ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಮೃತ ಗಳಿಗೆ!

Last Updated 20 ಅಕ್ಟೋಬರ್ 2016, 19:30 IST
ಅಕ್ಷರ ಗಾತ್ರ

‘ಬದುಕು ಶುರುವಾಗುವುದೇ ಶೂನ್ಯದಿಂದ. ನಮ್ಮ ಬದುಕು ಶೂನ್ಯದಾಕಾರದಲ್ಲಿ ಸುತ್ತಿ ಮೂಲ ಬಿಂದುವಿಗೆ ಮರಳುತ್ತದೆ. ಆದರೆ ಶೂನ್ಯವೆಂದರೆ ಏನೂ ಇಲ್ಲವೆಂದಲ್ಲ. ಶೂನ್ಯಕ್ಕೇ ಬೆಲೆ ಜಾಸ್ತಿ’.

ನಿರ್ದೇಶಕ ಅಮೃತ್‌ ತಮ್ಮ ಸಿನಿಮಾ ಕುರಿತ ಮಾತನ್ನು ಆರಂಭಿಸಿದ್ದು ‘ಶೂನ್ಯ’ದಿಂದಲೇ. ಅದಕ್ಕೆ ಕಾರಣವೂ ಇತ್ತು. ಅವರ ನಿರ್ದೇಶನದ ಸಿನಿಮಾ ‘ರಿಕ್ತ’ದ ಕಥೆಯೂ ಶೂನ್ಯದಿಂದಲೇ ಆರಂಭವಾಗುವ, ಅದರ ಸುತ್ತಲೇ ಸುತ್ತುವ ಪಾತ್ರಗಳ ಚಿತ್ರಣ.

ಅಂದಹಾಗೆ, ‘ರಿಕ್ತ’ ಪದದ ಅರ್ಥವೂ ‘ಶೂನ್ಯ’ ಎಂದು. ಆದರೆ ಹೆಚ್ಚಿನವರಿಗೆ ಈ ಪದದ ಪರಿಚಯ ಇಲ್ಲ ಎನ್ನುತ್ತಾರೆ ಅಮೃತ್‌.

‘ರಿಕ್ತ’ ಚಿತ್ರದ ಟ್ರೇಲರ್ ಮತ್ತು ಹಾಡುಗಳು ಈಗಾಗಲೇ ಸದ್ದು ಮಾಡುತ್ತಿವೆ. ದೆವ್ವ–ಭೂತದ ಸಿನಿಮಾಗಳ ಪರ್ವಕಾಲವಿದು. ‘ರಿಕ್ತ’ ಸಹ ದೆವ್ವ–ಭೂತದ ಕಥಾನಕವೇ. ಆದರೆ ಉಳಿದ ಸಿನಿಮಾಗಳ ಸಾಲಿಗೆ ಸೇರುವುದಿಲ್ಲ ಎನ್ನುತ್ತಾರೆ ಅವರು.

ಇಲ್ಲಿ ಭಯ ಹುಟ್ಟಿಸುವ ದೃಶ್ಯಗಳಿವೆ, ಕುತೂಹಲ ಮೂಡಿಸುವ ಥ್ರಿಲ್ಲರ್‌ ಅಂಶಗಳಿವೆ, ಪ್ರೀತಿ ಪ್ರೇಮದ ನವಿರು ಕನವರಿಕೆ ಚಿತ್ರದಲ್ಲಿದೆ. ಇವುಗಳಲ್ಲದೆಯೂ ಹೊಟ್ಟೆಹುಣ್ಣಾಗಿಸುವಂತೆ ನಗಿಸುವ ಶುದ್ಧ ಹಾಸ್ಯವಿದೆ. ಹೀಗಾಗಿ ಈ ಸಿನಿಮಾ ಹೆದರಿಸುವುದರ ಜೊತೆಗೆ ಮನಪೂರ್ತಿ ನಕ್ಕು ಹಗುರಾಗಿಸುತ್ತದೆ ಎಂಬ ಭರವಸೆ ನೀಡುತ್ತಾರೆ ಅಮೃತ್‌.

ಸಿನಿಮಾ ನಿರೂಪಣೆ ‘ರಿವರ್ಸ್‌’ ಸ್ವರೂಪದಲ್ಲಿದೆ. ಚಿತ್ರ ಮೂರು ಭಾಗಗಳಲ್ಲಿ ಎದುರಾಗುತ್ತದೆ. ಮೊದಲ ಭಾಗ ಪ್ರೇಮಕತೆಯಾದರೆ, ಎರಡನೆ ಭಾಗದಲ್ಲಿ ಹಾರರ್‌ ಮತ್ತು ಸಸ್ಪೆನ್ಸ್‌ ಸನ್ನಿವೇಶಗಳು ಎದುರಾಗುತ್ತವೆ. ಮೂರನೇ ಭಾಗ ಕೌತುಕ ಮೂಡಿಸುವ ಥ್ರಿಲ್ಲರ್‌ ಕಥನ ಸಾಗುತ್ತದೆ.

ಸಾಮಾನ್ಯವಾಗಿ ದೆವ್ವಗಳ ಮುಖ ನೋಡಿದಾಗ ಭಯ ಹುಟ್ಟುತ್ತದೆ. ಆದರೆ ಈ ದೆವ್ವದ ಮುಖ ನಗು ಉಕ್ಕಿಸುತ್ತದೆ. ಇದೊಂದು ರೀತಿ ಪ್ರೀತಿಯನ್ನು ಉಕ್ಕಿಸುವ ಮುದ್ದು ದೆವ್ವ. ಆದರೆ ಭಯ ಹುಟ್ಟಿಸುವ ಗುರಿಯನ್ನೂ ಮರೆಯುವುದಿಲ್ಲ. ಈ ಪ್ರೇಮಿ ದೆವ್ವಕ್ಕೆ ‘ಮುಂಗಾರುಮಳೆ’ಯ ‘ದೇವದಾಸ’ನೂ ಜತೆಯಾಗುತ್ತಾನೆ. ಇವುಗಳನ್ನು ಗಟ್ಟಿಯಾದ ಕಥೆ ಹಿಡಿದಿಟ್ಟುಕೊಳ್ಳುತ್ತದೆ.

‘ಸಂಚಾರಿ’ ವಿಜಯ್‌ ಇಲ್ಲಿ ನಗಿಸುವ, ಹೆದರಿಸುವ ದೆವ್ವ. ಅವರ ಪಾತ್ರಕ್ಕೆ ಇನ್ನಷ್ಟು ಶೇಡ್‌ಗಳೂ ಇವೆ. ಅವರು ಪಾತ್ರವೇ ಆಗಿ ಹೋಗಿದ್ದಾರೆ. ಭೂತದ ಮೇಕಪ್‌ನಲ್ಲಿ 20–22 ಗಂಟೆ ಕೂರಬೇಕಾದರೂ ತುಸುವೂ ಬೇಸರಿಸದೆ ಸಹಕರಿಸಿದರು ಎಂದು ಹೊಗಳುತ್ತಾರೆ ಅಮೃತ್‌.

‘ನಾನು ಅವನಲ್ಲ, ಅವಳು’ ರೀತಿಯ ಚಿತ್ರದಲ್ಲಿ ಕಂಡ ವಿಜಯ್‌, ಈ ಚಿತ್ರದಲ್ಲಿ ಇನ್ನಷ್ಟು ವಿಭಿನ್ನವಾಗಿ ಕಾಣಿಸಿಕೊಂಡಿದ್ದಾರೆ. ಕನ್ನಡದಲ್ಲಿ ಮೊದಲ ಬಾರಿಗೆ ನಟಿಸಿರುವ ನಟಿ ಅದ್ವಿಕಾ, ವಿಜಯ್‌ ಅವರಂತಹ ನಟರಿಗೂ ಪೈಪೋಟಿ ನೀಡುವಂತೆ ಅಭಿನಯ ನೀಡಿದ್ದಾರೆ ಎಂಬ ಮೆಚ್ಚುಗೆ ಅವರದು.

ನಿರ್ದೇಶನದಲ್ಲಿ ಅಮೃತ್‌ ಅವರಿಗಿದು ಮೊದಲ ಅನುಭವ. 2008ರಲ್ಲಿ ‘ಆದರ್ಶ ಫಿಲಂ ಇನ್‌ಸ್ಟಿಟ್ಯೂಟ್‌’ನಲ್ಲಿ ನಿರ್ದೇಶನದ ಕಲೆಯನ್ನು ಕಲಿತ ಅಮೃತ್‌ – ‘ಶಿವಲಿಂಗ’, ‘ಬೃಂದಾವನ’ಗಳಂತಹ ಸಿನಿಮಾಗಳಲ್ಲಿ, ಕೆಲವು ಧಾರಾವಾಹಿಗಳಲ್ಲಿ ಕೆಲಸ ಮಾಡಿ ಅನುಭವ ವೃದ್ಧಿಸಿಕೊಂಡವರು. ಕಿರುಚಿತ್ರಗಳು ನಿರ್ದೇಶನ ಕ್ಷೇತ್ರಕ್ಕೆ ಕಾಲಿಡುವ ಅವರ ಬಯಕೆಗೆ ಮುನ್ನುಡಿ ಬರೆದವು.

ಸೆನ್ಸಾರ್‌ ಮಂಡಳಿ ‘ರಿಕ್ತ’ಕ್ಕೆ ಯು/ಎ ಪ್ರಮಾಣಪತ್ರ ನೀಡಿದೆ. ತಮ್ಮ ಚೊಚ್ಚಿಲ ನಿರ್ದೇಶನದ ಚಿತ್ರ ಹಾರರ್‌ ಸಿನಿಮಾಗಳ ಇನ್ನೊಂದು ಆಯಾಮಕ್ಕೆ ಸ್ಫೂರ್ತಿ ನೀಡಲಿದೆ ಎಂಬ ಭರವಸೆ ಅವರದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT