ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊಳ್ಳುವ ಸಾಮರ್ಥ್ಯ ಹೆಚ್ಚಿಸುವ ಕ್ರೆಡಿಟ್ ಕಾರ್ಡ್

Last Updated 18 ಅಕ್ಟೋಬರ್ 2016, 19:30 IST
ಅಕ್ಷರ ಗಾತ್ರ

ಬ್ಯಾಂಕಿಂಗ್ ಮತ್ತು ಹಣಕಾಸು ವಲಯದಲ್ಲಿ  ಆಗಿರುವ ತಾಂತ್ರಿಕ ಪ್ರಗತಿಯ ಫಲವಾಗಿ ಕ್ರೆಡಿಟ್‌ ಕಾರ್ಡ್‌ ವ್ಯವಸ್ಥೆ ಜಾರಿಗೆ ಬಂದಿದ್ದು, ಇದರಿಂದ ಗ್ರಾಹಕರ ಖರೀದಿ ಸಾಮರ್ಥ್ಯವೂ ಹೆಚ್ಚಾಗಿದೆ. ಕ್ರೆಡಿಟ್‌ ಕಾರ್ಡ್‌ ವ್ಯವಸ್ಥೆ ಜಾರಿಯಿಂದಾಗಿ  ಆನ್‌ಲೈನ್‌ ಮತ್ತು ದೂರವಾಣಿ ಮೂಲಕವೇ ತಮಗೆ ಬೇಕಾದ ವಸ್ತುಗಳನ್ನು ಖರೀದಿಸಲು ಗ್ರಾಹಕರಿಗೆ ಅನುಕೂಲವಾಗಿದೆ.

ಆನ್‌ಲೈನ್‌ ಮೂಲಕವೇ ಕ್ರೆಡಿಟ್‌ ಕಾರ್ಡ್‌ ಬಳಸಿ ವಸ್ತುಗಳನ್ನು ಖರೀದಿಸುವುದರಿಂದ ಎಟಿಎಂಗಳಿಗೆ ಹುಡುಕಾಡುವುದು ತಪ್ಪುತ್ತದೆ. ಅಲ್ಲದೆ ಎಲ್ಲ ಕಡೆಗೆ ಹಣ ತೆಗೆದುಕೊಂಡು ಹೋಗುವ ಅಗತ್ಯವೂ ಇಲ್ಲ. ಸಮಯದ ಉಳಿತಾಯವೂ ಆಗಲಿದೆ. ಇನ್ನು ದೈಹಿಕ ಶ್ರಮವೂ ಇರುವುದಿಲ್ಲ. ಇದೆಲ್ಲವನ್ನು ಗಮನಿಸಿದರೆ ಕ್ರೆಡಿಟ್‌ ಕಾರ್ಡ್‌ನಿಂದ ಹೆಚ್ಚಿನ ಉಪಯೋಗ ಆಗುತ್ತದೆ.

ಅಮೆರಿಕದ ಖ್ಯಾತ ಅಂಕಣಕಾರ ವಿಲ್‌ ರೋಜರ್‌ ಹೇಳುವ ಪ್ರಕಾರ, ಹಲವರು ವೆಚ್ಚ ಮಾಡುತ್ತಾರೆ. ಆದರೆ ಅವರು ಹಣ ಗಳಿಸುವುದಿಲ್ಲ. ಕೆಲವೊಮ್ಮೆ ವಸ್ತುಗಳ ಅಗತ್ಯ ಇಲ್ಲದಿದ್ದರೂ ಖರೀದಿಸುತ್ತಾರೆ. ಇದರ ಉದ್ದೇಶ ಕೇವಲ ಜನರನ್ನು ಮೆಚ್ಚಿಸುವುದಾಗಿದೆ.

ಸ್ನೇಹಿತರು, ಸಹೋದ್ಯೋಗಿಗಳನ್ನು ಮೆಚ್ಚಿಸಲು ಅಥವಾ ಅವರನ್ನು ಅಸೂಯೆಪಡಿಸಲು ಹಲವರು ದುಬಾರಿ ವೆಚ್ಚದ ಬ್ಯಾಗ್‌, ಫ್ಯಾನ್ಸಿ ವಾರ್ಚ್‌, ವಿಲಾಸಿ ಕಾರು ಇತ್ಯಾದಿಗಳನ್ನು ಖರೀದಿಸುತ್ತಾರೆ. ಇದೆಲ್ಲ ಸಾಧ್ಯವಾಗಿರುವುದು ಕ್ರೆಡಿಟ್‌ ಕಾರ್ಡ್‌ ವ್ಯವಸ್ಥೆಯಿಂದಾಗಿ ಎಂದರೆ ತಪ್ಪಾಗಲಾರದು. ಕೆಲ ದಿನಗಳ ನಂತರ ಈ ವಸ್ತುಗಳನ್ನು ಖರೀದಿಸುವ ಅಗತ್ಯವಿತ್ತೇ ಎಂಬ ಪ್ರಶ್ನೆ ಕೇಳಿ ಬರುವುದು ಸಹಜ ಆದರೆ, ಆಗ ಏನೂ ಮಾಡುವಂತಿಲ್ಲ. ಅಂತಿಮವಾಗಿ ಹಣ ಪಾವತಿಸಲೇಬೇಕಾಗುತ್ತದೆ.

ಕ್ರೆಡಿಟ್‌ ಕಾರ್ಡ್‌ ಮೂಲಕ ಹಣ ಪಾವತಿಸುವಾಗ ಬಿಲ್‌ ಮೊತ್ತ ನೋಡಿ ಕೆಲವೊಮ್ಮೆ ಆಘಾತಕ್ಕೆ ಒಳಗಾಗುವುದುಂಟು. ತಿಂಗಳ ಸಂಬಳ ಅಥವಾ ಗಳಿಕೆಗಿಂತ ಸಾಲದ ಬಿಲ್‌ ಮೊತ್ತ ಹೆಚ್ಚಾಗಿರುವ ಸಂದರ್ಭವೂ ಇರುತ್ತದೆ.

ಕೆಲವೊಮ್ಮೆ ಗಳಿಸುವ ಹಣ ಮತ್ತು ಮರು ಪಾವತಿ ನಡುವೆ ಹೊಂದಿಕೆ ಆಗುತ್ತಿಲ್ಲ. ಇದು ದೊಡ್ಡ ಸಮಸ್ಯೆಯಾಗಿ ತಲೆದೋರುತ್ತಿದೆ. ಮರು ಪಾವತಿ ಸಾಮರ್ಥ್ಯ ಇಲ್ಲದಿದ್ದರೂ ಕ್ರೆಡಿಟ್‌ ಕಾರ್ಡ್‌ ಮೂಲಕ ದುಬಾರಿ ವಸ್ತುಗಳನ್ನು ಖರೀದಿಸುತ್ತಿರುವುದೇ ಇದಕ್ಕೆ ಮುಖ್ಯ ಕಾರಣ.

ಅನುಕೂಲಗಳು
ಅನಿರೀಕ್ಷಿತವಾಗಿ ವಸ್ತುಗಳನ್ನು ಖರೀದಿಸಲು ಕ್ರೆಡಿಟ್‌ ಕಾರ್ಡ್‌ ಉಪಯೋಗಕ ಬರುತ್ತದೆ. ಕೆಲವೊಮ್ಮೆ ವಸ್ತುಗಳು ದುಬಾರಿ ಅನಿಸಿದರೂ, ತಕ್ಷಣ ಹಣ ಪಾವತಿಸುವ ಅಗತ್ಯ ಇಲ್ಲದೆ ಇರುವುದರಿಂದ ಖರೀದಿಸಲು ಸಾಧ್ಯವಾಗುತ್ತದೆ. ಹಣ ಪಾವತಿಗೂ ಸಮಯ ಇರುವುದರಿಂದ ಆತಂಕ ಇರುವುದಿಲ್ಲ.

ಬಡ್ಡಿ ಇಲ್ಲದೆ ಸಾಲ ಮರು ಪಾವತಿ ಮಾಡುವ ವ್ಯವಸ್ಥೆ ಕ್ರೆಡಿಟ್‌ ಕಾರ್ಡ್‌ ಪದ್ಧತಿಯಲ್ಲಿ ಇರುತ್ತದೆ. ಸಾಮಾನ್ಯವಾಗಿ ವಸ್ತುಗಳನ್ನು ಖರೀದಿಸಿದ ನಂತರ 50 ದಿನಗಳವರೆಗೂ ಹಣ ಪಾವತಿಗೆ ಸಮಯ ಇರುತ್ತದೆ. ಉದಾಹರಣೆಗೆ ಜೂನ್‌ ಒಂದರಂದು ಖರೀದಿ ಮಾಡಿದೆ ಜುಲೈ 20ರವರೆಗೂ ಅವಕಾಶ ಇರುತ್ತದೆ.

ಭದ್ರತೆ
ಒಮ್ಮೆ ನಗದು ಹಣ ಕಳೆದುಕೊಂಡರೆ ಸಿಗುವ ಸಾಧ್ಯತೆ ತುಂಬಾ ಕಡಿಮೆ. ಆದರೆ, ಕ್ರೆಡಿಟ್‌ ಕಾರ್ಡ್‌ ಕಳೆದುಕೊಂಡರೆ ತಕ್ಷಣ ಕಂಪೆನಿಗೆ ಕರೆ ಮಾಡಿ ಮಾಹಿತಿ ನೀಡುವ ಮೂಲಕ ಅದರ ಬಳಕೆ ಸ್ಥಗಿತಗೊಳ್ಳುವಂತೆ ಮಾಡಬಹುದು. ಅಲ್ಲದೆ 4–6 ದಿನಗಳ ಒಳಗೆ ಹೊಸ ಕಾರ್ಡ್ ಪಡೆಯಲು ಅವಕಾಶ ಇರುತ್ತದೆ. ಹಣದ ವಹಿವಾಟಿನ ಎಲ್ಲ ದಾಖಲೆಗಳು ಕ್ರೆಡಿಟ್‌ ಕಾರ್ಡ್‌ ನೀಡಿರುವ ಕಂಪೆನಿಯ ಬಳಿ ಇರುತ್ತದೆ.

ಇದು ಆರ್ಥಿಕ ವಹಿವಾಟಿಗೆ ಅನುಕೂಲವಾಗಲಿದೆ. ಇತ್ತೀಚಿನ ದಿನಗಳಲ್ಲಿ ಕ್ರೆಡಿಟ್‌ ಕಾರ್ಡ್‌ಗಳನ್ನು ಎಲ್ಲ ಕಡೆ ಬಳಸಲು ಅವಕಾಶ ಇದೆ. ಕಂಪೆನಿಗಳು ಇದಕ್ಕೆ ಅವಕಾಶ ಮಾಡಿಕೊಟ್ಟಿವೆ. ಇನ್ನು ಕ್ರೆಡಿಟ್‌ ಕಾರ್ಡ್‌ ಬಳಸುವ ಗ್ರಾಹಕರಿಗೆ ಉಚಿತ ಪ್ರವಾಸ, ಕೂಪನ್‌ಗಳು, ಸಿನಿಮಾ ಟಿಕೆಟ್‌, ರಿಯಾಯಿತಿ ದರದಲ್ಲಿ ವಸ್ತುಗಳನ್ನು ನೀಡುವುದು ಇತ್ಯಾದಿ ಆಕರ್ಷಕ ಸೌಲಭ್ಯಗಳನ್ನು ಕಲ್ಪಿಸಿಕೊಡಲಾಗಿದೆ.

ಕೆಲ ಅನಾನುಕೂಲಗಳು
ಹಣ ಮರು ಪಾವತಿ ಮಾಡುವುದು ತಡವಾದರೆ ಕೆಲವೊಮ್ಮೆ ವಿಳಂಬ ಶುಲ್ಕ  ಅಥವಾ ಬಡ್ಡಿಯನ್ನು ಕಂಪೆನಿಗಳು ಗ್ರಾಹಕರ ಮೇಲೆ ವಿಧಿಸುತ್ತವೆ. ಅಲ್ಲದೆ ಒಮ್ಮೆ ವಿಶ್ವಾಸ ಕಳೆದುಕೊಂಡರೆ ವಹಿವಾಟಿಗೆ ಧಕ್ಕೆಯಾಗುತ್ತದೆ.

ಕ್ರೆಡಿಟ್‌ ಕಾರ್ಡ್‌ ಮೂಲಕ ಹೆಚ್ಚಿನ ವೆಚ್ಚ ಮಾಡುವ ಸಂದರ್ಭ ಇರುತ್ತದೆ. ಕೆಲವೊಮ್ಮೆ ಮೋಸ ಹೋಗುವ ಸಾಧ್ಯತೆಗಳೂ ಇರುತ್ತವೆ. ಇದು ಮುಂದಿನ ದಿನಗಳಲ್ಲಿ ಗಂಭೀರ ಆರ್ಥಿಕ ಸಮಸ್ಯೆಗಳನ್ನು ಉಂಟು ಮಾಡಬಹುದು.

ತಡವಾಗಿ ಹಣ ಪಾವತಿಸಿದರೆ ಕನಿಷ್ಠ ಪ್ರಮಾಣದಲ್ಲಿ ದಂಡ ವಿಧಿಸಬಹುದು. ಸಾಮಾನ್ಯವಾಗಿ 20ರಿಂದ 50ರ ದಿನಗಳ ಒಳಗೆ ಬಡ್ಡಿ ವಿಧಿಸುವುದಿಲ್ಲ. ಆದರೆ, ಹಿಂದಿನ ತಿಂಗಳ ಸಾಲ ಮರು ಪಾವತಿ ಮಾಡದೆ ಇದ್ದರೆ, ಅಂತಹ ಸಂದರ್ಭದಲ್ಲಿ ಬಡ್ಡಿ ವಿಧಿಸಬಹುದು.

ಸಲಹೆಗಳು
* ನಿಮಗೆ ವಸ್ತುಗಳ ಅಗತ್ಯ ಇಲ್ಲದಿದ್ದರೂ, ಬೇರೆಯವರನ್ನು ಮೆಚ್ಚಿಸಲು ಕ್ರೆಡಿಟ್‌ ಕಾರ್ಡ್‌ ಮೂಲಕ ಖರೀದಿ ಮಾಡುವುದು ಸರಿಯಲ್ಲ.

* ಅಗತ್ಯವಿದ್ದಾಗ ಮತ್ತು ಕ್ರೆಡಿಟ್‌ ಕಾರ್ಡ್‌ ಬಳಸುವುದು. ಸೂಕ್ತ ಅನಿಸಿದಾಗ ಮಾತ್ರ ಬಳಸುವುದು ಒಳ್ಳೆಯದು.

* ಕಾಲ ಕಾಲಕ್ಕೆ ಮರು ಪಾವತಿ ಮಾಡುವ ಸಾಮರ್ಥ್ಯ ಇದ್ದಾಗ ಮಾತ್ರ ಖರೀದಿ ಮಾಡಿ

* ಕಂಪೆನಿಯವರ ಎಲ್ಲ ಷರತ್ತುಗಳನ್ನು ಎಚ್ಚರಿಕೆಯಿಂದ ಓದಿ ನಿಮಗೆ ಒಪ್ಪಿಗೆಯಾದರೆ ಮಾತ್ರ ಕ್ರೆಡಿಟ್‌ ಕಾರ್ಡ್‌ ಪಡೆದುಕೊಳ್ಳಿ.

–ಎಂ.ಪಾರ್ಥ ( ಸಿಂಹಾಸಿ ಕನ್ಸಲ್ಟಂಟ್ಸ್‌ನ ವ್ಯವಸ್ಥಾಪಕ ನಿರ್ದೇಶಕ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT