ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಷ್ಟ್ರೀಯ ತನಿಖಾ ದಳಕ್ಕೆ ಒಪ್ಪಿಸುವಂತೆ ಆಗ್ರಹ

ಬಿಜೆಪಿ, ಆರ್‌ಎಸ್‌ಎಸ್‌ ಮುಖಂಡ ರುದ್ರೇಶ್‌ ಹತ್ಯೆ ಪ್ರಕರಣ
Last Updated 19 ಅಕ್ಟೋಬರ್ 2016, 20:00 IST
ಅಕ್ಷರ ಗಾತ್ರ

ಬೆಂಗಳೂರು: ಬಿಜೆಪಿ, ಆರ್‌ಎಸ್‌ಎಸ್‌ ಮುಖಂಡ ರುದ್ರೇಶ್ ಹತ್ಯೆ ಪ್ರಕರಣದ ತನಿಖೆಯನ್ನು ರಾಷ್ಟ್ರೀಯ ತನಿಖಾ ದಳಕ್ಕೆ ಒಪ್ಪಿಸಬೇಕು ಎಂದು ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ಎಸ್‌. ಯಡಿಯೂರಪ್ಪ ಆಗ್ರಹಿಸಿದರು.

ರಾಜ್ಯದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಹದಗೆಟ್ಟಿದೆ ಎಂದು ಆರೋಪಿಸಿ ಬುಧವಾರ ಇಲ್ಲಿನ ಆನಂದರಾವ್‌ ವೃತ್ತದ ಬಳಿ  ಬಿಜೆಪಿ ಏರ್ಪಡಿಸಿದ್ದ ಒಂದು ದಿನದ ಧರಣಿಯಲ್ಲಿ ಭಾಗವಹಿಸಿ  ಅವರು ಮಾತನಾಡಿದರು.

ತಮ್ಮ ಬೇಡಿಕೆ ಕುರಿತು ಒಂದೆರಡು ದಿನಗಳಲ್ಲಿ ಸರ್ಕಾರ ನಿರ್ಧಾರ ಪ್ರಕಟಿಸಬೇಕು. ಇಲ್ಲದಿದ್ದರೆ ಮುಂದಾಗುವ ಅನಾಹುತಗಳಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ ಹೊಣೆಯಾಗಲಿದ್ದಾರೆ ಎಂದರು.

ರುದ್ರೇಶ್ ಹತ್ಯೆ ಮೂಲಕ ಹಿಂದೂ ಸಂಘಟನೆಗಳನ್ನು ಬೆದರಿಸುವ ತಂತ್ರ ನಡೆಸಲಾಗುತ್ತಿದೆ. ಕೋಮುಗಲಭೆ ಹಬ್ಬಿಸುವ ಪಿತೂರಿಯೂ  ಇದರ ಹಿಂದೆ ಇದೆ. ಕೇರಳದಲ್ಲಿ ಆರ್ಎಸ್‌ಎಸ್‌ ಕಾರ್ಯಕರ್ತರ ಹತ್ಯೆ ಘಟನೆಗಳು ನಡೆದಿವೆ. ಈಗ ಇಂತಹ ಕೃತ್ಯಗಳು ಕರ್ನಾಟಕದಲ್ಲೂ ಆರಂಭವಾಗಿವೆ ಎಂದರು.

ಬಿಜೆಪಿ ನಡೆಸುತ್ತಿರುವ ಶಾಂತಿಯುತ ಹೋರಾಟಕ್ಕೆ ಕಾಂಗ್ರೆಸ್‌ ಸರ್ಕಾರ ಮಣಿಯುವುದಿಲ್ಲ.  ಒಂದು ವಾರದ ಒಳಗೆ ರುದ್ರೇಶ್‌ ಹಂತಕರನ್ನು ಬಂಧಿಸದೇ ಇದ್ದರೆ ಕರ್ನಾಟಕ ಬಂದ್‌ಗೆ ಕರೆ ನೀಡಬೇಕಾಗುತ್ತದೆ. ಇದೇ 26 ರಂದು ರಾಯಚೂರಿನಲ್ಲಿ ಏರ್ಪಡಿಸಿರುವ ಸಮಾವೇಶದ ಬಳಿಕ ಬಂದ್‌ಗೆ ದಿನಾಂಕ ನಿಗದಿ ಮಾಡಲಾಗುವುದು ಎಂದು ಯಡಿಯೂರಪ್ಪ ಹೇಳಿದರು.

ಬಿಜೆಪಿ ಶಾಸಕ ಆರ್.ಅಶೋಕ್ ಮಾತನಾಡಿ, ಕಾಂಗ್ರೆಸ್‌ ಸರ್ಕಾರಕ್ಕೂ ಖಾಕಿ ಬಟ್ಟೆಗೂ ಆಗಿಬರುವುದಿಲ್ಲ ಎಂಬಂತಿದೆ. ಪೊಲೀಸರ ಆತ್ಮಹತ್ಯೆ, ರಾಜೀನಾಮೆಗಳಿಂದ ಇದು ಸಾಬೀತಾಗುತ್ತಿದೆ. ರಾಜ್ಯದಲ್ಲಿ ಸರ್ಕಾರ ಸತ್ತು ಹೋಗಿದೆ ಎಂದು ಅವರು ಟೀಕಿಸಿದರು.

ಈಶ್ವರಪ್ಪ ಗೈರು
ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ ಎಂದು ಆಪಾದಿಸಿ ಬಿಜೆಪಿ ನಡೆಸಿದ ಇಡೀ ದಿನದ ಧರಣಿಯಲ್ಲಿ ವಿಧಾನಪರಿಷತ್ತಿನ ವಿರೋಧ ಪಕ್ಷದ ನಾಯಕ ಕೆ.ಎಸ್‌. ಈಶ್ವರಪ್ಪ ಪಾಲ್ಗೊಂಡಿರಲಿಲ್ಲ. ಈಶ್ವರಪ್ಪ ಬೆಂಗಳೂರಿನಲ್ಲಿಯೇ  ಇದ್ದರು. ಅಲ್ಲದೆ, ಸಂಜೆ ನಡೆದ ಸರ್ವಪಕ್ಷ ಸಭೆಯಲ್ಲಿ ಭಾಗವಹಿಸಿದ್ದರು. ಈಶ್ವರಪ್ಪ ಹೊರತು ಉಳಿದ ಎಲ್ಲಾ ಬಿಜೆಪಿ ನಾಯಕರು ಧರಣಿಯಲ್ಲಿ ಪಾಲ್ಗೊಂಡಿದ್ದರು.

65 ವರ್ಷಗಳಲ್ಲಿ ಕಂಡ ಕೆಟ್ಟ ಸರ್ಕಾರ
ಕಳೆದ 65 ವರ್ಷಗಳಲ್ಲಿ ಕಂಡ ಅತ್ಯಂತ ಕೆಟ್ಟ ಸರ್ಕಾರ ಇದಾಗಿದೆ ಎಂದು ಕೇಂದ್ರ ಸಚಿವ ಡಿ.ವಿ. ಸದಾನಂದಗೌಡ ಟೀಕಿಸಿದರು. ರಾಜಕೀಯ ವಿರೋಧಿಗಳನ್ನು ಕೊಲೆಗೈಯಲಾಗುತ್ತಿದೆ. ರಾಜ್ಯದಲ್ಲಿ ಕಾಂಗ್ರೆಸ್‌ನ ಕೊನೆಯ ಸರ್ಕಾರ ಇದಾಗಲಿದೆ ಎಂದರು. ಬೆದರಿಕೆ ರಾಜಕಾರಣಕ್ಕೆ ಆರೆಸ್ಸೆಸ್‌ ಕಾರ್ಯಕರ್ತರು ಹೆದರುವುದಿಲ್ಲ. ನಮ್ಮ ತಾಳ್ಮೆ ಪರೀಕ್ಷಿಸಿದರೆ ಪರಿಣಾಮ ಗಂಭೀರವಾಗಿರಲಿದೆ ಎಂದು ಎಚ್ಚರಿಸಿದರು.

* ರಾಜ್ಯದಲ್ಲಿ ಪರಿಸ್ಥಿತಿ ಉತ್ತಮವಾಗಿಲ್ಲ. ಇಂತಹ ಕಾಲದಲ್ಲಿ ಟಿಪ್ಪು ಜಯಂತಿ ಆಚರಿಸುವ ದುಸ್ಸಾಹಸಕ್ಕೆ ಸರ್ಕಾರ ಕೈ ಹಾಕಬಾರದು.

–ಬಿ.ಎಸ್‌. ಯಡಿಯೂರಪ್ಪ, ರಾಜ್ಯ ಬಿಜೆಪಿ ಅಧ್ಯಕ್ಷ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT