ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಮ್ಮ ಕೋಪದ ಉರಿಗೆ ನಾವೇ ಇಂಧನ

Last Updated 18 ಅಕ್ಟೋಬರ್ 2016, 19:30 IST
ಅಕ್ಷರ ಗಾತ್ರ

‘ಕ್ರೋಧ’ -  ಎಂದರೆ ಕೋಪ – ಜೀವಿಯ ಸಹಜ ಸ್ವಭಾವವಲ್ಲ; ಅದೊಂದು ವಿಭಾವ ಭಾವ, ವಿಕೃತ ಭಾವ ಅಥವಾ ವಿಪರೀತ ಭಾವ. ಆದ್ದರಿಂದ ಕೋಪದಲ್ಲಿ ಒಳ್ಳೆಯ ಕೋಪ ಮತ್ತು ಕೆಟ್ಟ ಕೋಪ ಎಂಬ ಎರಡು ಭೇದಗಳಿಲ್ಲ. ಪ್ರಪಂಚದಲ್ಲಿ ಯಾವುದೇ ರೀತಿಯ ಕೋಪವಾಗಿದ್ದರೂ ಅದು ಮಾನವನಿಗೆ ಅಹಿತವನ್ನೇ ಮಾಡುತ್ತದೆ.

ಕಟ್ಟುನಿಟ್ಟಾದ ಶಿಸ್ತನ್ನು ಕಾಪಾಡಲು, ನಮ್ಮನ್ನು ನಾವು ರಕ್ಷಿಸಿಕೊಳ್ಳಲು ಕ್ರೋಧ ಬೇಕೆ ಬೇಕು ಎಂಬುವುದು ಸಾಮಾನ್ಯ ತಿಳಿವಳಿಕೆಯಾಗಿದೆ. ಇದೇ ಕಾರಣದಿಂದ ಈ ಕ್ರೋಧವೆಂಬ ವಿಕಾರ ಭಾವ ನಮ್ಮನ್ನು ಬಿಟ್ಟು ಹೋಗುತ್ತಿಲ್ಲ.

ಸ್ವಲ್ಪ ಸಾತ್ವಿಕ ಕ್ರೋಧವಾದರೂ ಅವಶ್ಯಕ, ಕ್ರೋಧವಿಲ್ಲದೇ ಮನುಷ್ಯ ಬದುಕಲಾರ ಎಂದು ಕೆಲವರು ಹೇಳಬಹುದು. ಆದರೆ ಪ್ರಪಂಚದಲ್ಲಿ ಪ್ರೀತಿಯಿಂದ ಸಾಧ್ಯವಾಗದ ಕೆಲಸ ಯಾವುದೂ ಇಲ್ಲ. ಆದುದರಿಂದ ಪ್ರೀತಿಯಲ್ಲಿ ದೃಢ ವಿಶ್ವಾಸವಿರುವುದು ಅವಶ್ಯಕ.

ಹುಟ್ಟುಗುಣ ಸುಟ್ಟರೂ ಹೋಗುವುದಿಲ್ಲ ಎಂಬ ಮಾತು ಲೋಕದಲ್ಲಿ ಪ್ರಸಿದ್ಧ; ಅಂದರೆ ಸ್ವಭಾವವನ್ನು ಬಿಡುವುದು ಕಷ್ಟ ಅಥವಾ ಅಸಾಧ್ಯ. ಆದರೆ ವಿ–ಭಾವವನ್ನು ಬಿಡುವುದು ಸುಲಭ. ನಾನು ನನ್ನ ಸ್ವಾಮಿತ್ವವನ್ನು ಸ್ಥಾಪಿಸಿರುವ ವಸ್ತುಗಳನ್ನು ಬಿಡುವುದು ಕಷ್ಟಕರವಾಗುತ್ತದೆ; ಪರವಸ್ತುಗಳೆಂದು ಭಾವಿಸಿರುವ ವಸ್ತುಗಳನ್ನು ತ್ಯಜಿಸುವುದು ಹಾಗಿರಲಿ, ಅವುಗಳನ್ನು ಗ್ರಹಿಸಲೂ ಹೋಗುವುದಿಲ್ಲ. ಇದರ ತಾತ್ಪರ್ಯವಿಷ್ಟೆ– ನನ್ನದೆಂಬುದು ನನ್ನನ್ನು ತೊರೆಯುವುದಿಲ್ಲ, ಪರ ಎಂಬುದು ನನ್ನನ್ನು ಸ್ವೀಕರಿಸುವುದಿಲ್ಲ.

ಕ್ರೋಧವೂ ಕೂಡ ಮನುಷ್ಯನ ಸ್ವ–ಭಾವವಲ್ಲ; ಅದು ವಿಕಾರಭಾವ. ಭ್ರಮೆಯಿಂದ ಕ್ರೋಧ ನನ್ನ ಸ್ವಭಾವ ಎಂದು ಮನುಷ್ಯ ತಿಳಿಯುತ್ತಾನೆ. ಹೀಗಾಗಿ ಪ್ರಪಂಚದಲ್ಲಿನ ಪ್ರತಿಯೊಬ್ಬ ವ್ಯಕ್ತಿ ಒಂದಲ್ಲ ಒಂದು ರೀತಿಯಲ್ಲಿ ಕೋಪಕ್ಕೆ ಬಲಿಯಾಗಿದ್ದಾನೆ ಅಥವಾ ಅದರ ದಾಸನಾಗಿದ್ದಾನೆ. ಆಶ್ಚರ್ಯವೇನೆಂದರೆ, ಕೋಪವನ್ನು ಎಲ್ಲರೂ ಬಿಡಲು ಬಯಸುತ್ತಾರೆ. ಆದರೆ ಅದನ್ನು ಬಿಡಲು ಪ್ರಯತ್ನಿಸಿದಷ್ಟೂ ಕೋಪ ಜಾಸ್ತಿಯಾಗಿ, ಅದರಿಂದ ವ್ಯಕ್ತಿ ಬೇಸತ್ತು ಹೋಗಿ, ಕೊನೆಗೆ ‘ಇದೇ ನನ್ನ ಸ್ವಭಾವ’ ಎಂದು ಭಾವಿಸುತ್ತಾನೆ.

ಹೀಗೆ ಮಾನವ ಏನೆಲ್ಲ ಸಾಧನೆ ಮಾಡಿದರೂ ಅವನಿಗೆ ತನ್ನದೇ ವಿಕೃತ ಭಾವನೆಗಳನ್ನು ವಶದಲ್ಲಿಟ್ಟುಕೊಳ್ಳುವುದು ಸಾಧ್ಯವಾಗುತ್ತಿಲ್ಲ. ಜೀವನದಲ್ಲಿ ಒಂದು ಸಲ ತಿರಸ್ಕರಿಸಿದ ವಸ್ತುಗಳು ಮರಳಿ ದೊರೆಯುವುದಿಲ್ಲ ಎಂದು ಹೇಳುತ್ತಾರೆ. ಆದರೆ ಈ ಕೋಪವನ್ನು ಎಷ್ಟೇ ತಿರಸ್ಕರಿಸಿದರೂ ಪದೇ ಪದೇ ನಮ್ಮನ್ನು ಹಿಂಬಾಲಿಸುತ್ತಿರುತ್ತದೆ. ಹಾಗಾದರೆ ವ್ಯಕ್ತಿ ಕ್ರೋಧವನ್ನು ಬಿಡಬೇಕೆಂದು ಬಯಸುತ್ತಿದ್ದರೂ ಅದು ಮತ್ತೆ ಮತ್ತೆ ಅವನನ್ನು ಏಕೆ ಹಿಂಬಾಲಿಸುತ್ತದೆ?

ಎಷ್ಟು ಪ್ರಯತ್ನಪಟ್ಟರೂ ಕ್ರೋಧ ದೂರವಾಗುತ್ತಿಲ್ಲವೆಂದರೆ ನಾವು ಕ್ರೋಧವನ್ನು ಬಿಡಲು ಕೈಗೊಳ್ಳುವ ಉಪಾಯಗಳು ಸರಿಯಿಲ್ಲ ಎಂದಾಯಿತು. ತಿರಸ್ಕಾರವೆಂದರೆ ಒಂದು ವಸ್ತು ಅಥವಾ ಒಬ್ಬ ವ್ಯಕ್ತಿಯನ್ನು ತೆಗಳುವುದು ಅಥವಾ ಧಿಕ್ಕರಿಸುವುದಲ್ಲ; ಅಥವಾ ಆ ವಸ್ತು ಹಾಗೂ ವ್ಯಕ್ತಿಯಿಂದ ದೂರ ಇರುವುದೂ ಅಲ್ಲ.

ತಿರಸ್ಕಾರವೆಂದರೆ ಕೋಪಕ್ಕೆ ಕಾರಣವಾಗುವ ಆ ವಸ್ತು ಅಥವಾ ವ್ಯಕ್ತಿಯನ್ನು ಮನಸ್ಸಿನಿಂದ ಹೊರಹಾಕುವುದು. ಅಂದರೆ ಇನ್ನು ಮುಂದೆ ಎಂದೆಂದಿಗೂ ಅದರ ಬಗ್ಗೆ ಚಿಂತಿಸಬಾರದು; ಅದರ ಬಗ್ಗೆ ಆಲೋಚನೆಗಳೇ ಹುಟ್ಟಬಾರದು. ಅದೇ ನಿಜವಾದ ತಿರಸ್ಕಾರ. ಏಕೆಂದರೆ ವಸ್ತುಗಳನ್ನು ತ್ಯಜಿಸಿದರೂ, ವ್ಯಕ್ತಿಗಳಿಂದ ದೈಹಿಕವಾಗಿ ಎಷ್ಟೇ ದೂರವಿದ್ದರೂ, ಮನಸ್ಸಿನಲ್ಲಿ ಅವು ಇವೆ ಎಂದಾದರೆ ಅವು ನಮ್ಮ ಹತ್ತಿರವೇ ಇವೆ ಎಂದರ್ಥ. ಉದಾಹರಣೆಯೊಂದನ್ನು ನೋಡಬಹುದು.

ಶಾಲೆಯಲ್ಲಿ ಶಿಕ್ಷಕರು ಮಕ್ಕಳ ವಿನೋದಕ್ಕಾಗಿ ‘ಯಾರೂ ಕೋತಿಯ ಬಗ್ಗೆ ಯೋಚಿಸಬೇಡಿ’ ಎಂದು ಹೇಳುತ್ತಾರೆ ಎಂದಿಟ್ಟುಕೊಳ್ಳಿ. ತಕ್ಷಣವೇ ಮಕ್ಕಳ ಮನಸ್ಸಿನಲ್ಲಿ ಕೋತಿಯ ಚಿತ್ರ ಮೂಡಿಬರುತ್ತದೆ! ಇಷ್ಟು  ಹೊತ್ತು ಇರದ ಈ ಯೋಚನೆ ಶಿಕ್ಷಕರು ಅದನ್ನು ಯೋಚಿಸಬೇಡ ಎಂದು ಹೇಳಿದ ತಕ್ಷಣ  ಶುರುವಾಯಿತು. ಏಕೆಂದರೆ ಅಲ್ಲಿಯ ತನಕ ಮಕ್ಕಳ ಮನಸ್ಸಿನಲ್ಲಿ ಕೋತಿ ಇರಲಿಲ್ಲ; ಈಗ ಬುದ್ಧಿ ಅದನ್ನು ಸ್ವೀಕರಿಸಿತು.

ಹೀಗಾಗಿ ಅದರ ವಿಚಾರ–ಚಿಂತನೆಗಳೂ ಪ್ರಾರಂಭವಾದವು. ಇಲ್ಲಿ ನಕಾರಾತ್ಮಕ ಅಥವಾ ಸಕಾರಾತ್ಮಕತೆಯ ಪ್ರಶ್ನೆಯೇ ಇಲ್ಲ. ನಮ್ಮ ಮನಸ್ಸಿನಲ್ಲಿ ಯಾವ ವಸ್ತು ಸ್ಥಾನವನ್ನು ಪಡೆಯುತ್ತದೆಯೋ ಅದಕ್ಕೆ ತಕ್ಕಂತೆ ನಾವು ವರ್ತಿಸುತ್ತೇವೆ. ಈ ರೀತಿ ನಮ್ಮ ಕೋಪ ಅಥವಾ ನಮ್ಮ ವಿಕೃತ ಭಾವಗಳಿಗೆ ನಮ್ಮ ಮನಸ್ಸೇ ಮೂಲ ಕಾರಣವಾಗಿದೆ. ಹೀಗಾಗಿ ನಾವು ಬಾಹ್ಯದಲ್ಲಿ ಕೋಪವನ್ನು ಬಿಡಬೇಕು ಎಂದು ಹೇಳುತ್ತಿರುವಂತೆ ಕಂಡರೂ ಮನಸ್ಸಿನಲ್ಲಿ ಅದಕ್ಕೆ ಮತ್ತಷ್ಟು ಅಧಿಕ ಸ್ಥಾನವನ್ನು ನೀಡುತ್ತಿರುತ್ತೇವೆ; ಆದುದರಿಂದ ಅದು ನಮ್ಮನ್ನು ಪ್ರಚೋದಿಸುತ್ತಲೇ ಇರುತ್ತದೆ. ಕ್ರೋಧವನ್ನು ಬಿಡಬಯಸುವವರು ಮೊದಲು ಅದನ್ನು ಮರೆಯಬೇಕು.

ಲೋಕದಲ್ಲಿ ನಮ್ಮ ಶತ್ರುಗಳಿಗೆ ನಾವು ಕೊಡುವ ಅತಿ ದೊಡ್ಡ ಶಿಕ್ಷೆಯೆಂದರೆ ಅವರನ್ನು ಹೊಡೆಯುವುದು ಅಥವಾ ಅವರಿಗೆ ಹಾನಿಯುಂಟುಮಾಡುವುದಲ್ಲ; ಅದರಿಂದ ಶತ್ರುತ್ವ ಮತ್ತಷ್ಟು ಬೆಳೆಯುತ್ತದೆ. ಬದಲಾಗಿ ಅವರನ್ನು ನಮ್ಮ ಮನಸ್ಸಿನಿಂದ ಹೊರಹಾಕಬೇಕು. ಅಂದರೆ ಅವರನ್ನು ಮರೆತು ಬಿಡುವುದು. ಶತ್ರುವನ್ನೇ ಮರೆತುಹೋದರೆ ಶತ್ರುತ್ವ ಬೆಳೆಯುವುದು ಅಸಾಧ್ಯವಾಗುತ್ತದೆ. ಹೀಗಾಗಿ ಕ್ರೋಧವನ್ನು ಮರೆಯುವುದೇ ಅದಕ್ಕೆ ನೀಡುವ ದೊಡ್ಡ ಶಿಕ್ಷೆ.

ಕ್ರೋಧವನ್ನು ಮರೆಯುತ್ತಿದ್ದಂತೆ ಅದು ನಮ್ಮಿಂದ ಬೇಸತ್ತು, ಅದಕ್ಕಿಲ್ಲಿ ಬೆಲೆಯೇ ಸಿಗುತ್ತಿಲ್ಲವೆಂದು ಗೊತ್ತಾಗಿ, ಪುನಃ ಅದು ನಮ್ಮತ್ತ ಮರಳಿ ಬರದಂತೆ ಹೊರಟುಹೋಗುತ್ತದೆ.ಈಗ ಮುಖ್ಯ ಪ್ರಶ್ನೆ – ಕ್ರೋಧವನ್ನು ಹೇಗೆ ಮರೆಯುವುದು?  ಇಷ್ಟೆಲ್ಲ ಚರ್ಚೆ ಮಾಡಿದ ಮೇಲೆಯೂ ಈ ಪ್ರಶ್ನೆ ಉದ್ಭವವಾಯಿತು ಎಂದಾದರೆ, ನಾವು ಮರಳಿ ಅದೇ ಹಳೆಯ ಟ್ರ್ಯಾಕ್‌ನಲ್ಲಿ ನಡೆಯುತ್ತಿದ್ದೇವೆ ಎಂದರ್ಥ.

ಏಕೆಂದರೆ ಕ್ರೋಧವನ್ನು ಮರೆಯುವ ಉದ್ದೇಶವೂ ಕೂಡ ನಮ್ಮದಾಗಿರಬಾರದು. ಅದನ್ನು ಮರೆಯುವ ಉದ್ದೇಶ ನಮ್ಮದಾದರೆ ಅದು ಪುನಃ ಬಲಿಷ್ಠವಾಗುತ್ತದೆಯೇ ಹೊರತು ದೂರವಾಗುವುದಿಲ್ಲ. ಹಾಗಾದರೆ ಏನು ಮಾಡುವುದು? ಏನೂ ಮಾಡಬೇಕಾಗಿಲ್ಲ. ದಾರಿಯಲ್ಲಿ ಹೋಗುವಾಗ ಅನೇಕ ಸುಂದರ ಮತ್ತು ಅಸುಂದರ ವಸ್ತುಗಳನ್ನು ನೋಡುತ್ತೇವೆ.

ಆ ಸಮಯದಲ್ಲಿ ಆ ವಸ್ತುಗಳು ಮನಸ್ಸಿಗೆ ಮುದವನ್ನು ಅಥವಾ ಬೇಸರವನ್ನು ಉಂಟುಮಾಡುತ್ತವೆ. ಆದರೆ ನಮ್ಮ ಮನೆಯನ್ನು ತಲುಪುತ್ತಿದ್ದಂತೆಯೇ ಅವೆಲ್ಲವೂ ಮರೆತು ಹೋಗುತ್ತವೆ. ಏಕೆಂದರೆ ಅವು ಪರವಸ್ತುಗಳು. ಅದೇ ರೀತಿ ಕ್ರೋಧವನ್ನು ಬಿಡಬಯಸುವವರು ಮೊದಲು ಕ್ರೋಧ ನನ್ನದಲ್ಲ ಅಥವಾ ನಾನು ಕ್ರೋಧ ಮಾಡುವುದಿಲ್ಲ, ಅದು ನನ್ನ ಸ್ವಭಾವವೇ ಅಲ್ಲ; ನನ್ನ ಸ್ವಭಾವ ಶುದ್ಧ ಸ್ವಭಾವವಾಗಿದೆ – ಎಂಬುದನ್ನು ನಿರ್ಧರಿಸಬೇಕು.

ಕ್ರೋಧ ನಮ್ಮ ಸ್ವಭಾವವಲ್ಲ ಎಂಬ ವಿಚಾರ ದೃಢವಾಗುತ್ತಿದ್ದಂತೆ ಕ್ರೋಧ ನಮ್ಮಿಂದ ದೂರ ಹೋಗಲು ಪ್ರಾರಂಭಿಸುತ್ತದೆ. ಇಷ್ಟವಾದ ಧಾರಾವಾಹಿಯನ್ನು ನೋಡುವಾಗ, ಕ್ರಿಕೆಟ್ ಮ್ಯಾಚ್ ನೋಡುವಾಗ ಅಥವಾ ಮಗುವಿನೊಂದಿಗೆ ಆಟ ಆಡುತ್ತಿರುವಾಗ ನಮ್ಮನ್ನು ಯಾರು ಎಷ್ಟೇ ಕೂಗಿದರೂ ಕೇಳಿಸುವುದಿಲ್ಲ.

ಕೂಗಿದ್ದೂ ನಿಜವಾಗಿರಬಹುದು; ಆದರೆ ನಮ್ಮ ಮನಸ್ಸಿನಲ್ಲಿ ಅದು ಪ್ರವೇಶ ಪಡೆಯುವುದಿಲ್ಲ. ಏಕೆಂದರೆ ನಾವು ಆ ಕೂಗಿಗಿಂತಲೂ ಹೆಚ್ಚು ಆಸಕ್ತಿಯುಳ್ಳ  ವಿಷಯದಲ್ಲಿ ತಲ್ಲೀನನಾಗಿರುತ್ತೇವೆ. ಇದೇ ರೀತಿ ನಮ್ಮ ಸ್ವಭಾವದಲ್ಲಿಯೇ ನಾವು ಆಸಕ್ತರಾದರೆ ಕ್ರೋಧ ನಮ್ಮ ಒಳಗೆ ಪ್ರವೇಶಿಸುವುದಿಲ್ಲ.

ಇಷ್ಟಾದರೂ ಕ್ರೋಧವನ್ನು ಬಿಡಲು ನಮಗೇನಾದರೂ ಮಾಡಲೇ ಬೇಕು ಎನ್ನಿಸಿದರೆ, ನಮ್ಮ ಕ್ರೋಧಕ್ಕೆ ಬಲಿಯಾಗುವ ನಮ್ಮ ಜೀವನದ ಕೆಲವು ವಸ್ತು, ವ್ಯಕ್ತಿ, ಘಟನೆ, ಸಂದರ್ಭಗಳನ್ನು ಗ್ರಹಿಸಿ. ಅನಂತರ ಆ ಘಟನೆಗಳನ್ನು ನಿಷ್ಪಕ್ಷವಾಗಿ ವಿಶ್ಲೇಷಿಸಬೇಕು.

ಕ್ರೋಧವನ್ನು ಉತ್ಪಾದಿಸುವ ಪ್ರತಿಯೊಂದು ಸಂದರ್ಭದಲ್ಲೂ ನಮ್ಮದೇ ತಪ್ಪುಗಳು ಕಂಡರೆ ಆಗ ನಾವು ಕುಪಿತರಾಗುವುದು ಸಾಧ್ಯವೇ ಇಲ್ಲ. ಪ್ರತಿಯೊಬ್ಬ ವ್ಯಕ್ತಿಯ ಸಮಸ್ಯೆ ಏನೆಂದರೆ ಅವನು ಇಡಿಯ ಜಗತ್ತು ತನಗೆ ಅನುಕೂಲವಾಗಿ ಪರಿಣಮಿಸಬೇಕೆಂದು ಬಯಸುತ್ತಾನೆ.

ಮನೆಯ ಯಜಮಾನನಿಗೆ ಹೆಂಡತಿ, ಮಕ್ಕಳು ಅವನ ಮಾತನ್ನೇ ಕೇಳಬೇಕು, ಶಿಕ್ಷಕನಿಗೆ ಮಕ್ಕಳು ತಾನು ಹೇಳಿದಂತೆಯೇ  ಕೇಳಬೇಕು, ಸಂಸ್ಥೆಯ ಮಾಲೀಕನಿಗೆ ನೌಕರರು ಅವನು ಊಹಿಸಿದಂತೆಯೇ ನಡೆದುಕೊಳ್ಳಬೇಕು – ಹೀಗೆ ಎಲ್ಲರೂ ಜಗತ್ತು ಅವರಿಷ್ಟದಂತೆ ಇರಬೇಕು ಎಂದು ಬಯಸುತ್ತಿರುತ್ತಾರೆ. ಆದರೆ ಪ್ರಕೃತಿಯ ಒಂದೊಂದು ಅಣುವೂ ಸ್ವತಂತ್ರವಾಗಿದೆ. 

ಪ್ರಪಂಚದಲ್ಲಿ ಕೆಲವು ವಸ್ತು/ವ್ಯಕ್ತಿ/ಘಟನೆಗಳು ನಮ್ಮ ನಿರೀಕ್ಷೆಯಂತೆ ಕಂಡುಬಂದರೂ ಪ್ರತಿಯೊಂದು ವಾಸ್ತವವಾಗಿ ವಸ್ತು/ವ್ಯಕ್ತಿ/ಘಟನೆಗಳು ಸ್ವತಂತ್ರವಾಗಿಯೇ ವರ್ತಿಸುತ್ತಿರುತ್ತವೆ. ಹೀಗಿದ್ದರೂ ನಮ್ಮ ಅನುಕೂಲ/ನಿರೀಕ್ಷೆಗಳಿಗೆ ತಕ್ಕಂತೆ ಜಗತ್ತು ಬದಲಾಗದಿದ್ದರೆ ನಮಗೆ ಕೋಪ ಬರುತ್ತದೆ. ಆದರೆ ಯಾವ ವಸ್ತುವೂ ನಮ್ಮ ನಿರೀಕ್ಷೆಯಂತೆ ಪರಿಣಮಿಸುವುದಿಲ್ಲವೆಂಬ ವಾಸ್ತವ ತಿಳಿದರೆ ಕ್ರೋಧದ ಪ್ರಶ್ನೆಯೇ ಬರುವುದಿಲ್ಲ. ಹೀಗೆ ಎಲ್ಲ ರೀತಿಯ ಕ್ರೋಧಗಳಿಗೆ ಮೂಲ ಕಾರಣ ನಮ್ಮ ಮನಸ್ಸು/ಆಲೋಚನೆಗಳೇ ಆಗಿರುತ್ತವೆ. ಹೀಗಾಗಿ ನಮ್ಮ ವಿಚಾರಗಳನ್ನು ಸರಿಪಡಿಸಿಕೊಳ್ಳುವುದೇ ಕ್ರೋಧದಿಂದ ಬಿಡುಗಡೆಯಾಗುವ ಉಪಾಯ.

ಅಂತೆಯೇ ವ್ಯರ್ಥವಾಗಿ ನಾವೆಷ್ಟೇ ಕೋಪ ಮಾಡಿಕೊಂಡರೂ ಪ್ರಪಂಚದಲ್ಲಿ ಯಾವ ವಸ್ತು ಅಥವಾ ವ್ಯಕ್ತಿ ನಮ್ಮ ಕೋಪದ ಕಾರಣದಿಂದ ಬದಲಾಗುವುದಿಲ್ಲ. ಆದ ಕಾರಣ ವ್ಯರ್ಥವಾಗಿ ಕ್ರೋಧಿತರಾಗಿ ನಮಗೆ ನಾವೇ ಹಾನಿಯನ್ನು ಮಾಡಿಕೊಳ್ಳುವುದಕ್ಕಿಂತ ನಡೆಯುತ್ತಿರುವ ಘಟನೆ, ಸಂದರ್ಭಗಳನ್ನು ಇದ್ದಂತೆಯೇ ಸ್ವೀಕರಿಸಿದರೆ ಕ್ರೋಧ ದೂರವಾಗಿ, ಜೀವನ ಪರಮಸುಖಮಯವಾಗುತ್ತದೆ.

ಕ್ರೋಧ ನಮ್ಮಿಂದ ದೂರವಾಗಬೇಕಾದರೆ ವ್ಯಕ್ತಿ/ವಸ್ತು/ಘಟನೆಗಳನ್ನು ಅವುಗಳ ಸ್ವಭಾವದ ದೃಷ್ಟಿಯಿಂದ ನೋಡಬೇಕಾಗುತ್ತದೆ. ಅಗ್ನಿಯ ಸ್ವಭಾವ ಉಷ್ಣ; ನೀರಿನ ಸ್ವಭಾವ ಹರಿಯುವುದು. ಇದನ್ನು ತಿಳಿದು ಅವುಗಳ ಸ್ವಭಾವಕ್ಕೆ ತಕ್ಕಂತೆ ನಮ್ಮ ಜ್ಞಾನವನ್ನು ಸರಿಪಡಿಸಿಕೊಂಡು ವರ್ತಿಸಬೇಕಾಗುತ್ತದೆ. ಬದಲಾಗಿ ಅಗ್ನಿ ಏಕೆ ಸುಡುತ್ತದೆ, ನೀರು ಏಕೆ ಹರಿಯುತ್ತದೆ – ಎಂಬ ಪ್ರಶ್ನೆಯನ್ನು ಕೇಳಿದರೆ ಕ್ರೋಧದ ಉತ್ಪತ್ತಿಯಾಗುತ್ತದೆ. ಏಕೆಂದರೆ ಪ್ರಕೃತಿಯ ಸ್ವಭಾವವನ್ನು ಬದಲಾಯಿಸಲು ಯಾರಿಂದಲೂ ಸಾಧ್ಯವಿಲ್ಲ.

ಈ ರೀತಿಯಾದ ದೃಷ್ಟಿಯನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಂಡರೆ ಲೋಕದಲ್ಲಿ ಯಾವ ವಸ್ತುವೂ ಒಳ್ಳೆಯದು ಅಥವಾ ಕೆಟ್ಟದು ಎಂದು ಅನಿಸುವುದಿಲ್ಲ; ಆಗ ಪ್ರೀತಿ ಮತ್ತು ದ್ವೇಷ ಎರಡೂ ಪ್ರಕಾರದ ಭಾವಗಳ ಹುಟ್ಟು ಕೂಡ ನಡೆಯದು. ಇವೆರಡರ ನಡುವಿನ ದಾರಿ ನಮ್ಮದಾಗುತ್ತದೆ.

ಕೋಪ ಬೇಡ
* ಕೋಪದಿಂದ ಅಹಿತ
* ಕ್ರೋಧ ಮನುಷ್ಯನ ಸ್ವ–ಭಾವವಲ್ಲ
* ಕೋಪದಿಂದ ಎನ್ನುವುದು ವಿಕೃತ ಭಾವ
* ಕೋಪ ದೂರವಾದರೆ ಸುಖ
* ಯಾರ ಸ್ವಭಾವದ ಬದಲಾವಣೆಯೂ ಸುಲಭವಲ್ಲ
* ಕ್ರೋಧವನ್ನು ಮರೆಯಲೇ ಬೇಕೆಂಬ ಹಟ ಬೇಡ
* ಪ್ರೀತಿಯಿಂದ ಸಾಧ್ಯವಾಗದ ಕೆಲಸ ಯಾವುದೂ ಇಲ್ಲ
* ನಮ್ಮ ಮನಸ್ಸೇ ಕೋಪದ ಮೂಲ

  (ಲೇಖಕರು ಉಪನ್ಯಾಸಕರು)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT