ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

12 ಸ್ಥಾಯಿ ಸಮಿತಿಗಳಿಗೆ ಆಯ್ಕೆ

Last Updated 20 ಅಕ್ಟೋಬರ್ 2016, 19:53 IST
ಅಕ್ಷರ ಗಾತ್ರ

ಬೆಂಗಳೂರು: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ (ಬಿಬಿಎಂಪಿ) 12 ಸ್ಥಾಯಿ ಸಮಿತಿಗಳಿಗೆ ಗುರುವಾರ ನಡೆದ ಚುನಾವಣೆಯಲ್ಲಿ 132 ಸದಸ್ಯರು ಅವಿರೋಧವಾಗಿ ಆಯ್ಕೆಯಾದರು. ಪ್ರಾದೇಶಿಕ ಆಯುಕ್ತೆ ಎಂ.ವಿ. ಜಯಂತಿ ಅಧ್ಯಕ್ಷತೆಯಲ್ಲಿ ಚುನಾವಣಾ ಪ್ರಕ್ರಿಯೆ ನಡೆಯಿತು.

ಶಿಕ್ಷಣ ಮತ್ತು ಮಾರುಕಟ್ಟೆ ಸ್ಥಾಯಿ ಸಮಿತಿಗಳ ಸದಸ್ಯ ಸ್ಥಾನಕ್ಕೆ ಕಾಂಗ್ರೆಸ್ ಸದಸ್ಯರು ಸಲ್ಲಿಸಿದ್ದ ನಾಮಪತ್ರಗಳನ್ನು ಹಿಂಪಡೆದರು. ಈ ವೇಳೆ ಹೊಸದಾಗಿ ನಾಮಪತ್ರ ಸ್ವೀಕರಿಸಿದ ಪ್ರಾದೇಶಿಕ ಆಯುಕ್ತರು, ಮರು ಚುನಾವಣೆ ನಡೆಸುವುದಾಗಿ ಪ್ರಕಟಿಸಿದರು.

ಇದಕ್ಕೆ ಪ್ರತಿಪಕ್ಷ ನಾಯಕ ಪದ್ಮನಾಭರೆಡ್ಡಿ ಆಕ್ಷೇಪ ವ್ಯಕ್ತಪಡಿಸಿದರು. ‘ಕಣದಲ್ಲಿರುವ ಬಿಜೆಪಿ ಸದಸ್ಯರ ಆಯ್ಕೆಯನ್ನು ಅಂತಿಮಗೊಳಿಸಬೇಕು’ ಎಂದು ಒತ್ತಾಯಿಸಿದರು.

ಶಾಸಕ ಎಸ್.ಮುನಿರಾಜು, ‘ಪ್ರತಿಪಕ್ಷಗಳ ಅಭಿಪ್ರಾಯವನ್ನು ಪ್ರಾದೇಶಿಕ ಆಯುಕ್ತರು ಗಣನೆಗೆ ತೆಗೆದುಕೊಳ್ಳುತ್ತಿಲ್ಲ. ಕಾಂಗ್ರೆಸ್ ಸದಸ್ಯರ ಏಜೆಂಟರಂತೆ
ಅವರು ಕಾರ್ಯನಿರ್ವಹಿಸುತ್ತಿದ್ದಾರೆ’ ಎಂದು ದೂರಿದರು.

ಶಾಸಕರ ಆರೋಪಕ್ಕೆ ಪ್ರತಿಕ್ರಿಯಿಸಿದ ಜಯಂತಿ, ‘ಪ್ರತಿ ಸ್ಥಾಯಿ ಸಮಿತಿಗೆ 11 ಸದಸ್ಯರು ಇರಬೇಕು. ಆದರೆ, ಕೆಲವರು ನಾಮಪತ್ರ ಹಿಂಪಡೆದಿದ್ದಾರೆ. ಹೀಗಾಗಿ ನಾಮಪತ್ರ ಸಲ್ಲಿಕೆಗೆ ಕಾಲಾವಕಾಶ ನೀಡಿದ ಬಳಿಕ ಆಯ್ಕೆ ಪ್ರಕ್ರಿಯೆ ನಡೆಸಲಾಗುತ್ತದೆ’ ಎಂದರು.

ಶಿಕ್ಷಣ ಸ್ಥಾಯಿ ಸಮಿತಿಗೆ ನಾಮಪತ್ರ ಸಲ್ಲಿಸಿದ್ದ ಕಾಂಗ್ರೆಸ್‌ನ ಯುವರಾಜ್, ಮಂಜುಳಾ, ಚಂದ್ರಕಲಾ, ಪ್ರಮೋದ್, ಉಮ್ಮೆ ಸಲ್ಮಾ ನಾಮಪತ್ರ ವಾಪಸ್ ಪಡೆದರು. ಮಾರುಕಟ್ಟೆ ಸ್ಥಾಯಿ ಸಮಿತಿ ಚುನಾವಣೆ ವೇಳೆ ಎರಡು ನಾಮಪತ್ರ ಸಲ್ಲಿಸಿದ್ದ ಗಾಯತ್ರಿ ಒಂದು ನಾಮಪತ್ರವನ್ನು ಹಿಂಪಡೆದರೆ, ನಾಗಭೂಷಣ, ಸೈಯದ್ ನಾಜಿರಾ, ಎಂ. ಶಿವರಾಜು ಸಹ ನಾಮಪತ್ರ ವಾಪಸ್ ಪಡೆದರು.

ಹಾಗಾಗಿ ಎರಡೂ ಸ್ಥಾಯಿ ಸಮಿತಿಗಳಿಗೆ ಅಗತ್ಯವಿರುವಷ್ಟು ಸದಸ್ಯರು ಇಲ್ಲದೇ ಇದ್ದಿದ್ದರಿಂದ ಮತ್ತೆ ನಾಮಪತ್ರ ಸಲ್ಲಿಸಿ ಚುನಾವಣೆ ನಡೆಸುವುದಾಗಿ ಚುನಾವಣಾಧಿಕಾರಿ ಜಯಂತಿ  ತಿಳಿಸಿದರು. ಇದಕ್ಕೆ ಬಿಜೆಪಿ ಸದಸ್ಯರು ವಿರೋಧ ವ್ಯಕ್ತಪಡಿಸಿದರು. ಹೀಗಾಗಿ ಮಾರುಕಟ್ಟೆ ಸ್ಥಾಯಿ ಸಮಿತಿ ಸದಸ್ಯರ ಆಯ್ಕೆ ಚುನಾವಣೆ ಮಧ್ಯಾಹ್ನಕ್ಕೆ ಮುಂದೂಡಲಾಯಿತು. ಮಧ್ಯಾಹ್ನ ಮತ್ತೆ ಸಭೆ ಸೇರಿ ಚುನಾವಣಾ ಪ್ರಕ್ರಿಯೆ ಪೂರೈಸಲಾಯಿತು.

ಸ್ಥಾಯಿ ಸಮಿತಿಗಳ ಅಧ್ಯಕ್ಷರ ವಿವರ ಹೀಗಿದೆ: ತೆರಿಗೆ ಮತ್ತು ಆರ್ಥಿಕ ಸ್ಥಾಯಿ ಸಮಿತಿ–ಎಂ.ಕೆ. ಗುಣಶೇಖರ್‌ (ಜಯಮಹಲ್‌), ತೋಟಗಾರಿಕೆ ಸ್ಥಾಯಿ ಸಮಿತಿ– ಮೀನಾಕ್ಷಿ (ಬೆನ್ನಿಗಾನಹಳ್ಳಿ), ಬೃಹತ್‌ ಸಾರ್ವಜನಿಕ ಕಾಮಗಾರಿ ಸ್ಥಾಯಿ ಸಮಿತಿ– ಚಂದ್ರಪ್ಪ (ಹೊಂಬೇಗೌಡನಗರ), ಅಪೀಲುಗಳ ಸ್ಥಾಯಿ ಸಮಿತಿ ಜಿ.ಕೆ. ವೆಂಕಟೇಶ್‌ (ಯಶವಂತಪುರ)– ನಾಲ್ವರೂ ಕಾಂಗ್ರೆಸ್‌.

ನಗರ ಯೋಜನೆ ಮತ್ತು ಅಭಿವೃದ್ಧಿ ಸ್ಥಾಯಿ ಸಮಿತಿ– ಮಂಜುಳಾ ನಾರಾಯಣಸ್ವಾಮಿ (ಲಗ್ಗೆರೆ), ವಾರ್ಡ್‌ಮಟ್ಟದ ಸಾರ್ವಜನಿಕ ಸ್ಥಾಯಿ ಸಮಿತಿ– ಭದ್ರೇಗೌಡ (ನಾಗಪುರ), ಲೆಕ್ಕಪತ್ರ ಸ್ಥಾಯಿ ಸಮಿತಿ– ನೇತ್ರಾ ನಾರಾಯಣ್‌ (ಕಾವಲ್‌ ಬೈರಸಂದ್ರ), ಶಿಕ್ಷಣ ಸ್ಥಾಯಿ ಸಮಿತಿ– ನಜೀಬಾ ಖಾನಂ (ಕೆ.ಆರ್‌. ಮಾರುಕಟ್ಟೆ)– ನಾಲ್ವರೂ ಜೆಡಿಎಸ್‌.

ಆರೋಗ್ಯ ಸ್ಥಾಯಿ ಸಮಿತಿ–ಆನಂದಕುಮಾರ್‌ (ಹೊಯ್ಸಳನಗರ), ಮಾರುಕಟ್ಟೆ ಸ್ಥಾಯಿ ಸಮಿತಿ–ಎಂ.ಗಾಯತ್ರಿ (ಕೆಂಪಾಪುರ ಅಗ್ರಹಾರ), ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ–ಏಳುಮಲೈ (ಸಗಾಯಪುರ), ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಸ್ಥಾಯಿ ಸಮಿತಿ–ಚಂದ್ರಪ್ಪ ರೆಡ್ಡಿ (ಕೋನೇನ ಅಗ್ರಹಾರ) –ಎಲ್ಲರೂ ಪಕ್ಷೇತರ.

ತೆರಿಗೆ ಸಮಿತಿಗೆ ಗುಣಶೇಖರ್‌ ಅಧ್ಯಕ್ಷ
ತೆರಿಗೆ ಮತ್ತು ಆರ್ಥಿಕ ಸ್ಥಾಯಿ ಸಮಿತಿಗೆ ಜಯಮಹಲ್‌ ವಾರ್ಡ್‌ನ ಕಾಂಗ್ರೆಸ್‌ ಸದಸ್ಯ ಎಂ.ಕೆ. ಗುಣಶೇಖರ್‌ ನೇಮಕಗೊಂಡಿದ್ದಾರೆ. ಗುಣಶೇಖರ್‌ ಅವರ ಹೆಸರು ಆಡಳಿತ ಪಕ್ಷದ ನಾಯಕನ ಹುದ್ದೆಗೆ ಕೇಳಿಬಂದಿತ್ತು. ಗುರಪ್ಪನಪಾಳ್ಯ ವಾರ್ಡ್‌ನ ಮೊಹಮ್ಮದ್‌ ರಿಜ್ವಾನ್‌ ಅವರು ಆಡಳಿತ ಪಕ್ಷದ ನಾಯಕರಾಗಲಿದ್ದಾರೆ ಎಂದು ತಿಳಿದುಬಂದಿದೆ.

ಬಿಬಿಎಂಪಿ ಸ್ಥಾಯಿ ಸಮಿತಿಗಳಿಗೆ ಗುರುವಾರ ಚುನಾವಣೆ ನಡೆಯಿತು. ಕಾಂಗ್ರೆಸ್‌, ಜೆಡಿಎಸ್‌ ಹಾಗೂ ಪಕ್ಷೇತರ ಸದಸ್ಯರಿಗೆ ತಲಾ ನಾಲ್ಕು ಅಧ್ಯಕ್ಷ ಸ್ಥಾನಗಳನ್ನು ನಿಗದಿ ಮಾಡಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT