ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜನಗಣತಿ ನೆಪದಲ್ಲಿ ನಗ–ನಾಣ್ಯ ದೋಚಿದ್ದ ಗ್ಯಾಂಗ್

ಸಂಬಂಧಿಯಿಂದಲೇ ಮಾಹಿತಿ ರವಾನೆ * ಪರಪ್ಪನ ಅಗ್ರಹಾರದಲ್ಲಿ ಸಂಚು ರೂಪಿಸಿದ್ದ ಆರೋಪಿಗಳು
Last Updated 20 ಅಕ್ಟೋಬರ್ 2016, 19:35 IST
ಅಕ್ಷರ ಗಾತ್ರ

ಬೆಂಗಳೂರು: ಜನಗಣತಿ ಮಾಡುವ ಸೋಗಿನಲ್ಲಿ ಮನೆಗೆ ನುಗ್ಗಿ ನಗದು–ಚಿನ್ನಾಭರಣ ದೋಚಿ ಪರಾರಿಯಾಗಿದ್ದ 10 ಮಂದಿ ಡಕಾಯಿತರ ಗ್ಯಾಂಗ್, ರಾಜಗೋಪಾಲನಗರ ಪೊಲೀಸರ ಬಲೆಗೆ ಬಿದ್ದಿದೆ.

‘ಮಂಡ್ಯ ಜಿಲ್ಲೆಯ ರಾಜ ಅಲಿಯಾಸ್ ಕ್ಯಾಟ್, ಪ್ರೇಮ್‌ಕುಮಾರ, ರಾಮನಗರದ ಕೃಷ್ಣ, ತುಮಕೂರಿನ ಶ್ರೀಕಾಂತ ಅಲಿಯಾಸ್ ಪಾನಿ, ಬೆಂಗಳೂರು ಕಮಲಾನಗರದ ರಾಜೇಶ್, ಅರುಣ ಅಲಿಯಾಸ್ ಪಳನಿ, ಕಿರಣ್‌, ನಂದಿನಿಲೇಔಟ್‌ನ ಹರೀಶ್, ಆನೇಕಲ್‌ನ ಚರಣ್‌ ರಾಜ್ ಹಾಗೂ ಪ್ರೇಮ್‌ಕುಮಾರ್ ಎಂಬುವರನ್ನು ಬಂಧಿಸಲಾಗಿದೆ’ ಎಂದು ಹಿರಿಯ ಅಧಿಕಾರಿಗಳು ಹೇಳಿದ್ದಾರೆ.

ಸೆ.5ರಂದು ರಾಜಗೋಪಾಲನಗರ ಮುಖ್ಯರಸ್ತೆಯ ಮನೆಗೆ ನುಗ್ಗಿದ್ದ ಈ ಗ್ಯಾಂಗ್, ವೆಂಕಟೇಶ್ ಹಾಗೂ ನಾಗರಾಜ್ ಎಂಬುವರ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿತ್ತು. ನಂತರ ಹಾರೆಯಿಂದ ಅಲ್ಮೆರಾ ಮೀಟಿ, ₹ 6 ಲಕ್ಷ ಮೌಲ್ಯದ ಚಿನ್ನಾಭರಣ ದೋಚಿ ಪರಾರಿಯಾಗಿತ್ತು ಎಂದು ಪೊಲೀಸರು ಹೇಳಿದ್ದಾರೆ.

₹ 2 ಕೋಟಿಗೆ ಬಂದಿದ್ದರು:  ವೆಂಕಟೇಶ್ ತಂದೆ ತಿಮ್ಮೇಗೌಡ ಅವರು ರಾಜಗೋಪಾಲನಗರ ಮುಖ್ಯರಸ್ತೆಯಲ್ಲಿ ‘ಕಪಿಲಾ ವೈನ್ಸ್’ ಮದ್ಯದ ಅಂಗಡಿ ನಡೆಸುತ್ತಿದ್ದು, ಅವರ ಕುಟುಂಬ ಅದೇ ಕಟ್ಟಡದ ಮೊದಲ ಮಹಡಿಯಲ್ಲಿ ನೆಲೆಸಿದೆ.

ಅವರ ಸಂಬಂಧಿಯೊಬ್ಬ ಕೊಲೆ ಪ್ರಕರಣದಲ್ಲಿ ಇತ್ತೀಚೆಗೆ ಪರಪ್ಪನ ಅಗ್ರಹಾರ ಕಾರಾಗೃಹ ಸೇರಿದ್ದ. ಇದೇ ಸಂದರ್ಭದಲ್ಲಿ ಕ್ಯಾಟ್ ರಾಜನ ಗ್ಯಾಂಗ್‌ ಕೂಡ ಜೈಲಿನಲ್ಲಿತ್ತು. ತಿಮ್ಮೇಗೌಡ ಅವರು ಮನೆಯಲ್ಲಿ ₹ 2 ಕೋಟಿ ಇಟ್ಟಿರುವುದಾಗಿ ಆ ಸಂಬಂಧಿಯು ಗ್ಯಾಂಗ್‌ ಸದಸ್ಯರಿಗೆ ಮಾಹಿತಿ ಕೊಟ್ಟಿದ್ದ.  ಜೈಲಿಂದ ಬಿಡುಗಡೆಯಾದ ಕೂಡಲೇ ಆ ಹಣ ದೋಚಬೇಕೆಂದು ಆರೋಪಿಗಳು ಸಂಚು ರೂಪಿಸಿಕೊಂಡಿದ್ದರು.

ಸೆ.1ರಂದು ಜೈಲಿನಿಂದ ಹೊರಬಂದ ಆರೋಪಿಗಳು, ಸೆ.5ರಂದು ಜನಗಣತಿ ಮಾಡುವವರ ಸೋಗಿನಲ್ಲಿ ಅವರ ಮನೆಗೆ ನುಗ್ಗಿದ್ದರು. ಆ ದಿನ ಸಂಬಂಧಿಯೊಬ್ಬರು ನಿಧನ ಹೊಂದಿದ್ದರಿಂದ ವೆಂಕಟೇಶ್ ಹೊರತುಪಡಿಸಿ ಕುಟುಂಬ ಸದಸ್ಯರೆಲ್ಲ ತುಮಕೂರಿನ ಹೆಬ್ಬೂರಿಗೆ ಹೋಗಿದ್ದರು.

ಕೈ–ಕಾಲು ಕಟ್ಟಿದ್ದರು: ಮೊದಲು ನಾಲ್ಕು ಮಂದಿ ಮನೆ ಹತ್ತಿರ ಹೋಗಿ ಬಾಗಿಲು ಬಡಿದಿದ್ದರು. ‘ನಾವು ಜನಗಣತಿ ಮಾಡುವವರು. ನಿಮ್ಮ ಮನೆಯಲ್ಲಿ ಎಷ್ಟು ಜನ ಇದ್ದೀರಾ’ ಎಂದು ಪ್ರಶ್ನೆ ಮಾಡುತ್ತಾ ಅವರ ಗಮನ ಬೇರೆಡೆ ಸೆಳೆದಿದ್ದರು. ಈ ಹಂತದಲ್ಲಿ ಮಚ್ಚುಗಳನ್ನು ಹಿಡಿದು ಮೇಲೆ ಬಂದ ಉಳಿದ ಆರೋಪಿಗಳು, ಸೀದಾ ಒಳಗೆ ನುಗ್ಗಿ ಅವರನ್ನು ಬೆದರಿಸಿದ್ದರು.

‘₹ 2 ಕೋಟಿ ಎಲ್ಲಿಟ್ಟಿದ್ದೀಯಾ. ಆ ಹಣ ಕೊಟ್ಟರೆ ಸುಮ್ಮನೆ ಹೋಗುತ್ತೇವೆ’ ಎಂದು ವೆಂಕಟೇಶ್ ಅವರನ್ನು ಕೇಳಿದ್ದರು. ತಮ್ಮ ಬಳಿ ಹಣವಿಲ್ಲ ಎಂದಿದ್ದಕ್ಕೆ ಕುತ್ತಿಗೆಯತ್ತ ಮಚ್ಚು ಬೀಸಿದ್ದರು. ಈ ಸಂದರ್ಭದಲ್ಲಿ ಅವರು ಕೈ ಅಡ್ಡ ಕೊಟ್ಟಿದ್ದರಿಂದ ಜೀವ ಉಳಿದಿತ್ತು ಎಂದು ಪೊಲೀಸರು ವಿವರಿಸಿದ್ದಾರೆ.

ಇದೇ ಸಂದರ್ಭದಲ್ಲೇ ಕಾರು ಚಾಲಕ ನಾಗರಾಜ್ ಅವರು ಮನೆಗೆ ಬಂದಿದ್ದರು. ಅವರಿಗೂ ಮಚ್ಚಿನಿಂದ ಹೊಡೆದಿದ್ದ ಆರೋಪಿಗಳು, ಕಿಟಕಿಗೆ ಹಾಕಿದ್ದ ಪರದೆಗಳನ್ನು ಕಿತ್ತುಕೊಂಡು ಇಬ್ಬರ ಕೈ–ಕಾಲುಗಳನ್ನೂ ಕಟ್ಟಿ ಹಾಕಿದ್ದರು.

ಬಳಿಕ ಹಾರೆಯಿಂದ ಅಲ್ಮೆರಾ ಮೀಟಿ ಚಿನ್ನಾಭರಣ ದೋಚಿ ಪರಾರಿಯಾಗಿದ್ದರು. ಸ್ವಲ್ಪ ಸಮಯ ರಕ್ತದ ಮಡುವಿನಲ್ಲಿ ಒದ್ದಾಡಿದ್ದ ನಾಗರಾಜ್ ಮತ್ತು ವೆಂಕಟೇಶ್, ಪರದೆ ಬಿಚ್ಚಿಕೊಂಡು ಮನೆಯಿಂದ ಹೊರ ಬಂದಿದ್ದರು.

ಸುಳಿವು ಸಿಕ್ಕಿದ್ದು ಹೇಗೆ?
‘ಈ ಗ್ಯಾಂಗ್‌ ಹತ್ತು ವರ್ಷಗಳಿಂದ ಅಪರಾಧ ಕೃತ್ಯಗಳಲ್ಲಿ ತೊಡಗಿದೆ. ಆರೋಪಿಗಳ ವಿರುದ್ಧ ಉಪ್ಪಾರಪೇಟೆ, ಕೋರಮಂಗಲ, ಕೆ.ಆರ್.ಪುರ, ಹೆಬ್ಬಗೋಡಿ, ರಾಮನಗರ ಜಿಲ್ಲೆಯ ಕಗ್ಗಲೀಪುರ, ಸೋಮನಹಳ್ಳಿ, ಹಾಸನ, ಮಂಡ್ಯ ಹಾಗೂ ತುಮಕೂರು ಪೊಲೀಸ್ ಠಾಣೆಗಳಲ್ಲಿ ಇವರ ವಿರುದ್ಧ 30ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿವೆ’ ಎಂದು ಅಧಿಕಾರಿಯೊಬ್ಬರು ತಿಳಿಸಿದರು.

‘ವೆಂಕಟೇಶ್ ಅವರು ದೂರು ಕೊಟ್ಟ ಬಳಿಕ, ಇತ್ತೀಚೆಗೆ ಜೈಲಿನಿಂದ ಬಿಡುಗಡೆಯಾದ ಡಕಾಯಿತರ ವಿವರಗಳನ್ನು ಪರಿಶೀಲಿಸಲಾಯಿತು. ನಾಲ್ಕು ದಿನಗಳ ಹಿಂದಷ್ಟೇ ಕ್ಯಾಟ್ ರಾಜನ ಗ್ಯಾಂಗ್ ಕಾರಾಗೃಹದಿಂದ ಹೊರಬಂದಿತ್ತು.’

‘ಅನುಮಾನದ ಮೇಲೆ ಗ್ಯಾಂಗ್‌ನ ಕೆಲ ಸದಸ್ಯರನ್ನು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿದಾಗ, ಅವರು  ತಪ್ಪೊಪ್ಪಿಕೊಂಡರು. ಆರೋಪಿಗಳಿಂದ 142 ಗ್ರಾಂ ಚಿನ್ನ, 2 ಕೆ.ಜಿ. ಬೆಳ್ಳಿ, ಕೃತ್ಯಕ್ಕೆ ಬಳಸಿದ್ದ ಮಚ್ಚು ಹಾಗೂ ಬೈಕನ್ನು ಜಪ್ತಿ ಮಾಡಲಾಗಿದೆ’ ಎಂದು ಅಧಿಕಾರಿಗಳು ಮಾಹಿತಿ ನೀಡಿದರು.

ಮುಖ್ಯಾಂಶಗಳು
* ಮನೆಗೆ ನುಗ್ಗಿ ಒಡವೆ ಲೂಟಿ

*  ಸೆರೆ ಸಿಕ್ಕ ಕ್ಯಾಟ್ ರಾಜನ ಗ್ಯಾಂಗ್ 
* ಇಬ್ಬರಿಗೆ ಮಚ್ಚಿನಿಂದ ಹೊಡೆದಿದ್ದ ಆರೋಪಿಗಳು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT