ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸರಕು ಸಾಗಣೆ ದಕ್ಷತೆ ಹೆಚ್ಚಿಸಿದ ‘ಪೋರ್ಟರ್‌

Last Updated 18 ಅಕ್ಟೋಬರ್ 2016, 19:30 IST
ಅಕ್ಷರ ಗಾತ್ರ

ಖರಗ್‌ಪುರ ಮತ್ತು ಕಾನ್ಪುರನಲ್ಲಿನ ಭಾರತೀಯ ತಂತ್ರಜ್ಞಾನ ಸಂಸ್ಥೆಯ (ಐಐಟಿ) ಪದವೀಧರರಾದ ಉತ್ತಮ್‌ ದಿಗ್ಗಾ, ಪ್ರಣವ್‌ ಗೋಯೆಲ್‌ ಮತ್ತು ವಿಕಾಸ್‌ ಚೌಧರಿ  ಜತೆಯಾಗಿ ಸೇರಿಕೊಂಡು ಮಹಾನಗರಗಳಲ್ಲಿನ ಸರಕು ಸಾಗಣೆ ಉದ್ದಿಮೆಗೆ ನೆರವಾಗುವ ನವೋದ್ಯಮ (ಸ್ಟಾರ್ಟ್‌ಅಪ್‌) ಸ್ಥಾಪಿಸಿದ್ದಾರೆ.

ಸರಕು ಸಾಗಣೆ ಉದ್ಯಮದ ಓರೆಕೋರೆ ಸರಿಪಡಿಸಿ, ದಕ್ಷತೆ ಹೆಚ್ಚಿಸಿ, ಸಕಾಲಕ್ಕೆ ಸರಕು ಪೂರೈಸುವ, ಸರಕು ಸಾಗಣೆ ಲಘು ವಾಹನ ಚಾಲಕರ ಆದಾಯ ಹೆಚ್ಚಿಸಲು ನೆರವಾಗುವ ‘ಪೋರ್ಟರ್‌’ (Porter)  ಸ್ಟಾರ್ಟ್‌ಅಪ್‌ ಸ್ಥಾಪಿಸಿ ಯಶಸ್ಸಿನ ಹಾದಿಯಲ್ಲಿ ಸಾಗಿದ್ದಾರೆ.

ಆರಂಭದಲ್ಲಿ ಮುಂಬೈನಲ್ಲಿ ಸ್ಥಾಪನೆಗೊಂಡು ನಂತರ ಬೆಂಗಳೂರಿನಿಂದಲೇ  ತನ್ನೆಲ್ಲ ವಹಿವಾಟು ನಿರ್ವಹಿಸುತ್ತಿರುವ  ಈ ಸ್ಟಾರ್ಟ್‌ಅಪ್‌,  ದೇಶದಲ್ಲಿ ಸರಕು ಸಾಗಣೆ ವಹಿವಾಟಿನಲ್ಲಿ ತೊಡಗಿಕೊಂಡಿರುವ ಇತರ ಸಂಸ್ಥೆಗಳಿಗೆ ಹೋಲಿಸಿದರೆ   ತುಂಬ ಭಿನ್ನವಾಗಿ ನಿಲ್ಲುತ್ತದೆ. 

ಇತರ ಸಂಸ್ಥೆಗಳು ಬಹುತೇಕ ಅಸಂಘಟಿತ ರೂಪದಲ್ಲಿ ಕಾರ್ಯನಿರ್ವಹಿಸುತ್ತಿವೆ. ಸರಕು ಸಾಗಣೆಗೆ ನೆರವಾಗುವ  ಸಂಘಟಿತ ರೂಪದ  ಆನ್‌ಲೈನ್‌ ತಾಣ ಇದಾಗಿದೆ.ಮೊಬೈಲ್‌  ಆ್ಯಪ್‌ ನೆರವಿನಿಂದ ಸರಕು ಸಾಗಣೆಯನ್ನು  ಸುಲಭವಾಗಿ ನಿರ್ವಹಿಸುತ್ತಿದೆ. ವಹಿವಾಟಿನ ಸ್ವರೂಪ ಪ್ರಮಾಣ, ಗಾತ್ರದ ವಿಷಯದಲ್ಲಿಯೂ ಇದು ಅತಿದೊಡ್ಡ ಸಂಸ್ಥೆಯಾಗಿದೆ.

‘ದೇಶದಲ್ಲಿ ಸರಕು ಸಾಗಣೆಯ ಅತಿದೊಡ್ಡ ಮಾರುಕಟ್ಟೆ ಇದೆ. ಅದರೆ, ಸರಕುಗಳ ಸಾಗಣೆ ವಹಿವಾಟಿನಲ್ಲಿ ತಂತ್ರಜ್ಞಾನ  ಬಳಕೆ  ತುಂಬ ಕಡಿಮೆ ಪ್ರಮಾಣದಲ್ಲಿ ಇದೆ. ಅದಕ್ಕೆ ಕೊನೆಯ ಸ್ಥಾನ ನೀಡಿ ನಿರ್ಲಕ್ಷಿಸಲಾಗಿದೆ. ಹೀಗಾಗಿ ಈ ವಲಯದಲ್ಲಿ ಅದಕ್ಷತೆಯೇ ಹೆಚ್ಚಾಗಿ ತಾಂಡವವಾಡುತ್ತಿದೆ. ಪೋರ್ಟರ್‌ ಈ  ಸಮಸ್ಯೆಗೆ ಪರಿಹಾರ ಕಂಡುಕೊಂಡಿದೆ’ ಎಂದು ಐಐಟಿ ಖರಗ್‌ಪುರದಲ್ಲಿ ಅರ್ಥಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಸಂಸ್ಥೆಯ ಸಿಇಒ ಪ್ರಣವ್‌ ಗೋಯೆಲ್‌ ಹೇಳುತ್ತಾರೆ.

ಸರಕು ಸಾಗಣೆ ವಿಷಯದಲ್ಲಿ  ಅನೇಕ ಸಮಸ್ಯೆಗಳು ಎದುರಾಗುತ್ತವೆ. ವಾಹನಕ್ಕೆ ಸರಕು ಭರ್ತಿ ಮಾಡುವ ಮತ್ತು ಪೂರೈಕೆ ಮಾಡಿದ ಸ್ಥಳದಲ್ಲಿ ಸರಕು ಇಳಿಸುವ  ಸಂದರ್ಭಗಳಲ್ಲಿ ವಾಹನದ ಚಾಲಕ ಹೆಚ್ಚು ಸಮಯ  ಕಳೆಯುವುದು, ಸರಕು ಇಳಿಸಿದ ನಂತರ ಮರಳಿ ಹೋಗುವಾಗ ಖಾಲಿ ಹೋಗುವುದು, ಹೇಳಿದ ಸಮಯಕ್ಕೆ ವಾಹನ ತಲುಪದಿರುವುದು ಮತ್ತಿತರ ಸಮಸ್ಯೆಗಳು ಈ ವಹಿವಾಟು ದಕ್ಷ ರೀತಿಯಲ್ಲಿ ಕಾರ್ಯನಿರ್ವಹಿಸಲು ಅಡ್ಡಿಯಾಗಿದೆ. ಅನೇಕ ಕಾರಣಗಳಿಗೆ ಈ ವಹಿವಾಟಿನಲ್ಲಿ ಸಮಯ ಪಾಲನೆ ಆಗುತ್ತಿಲ್ಲ.  ಈ ಚಾಲಕರು ವೃತ್ತಿಪರತೆಯನ್ನೂ ಅಳವಡಿಸಿಕೊಂಡಿರದ ಕಾರಣಕ್ಕೆ ಅವರು ಗರಿಷ್ಠ ಪ್ರಮಾಣದಲ್ಲಿ  ದಿನದ ದುಡಿಮೆಗಳಿಸಲೂ ಸಾಧ್ಯವಾಗುತ್ತಿಲ್ಲ.

‘ಪೋರ್ಟರ್’ ಆ್ಯಪ್‌ ಮೂಲಕ ಸರಕು ಸಾಗಿಸಲು ಮುಂದಾದರೆ 15 ನಿಮಿಷದಲ್ಲಿ ವಾಹನ  ಬಂದು ನಿಲ್ಲುತ್ತದೆ. ಸರಕು ಭರ್ತಿ ಮತ್ತು ಇಳಿಸುವ ಕಾರ್ಯ ಮೂರುವರೆ ಗಂಟೆಗಳ ಬದಲಿಗೆ ಎರಡು ಗಂಟೆಗಳಲ್ಲಿ ಪೂರ್ಣಗೊಳ್ಳಲಿದೆ. ಮರಳಿ ಹೋಗುವಾಗ ವಾಹನ ಖಾಲಿ ಹೋಗದಂತೆ ಎಚ್ಚರ ವಹಿಸಲಾಗುವುದು.    ಇದರಿಂದ ಚಾಲಕರಿಗೆ ಹೆಚ್ಚಿನ ಪ್ರಯೋಜನ ದೊರೆಯಲಿದೆ’ ಎಂದು ಗೋಯೆಲ್‌ ಹೇಳುತ್ತಾರೆ.

ಬೆಂಗಳೂರು ಸೇರಿದಂತೆ ದೇಶದ ಐದು ಮಹಾನಗರಗಳಲ್ಲಿ ಈ ‘ಸ್ಟಾರ್ಟ್‌ಅಪ್‌’ ವಹಿವಾಟು ನಡೆಸುತ್ತಿದೆ. 2014ರ ಆಗಸ್ಟ್ ತಿಂಗಳಿನಲ್ಲಿ  ಮುಂಬೈನಲ್ಲಿ ಅಸ್ತಿತ್ವಕ್ಕೆ ಬಂದ ಪೋರ್ಟರ್‌, ಒಂದು ವರ್ಷದ ಹಿಂದೆ ಬೆಂಗಳೂರಿನಲ್ಲಿ  ತನ್ನ ಪ್ರಧಾನ ಕಚೇರಿ ಆರಂಭಿಸಿದೆ. ದಕ್ಷಿಣ ಭಾರತದಲ್ಲಿ ತಂತ್ರಜ್ಞಾನ ಅಳವಡಿಕೆ ಪ್ರವೃತ್ತಿ ಹೆಚ್ಚಿಗೆ ಇರುವುದರಿಂದ  ಮತ್ತು ಈ ಭಾಗದಲ್ಲಿ ವಹಿವಾಟು  ಹೆಚ್ಚಿಸುವ ಉದ್ದೇಶದಿಂದ 2015ರಲ್ಲಿ ಪ್ರಧಾನ ಕಚೇರಿಯನ್ನು ಮುಂಬೈನಿಂದ ಬೆಂಗಳೂರಿಗೆ ಸ್ಥಳಾಂತರಿಸಲಾಗಿದೆ.

ಚಾಲಕರು ಈ ಮೊದಲು ದಿನಕ್ಕೆ ಒಂದು ಅಥವಾ ಎರಡು ಬಾರಿ ಸರಕು ಸಾಗಿಸುತ್ತಿದ್ದರೆ, ‘ಪೋರ್ಟರ್‌’ ನೆರವಿನಿಂದ ದಿನದಲ್ಲಿ ಮೂರಕ್ಕಿಂತ ಹೆಚ್ಚು ಬಾರಿ ಸರಕುಗಳನ್ನು ಸಾಗಿಸಲು ಸಾಧ್ಯವಾಗುತ್ತಿದೆ.  ಸರಕು ಸಾಗಿಸಲು ಚಾಲಕರು ಇನ್ನು ಮುಂದೆ ಹೆಚ್ಚು ಸಮಯ ಕಾಯಬೇಕಾಗಿಲ್ಲ.  ಲಘು ವಾಹನ ಚಾಲಕರು ‘ಪೋರ್ಟರ್‌’ ಸಂಸ್ಥೆ ಜತೆ ಕೆಲಸ ಮಾಡಲು ಮುಂದೆ ಬಂದರೆ ಅವರ ತಿಂಗಳ ಆದಾಯವೂ ಹೆಚ್ಚಲಿದೆ. ಕಾಯುವಿಕೆಯಲ್ಲಿಯೇ ದಿನ ಕಳೆದು ಹೋಗುತ್ತಿದ್ದರಿಂದ ದಿನದ ಗಳಿಕೆಯೂ ಖೋತಾ ಆಗುತ್ತಿತ್ತು.ಆದಾಯ ಗಳಿಕೆಯಲ್ಲಿ ಸ್ಥಿರತೆ ಇದ್ದಿರಲಿಲ್ಲ. ಹೀಗಾಗಿ ವಾಹನ ಖರೀದಿ ಸಾಲದ ಕಂತನ್ನು ಸಕಾಲಕ್ಕೆ  ಪಾವತಿಸಲು ಸಾಧ್ಯವಾಗುತ್ತಿರಲಿಲ್ಲ.

ಸರಕು ಸಾಗಿಸುವ  ಗ್ರಾಹಕರು ಪಾವತಿಸುವ ಮೊತ್ತದ ಶೇ 20ರಷ್ಟು ಕಮಿಷನ್‌ ಪೋರ್ಟರ್‌ ಸಂಸ್ಥೆಗೆ ಪಾವತಿಯಾಗುತ್ತದೆ. ಇದು ಈ ಸ್ಟಾರ್ಟ್‌ಅಪ್‌ನ ವರಮಾನದ ಮೂಲವಾಗಿದೆ. ವಾಹನ ತಯಾರಿಕೆ, ಸಾಲ ನೀಡುವ  ಹಣಕಾಸು ಸಂಸ್ಥೆಗಳು, ವಾಹನದ ವಾರ್ಷಿಕ ನಿರ್ವಹಣೆಯ  ಸಂಸ್ಥೆಗಳ ಜತೆ   ‘ಪೋರ್ಟರ್‌’ ಒಪ್ಪಂದ ಮಾಡಿಕೊಂಡಿರುವುದರಿಂದ ರಿಯಾಯ್ತಿ ದರದ ಸೇವೆ, ಸೌಲಭ್ಯಗಳೂ ಚಾಲಕರಿಗೆ  ದೊರೆಯಲಿವೆ.

‘ದಿನದ ಸಾಗಾಣಿಕೆ ಹೆಚ್ಚಳ ಮತ್ತು  ನಿರ್ವಹಣೆಯ ವೆಚ್ಚ ಕಡಿತ– ಹೀಗೆ ಎರಡು ಬಗೆಗಳಲ್ಲಿ ಚಾಲಕರಿಗೆ ಪ್ರಯೋಜನ ಲಭಿಸಲಿದೆ. ಪ್ರತಿ ತಿಂಗಳೂ ₹ 3000 ರಿಂದ ₹ 3,500ರವರೆಗೆ ಹೆಚ್ಚುವರಿ ಆದಾಯ ಗಳಿಸಲಿದ್ದಾರೆ’ ಎಂದು ಗೋಯೆಲ್‌ ಹೇಳುತ್ತಾರೆ. ‘ಆ್ಯಪ್‌ ಬಳಕೆ ಬಗ್ಗೆ ಚಾಲಕರಿಗೆ ತರಬೇತಿ  ನೀಡಲಾಗುವುದು. ಚಾಲಕರಿಗೆ ಕನಿಷ್ಠ ವಿದ್ಯಾರ್ಹತೆ ಬೇಕಾಗಿಲ್ಲ. ಸ್ಥಳೀಯ ಭಾಷೆಯಲ್ಲಿಯೂ ಆ್ಯಪ್‌ ಅಭಿವೃದ್ಧಿಪಡಿಸಿರುವುದರಿಂದ  ಸ್ಮಾರ್ಟ್‌ಫೋನ್‌ ಆಧಾರಿತ ಆ್ಯಪ್‌ ಬಳಸುವಲ್ಲಿ ಚಾಲಕರಿಗೆ ಯಾವುದೇ ಸಮಸ್ಯೆ ಎದುರಾಗುವುದಿಲ್ಲ.

ಆ್ಯಪ್‌ ನೆರವಿನಿಂದ  ಕೆಲವೇ ಸೆಕೆಂಡುಗಳಲ್ಲಿ  ಸರಕು ಸಾಗಣೆ ವಿವರಗಳೆಲ್ಲ ಬೆರಳ ತುದಿಯಲ್ಲಿ ಲಭ್ಯ ಇರಲಿದೆ. ವಾಹನದ ಚಲನವಲನದ ಮೇಲೆ ನಿಗಾ ಇರಿಸಲೂ ಸಾಧ್ಯ ಇದೆ. ಸರಕು ಸಾಗಿಸುವ ಗ್ರಾಹಕರಿಗೂ ಉಳಿತಾಯವಾಗಲಿದೆ.₹  1,000 ವೆಚ್ಚ ಮಾಡುವ ಬದಲಿಗೆ ₹ 800  ವೆಚ್ಚ ಮಾಡಬಹುದಾಗಿದೆ. 

‘ಕಿರಾಣಿ ಅಂಗಡಿಗಳು, ಪೀಠೋಪಕರಣ, ವಿದ್ಯುನ್ಮಾನ ಸರಕು ಮಾರಾಟ ಮಳಿಗೆಗಳು, ತ್ವರಿತವಾಗಿ ಬಿಕರಿಯಾಗುವ ಗ್ರಾಹಕ ಉತ್ಪನ್ನಗಳು (ಎಫ್‌ಎಂಸಿಜಿ), ದಿನಸಿ ಅಂಗಡಿಗಳು ಮತ್ತು ಇ–ಕಾಮರ್ಸ್ ಸಂಸ್ಥೆಗಳಿಗೂ ‘ಪೋರ್ಟರ್‌’ ಸೇವೆ ತುಂಬ ಉಪಯುಕ್ತವಾಗಿದೆ’ ಎಂದು ಗೋಯೆಲ್‌ ಹೇಳುತ್ತಾರೆ.

‘ಗೋದ್ರೇಜ್‌, ರಿಲಯನ್ಸ್‌, ಐಟಿಸಿ, ಅರ್ಬನ್‌  ಲ್ಯಾಡರ್‌, ಅರಾಮೆಕ್ಸ್‌  ಮತ್ತಿತರ ಸಂಸ್ಥೆಗಳು ‘ಪೋರ್ಟರ್‌’ ಸೇವೆ  ಯ ಪ್ರಯೋಜನ ಪಡೆದುಕೊಳ್ಳುತ್ತಿವೆ.  ಇಂತಹ ಉದ್ಯಮ ಗ್ರಾಹಕರಿಗೆ ಬಾಡಿಗೆಯಲ್ಲಿ ರಿಯಾಯ್ತಿ ನೀಡಲಾಗುವುದು. ‘ಚಾಲಕರ ಪ್ರತಿಭಾನ್ವಿತ ಮಕ್ಕಳಿಗೆ   ವಿದ್ಯಾರ್ಥಿ ವೇತನ ಮತ್ತು  ಲ್ಯಾಪ್‌ಟಾಪ್‌ ವಿತರಿಸಿ ಉತ್ತೇಜಿಸಲಾಗುತ್ತಿದೆ’ ಎಂದು ಗೋಯೆಲ್‌ ಹೇಳುತ್ತಾರೆ.

ಮೂವರು ಸಹ ಸ್ಥಾಪಕರು ಆರಂಭದಲ್ಲಿ ತಮ್ಮ ಬಳಿ ಇದ್ದ ಹಣ ಹೂಡಿಕೆ ಮಾಡಿದ್ದರು. ಇದುವರೆಗೆ ₹ 39 ಕೋಟಿಗಳಷ್ಟು ಬಂಡವಾಳವನ್ನು ಈ ನವೋದ್ಯಮದಲ್ಲಿ ತೊಡಗಿಸಲಾಗಿದೆ. ಲಘು ವಾಹನಗಳ ಮೇಲೆ ಜಾಹೀರಾತು ಪ್ರಕಟಿಸುವುದರ ಮೂಲಕವೂ ವರಮಾನ ಗಳಿಸಲಾಗುತ್ತಿದೆ. ಟೆಂಪೊ ಸ್ಟ್ಯಾಂಡ್‌ ಹತ್ತಿರ ಹೋಗಿ ಚಾಲಕರನ್ನು ಒಟ್ಟುಗೂಡಿಸಿ ಅವರಿಗೆ ಈ ‘ಸ್ಟಾರ್ಟ್‌ಅಪ್‌’ನ ಬಗ್ಗೆ ಮಾಹಿತಿ ನೀಡಿ ಅವರನ್ನು ಸೇರ್ಪಡೆ ಮಾಡಿಕೊಳ್ಳಲಾಗುತ್ತಿದೆ.

ನಂತರದ ದಿನಗಳಲ್ಲಿ ಈ ಆಯ್ದ ಚಾಲಕರೇ ಈ ವಹಿವಾಟಿನ  ಪ್ರಚಾರ ರಾಯಭಾರಿ ಆಗಲಿದ್ದಾರೆ. ಸರಕು ಸಾಗಣೆ ವಿಷಯದಲ್ಲಿ ಗ್ರಾಹಕರಿಗೆ  ಪರಿಣಾಮಕಾರಿಯಾದ ಮತ್ತು ದಕ್ಷ ಸೇವೆ ಒದಗಿಸುವುದು ಮತ್ತು ಚಾಲಕರಿಗೆ ಹಲವಾರು ಮೌಲ್ಯವರ್ಧಿತ  ಸೌಲಭ್ಯಗಳನ್ನು ಒದಗಿಸುತ್ತಿರುವ ‘ಪೋರ್ಟರ್‌’ ಲಾಭದ ಹಾದಿಯಲ್ಲಿ ಮುನ್ನಡೆದಿದೆ. 

ಮುಂಚೂಣಿಯಲ್ಲಿ...
ಮಹಾನಗರಗಳಲ್ಲಿನ ಸಣ್ಣ ಕೈಗಾರಿಕಾ ಘಟಕಗಳು ಮತ್ತು ಸಣ್ಣ – ಪುಟ್ಟ ವ್ಯಾಪಾರಿಗಳು ನಗರದ ಒಂದು ಕಡೆಯಿಂದ ಉತ್ಪನ್ನಗಳನ್ನು ಸಾಗಿಸಲು  ತಂತ್ರಜ್ಞಾನ ಆಧಾರಿತ ಸೇವೆ ಒದಗಿಸುವಲ್ಲಿ  ‘ಪೋರ್ಟರ್‌’ ಮುಂಚೂಣಿಯಲ್ಲಿ ಇದೆ.

ತಂತ್ರಜ್ಞಾನದ ನೆರವಿನಿಂದ ಸರಕು ಸಾಗಣೆಯ ಲಘು ವಾಹನಗಳ ಚಾಲಕರ ದಿನದ ಗಳಿಕೆ ಹೆಚ್ಚಿಸಲು, ವಾಹನದ ಸಾಗಣೆ ಸಾಮರ್ಥ್ಯದ ಸದ್ಭಳಕೆ  ಮಾಡಿಕೊಳ್ಳಲು   ನೆರವಾಗುತ್ತಿದೆ. ಮೊಬೈಲ್‌ ತಂತ್ರಜ್ಞಾನದ ನೆರವಿನಿಂದ ‘ಪೋರ್ಟರ್‌’, ಸರಕು ಸಾಗಣೆ ವಹಿವಾಟಿನಲ್ಲಿ ಪಾರದರ್ಶಕತೆಯನ್ನು ಕಾರ್ಯರೂಪಕ್ಕೆ ತಂದಿದೆ. ಬಸ್‌ ಪ್ರಯಾಣದ ಮುಂಗಡ ಟಿಕೆಟ್‌ ಕಾಯ್ದಿರಿಸಲು ಸ್ಮಾರ್ಟ್‌ಫೋನ್‌ ಬಳಕೆಯಾಗುವ ರೀತಿಯಲ್ಲಿಯೇ ಸರಕು ಸಾಗಣೆ ನಿರ್ವಹಿಸುವ ವಿಶಿಷ್ಟ ಸ್ಟಾರ್ಟ್‌ಅಪ್  ಇದಾಗಿದೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT