ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೆರೆಗಳಲ್ಲಿ ಎದ್ದಿದೆ ಉತ್ಸಾಹದ ಬುಗ್ಗೆ

Last Updated 17 ಅಕ್ಟೋಬರ್ 2016, 19:30 IST
ಅಕ್ಷರ ಗಾತ್ರ

ಆಧುನಿಕತೆ ಹಳ್ಳಿಯ ಮೂಲೆ ಮೂಲೆಗೂ ಬಂದಿದ್ದಕ್ಕೋ ಏನೋ ತನ್ನ ಜೊತೆ ಜೊತೆಗೇ ಸೋಮಾರಿತನವನ್ನೂ, ಅನಾರೋಗ್ಯವನ್ನೂ ತಂದಿದ್ದು ಅಷ್ಟಾಗಿ ಗಮನಕ್ಕೆ ಬರಲೇ ಇಲ್ಲ. ಆಧುನಿಕತೆ ಜೀವನ ಶೈಲಿಯಲ್ಲಿ ಮಾತ್ರವಲ್ಲ, ಯೋಚಿಸುವ ಶೈಲಿಯನ್ನೂ ಬದಲಾಯಿಸಿಬಿಟ್ಟಿದೆ. ನಿಮ್ಮೂರಲ್ಲಿ ಏನೇನಿದೆ ಅನ್ನೋ ಪ್ರಶ್ನೆಗೆ, ಹಳೆಯ ದೇವಸ್ಥಾನಗಳನ್ನು ಬಿಟ್ಟರೆ ಹೆಚ್ಚಾಗಿ ಬರುವ ಉತ್ತರ –ಹೊಸ ಅಂಗಡಿ, ಬ್ಯಾಂಕ್, ಕಾಲೇಜ್, ಪೆಟ್ರೋಲ್ ಬಂಕ್, ಪೊಲೀಸ್ ಠಾಣೆ ಮುಂತಾದವೇ.

ಅದರಲ್ಲೂ ಇತ್ತೀಚಿನ ದಿನಗಳಲ್ಲಿ ‘ನಮ್ಮೂರಲ್ಲೂ ಗೋಬಿ ಮಂಚೂರಿ ಸಿಗತ್ತೆ, ಐಸ್‌ಕ್ರೀಂ ಸಿಗತ್ತೆ, ನೂಡಲ್ಸ್ ಸಿಗತ್ತೆ’ ಎನ್ನುವಾಗ ನಿಮ್ಮೂರಿಗಿಂತ ನಮ್ಮೂರೇ ಮುಂದಿದೆ ಅನ್ನೋ ಅರ್ಥ! ನಮ್ಮೂರಲ್ಲಿ ದೊಡ್ಡ ಕೆರೆ ಇದೆ, ಕಲ್ಯಾಣಿ ಇದೆ, ಊರ ಪಕ್ಕದಲ್ಲೇ ದೊಡ್ಡ ಗುಡ್ಡ ಇದೆ... ಕಾಡು ಇದೆ... ಹೀಗೆಲ್ಲಾ ಹೇಳೋಕೆ ಅವೆಲ್ಲಾ ತಮ್ಮೂರಲ್ಲಿ ಇವೆ ಅನ್ನೋದೇ ಹೆಚ್ಚಿನ ಜನಕ್ಕೆ ಮರೆತೇ ಹೋಗಿದ್ದರೂ ಆಶ್ಚರ್ಯವಿಲ್ಲ.

ಕೆರೆಯಂತೂ ಹಳ್ಳಿಗಳ ರಚನೆಯಲ್ಲಿ ಪ್ರಮುಖವಾದದ್ದು. ಯಾವುದೇ ಹಳ್ಳಿಯ ಬಹುಮುಖ್ಯ ಭಾಗಗಳಲ್ಲಿ ವಿಶಾಲವಾದ ಕೆರೆ ದಂಡೆಯೂ ಒಂದಾಗಿತ್ತು. ಇಂದಿಗೂ ಹಲವು ಊರಿನ ಬಸ್ ಸ್ಟ್ಯಾಂಡ್, ಊರಿನ ಪ್ರಮುಖ ದೇವಸ್ಥಾನ, ಅಂಗಡಿ ಮುಂಗಟ್ಟುಗಳೆಲ್ಲಾ ಕೆರೆಯನ್ನೇ ಆಧರಿಸಿ ಇರುವುದನ್ನು ಕಾಣಬಹುದು. ರಾಜ್ಯದಲ್ಲಿ ಹಿಂದೆ 36 ಸಾವಿರದಷ್ಟು ಕೆರೆಗಳಿದ್ದವು ಎಂಬುದೀಗ ದಂತ ಕತೆಯೋ ಏನೋ ಅನ್ನುವ ಹಾಗೆ ಕೆಲವು ಸಾವಿರ ಕೆರೆಗಳು ಮಾತ್ರ ಅಸ್ತಿತ್ವದಲ್ಲಿವೆ.

ಕೆರೆಗಳ ಈ ದುಃಸ್ಥಿತಿಯ ಬಗ್ಗೆ ಸಮೀಕ್ಷೆಗಳು ನಡೆದು ಹಲವು ವರ್ಷಗಳೇ ಕಳೆದರೂ ಸರ್ಕಾರದಿಂದಾಗಲಿ ಅಥವಾ ಸ್ಥಳೀಯ ಸಮುದಾಯಗಳಿಂದಾಗಲೀ ತೀವ್ರ ರೀತಿಯ ಪರಿಹಾರೋಪಾಯಗಳು ಅಷ್ಟು ಪರಿಣಾಮಕಾರಿಯಾಗಿ ಆಗಿಲ್ಲ ಎಂದೇ ಹೇಳಬಹುದು. ಸ್ಥಳೀಯರ ಭಾಗವಹಿಸುವಿಕೆ ಇಲ್ಲದೇ ಕೆರೆಗಳ ಯೋಗಕ್ಷೇಮ ನೋಡುವುದು ಸರ್ಕಾರದಿಂದ ಸಾಧ್ಯವಾಗುವ ಕೆಲಸವೂ ಅಲ್ಲ. ರಾಜ್ಯದಾದ್ಯಂತ ಕೆರೆಗಳ ಕಣ್ಮರೆಗೆ ಸ್ಥಳೀಯ ಸಮುದಾಯಗಳ ನಿರ್ಲಕ್ಷ್ಯವೇ ಒಂದು ಪ್ರಮುಖ ಕಾರಣವಿರಬಹುದೇ?

ನಮ್ಮ ಮಲೆನಾಡಿನ ಕೆರೆಗಳಂತೂ ಸಾರ್ವಜನಿಕವಾಗಿ ಉಪಯೋಗವಾಗುವುದು ಬಹಳ ಕಡಿಮೆಯೇ. ಹಾಗಾಗಿ ಹೆಚ್ಚಿನ ಕೆರೆಗಳಲ್ಲಿ ಜಂಡುಗಳು ಬೆಳೆದು ಹೂಳು ತುಂಬಿ ಕೆಸರು ಗದ್ದೆಯಂತಾಗಿರುವ ಸ್ಥಿತಿಗಳೇ ಹೆಚ್ಚು. ಕಳೆದ ವರ್ಷದಿಂದ ನಮ್ಮೂರಿನ ಸಮೀಪದ ಒಂದು ಕೆರೆಯಲ್ಲಿ ಬದಲಾವಣೆಯನ್ನು ಊರಿಗೆ ಭೇಟಿ ಕೊಟ್ಟಗಲೆಲ್ಲ ಗಮನಿಸುತ್ತಾ ಇದ್ದೆ. ಆ ಕೆರೆ ದಿನದಿನಕ್ಕೂ ಸ್ವಚ್ಛವಾಗುತ್ತ ಸಾಗಿತ್ತು. ವಿಚಾರಿಸಿ ನೋಡಿದರೆ, ಅಲ್ಲಿ ನಿತ್ಯವೂ ಕೆರೆಯ ನೀರಿನಲ್ಲಿ ಈಜುವವರ ಒಂದು ಗುಂಪು ತಯಾರಾಗಿತ್ತು.

ಹವ್ಯಾಸಕ್ಕೆ ಆರಂಭವಾದ ಈ ಗುಂಪು ಕೇವಲ ಈಜುವುದಲ್ಲದೇ ನಿಧಾನವಾಗಿ ತನಗೂ ಅರಿವಿಲ್ಲದೆ ಒಂದು ಕ್ರಾಂತಿಯನ್ನೇ ಆರಂಭಿಸಿತ್ತು. ನಮ್ಮ ಹೆಗ್ಗೋಡು ಸುತ್ತಮುತ್ತಲಿನ ಗ್ರಾಮದ ಹಲವರಿಗೆ ಬೆಳಿಗ್ಗೆ ಈಜುವುದು ಒಂದು ನಿತ್ಯ ಕರ್ಮದ ಭಾಗವೇ ಆಗಿದೆ. ಇಲ್ಲೀಗ ಮಕ್ಕಳು ಹಿರಿಯರೆನ್ನದೇ ಎಲ್ಲಾ ವಯೋಮಾನದ ಗಂಡಸರು, ಹೆಂಗಸರು ಬೆಳಿಗ್ಗೆ ಹಾಗೂ ಸಂಜೆ ಈಜುವುದನ್ನು ನೋಡಲು ಕೂಡ ಜನ ಸೇರುವುದಿದೆ.

ಈಜು ಶಾರೀರಿಕವಾಗಿ ಮಾತ್ರವಲ್ಲದೇ ಮಾನಸಿಕವಾಗಿಯೂ ಸಾಹಸ, ಧೈರ್ಯವನ್ನು ತುಂಬುವಂಥ, ವ್ಯಕ್ತಿ ವಿಕಸನಕ್ಕೆ ಸಹಾಯವಾಗುವ ಬಹುಮುಖ್ಯವಾದ ಒಂದು ಕಲೆ.ಇದು ಪ್ರಾಣಿ ಸಹಜವಾಗಿಯೂ ಸ್ವರಕ್ಷಣೆಗೆ ಅವಶ್ಯವಾದ ಒಂದು ಕಲೆಯೂ ಆಗಿರುವುದರಿಂದ, ಸಾರ್ವತ್ರಿಕವಾಗಿ ಸಣ್ಣವಯಸ್ಸಿನಲ್ಲಿಯೇ ಕಲಿಯುವುದು ಉತ್ತಮ. ಆದರೆ ಈಗೀಗ ನಗರ ಪ್ರದೇಶದಲ್ಲಿರುವ ಈಜು ಕೊಳಗಳನ್ನು ಬಿಟ್ಟರೆ ಈಜು ಕಲಿಯಲು ಬೇರೆ ಕಡೆಗಳಲ್ಲಿ ಅನುಕೂಲಗಳು ಇಲ್ಲ.

ಮೇಲಾಗಿ ಪುಕ್ಕಲು ಸ್ವಭಾವದ ಪೋಷಕರು ತಮ್ಮ ಮಕ್ಕಳನ್ನು ಕಲಿಯಲು ಪ್ರೋತ್ಸಾಹಿಸುವುದೂ ಇಲ್ಲ. ಈಜುಕೊಳಗಳಲ್ಲಿನ ಕೃತಕ ವಾತಾವರಣ ಈಜಲು ಆಹ್ಲಾದಕರವೂ ಅಲ್ಲ. ಹಾಗಾಗಿ ಈಜಲು ಇಂದಿಗೂ ಹಳ್ಳಿಯ ಕೆರೆ ನದಿಗಳ ನೀರೇ ಹೆಚ್ಚು ಪ್ರಶಸ್ತವೂ ಹೌದು.

ಆದರೆ ಈಜುವ ಗುಂಪು ಇಲ್ಲದೆ ಹೊಸಬರು ಧೈರ್ಯವಾಗಿ ನೀರಿಗೆ ಇಳಿಯುವುದು ಅಪಾಯಕರ. ಹೀಗೆ ಹಲವು ಸೂಕ್ಷ್ಮ ಅಂಶಗಳನ್ನೆಲ್ಲಾ ಪರಿಗಣಿಸಿ ಸಾಗರದ ಹರೀಶ್ ನವುತೆ ಹಾಗೂ ಸಂಗಡಿಗರು ಸಾಗರದ ಸುತ್ತಮುತ್ತ ಹಲವು ಕೆರೆಗಳಲ್ಲಿ ಹೀಗೆ ಈಜುವ ಗುಂಪುಗಳನ್ನು ಸಂಘಟಿಸಿದ್ದಾರೆ. ಈ ಗುಂಪಿನ ಸ್ವಯಂ ಸೇವಕರೇ ಕೆರೆಗಳನ್ನು ಸ್ವಚ್ಛಗೊಳಿಸುವುದಲ್ಲದೇ, ತಾಂತ್ರಿಕವಾಗಿಯೂ ತರಬೇತಿಗೆ ಬೇಕಾದ ಅನುಕೂಲಗಳನ್ನು ನಿರ್ವಹಿಸುವ ಕೆಲಸವನ್ನು ಮಾಡುತ್ತಿದೆ. ಹೀಗೆ ಹಲವು ಊರುಗಳಲ್ಲಿ ಜನರಿಂದ ನಿರ್ಲಕ್ಷ್ಯಕ್ಕೆ ಒಳಗಾಗಿದ್ದ ಕೆರೆಗಳು ಇಂದು ನಳನಸುತ್ತಾ ಜನಜೀವನದ ಭಾಗವೇ ಆಗಿದೆ.

ಸಾಗರದ ಹಲವು ಕೆರೆಗಳಲ್ಲಿ ಈಜುವ ಗುಂಪುಗಳನ್ನು ಸಂಘಟಿಸಿರುವ ಜಲಯೋಗಿ ಹರೀಶ್‌ ನವುತೆ ತಮ್ಮ ಈ ಆಲೋಚನೆಗಳು ಹುಟ್ಟಿಕೊಂಡ ಬಗೆಯನ್ನು ವಿವರಿಸಿದ್ದು ಹೀಗೆ...

* ನಿಮಗೆ ಈಜುವ ಗುಂಪುಗಳ ಕಲ್ಪನೆ ಬಂದಿದ್ದು ಹೇಗೆ?
ಹೀಗೆ ಅಂತ ಕಲ್ಪಿಸಿ ಶುರುವಾಗಿದ್ದೇನಲ್ಲ. ಹತ್ತು ವರ್ಷದ ಹಿಂದಿನಿಂದಲೇ ಸ್ಥಳೀಯರಾದ ಶ್ರೀಧರ ಶೆಟ್ರು ಹಾಗೂ ಕೆಲವರು ಸಾಗರದಲ್ಲಿರುವ ರುದ್ರ ತೀರ್ಥವನ್ನು ಗೆಳೆಯರೊಟ್ಟಿಗೆ ಸೇರಿ ಸ್ವಚ್ಛ ಮಾಡಿ ಅಲ್ಲೇ ನೂರಾರು ಆಸಕ್ತರಿಗೆ ಈಜು ಕಲಿಸಿದ್ರು. ಹಾಗೆ ನಾನು ನನ್ನ ಮಗನಿಗೆ ಈಜು ಕಲಿಸೋಕೆ ಅಂತ ಅವರ ಹತ್ರಾನೇ ಹೋಗಿದ್ದೆ.ಅವಾಗೆಲ್ಲಾ ನೀರಿನ ಮೇಲೆ ತೇಲುವಂಥ ಮರದ ದಿಮ್ಮಿಗಳನ್ನು ಬಳಸಿ ಈಜೋದನ್ನ ಕಲಿಸ್ತಾ ಇದ್ರು. ಕ್ರಮೇಣ ಅದ್ಯಾಕೋ ಅಷ್ಟು ಸಮಂಜಸ ಅಂತ ಅನ್ನಿಸಲಿಲ್ಲಾ.

* ಈಗ ಮರದ ದಿಮ್ಮಿ ಬದಲಿಗೆ ಯಾವ ವಸ್ತುಗಳನ್ನು ಬಳಸ್ತಾ ಇದ್ದೀರಾ?
ಪ್ಲಾಸ್ಟಿಕ್ ಬಾಟಲಿ, ತೆಂಗಿನ ಚಿಪ್ಪು, ಬಾಳೆ ದಿಂಡು ಹೀಗೆ ನಾನಾ ತರಹದ ವಸ್ತುಗಳನ್ನು ಪ್ರಯೋಗ ಮಾಡಿ ನೋಡಿದ ಮೇಲೆ ಈಗ ಸಂಪೂರ್ಣ ಸುಧಾರಿತ ವಸ್ತು ಹಾಗೂ ವಿಧಾನದಿಂದ ಹೊಸಬರಿಗೆ ಈಜೋದನ್ನ ತುಂಬಾ ವೈಜ್ಞಾನಿಕ ಹಾಗೂ ಸುರಕ್ಷಿತವಾಗಿ ಕಲಿಸುವ ಮಟ್ಟಕ್ಕೆ ನಮ್ಮ ಗುಂಪು ತಯಾರಾಗಿದೆ. ಹೈಡೆನ್ಸಿಟಿ ಥರ್ಮೋಕೋಲ್ ಬ್ಲಾಕ್, ಫಿಷಿಂಗ್ ಬಾಲ್ಸ್ ಹಾಗೂ ಸೇಫ್ಟಿ ಟ್ಯೂಬ್‌ಗಳನ್ನ ಈಗ ನಾವು ಕಲಿಕಾ ವಸ್ತುಗಳಾಗಿ ಬಳಸುತ್ತಾ ಇದ್ದೇವೆ.

* ಯಾವ ವಯಸ್ಸಿನವರು ಕಲಿಯೋದು ಸೂಕ್ತ ?
ಈಗ ನಾವು 3 ಹಂತಗಳ ಕಲಿಕಾ ಸಾಧನಗಳನ್ನು ಸುಧಾರಿಸಿದ ಮೇಲೆ ಸ್ನೇಹಿತರ ವಲಯದಲ್ಲಿ ಹಲವು ಕುಟುಂಬಗಳು ಅಂದ್ರೆ 3 ವರ್ಷದ ಮಕ್ಕಳಿಂದ ಹಿಡಿದು 70 ವರ್ಷದ ಹಿರಿಯರ ತನಕ ಇಡೀ ಕುಟುಂಬ ಸಮೇತ ನೀರಿಗಿಳಿದ ಹಲವು ಉದಾಹರಣೆಗಳು ಇದೆ. ಮಹಿಳೆಯರಂತೂ ಹಲವರು ಈಜಿನ ಮಾಸ್ಟರ್‌ಗಳಾಗಿದ್ದಾರೆ.

* ಮಹಿಳೆಯರೂ ಹೀಗೆ ಸಾರ್ವಜನಿಕ ಕೆರೆಯಲ್ಲಿ ಈಜುವಾಗ ಯಾವ ರೀತಿಯ ಉಡುಗೆ ಬೇಕಾಗುತ್ತದೆ?
ಹಾಗೇನೂ ವಿಶೇಷವಾದ ಉಡುಗೆ ಅಗತ್ಯವಿಲ್ಲ. ಸಾದಾ ಚೂಡಿದಾರ ಮೇಲೆ ಒಂದು ಟೀ ಶರ್ಟ್ ಹಾಕಿ ಈಜೋದು ಅಷ್ಟೇ. ತಲೆಗೆ ಮಾತ್ರ ಸ್ವಿಮ್ ಕ್ಯಾಪ್ ಬಳಸಿದ್ರೆ ತಲೆಕೂದಲು ಒದ್ದೆಯಾಗೋಲ್ಲ. ಹಾಗೆ ಪುರುಷರಿಗೂ ಬರ್ಮೂಡಾ ತರಹದ ಚಡ್ಡಿ ಕಡ್ಡಾಯ. ಇಲ್ಲಿ ಉಳಿದವರಿಗೆ ಮುಜುಗರ ಆಗೋ ಹಾಗೆ ಬಟ್ಟೆ ಹಾಕಿಕೊಂಡು ಬರುವ ಹಾಗಿಲ್ಲ.

* ಈಜು ಕಲಿಕೆಗೆ ಎಷ್ಟು ತಿಂಗಳು ಬೇಕಾಗಬಹುದು?
ಅದು ಅವರವರ ಮೇಲೆ ಅವಲಂಬಿತ. ಒಂದೇ ವಾರದಲ್ಲಿ ಕಲಿತವರು ಇದ್ದಾರೆ. ಹಾಗೆ 10-15 ದಿನ ನೀರಿಗೆ ಇಳಿಯೋಕೆ ಮೀನಮೇಷ ಎಣಿಸಿದವರೂ ಇದ್ದಾರೆ. ಇಲ್ಲಿ ಕಲಿಕೆ ಅನ್ನೋದು ಮಾತ್ರವಲ್ಲ. ಕಲಿಕೆಗೆ ಅಂತ ಬಂದವ್ರೆಲ್ಲಾ ಒಂದೇ ಕುಟುಂಬದ ಸದಸ್ಯರ ಹಾಗೆ ಎಲ್ಲಾ ಚಟುವಟಿಕೆಗೂ ಭಾಗಿಗಳಾಗ್ತಾರೆ.

* ಈಜುವುದರ ಜೊತೆಗೆ ಬೇರೆ ಏನೇನು ಚಟುವಟಿಕೆ ಮಾಡ್ತಿದ್ದೀರಾ?
ಚಟುವಟಿಕೆಗಳು ಅಂದ್ರೆ ಎಲ್ಲವು ನೇರವಾಗಿ ಅಥವಾ ಪರೋಕ್ಷವಾಗಿ ಈಜಿಗೆ ಸಂಬಂಧಿಸಿದವು. ಕೆರೆ ಸ್ವಚ್ಛಗೊಳಿಸುವುದು, ಮೀನುಗಳನ್ನ ತಂದು ಬಿಡುವುದಲ್ಲದೇ ಅವಕ್ಕೆ ಆಗಾಗ ಆಹಾರ ಕೊಟ್ಟು ಅವುಗಳ ವಿಶ್ವಾಸವನ್ನು ಗಳಿಸುತ್ತೇವೆ. ಆಗಾಗ ಅರೋಗ್ಯ, ಯೋಗ ಮುಂತಾದ ವಿಷಯಗಳನ್ನು ಇಟ್ಟುಕೊಂಡು ಕಾರ್ಯಕ್ರಮಗಳನ್ನು ಆಯೋಜಿಸಿದಾಗ ನಮ್ಮ ಸದಸ್ಯರೇ ಎಲ್ಲವನ್ನೂ ನಿರ್ವಹಿಸುತ್ತಾರೆ. ಕೆಲವರು ಖರ್ಚನ್ನು ವಹಿಸಿಕೊಂಡರೆ, ಇನ್ನು ಕೆಲವರು ಅಡುಗೆ ಮಾಡಿ ತರುತ್ತಾರೆ. ಹೀಗೆ ಈಜಿನ ಮೂಲಕ ಹಲವು ರೀತಿಯ ಪ್ರಯೋಜನವಾಗ್ತಾ ಇದೆ.

* ಮುಂದಿನ ಯೋಜನೆಗಳು ಏನೇನು?
ಕೆರೆಗಳನ್ನು ಸ್ವಚ್ಛಗೊಳಿಸುವುದರ ಜೊತೆಗೆ ಕೆರೆಯ ಆವರಣವನ್ನು ಹೆಚ್ಚು ಉಪಯೋಗಯೋಗ್ಯವಾಗಿ ಮಾಡುವ ಪ್ರಯತ್ನಗಳು ನಡೀತಾ ಇವೆ. ಅಂದರೆ, ಸ್ಥಳೀಯವಾಗಿ ಸಿಗುವ ಪರಿಕರಗಳನ್ನೇ ಉಪಯೋಗಿಸಿ ಕೆರೆ ದಂಡೆಯ ಮೇಲೆ ಕೂರಲು ಆಸನಗಳನ್ನು ಮಾಡುವುದು ಮುಂತಾದವು. ಇದರಿಂದಾಗಿ ಸಮುದಾಯದ ಜೊತೆಗೆ ಕೆರೆ ಹೆಚ್ಚು ಆಪ್ತವಾಗತ್ತೆ ಅನ್ನೋ ಉದ್ದೇಶ. ‘ಜಲಯೋಗ ಕುಟುಂಬ’, ‘ಜಲಯೋಗ ಗ್ರಾಮ’ ಪರಿಕಲ್ಪನೆಗಳನ್ನು ಇಟ್ಟುಕೊಂಡು ಆ ನಿಟ್ಟಿನಲ್ಲಿ ಪ್ರಯತ್ನ ನಡೆಯುತ್ತಾ ಇದೆ.

* ಈಜಿನ ಸ್ಪರ್ಧೆಗಳು ನಡೆಯುತ್ತಿವೆಯೇ?
ಹೌದು. ವರ್ಷಕ್ಕೊಮ್ಮೆ ಸ್ಪರ್ಧೆಗಳನ್ನು ಆಯೋಜಿಸುವುದು ಇದೆ. ಅದಕ್ಕೆ ‘ಕೆರೆ ಹಬ್ಬ’ ಅಂತಾನೆ ಹೆಸರು. ಊರ ಹಬ್ಬದಂತೆ ತುಂಬಾ ಸಡಗರದಿಂದಲೇ ಜನರು ಪಾಲ್ಗೊಳ್ಳುತ್ತಾರೆ. ಇಲ್ಲಿ ಕೇವಲ ಈಜಲ್ಲದೆ ಜಲಯೋಗ ಅನ್ನೋ ಹೆಸರಿನಲ್ಲಿ ನೀರಿನ ಮೇಲೆ ಹೆಚ್ಚು ಹೊತ್ತು ತೇಲಾಡುವುದು, ಕೆಲವು ಸರಳ ಯೋಗಾಸನಗಳನ್ನು ಮಾಡೋದು ಎಲ್ಲಾ ನಡಿತಾ ಇದೆ.

ಹೆಚ್ಚಿನ ಆಸಕ್ತಿ ಇದ್ದವರಿಗೆ ಅದರಲ್ಲೂ ಮಕ್ಕಳಿಗೆ ದಿನ ದಿನಕ್ಕೂ ಹೊಸತನವೂ ಬೇಕು ನಿರಂತರತೆ ಬೇಕು. ಇಂತಹ ಪ್ರದರ್ಶನಗಳನ್ನೂ ನಮ್ಮ ಹಬ್ಬದ ದಿನ ಮಾಡಿ ತೋರಿಸಿ ನಾವು ಹೊಸಬರನ್ನು ನಮ್ಮ ಗುಂಪಿಗೆ ಆಕರ್ಷಿಸುವುದಕ್ಕೂ ಸಹಾಯ ಆಗಿದೆ.  ಸಂಪರ್ಕಕ್ಕೆ: 94814 58779

***
ಈಜು v/s ನಡಿಗೆ

ಈಜಿ ವಾಪಸ್ ಬಂದಾಗ ತುಂಬಾ ಹಸಿವಾಗತ್ತೆ ಹಾಗೂ ತುಂಬಾ ಚೆನ್ನಾಗಿ ತಿಂತಾರೆ ಅನ್ನೋದನ್ನ ನೀವೆಲ್ಲ ಗಮನಿಸಿರಬಹುದು. ‘ಆಷಾಢದ ಭೂತ ಹೊಕ್ಕೊಂಡಿದೆ’ ಅನ್ನೋ ಒಂದು ಮಾತೂ ಕೇಳಿರಬಹುದು. ಎಂದರೆ ಆಷಾಢದಲ್ಲಿ ತುಂಬಾ ಹಸಿವು ಆಗುತ್ತದೆ.

ಚೆನ್ನಾಗಿ ತಿನ್ನಲು ಆಗುತ್ತದೆ ಎಂದು ಅರ್ಥ. ಅದೇ ನೀವು ಬೇಸಿಗೆಯಲ್ಲಿ ಅಷ್ಟೇ ಪ್ರಮಾಣದ ಕೆಲಸ ಮಾಡಿದರೂ ಹೆಚ್ಚು ಹಸಿವು ಆಗುವುದಿಲ್ಲ. ಹಸಿವೆ ಕಟ್ಟಲು ಶುರುವಾಗುತ್ತದೆ. ಇದೊಂದು ರೀತಿಯ ವಿಚಿತ್ರ. ಯಾಕೆ ಹೀಗೆ ಆಗುತ್ತದೆ ಎಂದು ಗಮನಿಸಿದರೆ ಈಜಿನ ವ್ಯವಸ್ಥೆ ಏನು ಅಂತ ಗೊತ್ತಾಗತ್ತೆ.

ಮಳೆಗಾಲದಲ್ಲಿ ವಾತಾವರಣ ತಂಪು ಆಗಿದ್ದಾಗ ನಮ್ಮ ದೇಹದಲ್ಲಿ ಆಹಾರ ಜೀರ್ಣಕ್ರಿಯೆ ಚೆನ್ನಾಗಿ ಆಗುತ್ತದೆ. ಆಹಾರದ ಜೀರ್ಣಕ್ರಿಯೆ ಬಾಯಿಯಿಂದ ಪ್ರಾರಂಭವಾಗಿ, ಸಣ್ಣ ಸಣ್ಣ ಜೀವಕೋಶದ ತನಕವೂ ಜೀರ್ಣವಾಗುತ್ತ ಸಾಗುತ್ತದೆ. ಜೀರ್ಣಕ್ರಿಯೆಗಾಗಿ ಪ್ರತಿ ಜೀವಕೋಶದಲ್ಲಿಯೂ ಸಣ್ಣ ಬೆಂಕಿ ಇರುತ್ತದೆ.

ಮಳೆಗಾಲದಲ್ಲಿ ವಾತಾವರಣ ತಂಪು ಇರುವ ಕಾರಣ, ಮೈ ಬೆವರುವುದಿಲ್ಲ. ಚರ್ಮದ ಜೀವಕೋಶಗಳು ಮುದುಡಿಕೊಳ್ಳುತ್ತವೆ. ಎಲ್ಲ ಒಳಮುಖವಾಗಿ ಇರುತ್ತದೆ. ಆದ್ದರಿಂದ ಹೆಚ್ಚು ಕೆಲಸ ಮಾಡಿದಂತೆ, ನಮ್ಮ ದೇಹದ ಮೆಟಾಬಾಲಿಕ್ (ಚಯಾಪಚಯ) ಚಟುವಟಿಕೆ ಜಾಸ್ತಿ ಆಗಿ ಹಸಿವೆ ಜಾಸ್ತಿ ಆಗುತ್ತದೆ. ಅದೇ ನಾವು ಬೇಸಿಗೆಯಲ್ಲಿ ಕೆಲಸ ಮಾಡಿದಾಗ ತುಂಬಾ ಮೈಬೆವರೋಕೆ ಶುರುವಾಗತ್ತದೆ.

ಪ್ರೊಟೀನ್ ಜೀರ್ಣವಾದಾಗ ಯೂರಿಯಾ ಮತ್ತು ಯೂರಿಕ್‌ ಆ್ಯಸಿಡ್‌ ಬಿಡುಗಡೆ ಆಗೋದು ಪೂರ್ಣಪ್ರಮಾಣದಲ್ಲಿ ಬೆವರಿನ ಮೂಲಕ ಹೊರಗೆ ಹೋಗೋದಿಲ್ಲ. ಮೂತ್ರದ ಮೂಲಕ ಹೋಗಬೇಕು, ಆದರೆ ಬೇಸಿಗೆಯಲ್ಲಿ ಮೂತ್ರ ಜಾಸ್ತಿ ಆಗೋದಿಲ್ಲ. ಹಾಗಾಗಿ  ಸ್ವಲ್ಪ ದೇಹದಲ್ಲೇ ಶೇಖರಣೆಯಾಗುತ್ತದೆ ಮತ್ತು ಜೀರ್ಣಕ್ರಿಯೆಯೂ ಕಡಿಮೆ ಆಗುತ್ತೆ ಹಾಗೂ ಹಸಿವು ಕೂಡ ಕಡಿಮೆ ಆಗುತ್ತೆ.

ನಾವು ನೀರಿನಲ್ಲಿದ್ದಾಗ ಗಮನಿಸಿ, ಒಂದು ಗಂಟೆ ಈಜಿದರೂ ಒಬ್ಬರಾದರೂ ಬೆವರು ಒರೆಸುಕೊಂಡಿದ್ದನ್ನ ನೋಡಿದ್ದೀರಾ? ನೀರಿನಲ್ಲಿ ಇದ್ದಾಗ ಹೊರಗಡೆ ಚರ್ಮದ ಜೀವಕೋಶಗಳೆಲ್ಲಾ ಮುದುಡಿಕೊಂಡು ಇರುತ್ತವೆ. ಜೀರ್ಣಕ್ರಿಯೆಯನ್ನು ಹೆಚ್ಚು ಮಾಡತಕ್ಕಂತಹ ಅಗ್ನಿ ಒಳಮುಖವಾಗಿರುತ್ತೆ. ಪ್ರತಿ ಮಾಂಸಖಂಡದ ಒಳಗಡೆ ಇರುವ ಪ್ರೊಟೀನ್‌ ಕೂಡ ಜೀರ್ಣವಾಗುತ್ತದೆ. ಹಾಗೆ ಕೊಲೆಸ್ಟ್ರಾಲ್‌ ಕೂಡ ಜೀರ್ಣವಾಗುತ್ತದೆ. ಉತ್ಪತ್ತಿ ಆದಂತಹ ಯೂರಿಕ್‌ ಆ್ಯಸಿಡ್‌ ಮೂತ್ರದ ಮೂಲಕ ಹೊರಗೆ ಹೋಗುತ್ತದೆ.

ನೀವೇ ಗಮನಿಸಿರ ಬಹುದು, ಒಬ್ಬ ಅರ್ಧ ಗಂಟೆ ಈಜಿದ್ರೆ ತಕ್ಷಣ ಮೂತ್ರಕ್ಕೆ ಓಡ್ತಾನೆ.  ಆದರೆ ವಾಕ್‌ ಮಾಡಿದಾಗ ಮೈ ಬೆವರುತ್ತದೆ. ಜನರು ಅದನ್ನೇ ಆರಾಮು ಅಂದುಕೊಂಡಿದ್ದಾರೆ. ಯಾರು ಬೆಳಿಗ್ಗೆ 3 ಕಿ.ಮೀ ವಾಕ್‌ ಮಾಡಿ ಇಡೀ ದಿನ ಕೂತಿರ್ತಾರೆ. ಅವರಿಗೆ ಹಾರ್ಟ್‌ ಅಟ್ಯಾಕ್‌ ಆಗುವುದು ಜಾಸ್ತಿ. ಆದರೆ ಅರ್ಧ ಗಂಟೆ ಈಜಿ ಇಡೀ ದಿನ ಕೂತು ಇದ್ದರೂ ಅವರಿಗೆ ಹೃದಯ ಸಮಸ್ಯೆ ಬರುವುದಿಲ್ಲ. ಏಕೆಂದರೆ ಈಜಿದವರ ದೇಹದಲ್ಲಿ ಟಾಕ್ಸಿಕ್‌ ಅನ್ನೋ ಅಂಶ ಮೂತ್ರದ ಮೂಲಕ ತಕ್ಷಣ ಹೊರಕ್ಕೆ ಹೋಗುತ್ತದೆ.ಶೇಖರಣೆ  ಆಗುವುದಿಲ್ಲ.

ನಮ್ಮಲ್ಲಿ ಹೆಚ್ಚಿನವರಿಗೆ ಸೊಂಟ ನೋವು, ಬೆನ್ನುನೋವು, ಕೈ ಕಾಲು ಸೆಳೆತ ಇರುತ್ತದೆ. ಅಂಥವರು ವ್ಯಾಯಾಮ ಮಾಡಿ ಸುಸ್ತಾಗುತ್ತಾರೆ ವಿನಾ ಈ ಸಮಸ್ಯೆ ಹೋಗುವುದಿಲ್ಲ. ಆದರೆ ಈಜು ಹೊಡೆದರೆ ದೇಹದ ಒಳಗಡೆ ಶಾಖ ಉತ್ಪತ್ತಿ ಆಗುತ್ತದೆ. ಮೈ ಬಿಸಿಯಾಗುತ್ತದೆ. ತುಪ್ಪ ಬಿಸಿ ಮಾಡಿದರೆ ಏನಾಗುತ್ತದೆ? ಕರಗುತ್ತದಲ್ಲ, ಹಾಗೆನೇ ಮೈಯಲ್ಲಿರುವ ಕೊಲೆಸ್ಟ್ರಾಲ್‌ ಈಜುವುದರಿಂದ ಕರಗುತ್ತದೆ. ನಡೆದಾಗ ಮೈ ತಣ್ಣಗಾಗುತ್ತದೆ.

ಈಜು ಹೊಡೆದಾಗ ಮೈ ಬಿಸಿಯಾಗುತ್ತದೆ. ಇವೆರಡು ತದ್ವಿರುದ್ಧ. ಹಾಗಾಗಿ ವಾಕ್‌ ಮಾಡೋದಕ್ಕಿಂತ ಈಜುವುದು ಒಳ್ಳೆಯದು. ಏಕೆಂದರೆ ನಡೆದಾಗ ಕಾಲಿಗೆ ಹೆಚ್ಚು ಕೆಲಸ ಆಗುತ್ತದೆ. ಕೈ ಬೀಸಿದರೆ ಅದಕ್ಕೆ ವ್ಯಾಯಾಮ ಸಿಗಬಹುದು ಅಷ್ಟೇ. ಆದರೆ ಇಡೀ ದೇಹಕ್ಕೆ ವ್ಯಾಯಾಮ ಸಿಗುವುದಿಲ್ಲ. ಆದರೆ ಈಜು ಹಾಗಲ್ಲ. ಬೆರಳ ತುದಿಯಿಂದ ತಲೆತುದಿಯವರೆಗೆ ಸಂಪೂರ್ಣ ಅವಯವಗಳಿಗೂ ವ್ಯಾಯಾಮ ಸಿಗುತ್ತದೆ. ಪ್ರತಿಯೊಂದು ಮಾಂಸಖಂಡಗಳೂ ಬಲಿಷ್ಠ ಆಗುತ್ತವೆ.

ಇನ್ನೊಂದು ವಿಷಯ ಎಂದರೆ ನಡೆಯುವಾಗ ತಲೆಯ ತುಂಬಾ ಸಂಸಾರ ತಾಪತ್ರಯ ಯೋಚನೆ ಮಾಡುತ್ತಾ ಹೋಗುತ್ತೀರಿ. ನಿನ್ನೆ ಧಾರಾವಾಹಿ ಇವತ್ತು ಏನು ಆಗಬಹುದು ಎಂಬ ಯೋಚನೆಯೂ ಇರುತ್ತದೆ. ಪಕ್ಕದ ಮನೆ ಜಗಳ ಎಲ್ಲಿ ತನಕ ಹೋಗಬಹುದು ಎಂದು ಯೋಚನೇನೂ ಮಾಡಬಹುದು. ಎಷ್ಟೋ ಮಂದಿಗೆ ನೋಡಿ, ಕಿವಿಗೆ ವಾಕ್‌ಮನ್‌ ಹಾಕಿಕೊಂಡು ಹಾಡು ಕೇಳುತ್ತಾ ಹೋಗುತ್ತಾರೆ. ಅವರು ಹಾಡು ಕೇಳುತ್ತಿದ್ದಾರೋ, ವಾಕ್‌ ಮಾಡುತ್ತಿದ್ದಾರೋ ಗೊತ್ತಾಗುವುದಿಲ್ಲ. ಆದರೆ ಈಜು ಹಾಗಲ್ಲ.

ಈಜಲು ನೀರಿನೊಳಕ್ಕೆ ಇಳಿದು ಮನೆಯ ತಾಪತ್ರಯವನ್ನು ತಲೆಯಲ್ಲಿ ತಂದುಕೊಂಡರೆ ಮುಗೀತು. ಮುಳುಗಿ ಹೋಗ್ತಾರೆ. ಆದ್ದರಿಂದ ಇಲ್ಲಿ 100% ಏಕಾಗ್ರತೆ ಅವಶ್ಯಕವಿದೆ.ಏಕಾಗ್ರತೆ ಇಲ್ಲದ ಮಕ್ಕಳನ್ನು ಈಜಿಗೆ ಕಳಿಸಿ ನೋಡಿ. ಅವರಲ್ಲಿ ಮಾನಸಿಕ ಸ್ಥಿರತೆ ಜಾಸ್ತಿ  ಆಗುತ್ತದೆ. ಗ್ರಹಿಕಾ ಸಾಮರ್ಥ್ಯ ಹೆಚ್ಚಾಗುತ್ತದೆ.
-ಡಾ. ಪತಂಜಲಿ

***
ಕಳೆದ ವರ್ಷ ಊರಿಗೆ ಹೋದಾಗೊಮ್ಮೆ ಊರಿನಲ್ಲಿ ಎಲ್ಲರೂ ಸಾಮೂಹಿಕವಾಗಿ ಈಜುವುದನ್ನು ನೋಡಿ ಸೋಜಿಗವೆನಿಸಿತ್ತು. ಅದರಲ್ಲೂ 50-60 ವಯಸ್ಸಿನ ಮಹಿಳೆಯರು ಈಗೀಗ ಈಜಲು ಕಲಿತಿದ್ದು ಕೇಳಿ ಬೆರಗಾಗಿದ್ದೆ. ಹಾಗಾಗಿ ಮೊದಲೇ ಪ್ಲಾನ್ ಮಾಡಿ ಈ ಬಾರಿ ಬೇಸಿಗೆ ರಜೆಯಲ್ಲಿ ಎರಡು ತಿಂಗಳು ಅಮ್ಮನ ಮನೆಯಲ್ಲೆ ಉಳಿದು ನಾನು ಈಜುಲು ಕಲಿತೆ. ಬಹುಶಃ ನನ್ನ ಸ್ನೇಹಿತರ ವಲಯದಲ್ಲಿ ನಾನೊಬ್ಬಳೇ ಈಜು ಕಲಿತಿದ್ದು. ತುಂಬಾ ಜನರನ್ನ ವಿಚಾರಿಸಿದೆ,ಆದ್ರೆ ಯಾರಿಗೂ ಸರಿಯಾದ ಅವಕಾಶ ಸಿಗಲಿಲ್ಲಾ ಅನ್ನೋದೇ ಸಾಮಾನ್ಯ ಉತ್ತರ!
-ಮೈತ್ರಿ ಕಮಲಾಕರ್, ಬೆಂಗಳೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT