ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ತನ ಕ್ಯಾನ್ಸರ್ ನಿಯಂತ್ರಣಕ್ಕೆ ಹಾದಿಗಳು

Last Updated 21 ಅಕ್ಟೋಬರ್ 2016, 19:30 IST
ಅಕ್ಷರ ಗಾತ್ರ

-ಡಾ. ಆಂತೋಣಿ ಪೈಸ್

ಅಕ್ಟೋಬರ್ ತಿಂಗಳನ್ನು ‘ವಿಶ್ವ ಸ್ತನ ಕ್ಯಾನ್ಸರ್ ಮಾಸ’ ಎಂದು ಆಚರಿಸಲಾಗುತ್ತದೆ; ಭಾರತ ಸೇರಿದಂತೆ ಹಲವು ರಾಷ್ಟ್ರಗಳಲ್ಲಿ ಈ ರೋಗದ ಪ್ರಮಾಣ ಹೆಚ್ಚಾಗುತ್ತಿದೆ. ಇದರ ಬಗ್ಗೆ ಗಮನವನ್ನು ಕೇಂದ್ರೀಕರಿಸುವುದು, ರೋಗದ ತಪಾಸಣೆ ಮತ್ತು ಉತ್ತಮ ಚಿಕಿತ್ಸಾ ವಿಧಾನಗಳ ಲಭ್ಯತೆ, ವೈದ್ಯಕೀಯ ತಂತ್ರಜ್ಞಾನದಲ್ಲಿ ನಡೆದಿರುವ ಉನ್ನತೀಕರಣದ ಬಗ್ಗೆ ಈ ಸಂದರ್ಭದಲ್ಲಿ ಚರ್ಚೆ–ಸಂವಾದಗಳು ನಡೆಯಬೇಕೆಂಬುದು ಈ ಮಾಸದ ಉದ್ದೇಶವಾಗಿದೆ.

ಭಾರತದಲ್ಲಿ ಪ್ರತಿ 28 ಮಹಿಳೆಯರಲ್ಲಿ ಒಬ್ಬರು ಸ್ತನ ಕ್ಯಾನ್ಸರ್‌ನಿಂದ ಬಳಲುತ್ತಿದ್ದು, ಪ್ರತಿ ವರ್ಷ ಸುಮಾರು 170,000 ಹೊಸ ಪ್ರಕರಣಗಳು (ಐಸಿಎಂಆರ್ ನ್ಯೂಸ್, 2015) ಪತ್ತೆಯಾಗುತ್ತಿವೆ. ಈ ಸಂಖ್ಯೆ ಕ್ಯಾನ್ಸರ್‌ನ ಎಲ್ಲ ಹೊಸ ಪ್ರಕರಣಗಳ ಶೇ.10ರಷ್ಟು. ದೇಶದ ‘ಸ್ತನ ಕ್ಯಾನ್ಸರ್ ರಾಜಧಾನಿ’ ಎಂಬ ಸ್ಥಾನವನ್ನು ಬೆಂಗಳೂರಿನಿಂದ ಹೊಸ ದೆಹಲಿಗೆ ವರ್ಗಾವಣೆಗೊಂಡಿದೆಯಾದರೂ, ಕರ್ನಾಟಕದಲ್ಲಿ ಸುಮಾರು ಎಂಟು ಸಾವಿರ ಸ್ತನ ಕ್ಯಾನ್ಸರ್‌ನ ಹೊಸ ರೋಗಿಗಳ ಸೇರ್ಪಡೆಯಾಗಿದೆ.

ಬೆಂಗಳೂರಿನಲ್ಲಿ  ಒಂದು ಲಕ್ಷ ಮಂದಿಯಲ್ಲಿ  ಶೇ. 34.4ರಷ್ಟು ಪ್ರಕರಣಗಳು ಪತ್ತೆಯಾಗುತ್ತಿದ್ದು ಇದು ದೇಶದಲ್ಲಿಯೇ ಅತಿ ಹೆಚ್ಚಿನ ಪ್ರಮಾಣವಾಗಿದೆ (ಕ್ಯಾನ್ಸರ್ ಅಟ್ಲಾಸ್, ಎಸ್‌ಸಿಆರ್‌ಪಿ). ಇದಲ್ಲದೆ, ಸ್ತನ ಕ್ಯಾನ್ಸರ್ ತಪಾಸಣೆಗೆ ಒಳಾಗುವ ಶೇ. 60ರಷ್ಟು ಭಾರತೀಯ ಮಹಿಳೆಯರು ಈ ರೋಗಕ್ಕೆ ತುತ್ತಾಗುತ್ತಿದ್ದಾರೆ.  ಬಹುತೇಕ ಈ ಮಹಿಳೆಯರೆಲ್ಲ 40–60 ವಯಸ್ಸಿನವರು. ಭಾರತದಲ್ಲಿ ಅಮೆರಿಕಕ್ಕಿಂತಲೂ ಈ ರೋಗದ ಪ್ರಮಾಣ ಐದು ಪಟ್ಟು ಹೆಚ್ಚಿದೆ.

ಸ್ತನ ಕ್ಯಾನ್ಸರ್ ಏಕೆ ಹೆಚ್ಚಾಗುತ್ತಿದೆ?
ಇತರ ಸಮಸ್ಯೆಗಳಂತೆ ಸ್ತನ ಕ್ಯಾನ್ಸರ್‌ನಲ್ಲೂ ಹಲವು ಕಾರಣಗಳಿವೆ. ಭಾರತದಲ್ಲಿ ಇದರ ಹೆಚ್ಚಳಕ್ಕೆ ಕಾರಣ ಹಲವು ಅಂಶಗಳು ಒಟ್ಟಾಗಿ ಸೇರಿಕೊಂಡಿವೆ. ಇದರಲ್ಲಿ ಕೆಲವು ಪ್ರಮುಖವಾದುದವೆಂದರೆ:

* ಆನುವಂಶೀಯ ಅಂಶ: ನಿಮ್ಮ ತಾಯಿ ಅಥವಾ ಸೋದರಿ ಅಥವಾ ಸೋದರ ಸಂಬಂಧಿ ಸ್ತನ ಕ್ಯಾನ್ಸರ್‌ನಿಂದ ಬಳಲುತ್ತಿದ್ದರೆ, ಆಗ ನಿಮಗೆ ಈ ರೋಗ ಬರುವ ಸಾಧ್ಯತೆಯ ಸರಾಸರಿ ಹೆಚ್ಚು.

* ಕಡಿಮೆ ರೋಗನಿರೋಧಕ ಶಕ್ತಿ: ಪ್ರಾರಂಭಿಕ ಹಂತದಲ್ಲಿ ಕ್ಯಾನ್ಸರ್ ಕೋಶಗಳೊಂದಿಗೆ ಹೋರಾಡುವ ಸಾಮರ್ಥ್ಯ ದೇಹಕ್ಕೆ ಇಲ್ಲದಿದ್ದರೆ ಅಂಥ ಮಹಿಳೆಯು ಈ ರೋಗಕ್ಕೆ ತುತ್ತಾಗುವ ಸಾಧ್ಯತೆ ಹೆಚ್ಚು.

* ಹಾರ್ಮೋನ್ ಅಂಶ: ಹಾರ್ಮೋನ್‌ಗಳು ಸ್ತನದ ಆಕಾರದಲ್ಲಿ ಪ್ರಮುಖ ಪಾತ್ರವಹಿಸುತ್ತವೆ ಮತ್ತು ಸ್ತನ ಕ್ಯಾನ್ಸರ್ ಬೆಳೆಯುವಲ್ಲೂ ಇವು ನಿರ್ಣಾಯಕವಾಗಿವೆ. ಸ್ತನದ ಆಕಾರದಲ್ಲಿ ಅಸಾಮಾನ್ಯ ಹೆಚ್ಚಳದಲ್ಲಿ ಈ ಸೂಚನೆ ಹೆಚ್ಚಾಗಿ ಕಂಡುಬಂದಿದೆ.

* ಕಡಿಮೆ ಮಕ್ಕಳು: ಕಳೆದ ಕೆಲವು ದಶಕಗಳಲ್ಲಿ ಗರ್ಭಧಾರಣೆಯ ಸರಾಸರಿ ಪ್ರಮಾಣ ಕಡಿಮೆಯಾಗುತ್ತಿದೆ; ಇತ್ತೀಚಿನ ಮಹಿಳೆಯರು ತಮ್ಮ ಮಗುವಿಗೆ ಸ್ತನ್ಯಪಾನ ಮಾಡಿಸುವುದನ್ನು ಕಡಿಮೆ ಮಾಡುತ್ತಿದ್ದಾರೆ.

* ಬೊಜ್ಜು: ಶೇ. 33ರಷ್ಟು ಮಹಿಳೆಯರು ಮತ್ತು ಶೇ.17ರಷ್ಟು ಪುರುಷರು ಬೊಜ್ಜಿಗೆ ತುತ್ತಾಗಿದ್ದಾರೆ. ನಗರೀಕರಣ, ಜೀವನಶೈಲಿಯಲ್ಲಿ ಬದಲಾವಣೆಗಳು ಇದಕ್ಕೆ ಪ್ರಮುಖ ಕಾರಣವಾಗಿವೆ.

* ನಿದ್ದೆಯ ಕೊರತೆ, ವ್ಯಾಯಾಮದ ಕೊರತೆ, ಒತ್ತಡ, ಧೂಮಪಾನ ಮತ್ತು ಮದ್ಯಪಾನದಂಥ ಚಟಗಳಿಂದಾಗಿ ತೊಂದರೆಗೆ ತುತ್ತಾಗಿರುವ ಜೈವಿಕ ವ್ಯವಸ್ಥೆ.

ಆರಂಭಿಕ ಪತ್ತೆ
ಸ್ತನ ಕ್ಯಾನ್ಸರ್ ಅನ್ನು ಪ್ರಾರಂಭಿಕ ಹಂತದಲ್ಲೇ ಪತ್ತೆ ಹಚ್ಚಿದರೆ ಅದನ್ನು ಯಶಸ್ವಿಯಾಗಿ ಚಿಕಿತ್ಸೆ ಮೂಲಕ ನಿವಾರಿಸಬಹುದು ಅಥವಾ ಪರಿಣಾಮಕಾರಿಯಾಗಿ ನಿಯಂತ್ರಿಸಬಹುದು. ಕೆಲವು ದೇಶಗಳಲ್ಲಿ, ಪ್ರತಿ ವರ್ಷದ ಸಾಮಾನ್ಯ ಆರೋಗ್ಯ ಆರೈಕೆ ತಪಾಸಣೆಗಳಲ್ಲಿ  ಸ್ತನ ಕ್ಯಾನ್ಸರ್‌ನ ತಪಾಸಣೆ ಮತ್ತು ಮ್ಯಾಮೊಗ್ರಫಿಯೂ ಭಾಗವಾಗಿದೆ. ಆದರೂ ಕೆಲವು ಭಾರತೀಯ ವೈದ್ಯರು ಎಲ್ಲ ಭಾರತೀಯ ಮಹಿಳೆಯರನ್ನು ತಪಾಸಣೆಗೊಳಿಸುವುದು ಅವಾಸ್ತವಿಕ ಮಾದರಿ ಎಂದು ಭಾವಿಸುತ್ತಾರೆ.

ಹೀಗಿದ್ದರೂ, ಪರಿಣಾಮಕಾರಿ ಮತ್ತು ಪ್ರಾಯೋಗಿಕ ತಂತ್ರಜ್ಞಾನದಿಂದ ಸ್ತನವನ್ನು ಸ್ವಯಂಪರೀಕ್ಷೆ ಮಾಡಿಕೊಳ್ಳಬಹುದು. ಒಳಭಾಗದಲ್ಲಿ ಯಾವುದೇ ಅಸಹಜತೆ ಅಥವಾ ಗಡ್ಡೆಗಳಿಲ್ಲ, ಆಕಾರದಲ್ಲಿ ಬದಲಾವಣೆ ಆಗಿಲ್ಲ, ಸ್ತನದ ಮಾದರಿ ಬದಲಾಗಿಲ್ಲ ಎಂಬುದನ್ನು ತಪಾಸಣೆ ಮಾಡಿಕೊಳ್ಳಬಹುದು.

ಇತರ ಪ್ರಾರಂಭಿಕ ಲಕ್ಷಣಗಳೆಂದರೆ – ಮೊಲೆತೊಟ್ಟು ಸೋರುವಿಕೆ, ತೊಟ್ಟುಗಳ ಸ್ಥಳ ಬದಲಾವಾಣೆ ಅಥವಾ  ಚರ್ಮದ ಗುಳಿ ಅಥವಾ ಸುಕ್ಕು ಬೀಳುವುದು. ಇವುಗಳಲ್ಲಿ ಒಂದು ಅಥವಾ ಹಲವು ಲಕ್ಷಣಗಳು ಕಂಡುಬಂದಲ್ಲಿ ಕೂಡಲೇ ವೈದ್ಯರನ್ನು ಭೇಟಿ ಮಾಡುವುದೇ ಸೂಕ್ತ.

ಮ್ಯಾಮೊಗ್ರಫಿ ತಾಂತ್ರಿಕತೆಗಳು
ವೈದ್ಯರು ಮ್ಯಾಮೊಗ್ರಫಿಗೆ ಸಲಹೆ ನೀಡಿದರೆ, ಋತುಚಕ್ರದ ನಂತರವೇ ಇದನ್ನು ಮಾಡಿಸುವುದು ಸೂಕ್ತ. ಇದರಿಂದ ನೋವು ಕಡಿಮೆಯಾಗುವುದು ಮತ್ತು ತಪಾಸಣೆ ಸಂದರ್ಭದಲ್ಲಿ ಅಸ್ವಸ್ಥತೆ ಕಡಿಮೆಯಾಗುತ್ತದೆ. ಇದೇ ರೀತಿ, ಸರ್ಜಿಕಲ್ ಬಯೊಪ್ಸಿಯಲ್ಲೂ ಬದಲಾವಣೆಗಳಾಗಿವೆ.

ಹಿಂದಿನ ಆಕ್ರಮಣಶೀಲ ಪ್ರಕ್ರಿಯೆಯ ಬದಲಾಗಿ ಆಕ್ರಮಣಶೀಲವಲ್ಲದ  ಸ್ಟಿರಿಯೊಟ್ಯಾಟಿಕ್ ಬಯೊಪ್ಸಿ ಇಂದು ಲಭ್ಯ. ಇದರ ಬಳಕೆಯಿಂದ, ಐದು ಎಂಎಂಗಿಂತ ಕಡಿಮೆ ಗಾತ್ರದಲ್ಲಿರುವ ಗಾಯಗಳನ್ನೂ ತಪಾಸಣೆ ಮಾಡಬಹುದು. ಅಲ್ಲದೆ, ಸಾಂಪ್ರದಾಯಿಕ ಮಾದರಿಗಳಲ್ಲಿ ನಡೆಸಲು ಸಾಧ್ಯವಾಗದ ತಪಾಸಣೆಗಳನ್ನೂ ಇದರ ಮೂಲಕ ನಡೆಸಬಹುದು.

ಈಗ ಲಭ್ಯವಿರುವ ಸರ್ಜಿಕಲ್ ತಂತ್ರಜ್ಞಾನಗಳಿಂದ ದೇಹದ ಅಂದ ಕೆಡುವ ಪ್ರಮಾಣವೂ ಕಡಿಮೆ.  ವ್ಯಾಕ್ಯೂಮ್ ಅಸಿಸ್ಟೆಟ್ ಡಿವೈಸ್‌ನಿಂದ ಅತ್ಯಂತ ಸಣ್ಣ ಬೆಳವಣಿಗೆಯನ್ನು, ಅದೂ ಯಾವುದೇ ಕಲೆ ಉಳಿಯದಂತೆ, ನಿವಾರಿಸಬಹುದು. ದೊಡ್ಡ ಗಡ್ಡೆಗಳಂತಹ ಪ್ರಕರಣದಲ್ಲೂ, ನಂತರ ರೋಗಿಯ ದೇಹದಿಂದಲೇ ಫ್ಯಾಟ್ ಟಿಶ್ಯೂನಿಂದ ಮೈಕ್ರೊ-ವ್ಯಾಕ್ಸುಲರ್ ಬ್ರೆಸ್ಟ್ ರಿಕನ್ಸ್‌ಸ್ಟ್ರಕ್ಷನ್‌ನಿಂದ, ಶಸ್ತ್ರಚಿಕಿತ್ಸೆಯ ಅನಂತರದ ಸ್ತನವಿರೂಪವನ್ನು ಸರಿಪಡಿಬಹುದು.

(ಲೇಖಕರು ಬೆಂಗಳೂರಿನ ಸೈಟ್‌ಕೇರ್ ಕ್ಯಾನ್ಸರ್ ಆಸ್ಪತ್ರೆಯ ನಿರ್ದೇಶಕರು)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT