ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಅಧ್ಯಯನ ಪೀಠ ಸ್ಥಾಪನೆಗೆ ಚಿಂತನೆ’

ಕೆ.ಎಚ್‌. ರಂಗನಾಥ ಅವರ 90ನೇ ಜನ್ಮದಿನೋತ್ಸವ ಕಾರ್ಯಕ್ರಮ
Last Updated 20 ಅಕ್ಟೋಬರ್ 2016, 19:30 IST
ಅಕ್ಷರ ಗಾತ್ರ

ಬೆಂಗಳೂರು: ‘ಕೆ.ಎಚ್‌. ರಂಗನಾಥ ಅವರು ಬದುಕು, ಬರಹ, ರಾಜಕಾರಣ ವಿಷಯಗಳ ಕುರಿತು ಯಾವುದಾದರೂ ಒಂದು ವಿಶ್ವವಿದ್ಯಾಲಯದಲ್ಲಿ ಅಧ್ಯಯನ ಪೀಠ ಸ್ಥಾಪಿಸಲಾಗುವುದು’ ಎಂದು ಸಮಾಜ ಕಲ್ಯಾಣ ಸಚಿವ ಎಚ್‌. ಆಂಜನೇಯ ಭರವಸೆ ನೀಡಿದರು.

ಗಾಂಧಿಭವನದಲ್ಲಿ ಕರ್ನಾಟಕ ಸಾಮಾಜಿಕ ನ್ಯಾಯ ವೇದಿಕೆ ಗುರುವಾರ ಹಿರಿಯ ಸಮಾಜವಾದಿ ಕೆ.ಎಚ್‌. ರಂಗನಾಥ ಅವರ 90ನೇ ಜನ್ಮದಿನೋತ್ಸವ ಅಂಗವಾಗಿ ಹಮ್ಮಿಕೊಂಡಿದ್ದ ‘ನುಡಿ ನಮನ’ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

‘ಈಗಾಗಲೇ ಮೈಸೂರು ವಿ.ವಿಯಲ್ಲಿ ಎನ್‌.ರಾಚಯ್ಯ ಹಾಗೂ ಬೆಂಗಳೂರು ವಿ.ವಿಯಲ್ಲಿ ಬಿ. ಬಸವಲಿಂಗಪ್ಪ ಅವರ ಸ್ಮಾರಕ ಸ್ಥಾಪಿಸಲು ಉದ್ದೇಶಿಸಲಾಗಿದೆ. ಹಿರಿಯೂರಿನಲ್ಲಿ ರಂಗನಾಥ ಅವರ ಸ್ಮಾರಕ ಭವನ ನಿರ್ಮಿಸಲು ಇಲಾಖೆ ಸಿದ್ಧವಿದೆ. ಜಾಗ ಸಿಕ್ಕರೆ ಶೀಘ್ರದಲ್ಲಿ ಭವನ ನಿರ್ಮಿಸಲಾಗುವುದು’ ಎಂದರು.

‘ಒಮ್ಮೆ ಕೃಷ್ಣ ಮತ್ತು ರಂಗನಾಥ ಅವರು ಇಂದಿರಾಗಾಂಧಿ ಅವರ ಭೇಟಿಗೆ ಹೋದಾಗ ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ಯಾರನ್ನು ಆಯ್ಕೆ ಮಾಡಬೇಕು ಎಂದು ಕೇಳಿದ್ದರು. ಆಗ ಕೃಷ್ಣ ಅವರು ರಂಗನಾಥ ಅವರ ಹೆಸರನ್ನು ಸೂಚಿಸಿದ್ದರು. ಈಗ ಅಂತಹ ಹೃದಯವಂತರು ಯಾರೂ ಇಲ್ಲ. ಎಲ್ಲಾ ಅಧಿಕಾರ ತಮಗೆ ದೊರೆಯಬೇಕೆಂದು ಹಾತೊರೆಯುತ್ತಾರೆ’ ಎಂದು ವಿಷಾದ ವ್ಯಕ್ತಪಡಿಸಿದರು.

‘ರಂಗನಾಥ ಅವರು ಸರ್ವರೂ ಒಪ್ಪುವ ನಾಯಕ. ಅರ್ಹತೆ ಇದ್ದರೂ ಮುಖ್ಯಮಂತ್ರಿಯಾಗುವ ಅವಕಾಶ ಎರಡು ಬಾರಿ ಕೈತಪ್ಪಿತ್ತು. ಅಧಿಕಾರ ಸಿಗುವಾಗ ಚಾಡಿ ಹೇಳಿ ತಪ್ಪಿಸುವವಂತಹವರು ಪಕ್ಷದಲ್ಲಿದ್ದಾರೆ’ ಎಂದು ದೂರಿದರು.

‘ಇಂದು ಹಣವಿದ್ದವರಿಗೆ ಮಾತ್ರ ಮಣೆ ಹಾಕುತ್ತಾರೆ. ಅವನ ಹತ್ತಿರ ದುಡ್ಡು ಇಲ್ಲ ಯಾಕೆ ಟಿಕೆಟ್‌ ಕೊಡ್ತೀರಿ ಎಂದು ಕೇಳುತ್ತಾರೆ. ಅಲ್ಲದೆ ಚುನಾವಣೆಗಳಲ್ಲಿ ಜನರು ಸಹ ಪ್ರಾಮಾಣಿಕವಾಗಿ ಆರಿಸಿದರೆ ಮಾತ್ರ ನಿಷ್ಠಾವಂತ ರಾಜಕಾರಣಿಗಳು ಸಿಗುತ್ತಾರೆ’ ಎಂದು ಹೇಳಿದರು.‌

ಶಾಸಕ ಶಾಮನೂರು ಶಿವಶಂಕರಪ್ಪ ಅವರು ಮಾತನಾಡಿ, ‘ರಂಗನಾಥ ಅವರು ಸಜ್ಜನ ರಾಜಕಾರಣಿ, ಪ್ರಾಮಾಣಿಕರು. ಇವತ್ತಿನ ಭ್ರಷ್ಟ ರಾಜಕಾರಣ ನೋಡಿದ್ದರೆ ರಾಜೀನಾಮೆ ಕೊಟ್ಟು ಹೊರಬರುತ್ತಿದ್ದರು. ಅವರು ಸಂಸದರ ಚುನಾವಣೆಗೆ ಖರ್ಚಾಗಿದ್ದು ಕೇವಲ ₹12 ಲಕ್ಷ. ಆದರೆ ಈಗ ಸಂಸದನಾಗಬೇಕು ಎಂದರೆ ಕನಿಷ್ಠ ₹ 50 ಕೋಟಿ ಖರ್ಚು ಮಾಡಬೇಕಾದ ಸ್ಥಿತಿ ಇದೆ’ ಎಂದು ಅಭಿಪ್ರಾಯಪಟ್ಟರು.

ಮಾಜಿ ಶಾಸಕ ಡಿ.ಎಸ್‌. ಗೌಡ ಅವರು  ರಂಗನಾಥ ಅವರು ಅನಾರೋಗ್ಯದಿಂದ ಆಸ್ಪತ್ರೆಗೆ ಸೇರಿದ್ದಾಗ ಅವರೊಂದಿಗೆ ಕಳೆದ ಕೊನೆಯ ಕ್ಷಣಗಳನ್ನು ನೆನೆದು ಕಣ್ಣೀರು ಹಾಕಿದರು.

* ಕಾಂಗ್ರೆಸ್‌ನಲ್ಲಿ ಕಾಲೆಳೆಯುವವರು, ಹೈಕಮಾಂಡ್‌ಗೆ ಇನ್ನೊಬ್ಬರ ಬಗ್ಗೆ ಚಾಡಿ  ಹೇಳುವವರ ಸಂಖ್ಯೆಯೇ ಜಾಸ್ತಿ ಇದೆ. ಇದನ್ನೆಲ್ಲ ಜಯಿಸಿದರೆ ಮಾತ್ರ ಅಧಿಕಾರ ಪಡೆಯಲು ಸಾಧ್ಯ
–ಎಚ್‌.ಆಂಜನೇಯ
ಸಮಾಜಕಲ್ಯಾಣ ಸಚಿವ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT