ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗೂಡ್ಸ್‌ ಶೆಡ್‌ಗಳ ಸ್ಥಳಾಂತರ: ಸಂಚಾರ ಸಮಸ್ಯೆಗೆ ಪರಿಹಾರ

Last Updated 20 ಅಕ್ಟೋಬರ್ 2016, 19:32 IST
ಅಕ್ಷರ ಗಾತ್ರ

ಬೆಂಗಳೂರು: ‘ನಗರದ ಸಂಚಾರ ದಟ್ಟಣೆ ಸಮಸ್ಯೆಗೆ ಉಪನಗರ ರೈಲು ಸಾರಿಗೆ ಪರ್ಯಾಯವಾಗಿದೆ. ಹೀಗಾಗಿ ನಗರದಲ್ಲಿರುವ ಗೂಡ್ಸ್‌ ಶೆಡ್‌ಗಳನ್ನು ಸ್ಥಳಾಂತರಿಸಿ ಪ್ರಯಾಣಿಕರ ರೈಲುಗಳ ಸಂಚಾರಕ್ಕೆ ಆ ನಿಲ್ದಾಣಗಳನ್ನು ಬಳಸಬೇಕು’ ಎಂದು ಒತ್ತಾಯಿಸಿ change.org ನಲ್ಲಿ ಅಭಿಯಾನ ಆರಂಭಿಸಲಾಗಿದೆ.

ಉಕ್ಕಿನ ಮೇಲ್ಸೇತುವೆ ನಿರ್ಮಾಣದ ವಿರುದ್ಧ ಪ್ರತಿಭಟನೆ ಜೋರಾಗಿರುವ ಈ ಹೊತ್ತಿನಲ್ಲಿ ಸುಲಭದ ಪರಿಹಾರ ಮಾರ್ಗಗಳ ಕುರಿತು ಚರ್ಚಿಸಲಾಗಿದೆ.
ಫ್ಲೈಓವರ್‌ಗಳು, ಎಕ್ಸ್‌ಪ್ರೆಸ್‌ ಕಾರಿಡಾರ್‌ಗಳು, ಅಂಡರ್‌ಪಾಸ್‌ಗಳ ನಿರ್ಮಾಣದ ಮೂಲಕ ಸಂಚಾರ ಸಮಸ್ಯೆಗೆ ಪರಿಹಾರ ಹುಡುಕುವ ಪ್ರಯತ್ನ
ಗಳು ಹಿಂದಿನಿಂದಲೂ ನಡೆದಿವೆ. ಆದರೆ, ಈ ಸಮಸ್ಯೆ ಪರಿಹಾರಕ್ಕೆ ಪರ್ಯಾಯ ಮಾರ್ಗಗಳನ್ನು ಕಂಡುಕೊಳ್ಳಲು ಸಾಧ್ಯವಾಗಿಲ್ಲ.

ಆದರೆ, ರೈಲು ಸಾರಿಗೆ ಸಂಪರ್ಕವನ್ನು ವಿಸ್ತರಿಸುವುದರಿಂದ ಸಂಚಾರ ದಟ್ಟಣೆ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬಹುದು. ಇದಕ್ಕಾಗಿ ಹೊಸ ರೈಲು ನಿಲ್ದಾಣ ಅಥವಾ ಹಳಿಗಳನ್ನು ನಿರ್ಮಿಸಬೇಕಿಲ್ಲ. ಈಗಿರುವ ಸೌಲಭ್ಯವನ್ನೇ ಬಳಸಿಕೊಳ್ಳಬಹುದು ಎಂದು ವಿವರಿಸಲಾಗಿದೆ.

ಪೂರ್ವ– ಪಶ್ಚಿಮ ಕಾರಿಡಾರ್‌ನಲ್ಲಿ (ನೇರಳೆ ಮಾರ್ಗ) ಮೆಟ್ರೊ ರೈಲು ಸಂಚಾರ ಆರಂಭವಾದ ಬಳಿಕ ಪ್ರತಿದಿನ ಸಂಚರಿಸುವ ಪ್ರಯಾಣಿಕರ ಸಂಖ್ಯೆ ಸುಮಾರು ಒಂದು ಲಕ್ಷಕ್ಕೆ ಏರಿಕೆಯಾಗಿದೆ. ಜನರು ರಸ್ತೆ ಸಾರಿಗೆಗೆ ಪರ್ಯಾಯವನ್ನು ಬಯಸುತ್ತಾರೆ ಎಂಬುದಕ್ಕೆ ಇದೇ ಸಾಕ್ಷಿ ಎಂದು ಅಭಿಪ್ರಾಯಪಡಲಾಗಿದೆ.

ಕೆಲ ಪ್ರಮುಖ ಹಾಗೂ ಆಯ್ದ ರೈಲು ನಿಲ್ದಾಣಗಳ ನಡುವೆ ರೈಲುಗಳ ಸಂಚಾರವನ್ನು ಹೆಚ್ಚಿಸಬೇಕು.  ಜತೆಗೆ ರೈಲು ನಿಲ್ದಾಣಗಳನ್ನು ಮೇಲ್ದರ್ಜೆ
ಗೇರಿಸಬೇಕು ಎಂಬ ಬೇಡಿಕೆಗಳನ್ನು ಸರ್ಕಾರದ ಮುಂದಿಡಬೇಕು ಎಂಬ ಬೇಡಿಕೆ ಹೆಚ್ಚಾಗಿದೆ.

ಪೂರ್ವ ಐಟಿಪಿಎಲ್‌: ಐಟಿಪಿಎಲ್‌ ಬಸ್‌ ನಿಲ್ದಾಣ ಹಿಂದೆ ಗೂಡ್ಸ್‌ ಶೆಡ್‌ ರೈಲು ನಿಲ್ದಾಣವನ್ನು ನಿರ್ಮಿಸಲಾಗಿತ್ತು. ರೈಲು ಸಂಚಾರ ಆರಂಭವಾದಾಗ ವೈಟ್‌
ಫೀಲ್ಡ್‌ಗೆ ಪ್ರಯಾಣಿಸುವುದು ಎಂದರೆ, ಇಂದಿನ ಮೈಸೂರು ಪ್ರಯಾಣಕ್ಕೆ ಸಮವಾಗಿತ್ತು. ವೈಟ್‌ಫೀಲ್ಡ್‌ ಎಂದರೆ ದೂರದ ಊರಿಗೆ ಹೋಗುತ್ತಿದ್ದೇನೆ ಎನ್ನುವ ಭಾವನೆ ಜನರಲ್ಲಿ ಇತ್ತು.

ಈಗ ನಗರದ ವ್ಯಾಪ್ತಿ ವಿಸ್ತಾರಗೊಂಡಿದೆ. ಆದರೆ, ಹತ್ತಾರು ವರ್ಷಗಳ ಹಿಂದೆ ವೈಟ್‌ಫೀಲ್ಡ್‌ ನಗರದ ಹೊರವಲಯದಲ್ಲಿತ್ತು. ಹೀಗಾಗಿ ಗೂಡ್ಸ್‌ ಶೆಡ್‌ ಕೇಂದ್ರವನ್ನು ಅಲ್ಲಿಗೆ ಸ್ಥಳಾಂತರಿಸಲಾಗಿತ್ತು. ಆದರೆ, ಈಗ ವೈಟ್‌ಫೀಲ್ಡ್‌ ನಗರದೊಳಗೇ ಸೇರಿಕೊಂಡಿದೆ. ಹೀಗಾಗಿ ಇಲ್ಲಿನ ಗೂಡ್ಸ್‌ ಶೆಡ್‌ ಸ್ಥಳಾಂತರಿಸಿ, ಪ್ರಯಾಣಿಕರ ರೈಲುಗಳ ಸಂಚಾರಕ್ಕೆ ಅವಕಾಶ ಕಲ್ಪಿಸಬೇಕು. ವೈಟ್‌ಫೀಲ್ಡ್‌ ರೈಲು ನಿಲ್ದಾಣದ ಮೇಲ್ದರ್ಜೆಗೇರಿಸುವ ಕಾಮಗಾರಿ ಆಮೆಗತಿಯಲ್ಲಿ ಸಾಗಿದೆ ಎಂದು ಅಭಿಪ್ರಾಯಪಡಲಾಗಿದೆ.

ಕಂಟೋನ್ಮೆಂಟ್‌ ರೈಲು ನಿಲ್ದಾಣ: ನಗರದ ಕೇಂದ್ರ ಭಾಗದಲ್ಲಿ ಗೂಡ್ಸ್‌ ಶೆಡ್‌ ಅಗತ್ಯವಿದೆಯೇ? ಇದರಿಂದ ಸರಕು ಸಾಗಣೆದಾರರಿಗೂ ತೊಂದರೆ ಉಂಟಾಗುತ್ತಿದೆ. ಗೂಡ್ಸ್‌ ರೈಲುಗಳ ನಿಲುಗಡೆಯಿಂದ ಪ್ರಯಾಣಿಕರ ರೈಲುಗಳ ಸಂಚಾರಕ್ಕೆ ತೊಂದರೆ ಉಂಟಾಗುತ್ತಿದೆ. ಹೀಗಾಗಿ ರೈಲುಗಳ ಸುಗಮ ಸಂಚಾರಕ್ಕೆ ಕೆಲ ಕ್ರಮಗಳನ್ನು ಕೈಗೊಳ್ಳಬೇಕು ಎಂಬ ಸಲಹೆ ನೀಡಲಾಗಿದೆ.

ಕೆ.ಆರ್‌.ಪುರ: ಕೆ.ಆರ್.ಪುರ ಜಂಕ್ಷನ್‌ನಲ್ಲಿ ವಾಹನ ದಟ್ಟಣೆ ಹೆಚ್ಚಾಗಿ ಕಂಡುಬರುತ್ತದೆ. ಪರ್ಯಾಯ ಸಾರಿಗೆಯಾಗಿ ಇಲ್ಲಿನ ರೈಲು ನಿಲ್ದಾಣವನ್ನು ಉಪ
ನಗರ ರೈಲು ಸಾರಿಗೆಗೂ ಬಳಸಬೇಕಿದೆ.

ಬೈಯಪ್ಪನಹಳ್ಳಿ: ರೈಲು ನಿಲ್ದಾಣದಿಂದ ಬಾಗ್ಮನೆ ಟೆಕ್‌ ಪಾರ್ಕ್‌ ನಾಲ್ಕು ಕಿ.ಮೀ. ದೂರದಲ್ಲಿದೆ. ಇಲ್ಲಿಗೆ ಹೋಗಲು ಮೆಟ್ರೊ ಹಾಗೂ ರೈಲು ನಿಲ್ದಾಣವನ್ನು ಬಳಸಿಕೊಳ್ಳಬಹುದು. ಇಲ್ಲಿಂದ ನಾಯಂಡಹಳ್ಳಿವರೆಗೆ ಮೆಟ್ರೊ ರೈಲು ಸಂಪರ್ಕವಿದೆ.

ಬೆಳ್ಳಂದೂರು: ಈ ರೈಲು ನಿಲ್ದಾಣ ವರ್ತುಲ ರಸ್ತೆಯಿಂದ ಕೇವಲ 1.45 ಕಿ.ಮೀ ದೂರದಲ್ಲಿ ಇದೆ. ಬೇರೆ ಕಡೆಗಳಿಂದ ಇಲ್ಲಿಗೆ ಬರುವ ಐ.ಟಿ. ಕಂಪೆನಿ ಉದ್ಯೋಗಿಗಳಿಗೆ ಈ ನಿಲ್ದಾಣದಿಂದ ಹೆಚ್ಚು ಅನುಕೂಲವಿದೆ.

ಹೆಬ್ಬಾಳ: ಇದು ನಗರದ ಮತ್ತೊಂದು ಐ.ಟಿ. ಹಬ್‌ಗೆ ಸಂಪರ್ಕ ಕಲ್ಪಿಸುವ ರೈಲು ನಿಲ್ದಾಣವಾಗಿದೆ. ಇಲ್ಲಿಗೆ ರೈಲು ಸಂಚಾರ ಆರಂಭಗೊಂಡಿದೆ. ಆದರೆ, ಕಡಿಮೆ ಸಂಖ್ಯೆಯ ರೈಲುಗಳು ಸಂಚರಿಸುತ್ತಿವೆ. ಪ್ರಯಾಣಿಕರು ಸಹ ಕಡಿಮೆ ಸಂಖ್ಯೆಯಲ್ಲಿ ಸಂಚರಿಸುತ್ತಿದ್ದಾರೆ.

ವಿಮಾನ ನಿಲ್ದಾಣ: ವಿಮಾನ ನಿಲ್ದಾಣವನ್ನು ನಿರ್ಮಿಸುವ ಮುನ್ನವೇ ಇಲ್ಲಿ ರೈಲು ಮಾರ್ಗವಿತ್ತು. ಆದರೆ, ಇದರ ಬಳಕೆಯನ್ನು ಅಷ್ಟಾಗಿ ಮಾಡಿಕೊಂಡಿಲ್ಲ. ಈ ರೈಲು ಮಾರ್ಗ ಮೇಲ್ದರ್ಜೆಗೇರಿಸುವ ಜತೆಗೆ ಹೊಸ ರೈಲು ನಿಲ್ದಾಣ ನಿರ್ಮಿಸಿದರೆ ರಸ್ತೆ ಸಂಚಾರದ ಒತ್ತಡ ಕಡಿಮೆ ಮಾಡಲು ಸಾಧ್ಯವಾಗುತ್ತದೆ.

ಯಶವಂತಪುರ: ಈ ರೈಲು ನಿಲ್ದಾಣದ ಒಂದು ಬದಿಯಲ್ಲಿ ಮೆಟ್ರೊ, ಮತ್ತೊಂದು ಬದಿಯಲ್ಲಿ ಬಿಎಂಟಿಸಿ ಬಸ್‌ ನಿಲ್ದಾಣಗಳಿವೆ. ಮೆಜೆಸ್ಟಿಕ್‌ನಲ್ಲಿ ಇರುವಂತೆ ಇಲ್ಲೂ ಸಂಚಾರ ದಟ್ಟಣೆ ಕಂಡುಬರುತ್ತದೆ.

ಮೆಜೆಸ್ಟಿಕ್‌: ಬಿಎಂಟಿಸಿ, ನಮ್ಮ ಮೆಟ್ರೊ ಹಾಗೂ ರೈಲು ನಿಲ್ದಾಣಗಳಿರುವ ಸ್ಥಳವಿದು. ಆದರೆ, ಇಲ್ಲಿನ ಪ್ಲಾಟ್‌ಫಾರಂಗಳಲ್ಲಿ ರೈಲುಗಳನ್ನು 20 ನಿಮಿಷ
ಗಳಿಗಿಂತ ಹೆಚ್ಚು ಹೊತ್ತು ನಿಲ್ಲಿಸುವುದಿಲ್ಲ. ಇದು ಸಂಪರ್ಕ ನಿಲ್ದಾಣವೇ ಹೊರತು, ಟರ್ಮಿನಲ್‌ ನಿಲ್ದಾಣವಲ್ಲ. ಅಂತ್ಯವಿಲ್ಲದ ವಾಹನ ದಟ್ಟಣೆ ಸಮಸ್ಯೆಗೆ ಕೈಗೊಂಡ ಪರ್ಯಾಯ ಕ್ರಮಗಳು ಫಲಿಸಬೇಕಾದರೆ ಹೆಚ್ಚು ಸಮಯ ಹಿಡಿಯುತ್ತದೆ.

ಈ ಕ್ರಮಗಳು ಅಗತ್ಯ
change.org ಮೂಲಕ ನಡೆದ ಅಭಿಯಾನದಲ್ಲಿ ಈ ಕೆಳಗಿನ ಸಲಹೆ ನೀಡಲಾಗಿದೆ:
* ಸಂಚಾರ ದಟ್ಟಣೆ ಅವಧಿಯಲ್ಲಿ ರೈಲು ನಿಲ್ದಾಣದ ಪ್ಲಾಟ್‌ಫಾರಂನಲ್ಲಿ ಹತ್ತು ನಿಮಿಷಕ್ಕಿಂತ ಹೆಚ್ಚು ಹೊತ್ತು ನಿಲ್ಲಿಸಬಾರದು.
* ಸಂಚಾರ ದಟ್ಟಣೆ ಇಲ್ಲದ ಸಮಯದಲ್ಲಿ ದೂರದ ಪ್ರಯಾಣ ನಡೆಸುವ ರೈಲುಗಳ ಸಂಚಾರಕ್ಕೆ ಅವಕಾಶ ಮಾಡಿಕೊಡಬೇಕು.
* ಎಲ್ಲ ರೈಲುಗಳ ಸಂಚಾರವನ್ನು ನಗರದ ಹೊರಗೆ ಕೊನೆಗೊಳಿಸಬಹುದು. ನವೀಕರಿಸಲಾಗದ ಇಂಧನಕ್ಕಿಂತ ನವೀಕರಿಸಬಹುದಾದ ಇಂಧನವನ್ನು ಬಳಕೆ ಮಾಡಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT