ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಣ್ಣ ಮೃಗಾಲಯಗಳ ಅಭಿವೃದ್ಧಿಗೆ ಒತ್ತು

ಬನ್ನೇರುಘಟ್ಟದಲ್ಲಿ ಜೀಬ್ರಾ ಆವರಣ l ಇನ್ಫೊಸಿಸ್‌ ಪ್ರತಿಷ್ಠಾನದ ಅಧ್ಯಕ್ಷೆ ಸುಧಾ ಮೂರ್ತಿ ಆಶಯ
Last Updated 19 ಅಕ್ಟೋಬರ್ 2016, 19:55 IST
ಅಕ್ಷರ ಗಾತ್ರ

ಬೆಂಗಳೂರು: ‘ಕಲಬುರ್ಗಿ, ಗದಗ, ಬೆಳಗಾವಿ, ಬಳ್ಳಾರಿ ಹೀಗೆ ರಾಜ್ಯದಲ್ಲಿರುವ ಸಣ್ಣ ಮೃಗಾಲಯಗಳ ಅಭಿವೃದ್ಧಿ ಬಗ್ಗೆ ಚಿಂತಿಸುತ್ತಿದ್ದೇವೆ’  ಎಂದು ಇನ್ಫೊಸಿಸ್‌ ಪ್ರತಿಷ್ಠಾನದ ಅಧ್ಯಕ್ಷೆ ಸುಧಾ ಮೂರ್ತಿ ಹೇಳಿದರು.

ಬನ್ನೇರುಘಟ್ಟ ಜೈವಿಕ ಉದ್ಯಾನದಲ್ಲಿ ಬುಧವಾರ ಹೇಸರಗತ್ತೆ (ಜೀಬ್ರಾ) ಆವರಣವನ್ನು ಉದ್ಘಾಟಿಸಿ ಅವರು ಮಾತನಾಡಿದರು. ‘ಮೃಗಾಲಯದ ಅಧಿಕಾರಿಗಳು ಮೂಲಸೌಕರ್ಯಕ್ಕೆ ಸಂಬಂಧಿಸಿದಂತೆ ಯಾವುದಾದರೂ ನೆರವು ಕೇಳಿದರೆ ಅದನ್ನು ಪ್ರತಿಷ್ಠಾನದ ವತಿಯಿಂದ ಕೊಡಲಾಗುವುದು’ ಎಂದು ಹೇಳಿದರು.

‘ಉದ್ಯಾನವನಕ್ಕೆ ಭೇಟಿ ನೀಡುತ್ತಿದ್ದ ಎಷ್ಟೋ ಪ್ರವಾಸಿಗರು, ವಿದ್ಯಾರ್ಥಿಗಳು ಸಫಾರಿಗೆ ಹೋಗಲು ಆಗದೆ ಹುಲಿ, ಸಿಂಹ ಸೇರಿದಂತೆ ಇತರೆ ಕೆಲ ಪ್ರಾಣಿಗಳನ್ನು ನೋಡಲು ಸಾಧ್ಯವಾಗುತ್ತಿರಲಿಲ್ಲ. ಕೇವಲ ಮೃಗಾಲಯದಲ್ಲಿದ್ದ ಕೋತಿ, ಹಾವು, ಕಾಡೆಮ್ಮೆ, ಆನೆ ಹೀಗೆ ಕೆಲವೇ ಪ್ರಾಣಿಗಳನ್ನು ನೋಡಿಕೊಂಡು ನಿರಾಸೆಯಿಂದ ವಾಪಾಸ್ಸಾಗುತ್ತಿದ್ದರು’ ಎಂದರು.

‘ಅದಕ್ಕಾಗಿ ಮೃಗಾಲಯದ ಆವರಣದಲ್ಲೇ ಹುಲಿಗಳನ್ನು ನೋಡಲು ಸುಮಾರು ₹ 1.25 ಕೋಟಿ ವೆಚ್ಚದಲ್ಲಿ ಹುಲಿ ಆವರಣ ನಿರ್ಮಿಸಿದ್ದರು. ಇದೀಗ ಪ್ರತಿಷ್ಠಾನದ ವತಿಯಿಂದ ₹ 63 ಲಕ್ಷ ವೆಚ್ಚದಲ್ಲಿ ಜಿಬ್ರಾ ಆವರಣ ನಿರ್ಮಿಸಲಾಗಿದೆ’ ಎಂದು  ಹೇಳಿದರು.

‘₹67 ಲಕ್ಷ ವೆಚ್ಚದಲ್ಲಿ ಜಿರಾಫೆ ಆವರಣವನ್ನು ನಿರ್ಮಿಸಲಾಗಿದ್ದು, ಜಿರಾಫೆಗಳನ್ನು ಕರೆತರಬೇಕಿದೆ. ₹1.5 ಕೋಟಿ ವೆಚ್ಚದಲ್ಲಿ ಬಿಳಿ ಸಿಂಹದ ಆವರಣ ನಿರ್ಮಿಸಲಾಗುವುದು. ಒಟ್ಟು ಉದ್ಯಾನದ ಮೂಲಸೌಕರ್ಯ ಅಭಿವೃದ್ಧಿಗೆ ಪ್ರತಿಷ್ಠಾನದ ವತಿಯಿಂದ ಒಟ್ಟು 39.5 ಲಕ್ಷ ನೆರವು ನೀಡಲಾಗಿದೆ’ ಎಂದು  ತಿಳಿಸಿದರು.

ಪ್ರಧಾನ ಮುಖ್ಯ ಅರಣ್ಯಸಂರಕ್ಷಣಾಧಿಕಾರಿ ಬಿ.ಜಿ. ಹೊಸಮಠ ಅವರು ಮಾತನಾಡಿ, ‘ಈಗ ನಿರ್ಮಿಸಿರುವ ಜಿಬ್ರಾ ಆವರಣಕ್ಕೆ ಇನ್ಫೊಸಿಸ್‌ ಪ್ರತಿಷ್ಠಾನದ ಆವರಣ ಎಂದು ಹೆಸರಿಡಲಾಗಿದೆ. ಪ್ರಾಣಿ ವಿನಿಮಯ ಕಾರ್ಯಕ್ರಮದ ಅಡಿಯಲ್ಲಿ ಇಸ್ರೇಲ್‌ನ ಮೃಗಾಲಯಗಳಿಂದ  ನಾಲ್ಕು ಹೇಸರಗತ್ತೆ (2ಗಂಡು, 2 ಹೆಣ್ಣು) ಮರಿಗಳನ್ನು ಪಡೆದಿದ್ದೇವೆ’ ಎಂದು ಹೇಳಿದರು. 

ಬನ್ನೇರುಘಟ್ಟ ಜೈವಿಕ ಉದ್ಯಾನದ ಕಾರ್ಯನಿರ್ವಾಹಕ ನಿರ್ದೇಶಕ ಸಂತೋಷ್‌ ಕುಮಾರ್‌ ಅವರು ಮಾತನಾಡಿ, ‘ಆವರಣದ ನಿರ್ಮಾಣದ ತಡವಾಗಿದ್ದರಿಂದ 10 ಹತ್ತು ತಿಂಗಳಿಂದ ಹೇಸರಗತ್ತೆಗಳನ್ನು ಕಾಡಿನಲ್ಲಿ ಇರಿಸಲಾಗಿತ್ತು. ಮುಂದಿನ ಯೋಜನೆಗಳು ತಡವಾಗದಂತೆ ಎರಡೂ ಕೆಲಸಗಳು ಒಟ್ಟೊಟ್ಟಿಗೆ ನಡೆಯುವಂತೆ ನೋಡಿಕೊಳ್ಳಲಾಗುವುದು’ ಎಂದರು.

ಹೇಸರಗತ್ತೆ ಪಾಲಕರು: 10 ತಿಂಗಳ ಹಿಂದೆ ಹೇಸರಗತ್ತೆಯನ್ನು ಮೃಗಾಲಯಕ್ಕೆ ಕೆರೆತಂದಾಗಿನಿಂದಲೂ ಹರೀಶ್ಚಂದ್ರ ಮತ್ತು ಮಂಜುನಾಥ್‌ ಅವರು ಅವುಗಳ ಆರೈಕೆ ಮಾಡುತ್ತಿದ್ದಾರೆ. ‘18 ವರ್ಷದಿಂದ ನಾನು ಪ್ರಾಣಿಗಳ ಪಾಲನೆ ಮಾಡುತ್ತಿದ್ದೇನೆ. ಮೊದಲು ರಕ್ಷಣಾ ಕೇಂದ್ರ ಮತ್ತು ಸಫಾರಿಯಲ್ಲಿ ಹುಲಿಗಳನ್ನು ನೋಡಿಕೊಳ್ಳುತ್ತಿದ್ದೆ. ಈಗ ಹೇಸರಗತ್ತೆಗಳ ಆರೈಕೆ ಮಾಡುತ್ತಿದ್ದೇನೆ. ಈಗಾಗಲೇ ಅವುಗಳು ನನ್ನೊಂದಿಗೆ ಹೊಂದಿಕೊಂಡಿವೆ’ ಎಂದು ಹರೀಶ್ಚಂದ್ರ ತಿಳಿಸಿದರು.

ವನ್ಯಜೀವಿಗಳಿಂದ ಕಂಗೊಳಿಸಲಿದೆ ಬನ್ನೇರುಘಟ್ಟ ಉದ್ಯಾನವನ

ಉದ್ಯಾನಕ್ಕೆ ಇನ್ನೂ ಹೆಚ್ಚಿನ ಜೀವಿಗಳನ್ನು ಪರಿಚಯಿಸುವ ನಿಟ್ಟಿನಲ್ಲಿ ಜಿರಾಫೆ, ಆಫ್ರಿಕಾದ ಬಿಳಿ ಸಿಂಹ,  ನಾಯಿಯಂಥ ಮೂತಿ ಹೊಂದಿರುವ ಕೋತಿ (ಬಬೂನ್ಸ್‌), ದಕ್ಷಿಣ ಆಫ್ರಿಕಾದ ದೊಡ್ಡ ಜಿಂಕೆಗಳನ್ನು (ಇಲಾಂಡ್‌) ಕರೆತರಲಾಗುತ್ತಿದೆ.

‘ಅದಕ್ಕಾಗಿ ಹೊಸ ಆವರಣಗಳ ನಿರ್ಮಾಣ ಮಾಡಲಾಗುತ್ತಿದ್ದು, ಜರ್ಮನಿಯ ಮೃಗಾಲಯ ಪ್ರಾಣಿಗಳನ್ನು ದಾನ ನೀಡಲು ಒಪ್ಪಿದೆ. ಆವರಣದ ನಿರ್ಮಾಣದ ಬಳಿಕ ಪ್ರಾಣಿಗಳನ್ನು ತರಲಾಗುವುದು. ಪ್ರಾಣಿಗಳ ವಿನಿಮತ ಕಾರ್ಯಕ್ರಮದ ಅಡಿಯಲ್ಲಿ ಎರಡು ಆನೆಗಳನ್ನು ನೀಡಿ ಎರಡು ಜಿರಾಫೆಗಳನ್ನು ತರುತ್ತಿದ್ದೇವೆ’ ಎಂದು ಬನ್ನೇರುಘಟ್ಟ ಜೈವಿಕ ಉದ್ಯಾನದ ಕಾರ್ಯನಿರ್ವಾಹಕ ನಿರ್ದೇಶಕ ಸಂತೋಷ್‌ ಕುಮಾರ್‌ ತಿಳಿಸಿದರು.

ನೂತನ ಆವರಣಗಳು

‘ಕೇಂದ್ರೀಯ ಮೃಗಾಲಯ ಪ್ರಾಧಿಕಾರದ ಗುಣಮಟ್ಟದ ಪ್ರಕಾರ, ಮಂಗ ಮತ್ತು ಹಿಮಾಲಯ ಕರಡಿಗಳಿಗಾಗಿ ದೊಡ್ಡ ತೆರದ ಆವರಣಗಳನ್ನು ನಿರ್ಮಿಸಲಾಗುತ್ತಿದೆ. ನಮ್ಮಲ್ಲೇ ಮೊದಲು ಈ ರೀತಿಯ ಆವರಣ ನಿರ್ಮಿಸಲಾಗುತ್ತಿದೆ. ಪ್ರಾಯೋಗಿಕವಾಗಿ  ಕೋತಿಗಳನ್ನು ಈ ಆವರಣದಲ್ಲಿ ಬಿಡಲಾಗಿತ್ತು. ಆದರೆ ಅದು ಹಾರಿ ಹೊರ ಬಂದಿದ್ದರಿಂದ ಅವುಗಳನ್ನು ಮತ್ತೆ ಸ್ಥಳಾಂತರಿಸಲಾಯಿತು’ ಎಂದು ಸಂತೋಷ್‌ ತಿಳಿಸಿದರು.

‘ತೋಳ ಮತ್ತು ನರಿಗಳಿಗೆ ಹೊಸ ಆವರಣ ನಿರ್ಮಿಸುವ ಬಗ್ಗೆ ಪ್ರಸ್ತಾವನೆ ಸಲ್ಲಿಸಲಾಗಿದ್ದು, ಅನುಮತಿಗಾಗಿ ಎದುರು ನೋಡುತ್ತಿದ್ದೇವೆ. ಅದರೊಟ್ಟಿಗೆ ಈಗ ಇರುವ 1.8 ಮೀಟರ್‌ ಎತ್ತರ ಮೃಗಾಲಯದ ಗಡಿ ಗೋಡೆಗಳನ್ನು 25 ಮೀಟರ್‌ಗೆ ಎತ್ತರಿಸುವ ಬಗ್ಗೆಯೂ ಪ್ರಸ್ತಾವನೆ ಸಲ್ಲಿಸಲಾಗಿದೆ’ ಎಂದರು.

* ಹೇಸರಗತ್ತೆಗಳ ಸಂಖ್ಯೆ: 4
* ಹೆಸರು: ಭರತ, ಪೃಥ್ವಿ, ಕಾವೇರಿ, ಹೇಮಾವತಿ
* ವಯಸ್ಸು: 2 ವರ್ಷ
* ಜೀಬ್ರಾ ಆವರಣದ ವೆಚ್ಚ: ₹ 63 ಲಕ್ಷ
* ವಿಸ್ತೀರ್ಣ: ಸುಮಾರು 1 ಎಕರೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT