ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶೈಶವದ ತುರಿಗಜ್ಜಿ ವೈದ್ಯರಿಗೆ ಸವಾಲು

Last Updated 21 ಅಕ್ಟೋಬರ್ 2016, 19:30 IST
ಅಕ್ಷರ ಗಾತ್ರ

ಅಲರ್ಜಿ ಯುಗದಲ್ಲಿ ಅಂತಿಮವಾಗಿ ಎಲ್ಲವನ್ನೂ ಅಲರ್ಜಿ ಎಂದೇ ಗುಂಪಾಗಿ ಗುರುತಿಸುವರು. ಇದೀಗ ಹಿಂದಿನ ದಶಮಾನಗಳಿಗಿಂತ ಮಕ್ಕಳ ತುರಿಕೆ, ಕಜ್ಜಿ, ಚರ್ಮದ ಬಣ್ಣಗೆಡುವಿಕೆ ಕೇಸುಗಳು ದಿನೇ ದಿನೇ ಹೆಚ್ಚುತ್ತಿವೆ. ಕಾರಣವೇ ನಿಗೂಢ.

​ಇನ್ನು ಚಿಕಿತ್ಸೆ ಎಂದರೆ ಹಚ್ಚಲು ನಾಲ್ಕಾರು ಬಗೆಯ ಮುಲಾಮಗಳು ಬಂದಿವೆ. ಕಾರ್ಟಿಕೋಸ್ಟೆರಾಯಿಡ್ ಬಿಟ್ಟರೆ ಬೇರೆ ದಾರಿ ಇಲ್ಲ ಎಂಬ ಪರಿಸ್ಥಿತಿಯೂ ಇದೆ. ಆದರೆ ಅದರ ಅಡ್ಡ ಪರಿಣಾಮಗಳು ಮಾತ್ರ ಕಾಯಿಲೆಗಿಂತಲೂ ಕೆಲವೊಮ್ಮೆ ಗಂಭೀರವಾಗಿರುತ್ತವೆ.

ಶ್ರೇಯನಿಗೆ ಇನ್ನೂ ಎರಡು ವರ್ಷ ತುಂಬಿಲ್ಲ. ಮನೆಯಲ್ಲಿ ಏನೂ ತಿಂಡಿ ಮಾಡುವಂತಿಲ್ಲ. ಶ್ರೇಯಾ ಏನ್ನಾದರೂ ತಿಂದರೆ ಆಕೆಯ ನವೆ, ಕಜ್ಜಿ ಸೋರುವಿಕೆ ಉಲ್ಬಣಗೊಳ್ಳುತ್ತವೆ.

ಚರ್ಮರೋಗ ತಜ್ಞರು ಶ್ರೇಯನ ರೋಗಕ್ಕೆ ದೊಡ್ಡ ಹೆಸರಿಟ್ಟಿದ್ದಾರೆ. ‘ಎಟೊಪಿಕ್ ಡರ್ಮಟೈಟಿಸ್’ ಎಂಬ ಹಣೆ ಪಟ್ಟಿ. ಹೀಗಾಗಿ ಶ್ರೇಯನಿಗೆ ಏನನ್ನೂ ತಿನ್ನುವ ಸ್ವಾತಂತ್ರ್ಯ ಇಲ್ಲ.

ಕಡಲೆಕಾಯಿ ಉಂಡೆಯೋ ಎಳ್ಳುಂಡೆಯೋ ಒಬ್ಬಟ್ಟೋ, ಏನೂ ತಿಂದರಾಗದು. ಅಜ್ಜಿ ಮಂಗಲಮ್ಮನಿಗೆ ಸದಾ ಚಿಂತೆ. ಈ ಮಗುವಿಗೆ ಏನೂ ತಿನ್ನಿಸಲಾಗದು. ಆದರೆ ಮಗು ಬೆಳೆದೀತು ಹೇಗೆ? ರೋಗ ನಿರೋಧಕಶಕ್ತಿ ಹೆಚ್ಚುವುದಾದರೂ ಹೇಗೆ?

ಇದು ಶ್ರೇಯ ಒಬ್ಬಳ ತೊಂದರೆ ಅಲ್ಲ. ಹೊಸ ಪೀಳಿಗೆಯ ಅನೇಕ ಮಕ್ಕಳಿಗೆ ಇಂತಹ ತೊಂದರೆ ಕಾಡುತ್ತದೆ. ಪರಿಹಾರ ಮಾತ್ರ ಶೂನ್ಯ. ಕೆಲವೊಮ್ಮೆ ಹವಾಮಾನ ಬದಲಾದರೆ ನವೆ ತುರಿಕೆ ಹೆಚ್ಚಳ. ಮತ್ತೊಮ್ಮೆ ನಾಯಿ, ಬೆಕ್ಕಿನ ಸಹವಾಸದಿಂದ. ಇನ್ನೊಮ್ಮೆ ಗಾಳಿಯಲ್ಲಿ ಆಡಿದರೆ. ಮಗದೊಮ್ಮೆ ಒಂದು ತಾಸು ಸಂಜೆ ಬಿಸಿಲಲ್ಲಿ ಆಡಿದರೆ.

ಆಹಾರ, ತಿಂಡಿ ತಿನಿಸಿಗಂತೂ ಸದಾ ಎಚ್ಚರದ ನಡೆ ಅನಿವಾರ್ಯ. ಹೀಗೆ ಶ್ರೇಯನ ಚರ್ಮದ ಕಾಯಿಲೆಗೆ ಮನೆ ಮಂದಿಯೆಲ್ಲ ಹೈರಾಣಾಗಿದ್ದಾರೆ. ವೈದ್ಯರಿಂದ ಪರಿಹಾರ ದೊರಕದೆ ಹತಾಶರಾಗಿದ್ದಾರೆ.

ವೈದ್ಯಕೀಯ ವಲಯದಲ್ಲಿ ಒಂದು ಜೋಕು ರೂಢಿಯಲ್ಲಿದೆ. ಪದವೀಧರ ವೈದ್ಯರು ಮುಂದೆ ಯಾವ ವಿಶೇಷಜ್ಞತೆ ಪಡೆಯಬೇಕು ಎಂದು ಜಿಜ್ಞಾಸೆ ಇದ್ದೀತು. ಅನೇಕರು ಚರ್ಮರೋಗ ತಜ್ಞತೆಯನ್ನು ಅಪ್ಪಿಕೊಳ್ಳುತ್ತಾರಂತೆ. ಅದಕ್ಕೆ ಕಾರಣ ಹೀಗೆ – ಚರ್ಮರೋಗದಲ್ಲಿ ಯಾವತ್ತೂ ಎಮರ್ಜನ್ಸಿ ಕಾಲ್ ಖಂಡಿತ ಇಲ್ಲ.

ಯಾವುದೇ ಪ್ರಾಣಾಪಾಯದ ರಿಸ್ಕ್ ಖಂಡಿತ ಇಲ್ಲ. ಕಾಯಿಲೆಯಂತೂ ಖಂಡಿತ ಪೂರ್ತಿ ಗುಣವಾಗುವುದೇ ಇಲ್ಲ. ಹಾಗಾಗಿ ವೈದ್ಯರಿಗೆ ಸದಾ ಆದಾಯ ಮೂಲ ಬತ್ತುವುದಿಲ್ಲ.

ಹೇಗಿದೆ ಈ ಜೋಕ್‌ನ ಪರಿ? ಅದೇನೇ ಇರಲಿ. ಶೈಶವದ ತುರಿಗಜ್ಜಿಗೆ ಖಂಡಿತ ಈ ಜೋಕು ಅನ್ವಯ. ದೇಹ ಬಿಟ್ಟು ಸುಲಭಕ್ಕೆ ತೊಲಗದ ಪೀಡೆ ಶೈಶವದ ತುರಿಗಜ್ಜಿ. ಕೊನೆಗೆ ವೈದ್ಯರೂ ಹತಾಶರಾಗಿ ಈ ಕಾಯಿಲೆಗೆ ಸೋರಿಯಾಸಿಸ್ ಎಂಬ ಗುಣವಾಗದ ಹಣೆ ಪಟ್ಟಿ ಕಟ್ಟಿ, ಶ್ರೇಯನಂತಹ ನೂರಾರು ರೋಗಿಗಳ ಹೆತ್ತವರನ್ನು ಅಟ್ಟಿಬಿಡುತ್ತಾರೆ; ಸಮಾಧಾನ ಪಡಿಸುತ್ತಾರೆ.

ಮೂರೇ ತಿಂಗಳು ಮೀರದ ಅಹನಾಳಿಗೆ ಕೆನ್ನೆಯಲ್ಲಿ ಶುರುವಾದ ತುರಿಗಜ್ಜಿಗೆ ಮೊದಲು ಹೆಸರು ನೀಡಿದ್ದು ನ್ಯಾಪ್‌ಕಿನ್ ರ್‍ಯಾಶಸ್. ಅನಂತರ ಕ್ರಮೇಣ ಅದು ಕಂಕುಳು, ಕುತ್ತಿಗೆ ಹಿಂಬದಿ, ಮೊಳಕೈ ಒಳಮೈ, ಮಂಡಿಯ ಹಿಂಬದಿಗೆ ವ್ಯಾಪಿಸಿತು. ದಿನೇ ದಿನೇ ಒಣಚರ್ಮ ಮತ್ತು ಅತೀವ ನವೆ ಶುರು. ಮಗುವಂತೂ ಒಂದೆ ಸಮನೆ ಕೆರೆತದಿಂದ ಕಂಗಾಲು. ಉಜ್ಜಿ ಉಜ್ಜಿ ಚರ್ಮ ಕಿತ್ತು ಹೋಗಿ ಕೀವು ಸುರಿಯುವ ಪ್ರಸಂಗ. ಆ್ಯಂಟಿಬಯಾಟಿಕ್ ಕೊಟ್ಟಷ್ಟು ದಿನ ಒಮ್ಮೆಗೆ ತಾತ್ಕಾಲಿಕವಾಗಿ ನಿರಾಳ.

ಮತ್ತೆ ತಲೆದೋರುವ ದೊರಗುತನ. ಅಂತೂ ಇಂತೂ ಅಹನಾಳಿಗೆ ಇದೀಗ ನಾಲ್ಕು ವರ್ಷ ತುಂಬಿದೆ. ಮೊದಲಿನಷ್ಟು ಚರ್ಮದ ತುರಿಕೆಯ ತೀವ್ರತೆ ಇಲ್ಲ. ಅಪ್ಪ ಅಮ್ಮನ ಒಂದೇ ಗೋಳು ಎಂದರೆ ಅಹನಾ ಶಾಲೆಗೆ ಹೋಗುವ ಸಮಯ. ಪ್ರತಿಷ್ಠಿತ ಶಾಲೆಗಳಲ್ಲಿ ಆಕೆಗೆ ಸೀಟು ದೊರಕಿಸಲು ಅವಳ ಕೆನ್ನೆಯ ದೊರಗುತನ, ತುರಿಕೆ ಅಡ್ಡ ಬಂದೀತೆ ಎಂಬ ಆತಂಕ.

ವೈದ್ಯರು ಇದು ಅಂಟುರೋಗ ಅಲ್ಲ ಎಂದು ಪ್ರಮಾಣಪತ್ರ ಕೊಟ್ಟರೂ ಶಾಲೆಯ ಮುಖ್ಯಸ್ಥರು ಹೊಸ ಹೊಸ ವರಾತ ತೆಗೆಯುವುದು ಸಹಜ. ಇನ್ನೊಂದು ಪ್ರಮಾಣಪತ್ರ ತಜ್ಞರಿಂದ ತಂದು ತೋರಿಸಿದರು. ಅದರಲ್ಲಿ ವೈದ್ಯರು ಹೀಗೆ ಬರೆದರು:‘ಇದು ಅಂಟು ಜಾಡ್ಯ ಅಲ್ಲ. ಸೋಂಕು ರೋಗವಲ್ಲ. ಮತ್ತು ಎಲ್ಲಕ್ಕಿಂತ ಮಿಗಿಲಾಗಿ ವಯೋಮಾನದೊಂದಿಗೆ ಕ್ರಮೇಣ ಮಾಯವಾಗುತ್ತದೆ.’ ಆಗ ಶಾಲೆಯವರಿಗೆ ಖಾತರಿಯಾಯಿತು. ಅಹನಳಿಗೆ ಸೀಟು ದೊರಕಿತು. ಬಹುತೇಕ ಚರ್ಮ ಕಾಯಿಲೆಗಳ ದೊಡ್ಡ ಸಮಸ್ಯೆ ದೈಹಿಕವಾಗಿ ಅಲ್ಲ. ಸಾಮಾಜಿಕವಾಗಿ ಇದ್ದೀತು. ಅಂತಹ ತೀವ್ರ ಸವಾಲು ರೋಗಿ ಮತ್ತು ವೈದ್ಯ ವೃಂದಕ್ಕಿದೆ.

ಹದ ಉಗುರು ಬೆಚ್ಚಗಿನ ನೀರಲ್ಲಿ ನಿತ್ಯ ಸ್ನಾನದ ಉಪಚಾರದಿಂದ ರೋಗದ ಬಹುತೇಕ ಉಪದ್ರವಕ್ಕೆ ಕಡಿವಾಣ. ಎರಡು ಬಾರಿ ಮೀಯಿಸಿದರೂ ಪರವಾಗಿಲ್ಲ. ಆದರೆ ಹೆಚ್ಚು ಬಿಸಿನೀರು ಮಾತ್ರ ಖಂಡಿತ ಬೇಡ. ಐದು ಹತ್ತು ನಿಮಿಷದ ಚುಟುಕು ಸ್ನಾನ ಲೇಸು. ಮಿದು ಸೋಪು ಬಳಸಿರಿ. ಪರಿಮಳವಿಲ್ಲದೆ ಇದ್ದರೆ ಒಳಿತು. ನೊರೆ ಅತಿಯಾಗಿ ಬರಿಸದಿರಿ.

ಚರ್ಮವನ್ನು ಜೋರಾಗಿ ಉಜ್ಜದಿರಿ. ಸ್ನಾನದ ತರುವಾಯ ಮಿದು ಬಟ್ಟೆಯಿಂದ ಮೈ ತೇವ ತೆಗೆಯಿರಿ. ಸ್ನಾನದ ಮೊದಲು ಮತ್ತು ಅನಂತರ ತ್ವಚೆಯ ಒದ್ದೆತನ ಕಾಪಾಡುವ ತೇವಕಾರಕ ಕ್ರೀಂ, ಲೋಷನ್ ಬಳಸಿರಿ. ವೈದ್ಯರು ಮಾತ್ರ ನಿಮ್ಮ ಮಗುವಿಗೆ ಇದೇ ಸರಿಯದ್ದು ಎಂದು ಖಚಿತವಾಗಿ ಹೇಳಲಾರರು. ಅಲ್ಲಿ ಬಳಸಿ ಫಲಿತಾಂಶ ಕಂಡು ಬೇಕೋ ಬೇಡವೋ ಎಂಬ ನಿರ್ಧಾರ ನೀವೇ ಕೈಗೊಳ್ಳುವ ಅನಿವಾರ್ಯತೆ ಇದೆ.

ಮಗುವಿನ ಉಗುರನ್ನು ಆಗಾಗ ಕತ್ತರಿಸಬೇಕು; ಸ್ವಚ್ಛವಾಗಿಡಬೇಕು. ಶುದ್ಧ ಹತ್ತಿಯ ಕೈಗವುಸುಗಳನ್ನು ಧರಿಸಿ ಮಗು ಮಲಗಿದರೆ ರಾತ್ರಿ ವೇಳೆಯ ಉಜ್ಜುವಿಕೆ, ನವೆಯ ಅತಿ ಕೆರೆತ ಗಾಯ ತಪ್ಪಿಸಲಾದೀತು. ಮಗು ಮಲಗಿದೆಡೆ ವಾತಾಯನ ಚೆನ್ನಾಗಿರಲಿ. ಅತಿ ಶಾಖದಿಂದ ಒಣಚರ್ಮಕ್ಕೆ ಹಾನಿ. ಅತಿ ಶೈತ್ಯದಿಂದ ಮತ್ತೆ ಬಿರುಕು. ಹಾಗಾಗಿ ಸೂಕ್ತ ಉಷ್ಣತೆ ಕಾಪಾಡುವ ಕೋಣೆಯಲ್ಲಿ ಮಲಗಿಸಿರಿ. ಆದಷ್ಟು ಹತ್ತಿ ಬಟ್ಟೆ ಹಾಸು, ಹೊದಿಕೆ, ಧರಿಸುವ ಬಟ್ಟೆ ಲೇಸು.

ಧರಿಸುವ ಬಟ್ಟೆಯನ್ನು ಹೊಸದಾಗಿಯೇ ಹಾಕದಿರಿ. ಒಂದೆರಡು ಒಗೆತ ಉತ್ತಮ. ಅನಂತರವೇ ಮಗುವು ಧರಿಸಲಿ. ಬಟ್ಟೆ ಒಗೆಯಲು ಡಿಟರ್ಜೆಂಟ್ ಬಳಕೆ ಕೂಡ ಕೊಂಚ ಹಿತಮಿತದ್ದಿರಲಿ. ಮಿದುತನದ ಪುಡಿ ಬಳಸಿರಿ. ಚೆನ್ನಾಗಿ ಸಾಬೂನು ಪುಡಿಯು ಲವಲೇಶವೂ ಇಲ್ಲದಂತೆ ನೀರಲ್ಲಿ ಅದ್ದಿ ಅದ್ದಿ ಅನಂತರ ಒಣಗಿಸಿಕೊಳ್ಳಿರಿ.

ದಟ್ಟ ಬಣ್ಣದ ಎಲರ್ಜಿ ನಿಮ್ಮ ಮಗುವಿಗೆ ಇದ್ದರೆ ಅಂತಹ ಬಟ್ಟೆ, ಹಾಸು, ಹೊದಿಕೆ ದೂರವಿಡಿ. ಕೊನೆ ಸಾಲಿಗೆ ಬರುವ ಮುನ್ನ ಕೆಲವು ಕಿವಿ ಮಾತು. ತಂದೆ ತಾಯಿಯರ ಆಸ್ತಮಾ, ಚರ್ಮ ಪೆಡಸುತನದಿಂದ ಕೆಲವು ಮಕ್ಕಳಿಗೆ ಹುಟ್ಟಿನಿಂದಲೇ ಇಂತಹ ತುರಿಗಜ್ಜಿಯ ತೊಂದರೆ ಬರಬಹುದು.

ವಯೋಮಾನದೊಂದಿಗೆ ಇದು ಮಾಯ. ಹಾಗಾಗಿ ಅತಿ ಕಾಳಜಿ ಅನಗತ್ಯ. ಮಗುವಿನ ತುರಿಗಜ್ಜಿ ಬೇಗ ವಾಸಿ ಮಾಡಿಕೊಡಿ ಎಂದು ವೈದ್ಯರನ್ನು ದುಂಬಾಲು ಬಿದ್ದು ಗೋಗರೆಯದಿರಿ. ಅವರು ಅತಿ ಮದ್ದು ನೀಡಲು ಒತ್ತಾಯಿಸದಿರಿ. ಮಿತಿಮೀರಿ ಸ್ಟಿರಾಯಡ್ ಮುಲಾಮು, ಲೋಷನ್‌, ಮಾತ್ರೆ ಸೇವನೆಯಿಂದ ದೂರವಿರಿ. ಚರ್ಮದ ಆರೋಗ್ಯಕ್ಕೆ ಮಹತ್ವ ಕೊಡಿರಿ. ಮಗುವಿಗೆ ಉತ್ತಮ ಪೋಷಕಾಂಶ ಉಳ್ಳ ಆಹಾರವನ್ನು ನೀಡಿರಿ.

***

* ಇದು ಸೋಂಕು ರೋಗವಲ್ಲ
* ಮಕ್ಕಳಿಗೆ ಉಗುರು ಬೆಚ್ಚಗಿನ ನೀರಿನಲ್ಲಿ ಸ್ನಾನ ಮಾಡಿಸಬೇಕು
* ಒದ್ದೆತನ ಕಾಪಾಡುವ ತೇವಭರಿತ ಕ್ರೀಂ, ಲೋಷನ್‌ ಬಳಸಿರಿ
* ಪೋಷಕಾಂಶ ಉಳ್ಳ ಆಹಾರ ನೀಡಿ

 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT