ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮರಗಳ ಪರ ಮಾತನಾಡುವವರು ಯಾರು?

ಸ್ಥಳೀಯ ಸಮುದಾಯಗಳ ಶ್ರಮ– ಸಹಕಾರದಿಂದ ಮಾತ್ರ ಮತ್ತೆ ಅರಣ್ಯಭರಿತ ಹೈಟಿ ಸಾಧ್ಯ
Last Updated 21 ಅಕ್ಟೋಬರ್ 2016, 3:02 IST
ಅಕ್ಷರ ಗಾತ್ರ

ಡರ್‌ಹಾಂ, ನಾರ್ಥ್ ಕೆರೋಲಿನಾ: ಕೆಲವು ವರ್ಷಗಳ ಹಿಂದೆ ಹೈಟಿಯ ರಾಜಧಾನಿ ಪೋರ್ಟ್-ಒ-ಪ್ರಿನ್ಸ್‌ನತ್ತ ವಿಮಾನದಲ್ಲಿ ಹೋಗುತ್ತಿದ್ದೆ. ಆ ದೇಶಕ್ಕೆ ಮೊದಲ ಬಾರಿಗೆ ಭೇಟಿ ನೀಡುತ್ತಿದ್ದ ಸಮಾಜ ಸೇವಾ ಕಾರ್ಯಕರ್ತೆಯೊಬ್ಬರ ಪಕ್ಕದ ಆಸನದಲ್ಲಿ ಕುಳಿತಿದ್ದೆ. ಪರ್ವತಗಳ ಮೇಲಿನಿಂದ ವಿಮಾನ ಸಾಗುತ್ತಿದ್ದಾಗ ಕೆಳಗಿನ ಗುಡ್ಡಗಳನ್ನು ತೋರಿಸುತ್ತಾ ‘ಕೆಳಗೆ ಮರಗಳು ಕಾಣಿಸುತ್ತಿವೆ, ಇಲ್ಲಿ ಮರಗಳೇ ಇಲ್ಲ ಎಂದು ನನಗೆ ಕೆಲವರು ಹೇಳಿದ್ದರು’ ಎಂದು ಅವರು ಹೇಳಿದರು.

ಈ ದೇಶದ ಬಗ್ಗೆ ವಿದೇಶಿಯರು ವಿವರಣೆ ನೀಡುವಾಗ ಇಲ್ಲಿನ ಅರಣ್ಯ ಬಹುತೇಕ ಸಂಪೂರ್ಣವಾಗಿ ನಾಶವಾಗಿದೆ ಎಂಬ ಚಿತ್ರಣವನ್ನು ಕಟ್ಟಿಕೊಡುತ್ತಾರೆ. ಡೊಮಿನಿಯನ್ ಗಣರಾಜ್ಯ ಮತ್ತು ಹೈಟಿ ನಡುವೆ ಇರುವ ಗಡಿಯ ಚಿತ್ರವೊಂದನ್ನು ನ್ಯಾಷನಲ್ ಜಿಯೊಗ್ರಫಿಕ್ ನಿಯತಕಾಲಿಕವು 1987ರಲ್ಲಿ ಪ್ರಕಟಿಸಿತ್ತು. ಮರಗಳು ಇಲ್ಲ ಎನ್ನುವವರಿಗೆ ಇದುವೇ ಮುಖ್ಯ ಆಧಾರ. ಚಿತ್ರದ ಪ್ರಕಾರ ಒಂದು ಭಾಗದಲ್ಲಿ ಅರಣ್ಯ ಇದ್ದರೆ ಮತ್ತೊಂದು ಭಾಗ ಸಂಪೂರ್ಣ ಬರಡು. ಹೈಟಿಯ ಜನರು ಅಕ್ಷರಶಃ ಮರಗಳನ್ನೇ ತಿನ್ನುತ್ತಾರೆ ಎಂಬುದು ಹೊರಗಡೆ ಇರುವ ಒಂದು ಸಾಮಾನ್ಯ ಕಲ್ಪನೆ. ಮ್ಯಾಥ್ಯೂ ಚಂಡಮಾರುತದ ಪರಿಣಾಮವನ್ನು ವಿವರಿಸುತ್ತಾ ಕಳೆದ ವಾರ ಫ್ಲಾರಿಡಾದಲ್ಲಿ ಸಿಕ್ಕ ಹವಾಮಾನ ತಜ್ಞರೊಬ್ಬರು ಹೀಗೆ ಹೇಳಿದರು: ‘ಹೈಟಿಯಲ್ಲಿ ಇರುವ ಜನರು ಎಷ್ಟು ಹಸಿದಿದ್ದಾರೆ ಎಂದರೆ ಅಲ್ಲಿನ ಮಕ್ಕಳು ಕೂಡ ಮರಗಳನ್ನೇ ತಿನ್ನುತ್ತಾರೆ’.

ಹೈಟಿಯ ಮೂರನೇ ಒಂದು ಭಾಗ ಮರಗಳಿಂದ ಆವೃತವಾಗಿದೆ. ಮರಗಳು ಕಡಿಮೆ ಇರುವ ಹಲವು ಪ್ರದೇಶಗಳು ಮೊದಲಿನಿಂದಲೂ ಹಾಗೆಯೇ ಇವೆ.  ದೇಶದಲ್ಲಿ ಅರಣ್ಯ ನಾಶದ ಸಮಸ್ಯೆ ನಿಜವಾಗಿಯೂ ಇದೆ. ಆದರೆ ಈ ಸಮಸ್ಯೆ ಹೊರಜಗತ್ತು ಕಲ್ಪಿಸಿಕೊಂಡದ್ದಕ್ಕಿಂತ ಹೆಚ್ಚು ಸಂಕೀರ್ಣವಾದ ಬಿಕ್ಕಟ್ಟು.

ಅಪಾರ ನಾಶ ಉಂಟು ಮಾಡಿದ ಚಂಡಮಾರುತ ಬೀಸಿದ ನಂತರ, ದೇಶದಾದ್ಯಂತ ಬೆಳೆಗಳು ನಾಶವಾಗಿವೆ. ಹೈಟಿಯ ಜನರಿಗೆ ಮನೆಗಳ ಮರು ನಿರ್ಮಾಣಕ್ಕೆ ಮತ್ತು ನೀರು, ಆಹಾರ ಪಡೆದುಕೊಳ್ಳಲು ತುರ್ತು ಸಹಾಯದ ಅಗತ್ಯ ಇದೆ. ಚಂಡಮಾರುತಗಳು ಮತ್ತು ಬಿರುಗಾಳಿಗಳು ಉಂಟು ಮಾಡುವ ಪ್ರವಾಹದ ಸಮಸ್ಯೆಗಳನ್ನು ಅರಣ್ಯ ನಾಶವು ಇನ್ನಷ್ಟು ತೀವ್ರವಾಗಿಸುತ್ತದೆ. ಹಾಗಾಗಿ ಅರಣ್ಯ ನಾಶಕ್ಕೆ ಹೆಚ್ಚು ಗಂಭೀರವಾದ ಮತ್ತು ದೀರ್ಘಾವಧಿ ಪರಿಹಾರ ಕಂಡುಕೊಳ್ಳುವುದಕ್ಕೂ ಇದು ನಿರ್ಣಾಯಕವಾದ ಸಂದರ್ಭ. ಇದರ ಮೊದಲ ಹೆಜ್ಜೆಯಾಗಿ, ಅರಣ್ಯ ನಾಶದ ಸಮಸ್ಯೆಯನ್ನು ಸರಳವಾಗಿ ಮತ್ತು ತಪ್ಪು ದಾರಿಗೆಳೆಯುವ ರೀತಿಯಲ್ಲಿ ವಿವರಿಸುವುದನ್ನು ನಿಲ್ಲಿಸಬೇಕು. ಹೈಟಿಯ ಗ್ರಾಮೀಣ ಪ್ರದೇಶದ ಜನರು ಅರಣ್ಯ ನಾಶದ ತಪ್ಪಿತಸ್ಥರೂ ಅಲ್ಲ, ಸಂತ್ರಸ್ತರೂ ಅಲ್ಲ. ಬದಲಿಗೆ, ಅರಣ್ಯ ಸಂರಕ್ಷಣೆ ಮತ್ತು ಮತ್ತೆ ಅರಣ್ಯ ಬೆಳೆಸುವ ಯೋಜನೆಯಲ್ಲಿ ಅವರದ್ದೇ ಮಹತ್ವದ ಪಾತ್ರ.

ಹೈಟಿಯ ಅರಣ್ಯಗಳನ್ನು ನಾಶ ಮಾಡುವ ಕೆಲಸ ಶತಮಾನಗಳ ಹಿಂದೆಯೇ ಆರಂಭವಾಯಿತು. ಫ್ರೆಂಚರು 17ನೇ ಶತಮಾನದಲ್ಲಿ ಈ ದ್ವೀಪವನ್ನು ವಸಾಹತಾಗಿ ಮಾಡಿಕೊಂಡ ನಂತರ ನಾಟಾ ಮತ್ತು ಉರುವಲಿಗಾಗಿ ಮರಗಳನ್ನು ಕಡಿದರು, ಮಹಾಗನಿ ಮರಗಳನ್ನು ಕಡಿದು ಪೀಠೋಪಕರಣ ಮಾಡಿಕೊಂಡರು. 18ನೇ ಶತಮಾನದ ಕೊನೆಯ ಹೊತ್ತಿಗೆ ಜಗತ್ತಿನ ಅತ್ಯಂತ ಲಾಭದಾಯಕ ತೋಟಗಾರಿಕಾ ವಸಾಹತಾಗಿತ್ತು ಹೈಟಿ. ಇಲ್ಲಿನ ಜನಸಂಖ್ಯೆಯಲ್ಲಿ ಹೆಚ್ಚಿನವರು ಗುಲಾಮರಾಗಿದ್ದರು ಮತ್ತು ರಫ್ತಿಗಾಗಿ ಬೇಕಾದಷ್ಟು ಸಕ್ಕರೆ ಮತ್ತು ಕಾಫಿ ಅಲ್ಲಿ ಉತ್ಪಾದನೆಯಾಗುತ್ತಿತ್ತು. ಪಟ್ಟಣಗಳ ಸಮೀಪದ ಗುಡ್ಡಗಳು ಆಗಲೇ ಬೋಳಾಗಿದ್ದವು, ವಸಾಹತು ಪಟ್ಟಣಗಳು ಆಗಾಗ ಪ್ರವಾಹಕ್ಕೆ ತುತ್ತಾಗುತ್ತಿದ್ದವು.

1804ರಲ್ಲಿ ಹೈಟಿ ಸ್ವಾತಂತ್ರ್ಯ ಹೋರಾಟದ ಯಶಸ್ಸಿನ ನಂತರ ದೇಶದ ಭೂಪ್ರದೇಶದ ಮೇಲೆ ಅಲ್ಲಿನ ಮಾಜಿ ಗುಲಾಮರಿಗೆ ಹಕ್ಕು ದೊರಕಿತು ಮತ್ತು ಅರಣ್ಯ ನಾಶ ಎಗ್ಗಿಲ್ಲದೆ ಮುಂದುವರಿಯಿತು. ಅವರು ಕಾಫಿ, ಹಣ್ಣುಗಳು ಮತ್ತು ನಾಟಾಕ್ಕಾಗಿ ತಮ್ಮ ಹೊಲಗಳಲ್ಲಿ ಮರಗಳನ್ನು ಬೆಳೆದರು. ಅದು ಮಾರುಕಟ್ಟೆ ಮತ್ತು ಬಂದರುಗಳ ಜಾಲಗಳಲ್ಲಿ ಬೇರೂರಿದ್ದ, ವಿಸ್ತಾರವಾಗುತ್ತಲೇ ಇದ್ದ ಅರ್ಥ ವ್ಯವಸ್ಥೆಯ ಭಾಗವಾಗಿತ್ತು. ಬಣ್ಣ ತಯಾರಿಕೆಗಾಗಿ ಹೈಟಿಯಿಂದ ಮರಗಳ ರಫ್ತು 19ನೇ ಶತಮಾನವಿಡೀ ನಡೆಯಿತು.

1930ರ ದಶಕದ ಆರಂಭದಲ್ಲಿ ಅಮೆರಿಕ ಈ ಪ್ರದೇಶದ ಮೇಲೆ ಆಧಿಪತ್ಯ ಸ್ಥಾಪಿಸಿದ ಸಂದರ್ಭದಲ್ಲಿ ವಿಮಾನದಿಂದ ತೆಗೆದ ದ್ವೀಪದ ಮೊದಲ ಚಿತ್ರಗಳಲ್ಲಿ ಸಾಕಷ್ಟು ಮರಗಳು ಇರುವುದನ್ನು ಕಾಣಬಹುದು. 1940 ಮತ್ತು 1950ರ ದಶಕಗಳಲ್ಲಿ ಅರಣ್ಯ ನಾಶ ಮತ್ತಷ್ಟು ವೇಗ ಪಡೆದುಕೊಂಡಿತು. ಹೈಟಿಯ ಗ್ರಾಮೀಣ ಪ್ರದೇಶ ಬಡತನದತ್ತ ಜಾರುತ್ತಿರುವುದು ಮತ್ತು ಕಷ್ಟ ಕಾರ್ಪಣ್ಯಗಳ ವರ್ತುಲಕ್ಕೆ ಸಿಲುಕಿ ನರಳುತ್ತಿರುವುದನ್ನು ಹೈಟಿಯ ಬರಹಗಾರರಾದ ಜಾಕ್ ರೊಮೇನ್ ಮತ್ತು ಮೇರಿ ವಿಯು ಷಾವೆ ಅವರು ತಮ್ಮ ಕಾದಂಬರಿಗಳಲ್ಲಿ ಚಿತ್ರಿಸಿದ್ದಾರೆ: ಹೆಚ್ಚುತ್ತಿರುವ ಜನಸಂಖ್ಯೆ ಅರಣ್ಯದ ಮೇಲೆ ಹೆಚ್ಚಿನ ಒತ್ತಡ ಹಾಕಿದೆ, ಅರಣ್ಯದ ಅತಿ ಬಳಕೆ ಮತ್ತು ನಾಶ ಭೂಮಿಯ ಉತ್ಪಾದಕತೆಯನ್ನು ತಗ್ಗಿಸಿದೆ. ಅತಿ ಶೀಘ್ರವಾಗಿ ಬೆಳೆಯುತ್ತಿದ್ದ ನಗರಗಳಿಗೆ ಗ್ರಾಮಗಳ ಹಲವು ಜನರು ವಲಸೆ ಹೋದರು. ಗ್ರಾಮೀಣ ಪ್ರದೇಶಗಳ ಮರಗಳನ್ನು ಕಡಿದು ಇದ್ದಿಲು ತಯಾರಿಸುವುದರ ಮೇಲೆಯೇ ಈ ಜನ ಅವಲಂಬಿತರಾಗಿದ್ದರು.

ಉದ್ಯಮ ಸಂಸ್ಥೆಗಳ ಹಿತಾಸಕ್ತಿ ಕಾಯುವುದನ್ನು ಹೊರತಾಗಿ ಬೇರೆ ಏನನ್ನೂ ಹೈಟಿಯ ಸರ್ಕಾರ ಮಾಡಲಿಲ್ಲ. ಅಮೆರಿಕದ ಯುದ್ಧಕ್ಕೆ ಹಣಕಾಸು ಒದಗಿಸುವುದಕ್ಕಾಗಿ 1940ರ ದಶಕದ ಆರಂಭದಲ್ಲಿ ಹೈಟಿ-ಅಮೆರಿಕ ಯೋಜನೆಯೊಂದು 50 ಸಾವಿರ ಎಕರೆ ಕಾಡು ಕಡಿದು ರಬ್ಬರ್ ಗಿಡಗಳನ್ನು ನೆಟ್ಟಿತು. ಈ ಯೋಜನೆ ಈ ಪ್ರದೇಶವನ್ನು  ಆಳವಾಗಿ ಗಾಸಿಗೊಳಿಸಿತು. ಜೆರೆಮಿ ಪ್ರದೇಶವೊಂದರಲ್ಲಿಯೇ 10 ಲಕ್ಷಕ್ಕೂ ಹೆಚ್ಚು ಹಣ್ಣಿನ ಮರಗಳನ್ನು ಕಡಿದು ಹಾಕಲಾಯಿತು. ಅರಣ್ಯ ನಾಶಕ್ಕೆ ಉದ್ಯಮ ಮಾತ್ರ ಹೊಣೆ ಎಂದು ಹೇಳಲಾಗದು. 1941ರಲ್ಲಿ ರೋಮನ್ ಕ್ಯಾಥೊಲಿಕ್ ಚರ್ಚ್ ನಡೆಸಿದ ‘ಮೂಢನಂಬಿಕೆ ವಿರೋಧಿ’ ಅಭಿಯಾನದ ಭಾಗವಾಗಿ ಪವಿತ್ರ ಮಪೌ ಮರಗಳನ್ನು ಅಪಾರ ಪ್ರಮಾಣದಲ್ಲಿ ನಾಶ ಮಾಡಲಾಯಿತು.

ಡುವಾಲಿಯೆರ್ ನಿರಂಕುಶಾಧಿಪತ್ಯದ ಮೂರು ದಶಕಗಳ ಅವಧಿಯಲ್ಲಿ ಪರಿಸ್ಥಿತಿ ಮತ್ತಷ್ಟು ಹದಗೆಟ್ಟಿತು. ಗಡಿ ಕಾವಲನ್ನು ಸುಲಭವಾಗಿಸುವುದಕ್ಕಾಗಿ ಡೊಮಿನಿಕನ್ ಗಣರಾಜ್ಯದ ಜತೆಗಿನ ಗಡಿಯಲ್ಲಿದ್ದ ಮರಗಳನ್ನು ಸಂಪೂರ್ಣವಾಗಿ ಕಡಿದು ಹಾಕುವಂತೆ ಫ್ರಾಂಸ್ವಾ ಡುವಾಲಿಯೆರ್ ಆದೇಶಿಸಿದ್ದ. 1986ರಲ್ಲಿ ಆತನ ಮಗನನ್ನು ಪದಚ್ಯುತಗೊಳಿಸುವ ಅವಧಿಗೆ ಹೈಟಿ ಪಾರಿಸರಿಕ ಬಿಕ್ಕಟ್ಟನ್ನು ಎದುರಿಸುತ್ತಿತ್ತು. ಇದ್ದಿಲಿಗೆ ಪರ್ಯಾಯ ವ್ಯವಸ್ಥೆ ಕಂಡುಕೊಳ್ಳುವ ಮೂಲಕ ಅರಣ್ಯ ಸಂಪತ್ತನ್ನು ಉಳಿಸಿಕೊಳ್ಳಬೇಕು ಎಂದು ಹೊಸ ಸಂವಿಧಾನ ಕರೆ ನೀಡಿತು. ಆದರೆ ಇದನ್ನು ಕಾರ್ಯರೂಪಕ್ಕೆ ತರಲು ಯಾವ ಯೋಜನೆಯನ್ನೂ ರೂಪಿಸಲಿಲ್ಲ.

ಮರ ಬೆಳೆಸುವ ಕೆಲವು ಯೋಜನೆಗಳು ಯಶಸ್ವಿಯಾದವು. ಹೈಟಿಯ ರೈತರ ಇದ್ದಿಲು ಮತ್ತು ನಾಟಾದ ಅಗತ್ಯಕ್ಕಾಗಿ ಮರಗಳನ್ನು ನೆಡುವ ಯೋಜನೆಯೊಂದನ್ನು ಅಮೆರಿಕದ ಮಾನವಶಾಸ್ತ್ರಜ್ಞ ಜೆರಾಲ್ಸ್ ಮರೆ 1980ರ ದಶಕದಲ್ಲಿ ರೂಪಿಸಿದರು. ನರ್ಸರಿಗಳ ಜಾಲದ ಮೂಲಕ ರೈತರಿಗೆ ಸಸಿಗಳನ್ನು ವಿತರಿಸಲಾಯಿತು. ಎರಡು ದಶಕಗಳ ಅವಧಿಯಲ್ಲಿ ಮೂರು ಲಕ್ಷಕ್ಕೂ ಹೆಚ್ಚು ಕುಟುಂಬಗಳು ಈ ಯೋಜನೆಯಲ್ಲಿ ಭಾಗಿಯಾದವು. ಇವರು ಹತ್ತಾರು ಲಕ್ಷ ಸಸಿಗಳನ್ನು ನೆಟ್ಟು ಅವುಗಳನ್ನು ಪೋಷಿಸಿ ಮರಗಳಾಗಿ ಬೆಳೆಸಿದರು. ತೀರಾ ಇತ್ತೀಚೆಗೆ ಹೈಟಿಯ ಲಂಬಿ ಫಂಡ್ ಎಂಬ ಸಂಸ್ಥೆ ಸಮುದಾಯದ ಗುಂಪುಗಳ ಜಾಲವನ್ನು ರಚಿಸಿ ದೇಶದ ವಿವಿಧ ಭಾಗಗಳಲ್ಲಿ 30 ಲಕ್ಷ ಸಸಿ ನೆಡುವ ಕಾರ್ಯಕ್ರಮ ಅನುಷ್ಠಾನಗೊಳಿಸಿದೆ.

ಮತ್ತೆ ಅರಣ್ಯ ಬೆಳೆಸುವುದಕ್ಕೆ ತೊಡಕುಗಳೂ ಇವೆ. ವಿಶೇಷವಾಗಿ ಗುಡ್ಡ ಪ್ರದೇಶಗಳಲ್ಲಿ ಮರ ಬೆಳೆಸುವ ಕೆಲಸ ಆಗಿಲ್ಲ. ಗ್ರಾಮೀಣ ಪ್ರದೇಶದ ಜನರು ತಮ್ಮ ಮನೆಯಿಂದ ದೂರದ ಪ್ರದೇಶಗಳಲ್ಲಿ ಮರಗಳನ್ನು ಬೆಳೆಸಲು ಉತ್ಸಾಹ ತೋರುತ್ತಿಲ್ಲ. ಯಾಕೆಂದರೆ ಅಂತಹ ಪ್ರದೇಶಗಳಲ್ಲಿ ಮರ ಬೆಳೆಸಿದರೆ ಇತರರಿಗೆ ಅದನ್ನು ಕಡಿದುಕೊಂಡು ಹೋಗುವುದು ಸುಲಭ ಎಂಬ ಅವರ ಭಾವನೆ ಇದಕ್ಕೆ ಕಾರಣ. ಜಲ ಮೂಲಗಳ ದಂಡೆಗಳಲ್ಲಿ ಸಂಪೂರ್ಣವಾಗಿ ಮರ ಬೆಳೆಸುವ ಮೂಲಕ ಈ ಸಮಸ್ಯೆಯನ್ನು ಪರಿಹರಿಸಿಕೊಳ್ಳುವುದು ಸ್ವಲ್ಪಮಟ್ಟಿಗೆ ಇತ್ತೀಚೆಗೆ ಸಾಧ್ಯವಾಗಿದೆ. ಮರಗಳು ಎತ್ತರಕ್ಕೆ ಬೆಳೆದಿರುವ ಪ್ರದೇಶಗಳಲ್ಲಿ ಅವುಗಳ ಬೇರುಗಳು ಮತ್ತು ಹೆಚ್ಚು ಫಲವತ್ತಾದ ಮಣ್ಣು ಹೆಚ್ಚಿನ ಪ್ರಮಾಣದಲ್ಲಿ ನೀರನ್ನು ಹೀರಿಕೊಳ್ಳುತ್ತಿವೆ. ಹಾಗಾಗಿ ಇಂತಹ ಪ್ರದೇಶಗಳಲ್ಲಿ ಪ್ರವಾಹದ ತೀವ್ರತೆ ಸ್ವಲ್ಪ ಕಡಿಮೆಯಾಗಿದೆ. ಜಲ ಮೂಲಗಳ ಇಕ್ಕೆಲಗಳಲ್ಲಿ, ಮೇಲ್ಭಾಗದಲ್ಲಿ ಮತ್ತು ಕೆಲಭಾಗದಲ್ಲಿ ಇರುವ ಸಮುದಾಯಗಳನ್ನು ಒಟ್ಟಾಗಿಸಿ ಮರ ಬೆಳೆಸುವ ಸಮಗ್ರ ಯೋಜನೆಗಳನ್ನು ರೂಪಿಸುವ ಮೂಲಕ ಅರಣ್ಯ ನಾಶಕ್ಕೆ ಪರಿಣಾಮಕಾರಿಯಾಗಿ ತಡೆ ಒಡ್ಡಿ, ದೊಡ್ಡ ಯಶಸ್ಸು ಪಡೆಯುವುದಕ್ಕೆ ಸಾಧ್ಯ ಇದೆ.

ಕಳೆದ ಎರಡು ದಶಕಗಳ ಅವಧಿಯಲ್ಲಿ ಕೊಡೆಪ್ ಎಂಬ ಸಂಘಟನೆ ಮರ ಬೆಳೆಸುವ ಯೋಜನೆಗಳನ್ನು ಕೈಗೆತ್ತಿಕೊಂಡಿದೆ. ದೇಶದ ದಕ್ಷಿಣ ಭಾಗದಲ್ಲಿರುವ ಕಾರ್ಮಿಯೆರ್ ಪ್ರದೇಶದಲ್ಲಿರುವ ಗುಡ್ಡಗಳ ಬದಿಗಳಲ್ಲಿ ಹಣ್ಣಿನ ಮರಗಳನ್ನು ನೆಡಲು ಸ್ಥಳೀಯ ರೈತರಿಗೆ ಸಂಘಟನೆ ನೆರವಾಗಿದೆ. ಸ್ಥಳೀಯ ಮಾರುಕಟ್ಟೆಗೆ ಬೇಕಾದ ಹಣ್ಣನ್ನು ಇಲ್ಲಿ ಬೆಳೆಯುವುದು ಈ ಯೋಜನೆಯ ಉದ್ದೇಶ. ಪೋರ್ಟ್‌-ಒ-ಪ್ರಿನ್ಸ್‌ನಲ್ಲಿರುವ ಇನ್ನೊಂದು ಸಂಘಟನೆ ಫೊಕಲ್ ಕೂಡ ಮಾರ್ಟಿಸ್ಸಾಂಟ್ ಪಾರ್ಕ್‌ನಲ್ಲಿ ಮರ ಬೆಳೆಸುವ ಅತ್ಯುತ್ತಮ ಯೋಜನೆಯೊಂದನ್ನು ಜಾರಿಗೊಳಿಸಿದೆ. ಒಂದು ಕಾಲದಲ್ಲಿ ಈ ಪ್ರದೇಶ ನೃತ್ಯಗಾತಿ ಮತ್ತು ಮಾನವಶಾಸ್ತ್ರಜ್ಞೆ ಕ್ಯಾಥರೀನ್ ಡನ್‌ಹಾಂ ಅವರ ಆಸ್ತಿಯಾಗಿತ್ತು. ನಗರದಿಂದ ಮೇಲ್ಭಾಗದಲ್ಲಿ ಇರುವ ಬೆಟ್ಟಗಳಲ್ಲಿ ಗ್ರಾಮೀಣ ಸಮುದಾಯಗಳನ್ನು ತೊಡಗಿಸಿಕೊಂಡು ಅವರಿಗೆ ಶಿಕ್ಷಣ ಮತ್ತು ಕೆಲಸಗಳೆರಡನ್ನೂ ಒದಗಿಸಲಾಗುತ್ತಿದೆ. ಕಾಲುವೆಗಳನ್ನು ಅತ್ಯಂತ ಎಚ್ಚರಿಕೆಯಿಂದ ಮರು ನಿರ್ಮಾಣ ಮಾಡಿ ಮಳೆ ನೀರನ್ನು ಇಲ್ಲಿಗೆ ಹರಿಸುವ ಕೆಲಸ ಮಾಡಲಾಗುತ್ತಿದೆ.

ಯಾವುದು ಪರಿಣಾಮಕಾರಿ ಎಂಬುದನ್ನು ಈ ಉಪಕ್ರಮಗಳು ತೋರಿಸಿಕೊಟ್ಟಿವೆ. ಇಂತಹ ಕಾರ್ಯತಂತ್ರಗಳನ್ನು ರಾಷ್ಟ್ರ ಮಟ್ಟದಲ್ಲಿ ವಿಸ್ತರಿಸಬೇಕಿದೆ. ಹೈಟಿಯಲ್ಲಿ ಇರುವ ವೈವಿಧ್ಯಮಯ ಜಲಮೂಲಗಳ ದಂಡೆಗಳಲ್ಲಿ ಇಂತಹ ಯೋಜನೆಗಳನ್ನು ಅನುಷ್ಠಾನಗೊಳಿಸಬೇಕಿದೆ.

ಮುಂದೆ ಇರುವ ಸವಾಲು ಅಪಾರ ಎಂಬುದು ಖಚಿತ. ದೇಶದಲ್ಲಿ ಮತ್ತೆ ಹೇಗೆ ಕಾಡು ಬೆಳೆಸಬಹುದು ಎಂಬ ಜ್ಞಾನ ಈಗ ಹಲವು ಸಮುದಾಯಗಳಲ್ಲಿ ಇದೆ. ಅದನ್ನು ಬಳಸಿಕೊಳ್ಳಬೇಕಿದೆ. ಮರಗಳಿಂದ ಆವೃತವಾದ ಹೈಟಿಯನ್ನು ನಾವು ಕಲ್ಪಿಸಿಕೊಳ್ಳಬೇಕು ಮತ್ತು ಆ ಭವಿಷ್ಯಕ್ಕಾಗಿ ಗಿಡಗಳನ್ನು ನೆಡಲು ಆರಂಭಿಸಬೇಕು.

ಲೇಖಕ ಡ್ಯೂಕ್‌ನಲ್ಲಿ ಇತಿಹಾಸ ಪ್ರಾಧ್ಯಾಪಕ ಮತ್ತು ‘ಹೈಟಿ: ದಿ ಆಫ್ಟರ್‌ಶಾಕ್ಸ್ ಆಫ್ ಹಿಸ್ಟರಿ’  ಹೆಸರಿನ ಪುಸ್ತಕ ಬರೆದಿದ್ದಾರೆ.
ದಿ ನ್ಯೂಯಾರ್ಕ್‌ ಟೈಮ್ಸ್‌

editpagefeedback@prajavani.co.in

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT