ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆರು ಮಂದಿಯ ಸಂಚಿನಿಂದ ಕಾರ್ಯಕರ್ತ ರುದ್ರೇಶ್‌ ಹತ್ಯೆ

Last Updated 20 ಅಕ್ಟೋಬರ್ 2016, 19:38 IST
ಅಕ್ಷರ ಗಾತ್ರ

ಬೆಂಗಳೂರು :  ಇಬ್ಬರು ಸ್ಥಳೀಯರು ಹಾಗೂ ಮತೀಯ ಸಂಘಟನೆಯೊಂದರ ನಾಲ್ವರು ಸದಸ್ಯರು ವ್ಯವಸ್ಥಿತವಾಗಿ ಸಂಚು ರೂಪಿಸಿ ಆರ್‌ಎಸ್‌ಎಸ್‌ ಕಾರ್ಯಕರ್ತ ರುದ್ರೇಶ್ ಅವರನ್ನು ಹತ್ಯೆಗೈದಿದ್ದಾರೆ ಎಂಬ ಸಂಗತಿ ಪೊಲೀಸರ ಇದುವರೆಗಿನ  ತನಿಖೆಯಿಂದ ಗೊತ್ತಾಗಿದೆ.

‘ಅ.16ರಂದು ಆರ್‌ಎಸ್‌ಎಸ್ ವತಿಯಿಂದ ಪಥ ಸಂಚಲನ ಆಯೋಜನೆ ಮಾಡಿರುವ ಹಾಗೂ ರುದ್ರೇಶ್ ಅವರೇ ಅದರ ನೇತೃತ್ವ ವಹಿಸಿರುವ ಮಾಹಿತಿ ಪಡೆದು ಹತ್ಯೆ ಮಾಡಲಾಗಿದೆ. ನೆರೆ ರಾಜ್ಯಗಳಿಂದ ನಗರಕ್ಕೆ ಬಂದಿರುವ ನಾಲ್ವರು ಆರೋಪಿಗಳು, ರುದ್ರೇಶ್ ಬಗ್ಗೆ ಸ್ಥಳೀಯ ಯುವಕರಿಬ್ಬರಿಂದ ಮಾಹಿತಿ ಪಡೆದಿದ್ದಾರೆ. ಕೊನೆಗೆ ಅವರ ಮೂಲಕವೇ ರುದ್ರೇಶ್‌ಗೆ ಕರೆ ಮಾಡಿಸಿ, ಮನೆಯಿಂದ ಹೊರಗೆ ಕರೆಸಿಕೊಂಡು ಕೊಲೆಗೈದಿದ್ದಾರೆ’ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

‘ರುದ್ರೇಶ್ ಯಾರೆಂಬುದನ್ನು ಖಚಿತಪಡಿಸಿಕೊಂಡ ಹೊರ ರಾಜ್ಯದ ಆ ನಾಲ್ವರು, ಎರಡು ಬೈಕ್‌ಗಳಲ್ಲಿ ಅವರನ್ನು ಹಿಂಬಾಲಿಸಿದ್ದಾರೆ. ಪಥಸಂಚಲನ ನಡೆಯುತ್ತಿದ್ದ ಸಮಯದಲ್ಲಿ ಕೃತ್ಯ ಎಸಗಿದರೆ ಸಿಕ್ಕಿ ಬೀಳುತ್ತೇವೆಂದು, ಕಾರ್ಯಕರ್ತರ ಸಂಖ್ಯೆ ಕಡಿಮೆಯಾದ ಬಳಿಕ ಕೊಲೆಗೈದಿದ್ದಾರೆ.’

‘ಹಂತಕ ತಲ್ವಾರ್ ಬೀಸಿದಾಗ ಒಂದೇ ಏಟಿಗೆ ರುದ್ರೇಶ್ ಅವರ ಪ್ರಾಣ ಹೋಗಿದೆ. ಸೂಕ್ತ ತರಬೇತಿ ಪಡೆದವರೇ ಈ ಕೃತ್ಯ ಎಸಗಿರುವುದು ಬಹುತೇಕ ಖಚಿತವಾಗಿದೆ. ಸ್ಥಳೀಯರನ್ನು ವಿಚಾರಣೆ ನಡೆಸುವ ಕೆಲಸ ಮುಂದುವರಿದಿದ್ದು, ತನಿಖಾ ತಂಡಗಳು ಸದ್ಯದಲ್ಲೇ ಕೇರಳ ಮತ್ತು ತಮಿಳುನಾಡು ರಾಜ್ಯಗಳಿಗೆ ತೆರಳಲಿವೆ.’

‘ಹಂತಕರ ಚಲನವಲನಗಳು ಸಿ.ಸಿ ಟಿ.ವಿ ಕ್ಯಾಮೆರಾಗಳಲ್ಲಿ ಸೆರೆಯಾಗಿವೆ. ಅವರ ಬೈಕ್‌ಗಳ ನೋಂದಣಿ ಸಂಖ್ಯೆ ಆಧರಿಸಿ ತನಿಖೆ ನಡೆಸಲಾಗಿದೆ. ಆದರೆ, ಆರೋಪಿಗಳು ನಕಲಿ ನಂಬರ್‌ಪ್ಲೇಟ್ ಅಳವಡಿಸಿಕೊಂಡು ಕೃತ್ಯ ಎಸಗಿದ್ದಾರೆ’ ಎಂದು ಮೂಲಗಳು ಹೇಳಿವೆ.

ಆ ಒಂದು ತಾಸು:  ‘ಪಥಸಂಚಲನ ಮುಗಿಸಿಕೊಂಡು ರುದ್ರೇಶ್ ಮನೆಗೆ ತೆರಳಿದ್ದರು. ಪರಿಚಿತನಿಂದ ಕರೆ ಬಂದ ಕೂಡಲೇ ಮನೆಯಿಂದ ಹೊರಟ ರುದ್ರೇಶ್, ಒಂದು ಗಂಟೆಯ ನಂತರ ಶಿವಾಜಿ ವೃತ್ತಕ್ಕೆ ಬಂದಿದ್ದರು. ಆ ಒಂದು ಗಂಟೆ ಅವಧಿಯಲ್ಲಿ ಎಲ್ಲೆಲ್ಲಿಗೆ ಹೋಗಿದ್ದರು? ಯಾರ್‌್ಯಾರನ್ನು
ಭೇಟಿಯಾಗಿದ್ದರು? ಎಂಬುದು ಗೊತ್ತಾಗಬೇಕಿದೆ’ ಎಂದು ನಗರ ಪೊಲೀಸ್ ಕಮಿಷನರ್ ಎನ್‌.ಎಸ್. ಮೇಘರಿಕ್ ತಿಳಿಸಿದರು.

ಫೋಟೊ ಪ್ರಕಟಣೆ ಕೊಟ್ಟಿಲ್ಲ
ಹಂತಕರು ಬೈಕ್‌ನಲ್ಲಿ ಪರಾರಿಯಾದ ದೃಶ್ಯ ಸಿ.ಸಿ ಟಿ.ವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ ಎಂದು ಕೆಲ ಮಾಧ್ಯಮಗಳು ಇಬ್ಬರು ಯುವಕರ ಫೋಟೊ ಪ್ರಸಾರ ಮಾಡಿವೆ. ಆದರೆ, ಆ ಫೋಟೊ ಶಂಕಿತ ವ್ಯಕ್ತಿಗಳದ್ದಲ್ಲ. ಇಲಾಖೆ ವತಿಯಿಂದ ಶಂಕಿತರ ಭಾವಚಿತ್ರವನ್ನು ಸಾರ್ವಜನಿಕ ಪ್ರಕಟಣೆಗೆ ಕೊಟ್ಟಿಲ್ಲ.
– ಎನ್‌.ಎಸ್.ಮೇಘರಿಕ್
ಪೊಲೀಸ್ ಕಮಿಷನರ್

ಮುಖ್ಯಾಂಶಗಳು
* ಸ್ಥಳೀಯರು, ಮತೀಯ ಸಂಘಟನೆಯೊಂದರ ಸದಸ್ಯರಿಂದ  ಕೃತ್ಯ

* ಎರಡು ಬೈಕ್‌ಗಳಲ್ಲಿ ಹಿಂಬಾಲಿಸಿದ್ದ ಹಂತಕರು
* ತಲ್ವಾರ್  ಏಟಿನಿಂದ   ಮೃತಪಟ್ಟ ರುದ್ರೇಶ್‌

ಬಿಜೆಪಿ ನಿಯೋಗದಿಂದ ರಾಜ್ಯಪಾಲರ ಭೇಟಿ
ರಾಜ್ಯಪಾಲ ವಜುಬಾಯಿ ವಾಲಾ ಅವರನ್ನು ಶುಕ್ರವಾರ ಭೇಟಿ ಮಾಡಲಿರುವ ಬಿಜೆಪಿ ನಿಯೋಗ, ಆರ್‌ಎಸ್‌ಎಸ್‌ ಕಾರ್ಯಕರ್ತರ ಹತ್ಯೆ ತಡೆಯಲು ರಾಜ್ಯ ಸರ್ಕಾರ ವಿಫಲವಾಗಿದೆ ಎಂದು ದೂರು ಸಲ್ಲಿಸಲಿದೆ.

ಬೆಳಿಗ್ಗೆ 11ಗಂಟೆಗೆ ರಾಜಭವನಕ್ಕೆ ಭೇಟಿ ನೀಡಲಿರುವ ರಾಜ್ಯ ಬಿಜೆಪಿ ಅಧ್ಯಕ್ಷ  ಬಿ.ಎಸ್‌. ಯಡಿಯೂರಪ್ಪ ನೇತೃತ್ವದ ನಿಯೋಗ, ರಾಜ್ಯದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಹದಗೆಟ್ಟಿದೆ. ಸಂಘಪರಿವಾರದ ಕಾರ್ಯಕರ್ತರ ಮೇಲೆ ನಡೆಯುತ್ತಿರುವ ಹಿಂಸೆ ತಡೆಯಲು ಸರ್ಕಾರಕ್ಕೆ ಸೂಕ್ತ ನಿರ್ದೇಶನ ನೀಡಬೇಕು ಎಂದು ಮನವಿ ಸಲ್ಲಿಸಲಿದೆ ಎಂದು ಪ್ರಕಟಣೆ ತಿಳಿಸಿದೆ.

ಕೇಂದ್ರ ಗೃಹ ಸಚಿವರಿಗೆ ಪತ್ರ:  ಆರ್‌ಎಸ್‌ಎಸ್‌ ಕಾರ್ಯಕರ್ತ ರುದ್ರೇಶ್‌ ಹತ್ಯೆ ಪ್ರಕರಣದ ಬಗ್ಗೆ ಸಿಬಿಐ ತನಿಖೆ ನಡೆಸಬೇಕು ಎಂದು ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ಅವರು ಕೇಂದ್ರ ಗೃಹ ಸಚಿವ ರಾಜನಾಥ ಸಿಂಗ್‌ ಅವರಿಗೆ ಪತ್ರ ಬರೆದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT