ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಲೇಜು ರಾಜಕೀಯ

Last Updated 19 ಅಕ್ಟೋಬರ್ 2016, 19:30 IST
ಅಕ್ಷರ ಗಾತ್ರ

ಕಡೆಗಣಿಸದಿರೋಣ ಯುವಶಕ್ತಿಯನ್ನು...
ಭಾರತ ದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರ. ಆದರೆ ಭಾರತದ ಬಹಳಷ್ಟು ಜನರಿಗೆ ಈ ಪ್ರಜಾಪ್ರಭುತ್ವ, ಚುನಾವಣೆಗಳು, ಸರ್ಕಾರದ ರಚನೆ, ಇವುಗಳ ಕುರಿತು ಪ್ರಾಥಮಿಕ ಮಾಹಿತಿಯೂ ಗೊತ್ತಿಲ್ಲ.

ದೇಶದ ಮೊದಲ ಪ್ರಜೆಯಾದ ರಾಷ್ಟ್ರಪತಿಗಳನ್ನು ಹೇಗೆ ಆಯ್ಕೆ ಮಾಡಲಾಗುತ್ತದೆ ಎಂಬುದೂ ಬಹಳಷ್ಟು ಕಾಲೇಜು ವಿದ್ಯಾರ್ಥಿಗಳಿಗೆ ಗೊತ್ತಿಲ್ಲ! ಇಂಥ ಸಂದರ್ಭದಲ್ಲಿ ರಾಜಕೀಯ ಶಿಕ್ಷಣ ಬಹಳ ಮುಖ್ಯವಾದದ್ದು. ಹಾಗಾಗಿ ಕಾಲೇಜುಗಳಲ್ಲಿ ಆರೋಗ್ಯಕರ ರಾಜಕೀಯ ವಾತಾವರಣಕ್ಕೆ ಬೆಂಬಲಿಸುವುದು ಪ್ರಜಾಪ್ರಭುತ್ವದ ಯಶಸ್ಸಿಗೆ ಅಗತ್ಯವಾಗಿದೆ.

ಕಾಲೇಜುಗಳಲ್ಲಿ ದೇಶದ ರಾಜಕೀಯದ ಬಗ್ಗೆ ಚರ್ಚೆಗಳು ನಡೆಯಬೇಕು. ಸರ್ಕಾರದ ಉತ್ತಮ ಕೆಲಸಗಳನ್ನು ಮೆಚ್ಚಿ ಅವುಗಳನ್ನು ಬೆಂಬಲಿಸಬೇಕು. ಸರ್ಕಾರ ತಪ್ಪು ತೀರ್ಮಾನ ತೆಗೆದುಕೊಂಡಾಗ ಅದನ್ನು ವಿಮರ್ಶಿಸಿ ವಿರೋಧಿಸುವ ಗುಣಗಳು ಇಲ್ಲಿಂದಲೇ ಮೊಳಕೆಯೊಡೆಯಬೇಕು. ಕ್ಯಾಂಪಸ್ಸುಗಳಲ್ಲಿನ ರಾಜಕೀಯ ವಾತಾವರಣ ಪ್ರಬುದ್ದ ಮತದಾರರ ಸೃಷ್ಟಿಗೆ ಕಾರಣವಾಗುವಂತಿರಬೇಕು.

ಈ ನಿಟ್ಟಿನಲ್ಲಿ ಹಿಂದೆ ಇದ್ದ ಹಾಗೆ ಎಲ್ಲ ಕಾಲೇಜುಗಳಲ್ಲಿ ವಿದ್ಯಾರ್ಥಿ ಸಂಘದ ಚುನಾವಣೆ ಇರಬೇಕು. ಇದು ಯುವಶಕ್ತಿಯ ಉತ್ತಮ ನಾಯಕತ್ವಕ್ಕೆ ಮತ್ತು ಸಂಘಟನಾ ಗುಣಗಳನ್ನು ಬೆಳೆಸಿಕೊಳ್ಳಲು, ಆಡಳಿತದ ಸರಿ ತಪ್ಪುಗಳನ್ನು ಪ್ರಾಯೋಗಿಕವಾಗಿ ಎದುರಿಸುವುದರ ಜೊತೆಗೆ ಅಪಾರವಾದ ಅನುಭವ ಗಳಿಸಿಕೊಳ್ಳಲು ಸಹಾಯಕವಾಗುತ್ತದೆ.

ಕಾಲೇಜುಗಳು ಸಮಾಜದ ಅವಿಭಾಜ್ಯ ಅಂಗಗಳೇ ಆಗಿವೆ. ಸಮಾಜದಲ್ಲಿ ರಾಜಕೀಯವಿರುವುದರಿಂದ ಕ್ಯಾಂಪಸ್ಸುಗಳಲ್ಲಿ ರಾಜಕೀಯ ಬೇಡ ಎಂಬುದು ಸಕಾರಣವಾದುದ್ದಲ್ಲ.ಎಲ್ಲಕ್ಕಿಂತ ಮಿಗಿಲಾಗಿ ನಮ್ಮದು ಬರೀ ಭಾರತವಲ್ಲ, ಬದಲಿಗೆ ಯುವ ಭಾರತವಾಗಿದೆ.

ಇಂತಹ ಬಿಸಿರಕ್ತದ ಪ್ರಬಲ ಯುವಶಕ್ತಿಯನ್ನು ರಾಜಕಾರಣದಿಂದ ದೂರವಿಡುವುದರ ಬದಲಿಗೆ ದೇಶದ ರಾಜಕೀಯ ರಂಗದ ಆಗುಹೋಗುಗಳಲ್ಲಿ ಅವರನ್ನು ತೊಡಗಿಸಿಕೊಳ್ಳುವಂತೆ ಮಾಡುವ ಮೂಲಕ ಸಶಕ್ತ ದೇಶ ಕಟ್ಟಬೇಕಾಗಿದೆ. ಯುವಶಕ್ತಿಯನ್ನು ಕಡೆಗಣಿಸದಿರೋಣ.
–ಮುತ್ತುರಾಜು ಗಂಗಾವತಿ

***
ಅರ್ಥೈಸಿಕೊಂಡು ಮುನ್ನಡೆಯಬೇಕು

ರಾಜಕೀಯವೆಂದರೆ ರಾಷ್ಟ್ರದ ಭವಿಷ್ಯವನ್ನು ನಿರ್ಧರಿಸುವ ಒಂದು ವ್ಯವಸ್ಥೆ. ಆದ್ದರಿಂದ ಕಾಲೇಜುಗಳು ಕೇವಲ ಪದವೀಧರರನ್ನು ಸೃಷ್ಟಿಸುವ ಕಾರ್ಖಾನೆಗಳಾಗದೆ, ಅವು ಭಾವಿ ನಾಯಕರನ್ನು ತಯಾರಿಸುವ ತಾಣಗಳಾಗಬೇಕು.

ಗಾಂಧಿ, ನೆಹರು ಆದಿಯಾಗಿ ನಮ್ಮ ದೇಶದ ಸಾಕಷ್ಟು ನಾಯಕರು ತಮ್ಮ ಕಾಲೇಜು ಹಂತದಲ್ಲಿರುವಾಗಲೇ ರಾಜಕೀಯ ಪ್ರವೇಶಿಸಿದವರು ಎಂಬುದನ್ನು ಮರೆಯದೇ, ಕಾಲೇಜುಗಳಲ್ಲಿ ರಾಜಕೀಯ ಚಟುವಟಿಕೆಗಳನ್ನು ಆಯೋಜಿಸಬೇಕು. ಈ ಮೂಲಕ ಭವಿಷ್ಯದ ಉತ್ತಮ ನಾಯಕರನ್ನು ರೂಪಿಸಬೇಕು. ಆದರೆ ಹೀಗಾಗುತ್ತಿಲ್ಲ.

ಇಂದು ಪ್ರಚಾರದ ಹುಚ್ಚು ಹಂಬಲಕ್ಕಾಗಿ ರಾಷ್ಟ್ರೀಯ ಭಾವೈಕ್ಯತೆ ಕದಡುವಂತಹ, ಧರ್ಮ ಸಂಘರ್ಷ ಬಿತ್ತುವಂತಹ, ಜಾತಿ ಮತ, ಪಂಥ, ವರ್ಗ ಸಂಘರ್ಷ ಮುಂತಾದ ನೇತ್ಯಾತ್ಮಕ ವ್ಯಕ್ತಿತ್ವವನ್ನು ಬೆಳೆಸುವ ತಾಣಗಳಾಗಿ ಕಾಲೇಜುಗಳು ಮಾರ್ಪಡುತ್ತಿವೆ.

ದೇಶದ ಆಂತರಿಕ ವ್ಯವಸ್ಥೆಯ ಮೇಲೆ ದುಷ್ಪರಿಣಾಮ ಬೀರುವ ವಿಚಾರಗಳನ್ನು ವ್ಯಕ್ತಪಡಿಸುವ ಯುವಕರನ್ನು ನಾಯಕರಂತೆ ಬಿಂಬಿಸುತ್ತಿರುವುದು ದೇಶದ ಸಮಗ್ರ ರಾಜಕೀಯ ವ್ಯವಸ್ಥೆ ಮೇಲೆ ಕೆಟ್ಟ ಪರಿಣಾಮ ಬೀರುತ್ತಿದೆ.  

ರಾಜಕೀಯ ಕೇವಲ ಅಧಿಕಾರವಲ್ಲ, ಅದು ಒಂದು ರಾಷ್ಟ್ರವನ್ನು ಸಮಗ್ರವಾಗಿ ಅವಲೋಕಿಸುವ ದೃಷ್ಟಿಕೋನ. ಅದು ಸಮಷ್ಟಿಪ್ರಜ್ಞೆಯಿಂದ ಕೂಡಿರಬೇಕು ಎಂಬುದನ್ನು ಇಂದಿನ ಕಾಲೇಜುಗಳು ಅರ್ಥೈಸಿಕೊಂಡು ದೇಶದ ಭವಿಷ್ಯವನ್ನು ಸಕಾರಾತ್ಮಕವಾಗಿ ರೂಪಿಸುವ ಸಂಸ್ಥೆಗಳಾಗಬೇಕು.  
-ಎಸ್.ಆರ್. ಮುದ್ದಾರ ಗೋಕಾಕ
  
***
ಹತ್ತಿಕ್ಕುವ ಪ್ರಯತ್ನ ಸಲ್ಲದು

ರಾಜಕೀಯ ಎಂಬುದು ಜನಸಾಮಾನ್ಯರನ್ನು ಒಳಗೊಂಡು ಚರ್ಚೆಗೆ ಮುಕ್ತವಾದ ವಿಚಾರ. ರಾಜಕೀಯ ಚಿಂತನೆಯ ಹುಟ್ಟು ಶೈಕ್ಷಣಿಕ ಕ್ಷೇತ್ರದಿಂದಲೇ ಆರಂಭವಾಗುತ್ತದೆ, ಆರಂಭವಾಗಬೇಕು ಸಹ.

ಕಾಲೇಜುಗಳು ಹೊಸ ಆಲೋಚನೆ, ಸೃಜನಶೀಲ ಚಿಂತನೆ, ಅಭಿಪ್ರಾಯದ ಅಭಿವ್ಯಕ್ತಿಗೆ ಅಡಿಪಾಯ. ಹಾಗೇ ಭವಿಷ್ಯದ ಸತ್ಪ್ರಜೆಗಳನ್ನು ರೂಪಿಸುವ, ದೇಶದ ಅಗಾಧ ಶಕ್ತಿ ಕೇಂದ್ರೀಕೃತವಾಗಿರುವ ಭವ್ಯ ಭಂಡಾರವೂ ಹೌದು. ಇವು ಸ್ವತಂತ್ರ ಚಿಂತನೆಗಳನ್ನು ಮೂಡಿಸುವ ಹಾಗೂ ಚರ್ಚೆಗೆ ಮುಕ್ತ ಅವಕಾಶವನ್ನು ನೀಡುವ ವೇದಿಕೆಗಳಾಗಬೇಕೇ ಹೊರತು ಹತ್ತಿಕ್ಕುವ ನಿರಂಕುಶವಾದಿಗಳಂತೆ ವರ್ತಿಸಬಾರದು.

ಅಭಿವ್ಯಕ್ತಿಯ ಮುಕ್ತ ಅವಕಾಶ ದೊರೆತಾಗ ಮಾತ್ರ ಕಲಿತ ವಿದ್ಯೆಯ ಸಾರ್ಥಕತೆ ಮತ್ತು ಪರಿಪೂರ್ಣತೆ ಸಾಧ್ಯ.ಕಲಿತ ಜ್ಞಾನವನ್ನು ಪ್ರಸ್ತುತ ವಿದ್ಯಮಾನಗಳಿಗೆ ಹೋಲಿಸಿ ಸತ್ವಯುತ ಚರ್ಚೆ ನಡೆದಾಗಲೇ ಕಲಿತ ಜ್ಞಾನದ ಸಾರ್ಥಕ್ಯ.

ದೇಶದ ಅನೇಕ ವಿಶ್ವವಿದ್ಯಾಲಯಗಳಲ್ಲಿ ನಡೆದ ಬೆಳವಣಿಗೆಗಳು ಶೈಕ್ಷಣಿಕ ಕೇಂದ್ರಗಳು ಯುವಸಮೂಹದ ಚಿಂತನಾ ಸ್ವಾತಂತ್ರ್ಯವನ್ನು ಹತ್ತಿಕ್ಕುವ ನಿರಂಕುಶವಾದಿಗಳಂತೆ ವರ್ತಿಸುತ್ತಿವೆ ಎಂದೆನಿಸುವಂತೆ ಮಾಡಿವೆ. ಕಾಲೇಜುಗಳಲ್ಲಿನ ಮುಕ್ತ ಚಿಂತನೆಯ ಅರ್ಥವನ್ನೇ ಸಂಕುಚಿತಗೊಳಿಸಲಾಗುತ್ತಿದೆ. ಚಿಂತನೆಗಳು ಕೇವಲ ಪಠ್ಯದೊಳಗಡೆಯೇ ಇರಬೇಕೆಂದು ಕಾಣದ ಕೈಗಳು ಮರೆಯಲ್ಲಿ ನಿಂತು ಮಿತಿಗೊಳಪಡಿಸುತ್ತಿವೆ.

ಅದಕ್ಕೂ ಮೇಲಾಗಿ ಸರ್ಕಾರ, ಮತ್ತದರ ವ್ಯವಸ್ಥೆಯ ಪರ ವಿರೋಧ ಚರ್ಚೆ ಘೋಷಣೆಗಳು ನಡೆದ ಸಂದರ್ಭದಲ್ಲಿ ದೇಶದ್ರೋಹ ಎಂಬ ಅಸಂಬದ್ಧ ಕಾನೂನಿನ ಪ್ರಹಾರ ನಡೆಸಿ ಅಭಿವ್ಯಕ್ತಿಯ ಅವಕಾಶವನ್ನೇ ಹೊಸೆದು ಹಾಕುವ ಪ್ರಯತ್ನಗಳು ನಡೆಯುತ್ತಿವೆ.

ಸ್ವಾಮಿ ವಿವೇಕಾನಂದರು, ಗಾಂಧೀಜಿ, ಅಬ್ದುಲ್ ಕಲಾಂರಂತಹ ಮಹಾನ್ ವ್ಯಕ್ತಿಗಳು ದೇಶವನ್ನು ಮುನ್ನಡೆಸುವ ಆತ್ಮವಿಶ್ವಾಸವನ್ನು ಹೊಂದಿದ್ದು ಈ ಯುವಶಕ್ತಿಯ ಮೇಲಿನ ಭರವಸೆಯಿಂದಾಗಿ. ಆದ್ದರಿಂದ ಗುಣಾತ್ಮಕ ರಾಜಕೀಯ ನೆಲೆಗೊಳ್ಳಲು ಯುವಜನತೆಗೆ ಅವಕಾಶ ಬೇಕು. ಅವಕಾಶ ಪಡೆದುಕೊಂಡ ಯುವಜನತೆಯಲ್ಲೂ ಸಂಯಮ, ಸಂವೇದನಾಶೀಲತೆಯ ವ್ಯಕ್ತಿತ್ವ ಮೈಗೂಡಿಸಿಕೊಳ್ಳುವ ಸ್ವ ಜವಾಬ್ದಾರಿಯೂ ಇದೆ.

ಇತ್ತೀಚಿನ ದಿನಗಳಲ್ಲಿ ಸಕ್ರಿಯವಾಗಿರುವ ಬಹು ದೊಡ್ಡ ಜಾಗತಿಕ ಮಾಧ್ಯಮಗಳ ವಿಕೃತ ಬಳಕೆಯು ತರ್ಕಬದ್ಧ ಚಿಂತನೆಯನ್ನು ಬದಿಗೊತ್ತಿ ಸಂತೋಷವನ್ನು ಪಡೆಯುವ ವಿಕೃತಿಗೆ ಯುವಜನತೆಯನ್ನು ತಳ್ಳುತ್ತಿವೆ. ವಾಸ್ತವದಲ್ಲಿ ವಿದ್ಯಾರ್ಥಿಗಳ ಏಳಿಗೆಗಾಗಿ ಕಾರ್ಯನಿರ್ವಹಿಸುವ ಹೊಣೆಗಾರಿಗೆ ಹೊತ್ತ ಸಂಘಟನೆಗಳು ಇಂದು ಇಬ್ಭಾಗವಾಗಿ ದ್ವೇಷದಲ್ಲಿ ಮುಳುಗಿವೆ. ಇದು ಸಂಘಟಿತ ಹೋರಾಟಕ್ಕೆ ತೊಡಕಾಗಿ ಪರಿಣಮಿಸಿದೆ.

ವಿದ್ಯಾರ್ಥಿಗಳು ಸೂಕ್ಷ್ಮ ಚಿಂತನೆಯೇ ಇಲ್ಲದೆ ಹೋರಾಟದಲ್ಲಿ ಕುರಿಮಂದೆಯಂತೆ ಹಿಂಬಾಲಿಸುತ್ತಿರುವುದು ವಿಪರ್ಯಾಸ. ವಿದ್ಯಾರ್ಥಿಗಳ ಚಿಂತನೆಗಳನ್ನು ಹತ್ತಿಕ್ಕದೆ, ಅಭಿವ್ಯಕ್ತಿಗೆ ಅವಕಾಶ ನೀಡಿ ಯುವಶಕ್ತಿಯ ಸಾಧ್ಯತೆಯ ಬಗ್ಗೆ ಭರವಸೆ ಇಡಬೇಕು, ಅದಕ್ಕೆ ಪೂರಕ ವಾತಾವರಣವಿರಬೇಕು.  ಆಗ ಯುವಜನತೆ ದೇಶದ ಶಕ್ತಿಯಾಗಿ ಬೆಳೆಯಲು ಸಾಧ್ಯ.  ಯುವಜನತೆ ಮೇಲೆ ಭರವಸೆ ಇಟ್ಟು ಕಂಡ ಕನಸು ನನಸಾಗಲು ಸಾಧ್ಯ.
–ಕೀರ್ತಿ ತೀರ್ಥಹಳ್ಳಿ ಶಿವಮೊಗ್ಗ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT