ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೂದಲ ಕಲೆಗೊಂದು ಮ್ಯೂಸಿಯಂ

Last Updated 21 ಅಕ್ಟೋಬರ್ 2016, 19:30 IST
ಅಕ್ಷರ ಗಾತ್ರ

ಮಹಿಳೆಯರು ತಮ್ಮ ಕೂದಲಿನ ಪೋಷಣೆಗೆ ವಿಶೇಷ ಮಹತ್ವ ನೀಡುತ್ತಾರೆ. ಕೂದಲು ನುಣುಪಾಗಿರುವುದರ ಜೊತೆಗೆ ಅದು ವಿನ್ಯಾಸ ಮಾಡುವಾಗ ಹೇಳಿದಂತೆ ಕೇಳಬೇಕು ಎಂಬ ಕಾರಣಕ್ಕೆ ಎಷ್ಟೇ ಒತ್ತಡದಲ್ಲಿದ್ದರೂ ಕೂದಲ ಆರೈಕೆಗೆ ಒಂದಷ್ಟು ಸಮಯವನ್ನು ಮೀಸಲಿಡುತ್ತಾರೆ.  ಇದೇ ರೀತಿ ಕೇಶದ ಬಗ್ಗೆ ವಿಶೇಷ ಪ್ರೀತಿ ಹೊಂದಿರುವವರು ಅಮೆರಿಕದ ಲೈಲಾ ಚೌಹೂನ್. ಆದರೆ ಕೇಶ ರಕ್ಷಣೆಗೆ ಇವರು ಕಂಡುಕೊಂಡ ದಾರಿ ವಿಭಿನ್ನವಾಗಿದೆ.

ಇವರಿಗೆ ಕೇಶವಿನ್ಯಾಸದಲ್ಲಿ ವಿಶೇಷ ಆಸಕ್ತಿ. ಹಾಗಾಗಿ ಇವರು ಅದನ್ನೇ ವೃತ್ತಿಯಾಗಿ ಸ್ವೀಕರಿಸಿದ್ದಾರೆ. ಜೊತೆಗೆ ಕೂದಲಿನಿಂದ ತಯಾರಿಸಿರುವ ಕಲಾತ್ಮಕ ವಸ್ತುಗಳಿಗೆಂದೇ ಒಂದು ಮ್ಯೂಸಿಯಂ ಕೂಡ ಆರಂಭಿಸಿದ್ದಾರೆ.ಅಮೆರಿಕದ ಮಿಸೂರಿಯಲ್ಲಿ ‘ಲೈಲಾ ಹೇರ್‌ ಮ್ಯೂಸಿಯಂ’ ಎಂದೇ ಇದು ಪ್ರಸಿದ್ಧವಾಗಿದೆ. ಈ ಮ್ಯೂಸಿಯಂ ಒಳಹೊಕ್ಕರೆ ಸುಮಾರು 600ಕ್ಕೂ ಹೆಚ್ಚು ಹೂವಿನ ದಂಡೆಗಳಂಥ ಕೇಶಹಾರಗಳು ಮತ್ತು ಕೂದಲಿನಿಂದ ತಯಾರಿಸಿರುವ ಸಾವಿರಾರು ಆಭರಣಗಳು ಮನಸೆಳೆಯುತ್ತವೆ.

ಲೈಲಾ ಮ್ಯೂಸಿಯಂ ಆರಂಭದ ಹಿಂದೆ ಒಂದು ಕುತೂಹಲಕಾರಿ ಘಟನೆಯಿದೆ. ಒಮ್ಮೆ ಇವರು ಸ್ನೇಹಿತರ ಜೊತೆಗೆ ಶಾಪಿಂಗ್‌ಗೆ ಹೋದಾಗ ಅಲ್ಲಿ  ಬಂಗಾರದ ಫ್ರೇಮ್‌ ಒಳಗೆ ನೀಲಿಬಣ್ಣದ ಹಿನ್ನೆಲೆಯ ಮೇಲೆ ಕೂದಲಿನಿಂದ ತಯಾರಿಸಿದ ಹೂವಿನ ಆಕೃತಿಯೊಂದು ಇವರ ಮನ ಸೆಳೆಯಿತು.

ಆದರೆ ಇದನ್ನು ಕಂಡ ತಕ್ಷಣ ಅದು ಕೂದಲಿನಿಂದ ಮಾಡಿರುವುದು ಎಂದು ಸುಲಭವಾಗಿ ತಿಳಿಯುವಂತಿರಲಿಲ್ಲ. ಆದರೆ  ಕೂದಲಿನ ಬಗ್ಗೆ ಇವರಿಗೆ ವಿಪರೀತ ಆಸಕ್ತಿಯಿರುವುದರಿಂದ, ಒಂದೇ ನೋಟದಲ್ಲಿ ಅದು ಕೂದಲಿನಿಂದ ತಯಾರಿಸಿರುವುದು ಎಂಬುದನ್ನು  ಅರಿತುಕೊಂಡರು. ಅದನ್ನು ಕೊಂಡುಕೊಂಡು ಪತಿಗೆ ಕೊಡುಗೆಯಾಗಿ ನೀಡಿದರು. ಹೀಗೆ ಒಂದರಿಂದ ಪ್ರಾರಂಭದ ಈ ಸಂಗ್ರಹ ಇಂದು ಸಾವಿರವನ್ನು ದಾಟಿದೆ.

ಇವರ ಬತ್ತಳಿಕೆಯಲ್ಲಿ ಒಂದೊಂದು ಕೂದಲಿನ ಕಲಾತ್ಮಕ ವಸ್ತುಗಳು ಸೇರತೊಡಗುತ್ತಿದ್ದಂತೆ ಅದಕ್ಕಾಗಿ ಒಂದು ಚಿಕ್ಕ ಮ್ಯೂಸಿಯಂ ಅನ್ನು ಇವರು ತಮ್ಮ ಅಂಗಡಿಯ ಮುಂದೆಯೇ ಪ್ರಾರಂಭಿಸಿದರು.  ನಂತರ ಸಂಗ್ರಹದ ಪ್ರಮಾಣ ಅಧಿಕವಾಗುತ್ತಿದ್ದಂತೆ ಮ್ಯೂಸಿಯಂ ಕೂಡ ವಿಸ್ತಾರವಾಯಿತು. ಇಲ್ಲಿ ಸುಮಾರು 600ಕ್ಕೂ ಹೆಚ್ಚು ಹೂದಂಡೆ ಮತ್ತು ಸಾವಿರಕ್ಕೂ ಹೆಚ್ಚು ಕೂದಲಿನ ಆಭರಣಗಳಿವೆ. 

ಹಳೆಯ ಅಂಗಡಿ, ಜೊತೆಗೆ ಹರಾಜುಗಳಿಗೆ ಹೋಗಿ ಕೂದಲಿನ ಕಲಾತ್ಮಕ ವಸ್ತುಗಳನ್ನು ಕೊಂಡುಕೊಳ್ಳುತ್ತಾರೆ. ಇವರ ಮ್ಯೂಸಿಯಂ ಬಗ್ಗೆ ತಿಳಿದವರು ತಮ್ಮ ಬಳಿ ಇರುವ ಕೂದಲಿನ ಕಲಾತ್ಮಕ ವಸ್ತುಗಳನ್ನು ಇವರಿಗೆ ದಾನವಾಗಿ ನೀಡಿದ್ದಾರೆ. ಇಲ್ಲಿರುವ ಕಲಾತ್ಮಕ ವಸ್ತುಗಳು ಎಷ್ಟು ಹಳೆಯವು, ಯಾವ ಕಾಲಕ್ಕೆ ಸೇರಿದವು ಎನ್ನುವುದಕ್ಕೆ ಸರಿಯಾದ ಪುರಾವೆಗಳಿಲ್ಲ. 

ಹನ್ನೆರಡನೆ ಶತಮಾನದ ರಾಣಿ ವಿಕ್ಟೋರಿಯಾ ಕಾಲದಲ್ಲಿ ಈ ಕೂದಲಿನ ಕಲಾತ್ಮಕತೆಗೆ ಪ್ರಾಮುಖ್ಯ ದೊರಕಿತು ಎನ್ನಲಾಗುತ್ತದೆ. ಕ್ಯಾಮೆರಾ ಬರುವುದಕ್ಕೆ ಮುಂಚೆ ಪ್ರೀತಿಪಾತ್ರರ  ನೆನಪನ್ನು ಹಸಿರಾಗಿಸುವ ಉದ್ದೇಶದಿಂದ ಈ ಕೂದಲ ವಿನ್ಯಾಸ ಪ್ರಾಮುಖ್ಯ ಪಡೆಯಿತು. ವ್ಯಕ್ತಿ ಸತ್ತ ನಂತರ ಅವನ ಕೂದಲಿನಿಂದ ಕಲಾತ್ಮಕ ವಿನ್ಯಾಸವನ್ನು ಮಾಡಿ, ಅದನ್ನು  ಮನೆಯಲ್ಲಿ ಇಟ್ಟುಕೊಳ್ಳುತ್ತಿದ್ದರು. ಅವನ ನೆನಪನ್ನು ಜೀವಂತವಾಗಿರಿಸಿಕೊಳ್ಳುವುದು ಇದರ ಹಿಂದಿರುವ ಉದ್ದೇಶ.

ಈ ಮ್ಯೂಸಿಯಂನಲ್ಲಿರುವ ಕೂದಲಿನ ಕೆಲವು ಕಲಾತ್ಮಕ ವಸ್ತುಗಳು ಅವು ಯಾರ ಕೂದಲಿನಿಂದ ತಯಾರಾಗಿದೆ ಎಂಬುದರ ಕಥೆಯನ್ನೂ ತಿಳಿಸುತ್ತದೆ.  25ರ ಪ್ರಾಯದ ಯುವತಿಯೊಬ್ಬಳು ಮೃತಪಟ್ಟಾಗ ಆಕೆಯ ಪತಿ ಪರಿತಪಿಸುವ ಪರಿಯನ್ನು ಕೂದಲಿನಲ್ಲಿ ಚಿತ್ರಿಸಲಾಗಿದೆ. ಜೊತೆಗೆ ಕೆಲವು ಕಲಾಕೃತಿಗಳಲ್ಲಿ ವ್ಯಕ್ತಿಯ  ಹೆಸರಿನ ಜೊತೆಗೆ ಅವರ ಜನ್ಮ ಮತ್ತು ಮರಣದಿನಾಂಕವನ್ನು ತಿಳಿಸಲಾಗಿದೆ. ಲೈಲಾ ಈ ಕೇಶ ಸಂಗ್ರಹದ ಕುರಿತು ‘ಹೇರ್‌ ಜೀನಿಯಾಲಜಿ’ ಎಂಬ ಪುಸ್ತಕವನ ಬರೆಯುತ್ತಿದ್ದಾರೆ.

ಅಪರೂಪದ ಈ ಕೂದಲಿನ ವಿನ್ಯಾಸಕ್ಕೆ ಜಾಣ್ಮೆಯಲ್ಲದೆ,  35 ರೀತಿಯ ತಾಂತ್ರಿಕ ಕೌಶಲದ ಅಗತ್ಯವೂ  ಇದೆಯಂತೆ. ಅದರಲ್ಲಿ ಇವರು 30 ರೀತಿಯ ತಂತ್ರಜ್ಞಾನದಲ್ಲಿ  ಸಿದ್ಧಿ ಪಡೆದಿದ್ದಾರಂತೆ; ಇನ್ನುಳಿದ ಐದನ್ನು ಕಲಿಯುವ ಪ್ರಯತ್ನವನ್ನೂ  ಮಾಡುತ್ತಿದ್ದಾರೆ. ಈ ಮ್ಯೂಸಿಯಂಗೆ ಹಲವರು ಕಲಾತ್ಮಕ ವಸ್ತುಗಳನ್ನು ಕೊಡುಗೆಯಾಗಿಯೂ ನೀಡಿದ್ದಾರೆ.ಈ ಮ್ಯೂಸಿಯಂನ ಪ್ರವೇಶ ಶುಲ್ಕ ವಯಸ್ಕರಿಗಾದರೆ 1,000, ಮಕ್ಕಳು ಮತ್ತು ಹಿರಿಯ ನಾಗರಿಕರಿಗೆ 500 ರೂಪಾಯಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT