ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗ್ರಾಮ ಸ್ವರಾಜ್ಯ ಅನುಷ್ಠಾನದ ಹಾದಿ ನನೆಗುದಿಗೆ

ಸರ್ಕಾರಿ ಸುತ್ತೋಲೆ ಆಧಾರದಲ್ಲಿ ನಡೆಯುವ ಗ್ರಾಮ ಸಭೆಯಿಂದ ಯಾವುದೇ ಉದ್ದೇಶ ಸಾಧನೆಯಾಗದು
Last Updated 19 ಅಕ್ಟೋಬರ್ 2016, 3:07 IST
ಅಕ್ಷರ ಗಾತ್ರ

ಗಾಂಧೀಜಿ ಜನ್ಮದಿನದಂದು ಗ್ರಾಮ ಸ್ವರಾಜ್ಯದ ಕಲ್ಪನೆಯನ್ನು ಬಿತ್ತಲು, ಎತ್ತಿಹಿಡಿಯಲು ರಾಜ್ಯದಾದ್ಯಂತ ಎಲ್ಲಾ ಗ್ರಾಮ ಪಂಚಾಯಿತಿಗಳಲ್ಲಿ ಏಕಕಾಲಕ್ಕೆ ಗ್ರಾಮ ಸಭೆಗಳನ್ನು ನಡೆಸುವಂತೆ ರಾಜ್ಯ ಸರ್ಕಾರ ಫರ್ಮಾನು ಹೊರಡಿಸಿತು. ಅದರಂತೆ ಪಂಚಾಯಿತಿಗಳು ಗ್ರಾಮ ಸಭೆಗಳನ್ನು ನಡೆಸಿದವು. ಆದರೆ ಎಷ್ಟು ಗ್ರಾಮ ಸಭೆಗಳು ಸರ್ಕಾರಿ ದಾಖಲೆಗಳಲ್ಲಷ್ಟೇ ಅಲ್ಲದೆ ನಿಜವಾದ ಅರ್ಥದಲ್ಲಿ ಯಶಸ್ವಿಯಾದವು ಎಂಬುದು ಪ್ರಶ್ನಾರ್ಹ.

ಗ್ರಾಮ ಪಂಚಾಯಿತಿ ಒಂದು ಸ್ವಾಯತ್ತ ಘಟಕ, ಸ್ವಯಂಸರ್ಕಾರ ಎಂಬ ಕಾನೂನಿನ ಅಂಶವನ್ನು ಬದಿಗೊತ್ತಿ, ಸಂವಿಧಾನದ ಆಶಯಕ್ಕೇ ಧಕ್ಕೆ ತರುವ ಇಂತಹ ಆದೇಶಗಳು ಯಾವುದೇ ಉದ್ದೇಶವನ್ನು ಯಥಾರ್ಥಗೊಳಿಸುವುದಿಲ್ಲ. ಗ್ರಾಮ ಸಭೆಯನ್ನು ಎಲ್ಲಿ, ಯಾವಾಗ ನಡೆಸಬೇಕು ಎಂದು ಗ್ರಾಮ ಸಭಾ ಸದಸ್ಯರೊಂದಿಗೆ ಚರ್ಚಿಸಿ ಗ್ರಾಮ ಪಂಚಾಯಿತಿ ನಿರ್ಧರಿಸಬೇಕೇ ವಿನಃ ರಾಜ್ಯ ಸರ್ಕಾರವಾಗಲಿ ಅಥವಾ ಅದರ ಇಲಾಖೆಯಾಗಲಿ ಅಲ್ಲ. ಸರ್ಕಾರಿ ಸುತ್ತೋಲೆಗಳ ಆಧಾರದಲ್ಲಿ ನಡೆಸುವ ಗ್ರಾಮ ಸಭೆ ಹಲವು ಬಾರಿ ಆ ಗ್ರಾಮದ ಪ್ರಮುಖ ಅಗತ್ಯಗಳನ್ನು, ಜ್ವಲಂತ ಸಮಸ್ಯೆಗಳನ್ನು ಗಮನದಲ್ಲಿಟ್ಟುಕೊಳ್ಳದೇ ಹೋಗುವುದರಿಂದ ಜನರ ಭಾಗವಹಿಸುವಿಕೆ ಇಲ್ಲಿ ಕೇವಲ ನೆಪಮಾತ್ರ.  ಈ ರೀತಿ ಗ್ರಾಮ ಸಭೆ ನಡೆಸುವಂತೆ ಆದೇಶ ಹೊರಡಿಸುವುದು ಸಹ ಗ್ರಾಮ ಸಭೆಯ ಮಾದರಿ ಪರಿಕಲ್ಪನೆಯ ಪ್ರಕ್ರಿಯೆಯನ್ನೇ ಬುಡಮೇಲು ಮಾಡುತ್ತದೆ.

ಇದೇ ಗಾಂಧಿ ಜಯಂತಿಯ ಸಂದರ್ಭದಲ್ಲಿ ಮಾಧ್ಯಮಕ್ಕೆ ನೀಡಿದ ವಿಶೇಷ ಸಂದರ್ಶನವೊಂದರಲ್ಲಿ ರಾಜ್ಯದ ಗ್ರಾಮೀಣಾಭಿವೃದ್ಧಿ ಸಚಿವರು ‘ಗ್ರಾಮೀಣ ಜನರಿಗೆ ಯೋಜನೆ ರೂಪಿಸುವ ಅಧಿಕಾರ ನೀಡಿದ್ದೇವೆ; ಆಡಳಿತ ವಿಕೇಂದ್ರೀಕರಣದ ನೈಜ ಅರ್ಥ ಸಾಕಾರಗೊಳಿಸಿದೆ ಈ ಸರ್ಕಾರ; ತಳಮಟ್ಟದಿಂದ ಯೋಜನೆಗಳನ್ನು ಹುಟ್ಟುಹಾಕಬೇಕೆಂಬ ಉದ್ದೇಶದಿಂದ ‘ನಮ್ಮ ಗ್ರಾಮ ನಮ್ಮ ಯೋಜನೆ’ ರೂಪಿಸಿ ಗ್ರಾಮ ಪಂಚಾಯಿತಿಗಳಿಂದ ಯೋಜನೆಗಳನ್ನು ತರಿಸಿಕೊಳ್ಳಲಾಗಿದೆ’ ಎಂದು ಹೇಳಿದ್ದಾರೆ.

ನಿಜ, ಕರ್ನಾಟಕದಲ್ಲಿ ತ್ರಿಸ್ತರ ಪಂಚಾಯತ್ ರಾಜ್ ವ್ಯವಸ್ಥೆಯನ್ನು ಸದೃಢಗೊಳಿಸುವ, ಸಂವಿಧಾನದತ್ತವಾದ ಗ್ರಾಮ ಸಭೆಯ ಅಧಿಕಾರವನ್ನು ಎತ್ತಿಹಿಡಿಯುವ, ವಿಕೇಂದ್ರೀಕರಣದ ಕನಸು ನನಸಾಗಿಸುವ, ಗಾಂಧಿ ಕಂಡ ಕನಸಿನ ಗ್ರಾಮ ಸ್ವರಾಜ್ಯ ಸ್ಥಾಪಿಸುವ ಮಹದಾಶಯದೊಂದಿಗೆ ‘ಕರ್ನಾಟಕ ಗ್ರಾಮ ಸ್ವರಾಜ್ ಹಾಗೂ ಪಂಚಾಯತ್ ರಾಜ್ ತಿದ್ದುಪಡಿ ಕಾಯ್ದೆ-  1993, ಗೆಜೆಟ್ ಅನುಮೋದನೆಯಾಗಿ ಕಳೆದ ಫೆಬ್ರುವರಿ 25ರಂದು ಜಾರಿಗೆ ಬಂತು. ಮಕ್ಕಳು, ಮಹಿಳೆಯರನ್ನೂ ಒಳಗೊಂಡಂತೆ ಬದಿಗೊತ್ತಲಾದ ವರ್ಗದ, ಸಮಾಜದ ಸುಧಾರಣೆಗೆ ಇದೊಂದು ಹೊಸ ಆಯಾಮ ನೀಡಿದಂತಹ ಕ್ರಾಂತಿಕಾರಕ ತಿದ್ದುಪಡಿ ಕಾಯ್ದೆ.

ಆದರೆ ಸ್ಥಳೀಯ ಸರ್ಕಾರಗಳನ್ನು ಬಲಪಡಿಸುವ ಈ ಕಾಯ್ದೆಯನ್ನು ಉಭಯ ಸದನಗಳಲ್ಲಿ ಅಂಗೀಕಾರ ಮಾಡುವಲ್ಲಿ, ಕಾನೂನಾಗಿ ಜಾರಿಗೆ ತರುವಲ್ಲಿ ಸರ್ಕಾರಕ್ಕೆ ಇದ್ದಂತಹ ಉತ್ಸಾಹ, ಅದರ ಆಚರಣೆಯಲ್ಲಿ, ಪರಿಣಾಮಕಾರಿಯಾಗಿ ಅನುಷ್ಠಾನ ಮಾಡುವಲ್ಲಿ ಇದ್ದಂತೆ ತೋರುತ್ತಿಲ್ಲ. ಕಾಯ್ದೆಯಾಗಿ ಹಲವು ತಿಂಗಳುಗಳೇ ಕಳೆದರೂ ಅದರಲ್ಲಿ ಹೇಳಿರುವ ಅಂಶಗಳನ್ನು ಆಚರಣೆಯಾಗಿ ಮಾರ್ಪಡಿಸುವ ಯಾವುದೇ ಸ್ಪಷ್ಟ ಕ್ರಮವನ್ನೂ ಸರ್ಕಾರ ಇಂದಿಗೂ ಕೈಗೊಂಡ ಕುರುಹು ಕಾಣಿಸುತ್ತಿಲ್ಲ. ಯೋಜನೆಯ ಅನುಷ್ಠಾನದ ಪ್ರಕ್ರಿಯೆಗಳು ಮಾಧ್ಯಮಗಳ ಹೇಳಿಕೆಗಳಿಗೆ ಸೀಮಿತವಾಗಿವೆ. ಜನ ಭಾಗವಹಿಸುವಿಕೆಯ ಗ್ರಾಮದ ‘ಮುನ್ನೋಟ ಯೋಜನೆ’ಯಂತಹ ಮಹತ್ವಾಕಾಂಕ್ಷಿ ತಿದ್ದುಪಡಿಯ ಅಂಶಗಳೂ ಚೆಲ್ಲಾಪಿಲ್ಲಿಯಾಗಿ, ಅತ್ತೂ ಇರೆ ಇತ್ತೂ ಬಿಡೆ ಎಂಬಂತೆ ಲೆಕ್ಕಕ್ಕೆ ಮಾತ್ರ ಆಚರಣೆಯಾಗುವ ಹಂತದಲ್ಲಿವೆ.

ಈ ಹಂತದಲ್ಲಿ, ಕಾಯ್ದೆಯ ಆಶಯವನ್ನು ಸಾಕಾರಗೊಳಿಸುವುದು, ವಾಸ್ತವದ ಆಧಾರದ ಮೇಲೆ ಆಚರಣೆಯಲ್ಲಿ ಅಳವಡಿಸಿ ಕಾರ್ಯ ನಿರ್ವಹಿಸುವಂತೆ ಮಾಡುವುದು ಸರ್ಕಾರದ ಅತ್ಯಂತ ಮಹತ್ವದ ನಡೆಯಾಗಬೇಕಿತ್ತು. ಆದರೆ ಈ ಕಾಯ್ದೆಯ ಅನುಷ್ಠಾನದ ಹಂತದಲ್ಲಿ ಕಾನೂನಿನ ಸತ್ವವನ್ನು ಬದಿಗೊತ್ತಿ ಕಾಟಾಚಾರದ ಅನುಷ್ಠಾನ ಪ್ರಕ್ರಿಯೆ ನಡೆಯುತ್ತಿರುವಂತೆ ಕಾಣುತ್ತಿದೆ. ರಾಜ್ಯದಾದ್ಯಂತ ಈ ಕಾನೂನಿನ ಪರಿಣಾಮಕಾರಿ ಅನುಷ್ಠಾನ ಆಗಬೇಕಾದರೆ ರಾಜ್ಯ ಸರ್ಕಾರವು ಪ್ರಥಮ ಆದ್ಯತೆ ನೀಡಿ ಕೈಗೊಳ್ಳಲೇಬೇಕಾದಂತಹ ಮಹತ್ವದ ಹೆಜ್ಜೆಗಳು ಇಂತಿದ್ದವು:

ಮೊದಲನೆಯದಾಗಿ ವಿಕೇಂದ್ರೀಕರಣಕ್ಕೆ ವಿರುದ್ಧವಾದ, ಈ ತಿದ್ದುಪಡಿ ಕಾಯ್ದೆಯನ್ನು  ಉಲ್ಲಂಘಿಸುವ, ಅದರ ಆಶಯಗಳನ್ನು ಬದಿಗೊತ್ತುವ ಈಗಾಗಲೇ ಚಾಲ್ತಿಯಲ್ಲಿರುವ ಅನೇಕ ಸರ್ಕಾರಿ ಆದೇಶಗಳನ್ನು ಹಿಂಪಡೆಯುವಂತೆ ಸರ್ಕಾರ ತುರ್ತು ಆದೇಶ ಹೊರಡಿಸಬೇಕಿತ್ತು. ಆದರೆ ಇದುವರೆಗೂ ಅಂತಹ ಯಾವುದೇ ಆದೇಶವನ್ನು ಹೊರಡಿಸಲಾಗಿಲ್ಲ. ಈ ಕಾನೂನಿನಲ್ಲಿ ಉಲ್ಲೇಖಿಸಿರುವ ವಿವಿಧ ಹಂತದ ಸರ್ಕಾರಗಳ ಜವಾಬ್ದಾರಿ ನಕ್ಷೆ (ಕಾನೂನು ತಿದ್ದುಪಡಿ ಸಮಿತಿ ಶಿಫಾರಸು ಮಾಡಿದಂತೆ) ಆಧಾರದ ಮೇಲೆ ವಿವಿಧ ಹಂತದ ಹೊಣೆಗಾರರ ನಡುವೆ ಹೊಣೆಗಾರಿಕೆ ಹಾಗೂ ಹಣಕಾಸು ಹಂಚಿಕೆಯಾಗಬೇಕು ಹಾಗೂ ಕಾರ್ಯ ನಿರ್ವಹಿಸಬೇಕು. ಆದರೆ ಜವಾಬ್ದಾರಿ ನಕ್ಷೆಯು ಇನ್ನೂ ಯಾವುದೇ ಹಂತದ ತ್ರಿಸ್ತರ ಸ್ಥಳೀಯ ಸರ್ಕಾರಗಳ ಕೈತಲುಪಿಲ್ಲ. ಕಾರಣ ಇದನ್ನು ನಿಯಮವಾಗಿ ರೂಪಿಸಿ ಕಾನೂನಿನ ಭಾಗವನ್ನಾಗಿಸುವ ಪ್ರಕ್ರಿಯೆಯನ್ನು ಸರ್ಕಾರ ಇನ್ನೂ ಮಾಡಿಲ್ಲ. ಈ ತಿದ್ದುಪಡಿ ಕಾಯ್ದೆಗೆ ಅನುಗುಣವಾಗಿ ಯೋಜನಾ ಇಲಾಖೆ, ಹಣಕಾಸು ಇಲಾಖೆ ಹಾಗೂ ಇತರ ಇಲಾಖೆಗಳು ಸಂಬಂಧಿತ ಹೊಸ ಆದೇಶವನ್ನು ಇನ್ನೂ ಹೊರಡಿಸಿಲ್ಲ. ಅಲ್ಲದೆ ಯಾವುದೇ ಮಾರ್ಗದರ್ಶಿ ಕೈಪಿಡಿಯನ್ನೂ ಸರ್ಕಾರ ರಚಿಸಿಲ್ಲ.

ಈ ಕಾನೂನಿನ ಅನುಷ್ಠಾನಕ್ಕೆ ಪೂರಕವಾಗಿ ಇದು ಜಾರಿಯಾದ ತಕ್ಷಣ ರಾಜ್ಯ ಸರ್ಕಾರವು ತರಬೇತಿ ಕಾರ್ಯಕ್ರಮ ಹಮ್ಮಿಕೊಳ್ಳಬೇಕಾಗಿತ್ತು. ಗ್ರಾಮ ಸಭೆಯ ಮಹತ್ವ, ಅರ್ಥಪೂರ್ಣ ಯೋಜನಾ ಪ್ರಕ್ರಿಯೆ, ಹಣಕಾಸು ಹಂಚಿಕೆ, ವಿವಿಧ ಹಂತದ ಸರ್ಕಾರದ ಜವಾಬ್ದಾರಿ ಹಂಚಿಕೆ ಹೀಗೆ ತಿದ್ದುಪಡಿಯ ತುಲನಾತ್ಮಕ ಮಾಹಿತಿಯನ್ನೊಳಗೊಂಡ ಸಾಮರ್ಥ್ಯಾಭಿವೃದ್ಧಿ ತರಬೇತಿಯನ್ನು ಪರಿಣತರಿಂದ ಸ್ಥಳೀಯ ಸರ್ಕಾರದ ಪ್ರತಿನಿಧಿಗಳಿಗೆ, ಅಧಿಕಾರಿಗಳಿಗೆ ವಿವಿಧ ಹಂತದಲ್ಲಿ ನೀಡಬೇಕಾಗಿತ್ತು. ಆದರೆ ಇದಾವುದೇ ಪ್ರಕ್ರಿಯೆಯನ್ನು ಇನ್ನೂ ವ್ಯವಸ್ಥಿತವಾಗಿ ಪ್ರಾರಂಭಿಸಿಲ್ಲ.

ತಿದ್ದುಪಡಿಯಾದ ಕಾನೂನಿನಲ್ಲಿರುವ ‘ಮುನ್ನೋಟ ಯೋಜನೆ’ಯ ಅಂಶವನ್ನು ಪರಿಗಣಿಸಿ ‘ನಮ್ಮ ಗ್ರಾಮ ನಮ್ಮ ಯೋಜನೆ’ ಶೀರ್ಷಿಕೆಯಡಿ ನಡೆದ ತರಬೇತಿಗಳೂ ತಿದ್ದುಪಡಿ ಕಾನೂನಿನ ಚೌಕಟ್ಟಿನೊಳಗೆ ಇಲ್ಲದಿರುವುದು, ಸಂಪೂರ್ಣ ಮಾಹಿತಿ ಚುನಾಯಿತ ಪ್ರತಿನಿಧಿಗಳಿಗೆ, ಗ್ರಾಮ ಸಭಾ ಸದಸ್ಯರಿಗೆ ತಲುಪದಿರುವುದು ಇದರ ಆಶಯವನ್ನು ಬದಿಗೊತ್ತಿವೆ. ಹೀಗೆ ಪ್ರಾರಂಭಿಸಿದ ‘ಮುನ್ನೋಟ ಯೋಜನೆ’ ಪ್ರಕ್ರಿಯೆಗಳು ಪ್ರತಿ ಗ್ರಾಮ ಪಂಚಾಯಿತಿಯಲ್ಲಿ ನೂರಾರು ಕಾಮಗಾರಿಗಳನ್ನು ಪಟ್ಟಿ ಮಾಡಲಷ್ಟೇ ಸೀಮಿತವಾಗಿ ಬಿಟ್ಟಿವೆ. ಸಚಿವರ ಹೇಳಿಕೆಯಂತೆ ಸುಮಾರು 25 ಸಾವಿರ  ಗ್ರಾಮ ಸಭೆಗಳು ನಡೆದರೂ ತಿದ್ದುಪಡಿ ಕಾನೂನಿನಲ್ಲಿ ಹೇಳಿದಂತೆ ಎಲ್ಲಾ ವರ್ಗದ ಜನರ ಭಾಗವಹಿಸುವಿಕೆ ಎಷ್ಟಿತ್ತು ಎಂಬುದು ಗಮನಿಸಬೇಕಾದ ಅಂಶ. ಯೋಜನೆಗಳ ಮಹತ್ವವನ್ನು ಜನರಿಗೆ ತಲುಪಿಸದೆ, ಕಾನೂನಿನಲ್ಲಿ ಹೇಳಿರುವ ಅಂಶಗಳನ್ನು ಗ್ರಾಮ ಪಂಚಾಯಿತಿಯ ಪ್ರತಿನಿಧಿಗಳಿಗೆ, ಅಧಿಕಾರಿಗಳಿಗೆ ಸ್ಪಷ್ಟಪಡಿಸದೆ ಆದೇಶದ ಮೂಲಕ ಹೇರಿದ ಈ ಪ್ರಕ್ರಿಯೆ ಹಲವೆಡೆ ಪಂಚಾಯಿತಿ ಕಟ್ಟಡದೊಳಗೇ ನಡೆದಿರುವುದು ವಿಪರ್ಯಾಸ!

ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಒಂದು ಹಂತದ ಯೋಜನಾ ಪ್ರಕ್ರಿಯೆಗಳು ನಡೆದರೂ (ಇದು ಸಹ ಕ್ರಮಬದ್ಧವಾಗಿ ನಡೆದಿರುವುದು ಬಹುಶಃ ಕೇವಲ ಬೆರಳೆಣಿಕೆಯ ಜಿಲ್ಲೆಗಳಲ್ಲಿ ಮಾತ್ರ), ಅದಕ್ಕನುಗುಣವಾಗಿ ತಾಲ್ಲೂಕು ಮತ್ತು ಜಿಲ್ಲಾ ಮಟ್ಟದಲ್ಲಿ ಅಂತಹ ಯಾವುದೇ ಪ್ರಕ್ರಿಯೆ ನಡೆಯದೇ ಇರುವುದರಿಂದ ಇಡೀ ಯೋಜನೆಯ ಪರಿಕಲ್ಪನೆ, ಉದ್ದೇಶವನ್ನೇ ಗಾಳಿಗೆ ತೂರಿದಂತಾಗಿದೆ.

‘ಮುನ್ನೋಟ ಯೋಜನೆ’ ಪ್ರಕ್ರಿಯೆಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರದ ಅಂಗ ಸಂಸ್ಥೆಯಾದ ಅಬ್ದುಲ್‌ ನಜೀರ್‌ ಸಾಬ್‌ ರಾಜ್ಯ ಗ್ರಾಮೀಣಾಭಿವೃದ್ಧಿ ಸಂಸ್ಥೆಯ (ANSSIRD) ನೇತೃತ್ವದಲ್ಲಿ ತಯಾರಿಸಿ ಎಲ್ಲಾ ಗ್ರಾಮ ಪಂಚಾಯಿತಿಗಳಿಗೆ ನೀಡಿದ ನಮೂನೆಗಳು ಕಾಯ್ದೆಯ ಹಲವಾರು ಅಂಶಗಳನ್ನು ಕೈಬಿಟ್ಟಿವೆ. ಈಗ, ಮೂರೂ ಹಂತದ ಪಂಚಾಯಿತಿಗಳ ಮುನ್ನೋಟ ಯೋಜನೆಯನ್ನು ದಾಖಲಿಸಲು ANSSIRD ಮಾರ್ಗದರ್ಶನದಲ್ಲಿ ತಯಾರಿಸಲಾದ ‘ನಮ್ಮ ಗ್ರಾಮ ನಮ್ಮ ಯೋಜನೆ’ ತಂತ್ರಾಂಶವು ಹಲವಾರು ಲೋಪದೋಷಗಳನ್ನು ಒಳಗೊಂಡಿದೆ. ಕೆಲವು ನಮೂನೆಗಳಲ್ಲಿ ತಂತ್ರಾಂಶ ಅಭಿವೃದ್ಧಿಗೊಳಿಸುವ ಸಮಯದಲ್ಲಿಯೇ ಮಾಹಿತಿಗಳನ್ನು ಭರ್ತಿ ಮಾಡಿದ್ದಾರೆ. ಆ ಮಾಹಿತಿಗಳು ತಮಗೆ ಸಂಬಂಧವಿಲ್ಲದಿದ್ದರೂ, ತಮ್ಮ ಅಗತ್ಯಗಳನ್ನು ಪೂರೈಸದಿದ್ದರೂ ಅವುಗಳನ್ನೇ ಆಯ್ದುಕೊಳ್ಳುವ ಪರಿಸ್ಥಿತಿ ಪಂಚಾಯಿತಿಗಳಿಗೆ ಎದುರಾಗಿದೆ. ಉದಾಹರಣೆಗೆ ಕೌಶಲಾಭಿವೃದ್ಧಿ ತರಬೇತಿ, ಸಾಮಾಜಿಕ ಅಭಿವೃದ್ಧಿ ಯೋಜನೆಗೆ ಸಂಬಂಧಿಸಿದಂತೆ ಮಾಹಿತಿ ನೀಡುವ ನಮೂನೆಗಳಲ್ಲಿ ತಂತ್ರಾಂಶ ಅಭಿವೃದ್ಧಿ ಸಮಯದಲ್ಲೇ ಕೆಲವು ತರಬೇತಿಗಳು, ಸಾಮಾಜಿಕ ಅಭಿವೃದ್ಧಿ ಯೋಜನೆಗಳ ಪಟ್ಟಿ ತಯಾರಿಸಿ ಸೇರಿಸಲಾಗಿದೆ.  ತಮ್ಮ ಪಂಚಾಯತ್ ವ್ಯಾಪ್ತಿಯ ಫಲಾನುಭವಿಗಳಿಗೆ ಅನುಗುಣವಾದಂತಹ ತರಬೇತಿಗಳನ್ನು ನೀಡಲು, ತಮ್ಮ ಗ್ರಾಮಸ್ಥರಿಗೆ ಅಗತ್ಯವಿರುವ ಯೋಜನೆ ತಯಾರಿಸಲು ಕಾಯ್ದೆಯೇ ಅವಕಾಶ ಮಾಡಿಕೊಟ್ಟರೂ, ಇಂತಹ ದೋಷಪೂರಿತ ತಂತ್ರಾಂಶಗಳಿಂದ ಆ ಅಧಿಕಾರವನ್ನು ನಿರ್ಬಂಧಗೊಳಿಸಲಾಗುತ್ತಿದೆ.

ಜನವಸತಿ ಸಭೆಯ ಕುರಿತಾಗಿ ಕಾನೂನಿನಲ್ಲಿ ಸ್ಪಷ್ಟವಾಗಿ ಹೇಳಿದ್ದರೂ ಜನವಸತಿವಾರು ಸಭೆಯಲ್ಲಿ ಬಂದಂತಹ ಬೇಡಿಕೆಗಳನ್ನು ಪ್ರತ್ಯೇಕವಾಗಿ ಸೇರಿಸಲು ಈ ತಂತ್ರಾಂಶದಲ್ಲಿ ಅವಕಾಶವೇ ಇಲ್ಲ! ಸರ್ಕಾರದ, ಅದರ ಅಂಗ ಸಂಸ್ಥೆಗಳ ಇಂತಹ ಹಲವಾರು ನಡೆಗಳು ಅಧಿಕಾರಶಾಹಿ ಆಡಳಿತಕ್ಕೆ ಒಗ್ಗಿಕೊಂಡಿರುವ ಹಲವಾರು ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳಿಗೆ ಈ ಕಾಯ್ದೆಯನ್ನು ಪರಿಣಾಮಕಾರಿಯಾಗಿ ಅನುಷ್ಠಾನ ಮಾಡುವಲ್ಲಿ ತಡೆಯೊಡ್ಡಲು ಅವಕಾಶ ಮಾಡಿಕೊಟ್ಟಂತಾಗುತ್ತದೆ. ಕಾನೂನನ್ನು ಯಥಾವತ್ತಾಗಿ ಅರ್ಥೈಸದೆ ತಿರುಚಿ ಮಾಹಿತಿ ನೀಡುವ ಸಾಧ್ಯತೆಗಳೂ ಇವೆ.

ಗ್ರಾಮ ಸ್ವರಾಜ್ಯ ಸಾಕಾರಗೊಳಿಸುವಿಕೆಯಲ್ಲಿ ಇಷ್ಟೆಲ್ಲಾ ಪ್ರಮುಖ ಕಾರ್ಯಗಳು ಬಾಕಿ ಇರುವಾಗ ರಾಜ್ಯ ಸರ್ಕಾರವು ಅವುಗಳಿಗೆ ಆದ್ಯತೆ ನೀಡದೆ ಗ್ರಾಮ ಸಭೆಯನ್ನು ನಿಗದಿತ ದಿನದಂದು, ಸರ್ಕಾರ ನಿಗದಿಪಡಿಸಿದ ವಿಷಯಗಳ ಕುರಿತು ನಡೆಸಬೇಕು ಎಂದು ಆದೇಶಿಸುವುದು ವಿಪರ್ಯಾಸವೇ ಸರಿ. ಅಧಿಕಾರಶಾಹಿ ಆಡಳಿತಗಳಿಂದ ರೋಸಿ ಹೋಗಿ ಸಿನಿಕರಾಗಿರುವ ನಾಗರಿಕರಿಗೆ ಗ್ರಾಮ ಸ್ವರಾಜ್ಯದ ಆಶಯಗಳನ್ನು ಎತ್ತಿಹಿಡಿಯುವ ಅಂಶಗಳನ್ನು ಹೊಂದಿರುವ ಈ ಕಾನೂನಿನ ಬಗ್ಗೆ ಜಾಗೃತಿ ಮೂಡಿಸಿ, ತಮ್ಮ ಹಕ್ಕುಗಳನ್ನು ಚಲಾಯಿಸುವಂತೆ, ಅಧಿಕಾರವನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳುವಂತೆ ಮಾಡುವ ಅವಶ್ಯಕತೆಯೂ ಇದೆ. ಈ ನಿಟ್ಟಿನಲ್ಲಿ, ರಾಜ್ಯದಾದ್ಯಂತ ತಿದ್ದುಪಡಿ ಕಾಯ್ದೆಗನುಗುಣವಾಗಿ ತ್ರಿಸ್ತರ ಪಂಚಾಯತ್ ಸದಸ್ಯರು, ಸಿಬ್ಬಂದಿ, ಗ್ರಾಮ ಸಭಾ ಸದಸ್ಯರ ಸಾಮರ್ಥ್ಯಾಭಿವೃದ್ಧಿ ಆಗಬೇಕಿದೆ. ಇಡೀ ಕಾನೂನನ್ನು ತುಲನಾತ್ಮಕವಾಗಿ ವಿಮರ್ಶಿಸಿ ಅರ್ಥೈಸಿಕೊಳ್ಳಬೇಕಾದ ಅಗತ್ಯ ಇವರೆಲ್ಲರಿಗೂ ಇದೆ.

ಈ ಎಲ್ಲಾ ಸವಾಲುಗಳನ್ನು ಸಮರ್ಥವಾಗಿ ನಿಭಾಯಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರವು ರಾಜ್ಯದಾದ್ಯಂತ ಜನರನ್ನು ಒಗ್ಗೂಡಿಸುವುದು, ಸಮಾನ ಮನಸ್ಕ ಸಂಘ-ಸಂಸ್ಥೆಗಳನ್ನು ಗುರುತಿಸಿ ಅವರ ಸಹಭಾಗಿತ್ವದೊಂದಿಗೆ ಕಾರ್ಯ ನಿರ್ವಹಿಸುವ ಅಗತ್ಯ ಇದೆ. ಆಮೆನಡೆಯಲ್ಲಿ ಹೆಜ್ಜೆ ಹಾಕುವ ಸರ್ಕಾರಿ ಇಲಾಖೆಗಳನ್ನು ಚುರುಕಾಗಿಸುವ, ಅಧಿಕಾರಶಾಹಿ ದಾಹವನ್ನು ತಡೆದು, ವಿಕೇಂದ್ರೀಕರಣಕ್ಕೆ ಒತ್ತುಕೊಡುವಂತೆ ಮನವೊಲಿಸುವುದು ಸರ್ಕಾರದ ಮುಂದಿರುವ ದೊಡ್ಡ ಸವಾಲಾಗಿದೆ.

ಕ್ರಾಂತಿಕಾರಕ ಬದಲಾವಣೆಗಳನ್ನು ಅನುಷ್ಠಾನಗೊಳಿಸುವ ಹಾದಿಯಲ್ಲಿ ಕಲ್ಲು ಮುಳ್ಳುಗಳಿರುವುದು ಸಹಜ. ಆದರೆ ಕಾನೂನು ತಿದ್ದುಪಡಿ ಪ್ರಕ್ರಿಯೆಯಲ್ಲಿ ಮಾಡಿದ ದೂರಾಲೋಚನೆ, ಕನಸು ಸಾಕಾರಕ್ಕೆ ಮಾಡಿದ ಪ್ರಯತ್ನ, ತೋರಿದ ಮುತುವರ್ಜಿಯನ್ನು ವ್ಯವಸ್ಥೆಯ ಪರಿಣಾಮಕಾರಿಅನುಷ್ಠಾನದಲ್ಲಿಯೂ ತೋರಿದರೆ ಹಿಂದೆ ಮಾಡಿದ ಪ್ರಯತ್ನಗಳಿಗೆ ಮಾನ್ಯತೆ ದೊರಕುತ್ತದೆ. ಈ ನಿಟ್ಟಿನಲ್ಲಿ ನಿಧಾನಗತಿ ತೋರದೆ, ಅಗತ್ಯ ಕ್ರಮಗಳಿಗೆ ಹಿಂದೇಟು ಹಾಕದೆ ದೃಢ ನಿರ್ಧಾರದೊಂದಿಗೆ ಸಮಗ್ರ ಕಾಯ್ದೆಯ ಪರಿಣಾಮಕಾರಿ ಅನುಷ್ಠಾನಕ್ಕೆ ರಾಜ್ಯ ಸರ್ಕಾರ ಮೈಚಳಿ ಬಿಟ್ಟು ದಿಟ್ಟ ಹೆಜ್ಜೆ ಇಡಬೇಕಾದ ಕಾಲ ಇದಾಗಿದೆ.

ಲೇಖಕಿ ಗ್ರಾಮ ಪಂಚಾಯತ್ ಹಕ್ಕೊತ್ತಾಯ ಆಂದೋಲನದ ಕಾರ್ಯಕರ್ತೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT