ ಮಾಂಸಾಹಾರ ಸಿಗುತ್ತದೆ. ಪಕ್ಕಾ ಸಸ್ಯಾಹಾರ ಬಯಸುವವರಿಗಾಗಿ ಈ ಹೋಟೆಲ್‌ ಆರಂಭಿಸಿದೆವು. ಬೆಂಗಳೂರಿನವರೂ ಇಷ್ಟಪಡುವಂಥ ಮೆನು ಸಿದ್ಧಪಡಿಸಿದ್ದೇವೆ. ದೆಹಲಿಯಿಂದ ಪ್ರತಿದಿನ ತರಿಸುವ ಪನ್ನೀರ್‌ ಹೆಚ್ಚು ಮೃದುವಾಗಿರುತ್ತದೆ.  ಯಾವುದೇ ಆಹಾರಕ್ಕೂ ಕಲರಿಂಗ್‌ ಏಜೆಂಟ್ ಬಳಸುವುದಿಲ್ಲ. 
–ಪ್ರಸನ್ನ ಕುಮಾರ್‌, ಪಂಜಾಬಿ ರಸ್‌ವಾಡ ಮಾಲೀಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT